ದೇಶ ವಿದೇಶಗಳ ಕಲಾಭಿಮಾನಿಗಳಿಗೆ ಕನ್ನಡಿಗರ ತಮಟೆ ಸದ್ದು ಕೇಳಿಸಿದ ಶಿವಮ್ಮ

ಪುರುಷ ಪ್ರಧಾನ ಸಮಾಜದಲ್ಲಿ ಹೆಣ್ಣು ಯಾವ ಕೆಲಸ ಮಾಡಿದರೂ ಅವಳನ್ನು ಏನೋ ಒಂಥರಾ ನೋಡುವುದು ಹಿಂದಿನಿಂದಲೂ ಬೆಳೆದು ಬಂದಿದೆ. ಆದರೆ ಅದಕ್ಕೆ ವಿರುದ್ಧ ಎನ್ನುವಂತೆ ಮನಸ್ಸಿನಲ್ಲಿ ಅಂದುಕೊಂಡಿದ್ದನ್ನು ಸಾಧಿಸುವ ಛಲ ಮಹಿಳೆಗೆ ರಕ್ತಗತವಾಗಿ ಬಂದಿರುತ್ತದೆ. ಇದಕ್ಕೆ ಸ್ಪಷ್ಟ ಉದಾಹರಣೆ 44 ವರ್ಷದ ದಲಿತ ಸಮುದಾಯದ ಮಹಿಳೆ ಎನ್. ಶಿವಮ್ಮ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಇಟ್ಟಸಂದ್ರ ಗ್ರಾಮದ ದಲಿತ ಸಮುದಾಯದ ಕುಟುಂಬದಲ್ಲಿ ಜನಿಸಿದ ಶಿವಮ್ಮ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಮೊದಲ ಹೆಜ್ಜೆಯಿಟ್ಟವರು.
ಇದಲ್ಲದೆ ತನ್ನ ಗಂಡನೊಡನೆ ಸೇರಿ ಜೀತ ವಿಮುಕ್ತಿ ಹೋರಾಟ ಸಂಘಟನೆಯಲ್ಲಿ ಪಾಲ್ಗೊಂಡು ಬಾಲ ಕಾರ್ಮಿಕರ ರಕ್ಷಣೆ, ಜೀತದಾಳುಗಳ ಬಿಡುಗಡೆ, ಅವರಿಗೆ ಸರಕಾರದಿಂದ ಪುನರ್ವಸತಿ ಕಲ್ಪಿಸುವ ಹೋರಾಟ, ಮೂಲಭೂತ ಸಮಸ್ಯೆಗಳ ಬಗ್ಗೆ ಬೀದಿ ನಾಟಕಗಳನ್ನು ರಚನೆ ಮಾಡಿ ಪ್ರದರ್ಶನ ನೀಡಿ ಅರಿವು ಹಾಗೂ ಜಾಗೃತಿ ಮೂಡಿಸುತ್ತಿರುವಲ್ಲಿ ಶಿವಮ್ಮನ ಪಾತ್ರ ಸ್ಮರಣೀಯವಾಗಿದೆ.
2005ರಲ್ಲಿ ಇವರು ಸ್ಥಾಪಿಸಿದ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಸಾಮಾಜಿಕ, ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ರಾಜ್ಯಾದ್ಯಂತ ಮಹಿಳೆಯರ ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ದುಡಿಯುತ್ತಿದೆ. ರಾಜ್ಯಾದ್ಯಂತ ಒಂದು ಸಾವಿರದಷ್ಟು ಮಹಿಳಾ ಸಂಘಗಳನ್ನು ರಚನೆ ಮಾಡಿ ಅವರಿಗೆ ಆರ್ಥಿಕವಾಗಿ ಸ್ವಾವಲಂಬನೆಯ ಬದುಕು ಕಟ್ಟುವಲ್ಲಿ ಶಿವಮ್ಮನ ಪಾತ್ರ ಹಿರಿದಾಗಿದೆ.
