ಆರ್ಥಿಕ ಹಿಂಜರಿತ ಮತ್ತು ಅಭಿವೃದ್ಧಿ : ನಿಜ ಭ್ರಮೆಗಳಾಚೆ
ಪ್ರಸಕ್ತ ಬಿಕ್ಕಟ್ಟು
1990ರ ನವ ಉದಾರೀಕರಣದ ನಂತರ ಆರ್ಥಿಕ ಅಭಿವೃದ್ಧಿ ಕುರಿತಾದ ನೀತಿಗಳು, ಸರಕಾರದ ಅಂಕಿಅಂಶಗಳು ಸದಾ ಚರ್ಚೆಗೊಳಪಟ್ಟಿವೆ. ನಿಸ್ಸಿಂ ನಿಕೋಲಾಸ್ ತಲೆಬ್ ‘‘ಒಂದು ಕತೆಯನ್ನು ಕದಲಿಸಲು ಮತ್ತೊಂದು ಕತೆಯ ಅಗತ್ಯವಿದೆ. ವಿಚಾರಗಳಿಗಿಂತಲೂ ರೂಪಕಗಳು, ಕತೆಗಳು ತುಂಬಾ ಪ್ರಭಾವಶಾಲಿಯಾಗಿವೆ... ವಿಚಾರಗಳು ಬರುತ್ತವೆ, ಹೋಗುತ್ತವೆ. ಆದರೆ ಕತೆಗಳು ಉಳಿದುಕೊಳ್ಳುತ್ತವೆ’’ ಎಂದು ಬರೆಯುತ್ತಾರೆ. ಮೋದಿ ನೇತೃತ್ವ ಬಿಜೆಪಿ ಸರಕಾರವು ಕಳೆದ ಒಂಭತ್ತು ವರ್ಷಗಳಲ್ಲಿ ದೇಶದ ಆರ್ಥಿಕತೆಯ ಕುರಿತು ಕಟ್ಟಿದ, ತೇಲಿಬಿಟ್ಟ ಕತೆಗಳು ಅವರು ಎರಡು ಬಾರಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ತಮ್ಮದೇ ಕೊಡುಗೆ ನೀಡಿವೆ. ಮೋದಿ ಟೀಂನ ಈ ಸುಳ್ಳು ಕತೆಗಳ ಮುಂದೆ ನಿಷ್ಪಕ್ಷಪಾತ, ಅಂಕಿಅಂಶಗಳನ್ನು ಆಧರಿಸಿದ ಆರ್ಥಿಕ ವಿಚಾರಗಳಿಗೆ ಯಾವುದೇ ಬೆಂಬಲ ದೊರಕುತ್ತಿಲ್ಲ.
ಉದಾಹರಣೆಗೆ 2016ರಲ್ಲಿ ಚಲಾವಣೆಯಲ್ಲಿದ್ದ ಶೇ.85ರಷ್ಟು ನೋಟುಗಳನ್ನು ಅಮಾನ್ಯಗೊಳಿಸಿದ ಮೋದಿಯವರ ದಿಢೀರ್ ನಿರ್ಧಾರದಿಂದ ಭಾರತದ ಆರ್ಥಿಕತೆ ದಶಕಗಳಷ್ಟು ಹಿಂದಕ್ಕೆ ತಳ್ಳಲ್ಪಟ್ಟಿತು. ಉದ್ಯೋಗ ನಷ್ಟವಾಯಿತು. ಎಂಎಸ್‌ಎಂಇ ಮುಚ್ಚಿಕೊಂಡವು. ಆದರೆ ಕಪ್ಪುಹಣ, ದೇಶಪ್ರೇಮ ಎಂದು ಕತೆ ಕಟ್ಟಿದ ಮೋದಿಯವರನ್ನು ನಂಬಿದ ಬಹುಸಂಖ್ಯಾತರು 2017ರ ಉತ್ತರ ಪ್ರದೇಶ ಚುನಾವಣೆ ಮತ್ತು 2019ರ ಲೋಕಸಭಾ ಚುನಾವಣೆಯಲ್ಲಿ ಮರಳಿ ಬಿಜೆಪಿ ಪಕ್ಷಕಕ್ಕೆ ಅಭೂತಪೂರ್ವ ಗೆಲುವು ತಂದುಕೊಟ್ಟರು. ವಾಸ್ತವವನ್ನು ಬಿಂಬಿಸುವ ನೈಜ ವಿಚಾರಗಳು ಗೋರಿಗಳಲ್ಲಿ ಹೂತು ಹೋದವು. ಮಾರ್ಚ್ 24, 2020ರಂದು ಪ್ರಧಾನಿ ಮೋದಿ ಯಾವುದೇ ಮುನ್ಸೂಚನೆ ನೀಡದೆ ಲಾಕ್‌ಡೌನ್ ಘೋಷಿಸಿದ್ದರ ಪರಿಣಾಮವಾಗಿ ಸುಮಾರು 40 ಕೋಟಿ ಜನಸಂಖ್ಯೆ ಆಹಾರವಿಲ್ಲದೆ, ಉದ್ಯೋಗವಿಲ್ಲದೆ ಬೀದಿಗೆ ಬರುವಂತಾಯಿತು. ಸುಮಾರು 