ಹಿಮಾಲಯದ ತಾರುಣ್ಯವೂ ಅಭಿವೃದ್ಧಿಯ ಹಪಾಹಪಿಯೂ
ನಿಸರ್ಗದೊಡನೆ ಒಡನಾಟವಿರಲಿ ಚೆಲ್ಲಾಟ ಬೇಕಿಲ್ಲ
Photo: PTI
ಭಾಗ- 3
ನಿಸರ್ಗದೊಡನೆ ಸೆಣಸಾಡುವ ಅಭಿವೃದ್ಧಿ ಮಾದರಿಯ ಪುನರಾವಲೋಕನ ವರ್ತಮಾನದ ಅಗತ್ಯತೆ
ಭಾರತದ ಸಾಂಪ್ರದಾಯಿಕ ಸಮಾಜಕ್ಕೆ ಹಾಗೂ ಹಿಂದೂ ಧಾರ್ಮಿಕ ನಂಬಿಗಸ್ಥರಿಗೆ ಹಿಮಾಲಯದ ಒಡಲಲ್ಲಿರುವ ಗಂಗೋತ್ರಿ, ಯಮುನೋತ್ರಿ, ಬದರಿನಾಥ ಹಾಗೂ ಕೇದಾರನಾಥ ಕ್ಷೇತ್ರಗಳಿಗೆ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡುವುದು ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಆಚರಣೆ. ಪವಿತ್ರ ಪುಣ್ಯ ಕ್ಷೇತ್ರಗಳೆಂದೇ ಪ್ರಸಿದ್ಧಿಯಾಗಿರುವ ಈ ನಾಲ್ಕು ಧಾರ್ಮಿಕ ಕೇಂದ್ರಗಳಿಗೆ ಪ್ರತಿವರ್ಷ ಕನಿಷ್ಠ 50 ಲಕ್ಷ ಜನರು ಭೇಟಿ ನೀಡುತ್ತಾರೆ. ಉತ್ತರಾಖಂಡ ಸರಕಾರ ಹಾಗೂ ಕೇಂದ್ರ ಸರಕಾರಗಳು ಈ ಯಾತ್ರಾರ್ಥಿಗಳಿಗೆ ಸೂಕ್ತ ಸೌಕರ್ಯಗಳನ್ನು ಹಾದಿಯುದ್ದಕ್ಕೂ ಒದಗಿಸುವ ಮೂಲಕ ತೀರ್ಥಯಾತ್ರೆಗೆ ಪೂರಕವಾದ ವಾತಾವರಣವನ್ನೂ ಸೃಷ್ಟಿಸುತ್ತವೆ. ಚಾರ್ ಧಾಮ್ (ನಾಲ್ಕು ಯಾತ್ರಾಸ್ಥಳಗಳು) ಎಂದೇ ಕರೆಯಲ್ಪಡುವ ಈ ಕ್ಷೇತ್ರಗಳಿಗೆ ಪ್ರಯಾಣಿಸುವ ಲಕ್ಷಾಂತರ ಭಕ್ತಾದಿಗಳಿಗೆ ಉತ್ತಮ ರಸ್ತೆ ಮಾರ್ಗವನ್ನು ನಿರ್ಮಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ 2016ರಲ್ಲಿ 889 ಕಿಲೋಮೀಟರ್ ರಸ್ತೆಯನ್ನು ಆಧುನಿಕ ಸೌಕರ್ಯಗಳನ್ನೊಳಗೊಂಡ ಹೆದ್ದಾರಿಯನ್ನಾಗಿ ಪರಿವರ್ತಿಸುವ ಮಹತ್ವಾಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದೆ.
ಈ ಹೆದ್ದಾರಿ ನಿರ್ಮಾಣದ ಹಂತದಲ್ಲಿ ಕೈಗೊಳ್ಳಲಾಗುವ ಪರ್ವತ ಶ್ರೇಣಿಯನ್ನು ಕೊರೆಯುವ ಕಾರ್ಯ ಹಾಗೂ ಇತರ ನಿರ್ಮಾಣ ಚಟುವಟಿಕೆಗಳು ಇಲ್ಲಿನ ಪರಿಸರ ಸೂಕ್ಷ್ಮ ಲ್ಯಾಂಡ್ಸ್ಕೇಪ್ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು ಎಂದು ಪರಿಸರವಾದಿಗಳು, ಭೂ ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದರೂ, 1.5 ಬಿಲಿಯನ್ ಡಾಲರ್ ವೆಚ್ಚದ ಹೆದ್ದಾರಿ ಕಾಮಗಾರಿ ಚಾಲ್ತಿಯಲ್ಲಿದೆ. ಈ ಕಾಮಗಾರಿಯ ನಡುವೆಯೇ ಇತ್ತೀಚಿನ ಸಿಲ್ಕ್ಯಾರಾ ಸುರಂಗ ಕುಸಿತದ ದುರಂತವೂ ಸಂಭವಿಸಿದ್ದು, 41 ಕಾರ್ಮಿಕರು ಜೀವಾಪಾಯದಿಂದ ಪಾರಾಗಿದ್ದಾರೆ. ಸಾಂಪ್ರದಾಯಿಕ ವೃತ್ತಿಯಾದ ಖಚಿಣ hoಟe miಟಿeಡಿs ಮೂಲಕ ನಡೆಸಲಾದ ಕಾರ್ಯಾಚರಣೆಯಲ್ಲಿ 12 ಕಾರ್ಮಿಕರು 41 ಕಾರ್ಮಿಕರ ಜೀವರಕ್ಷಣೆ ಮಾಡಿರುವುದು ದೇಶಾದ್ಯಂತ ಪ್ರಶಂಸೆಗೊಳಗಾಗಿರುವುದು ಸಹಜವೇ ಆಗಿದೆ.
