ಹಿಂದುತ್ವದ ಬಗ್ಗೆ ಅಂಬೇಡ್ಕರ್ ಹೇಳಿದ್ದನ್ನು ಒಪ್ಪುತ್ತಾ ಆರೆಸ್ಸೆಸ್ ?
► ಎಲ್ಲರ ಬಗ್ಗೆ ಕಾಳಜಿ ಇದ್ದರೆ ಜಾತಿ ಗಣತಿಯನ್ನು ಏಕೆ ವಿರೋಧಿಸುತ್ತವೆ ಆರೆಸ್ಸೆಸ್, ಬಿಜೆಪಿ ?
Photo: PTI
ಆಗ, ಅಂಬೇಡ್ಕರ್ ವಿರುದ್ಧ ಟೀಕಾ ಪ್ರಹಾರ, ಸ್ಪಷ್ಟ ವಿರೋಧ. ಈಗ, ಅದೇ ಅಂಬೇಡ್ಕರ್ ರನ್ನು ಹಾಡಿ ಹೊಗಳುವ ಭಾಷಣಗಳು. ಇದೇ ಆರೆಸ್ಸೆಸ್ ನ ರಾಜಕೀಯ. ಇತಿಹಾಸವನ್ನು ತನಗೆ ಬೇಕಾದಂತೆ ಬಳಸಿಕೊಳ್ಳುವ ಆರೆಸ್ಸೆಸ್, ಇತ್ತೀಚಿನ ವರ್ಷಗಳಲ್ಲಿ ತೋರಿಸುತ್ತಿರುವ ಅಂಬೇಡ್ಕರ್ ಪ್ರೀತಿ ಅದೇ ಹುನ್ನಾರದ ಒಂದು ಭಾಗವಲ್ಲದೆ ಬೇರೇನೂ ಅಲ್ಲ.
ಈ ದೇಶದ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರನ್ನು ತನಗೆ ಬೇಕಾದಾಗೆಲ್ಲ ಹಾಡಿಹೊಗಳುವುದನ್ನು ಅದು ಈ ಕೆಲವು ವರ್ಷಗಳಲ್ಲಿ ಅಭ್ಯಾಸ ಮಾಡಿಕೊಂಡಿದೆ. 2014ರಲ್ಲಿ ಬಿಜೆಪಿ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಂಬೇಡ್ಕರ್ ಅವರನ್ನು ರಾಜಕೀಯವಾಗಿ ಹೈಜಾಕ್ ಮಾಡುವ ಯತ್ನವೊಂದನ್ನು ಅದು ನಡೆಸಿಕೊಂಡೇ ಬಂದಿದೆ.
ಈ ಸಲ ಮತ್ತೆ ವಿಜಯದಶಮಿ ಭಾಷಣದ ವೇಳೆಯೂ ಸಂಘಪರಿವಾರದ ಮುಖ್ಯಸ್ಥ ಮೋಹನ್ ಭಾಗ್ವತ್ ಅದನ್ನೇ ಮಾಡಿದ್ದಾರೆ. ಅಂಬೇಡ್ಕರ್ ಅವರನ್ನು ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಮೋಹನ್ ಭಾಗವತ್, ಸಂವಿಧಾನ ರಚನಾ ಸಭೆಯನ್ನುದ್ದೇಶಿಸಿ ಅಂಬೇಡ್ಕರ್ ಮಾಡಿದ ಕಡೇ ಎರಡು ಭಾಷಣಗಳನ್ನು ಎಲ್ಲರೂ ಓದುವಂತೆ ಹೇಳಿದ್ದಾರೆ.
