ರಾಮ ಮಂದಿರ ಕವರೇಜ್: ಪ್ರಸಿದ್ಧ ಅಂಕಣವನ್ನೇ ಕೈ ಬಿಟ್ಟ ʼಟೈಮ್ಸ್ ಆಫ್ ಇಂಡಿಯಾʼ
ಆ ಅಂಕಣದಲ್ಲಿ ಏನಿತ್ತು?; ಇಲ್ಲಿದೆ ಅದರ ಅನುವಾದ
Photo: PTI
ರಾಮ ಮಂದಿರ ಉದ್ಘಾಟನೆಗೆ ತಿಂಗಳ ಮೊದಲೇ ಅದಕ್ಕೆ ಸಂಬಂಧಿಸಿದ ಹಾಗು ಬಿಜೆಪಿ, ಪ್ರಧಾನಿ ಮೋದಿಯನ್ನು ವೈಭವೀಕರಿಸುವ ವರದಿಗಳನ್ನು ಭಾರತದ ಬಹುತೇಕ ಮುಖ್ಯವಾಹಿನಿ ಪತ್ರಿಕೆಗಳು ಹಾಗು ನ್ಯೂಸ್ ಚಾನಲ್ ಗಳು ಪ್ರಕಟಿಸಿದ್ದನ್ನು, ಪ್ರಸಾರ ಮಾಡಿದ್ದನ್ನು ಎಲ್ಲರೂ ಕಂಡಿದ್ದಾರೆ. ಕಳೆದೊಂದು ತಿಂಗಳ ಅವಧಿಯಲ್ಲಿ ಯಾವ ಮೀಡಿಯಾ ನೋಡಿದರೂ ಅಲ್ಲಿ ಕೇವಲ ರಾಮ ಮಂದಿರ, ಸಂಘ ಪರಿವಾರ, ಬಿಜೆಪಿ, ಮೋದಿ ಮಾತ್ರ ರಾರಾಜಿಸುತ್ತಿದ್ದರು.
ಮಾಧ್ಯಮಗಳ ಅಯೋಧ್ಯ ಕವರೇಜ್ ಬಗ್ಗೆ ವರದಿ ಮಾಡಿರುವ ʼನ್ಯೂಸ್ ಲಾಂಡ್ರಿʼ ವೆಬ್ ಸೈಟ್ ಇನ್ನೊಂದು ವಿಷಯವನ್ನು ಹೇಳಿದೆ. ರಾಮ ಮಂದಿರಕ್ಕೆ ಸಂಬಂಧಿಸಿದ ವರದಿಗಳು, ಲೇಖನಗಳ ಜೊತೆ ಈ ಪತ್ರಿಕೆಗಳು ಹಾಗು ಚಾನಲ್ ಗಳಿಗೆ ಸರಕಾರದಿಂದ ಸಾಕಷ್ಟು ಜಾಹೀರಾತು ಕೂಡ ಬಂದಿದೆ. ಹಾಗಾಗಿ ರಾಮ ಮಂದಿರ ವಿಷಯವನ್ನು ಈ ಪತ್ರಿಕೆಗಳು ವೈಭವೀಕರಿಸಿದವು ಅಂದರೆ ಬಿಜೆಪಿಗೆ, ಸಂಘ ಪರಿವಾರಕ್ಕೆ ಒಂದಿಷ್ಟೂ ಇಷ್ಟವಾಗದ ಯಾವುದೇ ಬರಹ ಪ್ರಕಟವಾಗದಂತೆಯೂ ನೋಡಿಕೊಂಡವು.
ಉದಾಹರಣೆಗೆ ʼಟೈಮ್ಸ್ ಆಫ್ ಇಂಡಿಯಾʼ ದಶಕಗಳಿಂದ ತನ್ನಲ್ಲಿ ಅಂಕಣ ಬರೆಯುತ್ತಿರುವ ಪ್ರಸಿದ್ಧ ಅಂಕಣಕಾರ ಜಗ್ ಸುರಯ್ಯಾ ಅವರ ರಾಮ ಮಂದಿರ ಕುರಿತ ಅಂಕಣವನ್ನೇ ಪ್ರಕಟಿಸಲಿಲ್ಲ. ಜಗ್ ಸುರಯ್ಯಾ ದೇಶದ ಪ್ರಖ್ಯಾತ ವಿಡಂಬನೆ ಹಾಗು ಹಾಸ್ಯ ಬರಹಗಾರರಲ್ಲಿ ಒಬ್ಬರು. ಅತ್ಯಂತ ಗಂಭೀರ ವಿಷಯಗಳನ್ನೂ ಹಾಸ್ಯ ಹಾಗು ವಿಡಂಬನೆ ಮೂಲಕ ಪರಿಣಾಮಕಾರಿಯಾಗಿ ಬರೆಯುವ ಮೂಲಕ ದೇಶ ವಿದೇಶಗಳಲ್ಲಿ ಪ್ರಸಿದ್ಧಿ ಪಡೆದವರು.
