ಇಸ್ರೇಲ್ - ಫೆಲೆಸ್ತೀನ್ ಸಂಘರ್ಷ ಸುಳ್ಳು ಸುದ್ದಿಗಳ ಸ್ಫೋಟ
►ಇಸ್ರೇಲ್ ಪರ ಚಾನಲ್ ಗಳು ಕಾರಿದ್ದನ್ನೇ ನೆಕ್ಕಿ ಪ್ರಕಟಿಸುವ ಭಾರತದ ಮಡಿಲ ಮಾಧ್ಯಮಗಳು ! ►ಒಂದಿಷ್ಟೂ ಹಿಂಜರಿಕೆ ಇಲ್ಲದೆ ಸುಳ್ಳು ಸುದ್ದಿ ಹರಡುತ್ತಿರುವ ಬಲಪಂಥೀಯರು
ಇಸ್ರೇಲ್-ಹಮಾಸ್ ಯುದ್ಧ ಒಂದೆಡೆ ಜಗತ್ತನ್ನು ಕಂಗೆಡಿಸುತ್ತಿದ್ದರೆ, ಹಸಿ ಹಸಿ ಸುಳ್ಳು ಸುದ್ದಿಗಳ ಮೂಲಕ ದ್ವೇಷ ಹರಡುವ ನೀಚತನವೊಂದು ಮತ್ತೊಂದೆಡೆ ಯುದ್ಧದಷ್ಟೇ ಭಯಾನಕವಾಗಿ ಸಾಗಿದೆ. ಟ್ವಿಟರ್, ವಾಟ್ಸಾಪ್ ಮೊದಲಾದ ಸಾಮಾಜಿಕ ಜಾಲತಾಣಗಳು ಫೇಕ್ ನ್ಯೂಸ್ನಿಂದ ತುಂಬಿಹೋಗಿವೆ. ದ್ವೇಷ ಕಾರುವ ಇಂಥ ಫೇಕ್ ನ್ಯೂಸ್ಗಳ ಹರಡುವಿಕೆಯಲ್ಲಿ ಮುಖ್ಯ ವಾಹಿನಿಯ ನ್ಯೂಸ್ ಚಾನೆಲ್ಲುಗಳೂ ಬಿಝೀಯಾಗಿವೆ.
ಹಿಟ್ಲರ್ನನ್ನು ಹೀರೋ ಎನ್ನುತ್ತಲೇ ಇನ್ನೊಂದೆಡೆ ಇಸ್ರೇಲ್ ಅನ್ನೂ ಮೆಚ್ಚುವ ಭಾರತದ ಬಲಪಂಥೀಯರ ದ್ವಂದ್ವ, ವಿರೋಧಾಭಾಸ ಮತ್ತೊಂದೆಡೆ ಕಣ್ಣಿಗೆ ರಾಚುತ್ತಿದೆ. ಯಹೂದಿಗಳ ಹಿತಾಸಕ್ತಿ ಕಾಪಾಡುವ ಹೆಸರಲ್ಲಿಇಸ್ರೇಲ್ ನಡೆಸುವ ದೌರ್ಜನ್ಯ, ದಬ್ಬಾಳಿಕೆ, ಪರಮ ಅನ್ಯಾಯಗಳನ್ನೆಲ್ಲ ಸಾಹಸ, ಶೌರ್ಯ ಎಂದೆಲ್ಲ ಬಣ್ಣಿಸಿ ಬೆಂಬಲಿಸುವ ಹಿಂದುತ್ವವಾದಿಗಳು ಲಕ್ಷಾಂತರ ಯಹೂದಿಗಳ ಮಾರಣ ಹೋಮ ನಡೆಸಿದ ಹಿಟ್ಲರ್ ನಂತಹ ಆಡಳಿತ ಇಲ್ಲೂ ಬರಬೇಕು ಎಂದೂ ಬಯಸುತ್ತಾರೆ. ಅವರಿಗೆ ಇಸ್ರೇಲ್ ನಲ್ಲಿ ಹಿಟ್ಲರ್ ಹೆಸರೂ ಹೇಳುವಂತಿಲ್ಲ ಎಂಬ ಕನಿಷ್ಠ ಜ್ಞಾನವೂ ಇಲ್ಲ.
