ಅವಾಸ್ತವಿಕ ಚಿತ್ರಣದ ಮೂಲಕ ದ್ವೇಷದ ಹರಡುವಿಕೆ
ಇತಿಹಾಸ ಪಾಠಗಳ ಮೇಲೆ ಕೇಸರಿ ಛಾಯೆ
ಹಿಂದುತ್ವವಾದಿಗಳ ಸಾಮಾಜಿಕ ಮತ್ತು ರಾಜಕೀಯ ಗುರಿಗಳನ್ನು ಒಟ್ಟಾಗಿ ನೋಡಿದರೆ ಅವರ ಮನಸ್ಸಿನಲ್ಲಿ ಇರುವ ಭವಿಷ್ಯದ ಚಿತ್ರಣವನ್ನು ಕಾಣಬಹುದಾಗಿದೆ. ಅದು ಹಿಂದೂ ಸಮಾಜ ಅಡಿಪಾಯದ ಮೇಲೆ ನಿಂತಿರುವ ಸೂಪರ್ ಪವರ್ ಭಾರತ. ಹಿಂದೂ ಸಾಮಾಜಿಕ ತಳಹದಿಯು ಮಧ್ಯಕಾಲೀನ ಜಾತಿ ವ್ಯವಸ್ಥೆಯಲ್ಲ. ಹಳೆಯ ಜಾತಿ ಪದ್ಧತಿಯ ಆಧಾರದ ಮೇಲೆ ಆಧುನಿಕ ಮಹಾಶಕ್ತಿಯನ್ನು ಕಟ್ಟುವುದು ಸಾಧ್ಯವಿಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಮೇಲಾಗಿ, ಬಂಡವಾಳಶಾಹಿ ವ್ಯವಸ್ಥೆ ಒದಗಿಸಬಹುದಾದ ಸಂಪತ್ತು ಅವರಿಗೆ ಯಾವ ಮಾತ್ರಕ್ಕೂ ಕಹಿಯಾಗಿಲ್ಲ. ಅದಕ್ಕಾಗಿಯೇ ಅವರಿಗೆ ಜಾಗತೀಕರಣ, ಹಣಕಾಸು ತಂತ್ರಜ್ಞಾನ ವ್ಯವಸ್ಥೆಗಳು ಮತ್ತು ಅದಕ್ಕೆ ಹೊಂದಿಕೊಳ್ಳುವ ಪ್ರಕ್ರಿಯೆಗಳು ಬೇಕಾಗುತ್ತವೆ. ಅದರಲ್ಲಿ ವಿದೇಶಿ ದ್ವೇಷವೇನೂ ಇಲ್ಲ. ಆದರೆ ಸಾಮಾಜಿಕ ಜೀವನವು ಹಿಂದೂ ಮೌಲ್ಯಗಳನ್ನು ಆಧರಿಸಿರಬೇಕು. ಅವು ಕೂಡ ಚೆನ್ನಾಗಿ ಅಂಟಿಕೊಳ್ಳುತ್ತವೆ ಕೂಡ. ತಾಂತ್ರಿಕ ಆಧುನಿಕತೆ, ಏಣಿಶ್ರೇಣಿಯ ಹಿಂದೂ ಸಾಮಾಜಿಕ ಮೌಲ್ಯಗಳು, ಸೂಪರ್ ಪವರ್ ಸ್ಥಾನಮಾನ - ಇದು ಸಂಘ ಪರಿವಾರದ ಕಲ್ಪನೆಯ ಭಾರತ. ಆಧ್ಯಾತ್ಮದ ಬಗ್ಗೆ ಇವರು ಎಷ್ಟೇ ಮಾತಾಡಿದರೂ ಅವರ ಗುರಿ ಮಾತ್ರ ಇದೇ.
ಅದನ್ನು ಕಟ್ಟಲು ಬೇಕಾಗಿರುವುದು ದ್ವೇಷ, ಅಸಹಿಷ್ಣುತೆ, ಹಿಂಸೆ, ದೌರ್ಜನ್ಯ. ಆ ಮೌಲ್ಯಗಳಿಂದ ತುಂಬಿದ ದೇಶಪ್ರೇಮ ಮತ್ತು ರಾಷ್ಟ್ರೀಯವಾದವನ್ನು ಯುವಕರಲ್ಲಿ ಬೆಳೆಸಬೇಕು. ಆದ್ದರಿಂದ, ಅವರು ಪುನಃ ಬರೆಯಲು ಬಯಸುವ ಇತಿಹಾಸದಲ್ಲಿ, ಅವರು ದ್ವೇಷ, ಅಸಹಿಷ್ಣುತೆ ಮತ್ತು ವಿವೇಚನಾರಹಿತ ಶಕ್ತಿಯನ್ನು ಮಾತ್ರ ನೋಡಬೇಕು. ಅವರು ಭಾರತ ಎಂದು ಭಾವಿಸುವ ಪ್ರದೇಶಕ್ಕೆ ಹೊರಗಿನಿಂದ ಬಂದವರು, ಅವರು ಕೇವಲ ದ್ವೇಷದಿಂದ ಬಂದರು, ಅವರು ದಬ್ಬಾಳಿಕೆ ಮಾಡಲಿಕ್ಕಾಗಿ ಬಂದರು. ಇಲ್ಲಿನ ಜನರು ಅವರನ್ನು ದ್ವೇಷದಿಂದ ಎದುರಿಸಿದರು. ಅವರನ್ನು ಬಲವಂತದಿಂದ ಹೊರಹಾಕಲಾಯಿತು. ಅವರು ಇಲ್ಲಿನ ಜೀವನಕ್ಕೆ ಏನನ್ನೂ ಕೊಟ್ಟಿಲ್ಲ, ಏನನ್ನೂ ಪಡೆದುಕೊಂಡಿಲ್ಲ. ಇಲ್ಲಿನ ಜನರು ಅವರಿಗೆ ಕೊಟ್ಟಿದ್ದೂ ಇಲ್ಲ, ತೆಗೆದುಕೊಂಡಿದ್ದೂ ಇಲ್ಲ.
