ಸಂಸದರ ಅಮಾನತು ಪ್ರಜಾಸತ್ತಾತ್ಮಕವೇ ಎಂಬ ಪ್ರಶ್ನೆ
ಡಿಸೆಂಬರ್ 4ರಂದು ಆರಂಭಗೊಂಡಿದ್ದ ಸಂಸತ್ತಿನ ಚಳಿಗಾಲದ ಅಧಿವೇಶನ ನಿಗದಿತ ಅವಧಿಗಿಂತ ಒಂದು ದಿನ ಮೊದಲೇ ಗುರುವಾರ ಕೊನೆಗೊಂಡಿದ್ದು, ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಆದರೆ ಈ ಅಧಿವೇಶನ, ಪ್ರತಿಪಕ್ಷ ನಾಯಕರು ಮತ್ತು ರಾಜಕೀಯ ಪರಿಣಿತರು ಅಭಿಪ್ರಾಯಪಡುವಂತೆ ಒಂದು ಕರಾಳ ವಿದ್ಯಮಾನಕ್ಕೆ ಸಾಕ್ಷಿಯಾಗಿದೆ.
ವಿರೋಧ ಪಕ್ಷದ ಸದಸ್ಯರನ್ನು ಸಂಸತ್ತಿನ ಉಭಯ ಸದನಗಳಿಂದ ದಾಖಲೆ ಮಟ್ಟದಲ್ಲಿ ಅಮಾನತು ಮಾಡಲಾಗಿದೆ. ಸಂಸತ್ತಿನ ಇತಿಹಾಸದಲ್ಲೇ ಮೊದಲ ಬಾರಿಗೆ ದೊಡ್ಡ ಸಂಖ್ಯೆಯಲ್ಲಿ ಸದಸ್ಯರ ಅಮಾನತು ಮಾಡಲಾಗಿದೆ. ಅಮಾನತುಗೊಂಡ ಒಟ್ಟು ಸಂಸದರು 146. ಲೋಕಸಭೆಯಿಂದ ಅಮಾನತುಗೊಂಡವರ ಸಂಖ್ಯೆಯೇ 100ಕ್ಕೆ ತಲುಪಿದೆ. ಈ 100 ಸಂಸದರಲ್ಲಿ ಮೂವರನ್ನು ಹಕ್ಕುಬಾಧ್ಯತಾ ಸಮಿತಿ ವರದಿ ಸಲ್ಲಿಕೆಯಾಗುವವರೆಗೆ ಸದನದಿಂದ ಹೊರಹಾಕಲಾಗಿದೆ.
ಅದರಲ್ಲೂ, ಡಿಸೆಂಬರ್ 18ರಂದು ಒಂದೇ ದಿನ 78 ಸಂಸದರ ಅಮಾನತು ಮಾಡಲಾಯಿತು. ಒಂದೇ ದಿನದಲ್ಲಿ ಇಷ್ಟು ಸಂಖ್ಯೆಯಲ್ಲಿ ಸಂಸದರ ಅಮಾನತು ಮಾಡಿರುವುದು ಸಂಸತ್ ಇತಿಹಾಸದಲ್ಲೇ ಮೊದಲು. ಆ ದಿನ ಲೋಕಸಭೆಯ 33 ಮತ್ತು ರಾಜ್ಯಸಭೆಯ 45 ಸಂಸದರನ್ನು ಅಮಾನತುಗೊಳಿಸಲಾಯಿತು.
ಡಿಸೆಂಬರ್ 13ರಂದು ಆದ ಸಂಸತ್ ಭದ್ರತಾ ಲೋಪಕ್ಕೆ ಸಂಬಂಧಿಸಿದಂತೆ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ಸಂಸದರು ಪ್ರತಿಭಟನೆ ನಡೆಸುತ್ತಿದ್ದರು. ಈ ಭದ್ರತಾ ಲೋಪದ ಬಗ್ಗೆ ವಿಸ್ತೃತ ಚರ್ಚೆಯಾಗಬೇಕು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿ ಮೊದಲು ಡಿಸೆಂಬರ್ 14ರಂದು ರಾಜ್ಯಸಭೆ ಮತ್ತು ಲೋಕಸಭೆಯ 14 ಸಂಸದರನ್ನು ಅನುಚಿತ ವರ್ತನೆ ಆರೋಪದಲ್ಲಿ ಅಮಾನತು ಮಾಡಲಾಗಿತ್ತು.
