ದಲಿತರು ದೇವಾಲಯ ಪ್ರವೇಶಿಸಿದ್ದಕ್ಕೆ ಜಾತ್ರೆ ಕೈಬಿಟ್ಟ ಸವರ್ಣೀಯರು!
ಗೃಹ ಸಚಿವರ ತವರಿನಲ್ಲಿಯೇ ಅಸ್ಪೃಶ್ಯತೆ
ಬೆಂಗಳೂರು: ಸಮಾನತೆಯ ಪ್ರತೀಕವಾದ ಸಂವಿಧಾನವನ್ನು ಅಳವಡಿಸಿಕೊಂಡು 75 ವರ್ಷ ಕಳೆದರೂ ಜಾತಿಪದ್ಧತಿ, ಅಸ್ಪಶ್ಯತೆ ಆಚರಣೆ ಇನ್ನೂ ಜೀವಂತಾಗಿದೆ ಎಂಬುದಕ್ಕೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ತವರು ಜಿಲ್ಲೆಯಾದ ತುಮಕೂರಿನ ತುರುವೇಕೆರೆ ತಾಲೂಕಿನ ತುಯಲಹಳ್ಳಿ ಗ್ರಾಮ ಸಾಕ್ಷಿಯಾಗಿದೆ.
ತುಯಲಹಳ್ಳಿ ಗ್ರಾಮ ದೇವತೆ ಎಂದೇ ಹೆಸರುವಾಸಿಯಾಗಿರುವ ಮಾರಮ್ಮ ದೇವಿ ದೇವಾಲಯವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟಿದ್ದು, 2019ನೇ ಸಾಲಿನ ದೇವಿಯ ಜಾತ್ರೆಯ ಸಂದರ್ಭದಲ್ಲಿ ದಲಿತ ಸಮುದಾಯದ ಸದಸ್ಯರು ದೇವಾಲಯ ಪ್ರವೇಶ ಮಾಡಿದರು ಎನ್ನುವ ಕ್ಷುಲ್ಲಕ ಕಾರಣ ಇಟ್ಟುಕೊಂಡು ಸತತ 5ವರ್ಷಗಳಿಂದ ಮಾರಮ್ಮ ದೇವಿ ಜಾತ್ರೆಯನ್ನು ಸ್ಥಗಿತಗೊಳಿಸಿರುವ ಅಮಾನವೀಯ ಘಟನೆ ಇದಾಗಿದೆ.
2019ರ ಮಾರ್ಚ್ ವೇಳೆಯಲ್ಲಿ ಗ್ರಾಮದಲ್ಲಿ ಮಾರಮ್ಮ ದೇವಿ ಜಾತ್ರೆಯು ನಡೆಯುತ್ತಿದ್ದ ಸಂದರ್ಭದಲ್ಲಿ ಮಾದಿಗ ಸಮುದಾಯದವರು ದೇವಾಲಯ ಪ್ರವೇಶಿಸಿದ್ದರು ಎನ್ನುವ ಕಾರಣವನ್ನಿಟ್ಟುಕೊಂಡು ಗಲಾಟೆ ನಡೆಸಿದ ಗ್ರಾಮದ ಸವರ್ಣೀಯರು, ಅಂದು ಜಾತ್ರೆ ಅರ್ಧಕ್ಕೆ ಮೊಟುಕುಗೊಳಿಸಿದ್ದರು. ಅಲ್ಲಿಂದ ಪ್ರತೀ ವರ್ಷ ನಡೆಯುತ್ತಿದ್ದ ಜಾತ್ರೆಯು ಜಾತಿ ವೈಷಮ್ಯಕ್ಕೆ ಬಲಿಯಾಗಿ 5 ವರ್ಷಗಳಿಂದ ನಡೆದಿಲ್ಲ ಎನ್ನುವ ಮಾತುಗಳನ್ನು ಈ ಗ್ರಾಮದ ಸದಸ್ಯರು ಆಡುತ್ತಿದ್ದಾರೆ.
