ಕರಾಟೆಯಲ್ಲಿ ಸಾಧನೆ ಮಾಡಿದ ಹತ್ತರ ಬಾಲೆ
23 ಚಿನ್ನ, 18 ಬೆಳ್ಳಿ, 24 ಕಂಚು ಪದಕಗಳನ್ನು ಮುಡಿಗೇರಿಸಿಕೊಂಡ ನಿಧಿ ಬೇತೂರು
ದಾವಣಗೆರೆ: ಹತ್ತರ ಬಾಲೆ, ಚಿಕ್ಕ ವಯಸ್ಸಿನಲ್ಲೇ ಆಕೆಯ ತೂಕದಷ್ಟು ಸಾಧನೆ ಮಾಡಿದ್ದಾಳೆ. ಕರಾಟೆಯಲ್ಲಿ ಹಲವಾರು ಪದಕಗಳನ್ನು ತನ್ನ ಮುಡಿಗೇರಿಸಿಕೊಂಡಿದ್ದಾಳೆ.
ನಗರದ ನಿಜಲಿಂಗಪ್ಪ ಬಡಾವಣೆಯ ಅಭಿಷೇಕ್ ಮತ್ತು ಶ್ವೇತಾ ಅಭಿಷೇಕ್ ದಂಪತಿಯ ಪುತ್ರಿ ನಿಧಿ ಬೇತೂರು ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಐದನೇ ತರಗತಿ ಓದುತ್ತಿದ್ದು, ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಪ್ರತಿಭೆಯಾಗಿ ಹೊರಹೊಮ್ಮಿದ್ದಾಳೆ.
ಆರಂಭದಿಂದಲೂ ನಗರದ ಕರಾಟೆ ತರಬೇತುದಾರ ಕೆ.ಪಿ. ಜೋಶ್ ಬಳಿ ತರಬೇತಿ ಪಡೆಯುತ್ತಿರುವ ನಿಧಿ ತನ್ನ ಐದನೇ ವಯಸ್ಸಿನಲ್ಲಿಯೇ ಕರಾಟೆಯಲ್ಲಿ ಆಸಕ್ತಿ ವಹಿಸಿ ವೈಟ್ ಬೆಲ್ಟ್, ಎಲ್ಲೋ ಬೆಲ್ಟ್ , ಆರೆಂಜ್ ಬೆಲ್ಟ್, ಬ್ಲೂ ಬೆಲ್ಟ್ , ಬ್ರೌನ್ ಬೆಲ್ಟ್ ಪಡೆದು ಇದೀಗ ಬ್ಲಾಕ್ ಬೆಲ್ಟ್ ಪಡೆಯಲು ತರಬೇತಿ ಪಡೆಯುತ್ತಿದ್ದಾಳೆ.
ಕೇರಳ, ತಮಿಳುನಾಡು ಹಾಗೂ ಕರ್ನಾಟಕದಲ್ಲಿ ಜಿಲ್ಲಾ, ರಾಜ್ಯ, ರಾಷ್ಟ್ರ ಹಾಗೂ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸಿ 23 ಚಿನ್ನದ ಪದಕ, 18 ಬೆಳ್ಳಿಯ ಪದಕ ಹಾಗೂ 24 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ.
ಇತ್ತೀಚೆಗಷ್ಟೇ ಮೈಸೂರು ಹಾಗೂ ಚೆನ್ನೈನಲ್ಲಿ ನಡೆದ ಅಂತರ ರಾಷ್ಟ್ರೀಯ ಟೆಕ್ನಿಕಲ್ ಸೆಮಿನಾರ್ ನಲ್ಲಿಯೂ ಭಾಗವಹಿಸಿ ಪ್ರಶಂಸೆ ಪತ್ರ ಪಡೆದು ಮುಂಬರುವ ಅಂತರ್‌ರಾಷ್ಟ್ರೀಯ ಚಾಂಪಿಯನ್ ಶಿಪ್ ಗಳಿಗೆ ಕಠಿಣ ಅಭ್ಯಾಸ ನಡೆಸುತ್ತಿದ್ದಾಳೆ.
ಚಿಕ್ಕ ವಯಸ್ಸಿನಲ್ಲಿಯೇ ಅಗಾಧ ಪ್ರತಿಭೆ ಹೊಂದಿರುವ ನಿಧಿ ಬೇತೂರು, ಅತ್ಯುತ್ತಮ ಕರಾಟೆ ಪಟುವಾಗಿ ಹೊರಹೊಮ್ಮುತ್ತಿದ್ದಾಳೆ. ಈಗಾಗಲೇ ಸಾಕಷ್ಟು ಪದಕಗಳನ್ನು ತನ್ನ ಕೊರಳ ಅಲಂಕರಿಸಿದ್ದಾಳೆ. ಮುಂಬರುವ ಅಂತರ್‌ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಕಠಿಣ ಅಭ್ಯಾಸ ನಡೆಸುತ್ತಿದ್ದಾಳೆ.
| ಕೆ.ಪಿ.ಜೋಶ್, ತರಬೇತುದಾರ, ದಾವಣಗೆರೆ
ಓದಿನ ಜೊತೆಗೆ ಕರಾಟೆ ಕಲಿತು ಈಗಾಗಲೇ ಚಿನ್ನ, ಬೆಳ್ಳಿ ಹಾಗೂ ಕಂಚಿನ ಪದಕಗಳನ್ನು ಪಡೆದಿದ್ದಾಳೆ. ಮುಂದಿನ ಅಂತರರಾಷ್ಟ್ರೀಯ ಮಟ್ಟದ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಅಲ್ಲೂ ಪದಕ ಪಡೆಯುತ್ತಾಳೆ ಎಂಬ ವಿಶ್ವಾಸ ನಮಗಿದೆ. ಮಗಳ ಸಾಧನೆ ನಮಗೆ ಹೆಮ್ಮೆ ತಂದಿದೆ.
| ಅಭಿಷೇಕ್, ನಿಧಿ ಬೇತೂರು ತಂದೆ