ಎಂಡೋಸಲ್ಫಾನ್ ದುಷ್ಪರಿಣಾಮ ಮೂರನೇ ತಲೆಮಾರಿಗೂ ಹಸ್ತಾಂತರ
ಸ್ಕೋಡ್ವೇಸ್ ಸಂಸ್ಥೆಯ ಅಧ್ಯಯನದಿಂದ ಬೆಳಕಿಗೆ

ಕಾರವಾರ, ಫೆ.11: ಉತ್ತರ ಕನ್ನಡ ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುಷ್ಪರಿಣಾಮದ ತೀವ್ರತೆಗೆ ಸಾಕಷ್ಟು ಜನರು ತೊಂದರೆಗೆ ಸಿಲುಕಿದ್ದು, ಪೀಡಿತರಾದ ಕುಟುಂಬಗಳ ಪೈಕಿ ಈಗ ಎರಡರಿಂದ ಮೂರನೇ ತಲೆಮಾರು ಕೂಡ ಅದರ ಪರಿಣಾಮ ಎದುರಿಸುತ್ತಿದೆ ಎನ್ನುವ ಆತಂಕಕಾರಿ ವಿಷಯ ಸ್ಕೋಡ್ವೇಸ್ ಸಂಸ್ಥೆ ನಡೆಸಿದ ಅಧ್ಯಯನದಿಂದ ಬೆಳಕಿಗೆ ಬಂದಿದೆ.
ಜಿಲ್ಲೆಯ ಕರಾವಳಿ ತಾಲೂಕುಗಳಲ್ಲಿ 2024ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಎಂಡೋಸಲ್ಫಾನ್ ಸಿಂಪಡಣೆ ನಿಲ್ಲಿಸಿದ ಬಳಿಕ ಆಯಾ ವ್ಯಾಪ್ತಿಯಲ್ಲಿ ಹುಟ್ಟಿದ ಮಕ್ಕಳಲ್ಲಿ ತೀವ್ರ ಸ್ವರೂಪದ ಶಾಶ್ವತ ಅಂಗವೈಕಲ್ಯವನ್ನು ಗುರುತಿಸಲಾಗಿದೆ. 2025ರಲ್ಲಿ ನಡೆದ ಮರು ಸಮೀಕ್ಷೆಯಲ್ಲಿ ಇತ್ತೀಚೆಗೆ ಜನಿಸಿದ ನೂರಕ್ಕೂ ಅಧಿಕ ಮಕ್ಕಳಲ್ಲಿಯೂ ವಿವಿಧ ಅಂಗವೈಕಲ್ಯ ಪತ್ತೆಯಾಗಿದೆ. ಎಂಡೋಸಲ್ಫಾನ್ ಸಿಂಪಡನೆಯ ಬಳಿಕ ಅಂದರೆ ಎರಡು, ಮೂರನೇ ತಲೆಮಾರಿಗೂ ದುಷ್ಪರಿಣಾಮ ಮಾನವನ ಜೀನ್ಸ್ ಮೂಲಕ ಹಸ್ತಾಂತರವಾಗುತ್ತಿರುವುದು ಅಧ್ಯಯನದಿಂದ ಖಚಿತವಾಗಿದೆ.
ಎಂಡೋಸಲ್ಫಾನ್‌ನಿಂದ ಕಳೆದ 45 ವರ್ಷಗಳಿಂದ 8 ಸಾವಿರಕ್ಕೂ ಹೆಚ್ಚು ಜನ ಈ ತೊಂದರೆಗೆ ಸಿಲುಕಿದ್ದಾರೆ. ಪೀಡಿತರಿಗೆ ಆರೋಗ್ಯ ಸೇವೆ ಸಿಗುತ್ತಿದ್ದರೂ ಸರಿಯಾದ ಸಮಯಕ್ಕೆ ಲಭಿಸುತ್ತಿಲ್ಲ ಎನ್ನುವ ಆರೋಪವಿದೆ. ಎಂಡೋಸಲ್ಫಾನ್ ಪೀಡಿತರಿದ್ದರೆ ಅವರನ್ನು ನೋಡಿಕೊಳ್ಳಲು ಮನೆಯಲ್ಲಿ ಓರ್ವರು ಇರುವುದೂ ಅನಿವಾರ್ಯವಾಗಿದೆ.