ಆದರೆ ಈ ಸಂಭ್ರಮಾಚರಣೆಗಳ ನಡುವೆ ಭೂ ವಿಜ್ಞಾನಿಗಳು-ಪರಿಸರ ತಜ್ಞರು ತರುಣ ಲ್ಯಾಂಡ್ಸ್ಕೇಪ್ ಎಂದೇ ಪರಿಗಣಿಸುವ ಹಿಮಾಲಯದ ಮಾರ್ಗಗಳು ದುರ್ಬಲವಾಗುತ್ತಿರು ವುದರ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವುದನ್ನೂ ಗಮನಿಸಬೇಕಿದೆ. ಪದೇ ಪದೇ ಸಂಭವಿಸುತ್ತಿರುವ ಭೂಕುಸಿತಗಳು ಹಿಮಾಲಯದ ಪರಿಸರ ಸೂಕ್ಷ್ಮತೆಯ ಸಂಕೇತವಾಗಿದ್ದು, ಮಾನವ ಸಮಾಜದ ವಸತಿ, ಮನರಂಜನೆ, ಪ್ರವಾಸೋದ್ಯಮ ಹಾಗೂ ಪ್ರಯಾಣ ಮಾರ್ಗಗಳ ನಿರ್ಮಾಣದಿಂದ ಈ ಭೂ ಪ್ರದೇಶವು ಮತ್ತಷ್ಟು ದುರ್ಬಲವಾಗುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಲೇ ಇದ್ದಾರೆ. ಚಾರ್ಧಾಮ್ ಯಾತ್ರಾ ಮಾರ್ಗದ ನಾಲ್ಕು ಪ್ರಮುಖ ತಾಣಗಳನ್ನು ಸಂಪರ್ಕಿಸಲು ನಿರ್ಮಿಸಲಾಗುತ್ತಿರುವ ಹೆದ್ದಾರಿ ನಿರ್ಮಾಣಕ್ಕೆ 2016ರಲ್ಲಿ ಚಾಲನೆ ನೀಡಲಾಗಿತ್ತು.
ಚಾರ್ಧಾಮ್ ಯಾತ್ರೆ ಮತ್ತು ಹಾದಿ
ಯಾತ್ರಾಸ್ಥಳಗಳನ್ನು ತಲುಪುವ ಹಾದಿಯನ್ನು ಸುಗಮಗೊಳಿಸು ವುದು, ಪ್ರಯಾಣದ ಸಮಯವನ್ನು ಕಡಿಮೆ ಮಾಡುವುದು ಹಾಗೂ ಲಕ್ಷಾಂತರ ಯಾತ್ರಾರ್ಥಿಗಳಿಗೆ ಮಾರ್ಗದುದ್ದಕ್ಕೂ ಅಗತ್ಯವಾದ ಮೂಲ ಸೌಕರ್ಯಗಳನ್ನು ಒದಗಿಸುವುದು ಹೆದ್ದಾರಿ ಯೋಜನೆಯ ಉದ್ದೇಶವಾಗಿದೆ. 2013ರಲ್ಲಿ ಕೇದಾರನಾಥದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಆರು ಸಾವಿರಕ್ಕೂ ಹೆಚ್ಚು ಜನರು ಮೃತಪಟ್ಟ ನಂತರ ಪರಿಸರ ವಿಜ್ಞಾನಿಗಳು ಹಿಮಾಲಯ ತಪ್ಪಲಿನ ಲ್ಯಾಂಡ್ಸ್ಕೇಪ್ಗಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವಂತೆ ಸರಕಾರಗಳನ್ನು ಆಗ್ರಹಿಸುತ್ತಲೇ ಇದ್ದಾರೆ. ಈ ಒತ್ತಾಯಗಳ ನಡುವೆಯೂ ಚಾರ್ಧಾಮ್ ಹೆದ್ದಾರಿ ಯೋಜನೆ ಜಾರಿಯಲ್ಲಿರುವುದು ನಮ್ಮ ಅಭಿವೃದ್ಧಿಯ ಆದ್ಯತೆಗಳು ಹಾಗೂ ಪರಿಸರ ಕಾಳಜಿಯ ನಡುವೆ ಇರುವ ಅಪಾರ ಅಂತರವನ್ನು ಸೂಚಿಸುತ್ತದೆ.