ಈ ಅವಾಸ್ತವಿಕ ಚಿತ್ರಣವನ್ನು ಯುವಕರಿಗೆ ನೀಡುವುದು ಸಂಘಪರಿವಾರದ ಗುರಿಗೆ ಅಗತ್ಯವಾದ ದ್ವೇಷವನ್ನು ಹುಟ್ಟುಹಾಕಲು ಅವಶ್ಯಕವಾಗಿದೆ. ಅದು ಸುಳ್ಳು ಎಂದು ಗೊತ್ತಿದ್ದೂ ಕೊಡುತ್ತಿದ್ದಾರೆ ಎಂದಲ್ಲ. ಅವರ ಮನಸ್ಸು ಈ ವಿಕಾರದಿಂದ ತುಂಬಿಕೊಂಡಿದೆ. ಇಸ್ಲಾಮ್ ಧರ್ಮದ ಹರಡುವಿಕೆಯನ್ನು ಕುತ್ತಿಗೆ ಮೇಲೆ ಖಡ್ಗವಿರಿಸಿ ನಡೆಸಿದ ಮತಾಂತರದ ಮೂಲಕ ಮಾಡಲಾಯಿತು ಎಂಬುದು ಅಂತಹ ಒಂದು ಸುಳ್ಳು. ಅದನ್ನು ಕೇಳಿದಷ್ಟು, ನಂಬಿದಷ್ಟೂ ಹಿಂದೂಗಳಾಗಿ ಹುಟ್ಟಿದ ಯುವಕರ ಮನಸ್ಸಿನಲ್ಲಿ ದ್ವೇಷ ತುಂಬುತ್ತದೆ. ಮುಸಲ್ಮಾನರ ವಿರುದ್ಧ ಪ್ರಾರಂಭವಾಗುವ ದ್ವೇಷವು ಸಾಮಾನ್ಯ ದ್ವೇಷವಾಗಿ ಬದಲಾಗಬಹುದು ಮತ್ತು ಉಳಿದುಬಿಡಲ್ಲದು. ಅದನ್ನು ಸಾಧಾರಣ ದ್ವೇಷ ಪ್ರಜ್ಞೆಯಾಗಿ ಸದಾ ಮುಂದುವರಿಸುವುದು ಸಂಘಪರಿವಾರದ ಗುರಿಗಳಿಗೆ ಅತ್ಯಗತ್ಯ. ಅದಕ್ಕೇ ಮುಸ್ಲಿಮರ ವಿರುದ್ಧ ಆರಂಭವಾದ ದ್ವೇಷ ಅಭಿಯಾನವನ್ನು ಕ್ರಿಶ್ಚಿಯನ್ ಧರ್ಮದ ವಿರುದ್ಧ ತಿರುಗಿಸಲಾಯಿತು. ಹಿಂದುತ್ವದ ಪ್ರಚಾರವು ಧಾರ್ಮಿಕ ಅಲ್ಪಸಂಖ್ಯಾತರು ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ದಬ್ಬಾಳಿಕೆಗೆ ಬಲಿಯಾದ ಜನರ ಆಕಾಂಕ್ಷೆಗಳ ವಿರುದ್ಧ ಸಾರ್ವತ್ರಿಕ ಪ್ರತಿಭಟನೆಯನ್ನು ಯಾವಾಗಲೂ ಹೊತ್ತಿಸುತ್ತದೆ.
ಕಷ್ಟದ ಸಮಯದಲ್ಲಿ ಸಾಂತ್ವನ ನೀಡುವ ರಕ್ಷಕನೆಂಬ ದೇವರ ಕಲ್ಪನೆಯು ಇತಿಹಾಸದಲ್ಲಿ ಈ ಹಿಂದೆಯೂ ಕೂಡ ವೇಗವಾಗಿ ಹರಡಿದೆ. ಈ ರೀತಿಯ ದೈವತ್ವ ಭಾವನೆಯ ಮೂಲಕವೇ ಎಲ್ಲಾ ಧರ್ಮಗಳು ಸಾಮಾನ್ಯ ಜನರಲ್ಲಿ ಹೆಚ್ಚು ಜನಪ್ರಿಯತೆಯನ್ನು ಗಳಿಸಿವೆ. ಈ ಪರಿಕಲ್ಪನೆಯಲ್ಲಿ ದ್ವೇಷಕ್ಕೆ ಕಡಿಮೆ ಅವಕಾಶವಿದೆ. ಆದಾಗ್ಯೂ, ಪರಮತ ದ್ವೇಷದ ಭಾವನೆ ಸಾಮಾನ್ಯ ಜನರಲ್ಲಿ ಇರಲಿಲ್ಲವೆಂದಲ್ಲ. ಅದರ ಕಾರಣಗಳನ್ನು ವಿಶ್ಲೇಷಿಸುವುದಕ್ಕೆ ಇದು ಸಂದರ್ಭವಲ್ಲ. ಆದರೆ ದ್ವೇಷವೇ ಏಕೈಕ ಭಾವನೆಯಲ್ಲ ಎಂಬುದನ್ನು ಗುರುತಿಸುವುದು ಮುಖ್ಯ. ಸಂಘಪರಿವಾರದ ಇತಿಹಾಸಕಾರರು ಈ ಸತ್ಯವನ್ನು ಒಪ್ಪಿಕೊಳ್ಳಲು ಇಷ್ಟಪಡುವುದಿಲ್ಲ.
