ಅಂಗನವಾಡಿಗಳ ಗೋಳು ಕೇಳುವವರಿಲ್ಲ
► ಕಟ್ಟಡ ಬಾಡಿಗೆ, ವಿದ್ಯುತ್ ಬಿಲ್ ಪಾವತಿಯಾಗಿಲ್ಲ! ► ಮೊಟ್ಟೆ ಪೂರೈಕೆಯಲ್ಲೂ ಬಗೆಹರಿಯದ ಗೊಂದಲ
ಮಂಗಳೂರು: ಪ್ರಾಥಮಿಕ ಪೂರ್ವ ಶಿಕ್ಷಣ, ಪೋಷಣೆಯ ಮೂಲಕ ಎಳೆಯ ಮಕ್ಕಳ ಆರೈಕೆ ಮಾಡುವ, ಗರ್ಭಿಣಿಯರ ಪೌಷ್ಟಿಕತೆಗೆ ಒತ್ತು ನೀಡುವಲ್ಲಿ ಕಾರ್ಯ ನಿರ್ವಹಿಸುವ ರಾಜ್ಯದ ಅಂಗನವಾಡಿಗಳ ಗೋಳು ಮಾತ್ರ ಕೇಳುವವರಿಲ್ಲದಂತಾಗಿದೆ. ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂಗನವಾಡಿಗಳು ಅನುದಾನದ ಹಣ ಬಾರದೆ ಬಾಡಿಗೆ ಪಾವತಿಸದೆ ಸಮಸ್ಯೆ ಎದುರಿಸುತ್ತಿದ್ದರೆ, ಕಳೆದ ಸುಮಾರು ಒಂದು ವರ್ಷದಿಂದೀಚೆಗೆ ವಿದ್ಯುತ್ ಬಿಲ್ ಪಾವತಿಗೂ ಪರದಾಟ ಮುಂದುವರಿದಿದೆ. ಈ ನಡುವೆ ಅಂಗನವಾಡಿಗಳಲ್ಲಿ ಮಕ್ಕಳಿಗೆ ಹಾಗೂ ಗರ್ಭಿಣಿಯರಿಗೆ ಮೊಟ್ಟೆ ಪೂರೈಕೆಯೂ ಅಯೋಮಯವಾಗಿದೆ.
ರಾಜ್ಯ ಸರಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಅಧಿಕೃತ ಜಾಲತಾಣದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ 63,030 ಅಂಗನವಾಡಿ ಹಾಗೂ 3,331 ಮಿನಿ ಅಂಗನವಾಡಿ ಕೇಂದ್ರಗಳ ಪೈಕಿ 4,1508 ಅಂಗನವಾಡಿ ಕೇಂದ್ರಗಳು ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿವೆ. 1,527 ಅಂಗನವಾಡಿ ಕೇಂದ್ರಗಳು ಪಂಚಾಯತ್ ಕಟ್ಟಡಗಳಲ್ಲಿ, 3,537 ಅಂಗನವಾಡಿ ಕೇಂದ್ರಗಳು ಸಮುದಾಯದ ಕಟ್ಟಡಗಳಲ್ಲಿ, 152 ಅಂಗನವಾಡಿ ಕೇಂದ್ರಗಳು ಯುವಕ ಮಂಡಳಿ ಮತ್ತು 94 ಅಂಗನವಾಡಿ ಕೇಂದ್ರಗಳು ಮಹಿಳಾ ಮಂಡಳಿ ಕಟ್ಟಡಗಳಲ್ಲಿ, 4,266 ಅಂಗನವಾಡಿ ಕೇಂದ್ರಗಳು ಶಾಲಾ ಕಟ್ಟಡಗಳಲ್ಲಿ 11,956 ಅಂಗನವಾಡಿ ಕೇಂದ್ರಗಳು ಬಾಡಿಗೆ ಕಟ್ಟಡಗಳಲ್ಲಿ ಹಾಗೂ 2,765 ತಾತ್ಕಾಲಿಕ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿವೆ.