ಇಸ್ರೇಲ್ ಅನ್ನು ಮೆಚ್ಚುವವರು ಹಿಟ್ಲರ್ನನ್ನು ಮೆಚ್ಚಿಕೊಳ್ಳುವುದು ಸಾಧ್ಯವೇ ಇಲ್ಲ. ಆದರೆ ಬಲಪಂಥೀಯರು ಅದನ್ನೇ ಮಾಡುತ್ತಿದ್ದಾರೆ. ಏಕೆಂದರೆ ದ್ವಂದ್ವ, ಸೋಗಲಾಡಿತನ ಅವರ ಪ್ರಮುಖ ಸಂಕೇತಗಳು. ಯಾಕೆಂದರೆ ಅವರಿಗೆ ಮುಸ್ಲಿಂರನ್ನು ದ್ವೇಷಿಸಬೇಕಾಗಿದೆ. ಅವರ ವಿರುದ್ಧ ಸುಳ್ಳುಗಳನ್ನು ಹರಡಬೇಕಾಗಿದೆ. ಅವರ ವಿರುದ್ಧ ದ್ವೇಷ ವ್ಯಾಪಕವಾಗುವಂತೆ ಮಾಡಬೇಕಾಗಿದೆ.
ದಶಕಗಳಿಂದ ಇಸ್ರೇಲ್ ನಡೆಸುತ್ತಾ ಬಂದಿದ್ದ ಆಕ್ರಮಣ, ದೌರ್ಜನ್ಯಗಳಿಗೆ, ಲಕ್ಷಾಂತರ ಸಾವು ನೋವಿನ ಬಗ್ಗೆ ಕುರುಡು, ಕಿವುಡಾಗಿದ್ದ ಎಲ್ಲರೂ ಈಗ ಇಸ್ರೇಲ್ ಮೇಲಿನ ಒಂದೇ ದಾಳಿಗೆ ಎದ್ದು ಕುಳಿತಿದ್ದಾರೆ, ಬೆಚ್ಚಿ ಬಿದ್ದಿದ್ದಾರೆ. ಅವರಿಗೆ ಈಗ ನ್ಯಾಯ ಅನ್ಯಾಯ, ಮಾನವ ಹಕ್ಕು, ಶಾಂತಿ, ಸೌಹಾರ್ದ ಎಲ್ಲವೂ ನೆನಪಾಗುತ್ತಿದೆ.
ಇವೆಲ್ಲದರ ನಡುವೆ, ಸತ್ಯ ಗೊತ್ತಾಗುವುದರೊಳಗೇ ಲಕ್ಷಾಂತರ ಮಂದಿಗಳನ್ನು ಮುಟ್ಟಿಬಿಡುವ ಸುಳ್ಳುಗಳು, ಅವು ಸೃಷ್ಟಿಸಬಹುದಾದ ತಲ್ಲಣಗಳು ಅಥವಾ ಹೊತ್ತಿಸಬಹುದಾದ ಕಿಡಿ ಅಪಾಯಕಾರಿಯಾಗುತ್ತಿದೆ. ಯುದ್ಧದಂಥ ಸಮಯವೊಂದನ್ನು ಹೇಗೆಲ್ಲ ಮುಸ್ಲಿಂ ವಿರೋಧಿ ಅಪಪ್ರಚಾರಕ್ಕೆ ಅತ್ಯಂತ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ ಎಂಬುದು ದಿಗಿಲು ಹುಟ್ಟಿಸುವ ಸಂಗತಿಯಾಗಿದೆ.
