ಮುನ್ನೆಲೆಗೆ ಬಂದಿರುವ ಜಾತಿ ವಿಚಾರ: ಬಿಜೆಪಿಗೆ ಇದು ಆತಂಕ ಕಾಲ
ಮರಾಠರ ಮೀಸಲಾತಿಗೆ ಒತ್ತಾಯಿಸಿ ಮಹಾರಾಷ್ಟ್ರದ ಜಾಲ್ನಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಪ್ರತಿಭಟನೆ ವೇಳೆ ಪೊಲೀಸರು ಲಾಠಿ ಪ್ರಹಾರ ಮಾಡಿದರು. ಅದಾದ ಬಳಿಕ, ಮಹಾರಾಷ್ಟ್ರ ಗೃಹಖಾತೆ ಹೊಣೆಯನ್ನೂ ಹೊತ್ತಿರುವ ಡಿಸಿಎಂ ದೇವೇಂದ್ರ ಫಡ್ನವೀಸ್, ಅದಕ್ಕಾಗಿ ಕ್ಷಮೆ ಕೇಳಿದರಲ್ಲದೆ, ಮರಾಠಾ ಮೀಸಲಾತಿ ವಿಚಾರವಾಗಿ ನಿಜಾಮರ ಕಾಲದ ಕುಂಬಿ ದಾಖಲಾತಿ ಪರಿಗಣಿಸುವ ಭರವಸೆ ನೀಡಿದರು. ಇನ್ನೊಂದೆಡೆ, ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಇದ್ದಕ್ಕಿದ್ದಂತೆ, ಸಂವಿಧಾನದಲ್ಲಿ ಒದಗಿಸಲಾಗಿರುವ ಮೀಸಲಾತಿಗೆ ಆರೆಸ್ಸೆಸ್ ಬೆಂಬಲ ಇದೆ ಎಂದು ಹೇಳಿದರು. ಸಮಾಜದಲ್ಲಿ ಅಸಮಾನತೆ ಇರುವವರೆಗೂ ಮೀಸಲಾತಿ ಮುಂದುವರಿಯಬೇಕು. ಸಾಮಾಜಿಕ ವ್ಯವಸ್ಥೆಯಲ್ಲಿ ನಮ್ಮದೇ ಸಹಜೀವಿಗಳನ್ನು ಹಿಂದೆ ಇರಿಸಿದ್ದೇವೆ. ಎರಡು ಸಾವಿರ ವರ್ಷಗಳವರೆಗೆ ಈ ಪ್ರಕ್ರಿಯೆ ಮುಂದುವರಿದಿದೆ. ಅಸಮಾನತೆಗೆ ಒಳಗಾದವರ ಪುನಶ್ಚೇತನಕ್ಕಾಗಿ ವಿಶೇಷ ಪರಿಹಾರದ ಅವಶ್ಯಕತೆಯಿದೆ ಎಂದರು.
ಈ ಇಬ್ಬರೂ ನಾಯಕರ ಹೇಳಿಕೆಗಳು, ಜಾತಿ ಪ್ರಜ್ಞೆಯ ಕುರಿತ ಬಿಜೆಪಿಯ ಆತಂಕವನ್ನು ಬಹಿರಂಗಪಡಿಸುತ್ತವೆ.
೨೦೧೫ರಲ್ಲಿ, ಮಹಾಘಟಬಂಧನ್ ಬಿಹಾರ ಚುನಾವಣೆಯನ್ನು ಗಮನಾರ್ಹ ರೀತಿಯಲ್ಲಿ ಗೆಲ್ಲುವುದಕ್ಕೆ ಮೊದಲು ಭಾಗವತ್ ಆರೆಸ್ಸೆಸ್ ಮುಖವಾಣಿ ‘ಆರ್ಗನೈಸರ್’ ಮತ್ತು ‘ಪಾಂಚಜನ್ಯ’ಕ್ಕೆ ನೀಡಿದ ಸಂದರ್ಶನದಲ್ಲಿ ಮೀಸಲಾತಿ ನೀತಿಯನ್ನು ಸಾಮಾಜಿಕವಾಗಿ ವಿಮರ್ಶಿಸುವ ಅಗತ್ಯವಿದೆ ಎಂದಿದ್ದರು.