ಈ ಯೋಜನೆಗೆ ಚಾಲ್ತಿ ನೀಡಿದ ನಂತರ 2018ರಲ್ಲಿ ಉತ್ತರಕಾಶಿ ಮತ್ತು ಸುತ್ತಲಿನ ಪ್ರದೇಶದ ನಾಗರಿಕ ಸಂಘಟನೆಗಳು, ಪರಿಸರವಾದಿಗಳು ರಾಷ್ಟ್ರೀಯ ಹಸಿರು ನ್ಯಾಯ ಮಂಡಲಿಗೆ ಮೇಲ್ಮನವಿ ಸಲ್ಲಿಸಿ, ಹೆದ್ದಾರಿ ಯೋಜನೆಗೆ ಚಾಲನೆ ನೀಡುವ ಮುನ್ನ ಪರಿಸರ ಪರಿಣಾಮದ ಮೌಲ್ಯಮಾಪನವನ್ನು ಮಾಡಬೇಕೆಂದೂ, ಈ ಮೌಲ್ಯಮಾಪನದಿಂದ ಹೊರಬರುವ ವಿಪತ್ತಿನ ಅಪಾಯಗಳನ್ನು ಮನವರಿಕೆ ಮಾಡಿಕೊಂಡು, ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆಯೂ ವಿನಂತಿಸಿದ್ದರು. ಈ ಹೆದ್ದಾರಿ ನಿರ್ಮಾಣಕ್ಕಾಗಿ ಸಾವಿರಾರು ಮರಗಳ ಹನನವಾಗುವುದರ ಬಗ್ಗೆಯೂ ಆತಂಕ ವ್ಯಕ್ತಪಡಿಸಲಾಗಿತ್ತು. ಆದರೆ ಈ ವಿಚಾರವು ತನ್ನ ಅಧಿಕಾರವ್ಯಾಪ್ತಿಗೆ ಮೀರಿರುವುದಾಗಿ ಹಸಿರು ನ್ಯಾಯಮಂಡಲಿ ತೀರ್ಪು ನೀಡಿತ್ತು.
ಪರಿಸರ ಪರಿಣಾಮ ಮೌಲ್ಯಮಾಪನ ಮಾಡುವ ಸಲುವಾಗಿ ಈ ಯೋಜನೆಯನ್ನು ತಲಾ 100 ಕಿ.ಮೀ. ವ್ಯಾಪ್ತಿಯ 53 ವಿಭಾಗಗಳಾಗಿ ವಿಂಗಡಿಸಿತ್ತು. ಪರಿಸರ ತಜ್ಞರು ಮತ್ತು ಪರಿಸರವಾದಿಗಳು ಪ್ರವಾಹ ಮತ್ತು ಭೂಕುಸಿತದಂತಹ ಸಂಭಾವ್ಯ ಪರಿಸರ ವಿಪತ್ತುಗಳ ಬಗ್ಗೆ ಆತಂಕ ವ್ಯಕ್ತಪಡಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಮೂಲಸೌಕರ್ಯ ಯೋಜನೆಗಳ ಅನುಷ್ಠಾನದಿಂದ ಉಂಟಾಗುವ ಪರಿಸರ ವ್ಯವಸ್ಥೆಗಳು ನಾಶವಾಗುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಲಾಗಿತ್ತು. 2019ರಲ್ಲಿ ಸುಪ್ರೀಂಕೋರ್ಟ್, ಚಾರ್ಧಾಮ್ ಹೆದ್ದಾರಿ ಯೋಜನೆಯಿಂದ ಹಿಮಾಲಯದ ಲ್ಯಾಂಡ್ಸ್ಕೇಪ್ ಮೇಲೆ ಉಂಟಾಗಬಹುದಾದ ಪರಿಣಾಮ ಗಳನ್ನು ಪರಿಶೀಲಿಸಲು ಒಂದು ತಜ್ಞರ ಸಮಿತಿಯನ್ನು ರಚಿಸುವಂತೆ ಕೇಂದ್ರ ಸರಕಾರಕ್ಕೆ ಆದೇಶ ನೀಡಿತ್ತು.