ದ.ಕ. ಜಿಲ್ಲೆಯಲ್ಲಿ ಒಟ್ಟು 2,130 ಅಂಗನವಾಡಿಗಳಿದ್ದು, ಅದರಲ್ಲಿ 51 ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಅಂಗನವಾಡಿಗಳ ಬಾಡಿಗೆ ವರ್ಷದಿಂದ ಪಾವತಿಯಾಗಿಲ್ಲ. ಕೆಲವೆಡೆ ಕಟ್ಟಡಗಳ ಮಾಲಕರ ಕಿರಿಕಿರಿಯನ್ನು ಅಂಗನವಾಡಿ ಶಿಕ್ಷಕರು, ಸಹಾಯಕರು ಎದುರಿಸುವಂತಾಗಿದೆ. ಮಾತ್ರವಲ್ಲದೆ, ಅನುದಾನದ ಕೊರತೆ ಎದುರಿಸುತ್ತಿರುವ ಅಂಗನವಾಡಿಗಳು ವರ್ಷದಿಂದೀಚೆಗೆ ವಿದ್ಯುತ್ ಬಿಲ್ ಕೂಡ ಪಾವತಿಸಿಲ್ಲ ಎನ್ನುವ ದೂರು ಅಂಗನವಾಡಿ ಶಿಕ್ಷಕರಿಂದ ವ್ಯಕ್ತವಾಗಿದೆ.
ಮೊಟ್ಟೆ ಟೆಂಡರ್ ಮೂಲಕ ಪೂರೈಕೆಯಾಗುತ್ತಿದ್ದ ಸಂದರ್ಭ ಕೆಲ ಅಂಗನವಾಡಿಗಳಿಗೆ ಕೊಳೆತ ಮೊಟ್ಟೆ ಪೂರೈಕೆಯಾದ ಪ್ರಕರಣದ ಬಳಿಕ ಮೊಟ್ಟೆ ಪೂರೈಕೆಯ ಟೆಂಡರ್ ವ್ಯವಸ್ಥೆಯನ್ನು ರದ್ದುಪಡಿಸಿ, ಅಂಗನವಾಡಿ ಶಿಕ್ಷಕರೆೇ ಮೊಟ್ಟೆ ಪೂರೈಕೆ ಮಾಡುವಂತೆ ಸೂಚನೆ ನೀಡಲಾಗಿದೆ. ಸರಕಾರದ ಸೂಚನೆಯಂತೆ ಅಂಗನವಾಡಿಗಳಲ್ಲಿ ಗರ್ಭಿಣಿ ಮತ್ತು ಬಾಣಂತಿಯರಿಗೆ ಮಾಸಿಕ 25ರಂತೆ ಹಾಗೂ 3ರಿಂದ 6 ವರ್ಷದೊಳಗಿನ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆಗಳನ್ನು ಹಾಗೂ ಕಡಿಮೆ ತೂಕದ ಮಕ್ಕಳಿಗೆ ವಾರದಲ್ಲಿ ಹೆಚ್ಚುವರಿ 3 ಮೊಟ್ಟೆಗಳನ್ನು ಪೂರೈಸಬೇಕಿದೆ. ಅದರಂತೆ ಇಲಾಖೆಯ ಮಾಹಿತಿ ಪ್ರಕಾರ ದ.ಕ. ಜಿಲ್ಲೆಯಲ್ಲಿ ತಿಂಗಳಿಗೆ 9,33,000 ಮೊಟ್ಟೆಗಳ ಅವಶ್ಯಕತೆ ಇದೆ. ಶಿಶು ಅಭಿವೃದ್ಧಿ ಯೋಜನೆಯಡಿ ಮೊಟ್ಟೆಯ ಹಣವನ್ನು ಅಂಗನವಾಡಿ ಕೇಂದ್ರಗಳ ಶಿಕ್ಷಕರಿಗೆ ಒದಗಿಸಲಾಗುತ್ತಿದೆ. ಸರಕಾರ ನಿಗದಿಪಡಿಸಿದ ಮೊಟ್ಟೆ ದರ 6 ರೂ.ಗಳು. ದ.ಕ. ಜಿಲ್ಲೆಯಲ್ಲಿ ಕೆಲವೆಡೆ ಮೊಟ್ಟೆ ದರ 7ರಿಂದ 7.50 ರೂ.ಗಳೂ ಇವೆ. ಆಗಸ್ಟ್, ಸೆಪ್ಟಂಬರ್, ಅಕ್ಟೋಬರ್ ತಿಂಗಳ ಮೊಟ್ಟೆ ಹಣವನ್ನು ಏಕಕಾಲಕ್ಕೆ ಅಂಗನವಾಡಿಗಳಿಗೆ ಪೂರೈಕೆ ಮಾಡಲಾಗಿದೆ. ಆದರೆ, ಮಂಗಳೂರು ನಗರ ವ್ಯಾಪ್ತಿಯಲ್ಲಿ ಉಂಟಾದ ಸಮಸ್ಯೆ ಕಾರಣ ಕಳೆದ ನವೆಂಬರ್ನಿಂದ ಅಂಗನವಾಡಿಗಳಿಗೆ ಮೊಟ್ಟೆ ಹಣ ಪಾವತಿಯಾಗಿಲ್ಲ.