ಡಿಸೆಂಬರ್ 18ರಂದು ರಾಜ್ಯಸಭೆಯಿಂದ 45 ಸಂಸದರ ಅಮಾನತು ಮಾಡಲಾಯಿತು. ಅವರಲ್ಲಿ 34 ಸದಸ್ಯರನ್ನು ಪ್ರಸಕ್ತ ಅಧಿವೇಶನದ ಉಳಿದ ಅವಧಿಗೂ, 11 ಸದಸ್ಯರನ್ನು ವಿಶೇಷಾಧಿಕಾರ ಸಮಿತಿಯ ವರದಿಯವರೆಗೂ ಅಮಾನತುಗೊಳಿಸಲಾಯಿತು. ರಾಜ್ಯಸಭೆಯಿಂದ ಅಂದು ಅಮಾನತುಗೊಂಡ ಸಂಸದರು:
ಕಾಂಗ್ರೆಸ್ನಿಂದ - ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲಾ ಸೇರಿದಂತೆ 12 ಸದಸ್ಯರು; ಟಿಎಂಸಿಯಿಂದ 7 ಸದಸ್ಯರು; ಡಿಎಂಕೆಯಿಂದ 4 ಸದಸ್ಯರು; ಆರ್ಜೆಡಿಯಿಂದ ಇಬ್ಬರು; ಸಿಪಿಐ(ಎಂ) ಎನ್ಸಿಪಿ, ಜೆಎಂಎಂನಿಂದ - ತಲಾ ಒಬ್ಬರು; ಜೆಡಿಯುನಿಂದ ಇಬ್ಬರು; ಎಸ್ಪಿಯಿಂದ ಇಬ್ಬರು; ಇತರರು- ಇಬ್ಬರು. ಇವರಲ್ಲದೆ, ವಿಶೇಷಾಧಿಕಾರ ಸಮಿತಿ ವರದಿ ಬರುವವರೆಗೂ ಅಮಾನತಿನಲ್ಲಿರುವವರು 11 ಸಂಸದರು.
ಇನ್ನು, ಅದೇ ದಿನ ಲೋಕಸಭೆಯಿಂದ ಅಮಾನತುಗೊಂಡ 33 ಪ್ರತಿಪಕ್ಷ ಸಂಸದರಲ್ಲಿ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಂಡಿದ್ದವರು: ಟಿಎಂಸಿ ಮತ್ತು ಡಿಎಂಕೆಯಿಂದ - ತಲಾ 9 ಸದಸ್ಯರು; ಕಾಂಗ್ರೆಸ್ನಿಂದ 7 ಸದಸ್ಯರು; ಇಂಡಿಯನ್ ಯೂನಿಯನ್ ಮುಸ್ಲಿಮ್ ಲೀಗ್ (ಐಯುಎಂಎಲ್) - ಇಬ್ಬರು; ರೆವಲ್ಯೂಷನರಿ ಸೋಷಿಯಲಿಸ್ಟ್ ಪಾರ್ಟಿ, ವೀರುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಜೆಡಿಯುನಿಂದ - ತಲಾ ಒಬ್ಬರು. ಇವರಲ್ಲದೆ ಕಾಂಗ್ರೆಸ್ನ ಇನ್ನೂ ಮೂವರು ಸಂಸದರನ್ನು ವಿಶೇಷಾಧಿಕಾರ ಸಮಿತಿಯ ವರದಿ ಬರುವವರೆಗೆ ಅಮಾನತಿನಲ್ಲಿರಿಸಲಾಗಿದೆ.
