ರಂಗಭೂಮಿ ವೃತ್ತಿಪರತೆ ಮೈಗೂಡಿಸಿಕೊಂಡ ಕಾಲವಿದು: ಡಾ.ಕೆ. ಮರುಳಸಿದ್ದಪ್ಪ
ಇಂದಿನ ನಾಟಕಗಳ ಕುರಿತು ತಿಳಿಸಿ ಸರ್?
ಕೆಎಂಎಸ್: ಎಪ್ಪತ್ತರ ದಶಕದ ಆ ಸಂದರ್ಭದಲ್ಲಿ ನಾಟಕ ಸಾಹಿತ್ಯ ಬಲವಾಗಿತ್ತು. ಇದಕ್ಕೆ ಸರಿಸಮವಾದ ಪ್ರಬುದ್ಧತೆ ರಂಗಭೂಮಿಗೆ ಇರಲಿಲ್ಲ. ಲಂಕೇಶ್, ಚಂಪಾ, ಗಿರೀಶ್ ಕಾರ್ನಾಡ್, ಕಂಬಾರ ಮೊದಲಾದವರು ಬಂದರು. ಆದರೆ ಈಗ ಇರುವ ವ್ಯಾಪಕ ರಂಗ ಚಳವಳಿ ಇರಲಿಲ್ಲ. ಈಗ ಆರು ರಂಗಾಯಣಗಳು, ಕರ್ನಾಟಕ ನಾಟಕ ಅಕಾಡಮಿ, ನೀನಾಸಂ, ಸಾಣೇಹಳ್ಳಿ, ಎನ್ಎಸ್ಡಿಯಿಂದ ಬಂದ ಸಾವಿರಾರು ರಂಗಕರ್ಮಿಗಳು ರಂಗ ಚಳವಳಿ ನಡೆಸುತ್ತಿದ್ದಾರೆ. ಇದು ರಂಗಭೂಮಿಯ ದೃಷ್ಟಿಯಿಂದ ಒಳ್ಳೆಯ ಕಾಲ. ಆದರೆ ನಾಟಕ ಸಾಹಿತ್ಯದಲ್ಲಿ ಉತ್ಸಾಹ ಕಾಣಿಸುತ್ತಿಲ್ಲ. ಅಂದು ಸಾಹಿತ್ಯದ ಭಾಗವಾಗಿತ್ತು ನಾಟಕ. ಇಂದು ನಾಟಕದ ಭಾಗವಾಗಿ ಸಾಹಿತ್ಯವಾಗಿದೆ. ಒಟ್ಟಿನಲ್ಲಿ ರಂಗಭೂಮಿ ವ್ಯಾಪಕವಾಗಿ, ವೈವಿಧ್ಯಮಯವಾಗಿ ಅನೇಕ ಪ್ರತಿಭಾವಂತರು ಹುಟ್ಟಿದ ರಂಗ ಚಳವಳಿ ಈಗಿನದು.
ರಂಗ ಚಳವಳಿ ಈಗ ಸದೃಢವಾಗಿದೆ?
ಕೆಎಂಎಸ್: ಹೌದು. ರಂಗ ಚಳವಳಿ ಸದೃಢವಾಗಿರುವುದರಿಂದ ರಂಗಭೂಮಿಯ ಬಗ್ಗೆ ಈಗ ನಾಟಕಕಾರರು ಪ್ರಜ್ಞಾಪೂರ್ವಕವಾಗಿ ಬರೆಯುತ್ತಿದ್ದಾರೆ. ಹಾಗಾಗಿ ಎರಡೂ ಸಮತೂಕದ ಚಳವಳಿ ಈಗಿನದು. ಮುಖ್ಯವಾಗಿ ಸಾಹಿತ್ಯವು ರಂಗಭೂಮಿಯನ್ನು ಡಾಮಿನೇಟ್ ಮಾಡ್ತಿಲ್ಲ. ಹಾಗೆಯೇ ರಂಗಭೂಮಿಯು ಸಾಹಿತ್ಯವನ್ನು ಡಾಮಿನೇಟ್ ಮಾಡ್ತಿಲ್ಲ. ಎರಡೂ ಜೊತೆಯಾಗಿ ಹೋಗುತ್ತಿವೆ. ಶ್ರೇಷ್ಠ, ಕನಿಷ್ಠ ಇಲ್ಲ. ಆಯಾ ಕಾಲದ ಒತ್ತಡಕ್ಕೆ ಅನುಸಾರವಾಗಿ ರಂಗ ಚಳವಳಿ ಆಗುತ್ತಿದೆ. ಇದು ಒಂದು ರೀತಿಯ ಆಲ್ ಇಂಡಿಯಾ ಫಿನಾಮಿನಾ ಅಂದರೆ ಅಖಿಲ ಭಾರತ ವ್ಯಾಪ್ತಿಯಲ್ಲಿ ರಂಗ ಚಳವಳಿಗೆ ಪೂರಕವಾಗಿ ಸಾಹಿತ್ಯದ ಚಳವಳಿಯಿಲ್ಲ. ಇದು ಆಯಾ ಕಾಲದ ಸಾಂಸ್ಕೃತಿಕ ಒತ್ತಡಗಳಿಗೆ ಅನುಸಾರವಾಗಿ ರಂಗಭೂಮಿ ರೂಪ ಪಡೆಯುತ್ತದೆ.