ಹಾಗಾದರೆ ಈಗೇನಾಯಿತು? ೨೦೨೪ರ ಚುನಾವಣೆಗೆ ಮುಂಚಿತವಾಗಿ ಜಾತಿ ಮತ್ತು ಸಾಮಾಜಿಕ ನ್ಯಾಯ ಏಕೆ ದೊಡ್ಡ ಸವಾಲಾಗಿ ಬಿಜೆಪಿಯನ್ನು ಕಾಡುತ್ತಿದೆ?
೨೦೦೯ರಿಂದ ಬಿಜೆಪಿಯ ಒಬಿಸಿ ಮತದಾರರ ಪಾಲು ಗಮನೀಯವಾಗಿ ಏರಿಕೆ ಕಂಡಿದೆ. ಈ ಹಿನ್ನೆಲೆಯಲ್ಲಿ ಅದು ಈಗ ತನ್ನ ಹಿಂದುತ್ವದ ರಾಜಕೀಯದ ಜೊತೆಗೇ ಹಿಂದುಳಿದ ವರ್ಗಗಳ ವಿಚಾರದ ಅಜೆಂಡಾವನ್ನು ಹೇಗೆ ಸಮನ್ವಯಗೊಳಿಸುವುದು ಎಂಬ ಇಕ್ಕಟ್ಟಿನಲ್ಲಿ ಸಿಲುಕಿದೆ.
ಅದರ ಮೂಲ ದೃಷ್ಟಿಕೋನ ಹೀಗಿರಲಿಲ್ಲ ಎಂಬುದು ಗೊತ್ತಿರುವ ವಿಚಾರವೇ. ಜಾತಿ ವಿಚಾರವನ್ನು ಅದು ಅಡಿಯಲ್ಲಿ ತಳ್ಳುತ್ತಲೇ ಬಂದಿದೆ. ಅದಕ್ಕೆ ಒಗ್ಗಟ್ಟಿನ ಮಾನವತಾವಾದ, ಸಾಮಾಜಿಕ ಸ್ಥಿರತೆ ಮತ್ತಿತರ ತತ್ವಗಳನ್ನು ಕಾರಣವಾಗಿ ಕೊಡುತ್ತ ಬಂದಿದೆ. ಪ್ರಧಾನಿ ಮೋದಿ, ಹಕ್ಕುಗಳಿಗಿಂತ ಕರ್ತವ್ಯ ಹೆಚ್ಚಿನದು ಎಂದು ಹೇಳುವಲ್ಲಿ ಕೂಡ ಜಾತಿಯ ಬಗೆಗಿನ ಬಿಜೆಪಿಯ ನಿಲುವೇನು ಎಂಬುದನ್ನೇ ಖಚಿತವಾಗಿ ಹೇಳುತ್ತದೆ.
ಹೊಸ ವಾಸ್ತವ
ಅಭಿವೃದ್ಧಿಶೀಲ ಸಮಾಜಗಳ ಅಧ್ಯಯನ ಕೇಂದ್ರ ತನ್ನ ಚುನಾವಣೋತ್ತರ ಸಮೀಕ್ಷೆಗಳ ಮೂಲಕ ಹೇಳಿರುವಂತೆ, ನಾಲ್ಕನೇ ಒಂದರಷ್ಟು ಅಂದರೆ ಶೇ.೨೨ಕ್ಕಿಂತ ಕಡಿಮೆಯಿದ್ದ ಬಿಜೆಪಿಯ ಒಬಿಸಿ ಮತಗಳ ಪ್ರಮಾಣ ೨೦೦೯ರ ಸಾರ್ವತ್ರಿಕ ಚುನಾವಣೆಯಲ್ಲಿ ಮೂರನೇ ಒಂದು ಭಾಗದಷ್ಟು ಅಂದರೆ ಶೇ.೩೪ಕ್ಕೆ ತೀವ್ರವಾಗಿ ಏರಿತು. ೨೦೧೪ರಿಂದ ೨೦೧೯ರಲ್ಲಿ ಇದು ಇನ್ನೂ ಹೆಚ್ಚಿನ ಮಟ್ಟಕ್ಕೆ ಅಂದರೆ ಶೇ.೪೪ಕ್ಕೆ ಏರಿದೆ.
