ಮತ್ತೆ ಶಿವಮೊಗ್ಗದಲ್ಲಿ ಉದ್ವಿಗ್ನತೆ : ಯಾರ ಷಡ್ಯಂತ್ರ ಇದು ?
ಸೋತ ಹತಾಶೆಯಲ್ಲಿರುವ ಬಿಜೆಪಿ, ಕೋಮುವಾದವನ್ನು ಇಟ್ಟುಕೊಂಡು ಆಟವಾಡಲಿಕ್ಕಾಗದ ಬಿಜೆಪಿ, ಈಗ ಹೇಗಾದರೂ ಮಾಡಿ ಅಂಥದೊಂದು ಕಳಂಕ ಈ ಸರ್ಕಾರಕ್ಕೆ ಅಂಟುವ ಹಾಗೆ ಮಾಡಬೇಕೆಂಬ ಜಿದ್ದಿಗೆ ಬಿದ್ದಿದೆಯಾ?
ಶಿವಮೊಗ್ಗದಲ್ಲಿನ ಘಟನೆಯ ಬಗ್ಗೆ ಬಿಜೆಪಿ ಮತ್ತು ಸಂಘಪರಿವಾರದ ಮಂದಿ ಮಾತನಾಡುತ್ತಿರುವುದನ್ನು ನೋಡಿದರೆ, ಒಂದರ ಹಿಂದೊಂದು ಪ್ರಚೋದನಕಾರಿ ಹೇಳಿಕೆಗಳನ್ನು ಕೊಡುತ್ತಿರುವುದನ್ನು ನೋಡಿದರೆ ಅಂಥದೊಂದು ಅನುಮಾನ ಕಾಡುತ್ತದೆ. ಬಿಜೆಪಿಯ ತುತ್ತೂರಿಯಾಗಿರುವ ಕೆಲವು ಸುದ್ದಿ ಚಾನೆಲ್ಲುಗಳು ಕೂಡ ಶಿವಮೊಗ್ಗ ಧಗ ಧಗ, ಕೊತ ಕೊತ ಎಂದು ತಾವೇ ಬೆಂಕಿ ಹಚ್ಚಿಕೊಂಡು ಬೊಬ್ಬೆ ಇಡುತ್ತಿರುವುದನ್ನು ನೋಡುವಾಗಲೂ ಈ ಅನುಮಾನ ಬರುತ್ತದೆ.
ಶಿವಮೊಗ್ಗ ನಗರದಲ್ಲಿನ ಗಣಪತಿ ಮೆರವಣಿಗೆ ಹಾಗೂ ಈದ್ ಮಿಲಾದ್ ಒಂದೇ ದಿನ ಬಂದಿತ್ತಾದ್ದರಿಂದ, ಶಾಂತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಭಾನುವಾರ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಮೆರವಣಿಗೆ ಹಮ್ಮಿಕೊಂಡಿದ್ದರು. ಸೆ.28ರಂದು ಹಿಂದೂ ಮಹಾಸಭಾದ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಅ.1 ರಂದು ಮೆರವಣಿಗೆ ನಡೆಸಲು ಮುಸ್ಲಿಂ ಮುಖಂಡರು ತೀರ್ಮಾನಿಸಿದ್ದರು.
ಭಾನುವಾರ ಸಂಜೆ ಆರಂಭವಾದ ಮೆರವಣಿಗೆ ವೇಳೆ ಶಿವಮೊಗ್ಗ ನಗರದ ಹೊರವಲಯವಾದ ರಾಗಿಗುಡ್ಡ ಪ್ರದೇಶದಲ್ಲಿ ಇದ್ದಕ್ಕಿದ್ದಂತೆ ಕಲ್ಲುತೂರಾಟ ನಡೆಯಿತು. ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರ ಮೇಲೆಯೂ ಕಲ್ಲುಗಳು ಬಿದ್ದವು. ಕಡೆಗೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಆದರೆ, ಕಲ್ಲುತೂರಾಟ ನಡೆಸಿದವರು ಯಾರು ಎಂಬುದು ಮಾತ್ರ ನಿಗೂಢವಾಗಿಯೇ ಉಳಿದಿದೆ.