ಧಾರ್ಮಿಕ ದತ್ತಿ ಇಲಾಖೆಯಿಂದ ಮಾರಮ್ಮ ದೇವಾಲಯದಲ್ಲಿ ‘ಯಾವುದೇ ಜಾತಿ, ಧರ್ಮ, ಲಿಂಗ ಬೇಧವಿಲ್ಲದೆ ಸರ್ವರೂ ಮುಕ್ತವಾಗಿ ದೇವಸ್ಥಾನ ಪ್ರವೇಶಿಸಿ ದೇವರ ದರ್ಶನ ಪಡೆಯಬಹುದು’ ಎಂಬುದಾಗಿ ತಹಶೀಲ್ದಾರರ ಅಂಕಿತದೊಂದಿಗೆ ನಾಮಫಲಕ ಬರೆಯಲಾಗಿತ್ತು. ಆದರೆ, ದಲಿತರು ದೇವಾಲಯ ಪ್ರವೇಶಿಸಿದ ಬೆನ್ನಲ್ಲೇ ಸವರ್ಣೀಯರು, ಆ ನಾಮಫಲಕವನ್ನು ಅಳಿಸಿ ಹಾಕಿ ಕಾನೂನು ಉಲ್ಲಂಘಿಸಿದ್ದರು. ಇದನ್ನು ತಹಶೀಲ್ದಾರರ ಗಮನಕ್ಕೆ ತಂದಾಗ ಮತ್ತೊಮ್ಮೆ ನಾಮಫಲಕ ಹಾಕುವ ಪ್ರಸಂಗ ಬಂತು ಎನ್ನುತ್ತಾರೆ ದಲಿತ ಮುಖಂಡ ಸಿ.ಚನ್ನಯ್ಯ.
ಗ್ರಾಮದಲ್ಲಿ ಹಿಂದಿನಿಂದಲೂ ಜಾತಿ ಪದ್ಧತಿಯನ್ನು ಅನುಸರಿಸುತ್ತಾ ಬರಲಾಗಿದ್ದು, ಅದು ಈಗಲೂ ಮುಂದುವರಿದಿದೆ. ಸವರ್ಣೀಯರು ದಲಿತರ ಮೇಲೆ ದಬ್ಬಾಳಿಕೆ ನಡೆಸುತ್ತಾರೆ. ನಾವು ಸಹ ಅವರಂತೆ ಮನುಷ್ಯರಲ್ಲವೇ, ಸಂವಿಧಾನ ಅಡಿಯಲ್ಲಿ ಸಮಾನವಾಗಿ ಬದುಕಲು ನಮಗೂ ಅವಕಾಶವಿಲ್ಲವೇ ಎಂದು ಪ್ರಶ್ನಿಸುತ್ತಾರೆ ಸಿ.ಚನ್ನಯ್ಯ.
ಅಧಿಕಾರಿಗಳಿದ್ದರೆ ನಮಗೆ ಪ್ರವೇಶ, ಇಲ್ಲವಾದರೆ ಹೊರಗೆ: ತುಯಲಹಳ್ಳಿ ಗ್ರಾಮದಲ್ಲಿ ಸವರ್ಣೀಯರ ಬೀದಿಗಳಲ್ಲಿ ದಲಿತರು ಓಡಾಡದಂತೆ, ಕುಡಿಯುವ ನೀರಿನ ಟ್ಯಾಂಕ್‌ಗಳಲ್ಲಿ ದಲಿತರು ನೀರನ್ನು ಕುಡಿಯದಂತೆ ನಿಷೇಧ ಹೇರಲಾಗಿತ್ತು. ಇದೆಲ್ಲವನ್ನೂ ಪ್ರಶ್ನಿಸಿ, ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಿಕೊಂಡೆವು. ಆದರೆ, ದೇವಾಲಯದ ವಿಷಯದಲ್ಲಿ ಸವರ್ಣೀಯರು ದಲಿತರಿಗೆ ಮುಕ್ತ ಪ್ರವೇಶ ನೀಡುತ್ತಿಲ್ಲ. ಗ್ರಾಮಕ್ಕೆ ಅಧಿಕಾರಿಗಳು ಬಂದಾಗ ಮಾತ್ರ ಅವರೊಂದಿಗೆ ನಾವು ಪ್ರವೇಶಿಸುತ್ತೇವೆ, ಸಾಮಾನ್ಯ ದಿನಗಳಲ್ಲಿ ದೇವಾಲಯದ ಹೊರಗಡೆ ನಿಲ್ಲಿಸಿ ಪೂಜೆ, ಅರ್ಚನೆ ಮಾಡಿಕೊಡುತ್ತಾರೆಂದು ನೋವು ತೋಡಿಕೊಳ್ಳುತ್ತಾರೆ ಸಿ.ಚನ್ನಯ್ಯ.
ಜಾತ್ರೆಯ ಕೆಲಸಗಳೆಲ್ಲಾ ದಲಿತರ ಕೈಯಲ್ಲೇ ಮಾಡಿಸುತ್ತಾರೆ, ಆದರೆ, ದೇವಾಲಯದ ಒಳಗೆ ಹೋದರೆ ಮಾತ್ರ ಮೈಲಿಗೆ ಆಗುತ್ತದೆ ಅನ್ನುತ್ತಾರೆ, ಇದು ನ್ಯಾಯ, ನಮ್ಮ ರಕ್ತವೂ, ಅವರ ರಕ್ತವೂ ಬೇರೆ ಬೇರೆಯೇ ಎನ್ನುತ್ತಾ ಪ್ರಶ್ನಿಸುತ್ತಾರೆ ಗ್ರಾಮದ ದಲಿತ ಮಹಿಳೆ ಶಿವಮ್ಮ.