ಯಾವುದೋ ಹಳೆಯ, ಸಂಬಂಧವೇ ಇಲ್ಲದ ವೀಡಿಯೊಗಳನ್ನೆಲ್ಲ ಯುದ್ಧದ ವೀಡಿಯೊಗಳೆಂದು ಬಿಂಬಿಸುತ್ತ, ಹಮಾಸ್ ವಿರುದ್ಧ ಜರೆಯುವ ಕೆಲಸ ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ನಡೆದಿದೆ. ಹಲವು ಪಾಶ್ಚಿಮಾತ್ಯ ಪ್ರಮುಖ ನ್ಯೂಸ್ ಚಾನಲ್ ಗಳು, ವೆಬ್ ಸೈಟ್ ಗಳು ಈ ಸುಳ್ಳು ಪ್ರಚಾರದಲ್ಲಿ ನಿರತವಾಗಿವೆ. ಗ್ರೌಂಡ್ ರಿಪೋರ್ಟ್ ಗಳ ಹೆಸರಲ್ಲಿ ಅಲ್ಲಿನ ಪ್ರೋಪಗಂಡಾ ಗಳು ಹರಡಿದ ಸುಳ್ಳನ್ನೇ ಸುದ್ದಿಯಾಗಿ ಪ್ರಸಾರ ಮಾಡಲಾಗುತ್ತಿದೆ. ಇದರಲ್ಲಿ ಬಹುತೇಕ ಸುಳ್ಳು ಸುದ್ದಿಗಳು ಇಸ್ರೇಲ್ ಪರ ಹಾಗೂ ಹಮಾಸ್ ವಿರೋಧಿ ರೂಪದಲ್ಲಿರುತ್ತವೆ ಎಂಬುದು ಸ್ಪಷ್ಟ.
ಈ ಬಾರಿ ಹಮಾಸ್ ಇಸ್ರೇಲ್ ಮೇಲೆ ಮೊದಲ ದಾಳಿ ಮಾಡಿದ ಬೆನ್ನಲ್ಲೇ ಎಕ್ಸ್ ನಲ್ಲಿ ಫೇಕ್ ಸುದ್ದಿ, ಫೇಕ್ ವಿಡಿಯೋಗಳು , ಫೇಕ್ ಫೋಟೋಗಳು, ಪ್ರಚೋದನಕಾರಿ ಮೆಸೇಜುಗಳು ದಂಡಿಯಾಗಿ ಬರಲಾರಂಭಿಸಿದವು. ಅಲ್ಲಿಂದ ಅದು ಬೇರೆ ಎಲ್ಲ ವೇದಿಕೆಗಳಿಗೆ ಬೆಂಕಿಯಂತೆ ಹರಡಿದೆ. ಇಲಾನ್ ಮಸ್ಕ್ ಟ್ವಿಟರ್ ಖರೀದಿಸಿ ಅದನ್ನು ಎಕ್ಸ್ ಆಗಿ ಬದಲಾಯಿಸುವ ಪ್ರಕ್ರಿಯೆಯಲ್ಲಿ ಅದರಲ್ಲಿದ್ದ ಫ್ಯಾಕ್ಟ್ ಚೆಕ್ ತಂಡವನ್ನು ಸಾಕಷ್ಟು ದುರ್ಬಲ ಗೊಳಿಸಿದ್ದಾರೆ ಎನ್ನುತ್ತವೆ ವರದಿಗಳು. ಈಗ ಅದರ ಫಲಿತಾಂಶ ನಮ್ಮ ಕಣ್ಣ ಮುಂದಿದೆ.
ವಿದೇಶಗಳಲ್ಲಿ ನಡೆಯುತ್ತಿರುವ ಈ ವ್ಯವಸ್ಥಿತ ಸುಳ್ಳು ಪ್ರಚಾರವನ್ನು ಭಾರತದ ಸಂಘ ಪರಿವಾರ ಹಾಗೂ ಬಿಜೆಪಿ ಕೃಪಾ ಪೋಷಿತ ಮಡಿಲ ಮಾಧ್ಯಮಗಳು ಅನುಸರಿಸುತ್ತಿವೆ. ಮತ್ತಿದೆಲ್ಲವೂ ಇಸ್ರೇಲಿಗೇ ತನ್ನ ಬೆಂಬಲ ಎನ್ನುತ್ತಿರುವ ಆಳುವ ಪಕ್ಷದ ರಾಜಕೀಯ ಹಿತಾಸಕ್ತಿಯನ್ನು ಕಾಯುವುದರ ಭಾಗವಾಗಿಯೇ ನಡೆಯುತ್ತಿದೆ ಎಂಬುದು ಸ್ಪಷ್ಟ.
