ರಾಜಕೀಯ ಲಾಭಕ್ಕಾಗಿ ವಿಪಕ್ಷಗಳು ಮಾಡುವ ಆರೋಪಗಳಲ್ಲಿ ವಾಸ್ತವ ಇರುವುದಿಲ್ಲ: ಸತೀಶ್ ಜಾರಕಿಹೊಳಿ
ವಾರ್ತಾಭಾರತಿ ವಿಶೇಷ ಸಂದರ್ಶನ
ಯಾರು ಆರೋಪ ಮಾಡುತ್ತಾರೋ ಅವರು ಅದನ್ನು ಸಾಬೀತು ಮಾಡಬೇಕು. ಗುತ್ತಿಗೆದಾರರ ವಾದ ಬಿಲ್ ಬೇಗ ಪಾವತಿಸಿ ಎಂಬುದೇ ಹೊರತು ಬೇರೆ ಯಾವುದೇ ಆರೋಪ ಇಲ್ಲ. ಬಿಲ್ ಬಾಕಿ ಇರಲು ಕಾರಣ ಹಿಂದಿನ ಬಿಜೆಪಿ ಸರಕಾರ. ಅವರು ಬಜೆಟ್ ಹಂಚಿಕೆಯನ್ನು ಮೀರಿ ಅನುದಾನಗಳನ್ನು ಕೊಟ್ಟಿದ್ದಾರೆ. ಈಗ ನಾವು ಏಕಕಾಲಕ್ಕೆ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ. ಬೇಗ ಕೊಡಲು ಪ್ರಯತ್ನಿಸುತ್ತೇವೆ.
► ಇತ್ತೀಚಿನ ವಿದ್ಯಮಾನ, ಐಟಿ ದಾಳಿ. ವಿಧಾನಸಭೆ ಚುನಾವಣೆ ಹೊತ್ತಿನಲ್ಲಿಯೂ ಐಟಿ ದಾಳಿಯಾಗಿತ್ತು. ಕಾಂಗ್ರೆಸ್ ನಾಯಕರ ಆಪ್ತರ ಮನೆಗಳ ಮೇಲೆಯೂ ದಾಳಿ ನಡೆದಿತ್ತು. ಈಗ ಬಿಜೆಪಿಯವರು ಮಾಡುತ್ತಿರುವ ಆರೋಪ, ತೆಲಂಗಾಣದಲ್ಲಿ ಚುನಾವಣೆಗಾಗಿ ಹಣ ಸಂಗ್ರಹಿಸಲಾಗುತ್ತಿದ್ದು, ಅದು ಕಮಿಷನ್ ಹಣ ಎನ್ನುತ್ತಿದ್ದಾರೆ. ಏನು ಪ್ರತಿಕ್ರಿಯೆ ಕೊಡುತ್ತೀರಿ?
ಸತೀಶ್ ಜಾರಕಿಹೊಳಿ: ಸರಕಾರಕ್ಕೂ ಕಮಿಷನ್‌ಗೂ ಸಂಬಂಧ ಎಲ್ಲಿ? ಅವರೊಬ್ಬರು ಗುತ್ತಿಗೆದಾರರು. ಅಲ್ಲಿ ಚುನಾವಣೆ ಮಾಡುವವರು ಬೇರೆ. ವಿರೋಧ ಪಕ್ಷದವರು ಎಲ್ಲದಕ್ಕೂ ಆರೋಪ ಮಾಡುತ್ತಾರೆ. ರಾಜಕೀಯವಾಗಿ ಲಾಭಕ್ಕೋಸ್ಕರ ಅವರು ಪ್ರಯತ್ನಿಸುತ್ತಾರೆ. ಅದರಲ್ಲಿ ಯಾವುದೇ ವಾಸ್ತವ ಇರುವುದಿಲ್ಲ.
► ಬಿಜೆಪಿ ರಾಜ್ಯಾಧ್ಯಕ್ಷರು ಹೇಳುತ್ತಿರುವ ಪ್ರಕಾರ, ಕೆಲವು ದಿನಗಳ ಹಿಂದಷ್ಟೆ ಗುತ್ತಿಗೆದಾರರ ಹಣ ಬಿಡುಗಡೆಯಾಗಿತ್ತು. ಕಮಿಷನ್ ಕೊಡುವ ಸಲುವಾಗಿ 42 ಕೋಟಿ ರೂ. ನಗದು ಇಟ್ಟಿದ್ದರು. ಅದೆಲ್ಲವೂ ನೇರ ತೆಲಂಗಾಣಕ್ಕೇ ಹೋಗುತ್ತದೆ. ಯಾವುದೇ ಆಧಾರವಿಲ್ಲದ ಹೇಳಿಕೆಯೇ ಇದು?
ಸ.ಜಾ.: ರಾಜಕೀಯದಲ್ಲಿ ಶೇ.90ರಷ್ಟು ಯಾವುದೇ ಆಧಾರಗಳಿಲ್ಲದೆ ಹೇಳಿಕೆಗಳೇ ಇರುತ್ತವೆ. ನಾವೇ ಆರೋಪ ಮಾಡಿದರೂ ನಮ್ಮ ಬಳಿ ಆಧಾರಗಳಿರುವುದಿಲ್ಲ. ಆಧಾರ ಹುಡುಕಲು ಕಷ್ಟ. ಆದರೂ ಹೇಳುತ್ತೇವೆ. ಶೇ.10ರಷ್ಟು ಆಧಾರಗಳನ್ನು, ಪುರಾವೆಗಳನ್ನು ಕೊಡಬಹುದು. ಸಾಬೀತುಪಡಿಸುವುದು ಬಹಳ ಕಷ್ಟ.
► ನೀವು ಅಧಿಕಾರಕ್ಕೆ ಬರುವ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳು, ಜೊತೆಗೆ ಬಿಜೆಪಿ ಸರಕಾರದ 40 ಪರ್ಸೆಂಟ್ ಕಮಿಷನ್ ಬಹಳ ಪ್ರಮುಖವಾದ ಪಾತ್ರ ವಹಿಸಿತ್ತು. ಬಾಕಿ ಹಣ ಬಂದಿಲ್ಲ ಎಂದು ಗುತ್ತಿಗೆದಾರರು ಈಗಲೂ ಹೇಳುತ್ತಿದ್ದಾರೆ. ಕಮಿಷನ್ ಆರೋಪ ನಿಮ್ಮ ಸರಕಾರದ ಕೆಲವು ಶಾಸಕರ ಮೇಲೆಯೂ ಬರುತ್ತಿದೆ. ಇದರ ಬಗ್ಗೆ ನಿಮ್ಮ ಪ್ರತಿಕ್ರಿಯೆ?
ಸ.ಜಾ.: ಆರೋಪಗಳು ಕೇಳಿಬಂದವು. ಯಾರು ಆರೋಪ ಮಾಡುತ್ತಾರೋ ಅವರು ಅದನ್ನು ಸಾಬೀತು ಮಾಡಬೇಕು. ಗುತ್ತಿಗೆದಾರರ ವಾದ ಬಿಲ್ ಬೇಗ ಪಾವತಿಸಿ ಎಂಬುದೇ ಹೊರತು ಬೇರೆ ಯಾವುದೇ ಆರೋಪ ಇಲ್ಲ. ಬಿಲ್ ಬಾಕಿ ಇರಲು ಕಾರಣ ಹಿಂದಿನ ಬಿಜೆಪಿ ಸರಕಾರ. ಅವರು ಬಜೆಟ್ ಹಂಚಿಕೆಯನ್ನು ಮೀರಿ ಅನುದಾನಗಳನ್ನು ಕೊಟ್ಟಿದ್ದಾರೆ. ಈಗ ನಾವು ಏಕಕಾಲಕ್ಕೆ ಬಿಲ್ ಪಾವತಿಸಲು ಸಾಧ್ಯವಾಗುವುದಿಲ್ಲ. ಬೇಗ ಕೊಡಲು ಪ್ರಯತ್ನಿಸುತ್ತೇವೆ.
► ನಿಮ್ಮ ಗ್ಯಾರಂಟಿ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಿದರೂ ಅದರಿಂದ ಆಗುತ್ತಿರುವ ಬೇರೆ ಬೇರೆ ರೀತಿಯ ಸಮಸ್ಯೆಗಳನ್ನು ನಿಭಾಯಿಸುವುದು ಕಷ್ಟವಾಗುತ್ತಿದೆ. ಉದಾಹರಣೆಗೆ ವಿದ್ಯುತ್ ಅಭಾವ. ಮೊದಲೇ ಸರಿಪಡಿಸಬೇಕಿತ್ತು, ಆದರೆ ಆಗುತ್ತಿಲ್ಲ ಎಂಬ ಮಾತುಗಳಿವೆ. ಇದರ ಬಗ್ಗೆ?
ಸ.ಜಾ.: ಇದು ನೈಸರ್ಗಿಕ ಸಮಸ್ಯೆ. ಮಳೆ ಕಡಿಮೆಯಾಗಿರುವುದರಿಂದ ಈ ಸಮಸ್ಯೆ ಉದ್ಭವವಾಗಿದೆ. ಇದು ದಿಢೀರನೆ ಬಂದಿರುವ ಸಮಸ್ಯೆ. ಪರಿಹರಿಸಲು ಸರಕಾರ ಪ್ರಯತ್ನ ಮಾಡುತ್ತಿದೆ. ಸ್ವಲ್ಪ ಕಡಿಮೆ ಪೂರೈಕೆ ಇದೆ. ಕೆಲವು ಸ್ಥಾವರಗಳು ದುರಸ್ತಿಯಲ್ಲಿವೆ. ಆದಷ್ಟು ಬೇಗ ರೈತರಿಗೆ, ಸಾರ್ವಜನಿಕರಿಗೆ ವಿದ್ಯುತ್ತನ್ನು ಸರಿಯಾಗಿ ಪೂರೈಸುವ ಪ್ರಯತ್ನ ಮಾಡುತ್ತೇವೆ.
► ನಿಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ, ನಿಮ್ಮ ಪಕ್ಷದ ಒಬ್ಬರಲ್ಲ ಒಬ್ಬರು ನಾಯಕರೇ ಸರಕಾರದ ವಿರುದ್ಧ, ಮುಖ್ಯಮಂತ್ರಿಗಳ ವಿರುದ್ಧ ಹೇಳಿಕೆ ನೀಡುತ್ತಿರುವ ವಿಚಾರ. ಅದರಲ್ಲಿ ಒಂದು, ಮೂವರು ಡಿಸಿಎಂಗಳನ್ನು ಮಾಡಿದರೆ ಆ ಸಮುದಾಯಗಳು ಬೆಂಬಲಿಸುತ್ತವೆ ಎಂಬ ರಾಜಣ್ಣನವರ ಹೇಳಿಕೆ. ತಾವು ಕೂಡ ಅದನ್ನು ಸಾಮಾಜಿಕ ನ್ಯಾಯದ ಅಡಿಯಲ್ಲಿ ಬೆಂಬಲಿಸಿದ್ದೀರಿ. ಈ ಹೊತ್ತಲ್ಲಿ ಅಂಥದೊಂದು ಹೇಳಿಕೆ ನೀಡುವುದರ ಅರ್ಥವನ್ನು ಹೇಗೆ ನೀವು ಗ್ರಹಿಸುತ್ತೀರಿ?
ಸ.ಜಾ.: ಕಾಂಗ್ರೆಸ್ ಬರಲಿಕ್ಕೆ ಹಲವು ಸಮುದಾಯಗಳ ಪಾತ್ರ ಬಹಳ ಇದೆ. ನಾವು ಕೂಡ ಸರಕಾರದಲ್ಲಿ ಪಾಲುದಾರರು, ನಮಗೂ ಕೊಡಿ ಎಂದು ಕೇಳಿದ್ದಾರೆ. ಅದು ತಪ್ಪೇನಲ್ಲ. ಆದರೆ ಅಂತಿಮವಾಗಿ ಅದನ್ನು ಪಕ್ಷ ನಿರ್ಧಾರ ಮಾಡುತ್ತದೆ. ಅದನ್ನು ಒಪ್ಪಿಕೊಳ್ಳಲೇಬೇಕು.
► ಮಾನವ ಬಂಧುತ್ವ ವೇದಿಕೆಯನ್ನು ನೀವು ರಚನೆ ಮಾಡಿಕೊಂಡಿದ್ದೀರಿ. ಮೌಢ್ಯದ ವಿರುದ್ಧ ಹೋರಾಟ ಮಾಡುತ್ತಿದ್ದೀರಿ. ಜಾತಿ ರಹಿತ ಸಮಾಜದ ಕನಸನ್ನು ಕಾಣುತ್ತಿದ್ದೀರಿ. ಈ ಹೊತ್ತಲ್ಲಿ ರಾಜಕೀಯವಾಗಿ ಜಾತಿಯನ್ನು ಉಳಿಸಿಕೊಳ್ಳುವ ಪ್ರಯತ್ನದ ಬಗ್ಗೆ ಏನೆನ್ನಿಸುತ್ತದೆ?
ಸ.ಜಾ.: ರಾಜಕೀಯದಲ್ಲಿ ಜಾತಿ ಇದ್ದೇ ಇರುತ್ತದೆ. ನಾವು ಬಿಟ್ಟರೂ ಜಾತಿ ಬಿಡುವುದಿಲ್ಲ. ಜಾತಿಗೆ ಸಮಸ್ಯೆಯಾದಾಗ ಅದಕ್ಕಾಗಿ ಹೋರಾಟ ಮಾಡಲೇಬೇಕಾಗುತ್ತದೆ. ಸಮಾನತೆಗಾಗಿಯೂ ಹೋರಾಟ ಮಾಡಬೇಕಾಗುತ್ತದೆ. ಈ ಎರಡೂ ಕಡೆಯಲ್ಲಿ ಪಾತ್ರ ನಿರ್ವಹಿಸುವುದು ಬಹಳ ಮುಖ್ಯ. ಈ ಸಮತೋಲನ ಅನಿವಾರ್ಯ.
► ಜಾತಿರಹಿತ ರಾಜಕೀಯವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲವೆ?
ಸ.ಜಾ.: ಸಾಧ್ಯವಿಲ್ಲ. ಶೋಷಿತ ಜಾತಿಗಳೂ ಇವೆ. ಇನ್ನೂ ದನಿಯಿರದ ಅವರಿಗೆ ದನಿ ಕೊಡುವುದಕ್ಕೂ ನಾವೆಲ್ಲ ಪ್ರಯತ್ನಿಸಬೇಕು.ರಾಜಕೀಯ ಅವಕಾಶಗಳನ್ನು ಕೊಡಬೇಕು. ಆರ್ಥಿಕ ಸಬಲೀಕರಣ ಆಗಬೇಕು. ಶೈಕ್ಷಣಿಕವಾಗಿ ಅವರಿಗೆ ಶಕ್ತಿ ತುಂಬಬೇಕು. ಉದ್ಯೋಗಗಳನ್ನು ಕೊಡಬೇಕು. ನ್ಯಾಯ ಒದಗಿಸಿದಾಗ ಮಾತ್ರ ಅವರು ಸಬಲರಾಗುತ್ತಾರೆ. ಮುಖ್ಯ ವಾಹಿನಿಗೆ ಬರಲು ಸಾಧ್ಯವಾಗುತ್ತದೆ.
► ಈಗಿರುವ ಯೋಜನೆಗಳು ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮೇಲಕ್ಕೆತ್ತಲು ಅವರನ್ನು ತಲುಪುತ್ತಿವೆಯೇ?