ಯಾವುದೇ ರೀತಿಯ ಅವೈಜ್ಞಾನಿಕ ಹಾಗೂ ಯೋಜಿತವಲ್ಲದ ಕಾರ್ಯಯೋಜನೆಗಳಿಂದ ಹಿಮಾಲಯದ ಪರಿಸರ ವ್ಯವಸ್ಥೆ ಹಾನಿಯಾಗುತ್ತದೆ ಎಂದು ಸಮಿತಿ ತೀರ್ಪು ನೀಡಿತ್ತು. ಆದರೆ ಸಮಿತಿಯ ಸದಸ್ಯರಾಗಿದ್ದ ಸರಕಾರಿ ಅಧಿಕಾರಿಗಳು ರಸ್ತೆ ಅಗಲೀಕರಣ ಯೋಜನೆಯನ್ನು ಅನುಮೋದಿಸಿದ್ದರು. ಪರಿಸರ ಹಾನಿಯನ್ನು ಕಡಿಮೆ ಮಾಡುವ ಸಲುವಾಗಿ ಗುಡ್ಡಗಾಡು ಪ್ರದೇಶಗಳಲ್ಲಿರುವ ರಸ್ತೆಗಳನ್ನು ಕಿರಿದಾಗಿಸಲು ಯೋಚಿಸಿದ್ದರೂ ಈ ನಿಯಮಗಳನ್ನೂ ಉಲ್ಲಂಘಿಸಲಾಗಿದೆ ಎಂದು ತಜ್ಞರ ಸಮಿತಿಯ ಅಧ್ಯಕ್ಷರಾಗಿದ್ದ ರವಿ ಚೋಪ್ರಾ ಆರೋಪಿಸುತ್ತಾರೆ. ಡಿಸೆಂಬರ್ 2021ರಲ್ಲಿ ಸರಕಾರದ ಶಿಫಾರಸುಗಳಿಗೆ ಮಾನ್ಯತೆ ನೀಡಿ ಸುಪ್ರೀಂ ಕೋರ್ಟ್ ಅಗಲ ರಸ್ತೆಗಳ ನಿರ್ಮಾಣಕ್ಕೆ ಅವಕಾಶ ನೀಡಿದ ನಂತರ ರವಿ ಚೋಪ್ರಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.
ಹಿಮಾಲಯದ ಪರಿಸರ ಸೂಕ್ಷ್ಮತೆ
ಭೌಗೋಳಿಕವಾಗಿ 40-50 ದಶಲಕ್ಷ ವರ್ಷಗಳ ಹಿಂದೆ ರೂಪುಗೊಂಡ ಹಿಮಾಲಯ ಪರ್ವತ ವಲಯವು ತುಲನಾತ್ಮಕವಾಗಿ ತರುಣಾವಸ್ಥೆಯಲ್ಲಿದ್ದು ಭಾರತ ಮತ್ತು ಯುರೇಷಿಯನ್ ಟೆಕ್ಟೋನಿಕ್ ಭೂಫಲಕಗಳ ನಡುವೆ ನಡೆಯು ತ್ತಿರುವ ನಿರಂತರ ಘರ್ಷಣೆಯಿಂದಾಗಿ ಬೆಳೆಯುತ್ತಲೇ ಇದೆ ಎಂದು ಭೂ ವಿಜ್ಞಾನಿಗಳು ಹೇಳುತ್ತಾರೆ. ಇಲ್ಲಿ ಕೆಲವು ಪ್ರದೇಶಗಳು ಸುರಂಗ ಮಾರ್ಗಗಳಿಗೆ ಸೂಕ್ತವಲ್ಲದ ದುರ್ಬಲ ಶಿಲಾ ರಚನೆಗಳನ್ನು ಹೊಂದಿದ್ದರೆ ಇನ್ನು ಕೆಲವು ಲ್ಯಾಂಡ್ಸ್ಕೇಪ್ಗಳು ದೃಢವಾದ ಭೌಗೋಳಿಕ ರಚನೆಗಳನ್ನು ಹೊಂದಿವೆ. ಮುರಿದ ಅಥವಾ ಸೂಕ್ಷ್ಮವಾಗಿರುವ ಬಂಡೆಗಳ ರಚನೆಯನ್ನು ಹೊಂದಿರುವ ಲ್ಯಾಂಡ್ಸ್ಕೇಪ್ಗಳಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಈ ಮಾರ್ಗದಲ್ಲಿ ಸುರಂಗ ನಿರ್ಮಿಸುವ ಮುನ್ನ ಪರಿಸರಕ್ಕೆ, ಪರ್ವತ ವಲಯಕ್ಕೆ ಆಂತರಿಕವಾಗಿ ಯಾವುದೇ ಹಾನಿಯಾಗುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವುದು ಅನಿವಾರ್ಯ ಎನ್ನುತ್ತಾರೆ ಭೂ ವಿಜ್ಞಾನಿಗಳು.