ಈ ಅಪಪ್ರಚಾರ ಹಾಗೂ ಸುಳ್ಳು ಸುದ್ದಿ ಪ್ರಸಾರ ಕಳವಳಕಾರಿ ಪ್ರಮಾಣದಲ್ಲಿ ನಡೆಯುತ್ತಿದೆ. ಇಸ್ರೇಲ್-ಹಮಾಸ್ ಯುದ್ಧದ ಕುರಿತು ಸಾಮಾಜಿಕ ಮಾಧ್ಯಮಗಳ ತುಂಬ ಫೇಕ್ ಸುದ್ದಿಗಳೇ ಕಾಣಿಸುತ್ತಿವೆ. ಅದರಲ್ಲೂ ಎಕ್ಸ್ ಅಂದ್ರೆ ಮಾಜಿ ಟ್ವಿಟರ್ ಅಂತೂ ಯುದ್ಧಕ್ಕೆ ಸಂಬಂಧಿಸಿದ ಹಸಿ ಸುಳ್ಳು ಮಾಹಿತಿಗಳಿಂದಲೇ ತುಂಬಿಹೋಗಿದೆ. ಹಮಾಸ್ ಗುಂಪು ಶನಿವಾರ ಇಸ್ರೇಲ್ ಮೇಲೆ ದಾಳಿ ಮಾಡಿದ ಗಂಟೆಗಳ ನಂತರ, ಎಕ್ಸ್ ಮೂಲಕ ಹರಿದಾಡತೊಡಗಿರುವ ನಕಲಿ ವೀಡಿಯೊಗಳು, ಫೋಟೋಗಳು ಯುದ್ಧದ ಬಗ್ಗೆ ಸಂಪೂರ್ಣ ತಪ್ಪು ಮಾಹಿತಿಯನ್ನೇ ಹರಡುತ್ತಿವೆ.
ಅಲ್ ಜಝೀರಾ ವರದಿಯ ಪ್ರಕಾರ, ಇಂಥ 5 ಕೋಟಿಗೂ ಹೆಚ್ಚು ಪೋಸ್ಟ್ಗಳು ಎಕ್ಸ್ ನಲ್ಲಿ ಕಾಣಿಸಿಕೊಂಡಿವೆ. 5 ಕೋಟಿ ಪೋಸ್ಟ್ ಗಳು ಅಂದ್ರೆ ಅದೆಷ್ಟು ದೊಡ್ಡ ಪ್ರಮಾಣದಲ್ಲಿ ಸುಳ್ಳು ಸುದ್ದಿ ಹರಡಲಾಗುತ್ತಿದೆ ಎಂದು ನೀವೇ ಊಹಿಸಿ. ಇಷ್ಟು ದೊಡ್ಡ ಪ್ರಮಾಣದಲ್ಲಿ ಸುಳ್ಳು ಸುದ್ದಿಗಳು, ಪೋಸ್ಟ್ ಗಳು, ವಿಡಿಯೋಗಳು ಜನರ ನಡುವೆ ಓಡಾಡಿದರೆ ಎಷ್ಟನ್ನು ಫ್ಯಾಕ್ಟ್ ಚೆಕ್ ಮಾಡಬಹುದು ? ಫ್ಯಾಕ್ಟ್ ಚೆಕ್ ಆಗುವುದರೊಳಗೆ ಈ ಸುಳ್ಳು ಸುದ್ದಿಗಳು ಅದೆಷ್ಟು ಜನರನ್ನು ತಲುಪಿ ಆಗಿರಬಹುದು ?