ನಾಟಕಗಳು ಹೆಚ್ಚಿವೆ, ನಾಟಕಕಾರರು ಹೆಚ್ಚಿದ್ದಾರೆ...
ಕೆಎಂಎಸ್: ರಂಗಭೂಮಿಗೆ ಪ್ರತಿಭಾವಂತರು ಬರುತ್ತಿದ್ದಾರೆ, ನಾಟಕಕಾರರು ಬರುತ್ತಿದ್ದಾರೆ. ಸಾಹಿತ್ಯಕ್ಕಿಂತ ಹೆಚ್ಚಾಗಿ ರಂಗಭೂಮಿಯನ್ನು ಚೆನ್ನಾಗಿ ತಿಳಿದುಕೊಂಡು ನಾಟಕಕಾರರು ಬರುತ್ತಿದ್ದಾರೆ. ಅಂಥವರಿಗೆಲ್ಲ ರಂಗಭೂಮಿಯು ಜೀವನಾಡಿಯಾಗಿದೆ.
ಶ್ರೀರಂಗ, ಕೈಲಾಸಂ, ಸಂಸ, ಗಿರೀಶ್ ಕಾರ್ನಾಡ್, ಕಂಬಾರ, ಚಂಪಾ ಮೊದಲಾದವರು ಸಾಹಿತ್ಯ ಪರಂಪರೆಯ ಮುಂದುವರಿದ ಭಾಗವಾಗಿ ನಾಟಕಗಳನ್ನು ರಚಿಸಿದರು. ಇಂದು ರಂಗಭೂಮಿಯ ಪರಂಪರೆಯ ಭಾಗವಾಗಿ ನಾಟಕಗಳು ಬರುತ್ತಿವೆ. ಇದು ರಂಗಭೂಮಿಗೆ ಒಳ್ಳೆಯ ಕಾಲ. ಹೆಚ್ಚು ವೃತ್ತಿಪರತೆ ಮೈಗೂಡಿಸಿಕೊಂಡ ಕಾಲ ಇದು. ಅವತ್ತು ಉತ್ಸಾಹ ಇತ್ತು; ವೃತ್ತಿಪರತೆ ಇರಲಿಲ್ಲ. ಬಿ.ವಿ.ಕಾರಂತ, ಪ್ರಸನ್ನ, ಬಿ.ಜಯಶ್ರೀ, ಸಿ.ಬಸವಲಿಂಗಯ್ಯ ಮೊದಲಾದವರು ರಂಗ ಪರಂಪರೆ ಕಟ್ಟಿ ಬೆಳೆಸಿದರು. ಇದರಿಂದ ವೃತ್ತಿಪರತೆ ಕಾಣಬಹುದು. ಈಗ ಹವ್ಯಾಸಿ ರಂಗಭೂಮಿ ಎನ್ನುವುದೇ ಇಲ್ಲ. ನಾಟಕ ಆಡುವ ಎಲ್ಲ ತಂಡಗಳೂ ವೃತ್ತಿಪರವಾಗಿವೆ.
ನಾಟಕಗಳನ್ನು ನೋಡುವ ಪ್ರೇಕ್ಷಕರೂ ಹೆಚ್ಚಿದ್ದಾರೆ...
ಕೆಎಂಎಸ್: ಹೌದು. ವೃತ್ತಿಪರತೆ ಇರುವುದರಿಂದ ಪ್ರೇಕ್ಷಕರ ಸಂಖ್ಯೆಯೂ ಹೆಚ್ಚಿದೆ. ಇದರಿಂದ ಪ್ರೇಕ್ಷಕರಲ್ಲಿ ಅಭಿರುಚಿ ಬೆಳೆದಿದೆ. ಹಿಂದೆ ಬೆಂಗಳೂರು, ಮೈಸೂರು, ಧಾರವಾಡದಲ್ಲಿ ಮಾತ್ರ ನಾಟಕಗಳಾಗುತ್ತಿದ್ದವು. ಈಗ ಸಾಣೇಹಳ್ಳಿಯಂಥ ಸಣ್ಣ ಗ್ರಾಮ ಕೂಡಾ ಥಿಯೇಟರ್ ಸೆಂಟರ್ ಆಗಿದೆ. ಅಲ್ಲಿ ನಾಟಕ ನೋಡಲು ಬರುವವರು, ಆಡುವವರು ಹೊಸ ತಲೆಮಾರಿನವರು. ಅಲ್ಲಿನ ರಂಗಶಾಲೆ, ಶಿವಸಂಚಾರವೆಂಬ ತಿರುಗಾಟವು ಹೊಸ ನಾಟಕಗಳನ್ನು ನೋಡುವ ಬಗೆಯನ್ನು ಕಲಿಸಿತು.
