ಕಲಿತ ಅಂಗಣದಲ್ಲೇ ಕೋಚಿಂಗ್ ಮಾಡುತ್ತಿ ರುವ ಫುಟ್ಬಾಲ್ ಆಟಗಾರ ಸಿರಾಜ್
ಮಡಿಕೇರಿ,ಜ.2: ಕೊಡಗು ಜಿಲ್ಲೆಯ ಅಪ್ರತಿಮ ಕಾಲ್ಚೆಂಡು ಪಟುಗಳಲ್ಲಿ ಒಬ್ಬರಾದ ಅಮ್ಮತ್ತಿಯ ಎ.ಎಸ್.ಸಿರಾಜ್ ಅವರು, ಅತ್ಯುತ್ತಮ ಫುಟ್ಬಾಲ್ ಆಟಗಾರ. ಅವರು ಬರೀ ಫುಟ್ಬಾಲ್ ಆಟಕ್ಕೆ ಸೀಮಿತವಾಗದೆ,ಫುಟ್ಬಾಲ್ ತರಬೇತಿಯೂ ನೀಡುತ್ತಿದ್ದಾರೆ.
ಜ.3ರಂದು ಪಂಜಾಬ್‌ನಲ್ಲಿ ನಡೆಯಲಿರುವ ಆಲ್ ಇಂಡಿಯಾ ಇಂಟರ್ ಯೂನಿವರ್ಸಿಟಿ ಫುಟ್ಬಾಲ್ ಚಾಂಪಿ ಯನ್‌ಶಿಪ್‌ನಲ್ಲಿ ಕೊಡಗಿನ ಆಟಗಾರರ ನ್ನೊಳಗೊಂಡ ಮಂಗಳೂರು ವಿಶ್ವವಿದ್ಯಾನಿಲಯ ಪುರುಷರ ಫುಟ್ಬಾಲ್ ತಂಡದ ಕೋಚ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೇ ಮೊದಲ ಬಾರಿಗೆ ಮಂಗಳೂರು ವಿಶ್ವವಿದ್ಯಾನಿ ಲಯವು ಆಲ್ ಇಂಡಿಯಾ ಇಂಟರ್ ಯೂನಿ ವರ್ಸಿಟಿ ಫುಟ್ಬಾಲ್ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆದಿದೆ.
ಕೊಡಗಿನ ತಡೆಗೋಡೆ ಖ್ಯಾತಿಯ ಆಟಗಾರ ಸಿರಾಜ್:
ಎ.ಎಸ್. ಸಿರಾಜ್ ಕೊಡಗಿನ ಫುಟ್ಬಾಲ್‌ನಲ್ಲಿ ಕೊಡಗಿನ ತಡೆಗೋಡೆ ಎಂದೇ ಹೆಸರುವಾಸಿಯಾಗಿದ್ದಾರೆ. ಎದುರಾಳಿ ತಂಡ ಎಷ್ಟೇ ಬಲಿಷ್ಠವಾಗಿದ್ದರೂ ಸಿರಾಜ್ ಅವರು ಡಿಫೆಂಡರ್ ಆಗಿದ್ದರೆ,ಗೋಲುಗಳಿಸುವುದು ಕಷ್ಟಸಾಧ್ಯ.
ಫುಟ್ಬಾಲ್ ಆಟದಲ್ಲಿ ಎದುರಾಳಿ ತಂಡದ ಆಟಗಾರರೂ ಸಿರಾಜ್ ಅವರ ಬಳಿಯಿಂದ ಅಗತ್ಯ ಸಲಹೆಗಳನ್ನು ಪಡೆಯುತ್ತಿದ್ದರು. ಒಬ್ಬ ಡಿಫೆಂಡರ್ ಆಗಿ ಕೊಡಗಿನಲ್ಲಿ ನಡೆದ ಫುಟ್ಬಾಲ್ ಪಂದ್ಯಾವಳಿಗಳಲ್ಲಿ ಸಿರಾಜ್ ಅವರು ಗೋಲುಗಳಿಸಿದೆ ಇರುತ್ತಿರಲಿಲ್ಲ.
ಮೂರು ಬಾರಿ ಮಂಗಳೂರು ವಿವಿ ಪ್ರತಿನಿಧಿಸಿದ್ದ ಆಟಗಾರ:
ಸಿರಾಜ್ ಅವರು ಮೂರು ಬಾರಿ ಮಂಗಳೂರು ವಿಶ್ವವಿದ್ಯಾನಿಲಯದ ಪುರುಷರ ಫುಟ್ಬಾಲ್ ತಂಡವನ್ನು ಪ್ರತಿನಿಧಿಸಿದ್ದಾರೆ. ಇದೀಗ ಅದೇ ವಿವಿಯ ಪುರುಷರ ಫುಟ್ಬಾಲ್ ತಂಡದ ತರಬೇತುದಾರನಾಗಿ ಕಾರ್ಯನಿರ್ವಹಿಸುತ್ತಿರುವುದು ಯುವ ಫುಟ್ಬಾಲ್ ಆಟಗಾರರಿಗೆ ಮಾದರಿಯಾಗಿದ್ದಾರೆ.
ವೀರಾಜಪೇಟೆ ತಾಲೂಕಿನ ಅಮ್ಮತ್ತಿಯ ಸಕೀರ್ ಹಾಗೂ ಸುಹರ ದಂಪತಿಯ ಮಗನಾದ ಎ.ಎಸ್. ಸಿರಾಜ್, ಅಮ್ಮತ್ತಿಯ ಸರಕಾರಿ ಶಾಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಪಡೆದು,ಗೋಣಿಕೊಪ್ಪಲಿನ ಕಾವೇರಿ ಕಾಲೇಜಿನಲ್ಲಿ ಪಿಯುಸಿ ಹಾಗೂ ಪದವಿ ವಿದ್ಯಾಭ್ಯಾಸವನ್ನು ಪಡೆದಿದ್ದಾರೆ.
ನಂತರ ಮಂಗಳೂರಿನ ಮೂಡಬಿದಿರೆಯ ಆಳ್ವಾಸ್ ಕಾಲೇಜಿನಲ್ಲಿ ಪಿ.ಪೆಡ್ ಶಿಕ್ಷಣವನ್ನು ಪಡೆದು, ಕೊಣಾಜೆಯ ಮಂಗಳೂರು ವಿವಿನಲ್ಲಿ ಎಂ.ಪೆಡ್ ಶಿಕ್ಷಣವನ್ನು ಪೂರ್ಣಗೊಳಿಸಿದ್ದಾರೆ. ದೂರ ಶಿಕ್ಷಣದ ಮೂಲಕ ಕುವೆಂಪು ವಿಶ್ವವಿದ್ಯಾನಿಲಯದಿಂದ ಎಂ.ಕಾಮ್ ಪದವಿಯನ್ನೂ ಸಿರಾಜ್ ಅವರು ಪಡೆದಿದ್ದಾರೆ.
ಮಂಗಳೂರು ವಿವಿ ಮಹಿಳಾ ತಂಡದ ತರಬೇತು ದಾರನಾಗಿಯೂ ಸಿರಾಜ್ ಕಾರ್ಯನಿರ್ವಹಿಸಿದ್ದಾರೆ. ಅಖಿಲ ಭಾರತ ಫುಟ್ಬಾಲ್ ಸಂಸ್ಥೆಯಿಂದ ಡಿ-ಲೈಸನ್ಸ್ ತರಬೇತಿಯನ್ನು ಪಡೆದು,ಉತ್ತೀರ್ಣರಾಗಿದ್ದಾರೆ.
ಗುಜರಾತ್‌ನಲ್ಲಿ ನಡೆದ ಸೀನಿಯರ್ ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸಿ,ರನ್ನರ್ಸ್ ಪ್ರಶಸ್ತಿಯನ್ನು ಪಡೆದಿದ್ದಾರೆ.
ಕೊಡಗು ಮಾತ್ರವಲ್ಲದೆ ಕರ್ನಾಟಕದ ವಿವಿಧ ಫುಟ್ಬಾಲ್ ತಂಡದಲ್ಲಿ ಆಡಿ ಅನುಭವವಿರುವ ಎ.ಎಸ್. ಸಿರಾಜ್ ಅವರು ಕೇರಳದ ಕಣ್ಣೂರಿನ ಪ್ರತಿಷ್ಠಿತ ಕಣ್ಣೂರು ಲೀಗ್‌ನಲ್ಲಿ ಕಣ್ಣೂರು ಯುನೈಟೆಡ್ ತಂಡವನ್ನೂ ಪ್ರತಿನಿಧಿಸಿದ್ದಾರೆ.
ಮಿಲನ್ಸ್ ಫುಟ್ಬಾಲ್ ಕ್ಲಬ್ ಮೂಲಕ ಬೆಳೆದು ಬಂದ ಆಟಗಾರ:
ಸಿರಾಜ್ ಅವರು ಕೊಡಗಿನ ಪ್ರತಿಷ್ಠಿತ ಫುಟ್ಬಾಲ್ ಕ್ಲಬ್‌ಗಳಲ್ಲಿ ಒಂದಾದ ಅಮ್ಮತ್ತಿಯ ಮಿಲನ್ಸ್ ಫುಟ್ಬಾಲ್ ಕ್ಲಬ್ ಮೂಲಕ ಬೆಳೆದು ಬಂದ ಆಟಗಾರ. ಬಾಲ್ಯದಿಂದಲೇ ಸಿರಾಜ್ ಅವರು ಮಿಲನ್ಸ್ ಫುಟ್ಬಾಲ್ ಕ್ಲಬ್ ಪರವಾಗಿ ಹಲವಾರು ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರಶಸ್ತಿ ಗೆದ್ದಿದ್ದಾರೆ.
ಬಾಲ್ಯದಿಂದಲೇ ಮಿಲನ್ಸ್ ಫುಟ್ಬಾಲ್ ಕ್ಲಬ್‌ನಲ್ಲಿ ಹಲವಾರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸುತ್ತಿದ್ದೆ. ಮಿಲನ್ಸ್ ಫುಟ್ಬಾಲ್ ಕ್ಲಬ್‌ನ ಪ್ರತಿಯೊಬ್ಬ ಸದಸ್ಯರಿಗೂ ನಾನು ಅಭಾರಿಯಾಗಿರುವೆ. ಕುಟುಂಬ ಸದಸ್ಯರ ಪ್ರೋತ್ಸಾಹ ಹಾಗೂ ,ಸಹೋದ್ಯೋಗಿಗಳ ಸಹಕಾರದಿಂದ ಮಂಗಳೂರು ವಿವಿಯ ಪುರುಷರ ತಂಡಕ್ಕೆ ತರಬೇತಿ ನೀಡಿ, ಮೊದಲ ಬಾರಿಗೆ ಆಲ್ ಇಂಡಿಯಾ ಇಂಟರ್ ವಿವಿ ಚಾಂಪಿಯನ್‌ಶಿಪ್‌ಗೆ ಅರ್ಹತೆ ಪಡೆಯಲು ಸಾಧ್ಯವಾಯಿತು.
-ಎ.ಎಸ್. ಸಿರಾಜ್ ಅಮ್ಮತ್ತಿ,
ಮಂಗಳೂರು ವಿವಿ ಫುಟ್ಬಾಲ್
ತರಬೇತುದಾರ.