ನಿಜ ಯಾವುದು ಸುಳ್ಳು ಯಾವುದು ಎಂಬುದು ಜನಸಾಮಾನ್ಯರಿಗೆ ತಿಳಿಯದಂತಾಗಿದೆ. ಆದರೆ, ದ್ವೇಷ ಬಿತ್ತಲು ಬಯಸಿರುವವರ ಉದ್ದೇಶ ಪೂರ್ತಿಯಾಗುವ ಅಪಾಯ ಮಾತ್ರ ಖಂಡಿತ ಇದೆ. ಫೆಲೆಸ್ತೇನಿಯನ್ ಉಗ್ರರು ಅಮಾಯಕ ಇಸ್ರೇಲಿಗಳನ್ನು, ಮಕ್ಕಳನ್ನು ಕೊಂದಿದ್ದಾರೆ ಎಂದು ಬಲಪಂಥೀಯರು ಪ್ರಚಾರ ಮಾಡುವುದು ಹೆಚ್ಚಿದೆ. ಸತ್ಯವೇ ಎನ್ನುವಷ್ಟು ಮಟ್ಟಿಗೆ ಅವರೆಲ್ಲ ಸುಳ್ಳು ಹರಡಲು ನಿಂತುಬಿಟ್ಟಿದ್ದಾರೆ.
ತಮಗೆ ಬೇಕಿರುವ, ತಮ್ಮ ಅಜೆಂಡವನ್ನು ಪೂರ್ತಿ ಮಾಡಬಲ್ಲ ಫೇಕ್ ನ್ಯೂಸ್ ಹರಡಲು ಹಳೆಯ ಮತ್ತು ಸಂಬಂಧವೇ ಇಲ್ಲದ ವೀಡಿಯೊಗಳನ್ನು ಇಲ್ಲಿ ತಿರುಚಿ ಬಳಸಲಾಗುತ್ತಿದೆ. ರಷ್ಯಾ-ಉಕ್ರೇನ್ ಯುದ್ಧದ ವೀಡಿಯೊ ಎಂದು ಭಾರತದ ಚಾನೆಲ್ಲುಗಳು ಯಾವುದೋ ಯುದ್ಧದ ವೀಡಿಯೊ ಗೇಮ್ ಕ್ಲಿಪ್ ಬಳಸಿದ್ದು ಗೊತ್ತೇ ಇದೆ. ಈಗ ಇಸ್ರೇಲಿ- ಫೆಲೆಸ್ತೇನಿ ಸಂಘರ್ಷದ ಹೊತ್ತಲ್ಲೂ ಅದೇ ಕೆಲಸವನ್ನು ಮಾಡಲಾಗುತ್ತಿದೆ.
ನಾಲ್ಕೂ ದಿಕ್ಕಿನಿಂದ ಸುಳ್ಳುಗಳೇ ಹಬ್ಬುತ್ತಿವೆ. 40 ಇಸ್ರೇಲಿ ಮಕ್ಕಳನ್ನು ಹಮಾಸ್ ಶಿರಚ್ಛೇದ ಮಾಡಿ ಹತ್ಯೆಗೈದಿದೆ ಎಂಬುದನ್ನು ಸತ್ಯವೆಂಬಂತೆ ಹಬ್ಬಿಸಲಾಯಿತು. ಮೊದಲು ವಿದೇಶಿ ಮಾಧ್ಯಮಗಳು ಹರಡಿದ ಈ ಸುಳ್ಳು ಸುದ್ದಿಯನ್ನು ಭಾರತದಲ್ಲಿ ರಿಪಬ್ಲಿಕ್ ಟಿವಿ, ಟೈಮ್ಸ್ ಆಫ್ ಇಂಡಿಯಾ, ಎ ಎನ್ ಐ, NDTV, ಸ್ವರಾಜ್ಯ , ಒಪ್ ಇಂಡಿಯಾ ಸಹಿತ ಹಲವು ಚಾನಲ್ ಗಳು, ವೆಬ್ ಸೈಟ್ ಗಳು ಪ್ರಕಟಿಸಿದವು. ಎಲ್ಲರೂ ಅದೇ ಸತ್ಯ ಎಂದು ನಂಬಿದರು.