ಇದಾದ ಬಳಿಕ ಡಿಸೆಂಬರ್ 19ರಂದು ಮತ್ತೆ 49 ಸದಸ್ಯರನ್ನು ಲೋಕಸಭೆಯಿಂದ ಅಮಾನತು ಮಾಡಲಾಯಿತು. ಅಂದು ಅಮಾನತಾದವರಲ್ಲಿ ನ್ಯಾಷನಲ್ ಕಾನ್ಫರೆನ್ಸ್ನ ಫಾರೂಕ್ ಅಬ್ದುಲ್ಲಾ, ಕಾಂಗ್ರೆಸ್ ನಾಯಕರಾದ ಶಶಿ ತರೂರ್, ಮನೀಶ್ ತಿವಾರಿ ಮೊದಲಾದವರು ಸೇರಿದ್ದರು. ಇದರ ಬೆನ್ನಲ್ಲೇ ಡಿಸೆಂಬರ್ 20ರಂದು ಮತ್ತಿಬ್ಬರು ಲೋಕಸಭಾ ಸದಸ್ಯರನ್ನು ಅಮಾನತು ಮಾಡಲಾಯಿತು. ಕೇರಳದ ಕಾಂಗ್ರೆಸ್ ಸಂಸದ ಥಾಮಸ್ ಚಾಳಿಖಾಡನ್ ಹಾಗೂ ಸಿಪಿಎಂ ಸಂಸದ ಎಂ.ಎಂ. ಆರಿಫ್ ಆ ದಿನ ಅಮಾನತುಗೊಂಡರು. ಬಳಿಕ ಡಿಸೆಂಬರ್ 21ರಂದು ಮತ್ತೆ ಮೂವರು ಕಾಂಗ್ರೆಸ್ ಸಂಸದರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಯಿತು. ಅಂದು ಡಿ.ಕೆ. ಸುರೇಶ್, ದೀಪಕ್ ಬೈಜ್ ಹಾಗೂ ನಕುಲ್ ನಾಥ್ ಅಮಾನತಾದರು.ಅಲ್ಲಿಗೆ, ಈ ಅಧಿವೇಶನಲ್ಲಿ ಅಮಾನತುಗೊಂಡ ಒಟ್ಟು ಸಂಸತ್ ಸದಸ್ಯರ ಸಂಖ್ಯೆ 146ಕ್ಕೆ ಮುಟ್ಟಿತು.
ಅಮಾನತುಗೊಂಡ ಈ ಸಂಸದರಿಗೆ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. ಅವೆಂದರೆ 1.ಅಮಾನತಾದ ಸಂಸದರು ಸಂಸತ್ತಿನ ಪ್ರವೇಶ ಮಂಟಪ, ಗ್ಯಾಲರಿ ಮತ್ತು ಚೇಂಬರ್ಗಳಿಗೆ ಬರುವಂತಿಲ್ಲ; 2.ಅವರು ಸದಸ್ಯರಾಗಿರುವ ಸಂಸದೀಯ ಸಮಿತಿ ಸಭೆಗಳಿಂದಲೂ ಅವರನ್ನು ಅಮಾನತುಗೊಳಿಸಲಾಗಿದೆ; 3.ಅವರ ಹೆಸರಿನಲ್ಲಿ ಯಾವುದೇ ವಸ್ತು ಇರಿಸುವಂತಿಲ್ಲ; 4.ಅಮಾನತಿನ ಅವಧಿಯಲ್ಲಿ ಅವರು ಮಂಡಿಸಿದ ಯಾವುದೇ ಸೂಚನೆ ಸ್ವೀಕಾರಾರ್ಹವಲ್ಲ; 5.ಅವರು ತಮ್ಮ ಅಮಾನತು ಅವಧಿಯಲ್ಲಿ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಮತ ಹಾಕುವಂತಿಲ್ಲ; 6.ಅಮಾನತು ಅವಧಿಯ ದೈನಂದಿನ ಭತ್ತೆಗೆ ಅವರು ಅರ್ಹರಾಗಿರುವುದಿಲ್ಲ.
