ಆರೆಸ್ಸೆಸ್ ಮತ್ತು ವರ್ಣಾಶ್ರಮ -ಒಂದು ಜಿಜ್ಞಾಸೆ
Photo: PTI
ಪುನಃ ಆರೆಸ್ಸೆಸ್ ಸುದ್ದಿಯಲ್ಲಿದೆ. ನಿಯಮಿತವಾಗಿ ಈ ಸಂಘಟನೆ ಸಾರ್ವಜನಿಕ ವಲಯದಲ್ಲಿ ಸುದ್ದಿಯಲ್ಲಿರುವುದು ಹೊಸದೇನಲ್ಲ, ಬದಲಾಗಿ ತನ್ನ ಅಸ್ತಿತ್ವದ ಆರಂಭದಿಂದಲೂ, ಇದಕ್ಕೆ ಬ್ರಿಟಿಷ್ ನಂಟಿತ್ತು ಎಂಬ ಕೂಗಿನಿಂದ ನಿನ್ನೆ ಮೊನ್ನೆಯ ‘ದಲಿತರಿಗೆ ತನ್ನ ಕಚೇರಿಯೊಳಗೆ ಬಿಡುತ್ತಿಲ್ಲ’ ಎಂಬ ವಿದ್ಯಮಾನದ ತನಕ ಬಹುರೂಪಿಯಾಗಿ ಇಂತಹ ಹಲವು ವಿಚಾರಗಳ ಮೂಲಕ ಸತತ ಸುದ್ದಿಯಲ್ಲಿದ್ದೇ ಈ ಹಂತಕ್ಕೆ ಬೆಳೆದು ಶತಮಾನದ ಹೊಸ್ತಿಲಲ್ಲಿದೆ ಆರೆಸ್ಸೆಸ್. ಈ ಸಂಘಟನೆ ಇಂದು ದೇಶದಲ್ಲಿ ದುರದೃಷ್ಟವಶಾತ್ ಒಂದು ಪರ್ಯಾಯ ಅಥವಾ ನೆರಳಿನ ರಾಜಕೀಯ ವ್ಯವಸ್ಥೆ ಆಗಿರುವಾಗ ಇದೊಂದು ನಾಗರಿಕರು ಭಾರೀ ಗಂಭೀರವಾಗಿ ಪರಿಗಣಿಸಬೇಕಾದ ವಿಚಾರ.
ನಮ್ಮ ದೇಶದ ಉದ್ದಗಲಕ್ಕೂ ಹರಡಿರುವ ನೂರಾರು ಧಾರ್ಮಿಕ ಆಧಾರದ ಸಂಘಟನೆಗಳಲ್ಲಿ ಇದು ಸಹ ಒಂದು. ಬಹುಶಃ ನಮ್ಮ ಸಂವಿಧಾನ ಕೊಟ್ಟ ಅಪರಿಮಿತ ಶಕ್ತಿಯೇ ಇಂತಹ ಧಾರ್ಮಿಕ ಸಂಘಟನೆಗಳ ಬೆಳವಣಿಗೆಗೆ ಕಾರಣ. ಅದು ಯಾವುದೇ ಇರಲಿ ಧಾರ್ಮಿಕ ಅಥವಾ ಸಾಮಾಜಿಕವಾಗಿ ತನ್ನೊಳಗಿನ ಭದ್ರತೆ ಮತ್ತು ಭವಿಷ್ಯಕ್ಕಾಗಿ ಯಾರು ಸಹ ಸೂಕ್ತ ಸಂಘಟನೆಗಳನ್ನು ಹೊಂದಿರುವುದು ತೀರಾ ತಪ್ಪೇನಲ್ಲ. ಆದರೆ ಇಂತಹ ಸಂಘಟನೆಗಳು ಸಂಕುಚಿತ ಮನೋಭಾವದಿಂದ ಈ ರೀತಿ ಮನುಕುಲವನ್ನೇ ಅವಮಾನಿಸುವ ಅಥವಾ ಧಾರ್ಮಿಕ ಶ್ರೇಷ್ಠತೆಯ ವ್ಯಸನದ ಯಾವುದೇ ರೀತಿಯ ದೇಶದ್ರೋಹಿ ಭಯೋತ್ಪಾದಕ ಚಟುವಟಿಕೆಗಳಿಗೆ ಪ್ರೇರೇಪಿಸುವ ಹಂತಕ್ಕೆ ಬಂದು ನಿಂತರೆ ಮಾತ್ರ ಅದು ಅತ್ಯಂತ ಅಪಾಯಕಾರಿ.