ಸಂಘ ಪರಿವಾರ ಹುಟ್ಟಿದಂದಿನಿಂದಲೂ ಅಂಬೇಡ್ಕರ್ ಅವರನ್ನು ಜರೆಯುತ್ತಲೇ ಬಂದಿರುವ ಸಂಘಟನೆ. ಮನುಸ್ಮೃತಿಯನ್ನು ಆರಾಧಿಸುತ್ತಿರುವ ಆರೆಸ್ಸೆಸ್, ಮನುಸ್ಮೃತಿಯನ್ನು ಸುಟ್ಟ ಡಾ.ಅಂಬೇಡ್ಕರ್ ಅವರನ್ನು ಈಗ ತನ್ನ ಐಡಿಯಾಲಜಿಯಲ್ಲಿ ಸೇರಿಸಿಕೊಳ್ಳಲು ಏಕೆ ಯತ್ನ ನಡೆಸಿದೆ? . ಹಿಂದುವಾಗಿ ಹುಟ್ಟಿದ್ದೇನೆ, ಆದರೆ ಹಿಂದುವಾಗಿ ಸಾಯಲಾರೆ ಎಂದು ಬೌದ್ಧ ಧರ್ಮವನ್ನು ಸ್ವೀಕರಿಸಿದ್ದ ಅಂಬೇಡ್ಕರ್ ಅವರನ್ನು ಏಕೆ ಹೀಗೆ ತನ್ನ ಮಾತುಗಳಲ್ಲಿ ಮೆಚ್ಚುಗೆಯಿಂದ ಪ್ರತಿಪಾದಿಸುತ್ತದೆ?
ಆರೆಸ್ಸೆಸ್ ನಡೆಸಿರುವ ಇಂಥ ಯತ್ನಗಳ ಹಿಂದಿನ ಹುನ್ನಾರ ಅರ್ಥವಾಗದ್ದೇನೂ ಅಲ್ಲ. ಅದು ಅಂಬೇಡ್ಕರ್ ಅವರನ್ನು ಹೊಗಳುತ್ತಿದೆಯೆಂದ ಮಾತ್ರಕ್ಕೆ ಅದರ ಅಂತರಂಗ, ನಿಲುವುಗಳು ಬದಲಾಗಿವೆ ಅಥವಾ ಬದಲಾಗುತ್ತಿವೆ ಎಂದೇನೂ ಅಲ್ಲ. ಬದಲಾಗಿ, ಅಂಬೇಡ್ಕರ್ ಪ್ರೀತಿಯನ್ನು ಅದು ತನ್ನನ್ನು ವಿರೋಧಿಸುವವರನ್ನು ಮರುಳು ಮಾಡುವುದಕ್ಕೆಂದೇ ಮುಂದೆ ಮಾಡುತ್ತಿದೆಯೆಂಬುದು, ಅದು ಮರೆಮಾಚಲು ಯತ್ನಿಸಿದರೂ ಬಯಲಾಗುತ್ತದೆ. ಈ ನಡೆಯನ್ನು ಅದು ಒಂದು ವ್ಯವಸ್ಥಿತ ತಂತ್ರವಾಗಿ ಬಳಸುತ್ತಿದೆ ಎಂಬುದೂ ಸ್ಪಷ್ಟ.
ಸ್ವಲ್ಪ ಇತಿಹಾಸವನ್ನು ನೆನಪಿಸಿಕೊಂಡರೆ, ಇದೇ ಆರೆಸ್ಸೆಸ್ ಹೇಗೆಲ್ಲ ಅಂಬೇಡ್ಕರ್ ವಿರುದ್ಧವಾಗಿ ಮಾತನಾಡಿತ್ತು ಮತ್ತು ಅವರು ರಚಿಸಿದ ಸಂವಿಧಾನದ ಬಗ್ಗೆಯೂ ಕಿಡಿ ಕಾರಿತ್ತು ಎಂಬುದು ಗೊತ್ತಾಗುತ್ತದೆ. "ಅಂಬೇಡ್ಕರ್ ರಚಿಸಿದ ಸಂವಿಧಾನದಲ್ಲಿ ಭಾರತೀಯತೆಯೇ ಇಲ್ಲ" ಎಂದು, ಆರೆಸ್ಸೆಸ್ ಮುಖವಾಣಿಯಾದ ಆರ್ಗನೈಸರ್ 1949ರ ನವೆಂಬರ್ 30ರ ಸಂಚಿಕೆಯ ಸಂಪಾದಕೀಯದಲ್ಲಿ ಜರೆಯಲಾಗಿತ್ತು.