ಹಾಗಾದರೆ ಬಿಜೆಪಿ ಹಿಂದುತ್ವ ಪಕ್ಷವಾಗಿರುವಾಗಲೂ ತನ್ನ ಬೆಂಬಲಕ್ಕಿರುವ ಒಬಿಸಿ ಮತದಾರರ ನಿರೀಕ್ಷೆಗಳನ್ನು ಹೇಗೆ ನಿಭಾಯಿಸುತ್ತದೆ? ಇತ್ತೀಚಿನ ಕೆಲವು ಬೆಳವಣಿಗೆಗಳು ಅದರ ತಲೆನೋವನ್ನು ಹೆಚ್ಚಿಸಿವೆ.
ಮೊದಲನೆಯದಾಗಿ, ಇತರ ಹಿಂದುಳಿದ ಜಾತಿಗಳ ಉಪ ವರ್ಗೀಕರಣಕ್ಕಾಗಿ ೨೦೧೭ರಲ್ಲಿ ದಿಲ್ಲಿ ಹೈಕೋರ್ಟ್ ನಿವೃತ್ತ ನ್ಯಾ.ರೋಹಿಣಿ ಅಧ್ಯಕ್ಷತೆಯಲ್ಲಿ ಕೇಂದ್ರ ಸರಕಾರ ಆಯೋಗ ರಚನೆ ಮಾಡಿತ್ತು. ಆಯೋಗ ೧ ಸಾವಿರಕ್ಕೂ ಅಧಿಕ ಪುಟಗಳ ವರದಿಯನ್ನು ಎರಡು ಭಾಗಗಳಲ್ಲಿ ನೀಡಿದೆ. ಮೊದಲನೇ ಭಾಗ ಒಬಿಸಿ ಕೋಟಾವನ್ನು ಹೇಗೆ ಹಂಚಿಕೆ ಮಾಡಬೇಕು ಎಂಬ ಕುರಿತಾಗಿದ್ದರೆ, ಎರಡನೇ ಭಾಗ ದೇಶಾದ್ಯಂತ ಇರುವ ಎಲ್ಲಾ ೨,೬೩೩ ಒಬಿಸಿ ಜಾತಿಗಳ ಪರಿಷ್ಕೃತ ಪಟ್ಟಿಯನ್ನು ಒಳಗೊಂಡಿದೆ.
ವರದಿಯ ಮೂರು ಶಿಫಾರಸುಗಳೆಂದರೆ, ಇತರ ಹಿಂದುಳಿದ ಜಾತಿಗಳ ಎಲ್ಲಾ ಜಾತಿಗಳ ಉಪ ವರ್ಗೀಕರಣ ಮಾಡುವ ಮೂಲಕ ಉಪ ಜಾತಿಗಳನ್ನು ಪತ್ತೆ ಮಾಡುವುದು; ಮೂರು ಸಾವಿರ ಜಾತಿಗಳನ್ನು ಒಳಗೊಂಡಿರುವ ಒಬಿಸಿ ಜಾತಿಯೊಳಗೆ ಉಂಟಾಗಿರುವ ಅಸಮಾನತೆಯನ್ನು ಗುರುತಿಸಿ ಪರಿಹಾರ ರೂಪಿಸುವುದು; ಒಬಿಸಿಯೊಳಗೆ ಸರಕಾರದ ಮೀಸಲಾತಿ ಸೌಲಭ್ಯ ಸಿಗದ ಹಿಂದುಳಿದ ವರ್ಗಗಳ ಪತ್ತೆ. ಸವಲತ್ತುಗಳ ಸಮಾನ ಹಂಚಿಕೆಗೆ ಉಪ ಜಾತಿಗಳ ಜನಸಂಖ್ಯೆ ಆಧಾರದ ಮೇಲೆ ಹೊಸ ಸೂತ್ರ ಹಾಗೂ ಮಾನದಂಡ ರಚನೆ.