ಸ.ಜಾ.: ಈಗ ಕೊಡುತ್ತಿರುವುದು ಸ್ವಲ್ಪ ಮಟ್ಟಿಗೆ ಸಹಾಯವಾಗುತ್ತದೆ. ಇದರಿಂದ ಅವರು ಸಂಪೂರ್ಣ ಪ್ರಗತಿ ಹೊಂದಲು ಸಾಧ್ಯವಿಲ್ಲ. ಶೈಕ್ಷಣಿಕವಾಗಿ ಬಹಳ ಖರ್ಚು ಮಾಡಬೇಕಾಗುತ್ತದೆ. ಸರಕಾರ ಭರಿಸಬೇಕಾಗುತ್ತದೆ. ಈಗಾಗಲೇ ಅದರ ಬಗ್ಗೆ ಸರಕಾರ ಚಿಂತನೆ ಮಾಡುತ್ತಿದೆ.
► ಸಮ ಸಮಾಜ ನಿರ್ಮಾಣವಾಗಲು ಜಾತಿಯನ್ನು ಮೇಲೆತ್ತಬೇಕು. ಅದಕ್ಕೆ ಜಾತಿ ಗಣತಿ ಕೂಡ ಸಹಾಯಕ ಎಂಬುದು ನಿಮ್ಮ, ಅಂದರೆ ‘ಇಂಡಿಯಾ’ ಬಣದ ವಾದ. ಅದನ್ನು ರಾಷ್ಟ್ರವ್ಯಾಪಿ ಮಾಡಲು ಹೊರಟಿದ್ದೀರಿ. ಅದು ಸಮಾಜ ಮತ್ತು ಜಾತಿಯನ್ನು ಒಡೆಯುವ ಪ್ರಯತ್ನ ಎಂಬುದು ಬಿಜೆಪಿ ಮತ್ತು ನರೇಂದ್ರ ಮೋದಿ ವಾದ. ಇದಕ್ಕೆ?
ಸ.ಜಾ.: ಅದನ್ನು ಒಪ್ಪಲು ಸಾಧ್ಯವಿಲ್ಲ. ಅದು ಒಡೆಯುವ ಪ್ರಶ್ನೆಯಲ್ಲ. ಹಾಗಿದ್ದರೆ ಜಾತಿಯನ್ನು ಮಾಡುವಾಗಲೇ ಯೋಚಿಸಬೇಕಿತ್ತು. ಈಗ ಜಾತಿಗಣತಿ ಯಾಕೆ ಬೇಕೆಂದರೆ ಅವರಿಗೆ ನಾವೇನು ಮಾಡಬೇಕು, ಯಾವ ಸಮುದಾಯದ ಸ್ಥಿತಿ ಏನಿದೆ ಎಂಬುದನ್ನು ತಿಳಿಯಬೇಕಿದೆ. ಜಾತಿಗಣತಿಯಿಂದ ಸಿಗುವ ಅಂಕಿಅಂಶಗಳ ಆಧಾರದ ಮೇಲೆಯೇ ನಾವು ಕಾರ್ಯಕ್ರಮ ರೂಪಿಸಬೇಕಾಗುತ್ತದೆ. ಇದಕ್ಕಾಗಿ ಜಾತಿಗಣತಿ ಬಹಳ ಅವಶ್ಯವಿದೆ.
► ಹಿಂದಿನ ಸಿದ್ದರಾಮಯ್ಯ ಸರಕಾರದಲ್ಲಿಯೇ ಇದನ್ನು ಮಾಡಲಾಯಿತು. ಆದರೆ ಅದನ್ನು ಬಿಡುಗಡೆ ಮಾಡಲು ಆಗಲಿಲ್ಲ. ಈಗಲೂ ಬಿಡುಗಡೆಗೆ ನಿಮ್ಮ ಪಕ್ಷದ ಪ್ರಬಲ ಸಮುದಾಯದ ನಾಯಕರ ವಿರೋಧ ಇದೆ. ಪತ್ರವನ್ನೂ ಬರೆದಿದ್ದಾರೆ. ಇದರ ಬಗ್ಗೆ ಏನು ಹೇಳುತ್ತೀರಿ?
ಸ.ಜಾ.: ಈ ದೇಶದಲ್ಲಿ ಏನೇ ಮಾಡಿದರೂ ವಿರೋಧ ಎನ್ನುವುದು ಒಂದು ಭಾಗ. ನೀವು ಎಷ್ಟೆ ಒಳ್ಳೆಯದನ್ನು ಮಾಡಿದರೂ ವಿರೋಧ ಎಂಬುದು ಇದ್ದೇ ಇರುತ್ತದೆ. ಎದುರಿಸಬೇಕಾಗುತ್ತದೆ. ಇದರಿಂದ ಅವರಿಗೆ ಅನ್ಯಾಯವಾಗಿಲ್ಲ ಎಂಬುದನ್ನು ಮನವರಿಕೆ ಮಾಡಬೇಕಾಗುತ್ತದೆ. ಆ ಜವಾಬ್ದಾರಿ ಸರಕಾರದ್ದು.
► ಈಗ ಜಾತಿ ಎಂಬುದು ರಾಜಕೀಯವಾಗಿ ಅಸ್ತ್ರವಾಗಿರುವುದರಿಂದ, ಲೋಕಸಭೆ ಚುನಾವಣೆ ಹತ್ತಿರವಿರುವ ಸಂದರ್ಭದಲ್ಲಿ ಸರಕಾರ ಜಾತಿಗಣತಿಯನ್ನು ಬಿಡುಗಡೆ ಮಾಡುವ ರಿಸ್ಕ್ ಅನ್ನು ತೆಗೆದುಕೊಳ್ಳುತ್ತದೆಯೇ?