ಈ ನಡುವೆ, ರಾಗಿಗುಡ್ಡ ಪ್ರದೇಶದಲ್ಲಿ ಟಿಪ್ಪು ಕಟೌಟ್ ಹಾಗೂ ಶಾಂತಿನಗರ ಪ್ರದೇಶದಲ್ಲಿ ಔರಂಗಬೇಬನ ಕಟೌಟ್ ಹಾಕಿದ್ದುದು ಗಮನಕ್ಕೆ ಬಂದು, ಪೊಲೀಸರು ಅವು ಯಾವುದೇ ವಿವಾದಕ್ಕೆ ಕಾರಣವಾಗದಂತೆ ಮುನ್ನೆಚ್ಚರಿಕೆ ವಹಿಸಿದ್ದರು. ರವಿವಾರ ಈದ್ ಮಿಲಾದ್ ಮೆರವಣಿಗೆ ನಡೆಯುವ ಮೊದಲೇ ಅದನ್ನು ತೆರವುಗೊಳಿಸಿದ್ದರು.
ಈದ್ ಮಿಲಾದ್ ವೇಳೆ, ಅದಕ್ಕೆ ಯಾವ ಸಂಬಂಧವೂ ಇದ್ದಿರದ ಔರಂಗಜೇಬ್ ಹಾಗು ಟಿಪ್ಪುವಿನ ಫ್ಲೆಕ್ಸ್ ಹಾಕಿದ್ದು ಸರಿಯಲ್ಲ ಎಂಬ ಅಭಿಪ್ರಾಯಗಳು ಮುಸ್ಲಿಂ ಸಮುದಾಯದ ಒಳಗಿಂದಲೇ ವ್ಯಕ್ತವಾಗಿದೆ. ಇಂತಹದ್ದನ್ನು ನಾವು ಒಪ್ಪುವುದಿಲ್ಲ ಎಂದು ಅಲ್ಲಿ ಮುಸ್ಲಿಂ ಮುಖಂಡರೇ ಹೇಳಿದ್ದಾರೆ. ಅದು ಸ್ವಾಗತಾರ್ಹ. ಆದರೆ , ಕಲ್ಲು ತೂರಾಟ ಮತ್ತು ಅನಂತರ ನಡೆದ ವಿದ್ಯಮಾನಕ್ಕೂ ಈ ಫ್ಲೆಕ್ಸ್ಗಳಿಗೂ ಸಂಬಂಧವಿಲ್ಲ ಎಂಬುದು ಖಚಿತವಾಗಿದೆ.
ಹಾಗಾದರೆ, ಎಲ್ಲವೂ ಸುಗಮವಾಗಿ ನಡೆದಿದ್ದ ಹೊತ್ತಲ್ಲಿ ಕಲ್ಲು ತೂರಾಟ ನಡೆಸಿದ್ದವರು ಯಾರು? ಅದೊಂದು ಪೂರ್ವನಿಯೋಜಿತ ಕೃತ್ಯವೆ ? ಶಿವಮೊಗ್ಗದಲ್ಲಿ ದೊಡ್ಡ ಗಲಭೆಯೊಂದನ್ನು ಎಬ್ಬಿಸಿ ಹಾಕುವ ಹುನ್ನಾರ ಅದರ ಹಿಂದಿತ್ತೇ ?ಶಿವಮೊಗ್ಗದಲ್ಲಿ ಕಳೆದ ವರ್ಷ ಬಜಗಂಗದಳದ ಹರ್ಷ ಎಂಬಾತನ ಕೊಲೆಯಾದ ಬೆನ್ನಿಗೇ ಅಂದಿನ ಬಿಜೆಪಿ ಸರಕಾರದ ಸಚಿವರೇ ಮುಂದೆ ನಿಂತು ಪ್ರಕ್ಷುಬ್ದ ಸ್ಥಿತಿ ನಿರ್ಮಾಣವಾಗಲು ಕಾರಣವಾಗಿದ್ದರು. ನಿಷೇಧಾಜ್ಞೆಯನ್ನು ಉಲ್ಲಂಘಿಸಿ ತಾವೇ ಮುಂದೆ ನಿಂತು ಶವ ಇಟ್ಟುಕೊಂಡು ಮೆರವಣಿಗೆ ಮಾಡಿದ್ದರು. ಅದು ಹಿಂಸಾಚಾರಕ್ಕೆ ಕಾರಣವಾಗಿತ್ತು.
