ರಾಜ್ಯದಲ್ಲಿ ಇಳಿಕೆಯಾಗದ ನವಜಾತ ಶಿಶುಗಳ ಮರಣ ಸಂಖ್ಯೆ
►ವಿಧಾನಮಂಡಲಕ್ಕೆ ಸರಕಾರದ ಮಾಹಿತಿ ►ನಾಲ್ಕು ವರ್ಷಗಳಲ್ಲಿ 25,032 ನವಜಾತ ಶಿಶುಗಳ ಮರಣ
Photo:freepik
ಬೆಂಗಳೂರು: ಮಾತೃ ಪೂರ್ಣ ಯೋಜನೆ, ಮಾತೃ ವಂದನಾ, ಪೌಷ್ಟಿಕ ಆಹಾರ ವಿತರಣೆ ಸೇರಿ ನಾನಾ ಯೋಜನೆಗಳಿಗೆ ಕೋಟ್ಯಂತರ ರೂ. ಖರ್ಚು ಮಾಡಿದ್ದರೂ ಸಹ ರಾಜ್ಯದಲ್ಲಿ ನವಜಾತ ಶಿಶುಗಳ ಮರಣ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿಲ್ಲ.
ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 25,032 ನವಜಾತ ಶಿಶುಗಳು ಮರಣ ಹೊಂದಿವೆ ಎಂದು ರಾಜ್ಯ ಸರಕಾರವು ವಿಧಾನಮಂಡಲಕ್ಕೆ ಒದಗಿಸಿರುವ ಮಾಹಿತಿಯು ಆತಂಕಕಾರಿಯಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆ ಮೈಸೂರಿನಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ 2,308 ನವಜಾತ ಶಿಶುಗಳು ಮರಣ ಹೊಂದಿವೆ. 2023ರ ಎಪ್ರಿಲ್ನಿಂದ 2024ರ ಜನವರಿವರೆಗೆ 437 ನವಜಾತ ಶಿಶುಗಳು ಮೃತಪಟ್ಟಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ದಿನೇಶ್ ಗುಂಡೂರಾವ್ ಅವರು ಮಾಹಿತಿ ಒದಗಿಸಿದ್ದಾರೆ.
ಬಳ್ಳಾರಿಯಲ್ಲಿ 2,174, ಬೆಳಗಾವಿಯಲ್ಲಿ 1,074, ಬೆಂಗಳೂರು ನಗರ 2,557, ಕಲಬುರಗಿಯಲ್ಲಿ 1,443, ಧಾರವಾಡ 1,225, ಬೀದರ್ನಲ್ಲಿ 839,ದಾವಣಗೆರೆಯಲ್ಲಿ 947, ಚಿತ್ರದುರ್ಗ 662, ಗದಗ್ನಲ್ಲಿ 488, ಹಾಸನದಲ್ಲಿ 1,049, ಕೊಪ್ಪಳದಲ್ಲಿ 1,519, ರಾಯಚೂರು 2,142, ಶಿವಮೊಗ್ಗದಲ್ಲಿ 1,089, ತುಮಕೂರಿನಲ್ಲಿ 742, ಉಡುಪಿಯಲ್ಲಿ 283, ಮಂಡ್ಯದಲ್ಲಿ 533, ಕೋಲಾರದಲ್ಲಿ 569, ದಕ್ಷಿಣ ಕನ್ನಡದಲ್ಲಿ 1,065, ಉತ್ತರ ಕನ್ನಡದಲ್ಲಿ 259, ವಿಜಯಪುರದಲ್ಲಿ 349 ಮಕ್ಕಳು ಮೃತಪಟ್ಟಿವೆ.
ರಾಜ್ಯ ಸರಕಾರಿ ಆಸ್ಪತ್ರೆಗಳಲ್ಲೂ ಆಧುನಿಕ, ತಂತ್ರಜ್ಞಾನ ಆಧರಿತ ಉಪಕರಣಗಳನ್ನು ಅಳವಡಿಸುವ ಮೂಲಕ ಮಕ್ಕಳ ಚಿಕಿತ್ಸೆಗೆ ಅಗತ್ಯವಿರುವ ಕ್ರಮ ಕೈಗೊಳ್ಳಲಾಗಿದೆ. ಹೀಗಿದ್ದರೂ ನವಜಾತ ಶಿಶುಗಳ ಮರಣ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.