‘ಹಿಂದೂಸ್ಥಾನ್ ಟೈಮ್ಸ್’ ವರದಿ ಮಾಡಿರುವ ಪ್ರಕಾರ, ಉಪ ವರ್ಗೀಕರಣ ಮೂರು ಅಥವಾ ನಾಲ್ಕು ಆಗಿರಬಹುದು. ಅಲ್ಲಿ ಒಂದೇ ರೀತಿಯ ಪ್ರಯೋಜನಗಳನ್ನು ಹೊಂದಿರುವ ಜಾತಿಗಳ ನಡುವೆಯೇ ಪರಸ್ಪರ ಸ್ಪರ್ಧೆಯಿದೆ. ಯಾವುದೇ ಪ್ರಯೋಜನಗಳನ್ನು ಪಡೆಯದಿರುವವರು ಶೇ.೧೦, ಕೆಲವು ಪ್ರಯೋಜನಗಳನ್ನು ಹೊಂದಿರುವವರು ಶೇ.೧೦ ಮತ್ತು ಗರಿಷ್ಠ ಪ್ರಯೋಜನಗಳನ್ನು ಹೊಂದಿರುವವರು ಶೇ.೭ ಹೀಗೆ ವರ್ಗಗಳಿರಬಹುದು ಎನ್ನಲಾಗಿದೆ.
ಆದರೆ ಮೋದಿ ಸರಕಾರ ಈ ಬಗ್ಗೆ ಮೌನವಾಗಿದೆ. ಯಾವುದನ್ನೂ ಸಾರ್ವಜನಿಕಗೊಳಿಸಿಲ್ಲ. ಒಬಿಸಿ ಕೋಟಾವನ್ನು ವರ್ಗೀಕರಿಸಿದರೆ ಈಗ ಬಿಜೆಪಿಯೊಂದಿಗೆ ಇರುವ ಪ್ರಬಲ ಜಾತಿಗಳು ದೂರವಾಗಲಿವೆ ಎಂಬುದು ಬಿಜೆಪಿಯ ಸಂದಿಗ್ಧತೆ ಅಥವಾ ಬಿಜೆಪಿ ಈಗ ಯಾರನ್ನು ಓಲೈಸಲು ಬಯಸುತ್ತದೆ ಎಂಬ ಪ್ರಶ್ನೆಯೂ ಇದೆ. ಸಾಮಾಜಿಕ ನ್ಯಾಯದ ಮೇಲೆ ಯಾವುದೇ ನೈಜ ಕ್ರಮವಿಲ್ಲದೆ ಎಲ್ಲಾ ಒಬಿಸಿ ವಿಭಾಗಗಳನ್ನು ಸಮಾಧಾನಪಡಿಸಲು ಹೊರಟರೆ ಅದು ಮತ್ತೊಂದು ಬಗೆಯಲ್ಲಿ ಪೆಟ್ಟು ಕೊಟ್ಟೀತೆ ಎಂಬುದು ಬಿಜೆಪಿಯ ಆತಂಕ.
ಈಗಾಗಲೇ, ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗದ ಮಾಜಿ ಅಧ್ಯಕ್ಷರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಜಾತಿ ಗಣತಿ ಇಲ್ಲದೆ ಯಾವುದೇ ವರ್ಗೀಕರಣ ಅಥವಾ ಅಂಕಿಅಂಶಗಳನ್ನು ತೋರಿಸುವುದು ಅರ್ಥಹೀನವಾಗಿರುತ್ತದೆ ಎಂದು ಅವರು ಹೇಳಿದ್ದಾರೆ.
ಎರಡನೆಯದಾಗಿ, ಜಾತಿ ಗಣತಿ ಬೇಡಿಕೆ ಪ್ರತಿಪಕ್ಷ ಒಕ್ಕೂಟದ ಎಲ್ಲ ಪಕ್ಷಗಳ ಒತ್ತಾಯವಾಗಿ ಬಲಗೊಳ್ಳುತ್ತಿದೆ. ಇದು ಬಿಜೆಪಿಯ ಎದುರಿನ ಸಮಸ್ಯೆಗಳನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ.
ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಎಪ್ರಿಲ್ ೧೭ರಂದು ರಾಹುಲ್ ಗಾಂಧಿಯವರು ಕೋಲಾರ ರ್ಯಾಲಿಯಲ್ಲಿ ಹೆಚ್ಚು ಜನಸಂಖ್ಯೆ, ಹೆಚ್ಚು ಹಕ್ಕುಗಳು ಎಂದು ಹೇಳಿದ್ದು, ಕಾಂಗ್ರೆಸ್‌ನ ನಿಲುವನ್ನು ಖಚಿತಪಡಿಸುತ್ತದೆ. ಜಾತಿಗಳ ನಡುವಿನ ಆದಾಯದ ಅಸಮಾನತೆಯ ಬಗ್ಗೆ ಹೇಳುವ ಮೂಲಕ ಅವರು ಸಾಮಾಜಿಕ ನ್ಯಾಯವನ್ನು ಖಚಿತಪಡಿಸುವುದು ಕಾಂಗ್ರೆಸ್‌ನ ಗುರಿಯಾಗಿದೆ ಎಂಬುದನ್ನು ಪ್ರತಿಪಾದಿಸಿದ್ಧಾರೆ.