12 ಕೋಟಿ ವಲಸೆ ಕಾರ್ಮಿಕರು ಉದ್ಯೋಗ ಕಳೆದುಕೊಂಡು ಮರಳಿ ತಮ್ಮ ಊರಿಗೆ ರಿವರ್ಸ್ ವಲಸೆ ಹೊರಟರು. ಲಕ್ಷಾಂತರ ಕಾರ್ಮಿಕರು ವಾಹನ, ರೈಲು ಸೇವೆಗಳ ಲಭ್ಯವಿಲ್ಲದೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದರು. ಈ ಸಂದರ್ಭದ ಹಸಿವಿನ ಭೀಕರತೆ, ಸರಕಾರದ ನಿರ್ಲಕ್ಷ್ಯ ಕಾರಣದಿಂದ ಅಂದಾಜು 800 ವಲಸೆ ಕಾರ್ಮಿಕರು ಮೃತರಾಗಿದ್ದಾರೆ. ಅಂದಾಜು 200 ಜನ ಹಸಿವಿನಿಂದ ಮೃತರಾಗಿದ್ದಾರೆ. ರೈಲು ಪ್ರಯಾಣದಲ್ಲಿ ನಿಶ್ಯಕ್ತಿ ಮತ್ತು ಆಹಾರ ದೊರಕದೆ 90 ಜನ ಮೃತರಾಗಿದ್ದಾರೆ. ಇದು ವಾಸ್ತವ ಘಟನೆಗಳು, ಸಂಗತಿಗಳು.
26, ಮಾರ್ಚ್ 2020ರಂದು ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಪ್ಯಾಕೇಜ್ (ಪಿಎಂಜಿಕೆಪಿ) ಅಡಿಯಲ್ಲಿ 80 ಕೋಟಿ ಜನಸಂಖ್ಯೆಗೆ (ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ 2011ರ ಜನಗಣತಿ ಆಧಾರದ ಮೇಲೆ ಗುರುತಿಸಲ್ಪಟ್ಟ ಶೇ.67 ಜನಸಂಖ್ಯೆ) ಈಗಾಗಲೇ ದೊರಕುತ್ತಿರುವ 5 ಕೆ.ಜಿ. ಪಡಿತರದ ಜೊತೆಗೆ ಹೆಚ್ಚುವರಿಯಾಗಿ 5 ಕೆ.ಜಿ. ಬೇಳೆ, ಕಾಳು ಉಚಿತವಾಗಿ ವಿತರಿಸಲಾಗುವುದು, ಇದನ್ನು ಎಪ್ರಿಲ್, ಮೇ, ಜೂನ್ ಮೂರು ತಿಂಗಳು ಕೊಡಲಾಗುತ್ತದೆ ಎಂದು ಹೇಳಿದ್ದರು. ಆದರೆ ‘ದ ವೈರ್ ಇನ್’ನ ವರದಿಯ ಪ್ರಕಾರ 14 ಕೋಟಿ ಜನಸಂಖ್ಯೆಗೆ 2020ರ ಮೇ ತಿಂಗಳಲ್ಲಿ, 6.4 ಕೋಟಿ ಜನಸಂಖ್ಯೆಗೆ ಎಪ್ರಿಲ್ ತಿಂಗಳಿಂದ ಈ 5 ಕೆ.ಜಿ. ಬೇಳೆ ಕಾಳು, ದೊರಕಿಲ್ಲ. ಇದರ ಜೊತೆಗೆ 20 ಕೋಟಿ ಜನಸಂಖ್ಯೆಗೆ 2020ರ ಎಪ್ರಿಲ್ ತಿಂಗಳಲ್ಲಿ ಹೆಚ್ಚುವರಿ 5 ಕೆ.ಜಿ. ಬೇಳೆ, ಕಾಳು ದೊರೆತಿರಲಿಲ್ಲ. ಜೂನ್ ತಿಂಗಳಲ್ಲಿ ಪರಿಶೀಲಿಸಿದಾಗ 6 ಕೋಟಿ ಜನಸಂಖ್ಯೆಗೆ ಹೆಚ್ಚುವರಿ ಪಡಿತರ ದೊರಕಿರಲಿಲ್ಲ. ಅಲ್ಲದೆ ಎಲ್ಲಕ್ಕಿಂತಲೂ ಮುಖ್ಯವಾಗಿ ಜೀನ್ ಡ್ರೀಜೆ, ಮೇಘನಾ ಮುಂಗೇಕರ್ ಅವರು ಹೇಳಿದಂತೆ ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್‌ಎಫ್‌ಎಸ್‌ಎ)ಯ ಅನುಸಾರ ಪಡಿತರ ವಿತರಣೆಗೆ ಶೇ.67 ಪ್ರಮಾಣದ ಜನಸಂಖ್ಯೆಯನ್ನು 2011ರ ಜನಗಣತಿಯನ್ನು ಆಧರಿಸಲಾಗಿತ್ತು. ಆದರೆ ಕಳೆದ 9 ವರ್ಷಗಳಲ್ಲಿ 10 ಕೋಟಿ ಜನಸಂಖ್ಯೆ ಹೆಚ್ಚಳವಾಗಿದೆ ಹಾಗೂ ಇವರನ್ನು ಎನ್‌ಎಫ್‌ಎಸ್‌ಎ ಅಡಿಯಲ್ಲಿ ಪರಿಗಣಿಸಿಲ್ಲ ಮತ್ತು ಇವರೆಲ್ಲರೂ ಪಡಿತರ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಆದರೆ ಕತೆಯೇ ಮುಖ್ಯವಾಗಿ 2022ರ ಉತ್ತರ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಪಕ್ಷ ಮರು ಆಯ್ಕೆಯಾಯಿತು. ವಿಚಾರಗಳಿಗೆ ಮೊಳೆ ಹೊಡೆಯಲಾಯಿತು.
ಪ್ರಸಕ್ತ ನಾಝಿವಾದದ ಸಂದರ್ಭದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರಕಾರದ ಗೋಬೆಲ್ಸ್ ಕತೆಗಳ ಮುಂದೆ ಮೇಲೆ ಉದಾಹರಿಸಿದ ವಾಸ್ತವ ಅಂಕಿ ಅಂಶಗಳು ತೆರೆಮರೆಗೆ ಸರಿದುಬಿಡುತ್ತವೆ. ಜನರಿಗೂ ತಲೆಚಿಟ್ಟು ಹಿಡಿಸುವ ತಮ್ಮದೇ ಬದುಕಿನ ಸಂಗತಿಗಳಿಗಿಂತ ಮೋದಿ ತೇಲಿಬಿಡುವ ಸುಳ್ಳುಗಳ ಫ್ಯಾಂಟಸಿ ಲೋಕ ಇಷ್ಟವಾಗುತ್ತದೆ. ಇತ್ತೀಚೆಗೆ ದ.ಆಫ್ರಿಕಾದಲ್ಲಿ ನಡೆದ ಬ್ರಿಕ್ಸ್ ಸಭೆಯಲ್ಲಿ ಮಾತನಾಡುತ್ತಾ ಮೋದಿ ಅತಿ ಶೀಘ್ರದಲ್ಲಿ ಭಾರತವು 5 ಟ್ರಿಲಿಯನ್ (500 ಲಕ್ಷ ಕೋಟಿ ರೂ.) ಆರ್ಥಿಕತೆ ದೇಶವಾಗಲಿದೆ ಎಂದು ಹೇಳಿದರು. 77ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪುಕೋಟೆಯಿಂದ ಮಾತನಾಡುತ್ತಾ ‘‘2014ರಲ್ಲಿ ಭಾರತವು 10ನೇ ಅತಿ ದೊಡ್ಡ ಆರ್ಥಿಕ ದೇಶವಾಗಿತ್ತು, ಈಗ 5ನೇ ಪಟ್ಟಿಯಲ್ಲಿದೆ, ಮುಂದಿನ ದಿನಗಳಲ್ಲಿ ಮೂರನೇ ಆರ್ಥಿಕ ದೇಶವಾಗಲಿದೆ’’ ಎಂದು ಹೇಳಿದರು. ಇದು ಎಲ್ಲಾ ಮಾಧ್ಯಮಗಳ ಮುಖಪುಟದಲ್ಲಿ ಸುದ್ದಿಯಾಗಿ ಬಿತ್ತರಗೊಂಡಿತು. ದೃಶ್ಯ ಮಾಧ್ಯಮಗಳಲ್ಲಿ ಬ್ರೇಕಿಂಗ್ ಸುದ್ದಿಯಾಗಿ ಪ್ರಚಾರಗೊಂಡಿತು. ಈ ಹುಸಿ ಘೋಷಣೆಗಳ ಮೂಲಕ 2024ರ ಚುನಾವಣೆಗೆ ವೇದಿಕೆಯೂ ಸಜ್ಜಾಯಿತು. ಆದರೆ ಸತ್ಯ ಮತ್ತು ವಾಸ್ತವಗಳು ಕತ್ತಲಿನ ಮೂಲೆಗೆ ತಳ್ಳಲ್ಪಟ್ಟಿತು.
