ಧನ್ಯಾ ಕುಟುಂಬಕ್ಕೆ ಆರ್ಥಿಕ ಶಕ್ತಿ ನೀಡಿದ ‘ಪಾನಿಪೂರಿ’!

ಪತಿ ಖಾಸಗಿ ಬಸ್ಸು ಚಾಲಕ. ಕೊರೋನ ಅಲೆಯ ಆರಂಭದಲ್ಲಿ ಪತಿಯು ಉದ್ಯೋಗ ಕಳೆದುಕೊಂಡರು. ಕುಟುಂಬ ನಿರ್ವಹಣೆಗೆ ಏನು ಮಾಡುವುದು ಎಂದು ಆಲೋಚನೆಯಲ್ಲಿದ್ದ ಧನ್ಯಾರಿಗೆ ಆಕೆಯ ಅಕ್ಕ ಪಾನಿಪೂರಿ ಮಾಡುವ ಐಡಿಯಾ ಹೇಳಿಕೊಟ್ಟರು. ಈ ಐಡಿಯಾವನ್ನು ತನ್ನ ಕುಟುಂಬದ ಜತೆ ಹಂಚಿಕೊಂಡು ಸುಮಾರು ಏಳು ವರ್ಷಗಳ ಹಿಂದೆ ಆರಂಭಿಸಿದ ಉದ್ಯಮ ಇಂದು ಧನ್ಯಾ ಕುಟುಂಬದ ಜತೆಗೆ ಇತರ ಏಳು ಮಂದಿಗೆ ಉದ್ಯೋಗ ನೀಡುವಷ್ಟರ ಹಂತಕ್ಕೆ ಬೆಳೆದಿದೆ.
ಇದು ಸ್ವಾವಲಂಬಿ ಬದುಕು, ಗೃಹ ಉದ್ಯಮಕ್ಕೆ ಮಾದರಿಯಾಗಿರುವ ಪುತ್ತೂರಿನ ದಾರಂದ ಕುಕ್ಕುವಿನ ಪಾನಿಪೂರಿ ತಯಾರು ಮಾಡುವ ಕುಟುಂಬದ ಯಶೋಗಾಥೆ. ಅತ್ತೆ ಹಾಗೂ ಪತಿಯ ಜತೆ ಆರಂಭದಲ್ಲಿ ದಿನಕ್ಕೆ 3 ಕೆಜಿ ಹಿಟ್ಟಿನಿಂದ ಪಾನಿಪೂರಿ ತಯಾರಿಸುವುದರೊಂದಿಗೆ ಆರಂಭವಾದ ಧನ್ಯಾ ಪುತ್ತೂರು ಅವರ ಕುಟುಂಬದ ಉದ್ಯಮ ಇಂದು 100 ಕೆಜಿ ಹಿಟ್ಟಿನಿಂದ ಪಾನಿಪೂರಿ ತಯಾರಿಸುವವರೆಗೆ ತಲುಪಿದೆ. ಬೈಸಿಕಲ್‌ನಲ್ಲಿ ಸಮೀಪದ ಅಂಗಡಿ, ಹೊಟೇಲ್‌ಗಳಿಗೆ ಪಾನಿಪೂರಿ ಮಾರಾಟ ಮಾಡುತ್ತಿದ್ದ ಧನ್ಯಾರವರ ಕುಟುಂಬ ಇಂದು ಪುತ್ತೂರು ಸೇರಿ ಸಮೀಪದ ಐದು ತಾಲೂಕುಗಳ ಚಾಟ್ಸ್ ಅಂಗಡಿ, ಹೊಟೇಲ್‌ಗಳಿಗೆ ಪೂರೈಸುತ್ತಿದೆ.
ಕೊರೋನ ಸಂದರ್ಭ ಪತಿ ಕೆಲಸ ಕಳೆದುಕೊಂಡಾಗ ವಿಚಲಿತರಾಗದ ಧನ್ಯಾ ಮತ್ತು ಆಕೆಯ ಅತ್ತೆ ಜತೆಯಾಗಿ ಸ್ವಂತ ಉದ್ದಿಮೆಯ ಮೂಲಕ ಕುಟುಂಬದ ಆರ್ಥಿಕತೆಯನ್ನು ಮೇಲೆತ್ತುವ ಜತೆಗೆ ಏಳು ಮಂದಿಗೆ ಕೆಲಸ ಒದಗಿಸಿ ಅವರ ಕುಟುಂಬದ ಪೋಷಣೆಗೂ ಆಧಾರವಾಗಿದ್ದಾರೆ ಎನ್ನುವುದು ವಿಶೇಷ.