ಬಿಹಾರದಲ್ಲಿ, ಬಿಜೆಪಿಯ ರಾಜ್ಯ ಘಟಕ ಆರ್‌ಜೆಡಿ-ಜೆಡಿ(ಯು) ನಿಲುವನ್ನೇ ಅನುಸರಿಸುತ್ತಿದೆ. ಹಾಗಾಗಿ, ಜಾತಿ ಗಣತಿಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ತನ್ನ ಮೂಲ ಅಫಿಡವಿಟ್‌ನ್ನು ಮೋದಿ ಸರಕಾರ ಅಷ್ಟೇ ಬೇಗ ಹಿಂಪಡೆಯಿತು.
ಸಂವಿಧಾನದ ಅಡಿಯಲ್ಲಿ ಅಥವಾ ಇತರ ಯಾವುದೇ ಸಂಸ್ಥೆ ಜನಗಣತಿ ಅಥವಾ ಜನಗಣತಿಗೆ ಹೋಲುವ ಯಾವುದೇ ಕ್ರಿಯೆಯನ್ನು ನಡೆಸಲು ಅರ್ಹತೆ ಹೊಂದಿಲ್ಲ ಎಂದು ಹೇಳುವ ನಿರ್ದಿಷ್ಟ ವಾಕ್ಯವನ್ನು ತೆಗೆದುಹಾಕಲಾಗಿದ್ದು, ಅದು ಅಚಾತುರ್ಯದಿಂದ ನುಸುಳಿದ್ದೆಂದು ಹೇಳಲಾಯಿತು. ಬಿಹಾರ ಜಾತಿ ಸಮೀಕ್ಷೆ ಪೂರ್ಣಗೊಳಿಸಿದೆ ಮತ್ತು ಒಡಿಶಾದಲ್ಲಿ ಅದೇ ರೀತಿಯ ಅಭಿಯಾನ ನಡೆಯುತ್ತಿದೆ.
ಮೂರನೆಯದಾಗಿ, ಸನಾತನ ಧರ್ಮದ ವಿಷಯದಲ್ಲಿ ಬಿಜೆಪಿಯ ಹೇಳಿಕೆಗಳನ್ನು ರಾಜಕೀಯದಲ್ಲಿ ಎಚ್ಚರಿಕೆಯಿಂದ ಗಮನಿಸಲಾಗುತ್ತಿದೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವ್ಯಕ್ತವಾಗಿರುವ ಬಿಜೆಪಿಯ ಅಸಹನೆಗೆ ಕಟು ಟೀಕೆಗಳು ಬರುತ್ತಿವೆ.
ಸನಾತನ ಧರ್ಮದ ಪರವಾಗಿ ನಿಲ್ಲುವುದು ಬಿಜೆಪಿಯನ್ನು ಮೇಲ್ಜಾತಿ ಪಕ್ಷ ಎಂದು ಮತ್ತೆ ಮೂಲೆಗೆ ತಳ್ಳಬಹುದು ಎಂಬ ಆತಂಕವೂ ಬಿಜೆಪಿ ಎದುರಿಗಿದೆ. ಸನಾತನ ಧರ್ಮ ಮತ್ತು ಶಾಶ್ವತ, ಸಾಂಪ್ರದಾಯಿಕ ನಂಬಿಕೆಯ ಬಗೆಗಿನ ಅದರ ನಿಲುವು ಸಾಮಾಜಿಕ ನ್ಯಾಯದ ವಿರುದ್ಧವಾದವುಗಳು ಎಂದೇ ಪರಿಗಣಿತವಾಗಿವೆ.