ಸಂಘ ಪರಿವಾರದ ಒರಟು ಬರವಣಿಗೆಯ ಪ್ರಕಟಣೆಗಳು ಮಾತ್ರವಲ್ಲದೆ, ವಿದ್ವತ್ಪೂರ್ಣ ಭಾರತೀಯ ವಿದ್ಯಾಭವನವು ಪ್ರಕಟಿಸಿದ ಬಹು-ಸಂಪುಟಗಳ ‘ಭಾರತದ ಜನರ ಇತಿಹಾಸ, ಸಂಸ್ಕೃತಿ’ ಎಂಬ ಬಹು ಸಂಪುಟಗಳ ಉದ್ಗ್ರಂಥ ನೀಡುವ ಐತಿಹಾಸಿಕ ತಿಳುವಳಿಕೆಯೂ ಇದೇ ಆಗಿದೆ. ಇಸ್ಲಾಮ್ ಮತ್ತು ಹಿಂದೂ ಧರ್ಮಗಳು ಉತ್ತರ-ದಕ್ಷಿಣ ಧ್ರುವಗಳು, ಸಹಬಾಳ್ವೆ ಸಾಧ್ಯವಿಲ್ಲ ಎಂಬ ದೃಷ್ಟಿಕೋನವನ್ನು ವಿದ್ಯಾವಂತರಲ್ಲಿ ಪ್ರಚಾರ ಮಾಡುವಲ್ಲಿ, ಅದರ ಸಂಪಾದಕ, ಖ್ಯಾತ ಇತಿಹಾಸಕಾರ ಆರ್.ಸಿ. ಮಜುಂದಾರ್ ಅವರು ಬಿಡಿ ಬಿಡಿಯಾಗಿ ಬರೆದ ಕೃತಿಗಳು ವಿಶೇಷವಾದ ಪಾತ್ರವನ್ನು ವಹಿಸಿದವು. ಮುಸ್ಲಿಮ್ ರಾಜರ ಆಳ್ವಿಕೆಯು ಭಾರತೀಯ ಇತಿಹಾಸದಲ್ಲಿ ಕರಾಳ ಯುಗ ಎಂಬ ಅಭಿಪ್ರಾಯವೂ ಈ ಪ್ರಕಟಣೆಗಳಿಂದ ಜನಪ್ರಿಯವಾಯಿತು. ಪ್ರಸಕ್ತ ಪಠ್ಯಪುಸ್ತಕಗಳು ಈ ದೃಷ್ಟಿಕೋನವನ್ನು ಬೋಧಿಸುತ್ತಿಲ್ಲ ಎಂದು ಸಂಘಪರಿವಾರ ಅತೃಪ್ತಿ ಹೊಂದಿದೆ. ಅದನ್ನು ಮಾರ್ಪಡಿಸುವುದು ಅವರ ಆಸೆ. ಆ ಆಸೆಯ ಫಲ ಹೇಗಿರುತ್ತದೆಂಬುದನ್ನು ಕಾಣಬೇಕಾದರೆ ಪಾಕಿಸ್ತಾನದ ಶಾಲಾ-ಕಾಲೇಜು ಮಕ್ಕಳಿಗೆ ಹೇಗೆ ಇತಿಹಾಸದ ಪಾಠ ಹೇಳಿಕೊಡುತ್ತಾರೆ ಎಂಬುದನ್ನು ನೋಡಿದರೆ ಸಾಕು ಎಂದು ಇತಿಹಾಸಕಾರರೊಬ್ಬರು ವ್ಯಂಗ್ಯವಾಗಿ ಹೇಳಿದ್ದು ಅಕ್ಷರಶಃ ಸತ್ಯ. ಅಲ್ಲಿ ಅದೇ ದೃಷ್ಟಿಕೋನವನ್ನು (ಇನ್ನೊಂದು ಕೋನದಿಂದ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ) ಈಗಲೂ ಕಾರ್ಯಗತಗೊಳಿಸಲಾಗುತ್ತಿದೆ.
ಆದರೆ ವಾಸ್ತವವಾಗಿ ಬ್ರಾಹ್ಮಣರು ಮತ್ತು ಇತರ ಯಜಮಾನಿಕೆಯ ಜಾತಿಗಳ ವಿಷಯ ಹೇಗೇ ಇರಲಿ, ಶ್ರಮಿಕ ಜಾತಿಗಳಿಗೆ ಇಸ್ಲಾಮ್ ವಿರೋಧಿಗಳಾಗುವ ಅಗತ್ಯವೇನೂ ಇಲ್ಲ. ಮೊದಲು ಇಸ್ಲಾಮ್, ನಂತರ ಕ್ರಿಶ್ಚಿಯನ್ ಧರ್ಮವು ಜಾತಿ ಕಾರಣದಿಂದ ಘನೀಕೃತಗೊಂಡಿದ್ದ ಹಿಂದೂ ಸಾಮಾಜಿಕ ವ್ಯವಸ್ಥೆಯನ್ನು ಸ್ವಲ್ಪಮಟ್ಟಿಗಾದರೂ ಪ್ರಜಾತಾಂತ್ರಿಕಗೊಳಿಸಲು ಸಹಾಯ ಮಾಡಿದವು. ಅದು ಹೇಗೆ ಕರಾಳ ಯುಗವಾಗುತ್ತದೆ ಎಂಬುದನ್ನು ಆ ಪದ ಬಳಸುವವರೇ ಹೇಳಬೇಕು.