ಹೆಣ್ಣು ಮಕ್ಕಳ ತಮಟೆ ತಂಡ ಕಟ್ಟಿದ ಶಿವಮ್ಮ
ತಮ್ಮ ಸಂಸ್ಥೆ ಯಾರೂ ಸಾಧಿಸದ ಹೊಸದನ್ನೇನಾದರೂ ಮಾಡಬೇಕು ಎಂದು ಕನಸು ಕಂಡ ಶಿವಮ್ಮ, ಹೆಣ್ಣು ಮಕ್ಕಳ ತಮಟೆ ತಂಡ ಕಟ್ಟಿದರು. ಶಿವಮ್ಮ ಅವರೇ ಮುಂದೆ ನಿಂತು ಬಾಲಕಿಯರಿಗೆ ತಮಟೆ ನುಡಿಸುವುದನ್ನು ಕಲಿಸಿದರು. ತಮ್ಮ ಸಂಸ್ಥೆಯ ಸ್ವಸಹಾಯ ಸಂಘದ ಸದಸ್ಯರ ಶಿಕ್ಷಣ ವಂಚಿತ ಹೆಣ್ಣು ಮಕ್ಕಳನ್ನು ತಮಟೆ ತಂಡಕ್ಕೆ ಆಯ್ಕೆ ಮಾಡಿಕೊಂಡರು. ಅವರಿಗೆ ತಮಟೆ ವಾದನ, ನೃತ್ಯ ಕಲಿಸುವುದರ ಜತೆಗೆ ಅವರ ಅರ್ಧಕ್ಕೆ ನಿಂತ ಶಿಕ್ಷಣವನ್ನು ಮುಂದುವರಿಸಲೂ ನೆರವಾಗುತ್ತಿದೆ ಸಂಘ.
ವಾದನವಷ್ಟೇ ಅಲ್ಲ ನರ್ತನವೂ ಇದೆ
ಶಿವಮ್ಮ ನೇತೃತ್ವದ ತಂಡ ಕೇವಲ ತಮಟೆ ನುಡಿಸುವುದಷ್ಟೇ ಅಲ್ಲ, ಅದಕ್ಕೆ ತಕ್ಕಂತೆ ನೃತ್ಯವನ್ನೂ ಸಂಯೋಜಿಸಿದೆ. ತಮಟೆ ಲಯಕ್ಕೆ ಅನುಗುಣವಾಗಿ ನರ್ತಿಸುವ ತಂಡ, ಕಾರ್ಯಕ್ರಮ ಯಾವುದೇ ಇರಲಿ ತನ್ನತ್ತ ಎಲ್ಲರ ಗಮನವನ್ನು ಸೆಳೆಯುತ್ತದೆ.
ಮಹಿಳೆಯರ ತಮಟೆ ತಂಡ ತಮ್ಮ ಕಲೆಯನ್ನು ಹೋರಾಟದ ಅಸ್ತ್ರವಾಗಿಯೂ ಬಳಸುತ್ತಿದೆ. ಮಹಿಳೆಯರ ಸಮಸ್ಯೆಗಳ ಕುರಿತು ಸಂಬಂಧಪಟ್ಟ ಇಲಾಖೆಯ ಕಚೇರಿ ಮುಂದೆ ತಮಟೆ ಪ್ರತಿಭಟನೆ ಮಾಡುವ ಮೂಲಕ ಮಹಿಳೆಯರಿಗೆ ನ್ಯಾಯ ದೊರಕಿಸಿಕೊಡುತ್ತಿರುವುದು ಗಮನಾರ್ಹ.
ಶಿವಮ್ಮ ನೇತೃತ್ವದ ಸ್ಫೂರ್ತಿ ಮಹಿಳಾ ತಂಡ, ಆನೇಕ ಕಾರ್ಯಕ್ರಮಗಳ ಮೂಲಕ ರಾಜ್ಯಾದ್ಯಂತ ಗಮನಸೆಳೆದಿದೆೆ. ರಾಜ್ಯ ಮಾತ್ರವಲ್ಲದೆ ನೆರೆಯ ಆಂಧ್ರ, ಗೋವಾ ಮೊದಲಾದ ರಾಜ್ಯಗಳಲ್ಲೂ ತಮಟೆ ನುಡಿಸುವ ಕಾರ್ಯಕ್ರಮಗಳನ್ನು ನೀಡಿ ಪ್ರಶಂಸೆಯನ್ನು ಪಡೆದುಕೊಂಡಿದೆ. ಒಂದು ಸಾವಿರಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದೆ. ಪ್ರಮುಖವಾಗಿ ವಿಶ್ವ ಕನ್ನಡ ಸಮ್ಮೇಳನ, ಹಂಪಿ ಉತ್ಸವ, ಮೈಸೂರು ದಸರಾ, ಜಾನಪದ ಉತ್ಸವ, ಜಾನಪದ ಜಾತ್ರೆ, ಕಿತ್ತೂರು ರಾಣಿ ಚೆನ್ನಮ್ಮ ಉತ್ಸವ, ಗಣರಾಜ್ಯೋತ್ಸವ, ಸ್ವಾತಂತ್ರ್ಯೋತ್ಸವ, ಕನ್ನಡ ರಾಜ್ಯೋತ್ಸವ, ಸುಗ್ಗಿ-ಹುಗ್ಗಿ, ಮಹಿಳಾ ಉತ್ಸವಗಳಲ್ಲಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದೆ. 