Wadia Institute of Himalayan Geology 2021ರಲ್ಲಿ ಕೈಗೊಂಡ ಒಂದು ಸಂಶೋಧನೆಯ ಪ್ರಕಾರ ಉತ್ತರಕಾಶಿಯನ್ನೂ ಸೇರಿದಂತೆ ಶೇ. 51 ಭೂ ಪ್ರದೇಶವನ್ನು ಆವರಿಸುವ ಉತ್ತರಾಖಂಡದ ಅರ್ಧಕ್ಕಿಂತಲೂ ಹೆಚ್ಚು ಭಾಗವನ್ನು ‘ಅತಿ ಹೆಚ್ಚು ಸಂಭಾವ್ಯ ಭೂಕುಸಿತ ಪೀಡಿತ ವಲಯಗಳು’ ಎಂದು ಗುರುತಿಸಲಾಗಿದೆ. ಈ ಮಾಹಿತಿಗಳನ್ನು ‘Journal of Earth Systems’ ಎಂಬ ಪತ್ರಿಕೆಯಲ್ಲಿ ದಾಖಲಿಸಲಾಗಿದೆ. ಎಷ್ಟೇ ವ್ಯಾಪಕವಾದ ಭೂಕಂಪನ ಹಾಗೂ ಜಿಯೋಟೆಕ್ನಿಕಲ್ ಮೌಲ್ಯಮಾಪನ ಕೈಗೊಂಡಿದ್ದರೂ ನಿರ್ಮಾಣದ ಸಮಯದಲ್ಲಿ ನೀರು ಸೋರುವಿಕೆಯಿಂದ ಸುರಂಗಗಳ ಕುಸಿತ ಸಂಭವಿಸುವ ಸಾಧ್ಯತೆಗಳಿರುತ್ತವೆ ಎಂದು ಭೂ ವಿಜ್ಞಾನ ತಜ್ಞರು ಹೇಳುತ್ತಾರೆ. ಹಿಮಾಲಯ ಭೂ ಪ್ರದೇಶದಲ್ಲಿ ಸುರಂಗ ನಿರ್ಮಾಣ ಮಾಡುವಾಗ ದುರ್ಬಲ ಬಂಡೆಯ ದ್ರವ್ಯರಾಶಿ ಕುಸಿಯುವುದು ಸಾಮಾನ್ಯವಾಗಿದ್ದು ಎರಡು ಬಂಡೆಗಳು ಚಲನೆ ಪಡೆದಾಗ ಶಿಯರ್ ವಲಯವು (ಭೂವಿಜ್ಞಾನದಲ್ಲಿ ಶಿಯರ್ ವಲಯವು ಭೂಮಿಯ ಹೊರಪದರ ಅಥವಾ ಮೇಲ್ಭಾಗದ ಕವಚದೊಳಗಿನ ತೆಳುವಾದ ವಲಯವಾಗಿರುತ್ತದೆ) ಸೃಷ್ಟಿಯಾಗುತ್ತದೆ, ಕೆಲವೊಮ್ಮೆ ಪುಡಿಯಾಗಿ ನಂತರದ ಬದಲಾದ ಸ್ಥಿತಿಯಲ್ಲಿ ಭಿನ್ನವಾಗಿ ವರ್ತಿಸಲಾರಂಭಿಸುತ್ತವೆ. ಕೆಲವು ಜೇಡಿ ಮಣ್ಣಿನ ಅಂಶವನ್ನು ಪಡೆದುಕೊಂಡು ಕಾಲಾನಂತರದಲ್ಲಿ ಶಿಥಿಲವಾಗತೊಡಗುತ್ತವೆ.
ಈ ಅಪಾಯಗಳ ಹಿನ್ನೆಲೆಯಲ್ಲಿ ನೋಡಿದಾಗ ಚಾರ್ ಧಾಮ್ ಹಾದಿಯಲ್ಲಿ ಪರಿಸರ ಸೂಕ್ಷ್ಮತೆಗಳನ್ನು ಕಡೆಗಣಿಸಿ ವಸತಿ ಸೌಕರ್ಯಗಳನ್ನು, ಟೌನ್ಷಿಪ್ಗಳನ್ನು, ರಸ್ತೆಗಳನ್ನು ನಿರ್ಮಿಸುವುದು ಈ ಭೂ ಪ್ರದೇಶದಲ್ಲಿ ಹೆಚ್ಚಿನ ಅಪಾಯಗಳನ್ನು ಒಡ್ಡುತ್ತವೆ ಎಂದು ಭೂ ವಿಜ್ಞಾನಿಗಳಾದ ನರೇಶ್ ಪಂತ್, ಎಚ್.ಎಸ್. ಸೈನಿ ಮುಂತಾದವರು ಅಭಿಪ್ರಾಯಪಡುತ್ತಾರೆ. ಅತಿಯಾದ ಪ್ರವಾಸೋದ್ಯಮದ ಮಾರುಕಟ್ಟೆ ಶಕ್ತಿಗಳು ಅನುಸರಿಸಬೇಕಾದ ಸುರಕ್ಷತಾ ಮಾನದಂಡಗಳನ್ನು ಹಿಂದಿಕ್ಕಿ ಮೇಲುಗೈ ಸಾಧಿಸಿವೆ ಎಂದು ವಿಷಾದ ವ್ಯಕ್ತಪಡಿಸುವ ಭೂ ವಿಜ್ಞಾನಿಗಳು 2022ರ ಸೆಪ್ಟಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ಹೃಷಿಕೇಶ-ಬದರಿನಾಥ-ಜೋಷಿಮಠದ 250 ಕಿ.ಮೀ. ಹೆದ್ದಾರಿಯಲ್ಲಿ 309 ಭೂಕುಸಿತಗಳು ಸಂಭವಿಸಿವೆ ಎಂದು ಹೇಳುತ್ತಾರೆ. ಐಐಟಿ ರೂರ್ಕಿ ಹಾಗೂ ಜರ್ಮನಿಯ ಪಾಟ್ಸ್ಡಾಮ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ತಮ್ಮ ಸಂಶೋಧನೆಯೊಂದರಲ್ಲಿ ಇದನ್ನು ಉಲ್ಲೇಖಿಸಿ ಆತಂಕ ವ್ಯಕ್ತಪಡಿಸಿದ್ದಾರೆ. ಹಿಮಾಲಯದ ಭೂ ಪ್ರದೇಶದಲ್ಲಿ ಹೆದ್ದಾರಿ ರಸ್ತೆ ಅಥವಾ ಇತರ ಯೋಜನೆಗಳನ್ನು ಸಂಪೂರ್ಣವಾಗಿ ನಿರಾಕರಿಸುವ ಅಗತ್ಯ ಇಲ್ಲವಾದರೂ, ಈ ನಿರ್ಮಾಣಗಳ ಮುನ್ನ ಭೌಗೋಳಿಕ ಅಂಶಗಳು ಹಾಗೂ ಹಿಮಾಲಯದ ಲ್ಯಾಂಡ್ಸ್ಕೇಪ್ನ ಪರಿಸರ ಸೂಕ್ಷ್ಮತೆಯನ್ನು ಗಮನಿಸಿ, ಸೂಕ್ತ ನಿರ್ಬಂಧಗಳನ್ನು ಅನುಸರಿಸುವ ಮೂಲಕ ಅಪಾಯವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದು ದಿಲ್ಲಿ ವಿಶ್ವವಿದ್ಯಾ ನಿಲಯದ ಭೂ ವಿಜ್ಞಾನಿಗಳು ಹೇಳುತ್ತಾರೆ.
ಭವಿಷ್ಯದ ಅಪಾಯದ ಸೂಚನೆಗಳು
ಪರಿಸರದ ಸವಾಲುಗಳನ್ನೆದುರಿಸುವ ಲ್ಯಾಂಡ್ಸ್ಕೇಪ್ಗಳಲ್ಲಿ ಬೃಹತ್ ಯೋಜನೆಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದರೂ, ಇದರಿಂದ ಭವಿಷ್ಯದಲ್ಲಿ ಉಂಟಾಗಬಹುದಾದ ಅಪಾಯಗಳನ್ನು ಮನಗಂಡು ಹೊಸ ಯೋಜನೆಗಳನ್ನು ಜಾರಿಗೊಳಿಸಬೇಕಾಗುತ್ತದೆ ಎಂದು ವಿಜ್ಞಾನಿಗಳು ಒತ್ತಿ ಹೇಳುತ್ತಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ನಿರ್ಮಾಣ ಕಾಮಗಾರಿಗಳು ದೂರದೃಷ್ಟಿಯಿಲ್ಲದೆಯೇ ಕೈಗೊಳ್ಳಲಾಗುವುದರಿಂದ ಸಮಸ್ಯೆಗಳು ಉದ್ಭವಿಸುತ್ತವೆ. ಸಂಭಾವ್ಯ ಪ್ರವಾಹ ಪೀಡಿತ ಪ್ರದೇಶಗಳಲ್ಲಿ, ದುರ್ಬಲವಾಗಿರುವ ಪರ್ವತ ಇಳಿಜಾರು ಪ್ರದೇಶಗಳಲ್ಲಿ ಶಿಥಿಲವಾಗಿರುವ ಬಂಡೆಗಳನ್ನು ಅಲಕ್ಷಿಸಿ ಜನವಸತಿ ಮತ್ತು ರಸ್ತೆಗಳನ್ನು ನಿರ್ಮಿಸುವುದರಿಂದ ಭೂಕುಸಿತ ಉಂಟಾಗುವ ಸಂಭವ ಹೆಚ್ಚಾಗಿರುತ್ತದೆ ಎಂದು ವಿಜ್ಞಾನಿಗಳು ಎಚ್ಚರಿಸುತ್ತಾರೆ. ಚಾರ್ಧಾಮ್ ಯೋಜನೆಯು ಪ್ರವಾಸೋದ್ಯಮ ಮತ್ತು ಸಾಮಾನ್ಯ ಜನರ ತೀರ್ಥಯಾತ್ರೆಯ ದೃಷ್ಟಿಯಿಂದ ಮಹತ್ವಾಕಾಂಕ್ಷಿ ಯೋಜನೆಯೇ ಆದರೂ, ನಿಸರ್ಗ ಮತ್ತು ವಿಜ್ಞಾನದ ಸೂಕ್ಷ್ಮತೆಗಳನ್ನು ನಿರ್ಲಕ್ಷಿಸುವುದು ಅಪಾಯಕರ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ.