ಇಂದಿನ ‘ಜಾತ್ಯಾತೀತ’ ಪಠ್ಯಪುಸ್ತಕಗಳು ಕೂಡ ಹಿಂದೂ ಜಾತಿ ವ್ಯವಸ್ಥೆಯು ನಡೆಸುತ್ತಿದ್ದ ದಬ್ಬಾಳಿಕೆಯನ್ನು ಸಡಿಲಿಸುವಲ್ಲಿ ಇಸ್ಲಾಮ್ ಪಾತ್ರವನ್ನು ವಹಿಸಿದೆ ಎಂದು ಹೇಳಲು ವಿಫಲವಾಗಿದೆ. ಆ ದೃಷ್ಟಿಕೋನವು ಇನ್ನೂ ಐತಿಹಾಸಿಕ ಸಂಶೋಧಕರು ಓದುವ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ. ಈ ವಿಷಯದಲ್ಲಿ ಮಾತ್ರವಲ್ಲ, ಹಿಂದುತ್ವವಾದಿಗಳ ದೃಷ್ಟಿಕೋನಕ್ಕೆ ಹೋಲಿಸಿದರೆ ಧರ್ಮ ನಿರಪೇಕ್ಷ ಎಂದು ತೋರುವ ಪ್ರಸಕ್ತ ಶಿಕ್ಷಣ ವ್ಯವಸ್ಥೆಯ ಲೌಕಿಕ ತಿಳುವಳಿಕೆಯು ಯಾವುದೇ ವಿಷಯದಲ್ಲಿ ಬ್ರಾಹ್ಮಣೀಯತೆಯನ್ನು ಬಹಿರಂಗವಾಗಿ ಟೀಕಿಸುವುದಿಲ್ಲ ಅಥವಾ ವಿರೋಧಿಸುವುದಿಲ್ಲ. ಅಸ್ಪೃಶ್ಯತೆಯಂತಹ ಗಂಭೀರವಾದ ಅನಿಷ್ಟಗಳನ್ನು ಟೀಕಿಸುವುದಕ್ಕೆ ಮಾತ್ರ ಅದು ಸೀಮಿತವಾಗಿದೆ. ಧರ್ಮನಿರಪೇಕ್ಷತೆಯ ಮಿತಿಯೇ ಹೀಗಾದರೆ ಸಂಘಪರಿವಾರದ ದೃಷ್ಟಿಕೋನವನ್ನೇ ಪಠ್ಯಪುಸ್ತಕಗಳನ್ನು ಅಳವಡಿಸಿಕೊಂಡರೆ ಏನಾಗಬಹುದು ಎಂದು ಊಹಿಸುವುದು ಕಷ್ಟವೇನಲ್ಲ.
ಶ್ರಮಿಕ ಜಾತಿಗಳಲ್ಲಿಯೂ ಸಹ ಕುಶಲಕರ್ಮಿಗಳು ಕೃಷಿಕರಿಗಿಂತ ಇಸ್ಲಾಮಿನತ್ತ ಹೆಚ್ಚು ಆಕರ್ಷಿತರಾಗಿದ್ದರು. ಇದಕ್ಕೆ ಕಾರಣವೇನು ಎಂದು ಯಾರಾದರೂ ಪರಿಶಿಲನೆ ನಡೆಸಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ಹಿಂದುತ್ವ ಇತಿಹಾಸಕಾರರು ‘ಮುಸ್ಲಿಮ್ ಯುಗ’ ಎಂದು ಕರೆಯುವ ಸಮಯದಲ್ಲಿ ನಗರ ಕೃಷಿಯೇತರ ಉತ್ಪಾದನೆಯ ಅಭಿವೃದ್ಧಿಯೊಂದಿಗೆ ಇದು ಏನಾದರೂ ಸಂಬಂಧವನ್ನು ಹೊಂದಿರಬಹುದು. ಬಟ್ಟೆ, ರತ್ನಗಂಬಳಿಗಳು, ಇತರ ಜವಳಿ ಉತ್ಪನ್ನಗಳು, ಬಣ್ಣಗಳು, ಮನೆ-ಕಟ್ಟಡ ಮತ್ತು ಗೃಹೋಪಯೋಗಿ ವಸ್ತುಗಳ ಉತ್ಪಾದನೆಯು ದಿಲ್ಲಿ ಸುಲ್ತಾನರ ಕಾಲದಿಂದ ಗಮನಾರ್ಹ ಬೆಳವಣಿಗೆಯನ್ನು ಕಂಡಿತು. ಪಶ್ಚಿಮ ಏಶ್ಯದಿಂದ, ಇರಾನ್ನಿಂದ ಹೊಸ ತಾಂತ್ರಿಕ ಪ್ರಕ್ರಿಯೆಗಳು ಮತ್ತು ಪ್ರಯೋಗಗಳನ್ನು ಆಮದು ಮಾಡಿಕೊಳ್ಳಲಾಯಿತು. ದೊರೆಗಳು ಮುಸ್ಲಿಮರಾಗಿದ್ದರಿಂದ ಮತ್ತು ಅವರು ಆ ಪ್ರದೇಶಗಳಲ್ಲಿ ಸಂಪರ್ಕ ಹೊಂದಿದ್ದರಿಂದ, ಇದು ನಮ್ಮ ಆರ್ಥಿಕ ಜೀವನಕ್ಕೆ ಲಾಭದಾಯಕವಾಯಿತು. ವಿಭಿನ್ನ ಸಂಪ್ರದಾಯಗಳ ಸಮ್ಮಿಲನವು ವಾಸ್ತುಶಿಲ್ಪದಿಂದ ಸಂಗೀತ ಮತ್ತು