2012-13ನೇ ಸಾಲಿನಲ್ಲಿ ಮೈಸೂರು ದಸರಾದಲ್ಲಿ ಭಾಗವಹಿಸಿ, ದಸರಾದಲ್ಲಿ ಪಾಲ್ಗೊಂಡಿದ್ದ 180 ಕಲಾ ತಂಡಗಳಲ್ಲಿ ಶಿವಮ್ಮರ ಮಹಿಳಾ ತಂಡ ದ್ವೀತಿಯ ಬಹುಮಾನವನ್ನು ಪಡೆದುಕೊಂಡಿದೆ. ಅಷ್ಟೇ ಅಲ್ಲ, 2016ರಲ್ಲಿ ಸಿಂಗಾಪುರದಲ್ಲೂ ಪ್ರದರ್ಶನ ನೀಡಿ ಭಾರತದ ಕೀರ್ತಿ ಪತಾಕೆಯನ್ನು ಸಾಗರದಾಚೆಗೂ ಹಾರಿಸಿದೆ.
ದುಡಿದ ಹಣ ಉನ್ನತ ಶಿಕ್ಷಣಕ್ಕೆ
ವಿವಿಧ ಪ್ರದರ್ಶನಗಳಲ್ಲಿ ಗೌರವ ಧನದ ರೂಪದಲ್ಲಿ ಸಿಗುವ ಹಣವನ್ನು ತಂಡದ ಹೆಣ್ಣು ಮಕ್ಕಳ ಉನ್ನತ ಶಿಕ್ಷಣಕ್ಕೆ ಬಳಸುತ್ತಿದ್ದಾರೆ.
ವಿಶೇಷವಾಗಿ ಸ್ವಸಹಾಯ ಸಂಘದ ಸದಸ್ಯರ ಶಾಲೆ ಬಿಟ್ಟ ಹೆಣ್ಣು ಮಕ್ಕಳಿಗೆ ತಮಟೆ ನೃತ್ಯ ತರಬೇತಿ ನೀಡಿ ಕಲೆಯನ್ನು ಪ್ರೋತ್ಸಾಹಿಸುವುದರ ಜತೆಗೆ ಸಾಮಾಜಿಕ ಸಮಸ್ಯೆಗಳ ವಿರುದ್ಧದ ಹೋರಾಟಕ್ಕೂ ತಮಟೆ ಸದ್ದು ಮೊಳಗಿಸಿ ನ್ಯಾಯ ದೊರಕಿಸುತ್ತಿದ್ದಾರೆ.
ಪ್ರಮುಖ ಸಾಧನೆಗಳು
* 2005ನೇ ಸಾಲಿನಲ್ಲಿ ಸ್ಫೂರ್ತಿ ಮಹಿಳಾ ಮತ್ತು ಮಕ್ಕಳ ಸಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಸಂಸ್ಥೆ ಮತ್ತು ಆರಂಭ ಟ್ರಸ್ಟ್ ರಚನೆ ಈ ಮೂಲಕ ಸಮಾಜ ಸೇವೆ ಪ್ರಾರಂಭ.
* 250 ಜನ ಬಡ ಹೆಣ್ಣು ಮಕ್ಕಳನ್ನು ಗುರುತಿಸಿ ಅವರಿಗೆ ಜನಪದ ಕಲಾಪ್ರಕಾರಗಳ ತರಬೇತಿ (ವಿಶೇಷವಾಗಿ ಮಹಿಳಾ ತಮಟೆ) ನೀಡಿ ಪ್ರದರ್ಶನದಿಂದ ಬರುವಂತಹ ಹಣದಿಂದ ಉನ್ನತ ವಿದ್ಯಾಭ್ಯಾಸ ಮಾಡಲು ಅವಕಾಶ ಮಾಡಿ ಕೊಟ್ಟಿರುವುದು.
* ಕನ್ನಡ ಅಭಿವೃದ್ಧಿ ಪ್ರಾಧಿಕಾರ ಸದಸ್ಯರಾಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾಲೇಜು ರಂಗೋತ್ಸವ ಜಿಲ್ಲಾ ಸಂಚಾಲಕಿಯಾಗಿ, ಜಾನಪದ ಜಾತ್ರೆಯ ಪ್ರಧಾನ ನಿರ್ದೇಶಕಿಯಾಗಿ ಕಾರ್ಯ ನಿರ್ವಹಣೆ.