ಆದರೂ, ಅವರ ರಾಮ ಮಂದಿರ ಕುರಿತ ಪುಟ್ಟ ಅಂಕಣ ಬರಹವನ್ನು ಟೈಮ್ಸ್ ಆಫ್ ಇಂಡಿಯಾ ಪ್ರಕಟಿಸಲಿಲ್ಲ. ಆ ಬಗ್ಗೆ ಅವರು ಬರೆದ ಪುಟ್ಟ ಟಿಪ್ಪಣಿ ಹಾಗು ಆ ಅಂಕಣ ಬರಹವನ್ನು ʼದಿ ವೈರ್ʼ ವೆಬ್ ಸೈಟ್ ಪ್ರಕಟಿಸಿದೆ. ಅದರ ಅನುವಾದ ಇಲ್ಲಿದೆ:
ನಾನು ಟೈಮ್ಸ್ ಆಫ್ ಇಂಡಿಯಾಗೆ ನನ್ನ ಅಂಕಣವನ್ನು ಕಳೆದ ರವಿವಾರ ಕಳಿಸಿದ್ದೆ. ಅದು ಬುಧವಾರ ಪ್ರಕಟವಾಗಬೇಕಿದ್ದ ಅಂಕಣ. ಈ ಅಂಕಣ ಪ್ರಕಟವಾಗಲ್ಲ ಎಂದು ನನ್ನ ಪತ್ನಿ ಬನ್ನಿ ನನಗೆ ಮೊದಲೇ ಹೇಳಿದ್ದಳು. ಹಾಗಾಗಿ ಮುನ್ನೆಚ್ಚರಿಕೆಯಾಗಿ ಹರ್ಯಾಣ ಪೋಲೀಸರ ಕುರಿತ ಒಂದು ಸಪ್ಪೆ ಅಂಕಣವನ್ನೂ ಕಳಿಸಿದ್ದೆ. ಇವತ್ತು (ಜ. 24 ) ರಾಮನ ಕುರಿತ ಅಂಕಣದ ಬದಲು ಅದೇ ಪ್ರಕಟವಾಗಿದೆ.
ರಾಮ, ಲಕ್ಷ್ಮಣರು ಸ್ವರ್ಗದಿಂದ ಭೂಮಿಯ ಮೇಲೆ ನಡೆಯುತ್ತಿರುವ ಚಟುವಟಿಕೆಗಳನ್ನು ವೀಕ್ಷಿಸುತ್ತಿದ್ದಾರೆ.
ಲಕ್ಷ್ಮಣ್: ಸೋದರ, ನಿನಗೆ ಇಷ್ಟ ಇರಲಿ, ಇಲ್ಲದಿರಲಿ, ನಿನ್ನನ್ನು ರಾಜಕೀಯಕ್ಕೆ ಎಳೆದು ತರಲಾಗಿದೆ.
ರಾಮ: ರಾಜಕೀಯ ? ಅದೇನು ? ಅದೊಂದು ಕೊರೊನದ ಹಾಗೆ ಸೋಂಕಿನಂತೆ ಅನಿಸುತ್ತಿದೆಯಲ್ಲ ? ಮಾಸ್ಕ್ ಹಾಕಿಕೊಂಡು ಆಗಾಗ ಕೈ ತೊಳೆಯುತ್ತಿದ್ದರೆ ಏನಾದರೂ ಪ್ರಯೋಜನ ಆಗಬಹುದಾ ?
ಲಕ್ಷ್ಮಣ: ನನಗೆ ಸಂಶಯವಿದೆ. ವೈದ್ಯಕೀಯ ವಿಜ್ಞಾನಕ್ಕೆ ಗೊತ್ತಿರುವುದಕ್ಕಿಂತ ಬಹಳ ಹೆಚ್ಚು ಸೋಂಕು ರಾಜಕೀಯದ್ದು. ರಾಜಕೀಯದಲ್ಲಿ ಜನರು ಒಂದು ಸೇರಿ ಪಾರ್ಟಿ ಹೆಸರಲ್ಲಿ ಗುಂಪು ಮಾಡಿ, ಚುನಾವಣೆಯಲ್ಲಿ ಒಬ್ಬರ ವಿರುದ್ಧ ಒಬ್ಬರು ಸ್ಪರ್ಧಿಸುತ್ತಾರೆ. ಆಗ ಅಜೆಂಡಾದ ಮಂತ್ರ ಪಠಿಸುತ್ತಿರುತ್ತಾರೆ. ಎಲ್ಲರನ್ನೂ ಆಳುವ ಅವಕಾಶ ಯಾರಿಗೆ ಸಿಗುತ್ತೆ ಅಂತ ಕಾಯ್ತಾ ಇರ್ತಾರೆ.