ಈ ವಿಚಾರದ ಬಗ್ಗೆ ಬರೆದಿರುವ ಖ್ಯಾತ ಇತಿಹಾಸಕಾರ ರಾಮಚಂದ್ರ ಗುಹಾ, ಪ್ರಾಚೀನ ಭಾರತದ ಯಾವ ಕುರುಹುಗಳೂ ಸಂವಿಧಾನದಲ್ಲಿ ಇಲ್ಲವೆಂದು ಆರೆಸ್ಸೆಸ್ ಅಪಸ್ವರ ತೆಗೆದಿತ್ತು ಎಂದು ಉಲ್ಲೇಖಿಸಿದ್ದಾರೆ. ಹಿಂದೂ ಮಹಿಳೆಯರು ಅನ್ಯ ಜಾತಿಯವರನ್ನು ಮದುವೆಯಾಗಲು, ಪತಿಗೆ ವಿಚ್ಛೇದನ ನೀಡಲು ಮತ್ತು ಆಸ್ತಿಯನ್ನು ಪಿತ್ರಾರ್ಜಿತವಾಗಿ ಪಡೆಯಲು ಹಕ್ಕನ್ನು ನೀಡುವ ಹಿಂದೂ ಕೋಡ್ ಬಗ್ಗೆಯಂತೂ ಸಂಘ ತೀವ್ರ ವಿರೋಧ ತೋರಿಸಿತ್ತು. 1949ರಲ್ಲಿ ಆರ್ಎಸ್ಎಸ್ ಆ ಮಸೂದೆಯನ್ನು ತಡೆಯಲು ಭಾರತದಾದ್ಯಂತ ನೂರಾರು ಸಭೆಗಳು ಮತ್ತು ಪ್ರತಿಭಟನೆಗಳನ್ನು ಆಯೋಜಿಸಿತ್ತು. ಅಲ್ಲಿ ಸಾಧುಗಳು ಮತ್ತು ಸಂತರು ಮಾತನಾಡಲು ಬಂದಿದ್ದರು ಎಂದು ಗುಹಾ ಬರೆದಿದ್ದಾರೆ.
ಇಷ್ಟೆಲ್ಲ ಮಾಡಿದ್ದ ಆರೆಸ್ಸೆಸ್ ನಿಂದ ಈಗ ರಾಜಕೀಯ ಲಾಭಕ್ಕೋಸ್ಕರ ಅಂಬೇಡ್ಕರ್ ಗುಣಗಾನ ನಿರಂತರವಾಗಿ ಸಾಗಿದೆ. ಆಗ ಹಾಗಿದ್ದ ಸಂಘ ಈಗ ಏಕೆ ಹೀಗೆ? ಅದರ ಹುನ್ನಾರ ಏನು?. ಅಂಬೇಡ್ಕರ್ ಅವರನ್ನು ಈಗ ಪ್ರಶಂಸಿಸುವ ಆರೆಸ್ಸೆಸ್, ಅಂಬೇಡ್ಕರ್ ಹಿಂದೂ ಧರ್ಮ ಬಿಟ್ಟು ಬೌದ್ಧ ಧರ್ಮ ಸ್ವೀಕರಿಸುವಾಗ ಹಿಂದುತ್ವದ ಬಗ್ಗೆ ಏನು ಹೇಳಿದ್ದರು ಎಂಬುದನ್ನು ನೆನಪಿಟ್ಟುಕೊಂಡಿದೆಯೆ?.
ಎಲ್ಲರಿಗೂ ಗೊತ್ತೇ ಇರುವ ಹಾಗೆ ಆರೆಸ್ಸೆಸ್ ಹುಟ್ಟಿದ್ದೇ ಹಿಂದುತ್ವ ಎಂಬ ಪರಿಕಲ್ಪನೆಯನ್ನು ಇಟ್ಟುಕೊಂಡು. ಅದು ದೇಶವನ್ನು ಕೂಡಿಸುವುದಕ್ಕಾಗಿ ಹುಟ್ಟಿದ್ದಲ್ಲ. ಮೇಲ್ಜಾತಿಗಳ ಹಿತಾಸಕ್ತಿ ಕಾಪಾಡುವುದು ಅದರ ಧ್ಯೇಯ. ಉಳಿದವರನ್ನು ಬೇರೆಯವರೆಂದೇ ನೋಡುವುದು ಆರೆಸ್ಸೆಸ್ ಗುಣ.
