ಕಬಡಕೇರಿ ಅಂಗನವಾಡಿಗೆ ಹೈಟೆಕ್ ಸ್ಪರ್ಶ ನೀಡಿದ ಶಿಕ್ಷಕಿ ತಮ್ಸೀನಾ ಬಾನು

ಸರಕಾರಿ ಅಂಗನವಾಡಿಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಬಹುತೇಕರಿಗೆ ತಾತ್ಸಾರ ಮನೋಭಾವ ಇದೆ. ಮತ್ತೊಂದೆಡೆ ಆಂಗ್ಲ ಮಾಧ್ಯಮದ ಶಿಕ್ಷಣದ ಹಾವಳಿಯಿಂದ ಅಂಗನವಾಡಿಗೆ ಬರುವ ಮಕ್ಕಳ ಸಂಖ್ಯೆಯೂ ಕ್ಷೀಣಿಸುತ್ತಿದೆ. ಆದರೆ, ಸರಕಾರಿ ಅಂಗನವಾಡಿಯನ್ನೂ ಯಾವುದೇ ಪ್ಲೇ ಸ್ಕೂಲ್‌ಗೆ ಕಡಿಮೆ ಇಲ್ಲದಂತೆ ಹೈಟೆಕ್ ಸ್ಪರ್ಶ ನೀಡಬಹುದು ಎಂಬುದಕ್ಕೆ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಹೊದ್ದೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಕಬಡಕೇರಿ ಅಂಗನವಾಡಿಯ ಶಿಕ್ಷಕಿ ತಮ್ಸೀನಾ ಬಾನು ಸ್ಪಷ್ಟ ಉದಾಹರಣೆಯಾಗಿದ್ದಾರೆ.
ಜೀವನದಲ್ಲಿ ಸವಾಲುಗಳನ್ನು ಮೆಟ್ಟಿ ನಿಂತು ತಮ್ಸೀನಾ ಬಾನು ಕಬಡಕೇರಿ ಅಂಗನವಾಡಿಯನ್ನು ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಮಾಡಿದ್ದಾರೆ. ಕಬಡಕೇರಿ ಅಂಗನವಾಡಿ ಸುಂದರ ಹೂತೋಟದ ನಡುವಿನ ಸುಸಜ್ಜಿತ ಕಟ್ಟಡದಲ್ಲಿ ಪುಟಾಣಿಗಳಿಗೆ ಶಿಕ್ಷಣ ನೀಡುತ್ತಿದೆ. ತಮ್ಸೀನಾ ಬಾನು ಅವರ ಕಾರ್ಯ ವೈಖರಿಯಿಂದ ಪುಟ್ಟ ಗ್ರಾಮ ಕಬಡಕೇರಿಯ ಅಂಗನವಾಡಿ ರಾಜ್ಯಮಟ್ಟದಲ್ಲಿ ಹೆಸರುವಾಸಿಯಾಗಿದೆ.
