ನಿಮ್ಹಾನ್ಸ್‌ನಂತಹ ಹೆಚ್ಚಿನ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳ ಅಗತ್ಯತೆ ಯಾಕಿದೆಯೆಂದರೆ....
ನಿಮ್ಹಾನ್ಸ್‌ನಂತಹ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಸದಾ ಸುದ್ದಿಯಲ್ಲಿ ಇರುವುದು ಹೊಸದೇನಲ್ಲ. ಅದರಲ್ಲೂ ಕರ್ನಾಟಕದ ಬೆಂಗಳೂರಿನಲ್ಲಿರುವ ನಿಮ್ಹಾನ್ಸ್ ಒಂದಲ್ಲ ಒಂದು ಕಾರಣದಿಂದ ಸದಾ ಸುದ್ದಿಯಲ್ಲಿ ಇರುತ್ತದೆ. ಇತ್ತೀಚೆಗೆ ಝೀರೋ ಟ್ರಾಫಿಕ್‌ನಲ್ಲಿ ಹಾಸನದಿಂದ ಬಂದರೂ ಸಹ ನಿಮ್ಹಾನ್ಸ್‌ನ ನಿರ್ಲಕ್ಷ್ಯದಿಂದ(?) ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೇ ಮಗು ಪ್ರಾಣ ಕಳೆದುಕೊಂಡಿರುವುದು ದೇಶಾದ್ಯಂತ ಸುದ್ದಿ ಮಾಡಿತ್ತು. ನಿಮ್ಹಾನ್ಸ್ ನಿರ್ಲಕ್ಷ್ಯ ವಹಿಸಿರಲಿಲ್ಲ ಆದರೆ ಬೆಡ್ ಸೌಲಭ್ಯ ಇರಲಿಲ್ಲ ಎನ್ನುವುದು ನಿಮ್ಹಾನ್ಸ್ ನ ವಾದವಾಗಿತ್ತು. ಹಾಸನದಿಂದ ಕರೆದುಕೊಂಡು ಬಂದ ಮಗುವನ್ನು ಆಸ್ಪತ್ರೆಯಲ್ಲಿ ದಾಖಲಿಸಿಕೊಳ್ಳದೆ ಆ್ಯಂಬುಲೆನ್ಸ್ ನಲ್ಲಿ ಸಾಕಷ್ಟು ಸಮಯ ಕಳೆದಿದ್ದರಿಂದ ಮಗು ಬದುಕಲಿಲ್ಲ ಎನ್ನುವುದು ಪೋಷಕರ ವಾದವಾಗಿತ್ತು. ಹಾಸನದ ವೈದ್ಯರು ಮುಂಚಿತವಾಗಿಯೇ ಫೋನಿನಲ್ಲಿ ವೈದ್ಯರಿಗೆ ತಿಳಿಸಿದ್ದರೂ ಬೇಕಾದ ಸಿದ್ಧತೆ ಮಾಡಿಕೊಳ್ಳದೆ ಇರುವುದು ನಿಮ್ಹಾನ್ಸ್ ಆಸ್ಪತ್ರೆಯ ನಿರ್ಲಕ್ಷ್ಯತೆಯೇ ಎನ್ನುವುದು ಈಗಿನ ಪ್ರಶ್ನೆ. ಕೆಲವು ನಿಮ್ಹಾನ್ಸ್ ವೈದ್ಯರ ಹೇಳಿಕೆಯ ಅನುಸಾರ ಹಾಸನದಿಂದ ಬರುವಾಗಲೇ ಮಗು ಸಾಕಷ್ಟು ಗಂಭೀರವಾದ ಸ್ಥಿತಿಯಲ್ಲಿತ್ತು. ಒಟ್ಟಿನಲ್ಲಿ ಮಗು ಉಳಿದಿಲ್ಲ ಎನ್ನುವುದೇ ಅಂತಿಮ ಸತ್ಯ.
