ಸಂಸತ್ ಅಧಿವೇಶನಕ್ಕೆ ರಾಹುಲ್ ಗಾಂಧಿ ಕೋರ್ ಟೀಂ ಸಿದ್ಧ
ಮೈತ್ರಿ ಸರಕಾರಕ್ಕೆ ಸವಾಲೆಸೆಯಲಿರುವ ವಿಪಕ್ಷ ಕಾಂಗ್ರೆಸ್
ರಾಹುಲ್ ಗಾಂಧಿ | PTI
ಲೋಕಸಭಾ ಚುನಾವಣೆಯ ನಂತರ ಮೊದಲ ಅಧಿವೇಶನ ಈಗಾಗಲೇ ಮುಗಿದಿದ್ದು ಜುಲೈ 22ರಿಂದ ಬಜೆಟ್ ಅಧಿವೇಶನ ಶುರುವಾಗಲಿದೆ.
ಮೊದಲ ಅಧಿವೇಶನದಲ್ಲಿ ವಿಪಕ್ಷದ ಪ್ರದರ್ಶನ ಅತ್ಯಂತ ಪ್ರಭಾವಶಾಲಿಯಾಗಿತ್ತು ಮತ್ತು ಮೋದಿ ಮೈತ್ರಿ ಸರಕಾರಕ್ಕೆ ಹೆಜ್ಜೆಹೆಜ್ಜೆಗೂ ಸವಾಲುಗಳಿವೆ ಎಂಬುದನ್ನು ಖಚಿತಗೊಳಿಸಿತ್ತು. ಅದೇ ಪ್ರದರ್ಶನವನ್ನು ಮುಂದುವರಿಸುವ ಉದ್ದೇಶದೊಂದಿಗೆ ಬಜೆಟ್ ಅಧಿವೇಶನದಲ್ಲಿಯೂ ವಿಪಕ್ಷ ಕಾಣಿಸಿಕೊಳ್ಳಲಿದೆ.ಇದಕ್ಕೆ ಪೂರಕವಾಗಿ ಕೆಲ ಸಿದ್ಧತೆಗಳನ್ನು ವಿಪಕ್ಷದ ಅತಿ ದೊಡ್ಡ ಪಕ್ಷ ಕಾಂಗ್ರೆಸ್ ಮಾಡಿಕೊಂಡಿದೆ.
ರಾಹುಲ್ ಗಾಂಧಿ ವಿಪಕ್ಷ ನಾಯಕರಾಗಿದ್ದು, ಅವರ ಸಂಸದೀಯ ಕೋರ್ ಟೀಮ್ ತಯಾರಾಗಿದೆ. ಕಾಂಗ್ರೆಸ್, ಲೋಕಸಭೆಯಲ್ಲಿ ಪಕ್ಷದ ಉಪನಾಯಕನನ್ನಾಗಿ ಅಸ್ಸಾಮಿನಿಂದ ಸಂಸದರಾಗಿರುವ ಗೌರವ್ ಗೊಗೋಯ್ ಅವರನ್ನು ನೇಮಿಸಿದೆ.ಮುಖ್ಯ ಸಚೇತಕರನ್ನಾಗಿ ಕೇರಳದಿಂದ 8 ಬಾರಿ ಸಂಸದರಾಗಿರುವ ಕೊಡಿಕುನ್ನಿಲ್ ಸುರೇಶ್ ಅವರನ್ನು ಕಾಂಗ್ರೆಸ್ ನೇಮಿಸಿದೆ.
ಕೊಡಿಕುನ್ನಿಲ್ ಸುರೇಶ್ ಅವರನ್ನು ಇಂಡಿಯಾ ಮೈತ್ರಿಕೂಟದ ಸ್ಪೀಕರ್ ಅಭ್ಯರ್ಥಿಯಾಗಿಯೂ ಕಣಕ್ಕಿಳಿಸಲಾಗಿತ್ತು. ಕೊಡಿಕುನ್ನಿಲ್ ಸುರೇಶ್ ಅವಲ್ಲದೆ ಇನ್ನೂ ಇಬ್ಬರು ಸಚೇತಕರನ್ನು ಕಾಂಗ್ರೆಸ್ ನೇಮಿಸಿದ್ದು, ಬಿಹಾರದ ಕಿಶನ್ ಗಂಜ್ ನಿಂದ ಸಂಸದರಾಗಿರುವ ಡಾ.ಮುಹಮ್ಮದ್ ಜಾವೇದ್ ಮತ್ತು ತಮಿಳುನಾಡಿನಿಂದ ಸಂಸದರಾಗಿರುವ ಮಾಣಿಕಂ ಟ್ಯಾಗೋರ್ ಸಚೇತಕರಾಗಿದ್ದಾರೆ.