ಹಾಗಿದ್ದಲ್ಲಿ ಏನಿದು ವಾಸ್ತವ? ಏನಿದು ಸತ್ಯ?
ಹಾದಿ ತಪ್ಪಿದ ಆರ್ಥಿಕತೆ
ಇಲ್ಲಿನ ಪ್ರತಿಷ್ಠಿತರು, ಕ್ರೂನಿ ಬಂಡವಾಳಶಾಹಿಗಳು, ಬಹುಪಾಲು ಮಾಧ್ಯಮಗಳು ಸೃಷ್ಟಿಸಿದ ‘ಭಾರತ ಪ್ರಕಾಶಿಸುತ್ತಿದೆ’ ಎನ್ನುವ ಕತೆ 2004ರ ವಾಜಪೇಯಿ ಕಾಲಕ್ಕಿಂತಲೂ ಟೊಳ್ಳಾಗಿದೆ. ಐಎಂಎಫ್ ಸಂಸ್ಥೆಯು ಈ ವರ್ಷ ಭಾರತದ ಜಿಡಿಪಿ ಶೇ.6.1ರಷ್ಟು ಮತ್ತು ಮುಂದಿನ ವರ್ಷ ಶೇ.6.8ರಷ್ಟು ಹೆಚ್ಚಾಗಲಿದೆ ಎಂದು ಹೇಳಿದೆ. ವಾಸ್ತವದಲ್ಲಿ ಇದು ಪರೀಕ್ಷೆಯಲ್ಲಿ 100 ಮಾರ್ಕ್ಸ್‌ಗೆ 20 ಅಂಕಗಳನ್ನು ತೆಗೆದುಕೊಂಡವ ಮುಂದಿನ ವರ್ಷ 40 ಅಂಕಗಳನ್ನು ಗಳಿಸಿದಾಗ ಅದನ್ನು ಡಬಲ್ ಧಮಾಕ, ದುಪ್ಪಟ್ಟು ಹೆಚ್ಚಳ ಎಂದು ಪೋಷಕರು ಕೊಚ್ಚಿಕೊಂಡಂತೆ. ಇದನ್ನೇ ಮುಂದಿಟ್ಟುಕೊಂಡು ಸಂಘ ಪರಿವಾರವು ಭಾರತದ ದಶಕ ಶುರುವಾಗಿದೆ ಎಂದು ರಾಗ ಶುರು ಮಾಡಿದೆೆ. ಮಾಧ್ಯಮಗಳೂ ಪಕ್ಕವಾದ್ಯ ನುಡಿಸುತ್ತಿವೆ. ಆದರೆ ಬಿಜೆಪಿ ಮತ್ತು ಮಾಧ್ಯಮಗಳು ಆಡುತ್ತಿರುವ ಈ ಅಂಕಿಅಂಶಗಳ ಮೇಲಾಟದಲ್ಲಿ ದೇಶದ ಭಯಾನಕ ಆರ್ಥಿಕ ಪರಿಸ್ಥಿತಿ ಚರ್ಚೆಗೆ ಬರುತ್ತಿಲ್ಲ. ಕೋವಿಡ್ ಕಾಲದ ಆರ್ಥಿಕ ದುಸ್ಥಿತಿಯನ್ನು ಎಲ್ಲರೂ ಮರೆತಿದ್ದಾರೆ.