ಒಂದೇ ದಿನದಲ್ಲಿ ಅತಿ ದೊಡ್ಡ ಸಂಖ್ಯೆಯಲ್ಲಿ ಸಂಸದರ ಅಮಾನತಾದ ದಿನವೆಂದು ಡಿಸೆಂಬರ್ 18 ದಾಖಲಾಗುವ ಮೊದಲು, 1989ರ ಮಾರ್ಚ್ 15ರಂದು ನಡೆದಿದ್ದ ಸಂಸದರ ಅಮಾನತು ಪ್ರಕರಣವೇ ಆ ವರೆಗಿನ ದಾಖಲೆಯಾಗಿತ್ತು. ಆಗ ರಾಜೀವ್ ಗಾಂಧಿ ಪ್ರಧಾನಿಯಾಗಿದ್ದರು. ಕಾಂಗ್ರೆಸ್ ಸರಕಾರ ಪ್ರಚಂಡ ಬಹುಮತದೊಂದಿಗೆ ಅಧಿಕಾರಕ್ಕೇರಿದ್ದ ಕಾಲ ಅದಾಗಿತ್ತು. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಹತ್ಯೆ ಕುರಿತ ಠಕ್ಕರ್ ಆಯೋಗದ ವರದಿ ಸಂಸತ್ತಿನಲ್ಲಿ ಬಿರುಗಾಳಿ ಎಬ್ಬಿಸಿತ್ತು, ಅದರಲ್ಲೂ ವಿಶೇಷವಾಗಿ ಇಂದಿರಾ ಗಾಂಧಿಯವರ ವಿಶೇಷ ಸಹಾಯಕ ಆರ್.ಕೆ.ಧವನ್ ಭಾಗಿಯಾಗಿದ್ದರ ಕುರಿತ ಅನುಮಾನಗಳು ಕೋಲಾಹಲಕ್ಕೆ ಕಾರಣವಾಗಿದ್ದವು. ದಿವಂಗತ ಪ್ರಧಾನಿ ಹತ್ಯೆಯ ಸಂಚಿನಲ್ಲಿ ಆರ್.ಕೆ. ಧವನ್ ಪಾತ್ರದ ಬಗ್ಗೆ ಗಂಭೀರ ಅನುಮಾನಗಳನ್ನು ಆ ವರದಿ ವ್ಯಕ್ತಪಡಿಸಿತ್ತು. ಠಕ್ಕರ್ ಆಯೋಗದ ವರದಿಯನ್ನು ಸಂಸತ್ತಿನಲ್ಲಿ ಮಂಡಿಸುತ್ತಿದ್ದಂತೆ ಪ್ರತಿಪಕ್ಷಗಳು ತೀವ್ರ ಪ್ರತಿಭಟನೆ ನಡೆಸಿದ್ದವು. ಏಕೆಂದರೆ, ಆರ್.ಕೆ.ಧವನ್ ಅಂದಿನ ಪ್ರಧಾನಿ ರಾಜೀವ್ ಗಾಂಧಿಯವರ ಸಂಪುಟದ ಭಾಗವಾಗಿದ್ದರು. ನಂತರ ಕಾಂಗ್ರೆಸ್ ಪಕ್ಷ ಸೇರಿ ರಾಷ್ಟ್ರೀಯ ಕಾರ್ಯದರ್ಶಿಯಾಗಿದ್ದರು. ಅಂದು ಸಂಸತ್ತಿನಲ್ಲಿ ನಡೆದ ಕೋಲಾಹಲ ಸಂಸತ್ತಿನ 63 ಲೋಕಸಭಾ ಸದಸ್ಯರ ಅಮಾನತಿಗೆ ಕಾರಣವಾಗಿತ್ತು. ಆಗ ಅಮಾನತುಗೊಂಡ ಸದಸ್ಯರಲ್ಲಿ ಟಿಡಿಪಿ, ಜನತಾ ಪಕ್ಷ ಮತ್ತು ಸಿಪಿಎಂ ಮೊದಲಾದ ಪಕ್ಷಗಳ ಸಂಸದರು ಇದ್ದರು. ಆ ದಿನ ಒಂದು ಕುತೂಹಲಕಾರಿ ಪ್ರಸಂಗವೂ ನಡೆದಿತ್ತು. ವಿರೋಧ ಪಕ್ಷದ ಸದಸ್ಯ ಸೈಯದ್ ಶಹಾಬುದ್ದೀನ್ ತಮ್ಮ ವಿಚಿತ್ರ ನಡೆಯ ಮೂಲಕ ಗಮನ ಸೆಳೆದಿದ್ದರು. ವಾಸ್ತವವಾಗಿ ಅವರನ್ನು ಅಮಾನತುಗೊಳಿಸಿರಲಿಲ್ಲ. ಆದರೂ ತಮ್ಮನ್ನು ಅಮಾನತು ಮಾಡಿರುವುದಾಗಿ ಪರಿಗಣಿಸಬೇಕೆಂದು ಒತ್ತಾಯಿಸಿ, ಸ್ವಯಂಪ್ರೇರಿತರಾಗಿ ಸದನದಿಂದ ಹೊರನಡೆದಿದ್ದರು. ಇದಕ್ಕೆ ಸಹಮತ ವ್ಯಕ್ತಪಡಿಸಿ ಇತರ ಮೂವರು ಸದಸ್ಯರಾದ ಜಿ.ಎಂ. ಬನಾತ್ವಾಲಾ, ಎಂ.ಎಸ್. ಗಿಲ್ ಮತ್ತು ಶಮೀಂದರ್ ಸಿಂಗ್ ಕೂಡ ಹೊರನಡೆದಿದ್ದರು. ಆ ಸಾಮೂಹಿಕ ಅಮಾನತು ಕ್ರಮ, ಒಂದೇ ದಿನದಲ್ಲಿ ಗರಿಷ್ಠ ಸಂಖ್ಯೆಯ ಸಂಸದರನ್ನು ಅಮಾನತುಗೊಳಿಸಿದ್ದಕ್ಕಾಗಿ ಆ ಸಮಯದಲ್ಲಿ ಹೊಸ ದಾಖಲೆ ನಿರ್ಮಿಸಿತ್ತು. ಆದರೆ, ಅಮಾನತುಗೊಂಡ ಸಂಸದರು ಮರುದಿನವೇ ಸಭಾಧ್ಯಕ್ಷರಲ್ಲಿ ಕ್ಷಮೆ ಯಾಚಿಸಿದ್ದರು. ಬಳಿಕ ಅವರ ಅಮಾನತು ರದ್ದುಪಡಿಸಿ, ಸಂಸತ್ತಿನ ಕಲಾಪಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗಿತ್ತು.