ನಿಮ್ಹಾನ್ಸ್‌ನಂತಹ ಆಸ್ಪತ್ರೆಗಳು ದೇಶದ ಎಲ್ಲಾ ರಾಜ್ಯಗಳಿಗೆ ಎಷ್ಟು ಅವಶ್ಯಕತೆ ಎನ್ನುವುದಕ್ಕೆ ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳು ಉತ್ತಮ ಸಾಕ್ಷಿ ಆಗಬಲ್ಲದು. ಹೆಲ್ಮೆಟ್ ಕಡ್ಡಾಯವಾದರೂ ಇಂದಿಗೂ ಹೆಚ್ಚಿನ ಸವಾರರು ಹೆಲ್ಮೆಟ್ ಧರಿಸುವುದೇ ಇಲ್ಲ. ಅಲ್ಲದೆ ಹೆಚ್ಚಿನ ಮಂದಿ ಕಾರಿನ ಸೀಟ್ ಬೆಲ್ಟ್ ಸಹ ಧರಿಸುವುದಿಲ್ಲ. ರಾಷ್ಟ್ರೀಯ ಅಪರಾಧ ಬ್ಯೂರೋದ ಪ್ರಕಾರ, 2020ರಲ್ಲಿ ಮತ್ತು 2021ರಲ್ಲಿ ದೇಶದಲ್ಲಿ ನಡೆದ ಒಟ್ಟು ರಸ್ತೆ ಅಪಘಾತಗಳಿಗೆ ಹೋಲಿಸಿದರೆ, ಪ್ರತೀ ಸಾವಿರ ವಾಹನಗಳಿಗೆ ಟ್ರಾಫಿಕ್ ಅಪಘಾತಗಳಲ್ಲಿ ಸಾವನ್ನಪ್ಪಿದವರ ಸಂಖ್ಯೆಯು ಭಾರತದಲ್ಲಿ 2020ರಲ್ಲಿ 0.40ರಿಂದ 2021 ರಲ್ಲಿ 0.53ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ. ರಾಷ್ಟ್ರೀಯ ಹೆದ್ದಾರಿಗಳ ಮಂತ್ರಾಲಯದ ಸಂಶೋಧನೆಗಳ ಪ್ರಕಾರ, 2021ರಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಂಭವಿಸಿದ ಎಲ್ಲಾ ಟ್ರಾಫಿಕ್ ಅಪಘಾತಗಳಲ್ಲಿ ಒಟ್ಟು ಶೇ. 34.5ರಷ್ಟು ಮರಣ ಸಂಭವಿಸಿದೆ. ರಾಜ್ಯ ಹೆದ್ದಾರಿಗಳು ಸಂಭವಿಸಿದ ಎಲ್ಲಾ ಅಪಘಾತಗಳಲ್ಲಿ ಶೇ. 23.9ರಷ್ಟು ಮರಣ ಸಂಭವಿಸಿದೆ. ಇದಲ್ಲದೆ ಹತ್ತು ಹಲವಾರು ಕಾರಣಗಳಿಂದ ಜನರು ಬಿದ್ದು ಆಕಸ್ಮಿಕವಾಗಿ ತಲೆಗೆ ಪೆಟ್ಟು ಮಾಡಿಕೊಳ್ಳುತ್ತಾರೆ. ಪ್ರಾಯಶಃ ಇದರಿಂದ ಚೆನ್ನಾಗಿ ತಿಳಿಯುತ್ತದೆ ನಿಮ್ಹಾನ್ಸ್ ನಂತಹ ಆಸ್ಪತ್ರೆಗಳು ಪ್ರತೀ ಜಿಲ್ಲೆಗೆ ಅಲ್ಲ, ತಾಲೂಕಿಗೆ ಒಂದು ಬೇಕಾಗುತ್ತದೆ ಎಂದು. ಮುಂದೆ ಆಟೋಮೊಬೈಲ್ ಕ್ಷೇತ್ರ ಬೆಳೆಯುತ್ತಿದ್ದಂತೆ ರಸ್ತೆ ಅಪಘಾತಗಳ ಸಂಖ್ಯೆ ಹೆಚ್ಚಾಗಿ ನಿಮ್ಹಾನ್ಸ್‌ನಂತಹ ಆಸ್ಪತ್ರೆಗಳಿಗೆ ಇನ್ನೂ ಹೆಚ್ಚಿನ ರೋಗಿಗಳು ಬಂದರೂ ಆಶ್ಚರ್ಯವಿಲ್ಲ.