1925ರಲ್ಲಿ ರಚನೆಯಾದಾಗಿನಿಂದಲೂ ಆರ್ಎಸ್ಎಸ್ ನಾಯಕತ್ವ ಇರುವುದು ಮೇಲ್ಜಾತಿಗಳು ಮತ್ತು ನಿರ್ದಿಷ್ಟವಾಗಿ ಬ್ರಾಹ್ಮಣರ ಕೈಯಲ್ಲಿಯೇ ಎಂಬ ಟೀಕೆಗಳಿರುವುದೂ ಗೊತ್ತೇ ಇರುವ ವಿಚಾರ. ಆದರೆ ಹಿಂದೂಗಳನ್ನು ಒಗ್ಗೂಡಿಸುವ ಮಾತಾಡುವ ಆರೆಸ್ಸೆಸ್ ಗೆ ಹಿನ್ನಡೆ ತಂದ ಎರಡು ಘಟನೆಗಳ ಬಗ್ಗೆ ಗಮನಿಸಬೇಕು.
ಒಂದು, ಅಂಬೇಡ್ಕರ್ ನೇತೃತ್ವದಲ್ಲಿ ದಲಿತರು ದೊಡ್ಡ ಪ್ರಮಾಣದಲ್ಲಿ ಬೌದ್ಧ ಧರ್ಮ ಸ್ವೀಕರಿಸಿದ್ದು.
1956ರ ವಿಜಯದಶಮಿ ದಿನ ನಾಗಪುರದ ರೇಶಂಬಾಗ್ನಲ್ಲಿ ಆರ್ಎಸ್ಎಸ್ ಸರಸಂಘಚಾಲಕ ಸ್ವಯಂಸೇವಕರನ್ನು ಉದ್ದೇಶಿಸಿ ಭಾಷಣ ಮಾಡುತ್ತಿದ್ದ ಹೊತ್ತಲ್ಲಿಯೇ ಅದೇ ದಿನ ಅದೇ ನಾಗಪುರದ ಇನ್ನೊಂದು ಭಾಗದಲ್ಲಿರುವ ದೀಕ್ಷಾಭೂಮಿಯಲ್ಲಿ ಅಂಬೇಡ್ಕರ್ ಸುಮಾರು ಐದು ಲಕ್ಷ ಅನುಯಾಯಿಗಳೊಂದಿಗೆ ಬೌದ್ಧಧರ್ಮವನ್ನು ಸ್ವೀಕರಿಸಿದ್ದರು.
ಮತ್ತೊಂದು 1981ರ ಮೀನಾಕ್ಷಿಪುರಂ ಘಟನೆ. ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ನೂರಾರು ಕೆಳಜಾತಿ ಹಿಂದೂಗಳು ಇಸ್ಲಾಂ ಧರ್ಮ ಸ್ವೀಕರಿಸಿದಾಗ ಆರೆಸ್ಸೆಸ್ ದಿಗಿಲುಬಿದ್ದು ಹೋಗಿತ್ತು. ಇದರಿಂದ ತತ್ತರಗೊಂಡ ಆರೆಸ್ಸೆಸ್ , ಅಂಬೇಡ್ಕರ್ ಗುಣಗಾನ ಮತ್ತು ದಲಿತರ ಓಲೈಕೆಯನ್ನು ಶುರು ಮಾಡಿತ್ತು. ದೇಶಾದ್ಯಂತ ಹಿಂದೂ ಸಮಾವೇಶಗಳನ್ನು ಆಯೋಜಿಸಲು ಪ್ರಾರಂಭಿಸಿದ ಆರ್ಎಸ್ಎಸ್, 1982ರಲ್ಲಿ ಬೆಂಗಳೂರಿನಲ್ಲಿ ಅಂಥ ಒಂದು ಸಮಾವೇಶವನ್ನು ನಡೆಸಿತು,
1983ರ ಏಪ್ರಿಲ್ 14ರಂದು ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಮತ್ತು ಹೆಡ್ಗೆವಾರ್ ಅವರ ಜನ್ಮದಿನವನ್ನು ಆಚರಿಸಿತು. 45 ದಿನಗಳ ಫುಲೆ-ಅಂಬೇಡ್ಕರ್ ಯಾತ್ರೆಯನ್ನು ಮಹಾರಾಷ್ಟ್ರದುದ್ದಕ್ಕೂ ನಡೆಸಿತು. 1990ರಲ್ಲಿ ಆರ್ಎಸ್ಎಸ್, ಅಂಬೇಡ್ಕರ್ ಮತ್ತು ದಲಿತ ಸುಧಾರಕ ಜ್ಯೋತಿಬಾ ಫುಲೆ ಅವರ ಶತಮಾನೋತ್ಸವ ವರ್ಷವನ್ನು ಆಚರಿಸಿತು. ಅದು ಕೂಡ ಅದರ ಮತ್ತೊಂದು ತಂತ್ರವೇ ಆಗಿತ್ತು.