ಪರಿಸರ ತಂತ್ರಜ್ಞರೂ ಮತ್ತು ಹವಾಮಾನ ಬದಲಾವಣೆ ಸಂಶೋಧಕರೂ ಆಗಿರುವ ಆಯುಷ್ ಜೋಷಿ ಹೇಳುವಂತೆ ಉತ್ತರಾಖಂಡವು ಈಗಾಗಲೇ 70 ಜಲವಿದ್ಯುತ್ ಯೋಜನೆಗಳಿಗೆ ತಯಾರಿ ನಡೆಸುತ್ತಿದೆ. ಕೆಲವು ನಿರ್ಮಾಣ ಹಂತದಲ್ಲಿದ್ದು ಇನ್ನು ಕೆಲವು ಪ್ರಸ್ತಾಪಿಸಲ್ಪಟ್ಟಿವೆ. ನೀರಿನ ಬುಗ್ಗೆಗಳು ಒಣಗಲು ಮತ್ತು ಮುಳುಗುತ್ತಿರುವ ಪ್ರದೇಶಗಳ ಹೆಚ್ಚಳಕ್ಕೆ ಈ ಯೋಜನೆಗಳೂ ಒಂದು ಕಾರಣ ಎಂದು ನೀತಿ ಆಯೋಗದ 2018ರ ವರದಿ ಹೇಳುತ್ತದೆ. ಉತ್ತರಾಖಂಡದ 484 ಗ್ರಾಮಗಳು ವಿಪತ್ತು ಎದುರಿಸುತ್ತಿದ್ದು, 450 ಗ್ರಾಮಗಳನ್ನು ಸ್ಥಳಾಂತರಿಸಬೇಕಿದೆ. ಈ ಯೋಜನೆಗಳು ಶತಮಾನಗಳಿಂದ ತಮ್ಮ ಬದುಕುಕಟ್ಟಿಕೊಂಡಿರುವ ಸಮುದಾಯಗಳನ್ನು ಅವರ ಅರಣ್ಯ, ಭೂಮಿ ಮತ್ತು ದೈವಗಳಿಂದ ದೂರ ತಳ್ಳುತ್ತವೆ ಎನ್ನುತ್ತಾರೆ ಆಯುಷ್ ಜೋಷಿ(ದ ವೀಕ್ ಪತ್ರಿಕೆ 1-2-2023).
ಕಳೆದ 20 ವರ್ಷಗಳಲ್ಲಿ ಉತ್ತರಾಖಂಡವು ರಸ್ತೆ ನಿರ್ಮಾಣ ಹಾಗೂ ಗಣಿಗಾರಿಕೆಯ ಪರಿಣಾಮ 50 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಕಳೆದುಕೊಂಡಿದೆ ಎಂದು ವಿಷಾದ ವ್ಯಕ್ತಪಡಿಸುವ ಆಯುಷ್ ಜೋಷಿ, ಈ ಪ್ರದೇಶದಲ್ಲಿ 60 ಸಾವಿರ ಕಿಲೋಮೀಟರ್ ರಸ್ತೆ ಜಾಲಗಳನ್ನು ನಿರ್ಮಿಸಿರುವುದನ್ನು ಗುರುತಿಸುತ್ತಾರೆ. ಈ ನಿರ್ಮಾಣದ ಹಾದಿಯಲ್ಲೇ ಮರಗಳ ಹನನ ಅವ್ಯಾಹತವಾಗಿ ನಡೆಯುತ್ತದೆ. ರಾಜ್ಯದ ಶೇ. 51ರಷ್ಟು ಭೂಪ್ರದೇಶವು ಹೆಚ್ಚಿನ ಭೂಕುಸಿತಕ್ಕೆ ಒಳಗಾಗಲು ಇದೂ ಒಂದು ಕಾರಣ ಎಂದು ಹೇಳುವ ಜೋಷಿ, ನಮ್ಮಲ್ಲಿರುವ ಅಪಾರ ಇಂಜಿನಿಯರಿಂಗ್ ಪರಿಣತಿ ಮತ್ತು ವೈಜ್ಞಾನಿಕ ಜ್ಞಾನವನ್ನು ಬಳಸಿಕೊಂಡು ಪರಿಸರವನ್ನು ರಕ್ಷಿಸುವತ್ತ ಯೋಚಿಸಬೇಕಿದೆ ಎಂದು ಹೇಳುತ್ತಾರೆ. ಈಗಾಗಲೇ ಹವಾಮಾನ ಬದಲಾವಣೆ, ಜಾಗತಿಕ ತಾಪಮಾನ ಹೆಚ್ಚಳ ಮತ್ತು ನೈಸರ್ಗಿಕ ವಿಪತ್ತುಗಳಿಂದ ಪ್ರತಿವರ್ಷ ಸರಾಸರಿ 200 ಜೀವಗಳನ್ನು ಕಳೆದುಕೊಳ್ಳುತ್ತಿರುವುದು ನಮ್ಮನ್ನು ಮತ್ತಷ್ಟು ಜಾಗೃತಗೊಳಿಸಬೇಕಿದೆ ಎಂದು ಆಯುಷ್ ಜೋಷಿ ಎಚ್ಚರಿಕೆಯ ಮಾತುಗಳನ್ನಾಡುತ್ತಾರೆ(ದ ವೀಕ್ 