ಸ.ಜಾ.: ಖಂಡಿತ. ಯಾಕೆಂದರೆ ಅದು ಯಾರ ವಿರುದ್ಧವೂ ಅಲ್ಲ. ನ್ಯಾಯ ಸಿಗಬೇಕೆಂದು ಮಾಡುತ್ತಿರುವುದು. ಹಾಗಾಗಿ ನಷ್ಟದ ಪ್ರಶ್ನೆಯೂ ಇಲ್ಲ.
► ಒಕ್ಕಲಿಗರು ಮತ್ತು ವೀರಶೈವ ಲಿಂಗಾಯತರನ್ನು ಕಡಿಮೆ ಪ್ರಮಾಣದಲ್ಲಿ ತೋರಿಸುವುದಕ್ಕೆಂದೇ ಇದನ್ನು ಮಾಡಲಾಗಿದೆ ಎಂಬುದು ಪ್ರಬಲ ಸಮುದಾಯಗಳ ವಾದ?
ಸ.ಜಾ.: ಸಮೀಕ್ಷೆ ಮಾಡುವವರು, ಗಣತಿ ಮಾಡುವವರು ಶಿಕ್ಷಕರು. ಲಕ್ಷಾಂತರ ಜನ ಇದರಲ್ಲಿ ಭಾಗವಹಿಸಿದ್ದಾರೆ. ಮನೆಮನೆಗೆ ಹೋಗಿ ಲೆಕ್ಕ ತೆಗೆದುಕೊಳ್ಳಲಾಗಿದೆ. ಏನು ವಾಸ್ತವ ಇದೆಯೋ ಅದನ್ನೇ ವರದಿ ಮಾಡಿದ್ದಾರೆ.
► ಬಿಜೆಪಿ-ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿರುವುದರಿಂದ ಕಾಂಗ್ರೆಸ್ ಹೆಚ್ಚಿನ ಸವಾಲನ್ನು ಎದುರಿಸಬೇಕಾಗುತ್ತದೆಯೇ?
ಸ.ಜಾ.: ಕೆಲವು ಭಾಗಗಳಲ್ಲಿ ಖಂಡಿತ ಹಾಗಾಗುತ್ತದೆ. ಕೆಲವೆಡೆ ನಾವು ಬಹಳ ಕಷ್ಟಪಡಬೇಕಾಗುತ್ತದೆ. ಇನ್ನು ಕೆಲವೆಡೆ ನಮಗೆ ಲಾಭವಾಗುತ್ತದೆ. ಕೆಲವೆಡೆ ಅವರಿಗೆ ಲಾಭವಾಗಿಯೇ ಆಗುತ್ತದೆ.
► ಹಳೇ ಮೈಸೂರು ಭಾಗದಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಒಂದು ಸಮುದಾಯ ನಿಮ್ಮನ್ನು ಬೆಂಬಲಿಸಿತ್ತು. ಅದಕ್ಕೆ ಡಿ.ಕೆ. ಶಿವಕುಮಾರ್ ಅವರೂ ಕಾರಣರಾಗಿದ್ದರು. ಬೇರೆ ಬೇರೆ ಕಾರಣಗಳೂ ಇದ್ದವು. ಈಗ ಮೈತ್ರಿಯಾಗಿರುವುದರಿಂದ ಆ ಭಾಗದಲ್ಲಿ ಹಿನ್ನಡೆ ಆಗಬಹುದು ಎಂದೇನಾದರೂ ಅನಿಸುತ್ತದೆಯೆ?
ಸ.ಜಾ.: ಲೋಕಸಭೆ ಚುನಾವಣೆಯ ಸಂದರ್ಭ ಬೇರೆ. ವಿಧಾನಸಭೆ ಚುನಾವಣೆಯದ್ದೇ ಬೇರೆ. ಜಿಪಂ, ತಾಪಂ, ಗ್ರಾಮ ಪಂಚಾಯತ್‌ಗಳದ್ದು ಇನ್ನೂ ಬೇರೆ. ಒಂದೇ ವೋಟು ಈ ಐದು ಚುನಾವಣೆಗಳಲ್ಲಿ ಬೇರೆ ಬೇರೆ ಬಗೆಯಲ್ಲಿರುತ್ತದೆ. ಮತದಾರ ಬೇರೆ ಬೇರೆ ರೀತಿಯಲ್ಲಿ ಯೋಚನೆ ಮಾಡುತ್ತಾನೆ. ಹೀಗಾಗಿ ಮೊನ್ನೆ ಹಾಕಿದವರು ಈ ಸಲವೂ ಹಾಕುತ್ತಾರೆ ಎಂದು ಭ್ರಮೆಯಲ್ಲಿರಲು ಆಗುವುದಿಲ್ಲ.
► ನರೇಂದ್ರ ಮೋದಿ ವರ್ಚಸ್ಸನ್ನು ಮೀರಿ ಗೆಲ್ಲಬಹುದಾದ ವಿಚಾರಗಳು ಯಾವುದಿವೆ ಕಾಂಗ್ರೆಸ್‌ನಲ್ಲಿ?