2015ರಲ್ಲಿನ ವಿಜಯದಶಮಿ ಭಾಷಣದಲ್ಲಿ ಇದೇ ಭಾಗವತ್ ಎಲ್ಲಾ ಹಿಂದೂಗಳು ಒಂದಾಗಿರಬೇಕು, ತಾರತಮ್ಯವನ್ನು ಸಹಿಸಲಾಗದು ಎಂದರು. ಮಾರನೇ ವರ್ಷ ಸಂಘದ ಮುಖವಾಣಿ ಆರ್ಗನೈಸರ್ ಮುಖಪುಟದಲ್ಲಿ ಅಂಬೇಡ್ಕರ್ ಭಾವಚಿತ್ರ ಹಾಕಲಾಯಿತಲ್ಲದೆ, ಅವರನ್ನು ಮತ್ತು ಅವರ ಕೃತಿಗಳನ್ನು ಹಾಡಿಹೊಗಳುವ ಲೇಖನಗಳ ಗುಚ್ಚವನ್ನು ಪ್ರಕಟಿಸಲಾಯಿತು.
ಅನಂತರವೂ ಕಾಲಕಾಲಕ್ಕೆ ಅಂಬೇಡ್ಕರ್ ಅವರನ್ನು ಹೊಗಳುತ್ತಾ ಬರಲಾಗಿದೆ. ಭಾಗವತ್ ಮಾತ್ರವಲ್ಲ ಪ್ರಧಾನಿ ಮೋದಿ ಕೂಡ ಅಂಬೇಡ್ಕರ್ ಅವರನ್ನು ತಮ್ಮ ಸರ್ಕಾರ ಗೌರವಿಸುತ್ತಿದೆ ಎಂದು ಬಿಂಬಿಸುವ ಪ್ರಯತ್ನಗಳನ್ನು ಮಾಡುತ್ತ ಬಂದಿದ್ದಾರೆ. ಅಂಬೇಡ್ಕರ್ ಅವರನ್ನು ರಾಜಕೀಯ ಅಸ್ಪೃಶ್ಯತೆಯಿಂದ ಬಿಡುಗಡೆಗೊಳಿಸಬೇಕಾಗಿದೆ, ಅಂಬೇಡ್ಕರ್ ಅವರಿಗೆ ಆದ ಅನ್ಯಾಯವನ್ನು ನಾವು ಸರಿಪಡಿಸುತ್ತೇವೆ ಎಂದು ಮೋದಿ ಭಾಷಣದಲ್ಲಿ ಹೇಳಿರುವುದಿದೆ.