ಈಗ ನೇಮಕಗೊಂಡಿರುವ ನಾಯಕರೆಲ್ಲರೂ ಗಾಂಧಿ ಪರಿವಾರದ ಆಪ್ತರೆಂದೇ ಗುರುತಿಸಿಕೊಂಡು ಬಂದವರು. ಅವರಿಗೆ ವಿವಿಧ ಜವಾಬ್ದಾರಿಗಳನ್ನೂ ನೀಡಲಾಗಿದೆ.
*ಲೋಕಸಭೆ ವಿಪಕ್ಷ ಉಪನಾಯಕರಾಗಿರುವವರು ಗೌರವ್ ಗೊಗೊಯ್ :
ತಮ್ಮ ಪ್ರಭಾವಶಾಲಿ ಭಾಷಣಗಳಿಂದ ಗೌರವ್ ಗೊಗೊಯ್ ಹಲವು ಬಾರಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವವರು. ಪ್ರಧಾನಿ ಮೋದಿ ವಿರುದ್ಧವೇ ಹಲವು ಬಾರಿ ಗೌರವ್ ವಾಗ್ದಾಳಿ ನಡೆಸಿದ್ದಿದೆ. ವಿಶೇಷವಾಗಿ ಮಣಿಪುರ ವಿಷಯದಲ್ಲಿ ಗೌರವ್ ಮುಂಚೂಣಿಯಲ್ಲಿ ನಿಂತು, ಮೋದಿ ಸರ್ಕಾರದ ವಿರುದ್ಧದ ಕಾಂಗ್ರೆಸ್ ಪ್ರತಿಭಟನೆಯನ್ನು ಮುನ್ನಡೆಸಿದ್ದರು.
*ಕೊಡಿಕುನ್ನಿಲ್ ಸುರೇಶ್ :
ಮುಖ್ಯ ಸಚೇತಕರಾಗಿರುವ ಕೊಡಿಕುನ್ನಿಲ್ ಸುರೇಶ್ ಕಾಂಗ್ರೆಸಿನ ಹಿರಿಯ ನಾಯಕರಲ್ಲಿ ಒಬ್ಬರು. ಈಗ ಎಂಟನೇ ಬಾರಿಗೆ ಸಂಸದರು. ಪಕ್ಷದ ನಿಷ್ಠಾವಂತ ನಾಯಕರು. ಸಂಸತ್ತಿನಲ್ಲಿ ಎಲ್ಲ ಕಾಂಗ್ರೆಸ್ ಸಂಸದರ ಪಾಲಿಗೆ ಅವರು ಮಾನಿಟರ್. ವಿವಿಧ ವಿಷಯಗಳಲ್ಲಿ ಪಕ್ಷದ ನಿಲುವನ್ನು ಸಮರ್ಥವಾಗಿ ಸದನದಲ್ಲಿ ಇಡುವಂತೆ ಹಾಗು ಪ್ರಮುಖ ಸಂದರ್ಭಗಳಲ್ಲಿ ಎಲ್ಲ ಸಂಸದರೂ ಹಾಜರಿದ್ದು ಪಕ್ಷದ ಆದೇಶದ ಪ್ರಕಾರ ನಡೆದುಕೊಳ್ಳುವಂತೆ ಹಾಗು ಅದೇ ಪ್ರಕಾರ ಮತ ಚಲಾಯಿಸುವಂತೆ ಖಾತರಿ ಪಡಿಸುವುದು ಅವರ ಜವಾಬ್ದಾರಿ.