‘‘ಕೊರೋನ ವೇಳೆ ಖಾಸಗಿ ಬಸ್ಸು ಚಾಲಕನಾಗಿದ್ದ ನನ್ನ ಪತಿಗೆ ಕೆಲಸಕ್ಕೆ ಹೋಗಲು ಸಾಧ್ಯವಾಗದೆ, ಕುಟುಂಬ ನಿರ್ವಹಣೆ ಸಮಸ್ಯೆಯಾಗಿತ್ತು. ಈ ಸಂದರ್ಭ ಅಕ್ಕ ಹೇಳಿಕೊಟ್ಟಿದ್ದ ಪಾನಿಪೂರಿ ಮಾಡುವುದನ್ನು ನಾವೆಲ್ಲಾ ಜತೆಯಾಗಿ ಆರಂಭಿಸಿದೆವು. ಕೈಯಲ್ಲೇ ಪೂರಿ ತಯಾರಿಸಿ, ಬೈಕ್‌ನಲ್ಲಿ ಅದನ್ನು ಪತಿ ಸುಮಾರು 40 ಕಿ.ಮೀ. ದೂರದ ಸುಬ್ರಹ್ಮಣ್ಯದವರೆಗೆ ಮಾರಾಟಕ್ಕೆ ಕೊಂಡು ಹೋಗಲು ಆರಂಭಿಸಿದರು. ಕೊರೋನ ಅಲೆ ತೀವ್ರಗೊಂಡಾಗ ಸಾಕಷ್ಟು ತೊಂದರೆ ಅನುಭವಿಸಬೇಕಾಯಿತು. ಆ ಸಂದರ್ಭ ಸಮೀಪದ ಅಂಗನವಾಡಿ ಶಿಕ್ಷಕಿಯ ಮೂಲಕ ಸೆಲ್ಕೋ ಸಂಸ್ಥೆಯವರು ನಮಗೆ ಫುಡ್ ಕಿಟ್ ನೀಡುವ ಮೂಲಕ ಹಸಿವು ನೀಗಿಸಿದರು. ಈ ವೇಳೆ ಬೆಂಗಳೂರು ಕಡೆಯಿಂದ ಬರುತ್ತಿದ್ದ ಪಾನಿಪೂರಿಯೂ ಬಹುತೇಕವಾಗಿ ಸ್ಥಗಿತಗೊಂಡಿತ್ತು. ನಾವು ಪೂರಿ ತಯಾರಿಯ ಯಂತ್ರ ಖರೀದಿಸಿದೆವು. ಅದಕ್ಕೆ ಆರಂಭದಲ್ಲಿ ವಿದ್ಯುತ್ ಇಲ್ಲದಾಗ ಜನರೇಟರ್ ಖರೀದಿಸಬೇಕಾಯಿತು. ನಮ್ಮ ಉದ್ದಿಮೆಯಿಂದ ಸಿಗುತ್ತಿದ್ದ ಲಾಭವೆಲ್ಲಾ ಜನರೇಟರ್‌ಗೆ ವ್ಯಯವಾಗುತ್ತಿತ್ತು. ಈ ಸಂದರ್ಭ ಸೆಲ್ಕೋದವರ ಸಹಕಾರದೊಂದಿಗೆ ಸೋಲಾರ್ ವ್ಯವಸ್ಥೆ ಅಳವಡಿಸಿದೆವು. ಅಲ್ಲಿಯ ವರೆಗೆ ಮನೆಯ ಪಾರ್ಶ್ವವೊಂದರಲ್ಲಿ ಪೂರಿ ತಯಾರು ಮಾಡುತ್ತಿದ್ದು, ಆನಂತರ ಸಮೀಪದಲ್ಲೇ ಸೆಲ್ಕೋ ಸಂಸ್ಥೆಯವರು ಕಟ್ಟಡ ನಿರ್ಮಾಣಕ್ಕೂ ಸಹಕರಿಸಿದರು. ಈ ಮೂಲಕ ನಮ್ಮ ಗುಣಮಟ್ಟದ ಪೂರಿಗೆ ಬೇಡಿಕೆಯೂ ಹೆಚ್ಚಾಗಿ ಉದ್ಯಮ ಬೆಳೆಯುತ್ತಾ ಸಾಗಿತು. ನಮ್ಮ ಕುಟುಂಬದ ಸದಸ್ಯರಿಂದಲೇ ನಿರ್ವಹಿಸಲ್ಪಡುತ್ತಿದ್ದ ಉದ್ಯಮದಲ್ಲಿ ಇದೀಗ ಇತರ ಏಳು ಮಂದಿ ಕೆಲಸಮಾಡುತ್ತಿದ್ದಾರೆ’’ ಎನ್ನುತ್ತಾರೆ ಧನ್ಯಾ ಪುತ್ತೂರು.
‘‘ಬೇಡಿಕೆ ಹೆಚ್ಚಾದಂತೆ ಬೈಕ್‌ನಲ್ಲಿ ಸಾಗಿಸಲು ಸಾಧ್ಯವಾಗದೆ, ರಿಕ್ಷಾ ಖರೀದಿಸಿದೆವು. ಇದೀಗ ಟೆಂಪೋ ಖರೀದಿಸಿದ್ದೇವೆ. ಹಿಂದೆ ಸುಮಾರು 20 ಅಂಗಡಿಗಳಿಗೆ ಪೂರಿ ಪೂರೈಕೆಯಾಗುತ್ತಿದ್ದರೆ, ಈಗ 130ಕ್ಕೂ ಅಧಿಕ ಅಂಗಡಿಗಳಿಗೆ ಪೂರೈಕೆ ಮಾಡುತ್ತಿದ್ದೇವೆ. ಈ ಉದ್ಯಮ ಸ್ವಂತ ದುಡಿಮೆಯ ಜತೆಗೆ ಸ್ವಾವಲಂಬನೆಗೆ ಕಾರಣವಾಗಿದೆ. ಅಂಗನವಾಡಿಯ ಬಾಲ ಸಮಿತಿಯ ಅಧ್ಯಕ್ಷೆಯಾಗಿ ಸಮಾಜದ ಜತೆ ಬೆರೆಯುವುದನ್ನು ಪ್ರೇರೇಪಿಸಿದೆ. ಜತೆಗೆ ಸ್ವಾವಲಂಬಿ ಮಹಿಳೆ ಎಂಬ ಹೆಸರನ್ನೂ ನೀಡಿದೆ’’ ಎನ್ನುತ್ತಾರೆ ಧನ್ಯಾ.