ತಮಿಳುನಾಡಿನಲ್ಲಿ ಬಿಜೆಪಿಗೆ ಅಂಥ ನೆಲೆಯಿಲ್ಲವಾದರೂ, ಸನಾತನ ಧರ್ಮದ ಸಮರ್ಥನೆ ನೆರೆಯ ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಅಸಮಾಧಾನಕ್ಕೆ ಕಾರಣವಾಗಬಹುದೆಂಬ ದಿಗಿಲೂ ಬಿಜೆಪಿಗಿದೆ. ಲಿಂಗಾಯತ ಸಮುದಾಯ ಬಿಜೆಪಿಯನ್ನು ಬೆಂಬಲಿಸುತ್ತಿರುವ ಸಮುದಾಯವಾಗಿದ್ದು, ತನ್ನನ್ನು ಪ್ರತ್ಯೇಕವಾಗಿ ಗುರುತಿಸಬೇಕೆಂದು ಒತ್ತಾಯಿಸುತ್ತಿದೆ.
ಮುಂಬರುವ ವಿಧಾನಸಭಾ ಚುನಾವಣೆಗಳಿರುವ ರಾಜ್ಯಗಳಲ್ಲಿ ಈ ವಿಚಾರವನ್ನು ಹೇಗೆ ಬಳಸಿಕೊಳ್ಳುವುದು ಮತ್ತು ಹೇಗೆ ತಟಸ್ಥವಾಗಿರುವುದು ಎಂಬುದೂ ಅದಕ್ಕೆ ಪ್ರಶ್ನೆಯಾಗಿದೆ.
ನಾಲ್ಕನೆಯದಾಗಿ, ಸಂಖ್ಯೆಯ ದೃಷ್ಟಿಯಿಂದ ಸಣ್ಣ ಸಮುದಾಯಗಳನ್ನು ಗೆಲ್ಲಲು ಮತ್ತು ನಿರ್ದಿಷ್ಟ ಜಾತಿ ಸಂಘಗಳೊಂದಿಗೆ ಗುರುತಿಸಿಕೊಳ್ಳುತ್ತ ಬೆಂಬಲವನ್ನು ಗಳಿಸಲು ಬಿಜೆಪಿ ಮಾಡುತ್ತಿರುವ ತಂತ್ರ ಹಲವೆಡೆ ತೊಂದರೆ ಮತ್ತು ಆಕ್ರೋಶಕ್ಕೆ ಕಾರಣವಾಗುತ್ತಿದೆ.
ಹರ್ಯಾಣದ ಕೈತಾಲ್‌ನಲ್ಲಿನ ಮಿಹಿರ್ ಭೋಜ್ ಪ್ರಕರಣ ನ್ಯಾಯಾಲಯದವರೆಗೂ ಹೋಗಿದೆ. ಗುರ್ಜರ್ ಮತ್ತು ರಜಪೂತ ಸಮುದಾಯಗಳೆರಡೂ ಸಿಟ್ಟಾಗಿವೆ. ಹರ್ಯಾಣ ಸರಕಾರ ಆಗಸ್ಟ್ ೪ರಂದು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ ಮುಂದೆ ಎರಡೂ ಸಮುದಾಯಗಳ ಪ್ರತಿನಿಧಿಗಳು ಮತ್ತು ಇತಿಹಾಸಕಾರರ ಸಮಿತಿಯ ಮೂಲಕ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಒಪ್ಪಿಕೊಂಡಿತು.
ಉತ್ತರ ಪ್ರದೇಶದಲ್ಲಿ ಅಲಹಾಬಾದ್ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ರಾಘವೇಂದ್ರ ಕುಮಾರ್ ನೇತೃತ್ವದ ಸಾಮಾಜಿಕ ನ್ಯಾಯ ಸಮಿತಿ ಅಕ್ಟೋಬರ್ ೨೦೧೮ರಲ್ಲಿ ವರದಿ ಸಲ್ಲಿಸಿದ್ದು, ಶೇ.೨೭ರ ಒಬಿಸಿ ಕೋಟಾವನ್ನು ಮೂರು ವರ್ಗಗಳಾಗಿ ವಿಭಜಿಸಲು ಶಿಫಾರಸು ಮಾಡಿದೆ. ಅದರಂತೆ, ಹಿಂದುಳಿದ ವರ್ಗ ಶೇ.೭, ಹೆಚ್ಚು ಹಿಂದುಳಿದವರು ಶೇ.೧೧ ಹಾಗೂ ಅತ್ಯಂತ ಹಿಂದುಳಿದವರು ಶೇ.೯ರಷ್ಟು ಪಾಲು ಪಡೆಯಬೇಕಾಗುತ್ತದೆ.