ಚಿತ್ರಕಲೆಯವರೆಗೆ ಅನೇಕ ಕ್ಷೇತ್ರಗಳಲ್ಲಿ ಹೊಸತನವನ್ನು ತಂದಿದೆ. ದ್ವೇಷವನ್ನು ಬದಿಗಿಟ್ಟು ನೋಡುವುದಾದರೆ ವಿಭಿನ್ನ ಸಂಪ್ರದಾಯಗಳ ಸಮ್ಮಿಲನವು ನಾಗರಿಕತೆಗೆ- ಕೇವಲ ಭೌತಿಕವಾಗಿ ಅಲ್ಲ, ಆದರೆ ಕಲೆ, ಸಂಸ್ಕೃತಿ ಮತ್ತು ಚಿಂತನೆಯ ಕ್ಷೇತ್ರಗಳಲ್ಲಿ ಉಂಟು ಮಾಡಬಲ್ಲ ಒಳಿತು ಚೆನ್ನಾಗಿ ಕಾಣಿಸುತ್ತದೆ. ಈ ಪ್ರಭಾವವು ಧಾರ್ಮಿಕ ಮತ್ತು ತಾತ್ವಿಕ ಸಂಪ್ರದಾಯಗಳ ಮೇಲೂ ಇದೆ. 12ನೇ ಶತಮಾನದ ನಂತರ ಬಂದ ಭಕ್ತಿ ಚಳವಳಿಗಳಲ್ಲಿ ಬ್ರಾಹ್ಮಣೀಯ ಚಿಂತನೆಯ ವಿಧಾನಗಳ ವಿರುದ್ಧ ನಡೆದ ಪ್ರತಿಭಟನೆಯ ಮೇಲೆ ಇಸ್ಲಾಮ್ ಪ್ರಭಾವವಿದೆ. ಸಿಖ್ ಧರ್ಮವು ಕೆಲವು ವಿಷಯಗಳಲ್ಲಿ ಹಿಂದೂ ಧರ್ಮಕ್ಕೆ ಹತ್ತಿರವಾಗಿದ್ದರೂ, ಇಸ್ಲಾಮ್ ಧರ್ಮದ ಪ್ರಭಾವವೂ ಪ್ರಬಲವಾಗಿದೆ. ಆ ರೀತಿಯಲ್ಲಿ ನಾವು ಅನೇಕ ಸಂಪ್ರದಾಯಗಳ ಪ್ರದೇಶವಾಗಿರುವುದರಿಂದ ನಮ್ಮ ನಾಗರಿಕತೆಯು ಶ್ರೀಮಂತವಾಗಿದೆ. ಇದನ್ನೆಲ್ಲಾ ‘ಕತ್ತಲೆ’ಯಾಗಿ ಕಾಣುವವರ ಮಾನಸಿಕ ಕೊಳಕುಗಳಿಗೆ ಸಹಾನುಭೂತಿ ತೋರುವ ಔದಾರ್ಯದ ಕೊರತೆ ನಮಗೆ ಇರಬಾರದು, ಆದರೆ ಆ ಕೊಳಕುಗಳನ್ನು ಪಠ್ಯಕ್ರಮದಲ್ಲಿ ಸೇರಿಸಿ ಮಕ್ಕಳ ಮನಸ್ಸು, ಮೆದುಳು ಹಾಳು ಮಾಡುತ್ತಾರೆಂದರೆ ನೋಡುತ್ತಾ ಸುಮ್ಮನಿರಬಾರದು.
ಆಡಳಿತಾತ್ಮಕ ವ್ಯವಹಾರಗಳಲ್ಲಿ ಇಂದಿಗೂ ಗೋಚರಿಸುವ ಕೆಲವು ಬದಲಾವಣೆಗಳು ದಿಲ್ಲಿ ಸುಲ್ತಾನರ ಅವಧಿಯಲ್ಲಿ ಮತ್ತು ಮೊಗಲರ ಆಳ್ವಿಕೆಯಲ್ಲಿ ಬಂದವು. ಇದು ‘ಕರಾಳ ಯುಗ’ ಅಲ್ಲ ಎನ್ನುವುದಕ್ಕೆ ಇದೂ ಕೂಡ ಸಾಕ್ಷಿ. ಆಧುನಿಕ ‘ಕಲ್ಯಾಣ ರಾಜ್ಯ’ದ ಪರಿಕಲ್ಪನೆಯು ಅಸ್ತಿತ್ವಕ್ಕೆ ಬರುವವರೆಗೆ, ರಾಜ್ಯವು ಜನರೊಂದಿಗೆ ಮುಖ್ಯವಾಗಿ ಎರಡು ಸಂಬಂಧಗಳನ್ನು ಹೊಂದಿತ್ತು. ಒಂದು ತೆರಿಗೆ ಸಂಗ್ರಹಿಸುವುದು ಮತ್ತು ಎರಡು ಕಾನೂನು ಸುವ್ಯವಸ್ಥೆ ಕಾಪಾಡುವುದು. ಈ ಎರಡೂ ವಿಷಯಗಳು, ಸ್ವಲ್ಪಮಟ್ಟಿಗೆ ಕ್ರಮಬದ್ಧವನ್ನಾಗಿಸಿದ ರಾಜತ್ವವು ಒಳ್ಳೆಯದು, ಅವ್ಯವಸ್ಥಿತವಾಗಿ ನಡೆದುಕೊಂಡ ರಾಜತ್ವವು ಕೆಟ್ಟದು. (ಇವುಗಳು ಸಾಂದರ್ಭಿಕವಾಗಿ ಕೆರೆಗಳನ್ನು ತೋಡಿಸಿದ, ಮರಗಳನ್ನು ನೆಡಿಸಿದ, ರಸ್ತೆಗಳನ್ನು ನಿರ್ಮಿಸಿದ ಮತ್ತು ಛತ್ರಗಳನ್ನು ನಿರ್ಮಿಸಿದ ಸಾಮ್ರಾಜ್ಯಗಳು ಇಲ್ಲವೆಂದಲ್ಲ ಆದರೆ ಅವು ಅಪರೂಪವೇ).