ಇದೇ ವೇಳೆ, ರಾಗಿಗುಡ್ಡದ ದೇವಸ್ಥಾನದ ಬಳಿ ಕೆ-20 ಪಾಸಿಂಗ್ ಇರುವ ಎರಡು ಒಮಿನಿ ವಾಹನಗಳು ಬಂದು ನಿಂತಿದ್ದು ಸಿಸಿಟಿವಿ ಕ್ಯಾಮರಾ ದಲ್ಲಿ ಕಂಡಿದ್ದು ಅನುಮಾನಗಳಿಗೆ ಕಾರಣವಾಗಿತ್ತು. ಈ ಬಗ್ಗೆ ಟಿವಿ ಚಾನಲ್ ಗಲೂ ಪುಕಾರು ಎಬ್ಬಿಸಿದ್ದವು.
ಆದರೆ, ಈ ಬಗ್ಗೆ ಮಂಗಳವಾರ ಸ್ಪಷ್ಟನೆ ನೀಡಿರುವ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಅವರು, ಘಟನೆಯ ವೇಳೆ ರಾಗಿ ಗುಡ್ಡದಲ್ಲಿ ಇದ್ದ ಎರಡು ಓಮ್ನಿ ವಾಹನಗಳು ನ್ಯಾಮತಿಗೆ ಸೇರಿದ್ದು. ವಾಹನದಲ್ಲಿ ಎರಡೂ ಸಮುದಾಯದ ಜನರೂ ಇದ್ದರು. ಅವರೆಲ್ಲಾ ಶಿವಮೊಗ್ಗದಲ್ಲಿ ಮೆರವಣಿಗೆ ನೋಡಲು ಬಂದಿದ್ದರು. ಶಿವಮೊಗ್ಗ ನಗರದಲ್ಲಿ ಮೆರವಣಿಗೆ ನೋಡಿ, ಅವರು ರಾಗಿ ಗುಡ್ಡಕ್ಕೆ ಬಂದಾಗ ಈ ಘಟನೆ ನಡೆದಿದ್ದು, ನಂತರ ಅವರು ತಮ್ಮ ಊರಿಗೆ ಹಿಂತಿರುಗಿದ್ದಾರೆ. ದಯವಿಟ್ಟು ಸತ್ಯವನ್ನು ಪರಿಶೀಲಿಸದೆ ಕಥೆಗಳನ್ನು ಕಟ್ಟಬೇಡಿ.. ಎಲ್ಲಾ ಕೋನಗಳಿಂದ ತನಿಖೆ ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕಲ್ಲು ತೂರಾಟ ಪ್ರಕರಣ ಸಂಬಂಧ 60 ಮಂದಿಯನ್ನು ಬಂಧಿಸಲಾಗಿದ್ದು, 24 FIR ದಾಖಲು ಮಾಡಿಕೊಳ್ಳಲಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ. ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಘಟನೆಯಲ್ಲಿ ಒಂದು ಕಾರು, ಆಟೋ, ಎರಡು ಬೈಕುಗಳಿಗೆ ಹಾನಿಯಾಗಿದೆ. 7 ಮನೆಗಳ ಮೇಲೆ ಕಲ್ಲು ತೂರಾಟವಾಗಿದೆ ಎಂಬ ವಿವರಗಳನ್ನು ನೀಡಿದ್ದು, ಕೇವಲ ಅರ್ಧ ಗಂಟೆಯಲ್ಲಿಯೇ ಪರಿಸ್ಥಿತಿಯನ್ನು ಹತೋಟಿಗೆ ತರಲಾಗಿದ್ದು, ಶಿವಮೊಗ್ಗ ಶಾಂತವಾಗಿದೆ. ನಗರದ ಉಳಿದ ಯಾವ ಭಾಗದಲ್ಲಿಯೂ ಸಮಸ್ಯೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸದ್ಯ ಶಿವಮೊಗ್ಗದಲ್ಲಿ ಪರಿಸ್ಥಿತಿ ಶಾಂತವಾಗಿದೆ. ಯಾವುದೆ ಧಗ ಧಗ, ಕೊತ ಕೊತ ಇಲ್ಲ. ಸಾರ್ವಜನಿಕರು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ ಎಂದು ಮಿಥುನ್ ಕುಮಾರ್ ಹೇಳಿದ್ದಾರೆ. ಗಲಭೆ ಪೀಡಿತ ಪ್ರದೇಶವಾದ ರಾಗಿಗುಡ್ಡದಲ್ಲಿ ಆರ್ ಎ ಎಫ್, ಕೆಎಸ್ ಆರ್ ಪಿ , ಡಿ ಎ ಆರ್ ತುಕಡಿಗಳನ್ನು ನಿಯೋಜಿಸಲಾಗಿದೆ. ರಾಗಿಗುಡ್ಡ ಪ್ರದೇಶವನ್ನೊಳಗೊಂಡ ಶಾಂತಿನಗರಕ್ಕೆ ಸಂಚರಿಸುವ ಪ್ರತಿ ವಾಹನವನ್ನು ಪರಿಶೀಲನೆ ನಡೆಸಲಾಗುತ್ತಿದೆ. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ಮತ್ತು ಹೊರಗಿನವರು ಎಂದು ಭಾವಿಸಲಾದವರನ್ನು ವಿಚಾರಣೆ ನಡೆಸಲಾಗುತ್ತಿದೆ.
ರಾಗಿಗುಡ್ಡಕ್ಕೆ ಸೀಮಿತವಾಗಿ ಜಾರಿಗೊಳಿಸಿದ್ದ ನಿಷೇಧಾಜ್ಞೆಯನ್ನು ಮಹಾನಗರ ಪಾಲಿಕೆ ವ್ಯಾಪ್ತಿಗೆ ವಿಸ್ತರಣೆ ಮಾಡಲಾಗಿದೆ. ಶಿವಮೊಗ್ಗ ನಗರದಾದ್ಯಂತ ಸಿಆರ್ಪಿಸಿ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆದೇಶಿಸಿದ್ದಾರೆ. ಶಿವಮೊಗ್ಗ ನಗರದಾದ್ಯಂತ ಸೆಕ್ಷನ್ 144ರ ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿದ ಬೆನ್ನಲ್ಲೇ ಮುನ್ನೆಚ್ಚರಿಕೆ ಕ್ರಮವಾಗಿ ಗಾಂಧಿ ಬಜಾರ್ನಲ್ಲಿ ಅಂಗಡಿ ಮುಂಗಟ್ಟು ಬಂದ್ ಮಾಡಿಸಲಾಗಿದೆ.
ಇನ್ನು ನೆಹರೂ ರಸ್ತೆಯಲ್ಲೂ ಅಂಗಡಿ ಮುಂಗಟ್ಟು ಬಂದ್ ಆಗಿವೆ. ದುರ್ಗಿಗುಡಿ, ಕುವೆಂಪು ರಸ್ತೆ, ಜೈಲ್ ರಸ್ತೆ ಸೇರಿದಂತೆ ಉಳಿದೆಡೆ ವ್ಯಾಪಾರ ವಹಿವಾಟು ಸಹಜ ಸ್ಥಿತಿಯಲ್ಲಿದ್ದುದಾಗಿ ವರದಿಯಿದೆ. ಬಿಜೆಪಿಯವರು ಬಿಂಬಿಸುತ್ತಿರುವಂತೆ, ಅಥವಾ ಬಿಜೆಪಿ ಪರವಿರುವ ಸುದ್ದಿವಾಹಿನಿಗಳು ಕೂಗಾಡುತ್ತಿರುವಂತೆ ಶಿವಮೊಗ್ಗದಲ್ಲಿ ಯಾವುದೇ ಧಗ ಧಗ, ಕೊತ ಕೊತ ಇಲ್ಲ. ಒಂದು ನಿರ್ದಿಷ್ಟ ಪ್ರದೇಶದಲ್ಲಿ ಕಲ್ಲು ತೂರಾಟ ಆಗಿದ್ದು ಅದನ್ನು ಕೂಡಲೇ ಪೊಲೀಸರು ನಿಯಂತ್ರಣಕ್ಕೆ ತಂದಿದ್ದಾರೆ.
