‘ಮಕ್ಕಳ ಕುಡಿಯುವ ನೀರಿನ ಬೆಲ್’ ಸುತ್ತೋಲೆಯನ್ನು ಮರೆತ ಶಿಕ್ಷಣ ಇಲಾಖೆ!
ಕೋಲಾರ, ಡಿ.1: ಮಕ್ಕಳ ಆರೋಗ್ಯದ ಹಿತದೃಷ್ಟಿಯಿಂದ ರೂಪಿಸಲಾಗಿದ್ದ ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಕಾರ್ಯಕ್ರಮ ಇಂದಿಗೂ ಅನೇಕ ಶಾಲೆಗಳಲ್ಲಿ ಜಾರಿಯಾಗಿಲ್ಲ. ಹೆಚ್ಚಿನ ಪ್ರಚಾರದ ಕೊರತೆ ಮತ್ತು ಇಲಾಖಾ ಮೇಲಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಡಿಯುವ ನೀರಿನ ಬೆಲ್ ಕಾರ್ಯಕ್ರಮ ಮೂಲೆಗುಂಪಾಗಿದೆ.
ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಈ ರೀತಿಯ ಸುತ್ತೋಲೆ ಇತ್ತು ಎನ್ನುವುದೇ ತಿಳಿಯದ ಪರಿಣಾಮ ಸರಕಾರದ ಸುತ್ತೋಲೆ ಹಳ್ಳಹಿಡಿದಿದೆ.
ರಾಜ್ಯ ಸರಕಾರವು 2019ರಲ್ಲಿ ಕುಡಿಯುವ ನೀರಿನ ಬೆಲ್ (ವಾಟರ್ ಬೆಲ್) ಹೆಸರಿನಲ್ಲಿ ಸುತ್ತೋಲೆ ಹೊರಡಿಸಿ ಮಕ್ಕಳು ನೀರನ್ನು ಕುಡಿಯಬೇಕು ಎಂದು ಕಾರ್ಯಕ್ರಮವನ್ನು ರೂಪಿಸಿತ್ತು. ಕುಡಿಯುವ ನೀರಿನ ಬೆಲ್ ಶಬ್ದ ಕೇಳಿದ ತಕ್ಷಣ ಮಕ್ಕಳು ನೀರು ಕುಡಿಯಲು ವ್ಯವಸ್ಥೆಮಾಡಿ ಸ್ವಲ್ಪಸಮಯ ವಿರಾಮ ನೀಡಲು ಸುತ್ತೋಲೆಯಲ್ಲಿ ತಿಳಿಸಲಾಗಿತ್ತು.
ನೀರು ಕುಡಿಯದ ಕಾರಣಕ್ಕೆ ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮಕ್ಕಳ ಬಾಲ್ಯದಿಂದಲೇ ದೇಹಕ್ಕೆ ಬೇಕಾದಷ್ಟು ನೀರು ಸೇರದ ಕಾರಣ ಹಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಮುಖ್ಯವಾಗಿ ಮನುಷ್ಯ ನೀರು, ಗಾಳಿ ಮತ್ತು ಆಹಾರವನ್ನು ಕ್ರಮಬದ್ಧವಾಗಿ ತೆಗೆದುಕೊಳ್ಳಬೇಕು. ಇವುಗಳಲ್ಲಿ ಯಾವುದು ಕಡಿಮೆಯಾದರೂ ಮನುಷ್ಯ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಮುಖ್ಯವಾಗಿ ಚಿಕ್ಕವಯಸ್ಸಿನಿಂದ ವಿದ್ಯಾರ್ಥಿಗಳಿಗೆ ಹೆಚ್ಚು ನೀರಿನ ಅವಶ್ಯಕತೆ ಇರುತ್ತದೆ. ಈ ಬಗ್ಗೆ ಕೇರಳ ಸರಕಾರ ಹೊಸ ಮಾರ್ಗವನ್ನು ಅನುಸರಿಸುತ್ತಿದೆ. ಆ ರಾಜ್ಯದ ಎಲ್ಲ ಶಾಲೆಗಳಲ್ಲಿ ಪ್ರತೀ ಮೂರು ಘಂಟೆಗೆ ಒಮ್ಮೆ ವಾಟರ್ ಬೆಲ್ ಹೊಡೆಯಬೇಕು ಎಂದು ಆದೇಶವಿದೆ.
ಆ ಸಮಯದಲ್ಲಿ ವಿದ್ಯಾರ್ಥಿಗಳು ನೀರು ಕುಡಿಯುವ ಹಾಗೆ ಶಿಕ್ಷಕರು ಗಮನಹರಿಸುವಂತೆ ತಿಳಿಸಲಾಗಿದೆ. ಆ ಮೂಲಕ ಅಲ್ಲಿನ ಮಕ್ಕಳು ನೀರು ಕುಡಿಯುವಂತೆ ಮಾಡಲಾಗುತ್ತಿದೆ. ಇದೇ ರೀತಿಯಲ್ಲಿ ತಮಿಳುನಾಡಿನಲ್ಲೂ ನಡೆಯುತ್ತದೆ.
ಸರಕಾರದ ಸುತ್ತೋಲೆ ಪ್ರಕಾರ ಎಲ್ಲ ಮಕ್ಕಳು ಕುಡಿಯುವ ನೀರಿನ ಬೆಲ್ ಹೊಡೆಯುತ್ತಿದ್ದಂತೆ ನೀರು ಕುಡಿ ಯುವಂತೆ ಶಿಕ್ಷಕರು ಪ್ರೋತ್ಸಾಹಿಸಬೇಕು.