2020ರ ಕೋವಿಡ್ ಸಂದರ್ಭದಲ್ಲಿ ಜಿಡಿಪಿಯು ಶೇ. -7ರಷ್ಟು ಋಣಾತ್ಮಕ ಕುಸಿತ ಕಂಡಿತ್ತು. crisil (Credit Rating Information Services Of India Limited) ಎಂಬ ಅಂತರ್‌ರಾಷ್ಟ್ರೀಯ ಏಜೆನ್ಸಿ 2021ರ ವಿತ್ತೀಯ ಅವಧಿಯಲ್ಲಿ ಜಿಡಿಪಿ ಶೇ. 5 ಪ್ರಮಾಣಕ್ಕಿಂತಲೂ ಕಡಿಮೆಯಾಗಲಿದೆ, ಆದರೆ ಕೃಷಿಯೇತರ ಜಿಡಿಪಿ ಶೇ. 6 ಪ್ರಮಾಣಕ್ಕೆ ಕುಸಿಯಲಿದೆ ಎಂದು ಹೇಳಿತ್ತು. ಸ್ವಾತಂತ್ರ್ಯ ಬಂದ ನಂತರ ಇದು ನಾಲ್ಕನೇ ಆರ್ಥಿಕ ಹಿಂಜರಿತ. ಈ ಹಿಂದೆ 1958, 1966, 1980ರಲ್ಲಿ ಆರ್ಥಿಕ ಬಿಕ್ಕಟ್ಟು ಉಂಟಾಗಿತ್ತು. ಆಗ ಸತತವಾಗಿ ಕೈಕೊಟ್ಟ ಮುಂಗಾರು ಹಿಂಜರಿತಕ್ಕೆ ಪ್ರಧಾನ ಕಾರಣವಾಗಿತ್ತು ಮತ್ತು ಆ ಕಾಲದಲ್ಲಿ ಜಿಡಿಪಿಗೆ ಕೃಷಿಯ ಕೊಡುಗೆ ಶೇ.50 ಪ್ರಮಾಣಕ್ಕಿಂತಲೂ ಹೆಚ್ಚಿತ್ತು ಎಂದು ಏಜನ್ಸಿ ವಿವರಿಸಿದೆ. ಆದರೆ ಮೋದಿ ಸರಕಾರದ ವಿಫಲ ಆರ್ಥಿಕ ನೀತಿ ಮತ್ತು ಗೊತ್ತು ಗುರಿಯಿಲ್ಲದ ನಿರ್ಧಾರಗಳಿಂದಾಗಿ 2017ರಿಂದ ಇಂದಿನವರೆಗೆ ಸತತವಾಗಿ ಆರ್ಥಿಕ ಕುಸಿತ ಉಂಟಾಗಿದೆ. ಕೋವಿಡ್ ಪೂರ್ವದಲ್ಲಿಯೇ ಹಳಿ ತಪ್ಪಿದ ಆರ್ಥಿಕ ಪರಿಸ್ಥಿತಿ ಕೋವಿಡ್ ನಂತರದಲ್ಲಿ ಮತ್ತಷ್ಟು ಹದಗೆಟ್ಟಿದೆ. ಕೋವಿಡ್ ನಂತರದ ಮೂರು ವರ್ಷಗಳಲ್ಲಿ ಭಾರತದ ವಾರ್ಷಿಕ ಅಭಿವೃದ್ಧಿಯು ಸರಾಸರಿ ಶೇ.3.5ರಷ್ಟಿದೆ. ಕೋವಿಡ್ ಪೂರ್ವದ 2019-2020ರ ಜಿಡಿಪಿ ಸೂಚ್ಯಂಕ ಶೇ. 4.2 ಪ್ರಮಾಣದಲ್ಲಿದ್ದರೆ, ಆ ವರ್ಷದ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಳೆದ ಹನ್ನೊಂದು ವರ್ಷಗಳ ಇತಿಹಾಸದಲ್ಲಿ ಕನಿಷ್ಠ ಶೇ.3.1 ಪ್ರಮಾಣಕ್ಕೆ ತಲುಪಿತ್ತು.