ತಲೆಗೆ ತೀವ್ರ ಗಾಯಗಳಿರುವ ರೋಗಿಗಳಿಗೆ ನಿಮ್ಹಾನ್ಸ್ ನಂತಹ ಸೂಪರ್ ಸ್ಪೆಷಾಲಿಟಿ ಅಥವಾ ಟ್ರಾಮಾ ಸೆಂಟರ್‌ಗಳು ವಿಶೇಷವಾದ ಆರೈಕೆಯನ್ನು ಒದಗಿಸುವಲ್ಲಿ ವಿಶೇಷ ಆಘಾತ ಕೇಂದ್ರಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಅಪಘಾತಗಳು ಅಲ್ಲದೆ ಹಿಂಸಾಚಾರ ಅಥವಾ ನೈಸರ್ಗಿಕ ವಿಕೋಪಗಳಿಂದ ಉಂಟಾಗುವ ಆಘಾತಕಾರಿ ಗಾಯಗಳನ್ನು ಅನುಭವಿಸಿದ ವ್ಯಕ್ತಿಗಳಿಗೆ ತಕ್ಷಣದ, ಸಮಗ್ರ ಮತ್ತು ವಿಶೇಷ ಆರೈಕೆಯನ್ನು ನೀಡಲು ಈ ವೈದ್ಯಕೀಯ ಕೇಂದ್ರಗಳನ್ನು ವಿನ್ಯಾಸಗೊಳಿಸಲಾಗಿದೆ. ನಿಮ್ಹಾನ್ಸ್‌ನಂತಹ ವಿಶೇಷ ಆಘಾತ ಚಿಕಿತ್ಸಾ ಕೇಂದ್ರಗಳು ಏಕೆ ಅಗತ್ಯವಾಗಿವೆ ಎಂಬುದಕ್ಕೆ ಕೆಲವು ಪ್ರಮುಖ ಕಾರಣಗಳಿವೆ. ಇಂತಹ ಟ್ರಾಮಾ ಸೆಂಟರ್‌ಗಳು ಶಸ್ತ್ರಚಿಕಿತ್ಸಕರು, ದಾದಿಯರು, ಅರಿವಳಿಕೆ ತಜ್ಞರು ಮತ್ತು ಗಾಯಗಳನ್ನು ನಿರ್ವಹಿಸಲು ವಿಶೇಷವಾಗಿ ಅತ್ಯುತ್ತಮ ತರಬೇತಿ ಪಡೆದ ವೃತ್ತಿಪರರು ಸೇರಿದಂತೆ ವಿಶೇಷ ವೈದ್ಯಕೀಯ ಸಿಬ್ಬಂದಿಯನ್ನು ಹೊಂದಿರುತ್ತವೆ. ಇಂತಹ ಆಸ್ಪತ್ರೆಗಳು ಕ್ಲಿಷ್ಟ ಸಮಸ್ಯೆಗಳಿಗೂ ಅತ್ಯುತ್ತಮವಾದ ಆರೈಕೆಯನ್ನು ಪಡೆಯುವುದನ್ನು ಖಚಿತಪಡಿಸುತ್ತವೆ. ಕ್ಷಿಪ್ರ ಪ್ರತಿಕ್ರಿಯೆ ಮತ್ತು ತಕ್ಷಣವೇ ನಿರ್ಣಾಯಕ ಪ್ರಕರಣಗಳನ್ನು ನಿರ್ವಹಿಸಲು ಇಂತಹ ಆಸ್ಪತ್ರೆಗಳು ಮೂಲತಃ ಸಜ್ಜುಗೊಂಡಿರುತ್ತವೆ. ಇಂತಹ ಟ್ರಾಮಾ ಸೆಂಟರ್‌ಗಳು, ಹೆಚ್ಚಿನ ಸಂಖ್ಯೆಯ ಆಪರೇಟಿಂಗ್ ಕೊಠಡಿಗಳು, ನಿಖರವಾದ ರೋಗ ನಿರ್ಣಯ ಮತ್ತು ಗುಣಮಟ್ಟದ ತೀವ್ರ ನಿಗಾ ಘಟಕಗಳಂತಹ ವಿಶೇಷ ಸೌಲಭ್ಯಗಳೊಂದಿಗೆ ರೋಗಿಯ ಫಲಿತಾಂಶಗಳನ್ನು ಗಮನಾರ್ಹವಾಗಿ ಸುಧಾರಿಸುವುದಕ್ಕೆ ಸಹಾಯ ಮಾಡುತ್ತವೆ. ಅಲ್ಲದೆ ಸುಧಾರಿತ ತಂತ್ರಜ್ಞಾನ ಮತ್ತು ಸಂಪನ್ಮೂಲಗಳು ಇಮೇಜಿಂಗ್ ಉಪಕರಣಗಳು, ಶಸ್ತ್ರ ಚಿಕಿತ್ಸಾ ಉಪಕರಣಗಳು ಮತ್ತು ಜೀವ ಉಳಿಸುವ ಸಾಧನಗಳನ್ನು ಒಳಗೊಂಡಂತೆ ಟ್ರಾಮಾ ಸೆಂಟರ್‌ಗಳು ಅತ್ಯಾಧುನಿಕ ವೈದ್ಯಕೀಯ ತಂತ್ರಜ್ಞಾನವನ್ನು ಹೊಂದಿರುತ್ತವೆ.