1-12-2023). ಆಧುನಿಕ ನಾಗರಿಕ ಜಗತ್ತು ತನ್ನ ಅಭ್ಯುದಯದ ಹಾದಿಯಲ್ಲಿ, ಅಭಿವೃದ್ಧಿಯನ್ನು ಸಾಧಿಸುತ್ತಾ ಜನಜೀವನವನ್ನು ಸುಗಮಗೊಳಿಸುವ ಹಾದಿಯಲ್ಲಿ, ನಿಸರ್ಗದೊಡನೆ ನಿರಂತರ ಸಂಘರ್ಷ ಮಾಡುತ್ತಲೇ ಬಂದಿದೆ. ಜಾಗತಿಕ ತಾಪಮಾನದ ಹೆಚ್ಚಳವೂ ನಮ್ಮನ್ನು ಬಾಧಿಸುತ್ತಿಲ್ಲ ಅಥವಾ ಪರಿಸರ ಮಾಲಿನ್ಯ ಉಂಟಾಗುವ ಅಪಾಯಗಳನ್ನೂ ನಾವು ಲೆಕ್ಕಿಸುತ್ತಿಲ್ಲ. ವರ್ತಮಾನದ ಸುಖ ವೈಭೋಗಗಳನ್ನು ಪಡೆಯಲಿಚ್ಛಿಸುವ ಮಾನವ ಸಮಾಜವು, ತನ್ನ ಜೀವಿತಾವಧಿಯಿಂದಾಚೆಗೂ ಈ ಜಗತ್ತು ಉಸಿರಾಡುತ್ತಿರುತ್ತದೆ, ಇನ್ನೂ ಹಲವು ಸಹಸ್ರಮಾನಗಳವರೆಗೆ ಮಾನವ ಸಮಾಜ ಇಲ್ಲಿ ಉಸಿರಾಡಬೇಕು ಎಂಬ ಪ್ರಜ್ಞಾವಂತಿಕೆಯಿಂದ ತನ್ನ ಅಭಿವೃದ್ಧಿ ಪಥವನ್ನು ರೂಪಿಸುವುದು ಇವತ್ತಿನ ಅನಿವಾರ್ಯತೆಯಾಗಿದೆ. ಆದರೆ ಬಂಡವಾಳಶಾಹಿ ಆರ್ಥಿಕತೆ ನಿರೂಪಿಸುವ ಆಧುನಿಕತೆ ಈ ಪ್ರಜ್ಞಾವಂತಿಕೆಯನ್ನು ಇಲ್ಲವಾಗಿಸಲು ತನ್ನದೇ ಆದ ಮಾರುಕಟ್ಟೆ ತಂತ್ರಗಳನ್ನೂ ಬಳಸುತ್ತಿರುತ್ತದೆ.
ನಿಸರ್ಗವನ್ನೂ ಒಳಗೊಂಡಂತೆ ಮಾನವ ಸಮಾಜಕ್ಕೆ ಲಭ್ಯವಾಗುವ ಪ್ರತಿಯೊಂದನ್ನೂ ಸರಕೀಕರಣಕ್ಕೊಳಪಡಿಸುವ (Commodification) ಮೂಲಕ ಬಂಡವಾಳಶಾಹಿಯು ಜನಸಾಮಾನ್ಯರ ಶ್ರದ್ಧಾನಂಬಿಕೆಗಳನ್ನು, ಧಾರ್ಮಿಕ ಆಚರಣೆಗಳನ್ನು ಮತ್ತು ಇದಕ್ಕೆ ಪೂರಕವಾಗುವ ಭೂ ಪ್ರದೇಶಗಳನ್ನು ಸಹ ಮಾರುಕಟ್ಟೆ ಸರಕುಗಳಂತೆಯೇ ಪರಿಗಣಿಸುತ್ತದೆ, ಹಾಗೆಯೇ ಬಳಸಿಕೊಳ್ಳುತ್ತದೆ. ಹಾಗಾಗಿಯೇ ನವ ಉದಾರವಾದದ ಬಂಡವಾಳಶಾಹಿ ಆರ್ಥಿಕತೆಯಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಮಾನವನ ಐಷಾರಾಮಿ ಬದುಕು ಹಾಗೂ ಹಿತಕರ ಹಾದಿಯ ಕಚ್ಚಾವಸ್ತುಗಳಂತೆಯೇ ಭಾವಿಸಲಾಗುತ್ತದೆ. ಈ ಪ್ರವೃತ್ತಿಯ ವಿರುದ್ಧ ಪರಿಸರ ತಜ್ಞರು, ಕಾರ್ಯಕರ್ತರು, ಭೂ ವಿಜ್ಞಾನಿಗಳು ಹಾಗೂ ಇಡೀ ವಿಜ್ಞಾನ ಸಮುದಾಯ ನಿರಂತರವಾಗಿ ದನಿ ಎತ್ತುತ್ತಲೇ ಇದ್ದಾರೆ. ಈ ದನಿಗೆ ಕಿವಿಗೊಡಲು ನಾಗರಿಕ ಜಗತ್ತು ಎಚ್ಚೆತ್ತುಕೊಳ್ಳಬೇಕಿದೆ.
(ಈ ಲೇಖನದ ಮಾಹಿತಿ-ದತ್ತಾಂಶಗಳಿಗೆ ಆಧಾರ ಟೆಲಿಗ್ರಾಫ್ ಪತ್ರಿಕೆಯ ವರದಿಗಳು)