ಕರ್ನಾಟಕ ಗೇರು ಅಭಿವೃದ್ಧಿ ನಿಗಮವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಏಳು ತಾಲೂಕುಗಳಲ್ಲಿ ಸುಮಾರು 11,794.23 ಹೆಕ್ಟೇರ್ ಗೇರು ನೆಡುತೋಪುಗಳಿಗೆ 1986ರಿಂದ 2011ರ ಅವಧಿಯಲ್ಲಿ ಗೇರುಬೀಜದ ಇಳುವರಿಗೆ ಅಡ್ಡಿಯಾಗುತ್ತಿದ್ದ ಟೀ ಸೊಳ್ಳೆಗಳನ್ನು ನಾಶಪಡಿಸಲು ನಿರಂತರವಾಗಿ ವರ್ಷಕ್ಕೆ ಎರಡು ಬಾರಿಯಂತೆ ಒಟ್ಟು 57,000 ಲೀಟರ್ ವಿಷಕಾರಿ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಸಿಂಪಡಿಸಿದೆ. ಆದರೆ, ನಿಗಮವು ನೀಡಿದ ದಾಖಲೆಗಳ ಪ್ರಕಾರ ಒಟ್ಟು ಖರೀದಿಸಲಾದ ಕ್ರಿಮಿನಾಶಕಗಳ ಪ್ರಮಾಣ ಹಾಗೂ ಬಳಕೆ ಮಾಡಲಾದ ಪ್ರಮಾಣಕ್ಕೆ ಸಾಕಷ್ಟು ಪ್ರಮಾಣದ ವ್ಯತ್ಯಾಸವಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯು ಹಸಿರು ನ್ಯಾಯ ಪೀಠಕ್ಕೆ ನೀಡಿದ ವರದಿಯಲ್ಲಿ 778 ಬ್ಯಾರೆಲ್‌ಗಳ ಮೂಲಕ ಕ್ರಿಮಿನಾಶಕ ಸಿಂಪಡಿಸಲಾಗಿತ್ತು.
ಆದರೆ, ಕಾರ್ಪೊರೇಷನ್ ಅಧಿಕಾರಿಗಳು ಕೇವಲ 20 ಬ್ಯಾರಲ್‌ಗಳನ್ನು ಮಾತ್ರ ತೋರಿಸಿದ್ದು, ಉಳಿದ ಬ್ಯಾರೆಲ್‌ಗಳು ಏನಾದವು ಎಂಬ ಬಗ್ಗೆ ಮಾಹಿತಿ ಇಲ್ಲ. ಇಲಾಖೆಯ ಕೆಲವು ಸಿಬ್ಬಂದಿ ಹೇಳುವಂತೆ ಎಂಡೋಸಲ್ಫಾನ್ ಕ್ರಿಮಿನಾಶಕದ ಬಗ್ಗೆ ಆಕ್ಷೇಪಗಳು ಬರುತ್ತಿದ್ದಂತೆ ಬಾಕಿ ಇದ್ದ ಕ್ರಿಮಿನಾಶಕ ಮತ್ತು ಅದರ ದಾಸ್ತಾನು ಪರಿಕರಗಳನ್ನು ಭೂಮಿಯಲ್ಲಿ ಹೂತಿದ್ದೇವೆ ಎಂದು ಹೇಳಲಾಗಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಸರಕಾರವನ್ನು ಹಲವಾರು ಬಾರಿ ಒತ್ತಾಯಿಸಿದ್ದೇವೆ. ಆದರೆ, ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಕೋಡ್ವೇಸ್ ಸಂಸ್ಥೆಯ ಎಂಡಿ ಡಾ.ವೆಂಕಟೇಶ ನಾಯಕ ಆರೋಪಿಸಿದ್ದಾರೆ.