ಸಮಾಜವಾದಿ ಪಕ್ಷ ತನ್ನ ಪಿಡಿಎ (ಹಿಂದುಳಿದ, ದಲಿತ, ಅಲ್ಪಸಂಖ್ಯಾತ) ಸಂಯೋಜನೆಯೊಂದಿಗೆ ಬಿಜೆಪಿಯ ಹಿಂದುಳಿದ ವರ್ಗದ ಬಗೆಗಿನ ತೋರಿಕೆಯ ನಿಲುವನ್ನು ಬಯಲು ಮಾಡುತ್ತದೆ. ಬಿಜೆಪಿ ಯಾವುದೇ ಪ್ರತ್ಯೇಕ ಜಾತಿ ಗುಂಪುಗಳನ್ನು ಹಿಂದುತ್ವದ ಅಂಶದಿಂದ ಮಾತ್ರವಲ್ಲದೆ ಚುನಾವಣಾ ದೃಷ್ಟಿಯಿಂದಲೂ ನೋಯಿಸುತ್ತದೆ ಎಂಬುದು ಅದರ ಆರೋಪ.
ಈ ಹಿಂದೆ ಪ್ರಬಲ ಜಾತಿಯ ಮತಗಳ ಬಗ್ಗೆ ಭರವಸೆಯಿಲ್ಲದೆ ಅದು ಪ್ರಾಬಲ್ಯವಿಲ್ಲದ ಒಬಿಸಿ ಮತಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮಿತಿಯನ್ನು ಘೋಷಿಸಿತು. ಈಗ, ಮುಲಾಯಂ ಸಿಂಗ್ ಯಾದವ್ ಮರಣದ ನಂತರ ಮತ್ತು ಹಿಂದುತ್ವದ ಅಡಿಯಲ್ಲಿ ಜಾಟ್ ಮತಗಳ ವ್ಯಾಪಕ ಕ್ರೋಡೀಕರಣದ ನಂತರ, ಬಿಜೆಪಿ ತನ್ನದೇ ಶಿಫಾರಸುಗಳಿಂದ ಕಟ್ಟಿಹಾಕಲ್ಪಟ್ಟ ಸ್ಥಿತಿಯಲ್ಲಿದೆ.
ಹಿಂದುತ್ವದ ರಾಜಕೀಯ ಹಿಂದುಳಿದವರಿಗೆ ವಸತಿ ಮತ್ತು ಸ್ಥಳದ ಬಗ್ಗೆ ಹೇಳುತ್ತಿರುವುದು ಬೇರೆಯದೇ ಲೆಕ್ಕಾಚಾರದ್ದೇ ಹೊರತು ಸಾಮಾಜಿಕ ನ್ಯಾಯದ ದೃಷ್ಟಿಯದ್ದಲ್ಲ.
ಬಿಜೆಪಿ ಪ್ರಬಲವಾಗಿದ್ದರೂ, ‘ಇಂಡಿಯಾ’ ವಿಪಕ್ಷ ಮೈತ್ರಿಕೂಟ ಎತ್ತಿರುವ ಸಾಮಾಜಿಕ ನ್ಯಾಯದ ಪ್ರಶ್ನೆ ಅಥವಾ ಸಾಮಾಜವಾದಿ ಪಕ್ಷದ ಪಿಡಿಎ ಸಂಯೋಜನೆ ಒಟ್ಟಾರೆ ರಾಜಕೀಯ ಮನಸ್ಥಿತಿಯನ್ನು ಜಟಿಲಗೊಳಿಸಬಹುದು ಮತ್ತು ಆಕಾಂಕ್ಷೆಗಳನ್ನು ಹುಟ್ಟುಹಾಕಬಹುದು. ಈ ಬೆಳವಣಿಗೆ ಬಿಜೆಪಿಗೆ ಕಷ್ಟಕರವಾಗಲಿರುವಂತೆ ತೋರುತ್ತದೆ.
(ಆಧಾರ:thewire.in)