ತೆರಿಗೆ ವಸೂಲಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡುವ ವ್ಯವಸ್ಥಿತ ಕಾರ್ಯವಿಧಾನ, ನಿಯಮಗಳಿಲ್ಲದೆ, ರಾಜನು ಆ ಅಧಿಕಾರವನ್ನು ತನ್ನ ಸಾಮಂತರಿಗೆ, ಜಾಗೀರದಾರರಿಗೆ ಮತ್ತು ನಾಯಕರಿಗೆ ಹಸ್ತಾಂತರಿಸುವುದು ಮತ್ತು ಅವರು ಅದನ್ನು ಮನಸೋಇಚ್ಛೆ ಬಳಸುವುದು ಒಂದು ನಮೂನೆಯಾದರೆ, ಎಲ್ಲವನ್ನೂ ವ್ಯವಸ್ಥಿತಗೊಳಿಸಿ ಕೆಲವು ನಿಯಮಗಳ ಪ್ರಕಾರ ಆ ಅಧಿಕಾರವನ್ನು ನಿರ್ವಹಿಸುವುದು ಒಂದು ಮಾದರಿಯಾಗಿದೆ. ಇದಕ್ಕಾಗಿಯೇ ಇಂಗ್ಲೆಂಡ್ನಲ್ಲಿ ‘ಮ್ಯಾಗ್ನಾ ಕಾರ್ಟಾ’ ಘೋಷಣೆಯಾಯಿತು. ನಮ್ಮ ದೇಶದಲ್ಲಿ ಅಂತಹ ಹಕ್ಕುಗಳ ಘೋಷಣೆ ನಡೆದಿಲ್ಲ. ಆದರೆ ರಾಜ್ಯವು ಸ್ವತಃ ಒಂದು ವ್ಯವಸ್ಥಿತ ರಚನೆಯನ್ನು ರಚಿಸಿಕೊಂಡಿತು. ಮೌರ್ಯರು ಪ್ರಾಚೀನ ಕಾಲದಲ್ಲಿ ಇದನ್ನು ಸ್ವಲ್ಪಮಟ್ಟಿಗೆ ಮಾಡಲು ಪ್ರಯತ್ನಿಸಿದರು. ಆದರೆ ಆನಂತರ ಅದು ಕಣ್ಮರೆಯಾಯಿತು. ಮತ್ತೆ ದಿಲ್ಲಿ ಸುಲ್ತಾನರಲ್ಲಿ ಒಬ್ಬರಾದ ಫಿರೋಝ್ ತುಘಲಕ್ ಆಳ್ವಿಕೆಯಲ್ಲಿ ರಚನಾತ್ಮಕ ಆಡಳಿತ ವ್ಯವಸ್ಥೆಯನ್ನು ಸ್ಥಾಪಿಸಲಾಯಿತು ಅದು ಶೇರ್ ಷಾ ಮತ್ತು ಅಕ್ಬರ್ ಆಳ್ವಿಕೆಯಲ್ಲಿ ಸ್ಥಿರ ರೂಪವನ್ನು ಪಡೆಯಿತು. ಬ್ರಿಟಿಷರು ಹೆಚ್ಚಿನ ಬದಲಾವಣೆಗಳಿಲ್ಲದೆ ಅದನ್ನು ಮುಂದುವರಿಸಿ ಸ್ವತಂತ್ರ ಭಾರತಕ್ಕೆ ನೀಡಿದರು. ಈ ಆಡಳಿತ ವ್ಯವಸ್ಥೆಯು (ಮುಖ್ಯವಾಗಿ ಕಂದಾಯ, ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆ) ನಮ್ಮ ಜೀವನದ ಒಂದು ಭಾಗವಾಗಿದೆ, ನಾವು ತೆಲುಗಿನಲ್ಲಿ (ತೆಲಂಗಾಣದಲ್ಲಿ ಮಾತ್ರವಲ್ಲದೆ ಆಂಧ್ರದಲ್ಲಿಯೂ ಸಹ) ಬಳಸುವ ಎಲ್ಲಾ ಪದಗಳು ಪರ್ಷಿಯನ್ ಮೂಲದ್ದಾಗಿವೆ. ತಾಸೀಲ್ದಾರ್, ಗುಮಾಸ್ತ, ಶಿಸ್ತು, ಅಮೀನ್, ಖರ್ಚು, ಕಿಸ್ತು, ತಕ್ಕಾವಿ, ಖಾರಿಫ್, ರಬಿ, ಫಸಲ್, ಮಾಫಿ ಇದಕ್ಕೆ ಕೆಲವು ಉದಾಹರಣೆಗಳಾಗಿವೆ. ಅಂತಿಮವಾಗಿ ಅಚ್ಚತೆಲುಗು ಪದ ಎಂದುಬಹಳ ಜನ ಭಾವಿಸುವ ‘ರೈತ’ ಎಂಬುದು ಕೂಡ, ಪರ್ಷಿಯನ್ ಭಾಷೆಯಿಂದ ಕಂದಾಯ ವ್ಯವಸ್ಥೆಯ ವ್ಯವಹಾರ ಭಾಷೆಯ ಮೂಲಕ ತೆಲುಗಿಗೆ ಆಮದಾದ ಪದವಾಗಿದೆ (ರೈತ ಎಂಬುದಕ್ಕೆ ಅಚ್ಚ ತೆಲುಗು ಪದ ಕಾಪು. ಅದು ನಂತರ ಒಂದು ಜಾತಿ ಸೂಚಕ ಪದವಾಯಿತು). ಹಿಂದೂಸ್ತಾನಿ ಸಂಗೀತದಿಂದ ತಹಶೀಲ್ ಕಚೇರಿಯವರೆಗೆ, ಉರ್ದು ಭಾಷೆಯಿಂದ ರತ್ನ ಕಂಬಳಿ ಉದ್ಯಮದವರೆಗೆ ‘ಅಂಧಕಾರ ಯುಗ’ ಎಂದು ಕರೆಯಲ್ಪಡುವ ಅವಧಿಯಲ್ಲಿ ಒಂದು ಶ್ರೀಮಂತ ಮಿಶ್ರ ಸಂಸ್ಕೃತಿಯು ರೂಪುಗೊಂಡಿತು. ಅದನ್ನು ನೋಡಲಾಗದೆ ಒಂದರೊಳಗೊಂದು ಬೆರೆಯಲಾಗದ-ಎಡಮುಖ ಬಲಮುಖ ಮಾತ್ರವೇ ಇರಬಲ್ಲ- ವಿಭಿನ್ನ ಸಂಸ್ಕೃತಿಗಳು ಪರಸ್ಪರ ಹೊಡೆದಾಡಿಕೊಂಡ ಕರಾಳ ಕಾಲವಾಗಿ ಮಾತ್ರವೇ ಆ ಕಾಲವನ್ನು ಆರ್.ಸಿ. ಮಜುಂದಾರ್ರಂತಹ ವಿದ್ಯಾವಂತ ಇತಿಹಾಸಕಾರರು ಹಿಂದುತ್ವ ಸಿದ್ಧಾಂತದ ಪ್ರಭಾವದಲ್ಲಿ ಭಾವಿಸಿಕೊಂಡರೆಂದರೆ, ಇನ್ನು ಅರೆ ನಿರಕ್ಷರಸ್ಥರಾದವರ ಕೈಯಲ್ಲಿ ಪಠ್ಯಪುಸ್ತಕಗಳ ಭವಿಷ್ಯವನ್ನು ಕೊಟ್ಟರೆ ಏನಾಗಬಹುದು ಎಂಬುದನ್ನು ಊಹಿಸಿಕೊಂಡರೆ ಭಯವಾಗುತ್ತದೆ.