ಆದರೆ ಅಂತಹ ಘಟನೆ ನಡೆದಿದ್ದು ಖಚಿತವಿಲ್ಲ ಎಂದು ಇಸ್ರೇಲ್ ಸೇನೆಯೇ ಹೇಳಿತು. ಇಲ್ಲಿನ ಅಪಾಯವೇನೆಂದರೆ, ನಿಜ ಯಾವುದು ಎಂದು ಗೊತ್ತಾಗುವಷ್ಟರಲ್ಲಿ ಸುಳ್ಳು ಎಲ್ಲೆಡೆ ತಲುಪಿ ಆಗಿರುತ್ತದೆ ಎಂಬುದು. ಹಮಾಸ್ ಗುಂಪು ಇಸ್ರೇಲಿ ಗಳ ಮನೆಗಳ ಮೇಲೆ ದಾಳಿ ನಡೆಸಿ ಮಹಿಳೆಯರು, ಮಕ್ಕಳ ಮೇಲೆಲ್ಲ ಹಲ್ಲೆ ಎಸಗಿದೆ ಎಂಬಂತೆ ಸುದ್ದಿ ಹರಡಲಾಯಿತು. ಆದರೆ, ಹಾಗೆ ಹಮಾಸ್ ಅನ್ಯಾಯವಾಗಿ ಮಾಡಿದೆ ಎಂದು ಯಾವುದನ್ನು ತಪ್ಪಾಗಿ ಹಬ್ಬಿಸಲಾಗಿತ್ತೊ ಅದೆಲ್ಲವನ್ನೂ ಮಾಡಿದ್ದು ಇಸ್ರೇಲ್ ಸೇನೆಯಾಗಿತ್ತು.
ಆದರೆ ಈ ಸತ್ಯ ಗೊತ್ತಾಗುವ ಮೊದಲೇ, ಅದಕ್ಕೂ ಮುಂಚೆ ಹರಡಲಾದ ಸುಳ್ಳು ಪೋಸ್ಟ್ ಅನ್ನು 1 ಕೋಟಿ 26 ಲಕ್ಷ ಮಂದಿ ನೋಡಿಯಾಗಿತ್ತು. ಅದು 10 ಸಾವಿರ ಬಾರಿ ರೀಪೋಸ್ಟ್ ಆಗಿತ್ತು. ಹಮಾಸ್ ವಿರುದ್ಧ ಸುಳ್ಳು ಹರಡುವುದಕ್ಕೆ ತಾಲಿಬಾನಿಗಳ ಫೋಟೋ ಬಳಸಿರುವುದನ್ನೂ ಅಲ್ ಜಝೀರಾ ಹೇಳಿದೆ. ಅದನ್ನು ಕೂಡ ಕೋಟಿಗೂ ಅಧಿಕ ಮಂದಿ ನೋಡಿದ್ದಾರೆ.
ಇಸ್ರೇಲ್-ಗಾಝಾ ಬಿಕ್ಕಟ್ಟಿನ ಬಗ್ಗೆ ಸುಳ್ಳು ಮತ್ತು ದ್ವೇಷವನ್ನು ಹರಡುವುದು ಹೆಚ್ಚಾಗಿದೆ. ಮಾಧ್ಯಮಗಳೂ ಅದನ್ನೇ ಮಾಡುತ್ತಿವೆ. ಹಾಗಾಗಿ ನಿಜವಾಗಿಯೂ ಸತ್ಯ ಯಾವುದು ಎಂಬುದು ಜನರಿಗೆ ತಿಳಿಯಲಾರದ ಸ್ಥಿತಿ ತಲೆದೋರಿದೆ. ಜನರು ತಮ್ಮ ರಾಜಕೀಯ ನಂಬಿಕೆಗಳ ಪ್ರಕಾರ ಸೋಷಿಯಲ್ ಮೀಡಿಯಾ ದಲ್ಲಿ ವೀಡಿಯೊಗಳನ್ನು ಹುಡುಕುತ್ತಾರೆ. ಅವರಿಗೆ ಅಲ್ಲಿನ ಅಲ್ಗೋರಿದಂ ಅಂಥದ್ದನ್ನೆ ತೋರಿಸುತ್ತದೆ. ಅಂಥದ್ದು ಕಂಡೊಡನೆ ಅದನ್ನು ನಂಬುತ್ತಾರೆ. ಅವುಗಳನ್ನು ಶೇರ್ ಮಾಡತೊಡಗುತ್ತಾರೆ.