ಅಲ್ಲಿ ಇರುವ ದೇಶ ವಿದೇಶ ವೈದ್ಯಕೀಯ ಅನುಭವಿ ತಜ್ಞರ ನಡುವಿನ ಸಹಯೋಗವು ರೋಗಿಗೆ ಸಮಗ್ರ ಮತ್ತು ಪರಿಣಾಮಕಾರಿ ಚಿಕಿತ್ಸಾ ಯೋಜನೆಗಳಿಗೆ ಕಾರಣವಾಗಬಹುದು. ಅಲ್ಲದೆ ಇಲ್ಲಿನ ಆರಂಭಿಕ ಸೇವೆ ಮತ್ತು ಉತ್ತಮ ಗುಣಮಟ್ಟದ ಚಿಕಿತ್ಸೆಯ ಹೊರತಾಗಿ, ತೀವ್ರ ಅಪಘಾತಗಳಿಂದ ಚೇತರಿಸಿಕೊಂಡ ನಂತರ ರೋಗಿಗಳು ಚೇತರಿಸಿಕೊಳ್ಳಲು ಮತ್ತು ದೈಹಿಕ ಕಾರ್ಯಕ್ಷಮತೆಯನ್ನು ಮರಳಿ ಪಡೆಯುವುದರಲ್ಲಿ ಸಹಾಯ ಮಾಡಲು ಮತ್ತು ಪರಿಣಾಮಕಾರಿ ಪುನರ್ವಸತಿ ಸೇವೆಗಳನ್ನು ನಿಮ್ಹಾನ್ಸ್‌ನಂತಹ ಕೇಂದ್ರಗಳು ನೀಡುತ್ತವೆ. ರೋಗಿಗಳ ದೀರ್ಘಕಾಲೀನ ಚೇತರಿಕೆಗೆ ಈ ನಿರಂತರ ಆರೈಕೆಯು ನಿರ್ಣಾಯಕವಾಗಿದೆ. ಇವೆಲ್ಲಾ ಸಾಮಾನ್ಯ ಸರಕಾರಿ ಆಸ್ಷತ್ರೆಗಳಲ್ಲಿ ಎಂದಿಗೂ ಸಾಧ್ಯವಿಲ್ಲ. ಅಲ್ಲದೆ ನಿಮ್ಹಾನ್ಸ್‌ನಂತಹ ಟ್ರಾಮಾ ಸೆಂಟರ್‌ಗಳು ವೈದ್ಯಕೀಯ ಜ್ಞಾನವನ್ನು ಹೆಚ್ಚಿಸಲು ಮತ್ತು ಚಿಕಿತ್ಸೆಯ ಫಲಿತಾಂಶಗಳನ್ನು ಸುಧಾರಿಸಲು ನಿರಂತರ ಸಂಶೋಧನೆಯಲ್ಲಿ ತೊಡಗಿಕೊಂಡಿರುತ್ತವೆ. ಅವುಗಳು ಒದಗಿಸುವ ಆರೈಕೆಯ ಗುಣಾತ್ಮಕತೆಯನ್ನು ನಿರಂತರವಾಗಿ ಹೆಚ್ಚಿಸಲು, ರೋಗಿಗಳಿಗೆ ಉತ್ತಮವಾದ ಫಲಿತಾಂಶಗಳನ್ನು ನೀಡುವುದನ್ನು ಕುರಿತು ಆಗಾಗ ಖಾತ್ರಿಪಡಿಸಿಕೊಳ್ಳುತ್ತವೆ. ಅಲ್ಲದೆ ಇಂತಹ ಟ್ರಾಮಾ ಕೇರ್‌ಗಳು ಪರಿಣತಿ ಹೊಂದಿರುವ ವೈದ್ಯಕೀಯ ವೃತ್ತಿಪರರಿಗೆ ತರಬೇತಿಯ ಸ್ಥಳವಾಗಿರುತ್ತದೆ. ಆದರೆ ಇಲ್ಲಿನ ಸಮಸ್ಯೆ ಎಂದರೆ ನಿಮ್ಹಾನ್ಸ್‌ನಂತಹ ಆಸ್ಪತ್ರೆಗಳು ಹೆಚ್ಚಿನ ಬಾರಿ ನಿರ್ದಿಷ್ಟ ಭೌಗೋಳಿಕ ಪ್ರದೇಶಕ್ಕೆ ಮಾತ್ರ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ. ಇಲ್ಲಿ ಬೆಡ್‌ಗಳ ಸಂಖ್ಯೆ ನಿರ್ದಿಷ್ಟವಾಗಿರುತ್ತದೆ. ಹೆಚ್ಚಿನ ಬಾರಿ ತೀವ್ರವಾಗಿ ಗಾಯಗೊಂಡ ರೋಗಿಗಳನ್ನು ವಿಶೇಷ ಆರೈಕೆಗೆ ಬಹಳ ದೂರದಿಂದ ಇಂತಹ ಆಸ್ಪತ್ರೆಗಳಿಗೆ ಕರೆ ತರಬೇಕಾಗುತ್ತದೆ. ಬೆಡ್‌ಗಳು ಸಿಗದೆ ರೋಗಿಗಳು ಪ್ರಾಣ ಬಿಡುವ ಸಂದರ್ಭಗಳು ಸಹ ಇರುತ್ತವೆ.
ನಿಮ್ಹಾನ್ಸ್‌ನಂತಹ ಸೂಪರ್ ಸ್ಪೆಷಾಲಿಟಿ ಆಘಾತ ಕೇಂದ್ರಗಳ ಸ್ಥಾಪನೆ ಮತ್ತು ನಿರ್ವಹಣೆಯು ಯಾವುದೇ ದೇಶದ ಆರೋಗ್ಯ ರಕ್ಷಣಾ ವ್ಯವಸ್ಥೆಯ ನಿರ್ಣಾಯಕ ಅಂಶಗಳಾಗಿವೆ. ಇಂದು ಭಾರತದಲ್ಲಿ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೌಲಭ್ಯಗಳು ಸಿಗುತ್ತಿಲ್ಲ. ಅದರಲ್ಲೂ ಅತ್ಯಂತ ಉನ್ನತ ಪ್ರಮಾಣದ ವಿಶೇಷ ತಜ್ಞರನ್ನು ಬೇಡುವ ಮುಖ್ಯವಾಗಿ ರಸ್ತೆ ಅಪಘಾತಗಳು ಮತ್ತು ತಲೆಗೆ ಏಟು ಬಿದ್ದಾಗ ಬೇಕಾಗುವ ವಿಶೇಷ ಆಸ್ಪತ್ರೆಗಳು ಪ್ರಮಾಣ ತುಂಬಾ ಕಡಿಮೆ ಇರುವುದು ಸರಕಾರಗಳು ಗಮನಿಸಬೇಕಾದ ಸಂಗತಿಯಾಗಿದೆ. ಇತ್ತೀಚಿನ ಒಂದು ವರದಿಯ ಪ್ರಕಾರ ಮಹಾರಾಷ್ಟ್ರದಲ್ಲಿ ನೂರು ವರ್ಷಗಳ ನಂತರ ಒಂದು ಪ್ರತ್ಯೇಕವಾದ ಮಾನಸಿಕ ಆರೋಗ್ಯ ಆಸ್ಪತ್ರೆ ಇದೀಗ ಆರಂಭವಾಗುತ್ತಿದೆ ಎಂದರೆ ನಾವೆಲ್ಲ ನಂಬಲೇಬೇಕಾಗುತ್ತದೆ. ಭಾರತದಲ್ಲಿ ಮೊದಲಿನಿಂದಲೂ ಸಾರ್ವಜನಿಕ ಆರೋಗ್ಯಕ್ಕೆ ಸರಕಾರಗಳು ಬಜೆಟ್‌ನಲ್ಲಿ ಅತ್ಯಂತ ಕಡಿಮೆ ಹಣವನ್ನು ನಿಗದಿಪಡಿಸುತ್ತಿವೆ. ದೇಶದ ಹಿಂದುಳಿದ ಜಿಲ್ಲೆಗಳಲ್ಲಿ ತೀವ್ರತರವಾದ ಅಪಘಾತಗಳಿಂದ ರೋಗಿಗಳನ್ನು ರಕ್ಷಿಸಲು ಬೇಕಾಗುವ ಅತ್ಯಂತ ವಿಶೇಷ ತಜ್ಞರನ್ನು ಒಳಗೊಂಡಿರುವ ಆಸ್ಪತ್ರೆಗಳ ಸಂಖ್ಯೆ ಶೂನ್ಯ ಎಂದರೂ ತಪ್ಪಲ್ಲ. ಸ್ವಾತಂತ್ರ್ಯ ಬಂದು 75 ವರ್ಷಗಳ ನಂತರ ಮೈಸೂರಿನಂತಹ ಜಿಲ್ಲೆಯಲ್ಲಿ ಒಂದು ಟ್ರಾಮಾ ಕೇಂದ್ರ ಇದೀಗ ಆರಂಭವಾಗಿದೆ. ಆದರೆ ಇಂತಹ ಆಸ್ಪತ್ರೆಗಳ ಅವಶ್ಯಕತೆ ರಾಜ್ಯದ ಪ್ರತಿಯೊಂದು ಜಿಲ್ಲೆಗೆ ಇದೆ ಎನ್ನುವುದನ್ನು ಸರಕಾರಗಳು ಮರೆಯುವಂತಿಲ್ಲ. ಅದರಲ್ಲೂ ಪ್ರತಿಯೊಂದು ಜಿಲ್ಲೆಗೂ ನಿಮ್ಹಾನ್ಸ್ ನಂತಹ ಆಸ್ಪತ್ರೆಗಳ ಅವಶ್ಯಕತೆ ಈಗ ಹಿಂದಿಗಿಂತಲೂ ಹೆಚ್ಚಾಗಿ ಇದೆ. ಜನಸಂಖ್ಯೆ ಹೆಚ್ಚಾಗುತ್ತಿದ್ದಂತೆ ಅವರು ಬಳಸುವ ವಾಹನಗಳ ಬಳಕೆ ಹೆಚ್ಚಾಗುತ್ತಿದ್ದು, ರಸ್ತೆಗಳು ಕಿರಿದಾಗುತ್ತಿರುವುದರಿಂದ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಆದರೆ ಆಸ್ಪತ್ರೆಗಳ ಸಂಖ್ಯೆ ಹೆಚ್ಚಾಗುತ್ತಿಲ್ಲ. ಅದೇ ಮುಖ್ಯ ಸಮಸ್ಯೆ. ದೇಹದಲ್ಲಿ ತಲೆಯ ಭಾಗವು ಬಹಳ ಮುಖ್ಯವಾಗಿದ್ದು, ಅಪಘಾತದಲ್ಲಿ ತಲೆಗೆ ಮೊದಲು ಏಟು ಬೀಳುವುದರಿಂದ ಇಂದು ಹೆಚ್ಚಿನ ರೋಗಿಗಳು ಸಾವಿಗೀಡಾಗುತ್ತಿದ್ದಾರೆ ಎಂದು ಸಂಶೋಧನೆಗಳು ಹೇಳುತ್ತವೆ. ಆದರೆ ಇವುಗಳನ್ನು ನಿರ್ವಹಿಸಲು ವಿಶೇಷ ತರಬೇತಿ ಹೊಂದಿರುವ ವೈದ್ಯರುಗಳ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗದಿರುವುದು ಸಹ ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸುವಂತೆ ಮಾಡಿದೆ. ಇದರಿಂದ ಸಂಬಂಧಪಟ್ಟ ಕುಟುಂಬಗಳಿಗೂ ಮತ್ತು ರಾಜ್ಯದ ಬೊಕ್ಕಸಕ್ಕೂ ಕೋಟ್ಯಂತರ ರೂ. ವೆಚ್ಚವಾಗುತ್ತದೆ.