ಲೋಕಸಭೆ ಮತ್ತು ರಾಜ್ಯಸಭಾ ಸದಸ್ಯರನ್ನು ಅಮಾನತುಗೊಳಿಸುವ ನಿಯಮಗಳಿವೆ.
ಲೋಕಸಭೆಯಲ್ಲಿ ಸಂಸದರ ಅಮಾನತು ಹೇಗೆ?
ಲೋಕಸಭೆಯಲ್ಲಿ ನಿಯಮ 374 ಮತ್ತು 374(ಎ), ಸಂಸದರನ್ನು ಅಮಾನತುಗೊಳಿಸುವ ಅಧಿಕಾರವನ್ನು ಸ್ಪೀಕರ್ಗೆ ನೀಡುತ್ತವೆ.
ಲೋಕಸಭೆಯಲ್ಲಿನ ಕಾರ್ಯವಿಧಾನ ಮತ್ತು ವ್ಯವಹಾರದ ನಡವಳಿಕೆಯ ನಿಯಮಗಳ ಪ್ರಕಾರ, ಸದಸ್ಯರು ಸ್ಪೀಕರ್ ಅಧಿಕಾರವನ್ನು ಕಡೆಗಣಿಸಿದರೆ ಅಥವಾ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಸದನದ ನಿಯಮಗಳನ್ನು ಮೀರಿದರೆ ಅಮಾನತು ಕ್ರಮ ಜರುಗಿಸಬಹುದು.
ಅಂತಹ ಸಂದರ್ಭದಲ್ಲಿ, ಹೆಚ್ಚೆಂದರೆ ಅಧಿವೇಶನದ ಉಳಿದ ಅವಧಿಗೆ ಅಮಾನತುಗೊಳಿಸುವ ಪ್ರಸ್ತಾಪವನ್ನು ಮಂಡಿಸಬಹುದು.
ನಿಯಮ 374(ಎ) ಯನ್ನು 2001ರಲ್ಲಿ ಸೇರಿಸಲಾಯಿತು.
ಇದು ಯಾವ ಪ್ರಸ್ತಾವನೆಯ ಅಗತ್ಯವೂ ಇಲ್ಲದೆ ತಕ್ಷಣವೇ ಅಮಾನತು ಕ್ರಮ ಅನ್ವಯವಾಗುವುದಕ್ಕೆ ಅನುವು ಮಾಡಿಕೊಡುತ್ತದೆ.
ಸದಸ್ಯರು ಸದನದ ಬಾವಿಗೆ ಬಂದರೆ ಅಥವಾ ಸದನದ ನಿಯಮಗಳನ್ನು ದುರುಪಯೋಗಪಡಿಸಿಕೊಂಡಾಗ ಅಥವಾ ಘೋಷಣೆಗಳನ್ನು ಕೂಗುವ ಮೂಲಕ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸುವ ಮೂಲಕ ಗಂಭೀರ ಸಂದರ್ಭದಲ್ಲಿ, ಅಂತಹ ಸದಸ್ಯರನ್ನು ಸ್ಪೀಕರ್ ಹೆಸರಿಸುತ್ತಾರೆ. ಅಂಥ ಸದಸ್ಯರು ಐದು ದಿನ ಅಥವಾ ಅಧಿವೇಶನದ ಉಳಿದ ಅವಧಿ ಇವೆರಡರಲ್ಲಿ ಯಾವುದು ಕಡಿಮೆಯೋ ಅಷ್ಟರವರೆಗೆ ಅಮಾನತುಗೊಳ್ಳುತ್ತಾರೆ.