32 ವರ್ಷಗಳ ಹಳೆಯ ಕಟ್ಟಡಕ್ಕೆ ಮುಕ್ತಿ
2019ರಲ್ಲಿ ತಮ್ಸೀನಾ ಬಾನು ಶಿಕ್ಷಕಿಯಾಗಿ ಕಬಡಕೇರಿ ಅಂಗನವಾಡಿಗೆ ನೇಮಕಗೊಂಡ ಸಂದರ್ಭದಲ್ಲಿ 32 ವರ್ಷಗಳ ಹಳೆಯ ಕಟ್ಟಡದಲ್ಲಿ ಅಂಗನವಾಡಿ ಕಾರ್ಯ ನಿರ್ವಹಿಸುತ್ತಿತ್ತು. ಈ ಅಂಗನವಾಡಿಯ ಮಾಳಿಗೆ ಮಳೆಗಾಲದಲ್ಲಿ ಸೋರುತ್ತಿತ್ತು. ಇಲ್ಲಿ ಯಾವುದೇ ಕಾರ್ಯಕ್ರಮಗಳನ್ನು ಮಾಡಲು ಸಾಧ್ಯವಿಲ್ಲದೆ ಬಾಡಿಗೆ ಹಣ ನೀಡಿ ಖಾಸಗಿ ಕಟ್ಟಡದಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತಮ್ಸೀನಾ ಬಾನು ಅವರು ಮುತುವರ್ಜಿ ವಹಿಸಿ ಸಿಡಿಪಿ ಅವರ ಗಮನಕ್ಕೆ ತಂದು ಹೊಸ ಕಟ್ಟಡಕ್ಕೆ ಬೇಡಿಕೆ ಇಟ್ಟಿದ್ದು, ಕೇವಲ ಎಂಟು ತಿಂಗಳಲ್ಲಿ ಕಬಡಕೇರಿಯಲ್ಲಿ ಹೊಸ ಅಂಗನವಾಡಿ ಕಟ್ಟಡ ತಲೆ ಎತ್ತಿತ್ತು. ಇದಾದ ನಂತರದ ದಿನಗಳಲ್ಲಿ ತಮ್ಸೀನಾ ಬಾನು ಪ್ರತೀದಿನ ಸಂಜೆ ಗ್ರಾಮಸ್ಥರನ್ನು ಸೇರಿಸಿಕೊಂಡು ಅಂಗನವಾಡಿ ಆವರಣದಲ್ಲಿ ಕೈ ತೋಟವನ್ನು ನಿರ್ಮಿಸಿ ಮಾದರಿಯಾಗಿದ್ದಾರೆ.
ಅಂಗನವಾಡಿಯಲ್ಲಿ ಮಕ್ಕಳಿಗೆ ಆಟದ ಆಟಿಕೆ, ಇಂಗ್ಲಿಷ್ ಶಿಕ್ಷಣವನ್ನು ನೀಡುವುದರೊಂದಿಗೆ ಪ್ರಾಕ್ಟಿಕಲ್ ಶಿಕ್ಷಣಕ್ಕೆ ತಮ್ಸೀನಾ ಬಾನು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಮಕ್ಕಳಿಗೆ ಆಟವಾಡಲು ಮತ್ತು ಕಲಿಕೆಗೆ ಪೂರಕವಾಗಿ ಅಂಗನವಾಡಿಯ ಹೊರಾಂಗಣವನ್ನು ಕಬಡಕೇರಿ ಗ್ರಾಮಸ್ಥರ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗಿದೆ.
‘ಹೊರ ಸಂಚಾರ’ ಕಾರ್ಯಕ್ರಮ
ಬಹುತೇಕ ಅಂಗನ ವಾಡಿಗೆ ಬರುವ ಮಕ್ಕಳು ನಾಲ್ಕು ಗೋಡೆಗಳ ಪ್ರಪಂಚದಲ್ಲಿ ದಿನ ಕಳೆಯುತ್ತಾರೆ. ಆದರೆ, ತಮ್ಸೀನಾ ಬಾನು ಅಂಗನವಾಡಿ ಮಕ್ಕಳಿಗೆ ‘ಹೊರ ಸಂಚಾರ’ ಕಾರ್ಯಕ್ರಮವನ್ನು ಆಯೋಜಿಸುವುದರ ಮೂಲಕ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಗೆ ಸಮಾಜದ ಅರಿವು ಮೂಡಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳನ್ನು ದೇವಸ್ಥಾನ, ಮಸೀದಿ, ಚರ್ಚ್, ಶಾಲೆ, ಆಸ್ಪತ್ರೆ, ಅನಾಥಾಶ್ರಮ, ಬ್ಯಾಂಕ್‌ಗಳಿಗೆ ಕರೆದುಕೊಂಡು ಹೊರಸಂಚಾರ ಕಾರ್ಯಕ್ರಮಗಳನ್ನು ಸತತವಾಗಿ ಆಯೋಜಿಸುತ್ತಿದ್ದಾರೆ.