ಬಿಜೆಪಿಯವರಿಗೆ ಮಾತ್ರ ಯಾಕೆ ಹಾಗೆ ಕಾಣಿಸುತ್ತಿದೆ ?. ಸಹಜವಾಗಿರುವುದನ್ನು ಕಾಣುವ ಮನಃಸ್ಥಿತಿ ಅವರಿಗೆ ಏಕಿಲ್ಲ? ಏಕೆ ಬಿಜೆಪಿ ನಾಯಕರ ಹೇಳಿಕೆಗಳು ಇಷ್ಟೊಂದು ಪ್ರಚೋದನಕಾರಿಯಾಗಿವೆ?. ಶಿವಮೊಗ್ಗದಲ್ಲಿ ಗಲಾಟೆಯನ್ನು ವ್ಯವಸ್ಥಿತವಾಗಿ ಮಾಡಲಾಗಿದೆ. ತಲ್ವಾರ್ ಹಿಡಿದು ಉತ್ತರ ಕೊಡಲು ಹಿಂದೂ ಸಮಾಜಕ್ಕೆ ಬರುತ್ತದೆ. ಅವರು ಹಬ್ಬವನ್ನು ಮಾಡಿಲ್ಲ, ಹಿಂದೂ ಸಮಾಜಕ್ಕೆ ಎಚ್ಚರಿಕೆ ರೀತಿ ಮಾಡಿದ್ದಾರೆ ಎಂದು ಕೆ.ಎಸ್.ಈಶ್ವರಪ್ಪ ಪ್ರಚೋದನಾಕಾರಿ ಹೇಳಿಕೆ ಕೊಟ್ಟಿದ್ದಾರೆ.
ಒಂದು ಸಮುದಾಯದ ಆಚರಣೆಯನ್ನು ಇವರು ಎಚ್ಚರಿಕೆ, ಬೆದರಿಕೆ ಎಂದೆಲ್ಲ ಯಾಕೆ ನೋಡುತ್ತಾರೆ ಎಂಬುದೇ ಅರ್ಥವಾಗದ ಸಂಗತಿ. ಈ ವಿಪರೀತ ಅರ್ಥ ಕಲ್ಪಿಸುವ ಇವರ ಮನಃಸ್ಥಿತಿಯೇ ಹಿಂಸಾತ್ಮಕ ಎನ್ನಿಸುವುದಿಲ್ಲವೆ?. ಶಾಸಕ ಚನ್ನಬಸಪ್ಪ ಕೂಡ ಇಂಥದೇ ಹೇಳಿಕೆ ನೀಡಿದ್ದು, ಮೆರವಣಿಗೆಯಲ್ಲಿದ್ದ ಒಂದು ಗುಂಪೇ ಮನೆಗಳಿಗೆ ನುಗ್ಗಿ ದಾಂಧಲೆ ನಡೆಸಿದೆ ಎಂದು ಆರೋಪಿಸಿದ್ದಾರೆ.