ಹೊಸ ಮೊಬೈಲ್ ಬಂದಿಲ್ಲ; ಕರೆನ್ಸಿಯೂ ಇಲ್ಲ
ಅಂಗನವಾಡಿ ಕೇಂದ್ರ ತೆರೆಯುವುದರಿಂದ ಹಿಡಿದು, ಮಕ್ಕಳ ಹಾಜರಾತಿ, ಗರ್ಭಿಣಿ ಮತ್ತು ಬಾಣಂತಿಯರಿಗೆ ನೀಡಲಾಗುವ ಆಹಾರ ಸಾಮಗ್ರಿಗಳ ವಿವರ, ಮಕ್ಕಳಿಗಾಗಿ ಕೈಗೊಂಡ ಕಾರ್ಯಕ್ರಮ ಸೇರಿದಂತೆ ಸಮಗ್ರ ಮಾಹಿತಿಯನ್ನು ಪ್ರತಿನಿತ್ಯ ಅಪ್ಡೇಟ್ ಮಾಡುವ ಸಲುವಾಗಿ ಕಳೆದ ನಾಲ್ಕು ವರ್ಷಗಳ ಹಿಂದೆ ಅಂಗನವಾಡಿ ಶಿಕ್ಷಕರಿಗೆ ಮೊಬೈಲನ್ನು ನೀಡಲಾಗಿತ್ತು.
ಅದಕ್ಕೆ ಪೂರಕವಾಗಿ ಕರೆನ್ಸಿಯನ್ನೂ ಹಾಕಲಾಗುತ್ತಿತ್ತು. ಆದರೆ ಬಹುತೇಕರ ಮೊಬೈಲ್ಗಳು ಹಾಳಾಗಿವೆ. ಕಳೆದ ಸುಮಾರು ಮೂರ್ನಾಲ್ಕು ತಿಂಗಳುಗಳಿಂದ ಕರೆನ್ಸಿಯೂ ಹಾಕಲಾಗಿಲ್ಲ. ಕೆಲವರು ತಮ್ಮ ವೈಯಕ್ತಿಕ ಮೊಬೈಲ್ಗಳಲ್ಲಿ ಈ ಕಾರ್ಯ ಮಾಡುತ್ತಿದ್ದರೆ, ಕೆಲವರಲ್ಲಿ ಅದೂ ಇಲ್ಲದೆ ಸಮಸ್ಯೆಯಾಗಿ ಮಾಹಿತಿಯನ್ನು ಅಪ್ಡೇಟ್ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಅಂಗನವಾಡಿ ಶಿಕ್ಷಕರು.