ರಾಮ: ನನಗೆ ಈ ಪಕ್ಷದಿಂದ ಪಕ್ಷಕ್ಕೆ ಹಾರುವ ರಾಜಕೀಯ ಎಂದರೆ ಆಗದು. ಆದರೆ ಈ ರಾಜಕೀಯಕ್ಕೂ ನನಗೂ ಏನು ಸಂಬಂಧ ?
ಲಕ್ಷ್ಮಣ: ಇಡೀ ಸಂಬಂಧ ಇರುವುದೇ ನಿನ್ನ ಜೊತೆ. ಆಡಳಿತ ಪಕ್ಷ ಹಾಗು ವಿಪಕ್ಷಗಳು - ಇವೆರಡರ ಅಜೆಂಡಾದಲ್ಲೂ ನೀನೇ ಇರೋದು.
ರಾಮ: ಹಾಗಾದರೆ ನಾನು ಈ ರಾಜಕೀಯ ಅಜೇಂಡಾದ ಅವತಾರದಲ್ಲಿ ಎರಡೆರಡು ಬಾರಿ ಇರಬೇಕಾ? ನನಗೆ ಎರಡೆರಡು ವ್ಯಕ್ತಿತ್ವ ಇದ್ದ ಹಾಗೆ ಭಾಸವಾಗುತ್ತಿದೆ. ಇದೆಲ್ಲ ಹೇಗಾಯ್ತು?
ಲಕ್ಷ್ಮಣ: ಅದು ಈಗ ಕ್ಯಾಲೆಂಡರ್ ವಿಭಜನೆಯಾಗಿರುವ ರೀತಿಯಲ್ಲೇ ಸೇರಿಕೊಂಡಿದೆ. ಮೊದಲು ಕಾಲವನ್ನು ಕ್ರಿಸ್ತ ಶಕ ಹಾಗು ಕ್ರಿಸ್ತ ಪೂರ್ವ ಎಂದು ಗುರುತಿಸಲಾಗುತ್ತಿತ್ತು. ಈಗ ಕಾಲವನ್ನೂ ಪಿಎಂ, ಪಿಎಂ ಎಂದು ಗುರುತಿಸಲಾಗುತ್ತಿದೆ.
ರಾಮ: ಪಿಎಂ, ಪಿಎಂ ಎರಡೂ ಒಂದೇ ಅಲ್ವಾ ?
ಲಕ್ಷ್ಮಣ: ಅವೆರಡೂ ಒಂದೇ. ಆದರೆ ಒಂದೇ ಅಲ್ಲ. ಒಂದು ಪಿಎಂ ಅಂದ್ರೆ ಪ್ರಿ ಮಂದಿರ್ ( ಮಂದಿರಕ್ಕೆ ಮೊದಲು) , ಇನ್ನೊಂದು ಪಿಎಂ ಅಂದ್ರೆ ಪೋಸ್ಟ್ ಮಂದಿರ್ ( ಮಂದಿರದ ಬಳಿಕ). ಹೀಗೆ ಈಗ ನೀನೂ ಸೇರಿ ಲೋಕದ ಎಲ್ಲವೂ, ಎಲ್ಲರೂ ವಿಭಜನೆಯಾಗಿಬಿಟ್ಟಿದ್ದಾರೆ.
ರಾಮ: ನಾನು ಮಂದಿರದ ವೀಡಿಯೊ ಯೂಟ್ಯೂಬ್ ನಲ್ಲಿ ನೋಡಿದೆ. ಅದು ಬಹಳ ಆಕರ್ಷಕವಾಗಿದೆ. ಆದರೆ ಅದು ಅಂತಹ ವಿಭಜನೆಯ ವಿಷಯ ಆಗೋದು ಹೇಗೆ ?
ಲಕ್ಷ್ಮಣ: ಏಕೆಂದರೆ ಮಂದಿರ ಕಟ್ಟಿರುವ ಸರಕಾರ ಅದರ ಮೇಲೆ ತನ್ನ ಮುದ್ರೆಯೊತ್ತಿದೆ. ಅಂದ್ರೆ ನಿನ್ನ ಮೇಲೆಯೂ ತನ್ನ ಮುದ್ರೆ ಒತ್ತಿದೆ. ಆದರೆ ವಿಪಕ್ಷ ನೀನು ಅವರಿಗೆ ಸೇರಿದವನು ಎಂದು ಹೇಳಿಕೊಳ್ಳುತ್ತಿದೆ. ಹಾಗಾಗಿ ಈಗ ನೀನು ಎರಡೂ ಆಗಿದ್ದೀಯ. ಒಂದೆಡೆ ಸರಕಾರವೂ ನೀನು, ಇನ್ನೊಂದು ವಿಪಕ್ಷವೂ ನೀನು.
ರಾಮ: ಹೇ ರಾಮ್
ಲಕ್ಷ್ಮಣ: ಅದನ್ನು ಈಗ ಎರಡಾಗಿರುವ ನೀನು ಎರಡು ಬಾರಿ ಹೇಳಬಹುದು...