ಅಧ್ಯಯನದ ಹೆಸರಿನಲ್ಲಿ ಶಾಸಕರಿಂದ ವಿದೇಶ ಪ್ರವಾಸಕ್ಕೆ ಸಿದ್ಧತೆ
ಸಾಂದರ್ಭಿಕ ಚಿತ್ರ PC: AI/freepik
ಬೆಂಗಳೂರು, ಜೂ.28: ರಾಜ್ಯದ 216ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರ ಪರಿಸ್ಥಿತಿ ಮತ್ತು ಸಂತ್ರಸ್ತರಿಗೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ವಿತರಣೆ ಆಗದೇ ಇದ್ದರೂ ಕರ್ನಾಟಕ ವಿಧಾನಮಂಡಲದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸೇರಿದಂತೆ ಇನ್ನಿತರ ಸಮಿತಿಗಳ ಸದಸ್ಯ ಶಾಸಕರು ಅಧ್ಯಯನದ ಹೆಸರಿನಲ್ಲಿ ಯೂರೋಪ್ ಸೇರಿದಂತೆ ವಿದೇಶಗಳಿಗೆ ಪ್ರವಾಸ ಕೈಗೊಳ್ಳಲು ತಯಾರಿ ನಡೆಸಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರ ಸಮಿತಿ, ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿ, ಅನುಸೂಚಿತ ಜಾತಿ ಮತ್ತು ಪಂಗಡಗಳ ಸಮಿತಿ ಸೇರಿದಂತೆ ಇನ್ನಿತರ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯರು 15 ದಿನಗಳ ಕಾಲ ವಿದೇಶ ಪ್ರವಾಸ ಕೈಗೊಳ್ಳಲು ಅಣಿಯಾಗಿ ದ್ದಾರೆ. ಈ ಸಂಬಂಧ ಸ್ಪೀಕರ್ ಯು.ಟಿ. ಖಾದರ್ ಅವರಿಗೆ 2024ರ ಜೂನ್ 11 ಮತ್ತು 13ರಂದು ಪತ್ರ ಬರೆದಿದ್ದಾರೆ. ಈ ಪತ್ರಗಳ ಪ್ರತಿಗಳು "the-file.in" ಲಭ್ಯವಾಗಿವೆ.
ವಿದೇಶ ಪ್ರವಾಸ ಕೈಗೊಳ್ಳುವ ಸಂಬಂಧ ವಿವಿಧ ಸಮಿತಿಗಳಲ್ಲಿ ಚರ್ಚೆಯಾಗಿವೆ. ಅಲ್ಲದೇ ವಿದೇಶ ಪ್ರವಾಸ ಕೈಗೊಳ್ಳಲು ಸದಸ್ಯ ಶಾಸಕರು ತೀರ್ಮಾನಿಸಿದ್ದಾರೆ. ಸಮಿತಿಗಳ ಅಧ್ಯಕ್ಷರು ಸಲ್ಲಿಸಿರುವ ಎಲ್ಲಾ ಮನವಿ ಪತ್ರಗಳ ಮೇಲೆ ಸ್ಪೀಕರ್ ಯು.ಟಿ. ಖಾದರ್ ಅಗತ್ಯ ಕ್ರಮಕ್ಕಾಗಿ ಎಂದು ಷರಾ ಬರೆದಿದ್ದಾರೆ ಎಂದು ತಿಳಿದು ಬಂದಿದೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಮಹತ್ವದ ಸಮಿತಿಯಾಗಿದ್ದು, ಪ್ರಮುಖವಾಗಿ ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಗಳ ಕುರಿತು ಚರ್ಚೆ ನಡೆಸುತ್ತದೆ. ಪ್ರಪಂಚದ ಹಲವು ರಾಷ್ಟ್ರಗಳು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯ ಸಮಿತಿಯ ವ್ಯವಸ್ಥೆಯನ್ನು ಅಳವಡಿಸಿಕೊಂಡಿವೆ. ವಿವಿಧ ರಾಷ್ಟ್ರಗಳ ಶಾಸಕಾಂಗ ವ್ಯವಸ್ಥೆ, ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಮತ್ತು ಆ ರಾಷ್ಟ್ರಗಳ ತಂತ್ರಜ್ಞಾನ ವ್ಯವಸ್ಥೆಯನ್ನು ಅಧ್ಯಯನ ಮಾಡುವ ಉದ್ದೇಶದಿಂದ ವಿದೇಶ ಪ್ರವಾಸ ಕೈಗೊಳ್ಳುವುದು ಅವಶ್ಯವಿರುತ್ತದೆ. ಆದ್ದರಿಂದ ಸಮಿತಿಯು ವರ್ಷದಲ್ಲಿ ಒಮ್ಮೆ ವಿದೇಶ ಪ್ರವಾಸವನ್ನು ಕೈಗೊಳ್ಳಲು ಅನುಮತಿ ನೀಡಬೇಕು' ಎಂದು ಸಾರ್ವಜನಿಕ ಲೆಕ್ಕಪತ್ರ ಸಮಿತಿಯ ಅಧ್ಯಕ್ಷ ಸಿ.ಸಿ. ಪಾಟೀಲ್ ಸ್ಪೀಕರ್ಗೆ 2024ರ ಜೂನ್ 11ರಂದು ಬರೆದಿರುವ ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ.