ಸರಣಿ ಸುಳ್ಳು ಹೇಳುವ ಭಾಷಣಕಾರ ಚಕ್ರವರ್ತಿ ಸೂಲಿಬೆಲೆ ಮುಸ್ಲಿಂ ಸಮುದಾಯದ ವಿರುದ್ಧ ಕಿಡಿ ಕಾರಿದ್ದು, ಅದನ್ನು ನಿಯಂತ್ರಿಸಬೇಕಾಗಿದೆ ಎಂದಿದ್ದಾರೆ.ಮೆರವಣಿಗೆಯ ಸಂದರ್ಭ ನಡೆದ ಘಟನೆ ಗಮನಿಸಿದರೆ ಮತಾಂಧ ಶಕ್ತಿಗಳ ಕೈವಾಡ ಕಂಡುಬರುತ್ತಿದೆ. ಹಿಂದೂ ಧರ್ಮೀಯರ ಅಂಗಡಿಗಳ ಲೂಟಿ, ಮನೆಗಳ ಮೇಲೆ ದಾಳಿ ನಡೆದಿರುವುದು ಖಂಡನೀಯ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಆದರೆ, ಬಿಜೆಪಿಯವರೇಕೆ ಇಲ್ಲದ ವಿಚಾರವನ್ನು ಇದೆ ಎಂಬಂತೆ ಬಿಂಬಿಸುತ್ತಿದ್ದಾರೆ, ಏಕೆ ಪ್ರಚೋದನಾತ್ಮಕ ಸುಳ್ಳುಗಳನ್ನು ಹರಡುತ್ತಿದ್ದಾರೆ ಎಂಬುದು ಕಾಡುವ ಪ್ರಶ್ನೆಯಾಗಿದೆ.
ಈದ್ ಮಿಲಾದ್ ಮೆರವಣಿಗೆ ವೇಳೆ ಕತ್ತಿ ಬಳಕೆಯಾಗಿಲ್ಲ ಎಂದು ಸ್ವತಃ ಗೃಹಸಚಿವ ಪರಮೇಶ್ವರ್ ಅವರೇ ಸ್ಪಷ್ಟಪಡಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆ ನೀಡುವವರಿಗೆ ನಾನು ಪ್ರತಿಕ್ರಿಯಿಸುವುದಿಲ್ಲ. ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಕಾನೂನು ಮೀರಿಹೋದವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಆರೆಸ್ಸೆಸ್ ಪಥಸಂಚಲನದಲ್ಲಿ, ಸಂಘ ಪರಿವಾರದ ಮೆರವಣಿಗೆಗಳಲ್ಲಿ ನಿಜವಾದ ಖಡ್ಗಗಳನ್ನು ಹಿಡಿದುಕೊಂಡು ಹೋಗಿರುವುದನ್ನು, ಪ್ರಚೋದನಕಾರಿ ಘೋಷಣೆ ಕೂಗಿದ್ದನ್ನು ಹಲವಾರು ಬಾರಿ ಈ ನಾಡು ನೋಡಿದೆ. ಇದೇ ಶಿವಮೊಗ್ಗದಲ್ಲಿ ಬಿಜೆಪಿ ಸಂಸದೆ, ಸ್ಫೋಟ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಬಂದು ತಲವಾರು, ಚಾಕು, ಚೂರಿ, ಶಸ್ತ್ರಾಸ್ತ್ರ ಇಟ್ಟುಕೊಳ್ಳಿ, ಹೆಣ್ಣುಮಕ್ಕಳನ್ನು ನಡೆದಾಡುವ ಆಟಂ ಬಾಂಬ್ ಮಾಡಿ ಎಂದು ಸಾರ್ವಜನಿಕ ಸಮಾವೇಶದಲ್ಲಿ ಹೇಳಿದರು. ಆ ಕಾರ್ಯಕ್ರಮದಲ್ಲಿ ಬಿಜೆಪಿ ಜನಪ್ರತಿನಿಧಿಗಳೇ ಕೂತು ಆ ಪ್ರಚೋದನಕಾರಿ ಹೇಳಿಕೆಗಳನ್ನು ಕೇಳಿ ಎದ್ದು ಹೋದರು. ಆದರೆ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಕನ್ನಡದ ಚಾನಲ್ ಗಳು ಶಿವಮೊಗ್ಗದಲ್ಲಿ ಖಡ್ಗದ ಪ್ರತಿಕೃತಿ ಇಟ್ಟಿದ್ದಕ್ಕೆ ಬೆಚ್ಚಿ ಬಿದ್ದಿದ್ದಾರೆ. ಅದನ್ನು ಉಗ್ರ ಚಟುವಟಿಕೆ ಎಂಬಂತೆ ಬಿಂಬಿಸುತ್ತಿದ್ದಾರೆ. ತೀರಾ ಪ್ರಚೋದನಕಾರಿ, ಹೆಡಿಂಗ್ ಗಳನ್ನು ಟಿವಿ ಸ್ಕ್ರೀನ್ ಮೇಲೆ ದೊಡ್ಡದಾಗಿ ಹಾಕಿ ಜನರಲ್ಲಿ ಭಯ ಹುಟ್ಟಿಸುತ್ತಿದ್ದಾರೆ.