ಸ.ಜಾ.: ಸಾಕಷ್ಟಿವೆ. ವಿಧಾನಸಭೆ ಚುನಾವಣೆಯಲ್ಲಿ ನಾವು ಹಾಕಿಕೊಂಡ ಕಾರ್ಯಕ್ರಮಗಳು. ಮೇಕೆದಾಟು ಪಾದಯಾತ್ರೆ, ರಾಹುಲ್ ಗಾಂಧಿಯವರ ಭಾರತ್ ಜೋಡೊ ಯಾತ್ರೆ ಆಯಿತು. ಸ್ವತಂತ್ರ ನಡಿಗೆ ಮಾಡಿದೆವು. ಪೋಸ್ಟರ್ ಅಭಿಯಾನ ಆಯಿತು. 40 ಪರ್ಸೆಂಟ್ ಸರಕಾರ ಎಂಬುದನ್ನು ಮಾಡಿದೆವು. ಅಂಥದೇ ಕಾರ್ಯಕ್ರಮ ಇಲ್ಲಿಯೂ ಆಗಬೇಕು.
► ಮಹಿಷ ದಸರಾ ಆಚರಣೆ, ಅದಕ್ಕೆ ವ್ಯಕ್ತವಾದ ವಿರೋಧದ ಹಿನ್ನೆಲೆಯಲ್ಲಿ ಕೇಳುವುದಾದರೆ, ಇತ್ತೀಚೆಗೆ ಧರ್ಮ ಸಂಘರ್ಷಕ್ಕಿಂತ ಜಾತಿ ಸಂಘರ್ಷ ಹೆಚ್ಚಾಗುತ್ತಿದೆ ಎಂದು ನಿಮಗನ್ನಿಸುತ್ತದೆಯೆ?
ಸ.ಜಾ.: ಎರಡೂ ಇವೆ. ಒಮ್ಮೆ ಧರ್ಮ ಬರುತ್ತದೆ, ಒಮ್ಮೆ ಜಾತಿ ಬರುತ್ತದೆ. ಒಮ್ಮೆ ಭಾಷೆ ಬರುತ್ತದೆ. ಈ ಸಂಘರ್ಷ ಇದ್ದೇ ಇರುತ್ತದೆ. ಎದುರಿಸಲೇಬೇಕಾಗುತ್ತದೆ.
► ಧರ್ಮ ಸಂಘರ್ಷಕ್ಕಿಂತ ಜಾತಿ ಸಂಘರ್ಷ ಹೆಚ್ಚಾಗಲು ಏನು ಕಾರಣ?
ಸ.ಜಾ.: ಎಲ್ಲರಿಗೂ ತಮಗೆ ಅಧಿಕಾರ ಬೇಕೆನ್ನುವುದಿರುತ್ತದೆ. ತಮ್ಮ ಸಮುದಾಯದವರು ಮುಖ್ಯಮಂತ್ರಿಗಳಾಗಬೇಕು, ತಮ್ಮ ಸಮುದಾಯದವರಿಗೆ ಅವಕಾಶಗಳು ಬರಬೇಕು ಹೀಗೆ ಜಾತಿ ಘರ್ಷಣೆ ಅನಿವಾರ್ಯವಾಗಿ ಆಗಿಯೇ ಆಗುತ್ತದೆ.
► ಅಂತಹ ಸಮುದಾಯಗಳಿಗೆ ದನಿಯಾಗಲು ಆ ಹೊತ್ತಲ್ಲಿ ದಲಿತ ಬಂಡಾಯ ಸಾಹಿತ್ಯ ಇತ್ತು. ನಾಯಕರುಗಳಿದ್ದರು. ಈಗ ಅವೆಲ್ಲವೂ ಕಡಿಮೆಯಾಗಿದೆ. ಆ ಕೊರತೆಯ ಬಗ್ಗೆ?
ಸ.ಜಾ.: ಖಂಡಿತ ಇದೆ. ಮುಂಚೆ ಇದ್ದ ಸಾಹಿತಿಗಳು, ಹೋರಾಟಗಾರರು, ಬಂಡಾಯ ಸಾಹಿತ್ಯ ಇರಬಹುದು, ರೈತ ಸಂಘಟನೆ ಇರಬಹುದು. ಅಂತಹ ಎಲ್ಲವೂ ಈಗ ಕಡಿಮೆಯಾಗಿದೆ. ಮತ್ತೆ ಅಂತಹ ಸ್ಥಾನ ತುಂಬಲು ಸರಕಾರಗಳು, ರಾಜಕೀಯ ಪಕ್ಷಗಳು ಮುಂದಾಗಬೇಕು.
► ಲೋಕಸಭೆ ಚುನಾವಣೆ ಬಗ್ಗೆ. ಧರ್ಮದ ಆಧಾರದ ಮೇಲೆಯೇ ಬಿಜೆಪಿ ರಾಜಕೀಯವನ್ನು ಮಾಡಿಕೊಂಡು ಬಂದಿರುವುದರಿಂದ ಕೋಮು ಧ್ರುವೀಕರಣ ಕರ್ನಾಟಕದಲ್ಲಿ ಯಾವ ಮಟ್ಟಿಗೆ ಆಗಿದೆ ಎಂದೆನಿಸುತ್ತದೆ? ರಾಮ ಮಂದಿರ ಉದ್ಘಾಟನೆಯೂ ಇರುವುದರಿಂದ ಅದು ಲೋಕಸಭೆ ಚುನಾವಣೆಯ ಮೇಲೆ ಪರಿಣಾಮ ಬೀರಬಹುದೇ?