ರಜೆ ದಿನಗಳಲ್ಲಿ ಮನೆಗಳಲ್ಲಿದ್ದಾಗಲೂ ನೀರು ಕುಡಿಯಬೇಕು ಎಂದು ಮಕ್ಕಳಿಗೆ ಅರಿವು ಮೂಡಿಸಬೇಕು.
ಕೆಲವು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರು ದೊರೆಯದಿರುವುದೂ ಯೋಜನೆಯ ವಿಫಲತೆಗೆ ಕಾರಣವಾಗಿದೆ. ಕುಡಿಯುವ ನೀರಿನ ಬೆಲ್ ಕಾರ್ಯಕ್ರಮ ಜಾರಿಗೆ ತರುವಾಗ ವಿದ್ಯಾರ್ಥಿಗಳಿಗೆ ನೀರು ಕುಡಿಯಲು ಬೇಕಾದ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಸರಕಾರವೂ ವಿಫಲವಾಗಿದೆ. ಸರಕಾರ ಇನ್ನಾದರೂ ಈ ಬಗ್ಗೆ ಸೂಕ್ತ ಕ್ರಮವಹಿಸಿ ಮಕ್ಕಳ ಆರೋಗ್ಯವನ್ನು ಕಾಪಾಡಲು ಮುಂದಾಗಬೇಕಿದೆ.
ಕುಡಿಯುವ ನೀರು ಮನುಷ್ಯನ ಆರೋಗ್ಯಕ್ಕೆ ಅತಿಮುಖ್ಯ. ಆರೋಗ್ಯ ಮತ್ತು ಬೆಳವಣಿಗೆಯ ದೃಷ್ಟಿಯಿಂದ ಮಕ್ಕಳು ಪ್ರತೀ ದಿನ ಕ್ರಮಬದ್ಧವಾಗಿ ನೀರು ಕುಡಿಯುವುದನ್ನು ಕಡ್ಡಾಯಗೊಳಿಸಬೇಕು. ‘ಕುಡಿಯುವ ನೀರಿನ ಬೆಲ್’ ಸರಕಾರದ ಸುತ್ತೋಲೆಯನ್ನು ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಜಾರಿಗೆ ತರಬೇಕು.
-ಚಿಕ್ಕವಲಗಮಾದಿ ಲಕ್ಷ್ಮಮ್ಮ,
ಬೆಂಗಳೂರು ವಿಭಾಗೀಯ ಸಂಚಾಲಕಿ,
ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಣ್ಣಯ್ಯ ಬಣ).
ದೇಹದಲ್ಲಿ ಶೇ 75 ಭಾಗದಷ್ಟು ನೀರಿನ ಅಂಶ ಇರುವಂತೆ ನೋಡಿಕೊಳ್ಳಬೇಕು. ದೇಹದ ಎಲ್ಲ ಕ್ರಿಯೆಗಳಿಗೆ ಶುದ್ಧ ಕುಡಿಯುವ ನೀರು ಅಗತ್ಯದಷ್ಟು ದೇಹಕ್ಕೆ ಸೇರಬೇಕು. ದೇಹದಲ್ಲಿ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಕಿಡ್ನಿ ಸಮಸ್ಯೆಯಾಗುವ ಸಂಭವ ಇರುತ್ತದೆ. ವಾಂತಿಬೇಧಿ ಆದಂತಹ ಸಂದರ್ಭದಲ್ಲಿ ಅತಿಹೆಚ್ಚು ನೀರು ಕುಡಿಯುವುದರಿಂದ ಹೆಚ್ಚಿನ ಅನಾಹುತ ತಡೆಯಬಹುದಾಗಿದೆ. ಮಕ್ಕಳ ಆರೋಗ್ಯದ ದೃಷ್ಟಿಯಿಂದ ಅಗತ್ಯ ಪ್ರಮಾಣದಲ್ಲಿ ನೀರು ಕುಡಿಯುವಂತೆ ಮಕ್ಕಳಿಗೆ ಜಾಗೃತಿ ಮೂಡಿಸಬೇಕಿದೆ.
-ಡಾ.ಕಮಲಾಕರ, ಮಕ್ಕಳ ವೈದ್ಯರು
ಮತ್ತೊಮ್ಮೆ ನೆನಪೋಲೆ ಹೊರಡಿಸುತ್ತೇವೆ
ಶಾಲೆಗಳಲ್ಲಿ ಕುಡಿಯುವ ನೀರಿನ ಬೆಲ್ ಯೋಜನೆ ಸಮರ್ಪಕವಾಗಿ ನಡೆಯುತ್ತಿಲ್ಲ ಎಂಬ ದೂರುಗಳು ಕೇಳಿಬಂದಿದೆ. ಶುದ್ಧ ಕುಡಿಯುವ ನೀರು ಮಗುವಿನ ಆರೋಗ್ಯಕ್ಕೆ ಬಹಳ ಮುಖ್ಯ. ಸುತ್ತೋಲೆಯಂತೆ ಕುಡಿಯುವ ನೀರಿನ ಬೆಲ್ ಹೊಡೆದು ಮಕ್ಕಳು ನೀರು ಕುಡಿಯುವಂತೆ ಮಾಡಲು ಎಲ್ಲ ಶಾಲೆಗಳಿಗೆ ಮತ್ತೋಮ್ಮೆ ನೆನಪೋಲೆ ಹೊರಡಿಸುತ್ತೇವೆ.
-ಸುಕನ್ಯಾ, ಬಂಗಾರಪೇಟೆ ಕ್ಷೇತ್ರ ಶಿಕ್ಷಣಾಧಿಕಾರಿ