ಆ ಜಾತಿ ಈ ಜಾತಿ ಎನ್ನದೇ ಎಲ್ಲರೂ ಸೇರಿ ಗ್ರಾಮ ದೇವತೆಯ ಜಾತ್ರೆಯನ್ನು ಮಾಡಬೇಕು. ಈ ಅನಿಷ್ಠ ಜಾತಿ ಪದ್ಧತಿ ನಮಗೆ ಕಾಲಕ್ಕೆ ಮುಗಿಯಬೇಕು. ಇದರಿಂದ ನಮ್ಮ ಹಿರಿಯರು ಬಹಳಷ್ಟು ನೋವುಂಡಿದ್ದಾರೆ. ನಮ್ಮ ಮಕ್ಕಳೂ ಇದರ ಯಾತನೆಯನ್ನು ಅನುಭವಿಸುವಂತಾಗಬಾರದು ಎನ್ನುತ್ತಾರೆ ದಲಿತ ಮಹಿಳೆ ಶಿಲ್ಪ.
ಶಾಂತಿ ಸಭೆ ನಾಮಕಾವಸ್ಥೆ
ತುಯಲಹಳ್ಳಿಯಲ್ಲಿ ಅಸ್ಪಶ್ಯತೆ ಆಚರಣೆ ಗೌಪ್ಯವಾಗಿ ಹಿಂದಿನಿಂದಲೂ ನಡೆದುಕೊಂಡು ಬಂದಿದ್ದು, ಅದು 5 ವರ್ಷದ ಹಿಂದೆ ಬೆಳಕಿಗೆ ಬಂತು. ಗ್ರಾಮದಲ್ಲಿ ದಲಿತರು ದೇವಾಲಯ ಪ್ರವೇಶಿಸಿ ಐದು ವರ್ಷದಿಂದ ಜಾತ್ರೆ ನಿಲ್ಲಿಸಿದ್ದ ವಿಚಾರವನ್ನು ತಹಶೀಲ್ದಾರ್ ಅವರ ಗಮನಕ್ಕೆ ತಂದಾಗ ಅವರು ಫೆ.7ರಂದು ಶಾಂತಿ ಸಭೆಯೊಂದನ್ನು ಆಯೋಜಿಸಿದ್ದರು. ಆದರೆ ಶಾಂತಿ ಸಭೆಗೆ ಸ್ಥಳೀಯ ಮುಖಂಡರು, ಸವರ್ಣೀಯರು ಹಾಜರಾಗಲು ಹಿಂದೇಟು ಹಾಕಿದರು. ಸಂಬಂಧಪಟ್ಟ ಪಿಡಿಓ ಸಭೆಗೆ ಹಾಜರಿರಲಿಲ್ಲ. ದೇವಾಲಯದ ಛಾವಡಿಯೊಳಗೆ ಯಾವುದೇ ರೀತಿಯ ವ್ಯವಸ್ಥೆಯಿಲ್ಲದೆ ಕೇವಲ ಸರಕಾರಕ್ಕೆ ವರದಿ ಸಲ್ಲಿಸುವುದಕ್ಕಾಗಿ ನಾಮಕಾವಸ್ಥೆಗೆ ಶಾಂತಿಸಭೆ ನಡೆಸಿದಂತೆ ಕಂಡುಬಂದಿತು. ಈ ಬಗ್ಗೆ ತಹಶೀಲ್ದಾರರನ್ನು ಕೇಳಿದರೆ, ಶಾಸಕರ ಗಮನಕ್ಕೆ ತಂದು ಅವರ ಸಮ್ಮುಖದಲ್ಲಿ ವಾರದೊಳಗೆ ಮತ್ತೊಂದು ಸಭೆ ಆಯೋಜಿಸುತ್ತೇನೆ ಎನ್ನುವ ಹಾರಿಕೆಯ ಸಿಗುತ್ತದೆ. ಮೇಲ್ನೋಟಕ್ಕೆ ಇದನ್ನು ರಾಜಕೀಯಗೊಳಿಸುವ ಹುನ್ನಾರ ನಡೆಯುತ್ತಿದೆ ಎಂದು ದೂರುತ್ತಾರೆ ದಲಿತ ಹಕ್ಕುಗಳ ಸಮಿತಿಯ ಜಿಲ್ಲಾ ಸಂಚಾಲಕ ರಾಜು ವೆಂಕಟಪ್ಪ.