ಎರಡೂ ಸಂದರ್ಭಗಳಲ್ಲಿ, ಅಮಾನತುಗೊಂಡ ಸದಸ್ಯರು ಸದನದಿಂದ ಹೊರಹೋಗಬೇಕು.
ಇಷ್ಟಾಗಿಯೂ, ಸದನವು ಯಾವುದೇ ಸಂದರ್ಭದಲ್ಲಿ ಅಮಾನತು ಕ್ರಮವನ್ನು ಹಿಂದೆಗೆದುಕೊಳ್ಳಬಹುದಾಗಿದೆ.
ರಾಜ್ಯಸಭಾ ಸಂಸದರ ಅಮಾನತು ಹೇಗೆ?
ರಾಜ್ಯಸಭೆಯಲ್ಲಿ, ಸದಸ್ಯರ ಅಮಾನತು, ನಿಯಮ 256ರ ಮೂಲಕ ನಡೆಯುತ್ತದೆ.
ಅಧ್ಯಕ್ಷರ ಅಧಿಕಾರವನ್ನು ರಾಜ್ಯಸಭಾ ಸದಸ್ಯ ನಿರ್ಲಕ್ಷಿಸಿದರೆ ಅಥವಾ ಪರಿಷತ್ತಿನ ಕಲಾಪಕ್ಕೆ ನಿರಂತರವಾಗಿ ಮತ್ತು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುವ ಮೂಲಕ ಪರಿಷತ್ತಿನ ನಿಯಮಗಳನ್ನು ದುರುಪಯೋಗಪಡಿಸಿಕೊಂಡರೆ ಅಮಾನತುಗೊಳಿಸಬಹುದು.
ಅಮಾನತು ಪ್ರಸ್ತಾವದ ಮೂಲಕ ಈ ಕ್ರಮ ಕೈಗೊಳ್ಳಲಾಗುತ್ತದೆ.
ನಿಯಮ 256(2) ರ ಪ್ರಕಾರ ಅಧಿವೇಶನದ ಉಳಿದ ಅವಧಿ ಗಿಂತ ಹೆಚ್ಚಲ್ಲದ ಅವಧಿಗೆ ಸದಸ್ಯರನ್ನು ಅಮಾನತುಗೊಳಿಸಬಹುದು.
ಲೋಕಸಭೆಯಲ್ಲಿನಂತೆ, ರಾಜ್ಯಸಭೆಯಲ್ಲಿ ಅಮಾನತು ಪ್ರಸ್ತಾವವಿಲ್ಲದೆ ಅಧ್ಯಕ್ಷರು ಸದಸ್ಯರನ್ನು ಅಮಾನತುಗೊಳಿಸಲಾರರು. ಆದರೆ ಸದನದಿಂದ ಹೊರಹೋಗುವಂತೆ ಹೇಳಬಹುದು
ಈ ಚಳಿಗಾಲದ ಅಧಿವೇಶನದ ಅವಧಿಯಲ್ಲಿ ನಡೆದ ಸಂಸದರ ಅಮಾನತು ಪ್ರಕರಣ, ಸಂಸತ್ತು ಮತ್ತು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ. ಮೋದಿ ನೇತೃತ್ವದ ನಿರಂಕುಶ ಸರಕಾರ ಪ್ರಜಾಪ್ರಭುತ್ವದ ಎಲ್ಲಾ ಶಿಷ್ಟಾಚಾರಗಳನ್ನು ಕಸದ ಬುಟ್ಟಿಗೆ ಎಸೆದಿದೆ ಎಂದು ಖರ್ಗೆ ಟೀಕಿಸಿದ್ದಾರೆ. ಈ ವಿಚಾರವಾಗಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡುವ ಪ್ರಧಾನಿ ಮೋದಿ, ಸುದ್ದಿವಾಹಿನಿಗೆ ಸಂದರ್ಶನ ನೀಡುವ ಗೃಹಮಂತ್ರಿ ಅಮಿತ್ ಶಾ ಸಂಸತ್ತಿನಲ್ಲಿ ಹೇಳಿಕೆ ಕೊಡದ ಬಗ್ಗೆ ಖರ್ಗೆ ತಕರಾರು ಎತ್ತಿದ್ದಾರೆ.