ಅಂತೂ, ಸಮಾಜದ ಶಾಂತಿ ಕೆಡಿಸಲು, ನೆಮ್ಮದಿ ನಾಶ ಮಾಡಲು ಕಾಯುತ್ತಲೇ ಇರುವವರು ಈಗಿನ ವಿದ್ಯಮಾನವನ್ನು ತಮ್ಮ ಉದ್ದೇಶಕ್ಕೆ ಬಳಸಿಕೊಳ್ಳಲು ಯತ್ನಿಸುತ್ತಿರುವುದಂತೂ ನಿಚ್ಚಳವಾಗಿದೆ. ಇಲ್ಲದ ಪ್ರಕ್ಷುಬ್ಧತೆಯನ್ನು ಸೃಷ್ಟಿಸಲು ಹೊಂಚು ಹಾಕುತ್ತಿರುವ ಬಿಜೆಪಿ, ಸಂಘ ಪರಿವಾರ ಹಾಗು ಟಿವಿ ಚಾನಲ್ ಗಳಿರುವ ಹೊತ್ತಲ್ಲಿ ಮುಸ್ಲಿಂ ಸಮುದಾಯದ ಜವಾಬ್ದಾರಿಯುತ ನಾಯಕರು, ಧಾರ್ಮಿಕ ಕಾರ್ಯಕ್ರಮಗಳ ಆಯೋಜಕರೂ ಸ್ವಲ್ಪ ವಿವೇಚನೆಯಿಂದ ವರ್ತಿಸಬೇಕು. ಪ್ರವಾದಿ ಜನ್ಮದಿನಾಚರಣೆಗೂ ಯಾವುದೇ ರಾಜರ ಚಿತ್ರಗಳಿಗೆ, ಆಯುಧಗಳ ಪ್ರತಿಕೃತಿಗಳಿಗೆ ಯಾವ ಸಂಬಂಧವೂ ಇಲ್ಲ, ಸ್ಥಾನವೂ ಇಲ್ಲ, ಪಾತ್ರವೂ ಇಲ್ಲ. ಅವುಗಳನ್ನು ಪ್ರದರ್ಶಿಸುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಾಗಿ ಇಂತಹ ಹಿಂಸಾ ಪ್ರಚೋದಕರಿಗೆ, ಸುಳ್ಳುಕೋರರಿಗೆ ನಾವೇ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಅದರ ಬದಲು ಪ್ರವಾದಿ ಹೇಳಿ ಕೊಟ್ಟಿರುವ ಹಾಗು ಮಾಡಿ ತೋರಿಸಿರುವ ಹಾಗೆ ಅಶಕ್ತರ ಸೇವೆ, ಹಸಿದವರಿಗೆ ಉಣಿಸುವುದು, ಸಂಕಷ್ಟದಲ್ಲಿರುವವರಿಗೆ ನೆರವಾಗುವುದು - ಇಂತಹದ್ದನ್ನು ಮಾಡಿದರೆ ಅರ್ಥಪೂರ್ಣ ಎಂಬ ವಿವೇಕ ನಮ್ಮಲ್ಲಿರಬೇಕು.