ಆದರೆ, ಇದೆಲ್ಲದರ ಮೂಲಕ, ಅಂಬೇಡ್ಕರ್ ಕುರಿತ ಪ್ರೀತಿ ಮತ್ತು ಅಭಿಮಾನದ ಮಾತಾಡುವ ಮೂಲಕ ಇವರು ಏನನ್ನು ಮಾಡಲು ಬಯಸಿದ್ದಾರೆ?ದಲಿತರನ್ನು ಹಿಡಿದಿಟ್ಟುಕೊಳ್ಳುವುದು, ಅವರ ಮತಬ್ಯಾಂಕ್ ಗೆ ಲಗ್ಗೆಯಿಡುವುದು ಮಾತ್ರವೇ ಇವರ ಉದ್ದೇಶ. ಕೆಳವರ್ಗದವರ ಬೆಂಬಲವಿಲ್ಲದೆ ರಾಜಕೀಯ ಅಧಿಕಾರ ಸಾಧ್ಯವಿಲ್ಲ ಎಂಬುದು ಇವರಿಗೆ ಅರ್ಥವಾಗಿ ಹೋಗಿದೆ. ಆದರೆ, ಅಂಬೇಡ್ಕರ್ ಅವರೆಂದೂ ಇಂಥ ಮತೀಯವಾದಿಗಳಿಗೆ ಮಣಿದವರಾಗಿರಲಿಲ್ಲ ಮತ್ತು ಕಟುವಾಗಿಯೇ ಹಿಂದುತ್ವವನ್ನು ಟೀಕಿಸುತ್ತಲೇ ಬಂದಿದ್ದರು. ಅವರು ಮತೀಯವಾದಿ ರಾಜಕಾರಣವನ್ನೂ ವಿರೋಧಿಸಿದವರಾಗಿದ್ದರು.
"ಮೇಲ್ನೋಟಕ್ಕೆ ಆಶ್ಚರ್ಯವೆನಿಸಿದರೂ ಸಾವರ್ಕರ್ ಮತ್ತು ಜಿನ್ನಾ ಒಂದು ರಾಷ್ಟ್ರದ ಬದಲು ಎರಡು ರಾಷ್ಟ್ರ ತತ್ವವನ್ನು ವಿರೋಧಿಸುವುದರ ಬದಲು ಇಬ್ಬರೂ ಅದರ ಕುರಿತಾಗಿ ಸಮ್ಮತದಿಂದಿದ್ದಾರೆ. ಅಲ್ಲದೆ ಒಂದು ಮುಸ್ಲಿಂ ರಾಷ್ಟ್ರ ಮತ್ತು ಇನ್ನೊಂದು ಹಿಂದೂ ರಾಷ್ಟ್ರ ಎಂದು ಒಪ್ಪಿಕೊಂಡಿದ್ದಾರೆ" ಎಂದಿದ್ದರು ಅಂಬೇಡ್ಕರ್.
"ಒಂದು ವೇಳೆ ಹಿಂದೂ ರಾಜ್ ಎನ್ನುವುದು ಜಾರಿಗೊಂಡರೆ, ನಿಜಕ್ಕೂ ಅದು ಈ ದೇಶದ ಬಲು ದೊಡ್ಡ ದುರ್ಘಟನೆ. ಇದರಲ್ಲಿ ಸಂಶಯವಿಲ್ಲ. ಹಿಂದೂಗಳು ಏನೇ ಹೇಳಿಕೊಂಡರೂ ಸ್ವಾತಂತ್ರ್ಯ, ಸಮಾನತೆಗೆ ಹಿಂದುತ್ವ ಒಂದು ವಿಪತ್ತು. ಈ ಹಿನ್ನೆಲೆಯಲ್ಲಿ ಇದು ಪ್ರಜಾಪ್ರಭುತ್ವದಲ್ಲಿ ಸರಿಯಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿಯೇ, ಹಿಂದೂ ರಾಜ್ ಅನ್ನು ನಾವು ತಡೆಯಬೇಕಾಗಿದೆ" ಎಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು.
ಇನ್ನು, ಹಿಂದೂ ಧರ್ಮದ ವಿಚಾರದಲ್ಲಿಯೂ ಅಂಬೇಡ್ಕರ್ ಸ್ಪಷ್ಟವಾದ ಮಾತುಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹೇಳಿದ್ದರು.
