ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣ : ಕಲ್ಲಡ್ಕ ಭಟ್ ವಿರುದ್ಧದ ದೋಷಾರೋಪ ಪಟ್ಟಿ ರದ್ದು ಬೆಂಬಲಿಸಿದ ರಾಜ್ಯ ಸರಕಾರ
ಮೇಲ್ಮನವಿ ಸಲ್ಲಿಸಲು ನಿರಾಕರಣೆ
ಬೆಂಗಳೂರು: ಶ್ಯಾಮ್ ಪ್ರಸಾದ್ ಶಾಸ್ತ್ರಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೊದಲ ಆರೋಪಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಮತ್ತು ಮೂರನೇ ಆರೋಪಿ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧದ ದೋಷಾರೋಪ ಪಟ್ಟಿ ರದ್ದುಪಡಿಸಿ ಹೈಕೋರ್ಟ್ ನೀಡಿರುವ ಆದೇಶವು ‘ಸರಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ಸರಕಾರವು ಅಭಿಪ್ರಾಯಪಟ್ಟಿದೆ.
ಈ ಪ್ರಕರಣದಲ್ಲಿ ರಾಜ್ಯ ಹೈಕೋರ್ಟ್ ನೀಡಿದ್ದ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ‘ಯೋಗ್ಯ ಪ್ರಕರಣವಲ್ಲ’ ಎಂದು ತೀರ್ಮಾನಿಸಿದ್ದರ ಬೆನ್ನಲ್ಲೇ ಇದೀಗ ಹೈಕೋರ್ಟ್ ಆದೇಶವು ಸರಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಪ್ರಾಸಿಕ್ಯೂಷನ್ ಇಲಾಖೆಯ ಉಪ ಕಾರ್ಯದರ್ಶಿಯು ಅಭಿಪ್ರಾಯಿಸಿರುವುದು ಮುನ್ನೆಲೆಗೆ ಬಂದಿದೆ.
ಈ ಪ್ರಕರಣವು ಸುಪ್ರೀಂ ಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ ಎಂದು ತೀರ್ಮಾನಿಸುವ ಮುನ್ನ ಇಲಾಖೆ ಹಂತದಲ್ಲಿ ಏನೆಲ್ಲಾ ಚರ್ಚೆಗಳು ನಡೆದಿವೆ ಎಂಬ ಕುರಿತು ‘ the-file.in’ ಆರ್ಟಿಐ ಅಡಿಯಲ್ಲಿ ಸಮಗ್ರ ಕಡತವನ್ನು ಪಡೆದುಕೊಂಡಿದೆ.
ಕಡತದ ಟಿಪ್ಪಣಿ ಹಾಳೆಯಲ್ಲೇನಿದೆ?
ಕರ್ನಾಟಕ ಹೈಕೋರ್ಟ್ ನೀಡಿರುವ ಆದೇಶವನ್ನು ಪರಿಶೀಲಿಸಲಾಗಿದೆ. ಅದೇ ರೀತಿ ಸರಕಾರಿ ವಕೀಲರ ಅಭಿಪ್ರಾಯವನ್ನೂ ಪರಿಶೀಲಿಸಲಾಗಿದೆ. ಉಚ್ಚ ನ್ಯಾಯಾಲಯವು ಸಕಾರಣಗಳನ್ನು ನೀಡಿ ಆದೇಶ ಹೊರಡಿಸಿರುವುದರಿಂದ ಈ ಪ್ರಕರಣದ ಆದೇಶವು ಅಪೀಲಿಗೆ ಯೋಗ್ಯವಲ್ಲ ಎಂದು ಅಭಿಪ್ರಾಯಪಟ್ಟಿರುತ್ತಾರೆ. ಉಚ್ಚ ನ್ಯಾಯಾಲಯವು ಉಭಯ ವಿಭಾಗದ ವಾದ, ವಿವಾದಗಳನ್ನು ಆಲಿಸಿ ಅವರ ಮುಂದಿದ್ದ ಪ್ರಕರಣದ ದಾಖಲಾತಿಗಳ, ವಾಸ್ತವಾಂಶಗಳನ್ನು ಅವುಗಳಿಗೆ ಅನ್ವಯವಾಗುವ ಕಾಯ್ದೆಯನ್ನು ಪರಿಶೀಲಿಸಲಾಗಿದೆ.