ಪ್ರತಿಪಕ್ಷ ಬೇಡವೆಂಬ, ವಿರೋಧ ಇರಕೂಡದೆಂಬ, ಪ್ರಶ್ನಿಸುವವರು, ಪ್ರತಿಭಟಿಸುವವರನ್ನು ದ್ವೇಷಿಸುವ ಈ ಸರಕಾರ, ಪ್ರತಿಪಕ್ಷದವರನ್ನು ಎದುರಿಸುವ ಸಂದರ್ಭವನ್ನು ತಪ್ಪಿಸಿಕೊಳ್ಳಲು ಇಂಥದೊಂದು ಕ್ರಮ ತೆಗೆದುಕೊಂಡಿದೆ ಎಂಬಂತೆ ಈ ಇಡೀ ವಿದ್ಯಮಾನ ಕಾಣಿಸುತ್ತಿದೆ. ಮೋದಿ ಸರಕಾರ ಪ್ರತಿಪಕ್ಷಗಳು ಮೌನವಾಗಿರಬೇಕೆಂದು ಬಯಸುತ್ತದೆ. ಮೌನವಾಗಿರದೆ ಹೋದರೆ ಮೌನವಾಗಿಸುವ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿಪಕ್ಷಗಳ ಬಲ ಕಡಿಮೆಯಿರುವ ಸಂಸತ್ತಿನಲ್ಲಿ ಚರ್ಚೆಯಿಲ್ಲದೆ, ಚರ್ಚೆಯ ಕುರಿತ ಒತ್ತಾಯಗಳನ್ನು ತಿರಸ್ಕರಿಸಿ, ತನ್ನ ಅನುಕೂಲಕ್ಕೆ ಬೇಕಿರುವ ಪ್ರಮುಖ ಕಾಯ್ದೆಗಳನ್ನೆಲ್ಲ ಅಂಗೀಕರಿಸಿದೆ. ಭಿನ್ನಾಭಿಪ್ರಾಯಗಳನ್ನು ಪೂರ್ತಿಯಾಗಿ ಕಡೆಗಣಿಸಿದೆ ಅಥವಾ ಅಮಾನತಿನಂಥ ಕ್ರಮಗಳ ಮೂಲಕ ಹತ್ತಿಕ್ಕುತ್ತಲೇ ಬಂದಿದೆ.
ಈಗ ಆಗಿರುವುದು ಕೂಡ ಅಂಥದೇ ಒಂದು ಆತಂಕಕಾರಿ ಬೆಳವಣಿಗೆ.
ಅಮಾನತು ಇತಿಹಾಸ!
ಸಂಸತ್ ಇತಿಹಾಸದಲ್ಲಿ ಮೊದಲ ಬಾರಿಗೆ ಸಂಸದರೊಬ್ಬರನ್ನು ಅಮಾನತು ಮಾಡಿದ್ದು 1962ರ ಸೆಪ್ಟಂಬರ್ 3ರಂದು. ಉತ್ತರ ಪ್ರದೇಶದ ರಾಜ್ಯಸಭಾ ಸದಸ್ಯರಾಗಿದ್ದ ಗೋಡೆ ಮುರಹರಿ ಅವರನ್ನು ಅಂದು ಅಮಾನತು ಮಾಡಲಾಯಿತು. ಆದರೂ ಅವರು ಸದನದಿಂದ ಹೊರನಡೆಯದೇ ಇದ್ದಾಗ ಮಾರ್ಷಲ್ಗಳ ಮೂಲಕ ಅವರನ್ನು ಹೊರಹಾಕಲಾಗಿತ್ತು.
ಇದಲ್ಲದೆ, ಸಂಸದರ ಅಮಾನತಿನ ಕೆಲವು ಗಮನಾರ್ಹ ಸಂದರ್ಭಗಳನ್ನು ಗಮನಿಸುವುದಾದರೆ,
ಜುಲೈ 26, 2022: ಸದನದ ಕಲಾಪಗಳಿಗೆ ಅಡ್ಡಿಪಡಿಸಿದ ಮತ್ತು ಬೆಲೆ ಏರಿಕೆ ಮತ್ತು ದೈನಂದಿನ ಅಗತ್ಯ ವಸ್ತುಗಳ ಮೇಲೆ ಹೇರಲಾಗಿದ್ದ ಜಿಎಸ್ಟಿ ಹಿಂಪಡೆಯುವಿಕೆ ಕುರಿತ ಚರ್ಚೆಗೆ ಒತ್ತಾಯಿಸಿದ 19 ಸಂಸದರನ್ನು ವಾರದ ಉಳಿದ ಅವಧಿಗೆ ಅಮಾನತುಗೊಳಿಸಲಾಗಿತ್ತು.