"ಮೇಲ್ಜಾತಿ ಹಿಂದೂಗಳು ಹಿಂದುತ್ವದ ಹೆಸರಿನಲ್ಲಿ ಸ್ವತಃ ಹಿಂದೂಗಳನ್ನೇ ನಾಶ ಮಾಡುವಂಥ ವಿಚಿತ್ರ ಲಕ್ಷಣಗಳನ್ನು ಹೊಂದಿದ್ದಾರೆ."
"ಸಂಪತ್ತು ಮತ್ತು ಶಿಕ್ಷಣದಲ್ಲಿ ಏಕಸ್ವಾಮ್ಯತೆಯನ್ನು ಸಾಧಿಸಿದ ಈ ಮೇಲ್ಜಾತಿ ಹಿಂದೂಗಳಿಗೆ ಅದನ್ನು ಮುಂದುವರೆಸಿಕೊಂಡು ಹೋಗುವುದೇ ಮುಖ್ಯ ಗುರಿ."
"ತಮ್ಮ ಈ ಸ್ವಾರ್ಥದ ಗುಣದಿಂದಾಗಿ ತಳ ಸಮುದಾಯಗಳನ್ನು ಶಿಕ್ಷಣ ಮತ್ತು ಆರ್ಥಿಕ ಸುಭದ್ರತೆಯಂದ ವಂಚಿತರನ್ನಾಗಿಸಿದ್ದಾರೆ."
"ತಳಸಮುದಾಯಗಳ ವಿಚಾರದಲ್ಲಿ ತೋರಿಸುವ ಪ್ರತ್ಯೇಕತೆ ಮತ್ತು ತಾರತಮ್ಯ ಭಾವನೆಯನ್ನೇ ಈ ಮೇಲ್ಜಾತಿ ಹಿಂದೂಗಳು ಮುಸ್ಲಿಂ ಸಮುದಾಯದ ವಿಚಾರದಲ್ಲಿಯೂ ತೋರಿಸುತ್ತಿದ್ದಾರೆ. ಇವರು ಮುಸ್ಲಿಂರನ್ನು ಸಹ ಶಿಕ್ಷಣ ಮತ್ತು ಸಂಪತ್ತಿನಿಂದ ದೂರವಿಡಲು ಬಯಸುತ್ತಿದ್ದಾರೆ."
ಇಷ್ಟು ಸ್ಪಷ್ಟ ಮಾತುಗಳಲ್ಲಿ ಹಿಂದುತ್ವವನ್ನೂ, ಮೇಲ್ಜಾತಿಯವರ ಹುನ್ನಾರವನ್ನೂ ಖಂಡಿಸಿದ್ದ ಅಂಬೇಡ್ಕರ್ ಅವರನ್ನು ಈಗ ಆರೆಸ್ಸೆಸ್ ರಾಜಕೀಯವಾಗಿ ಬಳಸಲು ಹೊರಟಿದೆ. ಅಂಬೇಡ್ಕರ್ ತತ್ವಗಳನ್ನು ಒಳಗೊಳ್ಳುತ್ತಿರುವವರ ಹಾಗೆ ತೋರಿಸಿಕೊಳ್ಳುವ ಇವರ ಅನುನಯದ ಆಟದಲ್ಲಿ, ಆಂತರಿಕವಾಗಿ ಮತ್ತೊಮ್ಮೆ ಈ ದೇಶದ ದಮನಿತರನ್ನು ನಂಬಿಸಿ ವಂಚಿಸುವ ಹುನ್ನಾರವೇ ಇದೆಯಲ್ಲವೆ ಎಂಬ ಅನುಮಾನ ಮೂಡುವುದು ಸಹಜ.
ಯಾಕೆಂದರೆ ಇಂದು ಸಂಘಪರಿವಾರದ ಗುಂಪಿನ ಬಿಜೆಪಿ ಮಾಡುತ್ತಿರುವುದು ಇದೇ ಬಗೆಯ ರಾಜಕಾರಣ. ಅಂಬೇಡ್ಕರ್ ಬಗ್ಗೆ, ಕೆಳಜಾತಿ ಹಿಂದೂಗಳ ಬಗ್ಗೆ ಇಷ್ಟೊಂದು ಕಾಳಜಿ ಆರೆಸ್ಸೆಸ್ ಹಾಗು ಬಿಜೆಪಿಗೆ ಇದ್ದರೆ , ನರೇಂದ್ರ ಮೋದಿ ಸರಕಾರದ 90 ಕಾರ್ಯದರ್ಶಿಗಳಲ್ಲಿ ಕೇವಲ ಮೂವರು ಮಾತ್ರ ಹಿಂದುಳಿದ ವರ್ಗದವರು ಇರೋದು ಯಾಕೆ ?.