ಅಂಗನವಾಡಿಗಳಲ್ಲಿ ಮಕ್ಕಳಿಗೆ ಬೇಯಿಸಿದ ಪೌಷ್ಟಿಕ ಆಹಾರವನ್ನು ನೀಡಲಾಗುತ್ತದೆ. ಕಡಲೆ, ಹೆಸರುಬೇಳೆ ಬೇಯಿಸುವುದರಿಂದ ಅಡುಗೆ ಗ್ಯಾಸ್ ಸಿಲಿಂಡರ್ ಎರಡೂವರೆ ತಿಂಗಳಿಗಷ್ಟೇ ಸಾಕಾಗುತ್ತದೆ. ಬಳಿಕ ನಾವು ಹಣ ಹಾಕಿ ಖರೀದಿಸಬೇಕಾಗುತ್ತದೆ. ನಮ್ಮ ದ.ಕ. ಜಿಲ್ಲೆಯಲ್ಲಿ ಬೇಳೆಕಾಳುಗಳನ್ನು ಹಸಿಯಾಗಿ ತಿನ್ನುವುದಿಲ್ಲ. ಇದರ ಜತೆ ಸಾದಿಲ್ವಾರ್ಗೆ ನೀಡುವ 83 ರೂ.ನಲ್ಲಿ ಫಿನಾಯಿಲ್, ಮಕ್ಕಳ ಕೈ ತೊಳೆಯುವ ಸೋಪ್, ಪಾತ್ರೆ ತೊಳೆಯುವ ಸೋಪು, ಪೊರಕೆ ಮೊದಲಾದವುಗಳನ್ನು ಖರೀದಿಸಲು ಕಷ್ಟಸಾಧ್ಯವಾಗುತ್ತಿದೆ ಎನ್ನುವ ಮಾತೂ ಅಂಗನವಾಡಿ ಶಿಕ್ಷಕರಿಂದ ಕೇಳಿ ಬರುತ್ತಿದೆ.
ಮೂರು ತಿಂಗಳಿಗೊಮ್ಮೊ ಮೊಟ್ಟೆ ಕೊಟ್ಟರೆ ಗರ್ಭಿಣಿಯರಿಗೇನು ಲಾಭ?
ಗರ್ಭಿಣಿ ಹಾಗೂ ಬಾಣಂತಿಯರಿಗೆ ದಿನಕ್ಕೊಂದು ಮೊಟ್ಟೆ ಆರೋಗ್ಯಕ್ಕೆ ಅಗತ್ಯ ಎಂಬ ನೆಲೆಯಲ್ಲಿ ತಿಂಗಳಿಗೆ ೨೫ ಮೊಟ್ಟೆಗಳನ್ನು ಸರಕಾರ ನಿಗದಿಪಡಿಸಿದೆ. ಅದನ್ನು ವಾರಕ್ಕೊಮ್ಮೆ ಅಥವಾ ತಿಂಗಳಿಗೆ ಮುಂಚಿತವಾಗಿ ನೀಡುವುದು ಸರಿಯಾದ ಕ್ರಮ. ಆದರೆ ಕಳೆದ ಮೂರು ತಿಂಗಳ ಮೊಟ್ಟೆ ಅನುದಾನ ಅಂಗನವಾಡಿಗಳಿಗೆ ಒಂದು ಬಾರಿಗೆ ಬಿಡುಗಡೆಯಾದ ಕಾರಣ ಮೂರು ತಿಂಗಳ ಮೊಟ್ಟೆಯನ್ನು ಒಂದೇ ಬಾರಿಗೆ ನೀಡಲಾಗಿದೆ. ಏಕಕಾಲದಲ್ಲಿ ಅವರು ಇಷ್ಟು ಮೊಟ್ಟೆಗಳನ್ನು ತಿನ್ನಲು ಸಾಧ್ಯವಿಲ್ಲ. ಸರಕಾರ ಒಂದಾ ಗರ್ಭಿಣಿ ಮತ್ತು ಬಾಣಂತಿಯರ ಬ್ಯಾಂಕ್ ಖಾತೆಗೆ ಮೊಟ್ಟೆಯ ಹಣವನ್ನು ನೇರವಾಗಿ ಪಾವತಿ ಮಾಡಬೇಕು, ಇಲ್ಲವಾದಲ್ಲಿ ಅನುದಾನವನ್ನು ಸಕಾಲದಲ್ಲಿ ಮುಂಗಡವಾಗಿ ಒದಗಿಸಬೇಕು. ಅತ್ಯಲ್ಪ ವೇತನವನ್ನು ಪಡೆಯುವ ಅಂಗನವಾಡಿ ಶಿಕ್ಷಕರು ಅಥವಾ ಸಹಾಯಕಿಯರು ತಮ್ಮ ಕೈಯಿಂದ ಹಣ ಹಾಕಿಕೊಂಡು ಮೊಟ್ಟೆ ಖರೀದಿಸುವ ಪರಿಸ್ಥಿತಿಯಲ್ಲಿಲ್ಲ ಎಂಬ ಮಾತುಗಳು ಅಂಗನವಾಡಿ ಕಾರ್ಯಕರ್ತೆಯರಿಂದ ವ್ಯಕ್ತವಾಗುತ್ತಿದೆ.