ನವೆಂಬರ್ 29, 2021: ಹಿಂದೆಂದೂ ಇಲ್ಲದಂಥ ದುಷ್ಕೃತ್ಯಗಳು, ಅಶಿಸ್ತಿನ ಮತ್ತು ಹಿಂಸಾತ್ಮಕ ನಡವಳಿಕೆ ಮತ್ತು ಭದ್ರತಾ ಸಿಬ್ಬಂದಿ ಮೇಲೆ ಉದ್ದೇಶಪೂರ್ವಕ ದಾಳಿ ಆರೋಪದ ಮೇಲೆ 12 ರಾಜ್ಯಸಭಾ ಸಂಸದರನ್ನು ಇಡೀ ಚಳಿಗಾಲದ ಅಧಿವೇಶನದವರೆಗೆ ಅಮಾನತುಗೊಳಿಸಲಾಗಿತ್ತು.
ಸೆಪ್ಟಂಬರ್ 21, 2020: ಹಿಂದಿನ ದಿನ, ಅಂದರೆ ಸೆಪ್ಟಂಬರ್ 20ರಂದು ಸದನದಲ್ಲಿನ ಅಶಿಸ್ತಿನ ವರ್ತನೆಗಾಗಿ ಎಂಟು ರಾಜ್ಯಸಭಾ ಸಂಸದರನ್ನು ಅಮಾನತುಗೊಳಿಸಲಾಗಿತ್ತು.
ಮಾರ್ಚ್ 5, 2020: ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ ಏಳು ಕಾಂಗ್ರೆಸ್ ಸದಸ್ಯರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು.
ಜನವರಿ 2019: ಟಿಡಿಪಿ ಮತ್ತು ಎಐಎಡಿಎಂಕೆಗೆ ಸೇರಿದ ಒಟ್ಟು 45 ಸಂಸದರನ್ನು, ದಿನವಿಡೀ ಕಲಾಪಕ್ಕೆ ನಿರಂತರ ಅಡ್ಡಿಪಡಿಸಿದ ನಂತರ ಅಮಾನತುಗೊಳಿಸಲಾಗಿತ್ತು.
ಆಗಸ್ಟ್ 2015: ನಿರಂತರವಾಗಿ, ಉದ್ದೇಶಪೂರ್ವಕವಾಗಿ ಕಲಾಪಕ್ಕೆ ಅಡ್ಡಿಪಡಿಸಿದ್ದ 25 ಕಾಂಗ್ರೆಸ್ ಸಂಸದರನ್ನು ಐದು ದಿನಗಳ ಕಾಲ ಅಮಾನತುಗೊಳಿಸಲಾಗಿತ್ತು.
ಫೆಬ್ರವರಿ 13, 2014: ತೆಲಂಗಾಣ ವಿಷಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಅವಿಭಜಿತ ಆಂಧ್ರಪ್ರದೇಶದ 18 ಸಂಸದರನ್ನು ಅಮಾನತುಗೊಳಿಸಲಾಗಿತ್ತು.
ಸೆಪ್ಟಂಬರ್ 2, 2014: ಒಂಭತ್ತು ಸದಸ್ಯರನ್ನು ಐದು ದಿನಗಳವರೆಗೆ ಅಮಾನತುಗೊಳಿಸಲಾಗಿತ್ತು.
ಆಗಸ್ಟ್ 23, 2013: 12 ಸದಸ್ಯರನ್ನು ಐದು ದಿನಗಳವರೆಗೆ ಅಮಾನತುಗೊಳಿಸಲಾಗಿತ್ತು.
ಎಪ್ರಿಲ್ 24, 2012: ಎಂಟು ಸದಸ್ಯರನ್ನು ನಾಲ್ಕು ದಿನಗಳವರೆಗೆ ಅಮಾನತುಗೊಳಿಸಲಾಗಿತ್ತು.