ಈ ದೇಶದ ದಲಿತರು, ಹಿಂದುಳಿದ ವರ್ಗಗಳ ಬಗ್ಗೆ ಆರೆಸ್ಸೆಸ್ ಹಾಗು ಬಿಜೆಪಿಗೆ ನಿಜವಾಗಿಯೂ ಪ್ರೀತಿ ಇದ್ದರೆ ಜಾತಿ ಗಣತಿ ನಡೆಸಿ ಅದರ ವಿವರ ಬಹಿರಂಗಪಡಿಸಿ ಜನಸಂಖ್ಯೆಗೆ ಅನುಗುಣವಾಗಿ ಪ್ರಾತಿನಿಧ್ಯ ಕೊಡುವುದಕ್ಕೆ ಇವರೇಕೆ ವಿರೋಧಿಸುತ್ತಿದ್ದಾರೆ ?. ವೈದಿಕತೆಯನ್ನು ಮತ್ತದರ ಹುನ್ನಾರಗಳನ್ನು ಹಿಮ್ಮೆಟ್ಟಿಸಲು ಉದ್ದಕ್ಕೂ ಹೋರಾಡಿದ್ದ, ತಮ್ಮ ಬರಹ ಮತ್ತು ಮಾತುಗಳಲ್ಲಿ ಅಂಥ ಹುನ್ನಾರಗಳನ್ನು ಬಿಡಿಸಿಟ್ಟಿದ್ದ, ವೈದಿಕಶಾಹಿಯ ಹಿಡಿತದಿಂದ ತಮ್ಮ ಸಮುದಾಯವನ್ನು ಮಾತ್ರವಲ್ಲ ಇಡೀ ಭಾರತವನ್ನು ಬಿಡುಗಡೆಗೊಳಿಸಲು ಇಚ್ಚಿಸಿದ್ದ, ವೈದಿಕತೆಯ ಸಂಪೂರ್ಣ ನಾಶವನ್ನು ಬಯಸಿದ್ದ ಅಂಬೇಡ್ಕರ್ ಅವರನ್ನೇ ಇದ್ದಕ್ಕಿದ್ದಂತೆ ಕೊಂಡಾಡಲು ಶುರು ಮಾಡಿರುವ ಆರೆಸ್ಸೆಸ್ ತಂತ್ರದ ಹಿಂದೆ ಇರುವುದು ಕೂಡ ಇದೇ ಕುತಂತ್ರ ರಾಜಕಾರಣ.
ಹಾಗಾಗಿ, ಈಗ ಆರೆಸ್ಸೆಸ್ ತೋರುತ್ತಿರುವ ಅಂಬೇಡ್ಕರ್ ಪ್ರೀತಿ, ಅದು ಮಾಡುತ್ತಿರುವ ಅಂಬೇಡ್ಕರ್ ಗುಣಗಾನ ಇವಾವುದೂ ಅಂಬೇಡ್ಕರ್ ಕುರಿತ ನಿಜವಾದ, ಪ್ರಾಮಾಣಿಕ ಗೌರವವಲ್ಲ.ಬದಲಾಗಿ, ಇದು ಯಾರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪ್ರಗತಿಯನ್ನು ಅಂಬೇಡ್ಕರ್ ಬಯಸಿದ್ದರೊ, ಆ ಸಮುದಾಯದ ವಿರುದ್ಧವೇ ಅಂಬೇಡ್ಕರ್ ಅವರ ಬಗೆಗಿನ ಪ್ರೀತಿ ಮತ್ತು ಗುಣಗಾನವನ್ನು ಅಸ್ತ್ರವಾಗಿ ಬಳಸುವ ಧೂರ್ತತನ ಮಾತ್ರ.