ವೀರ ದೇಶಪ್ರೇಮವನ್ನೇ ಸಾಧನವಾಗಿ ಆರಿಸಿಕೊಂಡ ಹಿಂದುತ್ವವಾದಕ್ಕೆ ವೀರರ ಚರಿತ್ರೆಗಳು ಅವಶ್ಯಕ. ಇತಿಹಾಸದಲ್ಲಿ ವೀರರ ಹುಡುಕಾಟ ಅವಶ್ಯಕ. ಈಗಿನ ಶಿಕ್ಷಣ ವ್ಯವಸ್ಥೆಯು ‘ನಮ್ಮ’ ವೀರರನ್ನು ಮರೆತು ಯುವಕರನ್ನು ಅಶಕ್ತರನ್ನಾಗಿಸುತ್ತಿದೆ ಎಂದು ಅವರ ಆರೋಪ. ಇತಿಹಾಸದಿಂದ ಆದರ್ಶಗಳನ್ನು ಆಯ್ದುಕೊಳ್ಳುವುದರಲ್ಲಿ ತಪ್ಪೇನಿಲ್ಲ. ಯುವಕರಿಗೆ ಸರಿಯಾದ ಮೌಲ್ಯಗಳನ್ನು ಕಲಿಸುವುದಕ್ಕೆ ಅದು ಅಗತ್ಯ ಕೂಡ ಆಗಬಹುದು. ಆದರೆ ನಮಗೆ ‘ವೀರರು’ ಏಕೆ ಬೇಕು? ಭಾರತವನ್ನು ಭೌತಿಕ ಶಕ್ತಿಯನ್ನಾಗಿ ತಿದ್ದಿ ರೂಪಿಸುವ ಗುರಿಯಿದ್ದರೇನೇ ಬೇಕಾಗುತ್ತದೆ. ಆಧ್ಯಾತ್ಮಿಕ ಸಂಸ್ಕೃತಿ ಎಂದು ಹೇಳಿಕೊಳ್ಳುವ ಅವರೇ ಇತಿಹಾಸದ ವಿಷಯಕ್ಕೆ ಬಂದಾಗ ‘ವೀರರನ್ನು’ ಹುಡುಕುವುದು ಯಾತಕ್ಕಾಗಿ?
ಆಧ್ಯಾತ್ಮದ ವಿಷಯವೇನೇ ಇರಲಿ ಮಾನವೀಯ ಮೌಲ್ಯಗಳು ಮುಖ್ಯವೆಂದುಕೊಂಡರೆ ಬುದ್ಧ, ಅಶೋಕ, ಕಬೀರ ಮತ್ತು ಸ್ವಲ್ಪ ಮಟ್ಟಿಗೆ ಗಾಂಧಿಯನ್ನು ಕೂಡ ಆದರ್ಶವಾಗಿ ತೆಗೆದುಕೊಳ್ಳಬಹುದು. ದಬ್ಬಾಳಿಕೆಯ ವಿರುದ್ಧ ಹೋರಾಟದ ಮನೋಭಾವ ಮುಖ್ಯವಾದರೆ ಅಲ್ಲೂರಿ ಸೀತಾರಾಮರಾಜು, ಬಿರ್ಸಾ ಮುಂಡಾ ಮತ್ತು ಭಗತ್ ಸಿಂಗ್ ಅವರನ್ನು ತೆಗೆದುಕೊಳ್ಳಬಹುದು. ಆದರೆ, ಹಿಂದುತ್ವವಾದಿಗಳ ಆದರ್ಶ ಐತಿಹಾಸಿಕ ವ್ಯಕ್ತಿಗಳು ಇವರು ಯಾರೂ ಅಲ್ಲ. ಅವರಿಗೆ ‘ವೀರರು’ ಬೇಕು. ಅದೂ ಕೂಡ ಒಂದು ವಕ್ರ ಅರ್ಥದಲ್ಲಿ ಮಾತ್ರ. ಆ ‘ವೀರರು’ ಮುಸ್ಲಿಮ್ ರಾಜರ ವಿರುದ್ಧ ಹೋರಾಡಿದ ಹಿಂದೂ ರಾಜರು. ಸಾವಿರಾರು ವರ್ಷಗಳ ಇತಿಹಾಸವನ್ನು ಮುಸ್ಲಿಮರ ವಿರುದ್ಧ ಹಿಂದೂಗಳ ವಿಮೋಚನಾ ಹೋರಾಟ ಎಂದು ಬಿಂಬಿಸಲು ಅವರು ಬಯಸಿದ್ದಾರೆ. ಹಾಗಾಗಿ ಶಿವಾಜಿ, ರಾಣಾ ಪ್ರತಾಪ, ಶ್ರೀಕೃಷ್ಣದೇವರಾಯ ಮುಂತಾದವರು ಅವರ ‘ನಾಯಕರು’. ಅವರೆಲ್ಲರೂ ‘ಭಾರತ’ ಎಂಬ ದೇಶವನ್ನು ಕಲ್ಪಿಸಿಕೊಂಡಿದ್ದರು ಮತ್ತು ಅದನ್ನು ಮುಸ್ಲಿಮ್ ಆಳ್ವಿಕೆದಾರರಿಂದ ‘ವಿಮೋಚನೆ’ ಮಾಡುವ ಉದ್ದೇಶವನ್ನು ಹೊಂದಿದ್ದರು ಎಂದು ನಂಬುವುದು ಕಷ್ಟ. ಅವರು ಹಿಂದೂಗಳು