ವಿಶೇಷವಾಗಿ ಅಂಗನವಾಡಿ ಮಕ್ಕಳನ್ನು ನಾಟಿ ಸಮಯದಲ್ಲಿ ಗದ್ದೆಗಳಿಗೆ ಕರೆದುಕೊಂಡು ಹೋಗಿ ಪ್ರತ್ಯಕ್ಷವಾಗಿ ನಾಟಿ ಮಾಡುವ ವಿಧಾನವನ್ನು ಪ್ರತೀ ವರ್ಷ ಹೇಳಿಕೊಡುತ್ತಿದ್ದಾರೆ. ಅದಲ್ಲದೆ ವಿದ್ಯಾರ್ಥಿಗಳನ್ನೂ ಗದ್ದೆಗಿಳಿಸಿ ಅವರಿಂದ ನಾಟಿ ಮಾಡಿಸು ವುದಲ್ಲದೆ, ಭತ್ತ ಕೊಯ್ಲು ಸಂದರ್ಭ ದಲ್ಲಿಯೂ ಮಕ್ಕಳಿಗೆ ಭತ್ತ ಕೊಯ್ಲು ಮಾಡುವ ವಿಧಾನವನ್ನು ಗದ್ದೆಗಳಿಗೆ ಕರೆದುಕೊಂಡು ಹೋಗಿ ತೋರಿಸಿ ಕೃಷಿಯ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸುತ್ತಾರೆ.
ರಾಷ್ಟ್ರೀಯ ಹಬ್ಬ ಮತ್ತು ಕೊಡಗಿನ ಸಾಂಪ್ರದಾಯಿಕ ಹಬ್ಬಗಳನ್ನು ಅಂಗನವಾಡಿಯಲ್ಲಿ ಆಚರಿಸುವ ಮೂಲಕ ಮಕ್ಕಳಲ್ಲಿ ಕೊಡಗಿನ ಸಂಸ್ಕೃತಿಯನ್ನು ಸಾರುವ ಕೆಲಸವನ್ನು ಮಾಡುತ್ತಿದ್ದಾರೆ.
ಜಿಲ್ಲಾಧಿಕಾರಿ ಸೇರಿ ವಿವಿಧ ಇಲಾಖೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಕಬಡಕೇರಿ ಅಂಗನವಾಡಿಗೆ ಭೇಟಿ ನೀಡಿ ತಮ್ಸೀನಾ ಬಾನು ಅವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ರಾಜ್ಯಮಟ್ಟದ ಮಾದರಿ ಶಿಕ್ಷಕಿ ಪ್ರಶಸ್ತಿ
2023ರಲ್ಲಿ ಅಂತರ್‌ರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಮ್ಸೀನಾ ಬಾನು ಅವರಿಗೆ ರಾಜ್ಯಮಟ್ಟದ ‘ಮಾದರಿ ಅಂಗನವಾಡಿ ಶಿಕ್ಷಕಿ’ ಪ್ರಶಸ್ತಿ ನೀಡಿ ಗೌರವಿಸಿದ್ದರು.
ಅಲ್ಲದೆ ಬಾಲ ವಿಕಾಸ ಸಮಿತಿ ವತಿಯಿಂದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ, ಗ್ರಾಮ ಪಂಚಾಯತ್ ಹಾಗೂ ಸಂಘ- ಸಂಸ್ಥೆಗಳೂ ತಮ್ಸೀನಾ ಬಾನು ಅವರನ್ನು ಸನ್ಮಾನಿಸಿ ಗೌರವಿಸಿದೆ.