ನಿರುದ್ಯೋಗ
ಯಾವುದೇ ದೇಶದ ಅಭಿವೃದ್ಧಿಯ ಅಳತೆಗೆ ಅಲ್ಲಿನ ಉದ್ಯೋಗ ಮತ್ತು ನಿರುದ್ಯೋಗದ ಪ್ರಮಾಣವು ಮುಖ್ಯ ಮಾನದಂಡವಾಗಿರುತ್ತದೆ. ಕಳೆದ ಒಂಭತ್ತು ವರ್ಷಗಳ ಮೋದಿ ನೇತೃತ್ವದ ಆಡಳಿತದಲ್ಲಿ ಉದ್ಯೋಗ ವಲಯವು ದಾರುಣ ಸ್ಥಿತಿಯಲ್ಲಿದೆ. ವಿಶ್ವ ಬ್ಯಾಂಕ್ ಆರ್ಥಿಕ ತಜ್ಞೆ ಸುಪ್ರಿಯೋ 2011ರ ಜನಗಣತಿಯ ಪ್ರಕಾರ ಭಾರತದೊಳಗಡೆ 45 ಕೋಟಿ ಜನಸಂಖ್ಯೆ ಉದ್ಯೋಗವನ್ನರಸಿ ನಗರ ಮತ್ತು ಪಟ್ಟಣಗಳಿಗೆ ವಲಸೆ ಬಂದರು. ಅದಕ್ಕೂ ಹಿಂದೆ 2001ರಲ್ಲಿ 30 ಕೋಟಿ ಜನಸಂಖ್ಯೆ ವಲಸೆ ಬಂದರು ಎಂದು ಹೇಳುತ್ತಾರೆ. ಇದೇ ಪ್ರಮಾಣವನ್ನು ಆಧರಿಸುವುದಾದರೆ 2018-19ರಲ್ಲಿ ಅಂದಾಜು 50 ಕೋಟಿ ಜನಸಂಖ್ಯೆ ವಲಸೆ ಬಂದಿರುವ ಸಾಧ್ಯತೆಗಳಿವೆ. ಅಸಂಘಟಿತ ವಲಯದಲ್ಲಿ ಸುಮಾರು ಶೇ. 92 ಜನರು ಕೆಲಸ ಮಾಡುತ್ತಿದ್ದಾರೆ. ಇದರ ಅಡಿಯಲ್ಲಿ ಅನೌಪಚಾರಿಕ ಹುದ್ದೆಗಳಲ್ಲಿ (ನೇಮಕಾತಿ ಪತ್ರವಿಲ್ಲ, ಉದ್ಯೋಗ ಭದ್ರತೆಯಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಪಿಎಫ್, ಪೆನ್ಷನ್, ಇಎಸ್‌ಐ ಯೋಜನೆಗಳಿಲ್ಲ) ಶೇ.96ರಷ್ಟು ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್ ನಂತರ ಅವರ ಬದುಕು ಮತ್ತಷ್ಟು ಛಿದ್ರಗೊಂಡಿದೆ. ಅದೇ ಸಂದರ್ಭದಲ್ಲಿ ಭಾರತದ ನಗರಗಳಲ್ಲಿ ಉದ್ಯೋಗದ ಪ್ರಮಾಣ ಶೇ.40.9 ಮತ್ತು ಗ್ರಾಮೀಣ ಭಾಗಗಳಲ್ಲಿ ಶೇ.33 ಪ್ರಮಾಣದಷ್ಟಿತ್ತು. ಕೋವಿಡ್ ಪೂರ್ವದಲ್ಲಿ 2019ರಲ್ಲಿ ನಿರುದ್ಯೋಗದ ಪ್ರಮಾಣ ಶೇ. 12 ಪ್ರಮಾಣದಲ್ಲಿತ್ತು. ಕೋವಿಡ್ ಂತರದ ಲಾಕ್‌ಡೌನ್ ಸಂದರ್ಭದಲ್ಲಿ ನಿರುದ್ಯೋಗದ ಪ್ರಮಾಣ ಮೇ, 2020ರಲ್ಲಿ ಶೇ. 27 ಪ್ರಮಾಣಕ್ಕೇರಿತ್ತು. ಈ ಲಾಕ್‌ಡೌನ್ ಕಾರಣಕ್ಕೆ ಸುಮಾರು 12 ಕೋಟಿ ಉದ್ಯೋಗ ನಷ್ಟವಾಗಿದೆ ಎಂದು ಸಿಎಮ್‌ಐಇ ವರದಿ ಮಾಡಿದೆ. ಸಿಎಂಐಇ ವರದಿಯ ಪ್ರಕಾರ ಪ್ರಸಕ್ತ ನಿರುದ್ಯೋಗದ ಪ್ರಮಾಣ ಶೇ.8.4ರಷ್ಟಿದೆ. ಮುಂದಿನ ಹತ್ತು ವರ್ಷಗಳಲ್ಲಿ ಅಂದಾಜು 20 ಕೋಟಿ ಉದ್ಯೋಗ ಸೃಷ್ಟಿಯಾಗಬೇಕಿದೆ. ಪ್ರತೀ ವರ್ಷ 80-90 ಲಕ್ಷ ಜನರು ಉದ್ಯೋಗ ಮಾರುಕಟ್ಟೆಗೆ ಸೇರಿಕೊಳ್ಳುತ್ತಿದ್ದಾರೆ. ಇವರೆಲ್ಲರನ್ನೂ ನಿರುದ್ಯೋಗಿಗಳೆಂದೇ ಪರಿಗಣಿಸಲಾಗುತ್ತದೆ. 2019ರಲ್ಲಿ ರೈಲ್ವೆ ಇಲಾಖೆಯ 35,000 ಹುದ್ದೆಗಳಿಗೆ 1.25 ಕೋಟಿ ಅಭ್ಯರ್ಥಿಗಳು ಅರ್ಜಿ ಗುಜರಾಯಿಸಿದ್ದರು. ಅಂದರೆ ಪ್ರತೀ ಹುದ್ದೆಗೆ 357 ಆಕಾಂಕ್ಷಿಗಳಿದ್ದರು.