ಇದಕ್ಕೆ ಜೆಡಿಎಸ್ನ ಜಿ.ಟಿ. ದೇವೇಗೌಡ, ವಿ ಸುನೀಲ್ ಕುಮಾರ್ ಸೇರಿದಂತೆ ಹಲವು ಸದಸ್ಯರು ಸಹಿ ಹಾಕಿರುವುದು ಗೊತ್ತಾಗಿದೆ. ಅದೇ ರೀತಿ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಸಮಿತಿಯ ಅಧ್ಯಕ್ಷ ಪಿಎಂ ನರೇಂದ್ರಸ್ವಾಮಿ ಅವರು ಸಹ ಸ್ಪೀಕರ್ ಅವರಿಗೆ 2024ರ ಜೂನ್ 13ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯೂ "the-file. in"ಗೆ ಲಭ್ಯವಾಗಿದೆ.
ಸಮಿತಿಯ ಸದಸ್ಯರು ಇನ್ನು ಹೆಚ್ಚು ಪರಿಣಾಮಕಾರಿ ಯಾಗಿ ಸಮಿತಿಯಲ್ಲಿ ಕಾರ್ಯನಿರ್ವಹಿಸಲು ಅನುಕೂಲವಾಗುವಂತೆ ವಿದೇಶದಲ್ಲಿ ಅಧ್ಯಯನ ಪ್ರವಾಸ ಕೈಗೊಂಡು ಅಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳ ಬಗ್ಗೆ ಅಧ್ಯಯನ ಮಾಡಲು ಇಚ್ಚಿಸಿರುತ್ತಾರೆ. ಆದ ಕಾರಣ ಕರ್ನಾಟಕ ವಿಧಾನ ಮಂಡಲದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರು, ಸದಸ್ಯರು ಹೊರ ದೇಶಕ್ಕೆ ಭೇಟಿ ನೀಡಿ ಅಲ್ಲಿರುವ ಯೋಜನೆಗಳು, ಕಾರ್ಯಕ್ರಮಗಳನನು ಅಧ್ಯಯನ ಮಾಡುವ ಸಲುವಾಗಿ ಹೊರದೇಶಕ್ಕೆ ಪ್ರವಾಸ ಮಾಡಲು ಅನುಮತಿ ನೀಡಬೇಕು,' ಎಂದು ಸಮಿತಿಯ ಅಧ್ಯಕ್ಷ ಪಿ ಎಂ ನರೇಂದ್ರಸ್ವಾಮಿ ಅವರು ಪತ್ರದಲ್ಲಿ ಕೋರಿರುವುದು ತಿಳಿದು ಬಂದಿದೆ. ಈ ಪತ್ರಕ್ಕೆ ಸದಸ್ಯ ಶಾಸಕ ಪ್ರಕಾಶ್ ಕೋಳಿವಾಡ, ಅರವಿಂದಕುಮಾರ್ ಅರಳಿ ಸೇರಿದಂತೆ ಇನ್ನಿತರ ಶಾಸಕರು ಸಹಿ ಹಾಕಿರುವುದು ಗೊತ್ತಾಗಿದೆ.
ಸಭೆಯ ಮುಂದಿಡಲಾದ ಕಾಗದ ಪತ್ರಗಳ ಸಮಿತಿಯ ಅಧ್ಯಕ್ಷರೂ ಸ್ಪೀಕರ್ಗೆ 2024ರ ಜೂ.14ರಂದು ಪತ್ರ ಬರೆದಿದ್ದಾರೆ. ಹೊರದೇಶಕ್ಕೆ ಭೇಟಿ ನೀಡಿ ಅಲ್ಲಿನ ಯೋಜನೆ ಮತ್ತು ಕಾರ್ಯಕ್ರಮಗಳನ್ನು ಅಧ್ಯಯನ ಮಾಡುವ ಸಲುವಾಗಿ ಪ್ರವಾಸ ಮಾಡಲು ಅನುಮತಿ ನೀಡಬೇಕು ಎಂದು ಸಮಿತಿಯ ಅಧ್ಯಕ್ಷ ಎಚ್.ಡಿ.ರೇವಣ್ಣ ಪತ್ರ ಬರೆದಿರುವುದು ತಿಳಿದು ಬಂದಿದೆ. ಇದಕ್ಕೆ ಸದಸ್ಯ ಶಾಸಕ ಬಿ ದೇವೇಂದ್ರಪ್ಪ, ಡಾ. ಶೈಲೇಂದ್ರ ಬೆಲ್ದಾಳೆ ಮತ್ತಿತರ ಸದಸ್ಯ ಶಾಸಕರು ಸಹಿ ಮಾಡಿರುವುದು ಗೊತ್ತಾಗಿದೆ. ಅದೇ ರೀತಿ ಸದಸ್ಯರಿಗೆ ಪ್ರವಾಸ ಭತ್ತೆ, ದಿನ ಭತ್ತೆಗಳನ್ನೂ ಪರಿಷ್ಕರಿಸಿ ಹೆಚ್ಚಳ ಮಾಡಬೇಕು ಎಂದೂ ಸ್ಪೀಕರ್ಗೆ ಪತ್ರ ಬರೆದಿರುವುದು ತಿಳಿದು ಬಂದಿದೆ.