ಆದರೆ ತಾವು ಹಾಗೆ ವೈರಲ್ ಮಾಡುತ್ತಿರುವ ಆ ಪೋಸ್ಟ್ಗಳು ಸತ್ಯದಿಂದ ಬಹಳ ದೂರ ಇವೆ, ಸಂಬಂಧವೇ ಇಲ್ಲದ ಯಾವುದೋ ಕ್ಲಿಪ್ ಅನ್ನು ಅಲ್ಲಿ ನಿಜವೆಂಬಂತೆ ತಿರುಚಿ ಬಳಸಲಾಗಿದೆ ಎಂಬುದು ಅವರಿಗೆ ಗೊತ್ತೇ ಆಗುವುದಿಲ್ಲ. ಈಗಿನ ಯುದ್ಧದ್ದೆಂದು ಹೇಳುತ್ತ ಪೋಸ್ಟ್ ಮಾಡಲಾಗುತ್ತಿರುವ ವೀಡಿಯೊ ಕ್ಲಿಪ್ಗಳು ತಿಂಗಳಿಗೂ ಹಿಂದೆ, ಕೆಲವು ವರ್ಷಗಳ ಹಿಂದೆ ಶೇರ್ ಮಾಡಿದ್ದವಾಗಿವೆ ಎಂಬುದು ಆಲ್ಟ್ ನ್ಯೂಸ್ ಫ್ಯಾಕ್ಟ್ ಚೆಕ್ನಲ್ಲಿಯೂ ಬಯಲಾಗಿದೆ.
ಎಷ್ಟರ ಮಟ್ಟಿಗೆ ಈ ಅತಿರೇಕ ಹೋಗಿದೆಯೆಂದರೆ, ಯಾವುದೋ ಟಿಕ್ ಟಾಕ್ ವೀಡಿಯೊಗಳನ್ನೆಲ್ಲ ಇಸ್ರೇಲ್-ಹಮಾಸ್ ಯುದ್ಧದ್ದು ಎಂಬಂತೆ ತೋರಿಸಲಾಗಿದೆ. ಹಾಗಾದರೆ, ಯಾಕೆ ಇಂಥ ಅಪಪ್ರಚಾರ ಮಾಡಲಾಗುತ್ತಿದೆ? ಯಾಕೆ ಹೀಗೆ ನಿರಂತರ ಮುಸ್ಲಿಂ ವಿರೋಧಿ ಅಪಪ್ರಚಾರ ನಡೆಸಲಾಗುತ್ತಿದೆ? ಇದರ ಉದ್ದೇಶ, ಇಂಥ ಸಮಯವನ್ನು ಬಳಸಿಕೊಂಡು. ಜನರ ಭಾವನೆಗಳನ್ನು ಕೆರಳಿಸುವುದು, ದ್ವೇಷ ಹರಡುವುದು,
ಫ್ರಾನ್ಸ್ನಲ್ಲಿ ಬೆಂಕಿಗೆ ಲೈಬ್ರರಿ ಆಹುತಿಯಾಗುವ ಘಟನೆಯನ್ನು ಭಾರತದಲ್ಲಿ ನೂರಾರು ವರ್ಷಗಳ ಹಿಂದೆ ನಡೆದಿತ್ತೆಂಬ ಘಟನೆಗೆ ಹೋಲಿಸಿ ಮುಸ್ಲಿಂರ ವಿರುದ್ಧ ಅಪಪ್ರಚಾರ ಮಾಡುವುದೂ ನಡೆಯುತ್ತದೆ. ಅದೇಕೆ ಅಲ್ಲಿನ ವಿಚಾರವನ್ನು ಕೂಡ ಮುಸ್ಲಿಂರ ವಿರುದ್ಧ ಸುಳ್ಳು ಹರಡುವುದಕ್ಕೆ, ದ್ವೇಷ ಹಬ್ಬಿಸುವುದಕ್ಕೆ ಬಳಸಬೇಕು?. ಭಾರತದಲ್ಲಿನ ಸುಳ್ಳುಕೋರರ ಕುರಿತು ಫ್ರಾನ್ಸ್ನಲ್ಲಿಯೂ ಚರ್ಚೆಯಾಗುವ ಮಟ್ಟಿಗೆ ಇಲ್ಲಿನ ಧಾರ್ಮಿಕ ದ್ವೇಷಿಗಳು, ಧಾರ್ಮಿಕ ಅಸಹಿಷ್ಣುಗಳು ಸುಳ್ಳು ಹರಡುತ್ತಿದ್ದಾರೆ.