*ಡಾ.ಮುಹಮ್ಮದ್ ಜಾವೇದ್ :
ಸಚೇತರಕರಲ್ಲಿ ಒಬ್ಬರಾಗಿ ನೇಮಕವಾಗಿರುವ ಡಾ.ಮುಹಮ್ಮದ್ ಜಾವೇದ್ ಬಿಹಾರದಲ್ಲಿ ಕಾಂಗ್ರೆಸ್ಸಿನ ಮಂಚೂಣಿ ನಾಯಕರಲ್ಲೊಬ್ಬರು. ಕಾಂಗ್ರೆಸ್ ಕೈಯಿಂದ ತಪ್ಪಿಹೋಗಿದ್ದ ಕಿಶನ್ ಗಂಜ್ ಸೀಟನ್ನು ವಾಪಸ್ಸು ಕಾಂಗ್ರೆಸ್ಸಿನ ಭದ್ರಕೋಟೆಯಾಗಿ ರೂಪಿಸಿರುವುದರಲ್ಲಿ ಜಾವೇದ್ ಪಾತ್ರ ಬಹು ದೊಡ್ಡದು.
ವೃತ್ತಿಯಲ್ಲಿ ವೈದ್ಯರಾಗಿರುವ ಮುಹಮ್ಮದ್ ಜಾವೇದ್, ಕಾಂಗ್ರೆಸಿನ ಸಂಘಟನೆ ವಿಚಾರದಲ್ಲಿ ಪ್ರಭಾವಿ ನಾಯಕರೆಂದು ಗುರುತಿಸಲ್ಪಡುವವರು. ಅಲ್ಲದೆ, ಗಾಂಧಿ ಕುಟುಂಬಕ್ಕೂ ಬಹಳ ಆಪ್ತರು.
*ಮಾಣಿಕಂ ಟ್ಯಾಗೋರ್:
ತಮಿಳುನಾಡಿನಿಂದ ಸಂಸದರಾಗಿರುವ ಮಾಣಿಕಂ ಟ್ಯಾಗೋರ್ ಮತ್ತೊಬ್ಬ ಸಚೇತಕರಾಗಿದ್ದಾರೆ. ಮೋದಿ ಸರ್ಕಾರದ ವಿರುದ್ಧ ಪ್ರಬಲವಾಗಿ ದನಿಯೆತ್ತುತ್ತ ಬಂದಿರುವ ಕಾಂಗ್ರೆಸ್ ನಾಯಕರಲ್ಲಿ ಮಾಣಿಕಂ ಕೂಡ ಪ್ರಮುಖರು. ಭವಿಷ್ಯದ ಕಾಂಗ್ರೆಸ್ ನ ಪ್ರಮುಖ ನಾಯಕರಲ್ಲಿ ಒಬ್ಬರು.
ಮೈತ್ರಿ ಸರಕಾರದ ಈ ಕಾಲದಲ್ಲಿ ಸಚೇತಕರ ಜವಾಬ್ದಾರಿ ಬಹು ದೊಡ್ಡದು. ಸರಳ ಭಾಷೆಯಲ್ಲಿ ವಿಪ್ ಅಥವಾ ಸಚೇತಕರನ್ನು ವಿವರಿಸುವುದಾದರೆ, ಅವರು ಅವರು ಕ್ಲಾಸ್ ಮಾನಿಟರ್(ಲೀಡರ್) ಇದ್ದ ಹಾಗೆ. ಸಂಸದರಿಗೆ ಸದನದಲ್ಲಿ ಉಪಸ್ಥಿತರಿರಲು ಮತ್ತು ಯಾವ ರೀತಿಯಲ್ಲಿ ಮತ ಚಲಾಯಿಸಬೇಕು ಎಂದು ಆದೇಶಿಸುವ ಅಧಿಕಾರ ಸಚೇತಕರದ್ದಾಗಿರುತ್ತದೆ.
ಯಾವುದೇ ಪಕ್ಷದ ಸಂಸದರು ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ಮತ ಚಲಾಯಿಸಿದರೆ ಅವರನ್ನು ಅನರ್ಹಗೊಳಿಸಬೇಕೆಂದು ಶಿಫಾರಸು ಮಾಡುವ ಅಧಿಕಾರವನ್ನು ಕೂಡ ಸಚೇತಕರು ಹೊಂದಿದ್ಧಾರೆ. ಈ ಹಿಂದೆ ವಿಪ್ ಆಗಿ ನೇಮಕಗೊಂಡವರೇ ಪಕ್ಷಾಂತರಗೊಂಡ ಇತಿಹಾಸವೂ ಇದೆ. ಹೀಗಿರುವಾಗ ಕಾಂಗ್ರೆಸ್ ಬಹಳ ಯೋಚಿಸಿ ಈ ಬಾರಿ ಸಚೇತಕರ ನೇಮಕ ಮಾಡಿದೆ. ಕಳೆದ ಬಾರಿ ರಾಜ್ಯಸಭೆಯಲ್ಲಿ ಮಾಡಿದ ತಪ್ಪನ್ನು ಕಾಂಗ್ರೆಸ್ ಮತ್ತೆ ಮಾಡದೇ ಇರುವಂತೆ ನೋಡಿಕೊಳ್ಳುವ ಪ್ರಯತ್ನದಲ್ಲಿದೆ.