ಕರ್ನಾಟಕ ರಾಜ್ಯದಲ್ಲಿ 2.4 ಲಕ್ಷ ಸರಕಾರಿ ಹುದ್ದೆಗಳು ಖಾಲಿಯಿವೆ. ದೇಶದ 29 ರಾಜ್ಯಗಳಲ್ಲಿ ಅಂದಾಜು 28 ಲಕ್ಷ ಹುದ್ದೆಗಳು ಮತ್ತು ಕೇಂದ್ರ ಸರಕಾರದ 9 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಅಂದಾಜಿಸಲಾಗಿದೆ. ಹಾಗಿದ್ದಲ್ಲಿ ಉದ್ಯೋಗ ಎಲ್ಲಿಂದ ಸೃಷ್ಟಿಯಾಗುತ್ತದೆ? ಪ್ರಭಾವಶಾಲಿಯಾಗಿರುವ ಮೋದಿ ಸಾಹೇಬರು ಆಗಲೇ ಕತೆ ಹೆಣೆಯುತ್ತಿದ್ದಾರೆ. ದುರ್ಬಲರಾದ ನಾವು ವಿಚಾರಗಳನ್ನು ಎಲ್ಲಿಂದ, ಹೇಗೆ ಹೇಳಬೇಕು?
ಆದರೆ ಈ ಅಂಕಿಅಂಶಗಳೂ ಸಹ ಪರಿಪೂರ್ಣವಲ್ಲ. ಮೊದಲನೆಯದಾಗಿ ಈ ಸಮೀಕ್ಷೆ 2011ರ ಜನಗಣತಿಯನ್ನು ಆಧರಿಸಿದೆ. 2021ರ ಜನಗಣತಿ ಇನ್ನೂ ಪ್ರಾರಂಭವಾಗಿಲ್ಲ. ಕಳೆದ 12 ವರ್ಷಗಳಲ್ಲಿ 10 ಕೋಟಿ ಜನಸಂಖ್ಯೆ ಹೆಚ್ಚಾಗಿರುವ ಅಂದಾಜಿದೆ. ಹಾಗಿದ್ದಲ್ಲಿ ಈ ಹತ್ತು ಕೋಟಿ ಜನಸಂಖ್ಯೆಯ ಸ್ಥಿತಿಗತಿಗಳ ಅಧಿಕೃತ ಮಾಹಿತಿ ಲಭ್ಯವಿಲ್ಲ. ಇವರು ನಿರುದ್ಯೋಗದ ಸಮೀಕ್ಷೆಯ ಲೆಕ್ಕಾಚಾರದಲ್ಲಿ ಪರಿಗಣಿಸಲ್ಪಡುವುದಿಲ್ಲ. ಎರಡನೆಯದಾಗಿ ಸಿಎಂಐಇ ಸಂಸ್ಥೆಯು ಸಮೀಕ್ಷೆ ಮಾಡುವ ಸಂದರ್ಭದಲ್ಲಿ ಅದು ಇಡೀ ಊರನ್ನು ಸಮಗ್ರವಾಗಿ ಪರಿಗಣಿಸದೆ ಊರಿನ ಆರಂಭದಲ್ಲಿ ಸಿಗುವ ವ್ಯಕ್ತಿಗಳನ್ನು ಮಾತ್ರ ಸಂದರ್ಶಿಸುತ್ತಾರೆ ಮತ್ತು ಆ ವ್ಯಕ್ತಿ ಅಸಂಘಟಿತ ವಲಯದಲ್ಲಿದ್ದರೆ ಆ ದಿನದ ಉದ್ಯೋಗ ಮಾತ್ರ ಅನ್ವಯವಾಗುತ್ತದೆ. ಮರುದಿನ ಅವರು ಕೆಲಸ ಕಳೆದುಕೊಳ್ಳಬಹುದು. ಒಟ್ಟಾರೆ ನಿರುದ್ಯೋಗದ ಸಮೀಕ್ಷೆಗೆ ಸೂಕ್ತ ಮಾನದಂಡಗಳಿಲ್ಲ.