ಈ ಸಂಗತಿಗಳ ಗುಣಾವಗುಣಗಳನ್ನು ಪರಾಮರ್ಶಿಸಿ, ದಂಡ ಪ್ರಕ್ರಿಯೆ ಸಂಹಿತೆ ಕಲಂ 482 (ಭಾರತ ದಂಡ ಸಂಹಿತೆ ಕಲಂ 506, 306, ಆರ್/ಡಬ್ಲ್ಯು 34 ಐಪಿಸಿ) ಅಡಿಯಲ್ಲಿ ಆದೇಶ ಹೊರಡಿಸಿರುವುದು ಕಂಡು ಬರುತ್ತದೆ. ಹೀಗಿರುವಾಗ ಉಚ್ಚ ನ್ಯಾಯಾಲಯದ ಈ ಆದೇಶವು ಸರಕಾರದ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ಹೇಳಬಹುದಾಗಿರುತ್ತದೆ.
ಆದ್ದರಿಂದ ಉಚ್ಚ ನ್ಯಾಯಾಲಯದ ಈ ಆದೇಶದ ವಿರುದ್ಧ ಮೇಲ್ಮನವಿ ಪರಿಶೀಲನೆ ಅರ್ಜಿಯನ್ನು ಸರ್ವೋಚ್ಚ ನ್ಯಾಯಾಲಯದ ಮುಂದೆ ಸಲ್ಲಿಸಲು ಪ್ರಕರಣವು ಯೋಗ್ಯವಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿರುವುದು ಸರಿ ಇದೆ ಎಂದು ನನ್ನ ಅಭಿಪ್ರಾಯ. ಅಂತೆಯೇ ನಾನೂ ಕಾನೂನು ತಜ್ಞರ ಅಭಿಪ್ರಾಯದೊಂದಿಗೆ ಸಹಮತ ಹೊಂದಿದ್ದೇನೆ.
ನನ್ನ ಅಭಿಪ್ರಾಯದಲ್ಲೂ ಸಹ ಉಚ್ಚ ನ್ಯಾಯಾಲಯದ ಆದೇಶವು ಮೇಲ್ಮನವಿಗೆ ಯೋಗ್ಯವಲ್ಲ ಎಂದು ತೀರ್ಮಾನಿಸಿದ್ದೇನೆ. ಆದೇಶವು ಮೇಲ್ಮನವಿಗೆ ಯೋಗ್ಯವಲ್ಲ ಎಂದು ಸರಕಾರದ ಪತ್ರ ಹೊರಡಿಸಲು ಮತ್ತು ಕಡತವನ್ನು ಮುಕ್ತಾಯಗೊಳಿಸಲು ಆದೇಶಿಸಿದ್ದೇನೆ ಎಂದು ಉಪ ಕಾರ್ಯದರ್ಶಿ ಅನಿತಾ ಎಚ್.ವಿ. ಅವರು ಟಿಪ್ಪಣಿ ಹಾಳೆಯಲ್ಲಿ ೨೦೨೩ರ ಸೆ.೨೦ರಂದೇ ಷರಾ ಬರೆದಿದ್ದಾರೆ.
ಸಿದ್ದರಾಮಯ್ಯ ಅವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾದ ನಂತರ ನಾಲ್ಕೇ ನಾಲ್ಕು ತಿಂಗಳಲ್ಲಿ ಈ ಆದೇಶ ಹೊರಬಿದ್ದಿತ್ತು. ಗೃಹ ಇಲಾಖೆಯಡಿಯಲ್ಲಿರುವ ಪ್ರಾಸಿಕ್ಯೂಷನ್ ಇಲಾಖೆಯು 2023ರ ಸೆ.22ರಂದು ಹೊರಡಿಸಿತ್ತು.