ಎಂಡೋಸಲ್ಫಾನ್ ವಿಷಕಾರಿ ಕ್ರಿಮಿನಾಶಕ ಸಿಂಪಡಣೆಯಿಂದ ದಕ್ಷಿಣ ಕನ್ನಡದಲ್ಲಿ 3,607 ಜನ ಉಡುಪಿ ಜಿಲ್ಲೆಯಲ್ಲಿ 1,514 ಜನ, ಉತ್ತರ ಕನ್ನಡ ಜಿಲ್ಲೆಯಲ್ಲಿ 1,793 ಜನ, ಸೇರಿದಂತೆ ಒಟ್ಟು 6,914 ಜನರು ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿದ್ದಾರೆ ಎಂದು ದಾಖಲೆಗಳು ಹೇಳುತ್ತವೆ. ಆದರೆ, ಗೇರು ನೆಡುತೋಪಿನ 5 ಕಿ.ಮೀ. ಸುತ್ತಳತೆಯಲ್ಲಿ ನಡೆಸಲಾದ ಸಮೀಕ್ಷೆ ಸರಿಯಾಗಿಯೇ ಆಗದ ಕಾರಣ ಇನ್ನೂ ಸಾವಿರಾರು ಜನ ಎಂಡೋ ಬಾಧಿತರ ಪಟ್ಟಿಯಲ್ಲಿ ಸೇರಿಲ್ಲ ಎನ್ನುವ ಮಾಹಿತಿ ಇದೆ.
ಈ ಕಾರಣಕ್ಕಾಗಿ ಪಟ್ಟಿಯಲ್ಲಿ ಸೇರದ ಸಾವಿರಾರು ಎಂಡೋಸಲ್ಫಾನ್ ಬಾಧಿತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಲ್ಲದೆ ಈಗಾಗಲೇ ಸರಿಯಾದ ಸಮಯದಲ್ಲಿ ಚಿಕಿತ್ಸೆ ಹಾಗೂ ಸೌಲಭ್ಯ ಸಿಗದೆ ನೂರಾರು ಜನ ಸಾವನ್ನಪ್ಪಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಗೇರು ಅಭಿವೃದ್ಧಿ ನಿಗಮವು ಬಳಕೆಯಾಗದೇ ಇರುವ ಎಂಡೋಸಲ್ಫಾನ್ ಹಾಗೂ ಇತರ ಕ್ರಿಮಿನಾಶಕಗಳನ್ನು ಯಾವ ರೀತಿ ವಿಲೇವಾರಿ ಮಾಡಿದ್ದಾರೆ ಹಾಗೂ ಎಲ್ಲೆಲ್ಲಿ ಹೂತಿದ್ದಾರೆ ಎಂಬ ಬಗ್ಗೆ ತನಿಖೆಗೆ ಆದೇಶಿಸಬೇಕು ಎನ್ನುತ್ತಾರೆ ಈ ಕುರಿತು ಅಧ್ಯಯನ ನಡೆಸುತ್ತಿರುವ ಸ್ಕೋಡ್ವೇಸ್ ಸಂಸ್ಥೆಯ ಡಾ.ವೆಂಕಟೇಶ ನಾಯ್ಕ.
ಎಂಡೋಸಲ್ಫಾನ್ ಕೀಟನಾಶಕದ ಪರಿಣಾಮ ಬಹುವಿಧದ ಅಂಗವೈಕಲ್ಯಕ್ಕೆ ತುತ್ತಾಗಿ ನರಕ ಯಾತನೆ ಅನುಭವಿಸುತ್ತಿರುವುದು ಪತ್ತೆಯಾಗಿತ್ತು. ಅವರಿಗೆ ವಿಶೇಷ ಮಾಸಾಶನ ನೀಡಬೇಕು. ಉಚಿತ ಚಿಕಿತ್ಸೆ ನೀಡಬೇಕು ಎಂಬ ಹಲವು ಸೂಚನೆಗಳನ್ನು ಹಸಿರು ನ್ಯಾಯಪೀಠ ಹೊರಡಿಸಿತ್ತು.