ಇದಕ್ಕಿರುವ ಇನ್ನೊಂದು ಮುಖ್ಯ ಉಪಾಯವೆಂದರೆ ಹೀಗಿರುವ ಜಿಲ್ಲಾ ಕೇಂದ್ರ ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸಬೇಕಾಗುತ್ತದೆ. ಅಂತಹ ಆಸ್ಪತ್ರೆಗಳಿಗೆ ವಿವಿಧ ರೀತಿ ಆಧುನಿಕ ವೈದ್ಯಕೀಯ ಉಪಕರಣಗಳು, ಮೂಲಭೂತ ಸೌಕರ್ಯಗಳು, ಆರೋಗ್ಯ ಸೌಕರ್ಯಗಳು ಮತ್ತು ನುರಿತ ವೈದ್ಯರುಗಳನ್ನು ಸರಕಾರಗಳು ಆದಷ್ಟು ಬೇಗ ಒದಗಿಸಬೇಕಾಗುತ್ತದೆ. ಇದರೊಂದಿಗೆ ತಾಲೂಕು ಆಸ್ಪತ್ರೆಗಳಲ್ಲಿಯೂ ಟ್ರಾಮಾ ಕೇಂದ್ರಗಳನ್ನು ತೆರೆದು ತೀವ್ರತರವಾದ ಅಪಘಾತವಾದಲ್ಲಿ ಸಾಧ್ಯವಾದಷ್ಟು ಅಲ್ಲೇ ಅದನ್ನು ನಿರ್ವಹಿಸುವ ಸೌಲಭ್ಯವನ್ನು ಒದಗಿಸಬೇಕಾಗುತ್ತದೆ. ಸರಕಾರವು 9ನೇ ಪಂಚವಾರ್ಷಿಕ ಯೋಜನೆಯಲ್ಲಿ ರಸ್ತೆ ಅಪಘಾತಗಳ ವಿಚಾರದಲ್ಲಿ ಸಾಕಷ್ಟು ಯೋಜನೆಗಳನ್ನು ಮತ್ತು ವಿಶೇಷ ಟ್ರಾಮಾ ಕೇಂದ್ರಗಳ ಸ್ಥಾಪನೆ ಕುರಿತು ಕ್ರಮ ಕೈಗೊಂಡಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯತೆಯಿಂದ ಈ ಯೋಜನೆಗಳು ಸರಿಯಾಗಿ ಕಾರ್ಯಗತವಾಗಿಲ್ಲ. ಅದಲ್ಲದೆ ವೈದ್ಯಕೀಯ ಪಠ್ಯಪುಸ್ತಕಗಳಲ್ಲಿ ಇಂತಹ ತೀವ್ರತರವಾದ ಗಾಯಗಳ ನಿರ್ವಹಿಸುವ ಕುಶಲತೆಯನ್ನು ವೈದ್ಯ ವಿದ್ಯಾರ್ಥಿಗಳಲ್ಲಿ ಆರಂಭದಿಂದಲೂ ಕಲಿಸುವ ವ್ಯವಸ್ಥೆ ಸಹ ತ್ವರಿತವಾಗಿ ಆಗಬೇಕಾಗುತ್ತದೆ. ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ಅಕ್ಕಪಕ್ಕ ಸಹ ಟ್ರಾಮಾ ಆಸ್ಪತ್ರೆಗಳನ್ನು ನಿರ್ಮಿಸಬೇಕಾಗುತ್ತದೆ. ಹೆದ್ದಾರಿಗಳಲ್ಲಿ ಸದಾ ಎಲ್ಲಾ ಸೌಲಭ್ಯ ಹೊಂದಿರುವ ಆ್ಯಂಬುಲೆನ್ಸ್‌ಗಳು ಸಿದ್ಧ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಹೆಲ್ಮೆಟ್ ಮತ್ತು ಸೀಟ್ ಬೆಲ್ಟ್ ಗಳ ಬಳಕೆ ಕಡ್ಡಾಯವಾಗಿರಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ವಾಹನ ಸವಾರರು ಮತ್ತು ತಲೆಗೆ ಏಟು ಬೀಳಬಹುದಾದ ಕೆಲಸ ಮಾಡುತ್ತಿರುವವರು, ಕ್ರೀಡಾಪಟುಗಳು ಮತ್ತು ಇತರ ಸಾಮಾನ್ಯ ಜನರು ಈ ವಿಚಾರದಲ್ಲಿ ಬಹಳ ಎಚ್ಚರಿಕೆ ವಹಿಸಬೇಕಾಗುತ್ತದೆ.