ಯುದ್ಧವಾಗಲಿ, ಹಿಂಸಾಚಾರವಾಗಲಿ ಭಾರತದಲ್ಲಿ ಅದೆಲ್ಲವೂ ಸುಳ್ಳು ಹರಡಲು, ದ್ವೇಷದ ಕಿಡಿ ಹೊತ್ತಿಸಲು ಬಳಕೆಯಾಗುತ್ತಿರುವುದು ಮಾತ್ರ ವಿಪರ್ಯಾಸ. ಸಂಬಳವಿಲ್ಲದೆ ಇಸ್ರೇಲಿ ಸೇನೆ ಸೆರಲು ನಾನು ಸಿದ್ಧ. ನಾನು ಇಂಡಿಯಾದ ಹಿಂದು ಎಂದು ಬರೆದುಕೊಂಡ ಪೋಸ್ಟ್ ಹಲವು ಹೆಸರುಗಳಲ್ಲಿ ಹಲವು ಬಾರಿ ಕಾಣಿಸಿಕೊಂಡಿದೆ. ತಮಾಷೆಯೆಂದರೆ, ಇವೆಲ್ಲವೂ ಹಮಾಸ್ ದಾಳಿಗೂ ಎಷ್ಟೊ ಸಮಯ ಮೊದಲೇ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿವೆ. ಏನಿವುಗಳ ಉದ್ದೇಶ?
ಸುಳ್ಳು ಸುದ್ದಿಗಳನ್ನು ಹರಡಿ ದಾರಿ ತಪ್ಪಿಸುವ, ದ್ವೇಷ ಹೊತ್ತಿಸುವ ಈ ಮತ್ತೊಂದು ಬಗೆಯ ಅಪಪ್ರಚಾರ ಯುದ್ಧ ನಿಜಕ್ಕೂ ಹೆಚ್ಚು ಅಪಾಯಕಾರಿ. ಯುದ್ಧ ಮತ್ತದರ ಫಲಿತಾಂಶಗಳು ಯಾರಿಗೂ ಒಳ್ಳೆಯದಲ್ಲ. ಆದರೆ ಅದರ ಹೆಸರಲ್ಲಿ ಹರಡುವ ಸುಳ್ಳುಗಳು ಅದಕ್ಕಿಂತಲೂ ಭೀಕರ ಪರಿಣಾಮ ಬೀರುತ್ತವೆ. ನಿಮಗೆ ಬಹುತೇಕ ಟಿವಿ ನ್ಯೂಸ್ ಚಾನಲ್ ಗಳು ಸುಳ್ಳನ್ನು, ದ್ವೇಷವನ್ನು ಮಾತ್ರ ನೀಡುತ್ತಿವೆ. ಜೊತೆಗೆ ವಾಟ್ಸ್ ಆಪ್, ಫೇಸ್ ಬುಕ್, ಯೂಟ್ಯೂಬ್ ಗಳು ಅದಕ್ಕೆ ದೊಡ್ಡ ಪ್ರಮಾಣದಲ್ಲಿ ಬಳಕೆಯಾಗುತ್ತಿವೆ. ಹಾಗಾಗಿ ನಿಮ್ಮ ವಾಟ್ಸ್ ಆಪ್ ನಲ್ಲಿ ಬರುವ ಯಾವುದನ್ನೂ ಕುರುಡಾಗಿ ನಂಬಬೇಡಿ. ತಕ್ಷಣ ಫಾರ್ವರ್ಡ್ ಮಾಡಬೇಡಿ.