ಮಂಗಳೂರು ನಗರ ಹೊರತುಪಡಿಸಿ ಜಿಲ್ಲೆಯಲ್ಲಿ ಮೊಟ್ಟೆ ಪೂರೈಕೆಗೆ ಹಣವನ್ನು ಅಂಗನವಾಡಿಗಳಿಗೆ ಒದಗಿಸಲಾಗುತ್ತಿದೆ. ಮಂಗಳೂರು ನಗರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಬಾಕಿಯಾಗಿರುವ ನವೆಂಬರ್ ಹಾಗೂ ಈ ತಿಂಗಳ ಹಣ ಜತೆಯಾಗಿ ನೀಡಲು ಕ್ರಮ ಆಗಿದ್ದು, ಒಂದೆರಡು ದಿನಗಳಲ್ಲಿ ಹಣ ಪಾವತಿಯಾಗಲಿದೆ.
ಉಸ್ಮಾನ್, ಉಪ ನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ದ.ಕ.
ಮುಂಗಡ ಹಣ ಬಾರದೆ ಮೊಟ್ಟೆ ಖರೀದಿಸಿ ನೀಡಲು ಸಾಧ್ಯವಾಗುತ್ತಿಲ್ಲ. ನಾನು ಕಾರ್ಯ ನಿರ್ವಹಿಸುವ ಅಂಗನವಾಡಿಯಲ್ಲಿ ತಿಂಗಳಿಗೆ ಸುಮಾರು ೫,೦೦೦ ರೂ.ನಷ್ಟು ಮೊಟ್ಟೆ ಖರೀದಿಗೆ ಹಣದ ಅಗತ್ಯವಿದೆ. ಕಾಟಿಪಳ್ಳದ ಅಂಗನವಾಡಿಯೊಂದರಲ್ಲಿ ೭೦ ಗರ್ಭಿಣಿ ಹಾಗೂ ಬಾಣಂತಿಯರಿದ್ದಾರೆ. ೫೦ಕ್ಕೂ ಅಧಿಕ ಮಕ್ಕಳಿದ್ದಾರೆ. ಕೆಲವು ಕಡೆ ಇದಕ್ಕಿಂತ ಹೆಚ್ಚೂ ಇರಬಹುದು. ಇಷ್ಟೊಂದು ಹಣವನ್ನು ನಮ್ಮ ಕೈಯಿಂದ ಹಾಕಿ ಕೊಡಲು ಸಾಧ್ಯವೇ? ಹಾಗಾಗಿ ನಮ್ಮ ಅಂಗನವಾಡಿಯಲ್ಲಿ ನವೆಂಬರ್ನಿಂದ ಮೊಟ್ಟೆ ವಿತರಣೆಯಾಗಿಲ್ಲ. ಹಣ ಪಾವತಿಯಾಗುವುದನ್ನು ಕಾಯುತ್ತಿದ್ದೇವೆ.
ವಿಶಾಲಾಕ್ಷಿ, ಅಂಗನವಾಡಿ ಶಿಕ್ಷಕಿ, ಪಳನೀರು- ಕಾವೂರು ಕೋಶಾಧಿಕಾರಿ, ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು - ಸಹಾಯಕಿಯರ ಸಂಘ