ಅಭಿಯೋಜನಾ ಇಲಾಖೆ ಮಾತ್ರವಲ್ಲ, ಸರಕಾರಿ ವಕೀಲರು ಸಹ ಮೇಲ್ಮನವಿ ಸಲ್ಲಿಸಲು ಯೋಗ್ಯ ಪ್ರಕರಣವಲ್ಲ ಎಂದು ಅಭಿಪ್ರಾಯಿಸಿದ್ದರು. ಸರಕಾರಿ ವಕೀಲರ ಅಭಿಪ್ರಾಯವನ್ನೇ ಎತ್ತಿ ಹಿಡಿದಿದ್ದ ಸರಕಾರವು ಈ ಸಂಬಂಧ ಆದೇಶವನೂ (HD/11172/HCP1/2023 (COMPUTER NUMBER 1182854) (3571/AG-G-CRL/23-24- Letter Number 3110/AG-CRL/23/24) C/W 7760/2018 HKCK-Bengaluru Shreemad Jagadguru Shankaracharya v/s state and anr) ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೈಜ ದೂರುದಾರರಾದ ಸಂಧ್ಯಾಲಕ್ಷ್ಮಿ ಎಂಬವರು ಉಚ್ಚ ನ್ಯಾಯಾಲಯದ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ (ಎಸ್ಎಲ್ಪಿ ಕ್ರಿಮಿನಲ್ ಅರ್ಜಿ ಸಂಖ್ಯೆ 4309-4310/2024) ಸಲ್ಲಿಸಿದ್ದಾರೆ. ಇದರಲ್ಲಿ ಕರ್ನಾಟಕ ಸರಕಾರವನ್ನು ಎರಡನೇ ಪ್ರತಿವಾದಿಯನ್ನಾಗಿಸಿದ್ದರು.
ಈ ಸಂಬಂಧ ಸುಪ್ರೀಂ ಕೋರ್ಟ್ ಕೂಡ ರಾಜ್ಯ ಸರಕಾರಕ್ಕೆ ೨೦೨೪ರ ಮಾರ್ಚ್ ೧೯ರಂದು ನೋಟಿಸ್ ಜಾರಿಗೊಳಿಸಿದೆ. ಈ ಪ್ರಕರಣವನ್ನು ಹಿರಿಯ ವಕೀಲ ಡಿ.ಎಲ್. ಚಿದಾನಂದ ಅವರಿಗೆ ವಹಿಸಿ ೨೦೨೪ರ ಎಪ್ರಿಲ್ ೫ರಂದು ಆದೇಶ ಹೊರಡಿಸಿತ್ತು. ಹೀಗಾಗಿ 2023ರ ಸೆ.22ರಂದು ಹೊರಡಿಸಿರುವ ಆದೇಶವನ್ನು ಪುನರಾವಲೋಕಿಸಬೇಕು ಮತ್ತು 2023ರ ಎಪ್ರಿಲ್ 20ರಂದು ಹೈಕೋರ್ಟ್ ನೀಡಿರುವ ಆದೇಶದ ವಿರುದ್ಧ ಸರ್ವೋಚ್ಚ ನ್ಯಾಯಾಲಯಕ್ಕೆ ಎಸ್ಎಲ್ಪಿ ಪರ ವಹಿಸಿಕೊಳ್ಳುವುದು ನ್ಯಾಯಸಮ್ಮತವಾಗಿದೆ ಎಂದು ಅಧಿಕಾರಿಗಳು ಅಭಿಪ್ರಾಯ ಸಲ್ಲಿಸಿದ್ದರು.
ಆದರೆ ಅಭಿಯೋಜನಾ ಇಲಾಖೆಯು ಇದುವರೆಗೂ ಈ ಸಂಬಂಧ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಬದಲಿಗೆ ೨೦೨೩ರ ಎಪ್ರಿಲ್ 24ರಂದು ಹೈಕೋರ್ಟ್ ಹೊರಡಿಸಿರುವ ಆದೇಶದ ಪ್ರಕರಣದಲ್ಲಿ ಸೂಕ್ತ ಆದೇಶಕ್ಕಾಗಿ ಇಲಾಖೆಯು ಕಡತ ಮಂಡಿಸಿತ್ತು.