ಮತ್ತು ಇತರರು ಮುಸ್ಲಿಮರು ಎಂಬ ಪ್ರಜ್ಞೆ ಅವರಿಗೆ ಇಲ್ಲವೆಂದಲ್ಲ. ಅಧಿಕಾರಕ್ಕಾಗಿ ತಮ್ಮ ಹೋರಾಟದಲ್ಲಿ ಅದನ್ನು ಬಳಸಲಿಲ್ಲವೆಂದಲ್ಲ. ಆದರೆ ಇಂದಿನ ಹಿಂದುತ್ವದ ದೃಷ್ಟಿಕೋನವನ್ನು ಅವರಿಗೆ ತಗಲಿಹಾಕಿ, ತಮ್ಮ ಸಾಮ್ರಾಜ್ಯದ ವಿಸ್ತರಣೆ ಅಥವಾ ರಕ್ಷಣೆಗಾಗಿ ಅವರು ನಡೆಸಿದ ಯುದ್ಧಗಳಲ್ಲಿ ‘ರಾಷ್ಟ್ರೀಯ ವಿಮೋಚನೆ’ಯ ಗುರಿಯನ್ನು ನೋಡುವುದು ಅಚಾರಿತ್ರಿಕವಾಗಿದೆ. ವಾಸ್ತವವಾಗಿ, ಹಿಂದೂ ರಾಜರು ಮತ್ತು ಮುಸ್ಲಿಮ್ ರಾಜರು ಪರಸ್ಪರ ಕೈಜೋಡಿಸಿ ಇತರ ಹಿಂದೂ ರಾಜರು ಮತ್ತು ಮುಸ್ಲಿಮ್ ರಾಜರ ವಿರುದ್ಧ ಯುದ್ಧ ಮಾಡಿದ ನಿದರ್ಶನಗಳಿವೆ.
ನಾವು-ಅವರು ಭಾವನೆಗೆ ಹಿಂದೂ-ಮುಸ್ಲಿಮ್ ತಳಹದಿಯ ಪರಿಕಲ್ಪನೆಯು ಆಗಲೂ ಇದ್ದದ್ದು ನಿಜ. ಆದರೆ ಅಷ್ಟೆ ಅಲ್ಲ. ಇಂದಿಗೂ ನಮ್ಮ ಹಳ್ಳಿಗಳಲ್ಲಿ ಮುಸ್ಲಿಮರನ್ನು ಎಲ್ಲಾ ಜಾತಿಗಳಲ್ಲಿ ಒಂದು ಜಾತಿ ಎಂದು ಪರಿಗಣಿಸಲಾಗಿದೆ. ನಾವು-ಅವರು ಪರಿಕಲ್ಪನೆಯಲ್ಲಿ ಜಾತಿಗೆ ಸ್ಥಾನವಿರುವಂತೆಯೇ, ಹಿಂದೂ-ಮುಸ್ಲಿಮ್ ಪರಿಕಲ್ಪನೆಯೂ ಇದೆ ಮತ್ತು ಯಾವಾಗಲೂ ಇತ್ತು. ಮೇಲಾಗಿ, ಅದನ್ನು ಮೀರಿ, ಹಿಂದೂ ವೀರರನ್ನು ಸಾಮಾಜಿಕ ವರ್ಗೀಕರಣದ ಕೇಂದ್ರವನ್ನಾಗಿ ಮಾಡುವುದು ಇತಿಹಾಸವನ್ನು ತರ್ಕಬದ್ಧವಾಗಿ ಅರ್ಥಮಾಡಿಕೊಳ್ಳಲು ಅಥವಾ ನಾಳೆಯ ಜೀವನವನ್ನು ರೂಪಿಸಲು ಉಪಯುಕ್ತವಲ್ಲ. ಇದು ಹಿಂದುತ್ವವಾದಿಗಳ ಆಧಿಪತ್ಯದ ಅಜೆಂಡಾ ಈಡೇರಿಸಲು ಏನಾದರೂ ಕೆಲಸಕ್ಕೆ ಬರುತ್ತದೇನೋ? ಭಾರತದ ಮೂಲ ಇತಿಹಾಸವನ್ನು ಹಿಂದೂ ಯುಗ (ಕ್ರಿ.ಶ. 11ನೇ ಶತಮಾನದವರೆಗೆ), ಮುಸ್ಲಿಮ್ ಯುಗ (ಆಗಿನಿಂದ ಬ್ರಿಟಿಷರ ಆಳ್ವಿಕೆ ನೆಲೆಗೊಳ್ಳುವವರೆಗೆ), ಬ್ರಿಟಿಷ್ ಯುಗ ಎಂದು ವಿಂಗಡಿಸುವುದೇ ತರ್ಕಬದ್ಧವಲ್ಲ ಎಂದು ಮತ್ತು ಮುಸ್ಲಿಮ್ ರಾಜರ ಆಗಮನವು ಅಂತಹ ಮೂಲಭೂತ ಬದಲಾವಣೆಯನ್ನು ತರಲಿಲ್ಲ ಎಂದೂ ರೊಮಿಲಾ ಥಾಪರ್ ಅವರಂತಹ ಇತಿಹಾಸಕಾರರು ಸುದೀರ್ಘವಾಗಿ ವಾದಿಸಿದ್ದಾರೆ. ಆಗ ಬಂದ ಬದಲಾವಣೆಯು ಸಂಪೂರ್ಣವಾಗಿ ಕೆಟ್ಟದ್ದಲ್ಲ, ವಿನಾಶಕಾರಿಯೂ ಅಲ್ಲ.