ವಿಶೇಷವೆಂದರೆ ನವಜಾತ ಶಿಶು ಮರಣ ದರ ಪ್ರಮಾಣದ ವಿಷಯದಲ್ಲಿ ರಾಷ್ಟ್ರೀಯ ಆರೋಗ್ಯ ನೀತಿ 2025 ನಿಗದಿಪಡಿಸಿದ್ದ ಗುರಿಯನ್ನು 5 ವರ್ಷವೇ ಮುಂಚಿತವಾಗಿ ಸಾಧನೆ ಮಾಡಿದೆ ಎಂದೂ ಸರಕಾರವು ಉತ್ತರಿಸಿದೆ. ರಾಷ್ಟ್ರೀಯ ಆರೋಗ್ಯ ನೀತಿಯ 2017ರ ಅನ್ವಯ ಎಲ್ಲಾ ರಾಜ್ಯಗಳಿಗೆ 2025ರ ವೇಳೆಗೆ ನವಜಾತ ಶಿಶು ಮರಣ ದರವನ್ನು 16ಕ್ಕಿಂತ (ಪ್ರತೀ 1,000 ಜೀವಂತ ಜನನಗಳಿಗೆ) ಕಡಿಮೆ ಸಾಧಿಸಲು ಗುರಿ ನೀಡಿವೆ. ಮಾದರಿ ವ್ಯವಸ್ಥೆ 2020ರ ವರದಿ ಅನ್ವಯ ಕರ್ನಾಟಕ ರಾಜ್ಯದ ನವಜಾತ ಶಿಶು ಮರಣ ದರವು ಪ್ರಸ್ತುತ 14 (ಪ್ರತೀ 1,000 ಜೀವಂತ ಜನನಗಳಿಗೆ) ಇದೆ ಎಂದು ವಿವರಿಸಿದೆ.
ಅವಧಿಪೂರ್ವ ಜನನ, ಶಿಶುವಿನ ಕಡಿಮೆ ತೂಕದಿಂದಾಗುವ ತೊಂದರೆಗಳು, ಜನನ ಸಮಯದಲ್ಲಿ ಉಸಿರುಗಟ್ಟುವಿಕೆ, ನ್ಯುಮೋನಿಯಾ, ಸೆಪ್ಸಿಸ್ ನವಜಾತ ಶಿಶುಗಳ ಕಾಮಾಲೆ, ಅತಿಸಾರಭೇದಿ ಕಾರಣಗಳಿಂದಾಗಿ ನವಜಾತ ಶಿಶುಗಳು ಸಾವನ್ನಪ್ಪುತ್ತಿವೆ.
ನವಜಾತ ಶಿಶುಗಳ ಆರೋಗ್ಯ ಸಮಸ್ಯೆಗಳನ್ನು ಪರಿಹರಿಸಲು ಮತ್ತು ನವಜಾತ ಶಿಶು ಮರಣಗಳನ್ನು ತಡೆಯಲು ವೈದ್ಯಕೀಯ ಮಹಾವಿದ್ಯಾಲಯಗಳ ಆಸ್ಪತ್ರೆಗಳು ಮತ್ತು ರಾಜ್ಯದ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ನವಜಾತ ಶಿಶುಗಳಿಗೆ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದೆ.
ತಾಲೂಕು ಮಟ್ಟದ ಪೌಷ್ಟಿಕ ಪುನಶ್ಚೇತನ ಕೇಂದ್ರದಲ್ಲಿ ರಾಜ್ಯ ಅನುದಾನದಿಂದ ದಿನವೊಂದಕ್ಕೆ ದಾಖಲಾಗುವ ಪ್ರತೀ ಮಗುವಿಗೆ ಒಟ್ಟು 684 ರೂ., ಜಿಲ್ಲಾ ಮಟ್ಟದ ಕೇಂದ್ರದಲ್ಲಿ ರಾಷ್ಟ್ರೀಯ ಆರೋಗ್ಯ ಅಭಿಯಾನದ ಅನುದಾನದಿಂದ ದಿನವೊಂದಕ್ಕೆ ದಾಖಲಾಗುವ ಪ್ರತೀ ಮಗುವಿಗೆ ಒಟ್ಟು 450 ರೂ. ನೀಡಲಾಗುತ್ತಿದೆ.
ಕಡಿಮೆ ಹುಟ್ಟು ತೂಕವುಳ್ಳ ನವಜಾತ ಶಿಶುಗಳಿಗೆ ಆರೈಕೆ ಮಾಡಲು ವಿಶೇಷ ನವಜಾತ ಶಿಶು ಆರೈಕೆ ಘಟಕಗಳನ್ನು ಹೊಂದಿದೆ. ಅಲ್ಲದೆ ಎಲ್ಲಾ ಆಸ್ಪತ್ರೆಗಳಲ್ಲಿ ಕಾಂಗರೂ ಮದರ್ ಕೇರ್ ವಾರ್ಡ್ಗಳನ್ನು ಸ್ಥಾಪಿಸಿದೆ. ವಿಶೇಷ ಆರೈಕೆ ಅಗತ್ಯವಿರುವ ಗಂಭೀರ ಅನಾರೋಗ್ಯದ ಶಿಶುಗಳಿಗೆ ಅನುಕೂಲವಾಗುವಂತೆ ವಿಭಾಗಕ್ಕೆ ಒಂದರಂತೆ ನಾಲ್ಕು ಆ್ಯಂಬುಲೆನ್ಸ್ ಸೇವೆಗಳನ್ನೂ ಒದಗಿಸುತ್ತಿದೆ ಎಂದು ವಿವರ ಒದಗಿಸಿದೆ.