2019ರ ಆಗಸ್ಟ್ 5ರಂದು ರಾಜ್ಯಸಭೆಯಲ್ಲಿ ಕಾಂಗ್ರೆಸ್ ವಿಪ್ ಆಗಿದ್ದ ಭುವನೇಶ್ವರ್ ಕಲಿತಾ ಅವರಿಗೆ ಕಾಶ್ಮೀರ ವಿಷಯದಲ್ಲಿ ವಿಪ್ ಜಾರಿಗೊಳಿಸಲು ಹೇಳಿದಾಗ ಅವರೇ ರಾಜೀನಾಮೆ ನೀಡಿದ್ದರು. ಅವರ ಈ ನಡೆಯಿಂದ ಆಗ ಕಾಂಗ್ರೆಸ್ ತೀವ್ರ ಮುಜುಗರಕ್ಕೊಳಗಾಗಿತ್ತು.
ಕಾಂಗ್ರೆಸ್ ಬೇರೆ ಬೇರೆ ರಾಜ್ಯಗಳ ಮತ್ತು ಸಮುದಾಯಗಳ ಪ್ರಾತಿನಿಧ್ಯವನ್ನು ತಲೆಯಲ್ಲಿಟ್ಟುಕೊಂಡೇ ಈ ತೀರ್ಮಾನಗಳನ್ನು ತೆಗೆದುಕೊಂಡಿದೆ. ಉತ್ತರ ಪ್ರದೇಶದಿಂದ ರಾಹುಲ್ ಗಾಂಧಿ, ಅಸ್ಸಾಮಿನಿಂದ ಗೌರವ್ ಗೊಗೋಯ್, ಕೇರಳದಿಂದ ಕೆ ಸುರೇಶ್, ಬಿಹಾರದಿಂದ ಮುಹಮ್ಮದ್ ಜಾವೇದ್ ಮತ್ತು ತಮಿಳುನಾಡಿನಿಂದ ಮಾಣಿಕಂ ಟ್ಯಾಗೋರ್. ಈ ರೀತಿ ಪ್ರಾದೇಶಿಕ ಪ್ರಾತಿನಿಧ್ಯ ನೀಡಲು ಕಾಂಗ್ರೆಸ್ ಪ್ರಯತ್ನಿಸಿದೆ.
ಗೌರವ್ ಗೊಗೋಯ್ ಮತ್ತು ಮಣಿಕಂ ಟ್ಯಾಗೋರ್ ಒಬಿಸಿ ಸಮುದಾಯದಿಂದ ಬಂದವರು. ಕೆ ಸುರೇಶ್ ದಲಿತ ಸಮುದಾಯದವರಾಗಿದ್ದಾರೆ. ಮುಹಮ್ಮದ್ ಜಾವೇದ್ ಮುಸ್ಲಿಂ ಸಮುದಾಯಕ್ಕೆ ಸೇರಿದವರು. ಈ ರೀತಿ ಜಾತಿ ಧರ್ಮದ ಪ್ರಾತಿನಿಧ್ಯವನ್ನು ನೀಡುವುದಕ್ಕೂ ಕಾಂಗ್ರೆಸ್ ಪ್ರಯತ್ನಿಸಿದೆ. ರಾಹುಲ್ ಗಾಂಧಿಯವರ ಈ ಹೊಸ ಟೀಮ್ ಯಾವೆಲ್ಲ ಹೊಸ ತಂತ್ರಗಳ ಮೂಲಕ ಮೋದಿ ಸರಕಾರವನ್ನು ಸದನದಲ್ಲಿ ಇಕ್ಕಟ್ಟಿಗೆ ಸಿಲುಕಿಸಲಿದೆಯೆನ್ನುವುದು ಸದನದಲ್ಲಿ ತಿಳಿಯಲಿದೆ.