ಫೆ.7ರಂದು ತುಯಲಹಳ್ಳಿ ಗ್ರಾಮದ ಎಲ್ಲ ಸಮುದಾಯವರೊಂದಿಗೆ ಶಾಂತಿ ಸಭೆಯನ್ನು ನಡೆಸಲಾಗಿತ್ತು. ಸಭೆಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದ ಕಾರಣಕ್ಕೆ ಜಾತ್ರೆಯನ್ನು ನಿಲ್ಲಿಸಿದ್ದರ ಬಗ್ಗೆ ಚರ್ಚೆ ನಡೆಸಿ, ಬಳಿಕ ನನ್ನ ಸಮ್ಮುಖದಲ್ಲಿಯೇ ದಲಿತ ಮುಖಂಡರಿಗೆ ದೇವಾಲಯಕ್ಕೆ ಪ್ರವೇಶ ಕೊಡಿಸಲಾಗಿದೆ. ಇನ್ನೂ ದೇವರ ಜಾತ್ರೆಯನ್ನು ನಾನು ಮಾಡುವುದಕ್ಕೆ ಬರುವುದಿಲ್ಲ. ಆ ಊರಿನ ಎಲ್ಲ ಸದಸ್ಯರು ಒಗ್ಗೂಡಿ ತೀರ್ಮಾನಿಸಬೇಕು. ಗ್ರಾಮದ ದಲಿತರು ಮಾಡುವ ಆರೋಪಗಳ ಕುರಿತಂತೆ ಶಾಸಕರ ಅಧ್ಯಕ್ಷತೆಯಲ್ಲಿ ಸದ್ಯದಲ್ಲೇ ಮತ್ತೊಂದು ಸಭೆ ಆಯೋಜಿಸಿ, ದಲಿತರ ಸಮಸ್ಯೆಗಳನ್ನು ಪರಿಹರಿಸಲಾಗುವುದು.
-ರೇಣುಕುಮಾರ್, ತಹಶೀಲ್ದಾರ್ ತುರುವೇಕೆರೆ.
ಮಾರಮ್ಮ ದೇವಿ ಜಾತ್ರೆಯನ್ನು ತುಯಲಹಳ್ಳಿ ಹಾಗೂ ತುಯಲಹಳ್ಳಿ ಪಾಳ್ಯ ಎಂಬ ಎರಡು ಗ್ರಾಮದವರು ಸೇರಿ ಆಚರಿಸಿಕೊಂಡು ಬರುತ್ತಿದ್ದರು. ಆದರೆ ದಲಿತರು ಪ್ರವೇಶಿಸಿದ ನಂತರ ದೇವರಿಗೆ ಮೈಲಿಗೆಯಾಗಿದೆ, ನಾವು ಪೂಜಿಸುವುದಿಲ್ಲವೆಂದು ತುಯಲಹಳ್ಳಿ ಪಾಳ್ಯದ ಸವರ್ಣೀಯರು ಪ್ರತ್ಯೇಕ ದೇವಾಲಯವನ್ನು ನಿರ್ಮಿಸಿಕೊಂಡರು. ಆದರೆ, ದಲಿತರು ಪ್ರವೇಶಿಸಲ್ಪಟ್ಟ ತುಯಲಹಳ್ಳಿಯ ದೇವಾಲಯದ ಅರ್ಚಕರೇ, ತುಯಲಹಳ್ಳಿ ಪಾಳ್ಯದ ಹೊಸ ದೇವಾಲಯವನ್ನು ಪೂಜೆ ಮಾಡುತ್ತಿದ್ದು, ಮೈಲಿಗೆ ಏಕೆ ಆಗುತ್ತಿಲ್ಲ?
- ಸಿ.ಚನ್ನಯ್ಯ, ದಲಿತ ಮುಖಂಡ
ಜಾತ್ರೆಯ ವೇಳೆಯಲ್ಲಿ ಸವರ್ಣೀಯರ ಮನೆಯ ಆರತಿಗಳು ಮೊದಲ ಪಂಕ್ತಿಯಲ್ಲಿರಬೇಕು. ಅವರೇ ಮೊದಲು ದೇವರ ಕೊಂಡವನ್ನು ಆಯಬೇಕು. ದಲಿತರನ್ನು ಮುಟ್ಟಿಸಿಕೊಂಡರೆ ಮೈಲಿಗೆ ಎನ್ನುವಷ್ಟರ ಮಟ್ಟಿಗೆ ಗ್ರಾಮದಲ್ಲಿ ಜಾತಿ ಪೀಡಿತ ನಿಯಮವನ್ನು ಹೇರಲಾಗಿದೆ. ಆದರೆ, ಇದೇ ಸವರ್ಣೀಯರ ಚುನಾವಣೆ ವೇಳೆಯಲ್ಲಿ ದಲಿತ ಸಮುದಾಯದ ಬೀದಿಯೊಳಗೆ ಬಂದು ಓಟು ಕೇಳುತ್ತಾರೆ. ಆಗ ಜಾತಿ ಕಾಣುವುದಿಲ್ಲವೇ?.
-ದೊಡ್ಡಮ್ಮ, ದಲಿತ ಮಹಿಳೆ