ತನ್ನ ಬೆಳವಣಿಗೆಯಲ್ಲಿ ಶಿಸ್ತಿನ ಪರಿಪಾಠವನ್ನು ಬಂಡವಾಳವನ್ನಾಗಿಸಿ ಇಷ್ಟು ಬೃಹತ್ ಆಗಿ ಬೆಳೆದ ಆರೆಸ್ಸೆಸ್ ಬಹಳ ಸ್ಪಷ್ಟವಾಗಿ ಬ್ರಾಹ್ಮಣ ಪ್ರಿಯ ಸಂಘಟನೆ ಎಂಬುದು ಅದರ ಮೂಲದಿಂದ ಇಂದಿನವರೆಗೂ ಶತಸಿದ್ಧವಾದ ಮಾತು. ಆರೆಸ್ಸೆಸ್ ನ ಆಡಳಿತ ಮತ್ತು ಸೌಲಭ್ಯಗಳ ಬಹುತೇಕ ಶೇ.ತೊಂಭತ್ತಕ್ಕೂ ಅಧಿಕ ಫಲಾನುಭವಿಗಳು, ಹೆಸರಿಗಷ್ಟೇ ‘ನಾವು ಹಿಂದೂ- ಒಂದು’ ಎಂಬ ಘೋಷ ವಾಕ್ಯದ ನಡುವೆ ವಿರಾಜಮಾನರಾಗಿರುವ ನಿರ್ದಿಷ್ಟ ಬ್ರಾಹ್ಮಣ ವರ್ಗ ಮಾತ್ರ. ಭಾರತದ ವರ್ಣಾಶ್ರಮ ವ್ಯವಸ್ಥೆಯೇ, ನಮ್ಮ ಗಟ್ಟಿ ಸಂವಿಧಾನದ ನಡುವೆಯೂ ಅನೇಕ ಸಮಸ್ಯೆಗಳನ್ನು ಎಡೆಬಿಡದೆ ತಂದೊಡ್ಡುತ್ತಿರುವ ಆಧುನಿಕ ತಂತ್ರಜ್ಞಾನದ ಈ ಸಂದರ್ಭದಲ್ಲಿ ಸಹ ಇದಕ್ಕೆ ಪೂರಕವಾಗಿ ಆರೆಸ್ಸೆಸ್ ಇನ್ನೂ ಸಹ ಕಾರ್ಯಚರಿಸುತ್ತಿರುವ ಫಲವೇ... ಬಹುಶಃ ದಲಿತರು ಅದರ ಹೊಸ್ತಿಲನ್ನು ದಾಟಲಾಗದಿರುವ ಕಾರಣ.
ಇತ್ತೀಚಿನ ದಶಕಗಳಲ್ಲಿ ಆರೆಸ್ಸೆಸ್ ಮನಸ್ಥಿತಿ ಆಧಾರದ ರಾಜಕೀಯ ಪಕ್ಷಗಳು ಆಡಳಿತಕ್ಕೆ ಬಂದ ಮೇಲಂತೂ, ಬಹುತೇಕ ತನ್ನ ಮೂಲ ಆಶಯವನ್ನು ಸಂಪೂರ್ಣ ಮರೆತಂತಿರುವ ಈ ಸಂಘಟನೆ, ನಿಜಾರ್ಥದ ತನ್ನ ಬೆರಳೆಣಿಕೆಯ ಹಿರಿಯರ ನಿಸ್ವಾರ್ಥ ಸೇವೆಗಳಿಗೆ ನೂರಕ್ಕೆ ನೂರರಷ್ಟು ಎಳ್ಳು ನೀರು ಬಿಟ್ಟು ನೇರಾನೇರವಾಗಿ ಅಧಿಕಾರದ ಜತೆಗಿನ ಎಲ್ಲ ರೀತಿಯ ಕಾಮನೆಗಳಿಗೆ ಬಲಿಯಾದದ್ದು ತೀರಾ ವಿಪರ್ಯಾಸದ ಸಂಗತಿ. ಬಹುಶಃ ಈ ಹಿಂದಿನ ಕರ್ನಾಟಕ ರಾಜ್ಯದ ಆಡಳಿತ ಈ ಮಾತಿಗೆ ಅತ್ಯಂತ ಸಮಂಜಸ ಉದಾಹರಣೆ ಆಗಬಹುದು. ಪುನಃ ಇದಕ್ಕೆ ಕಾರಣ ಎಲ್ಲ ತರದ ಲಾಲಸೆಯ ಜತೆಗೆ ವರ್ಣಾಶ್ರಮದ ಅಸಮತೋಲನವನ್ನು ಇನ್ನೂ ಜೀವಂತವಾಗಿರಿಸಬೇಕೆಂಬ ಅವರ ಹಿಡನ್ ಅಜೆಂಡಾವೇ ಇರಬಹುದು.
ಈ ಎಲ್ಲದರ ನಡುವೆಯೂ ಆರೆಸ್ಸೆಸ್ನ ತಳಮಟ್ಟದಲ್ಲಿ ಈಗ ಸಹ ಇರುವ ಸ್ವಯಂಸೇವಕರಲ್ಲಿ ಶೇ. ತೊಂಭತ್ತು ಇಂತಹದೇ ಜೀ ಹೂಜುರ್ ಎನ್ನುವ ದಲಿತ ಮತ್ತು ಹಿಂದುಳಿದ ವರ್ಗಗಳ ಜನರೇ! ಅನೇಕ ಸಲ ಇವರಿಗೆ ಹೊಸ್ತಿಲು ದಾಟಲಾಗದಿದ್ದರೂ, ಬಾಗಿಲ ಹೊರಗಿನಿಂದ ಒಳಗಿನ ಅಲಂಕಾರ ನೋಡುವುದೇ ಶ್ರೇಷ್ಠ ಎಂಬ ಮನೋಭಾವ ಮತ್ತು ಕೀಳರಿಮೆ ಇದೆ ಆರೆಸ್ಸೆಸ್ ಕಲಿಸುತ್ತಿರುವ ಪರಧರ್ಮ ದ್ವೇಷದ ಜತೆಗೆ. ಈ ಎಲ್ಲ ಎಚ್ಚರಿಕೆಯನ್ನು ಜನತೆ ಅರಿತುಕೊಳ್ಳಬೇಕಾಗಿದೆ. ಇಲ್ಲವಾದರೆ ಎಷ್ಟು ಬಲಶಾಲಿಯಾದ ಗೂಳಿ ಸಹ ಅದರ ಬಾವುಟದೆದುರು... ತಲೆಬಾಗಿಸಲೇ ಬೇಕಾಗಬಹುದು ಬಾಲ ಮಡಚಿ.