ಸ.ಜಾ.: ಈಗಾಗಲೇ ರಾಮಮಂದಿರದ್ದು ಮುಗಿದಿರುವ ವಿಚಾರ. ಆದರೂ ಅದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿಯವರು ಮುಂದಿರುತ್ತಾರೆ. ಇನ್ನೂ ಬೇರೆಯದನ್ನೂ ಅವರು ಸೃಷ್ಟಿ ಮಾಡುತ್ತಾರೆ. ಅವರಿಗೆ ಅದು ಹೊಸದಲ್ಲ. ರಾಜಕೀಯ ಲಾಭ ಪಡೆಯಲು ಖಂಡಿತ ಪ್ರಯತ್ನ ಮಾಡುತ್ತಾರೆ. ನಾವು ಅದಕ್ಕೆ ಪ್ರತಿಯಾಗಿ ಕೆಲಸ ಮಾಡಬೇಕು.
► ನಮ್ಮಲ್ಲಿ ರಾಜಕೀಯ ವ್ಯಕ್ತಿಗಳೇ ಉದ್ಯಮಿಗಳೂ ಆಗಿರುತ್ತಾರೆ, ಶಿಕ್ಷಣ ಕ್ಷೇತ್ರದಲ್ಲಿಯೂ ಇರುತ್ತಾರೆ. ಕೊನೆಗೆ ಸಮಾಜಸೇವೆ ಎಂದು ಬರುತ್ತಾರೆ. ಇದರ ಬಗ್ಗೆ ಏನನ್ನಿಸುತ್ತದೆ?
ಸ.ಜಾ.: ಇದು ಅನಿವಾರ್ಯ. 70 ವರ್ಷದ ಹಿಂದೆ ಇದ್ದ ರಾಜಕೀಯ ಕಲ್ಪನೆಯನ್ನು ಈಗ ನೋಡಲಿಕ್ಕಾಗುವುದಿಲ್ಲ. ಆಗ ರಾಜಕೀಯ ಬಹಳ ಕಡಿಮೆ ಖರ್ಚಿನದ್ದಾಗಿತ್ತು. ಈಗ ಅಂಥ ಸ್ಥಿತಿ ಇಲ್ಲ. ನಾವು ಉದ್ಯಮದಲ್ಲಿ ದುಡ್ಡು ಮಾಡಬೇಕು. ಸಮಾಜಸೇವೆಗೂ ದುಡ್ಡು ಖರ್ಚು ಮಾಡಬೇಕು, ರಾಜಕೀಯಕ್ಕೂ ಹಾಕಬೇಕು. ಖರ್ಚು ಮಾಡುವ ಅನಿವಾರ್ಯತೆ ಈಗ ಇದೆ.
► ನಿಮ್ಮ ಜಿಲ್ಲೆಗೆ ಸಂಬಂಧಿಸಿ ಮಾತನಾಡುವುದಾದರೆ, ನಿಮ್ಮ ಮತ್ತು ಶಾಸಕ ಅಭಯ್ ಪಾಟೀಲ್ ಅವರ ವಿಚಾರಗಳು ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿವೆ. ದ್ವೇಷದ ರಾಜಕಾರಣ ಆರೋಪವನ್ನು ಅವರು ನಿಮ್ಮ ಮೇಲೆ ಹೊರಿಸಿದ್ದಾರೆ. ಇದರ ಬಗ್ಗೆ?
ಸ.ಜಾ.: ದ್ವೇಷದ ರಾಜಕಾರಣ ಏನಿಲ್ಲ. 10 ವರ್ಷಗಳಲ್ಲಿ ಮಾಡಿರುವ ಕೆಲಸಗಳ ಬಗ್ಗೆ, ಜನರಿಗೆ ತೊಂದರೆ ಕೊಟ್ಟಿರುವ ಬಗ್ಗೆ ವರದಿ ಕೊಡಲು ಆದೇಶ ಮಾಡಿದ್ದೆ. ಶಾಸಕರಿದ್ದಾಗ ಅಧಿಕಾರ ದುರುಪಯೋಗ ಮಾಡಿಕೊಂಡದ್ದು, ಸ್ಮಾರ್ಟ್‌ಸಿಟಿ ಮಾಸ್ಟರ್ ಪ್ಲ್ಯಾನನ್ನು ತಮಗೆ ಬೇಕಾದಂತೆ ಬದಲಾವಣೆ ಮಾಡಿದ್ದು ಹೀಗೆ ಬಹಳಷ್ಟು ಆರೋಪಗಳು ಅವರ ಮೇಲಿವೆ. ಬೆಳಗಾವಿಯಲ್ಲಿ ಸುಮಾರು 60 ಅಂಗಡಿಗಳನ್ನು ಕಟ್ಟಿದ್ದಾರೆ. ಅವೆಲ್ಲವನ್ನೂ ಕಡಿಮೆ ಬೆಲೆಗೆ ಬಿಜೆಪಿ ಕಾರ್ಯಕರ್ತರಿಗೆ ಕೊಟ್ಟಿದ್ದಾರೆ. ಇದನ್ನು ಕೇಳಬಾರದೆ? ಜನ ನನಗೆ ದೂರು ಕೊಟ್ಟಾಗ ನ್ಯಾಯ ಒದಗಿಸಲು ಪ್ರಯತ್ನ ಮಾಡುತ್ತೇನೆ. ಇದರಲ್ಲಿ ವೈಯಕ್ತಿಕ ಸಂಘರ್ಷದ ವಿಚಾರವೇನಿಲ್ಲ. ಅವರ ಕಾಲಾವಧಿಯಲ್ಲಿ ಪೊಲೀಸರಿಂದಲೂ ಬಹಳ ಅನ್ಯಾಯವಾಗಿದೆ.
► ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧೆ ಮಾಡುವ ಯೋಚನೆ ಇದೆಯೇ? ನಿಮ್ಮ ಮಗಳ ಹೆಸರು ಕೂಡ ಕೇಳಿಬರುತ್ತಿದೆ.
ಸ.ಜಾ.: ನಾನು ಸ್ಪರ್ಧಿಸುವುದಿಲ್ಲ. ಬಹಳ ಜನ ಕಾರ್ಯಕರ್ತರಿದ್ದಾರೆ. ಅವರಿಗೆ ಅವಕಾಶ ಕೊಡಬೇಕೆಂಬ ಚಿಂತನೆ ನಡೆಯುತ್ತಿದೆ.
► ಲೋಕಸಭೆ ಚುನಾವಣೆಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ ಕಾಂಗ್ರೆಸ್‌ಗೆ ಏನು ನಿರೀಕ್ಷೆ ಇದೆ?
ಸ.ಜಾ.: ನಮ್ಮ ಪಕ್ಷಕ್ಕೆ ನಮ್ಮದೇ ಆದ ಮತಬ್ಯಾಂಕ್ ಇದೆ. ಸರಕಾರದಲ್ಲಿದ್ದೇವೆ. ಐದು ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ದೇಶದಲ್ಲಿ ಇಲ್ಲಿಯವರೆಗೆ ಯಾವುದೇ ಸರಕಾರ ಇಷ್ಟು ದೊಡ್ಡ ಮೊತ್ತದ ಗ್ಯಾರಂಟಿಯನ್ನು ಕೊಟ್ಟಿದ್ದಿಲ್ಲ. ಮುಂದೆಯೂ ಯಾವ ಸರಕಾರವೂ ಕೊಡುವುದು ಸಾಧ್ಯವಾಗುವುದಿಲ್ಲ. ಬಹಳಷ್ಟು ಬಡವರಿಗೆ, ದನಿಯಿಲ್ಲದವರಿಗೆ ನಮ್ಮ ಸರಕಾರ ಸಾಕಷ್ಟು ಸಹಾಯ ಮಾಡಿದೆ. ಆ ಆಧಾರದ ಮೇಲೆ ನಾವು ಮತಗಳನ್ನು ಕೇಳುತ್ತೇವೆ.
► ಇದನ್ನು ಮಾದರಿ ಎಂದು ಕರೆಯುತ್ತಿದ್ದೀರಿ. ಇದರ ಜೊತೆಗೆ ಶಿಕ್ಷಣ ಮತ್ತು ಆರೋಗ್ಯದ ಬಗ್ಗೆಯೂ ಗಮನ ಜಾಸ್ತಿಯಾಗಬೇಕು ಎನ್ನಿಸುವುದಿಲ್ಲವೆ?
ಸ.ಜಾ.: ಖಂಡಿತ ಆಗಬೇಕು. ಬಹಳ ದೊಡ್ಡ ಮಟ್ಟದಲ್ಲಿ ಆಗಬೇಕು. ಶಿಕ್ಷಣ, ಆರೋಗ್ಯ ಸೇರಿದಂತೆ ಮೂರ್ನಾಲ್ಕು ವಲಯಗಳಲ್ಲಿ ಬಹಳ ಪ್ರಗತಿ ಸಾಧಿಸಬೇಕಿದೆ.
► ಕರ್ನಾಟಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಬಗ್ಗೆ ಒಂದು ವರ್ಗಕ್ಕೆ ಅಸಹನೆ ಇದ್ದೇ ಇದೆ. ನಿಮ್ಮ ಸರಕಾರದಲ್ಲಿ ಅದನ್ನು ಸರಿದೂಗಿಸುವ ಪ್ರಯತ್ನ ಆಗುತ್ತಿದೆ. ಈ ಸಂದರ್ಭದಲ್ಲಿ, ಒಡೆದಾಳುವ ನೀತಿ, ಭಯದ ವಾತಾವರಣ ಇದರ ಬಗ್ಗೆ ಏನು ಹೇಳುವಿರಿ?
ಸ.ಜಾ.: ಎಲ್ಲರೂ ಒಂದೇ ಎಂಬ ಭಾವನೆಯಿಂದ ನಾವು ಇರಬೇಕಾಗುತ್ತದೆ. ಚುನಾವಣೆ ಬಂದಾಗ, ಘರ್ಷಣೆ, ಆರೋಪ, ಪ್ರತ್ಯಾರೋಪ ಇದ್ದೇ ಇರುತ್ತದೆ. ನಾವು ಎಲ್ಲರ ಪರವಾಗಿದ್ದರೆ ಅವರು ಸರಕಾರದ ಪರ ಇರುತ್ತಾರೆ. ಎಲ್ಲರನ್ನೂ ಒಂದೇ ದೃಷ್ಟಿಯಿಂದ ನೋಡುವ ಸರಕಾರ ಬರಬೇಕು.
ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