ಮಕ್ಕಳಿಗೆ ಟೀ-ಶರ್ಟ್, ಐಡಿ ಕಾರ್ಡ್:
ಅಂಗನವಾಡಿಗೆ ಬರುವ ಮಕ್ಕಳಿಗೆ ಹೈಟೆಕ್ ಶಿಕ್ಷಣದೊಂದಿಗೆ ಆಂಗ್ಲ ಶಿಕ್ಷಣವನ್ನೂ ತಮ್ಸೀನಾ ಬಾನು ನೀಡುತ್ತಿದ್ದಾರೆ. ಕಬಡಕೇರಿ ಗ್ರಾಮಸ್ಥರು ಮತ್ತು ದಾನಿಗಳ ನೆರವಿಂದ ಅಂಗನವಾಡಿ ಮಕ್ಕಳಿಗೆ ಖಾಸಗಿ ಶಾಲೆಯ ಮಕ್ಕಳಿಗೆ ಕಡಿಮೆ ಇಲ್ಲದಂತೆ ಟೀ ಶರ್ಟ್, ಪ್ಯಾಂಟ್ ಸಮವಸ್ತ್ರ ಮತ್ತು ಐಡಿ ಕಾರ್ಡನ್ನೂ ನೀಡಲಾಗಿದೆ. ಕಾಫಿ ತೋಟದ ಲೈನ್ ಮನೆಗಳಲ್ಲಿ ವಾಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರ ಮಕ್ಕಳನ್ನೂ ಅಂಗನವಾಡಿಗೆ ಕರೆತರುವಲ್ಲಿ ತಮ್ಸೀನಾ ಬಾನು ಯಶಸ್ಸು ಕಂಡಿದ್ದಾರೆ.
ಕಬಡಕೇರಿ ಗ್ರಾಮದ ಅಂಗನವಾಡಿ ಮಾದರಿ ಅಂಗನವಾಡಿಯಾಗಿ ಕಾರ್ಯ ನಿರ್ವಹಿಸಲು ಗ್ರಾಮಸ್ಥರು, ಅಧಿಕಾರಿಗಳು, ಗ್ರಾಪಂ ಸದಸ್ಯರು, ದಾನಿಗಳು, ಬಾಲ ವಿಕಾಸ ಸಮಿತಿಯವರು ದೊಡ್ಡ ಮಟ್ಟದಲ್ಲಿ ಸಹಕಾರ ನೀಡುತ್ತಿದ್ದಾರೆ. ಸಿಡಿಪಿ ಆಗಿದ್ದ ಅರುಂಧತಿ ಅವರ ಸಹಕಾರದಿಂದ ಆರ್‌ಐಡಿಎಫ್ ಯೋಜನೆಯಡಿ 16 ಲಕ್ಷ ರೂ. ವೆಚ್ಚದಲ್ಲಿ ಕಬಡಕೇರಿಯಲ್ಲಿ ಹೊಸ ಅಂಗನವಾಡಿ ಕಟ್ಟಡವನ್ನು ನಿರ್ಮಿಸಲಾಯಿತು. ಅಂಗನವಾಡಿಗೆ ದಾನಿಗಳ ಸಹಕಾರದಿಂದ ಹೈಟೆಕ್ ಸ್ಪರ್ಶ ನೀಡಲಾಗಿದೆ. ಮಕ್ಕಳಿಗೆ ಅಂಗನವಾಡಿಯಲ್ಲಿ ಪ್ರಾಕ್ಟಿಕಲ್ ತರಗತಿ ನೀಡುತ್ತಿದ್ದೇವೆ. ಪ್ರಧಾನ ಮಂತ್ರಿ ಪೋಷಣ್ ಅಭಿಯಾನ್ ಕಾರ್ಯಕ್ರಮವನ್ನು ವಿಶೇಷವಾಗಿ ಆಯೋಜಿಸುತ್ತಿದ್ದೇವೆ. ಅದಲ್ಲದೆ ಪೌಷ್ಟಿಕ ಆಹಾರ ಶಿಬಿರವನ್ನೂ ಆಯೋಜಿಸುತ್ತಿದ್ದೇವೆ.
-ತಮ್ಸೀನಾ ಬಾನು