ಜಿಡಿಪಿಯ ಶೇ.17ರಷ್ಟಿರುವ ಕೃಷಿ ವಲಯದಲ್ಲಿ ಉದ್ಯೋಗ ಸೃಷ್ಟಿಯ ಪ್ರಮಾಣ ಅನಿಶ್ಚತೆಯಿಂದ ಕೂಡಿದೆ. ನಿರಂತರತೆಯನ್ನು ಕಾಯ್ದುಕೊಂಡಿಲ್ಲ. ಇಂದು ಕೃಷಿ ಕೂಲಿ ಕಾರ್ಮಿಕರು ಅಸಂಘಟಿತರಾಗಿದ್ದಾರೆ ಮಾತ್ರವಲ್ಲ, ಅನೌಪಚಾರಿಕ ವೃತ್ತಿಯಲ್ಲಿದ್ದಾರೆ. ಇವರ ಬದುಕು ಕ್ರೂನಿ ಬಂಡವಾಳಶಾಹಿಗಳನ್ನು ಬೆಳೆಸುವ ಮೋದಿಯವರ ಜಿಡಿಪಿಯಲ್ಲಿ ಪರಿಗಣಿತವಾಗುವುದಿಲ್ಲ. ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವಿರುವ ಉತ್ಪಾದನಾ ವಲಯದ ಪ್ರಮಾಣವು ಜಿಡಿಪಿಯ ಶೇ.14ರಷ್ಟಿದೆ. ಈ ವಲಯದ ಶೇ.45ರಷ್ಟು ಪ್ರಮಾಣದಲ್ಲಿರುವ ಎಂಎಸ್‌ಎಂಇ (ಅತಿ ಸಣ್ಣ, ಸಣ್ಣ, ಮಧ್ಯಮ ಗಾತ್ರ) ಉದ್ಯಮಗಳು ಜಿಡಿಪಿಗೆ ಶೇ.30ರಷ್ಟು ಕೊಡುಗೆ ನೀಡುತ್ತವೆ. ಆದರೆ 2019ರ ನಂತರ ಶೇ.33ರಷ್ಟು ಎಂಎಸ್‌ಎಂಇ ಮುಚ್ಚಿ ಹೋಗಿವೆ. ‘ಇಂಡಿಯಾ ಸ್ಪೆಂಡ್’ ಪತ್ರಿಕೆಯಲ್ಲಿ 2017ರ ಎನ್‌ಎಎಸ್ (ರಾಷ್ಟ್ರೀಯ ಅಕೌಂಟ್ ಅಂಕಿಅಂಶಗಳು) ಮತ್ತು 2017-18ರ ಲೇಬರ್ ಸಮೀಕ್ಷೆಯ ಅನುಸಾರ ಶೇ.70 ಪ್ರಮಾಣದ ಜನಸಂಖ್ಯೆ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದಾರೆ. 2015-16ರಲ್ಲಿ ಗ್ರಾಮೀಣ ಭಾಗದ ಸರಾಸರಿ ವಾರ್ಷಿಕ ಆದಾಯ 40,928 ರೂ. (ತಿಂಗಳಿಗೆ 3,410, ದಿನಕ್ಕೆ 110 ರೂ.) ನಗರ ಭಾಗದಲ್ಲಿ ಸರಾಸರಿ ವಾರ್ಷಿಕ ಆದಾಯ 98,435 ರೂ. (ತಿಂಗಳಿಗೆ 8,200, ದಿನಕ್ಕೆ 264 ರೂ.) ಇತ್ತು ಎಂದು ವರದಿಯಾಗಿತ್ತು.