* ತಮಟೆ ಕಲಾವಿದೆಯಾಗಿ ಸ್ಫೂರ್ತಿ ಕಲಾತಂಡ ಕಟ್ಟಿಕೊಂಡು ಜಿಲ್ಲೆ, ರಾಜ್ಯ, ಅಂತರ್‌ರಾಜ್ಯ ಮಟ್ಟದಲ್ಲಿ ಪ್ರದರ್ಶನ(ವಿಶೇಷವಾಗಿ ಸಿಂಗಾಪುರ ಸಿಂಗಾರ ಕನ್ನಡ ಸಮ್ಮೇಳನದಲ್ಲಿ ಪ್ರದರ್ಶನ ನೀಡಿರುವುದು).
* ಯುವಜನ ಮೇಳ, ಯುವಜನೋತ್ಸವ, ಕಾಲೇಜು ರಂಗೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪ್ರಥಮ ಬಹುಮಾನ ಗಳಿಸಿರುವುದು
* ಸಂಘಟಕಿಯಾಗಿ ಹಲವು ಜಿಲ್ಲಾ, ರಾಜ್ಯ ಮತ್ತು ಅಂತರ್ ರಾಜ್ಯಮಟ್ಟದ ಕಾರ್ಯಕ್ರಮಗಳನ್ನು ಸಂಘಟಿಸಿರುವುದು.
* ಜೀತದಾಳುಗಳ, ಬಾಲಕಾರ್ಮಿಕರ ಬಿಡುಗಡೆ ಮತ್ತು ಪುನರ್ವಸತಿಗಾಗಿ 15 ವರ್ಷಗಳ ಸೇವೆ
* ಮಹಿಳೆಯರ ಸಂಘಟನೆ ಮತ್ತು ಮಹಿಳೆಯರ ಸಬಲೀಕರಣಕ್ಕೆ ಮಹಿಳಾ ಸ್ವಸಹಾಯ ಸಂಘಗಳ ರಚನೆ ಮಾಡಿ 5 ಸಾವಿರ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸಿ ಕೌಶಲ್ಯ ತರಬೇತಿ ನೀಡಿ ಸ್ವಯಂ ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಿ ಮಾಡಿರುವುದು.
ಪ್ರಶಸ್ತಿಗಳು
ಸ್ವರಮಾಲ ಸ್ನೇಹ ಸೇತು ಸಂಗೀತ ಸಾಹಿತ್ಯ ಮತ್ತು ಸಾಂಸ್ಕೃತಿಕ ಕಲಾ ಸಂಸ್ಥೆ (ರಿ) ಬೆಂಗಳೂರು - ಸಂಗೀತ ರತ್ನ ಡಾ.ಪುಟ್ಟರಾಜ ಪ್ರಶಸ್ತಿ (ಜಾನಪದ),
ಬಾಬು ಜಗಜೀವನರಾಮ್ ಹೋರಾಟ ವೇದಿಕೆ (ರಿ)ಯಿಂದ ಡಾ.ಬಾಬು ಜಗಜೀವನರಾಮ್ ರತ್ನ, ಕರ್ನಾಟಕ ಕಲಾ ಪರಿಷತ್ (ರಿ) ಮಂಡ್ಯದಿಂದ ನಾಡ ಚೇತನ ಪ್ರಶಸ್ತಿ, ಪದ್ಮಾವತಿ ಉತ್ಥಾನ್ ಮಹಿಳಾ ಚಾರಿಟಬಲ್ ಟ್ರಸ್ಟ್ (ರಿ) ಬೆಂಗಳೂರು ದಾರಿದೀಪ ಪ್ರಶಸ್ತಿ, ದಲಿತ ಕಲಾ ಮಂಡಲಿ ಆಂಧ್ರಪ್ರದೇಶ ವತಿಯಿಂದ ಪ್ರಶಸ್ತಿಯಲ್ಲದೆ ಇನ್ನೂ ಆನೇಕ ಸಂಘ ಸಂಸ್ಥೆಗಳಿಂದ ಪ್ರಶಸ್ತಿಗಳು ಲಬಿಸಿವೆ ಅಲ್ಲದೆ ಜಾನಪದ ಮಹಿಳಾ ತಮಟೆ ಕ್ಷೇತ್ರದಲ್ಲಿ ಸಾಧನೆಗಾಗಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.