ಸಿದ್ದರಾಮಯ್ಯ ಮೊದಲ ಬಾರಿ ಮುಖ್ಯಮಂತ್ರಿಯಾ ಗಿದ್ದ ಅವಧಿಯಲ್ಲಿ ತೀವ್ರ ಬರ ಪರಿಸ್ಥಿತಿ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಅಂದಿನ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ವಿದೇಶ ಪ್ರವೇಶಕ್ಕೆ ಅನುಮತಿ ನೀಡಿರಲಿಲ್ಲ.
ಆ ನಂತರ ಬಂದಿದ್ದ ಸರಕಾರವೂ ಸಹ ನೂರು ಶಾಸಕರ ವಿದೇಶ ಪ್ರವಾಸವನ್ನು ಎರಡು ತಿಂಗಳು ಮುಂದೂಡಿತ್ತು. ಅಂದಿನ ಸ್ಪೀಕರ್ ಕೆ.ಜಿ. ಬೋಪಯ್ಯ, ಸಭಾಪತಿ ಡಿ.ಎಚ್. ಶಂಕರಮೂರ್ತಿ ಹಾಗೂ ಅಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ನಡೆಸಿದ್ದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿತ್ತು.
ತಲಾ 4ರಿಂದ 5 ಲಕ್ಷ ರೂ. ಖರ್ಚು
ಸ್ಪೀಕರ್ ಅವರ ಸೂಚನೆಯಂತೆ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ವಿದೇಶ ಪ್ರವಾಸ ಕೈಗೊಳ್ಳಲು ತಗಲುವ ಖರ್ಚು ವೆಚ್ಚದ ಕುರಿತು ಅಂದಾಜು ಪಟ್ಟಿ ಸಿದ್ದಪಡಿಸಿದ್ದಾರೆ. ಥಾಮಸ್ ಕುಕ್ ಸೇರಿದಂತೆ ಇನ್ನಿತರೆ ಏಜೆನ್ಸಿಗಳಿಂದ ದರ ಪಟ್ಟಿಯನ್ನೂ ಪಡೆದಿದ್ದಾರೆ ಎಂದು ಗೊತ್ತಾಗಿದೆ.
ಎಕಾನಮಿ ದರ್ಜೆಯಲ್ಲಿ ಪ್ರಯಾಣಕ್ಕೆ ಸಂಬಂಧಿಸಿದಂತೆ ದರ ಪಟ್ಟಿ ಪಡೆದಿದ್ದಾರೆ. ಇದರ ಪ್ರಕಾರ ಒಬ್ಬರಿಗೆ 4,48,000 ರೂ. ಮತ್ತು 5,18,000 ರು. ದರವಿದೆ. ನೆದರ್ ಲ್ಯಾಂಡ್, ಹಾಲೆಂಡ್, ಜರ್ಮನಿ, ಸ್ವಿಟ್ಟರ್ ಲ್ಯಾಂಡ್, ಬೆಲ್ಡಿಯಂ, ಫ್ರಾನ್ಸ್ ಇಟಲಿ, ಪ್ಯಾರೀಸ್ ಸೇರಿದಂತೆ ಇನ್ನಿತರೆ ರಾಷ್ಟ್ರಗಳ ಪಟ್ಟಿಯನ್ನೂ ಸಿದ್ಧಪಡಿಸಲಾಗಿದೆ ಎಂದು ತಿಳಿದು ಬಂದಿದೆ.
ಸಮಿತಿಗಳ ಸದಸ್ಯರ ಶಾಸಕರ ಉದ್ದೇಶಿತ ವಿದೇಶ ಪ್ರವಾಸಕ್ಕೆ ಆರ್ಥಿಕ ಇಲಾಖೆಯು ಒಂದೊಮ್ಮೆ ಅನುಮತಿ ನೀಡದೇ ಇದ್ದಲ್ಲಿ ವಿಶೇ ವಿಶೇಷ ಮಂಡಳಿಯಲ್ಲಿ ಒಪ್ಪಿಗೆ ಪಡೆದುಕೊಳ್ಳಬೇಕು ಎಂದೂ ಸಲಹೆ ನೀಡಲಾಗಿದೆ. ಇದಕ್ಕೆ ಸ್ಪೀಕರ್ ಯು ಟಿ ಖಾದರ್ ಕೂಡ ಒಪ್ಪಿಗೆ ಸೂಚಿಸಿದ್ದಾರೆ ಎಂದು ಗೊತ್ತಾಗಿದೆ.