ತೊಂದರೆಯಲ್ಲಿ ಪೀಡಿತರು: ಎಂಡೋಸಲ್ಫಾನ್ ಪೀಡಿತರಾದ ಸಾವಿರಾರು ಜನ ನಿತ್ಯ ನರಕ ಯಾತನೆ ಅನುಭವಿಸುತ್ತಿದ್ದಾರೆ. ಹಾಸಿಗೆಯಿಂದ ಏಳಲಾದರ ಸ್ಥಿತಿ. ಇದರಿಂದ ಆಯಾ ಕುಟುಂಬಗಳು ಸಂಕಷ್ಟಲ್ಲಿದೆ. ಅವರಿಗೆ ಮನೆಗಳಿಗೆ ಔಷಧ ಹಾಗೂ ಚಿಕಿತ್ಸೆ ನೀಡಲು ಇದ್ದ ಸಂಚಾರಿ ಆರೋಗ್ಯ ಘಟಕವನ್ನು ಬಂದ್ ಮಾಡಲಾಗಿದೆ. ಪಿಎಚ್‌ಸಿಗಳಿಂದ ಕಾಲಕಾಲಕ್ಕೆ ಔಷಧ ಮನೆಗಳಿಗೆ ತಲುಪಿಸುವ ಕ್ರಮವೂ ಸೂಕ್ತ ರೀತಿಯಲ್ಲಿ ಆಗುತ್ತಿಲ್ಲ ಎನ್ನುವ ಆರೋಪಗಳು ಕೇಳಿ ಬರುತ್ತಿವೆ.
ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ನಡೆಸಿದ ಮರು ಸಮೀಕ್ಷೆಯಲ್ಲಿ ಎಂಡೋಸಲ್ಫಾನ್ ಪ್ರಭಾವವು ಆಯಾ ಭಾಗದ ಮಾನವನ ಕ್ರೋಮೋರೆಮ್ ಹಂತದಲ್ಲಿಯೇ ಬೀರಿದೆ. ಇದರಿಂದ ಎರಡನೇ ತಲೆಮಾರಿನ ಮಕ್ಕಳಲ್ಲಿಯೂ ಅಂಗವೈಕಲ್ಯ ಕಂಡು ಬಂದಿರುವುದು ಪತ್ತೆಯಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲು ಉಳಿದ ತಾಲೂಕುಗಳಲ್ಲಿಯೂ ಬಾಕಿ ಉಳಿದವರನ್ನು ಗುರುತಿಸಲು ಶೀಘ್ರದಲ್ಲಿ ಶಿಬಿರ ಆಯೋಜಿಸಲಾಗುವುದು.
► ಡಾ.ನೀರಜ್ ಬಿ.ವಿ.,
ಡಿಎಚ್‌ಒ, ಕಾರವಾರ
ಎಂಡೋಸಲ್ಫಾನ್ ಸಮಸ್ಯೆಯಾಗಿ ಕಾಡುತ್ತಿದೆ. ಇದು ಅನುವಂಶಿಕವಾಗಿ ಹರಡುವುದನ್ನು ತಡೆಯಲು ವೈದ್ಯಕೀಯ ಅಧ್ಯಯನ ಅಗತ್ಯವಿದೆ. ಅಲ್ಲದೆ, ಮುನ್ನೆಚ್ಚರಿಕೆ ಕ್ರಮ ಅತ್ಯಗತ್ಯವಾಗಿದೆ.
► ಡಾ.ವೆಂಕಟೇಶ ನಾಯಕ,
ಸ್ಕೋಡ್ವೇಸ್ ಸಂಸ್ಥೆಯ ಎಂಡಿ