ಸಾಣೇಹಳ್ಳಿಯಲ್ಲಿ ರಂಗಶಾಲೆ ಶುರುವಾಗಲು ಒತ್ತಾಯಿಸಿದವರು ನೀವು?
ಕೆಎಂಎಸ್: ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷನಾಗಿದ್ದಾಗ ಸಾಣೇಹಳ್ಳಿಯಲ್ಲಿ ದಲಿತ ಮಕ್ಕಳ ರಂಗ ತರಬೇತಿ ಶಿಬಿರ ನಡೆಸಲು ಅವಕಾಶ ಕೊಟ್ಟವರು ಪಂಡಿತಾರಾಧ್ಯ ಸ್ವಾಮೀಜಿ. ಇದಕ್ಕಾಗಿ ಆಗ ನಾಟಕ ಅಕಾಡಮಿ ಸದಸ್ಯರಾಗಿದ್ದ ಪತ್ರಕರ್ತರೂ ಆಗಿದ್ದ ಗುಡಿಹಳ್ಳಿ ನಾಗರಾಜ ಅವರು ಸ್ವಾಮೀಜಿ ಅವರನ್ನು ಕಂಡಿದ್ದರು. ಅದು 1996ರ ಡಿಸೆಂಬರ್ ತಿಂಗಳಿಂದ 1997ರ ಜನವರಿ ಮೊದಲ ವಾರದವರೆಗೆ ಶಿಬಿರ ಯಶಸ್ವಿಯಾಗಿ ನಡೆಯಿತು. ಇದರ ಸಮಾರೋಪಕ್ಕೆ ಅತಿಥಿಯಾಗಿ ಸಿಜಿಕೆ ಭಾಗವಹಿಸಿದ್ದರು. ಆಮೇಲೆ ಸಾಣೇಹಳ್ಳಿಯಲ್ಲಿ ಏರ್ಪಡಿಸಿದ್ದ ಭಾರತೀಯ ರಂಗಶಾಲೆಗಳ ಸಮಾವೇಶದಲ್ಲಿ ಭಾಗವಹಿಸಿದೆ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತರ ಸಮಾರಂಭದಲ್ಲೂ ಪಾಲ್ಗೊಂಡಿದ್ದೆ.
ಆಮೇಲೆ ಸಾಣೇಹಳ್ಳಿಯಲ್ಲಿ ರಂಗಶಾಲೆ ಆರಂಭವಾಗಬೇಕೆಂದು ಸ್ವಾಮೀಜಿ ಅವರನ್ನು ಸಿಜಿಕೆಯೊಂದಿಗೆ ಒತ್ತಾಯಿಸಿದೆ. ಇದರ ಪರಿಣಾಮ 2008ರಲ್ಲಿ ‘ಶ್ರೀ ಶಿವಕುಮಾರ ರಂಗಪ್ರಯೋಗ ಶಾಲೆ’ ಶುರುವಾಯಿತು. ಶಾಲೆಗೆ ಬೇಕಾದ ಪಠ್ಯ ರೂಪಿಸುವಲ್ಲೂ ಜೊತೆಯಾದೆ. 2004ರಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ ಆರಂಭಿಸಿದಾಗ ಮೊದಲ ಮೂರು ವರ್ಷ ಆಯ್ಕೆ ಸಮಿತಿಯಲ್ಲಿದ್ದೆ. 2012ರಲ್ಲಿ ನನಗೇ ಶಿವಕುಮಾರ ಪ್ರಶಸ್ತಿ ಕೊಟ್ಟರು. ಇದನ್ನು ಹೇಳುವ ಉದ್ದೇಶ; ರಾಜ್ಯದಲ್ಲಿ ಸಾವಿರಾರು ಮಠಗಳಿವೆ. ಅವೆಲ್ಲ ಶಾಲೆ, ಕಾಲೇಜು ತೆರೆದು ಹಾಸ್ಟೆಲ್ಗಳ ಮೂಲಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ನೆರವಾಗಿವೆ. ಆದರೆ ನಾಟಕಗಳ ಮೂಲಕ ಹೊಸ ಪ್ರೇಕ್ಷಕರನ್ನು ಹುಟ್ಟು ಹಾಕಿದ ಶ್ರೇಯಸ್ಸು ಪಂಡಿತಾರಾಧ್ಯ ಸ್ವಾಮೀಜಿಗೆ ಸಲ್ಲಬೇಕು. ಅಲ್ಲಿ ಪ್ರತೀ ವರ್ಷ ನಡೆಯುವ ರಾಷ್ಟ್ರೀಯ ನಾಟಕೋತ್ಸವದಲ್ಲಿ ಐದಾರು ಸಾವಿರ ಜನರು ಭಾಗವಹಿಸುವುದು ಸಾಮಾನ್ಯ ಮಾತಲ್ಲ. ಹಾಗೆಯೇ ಅವರ ಶಾಲೆಯ ವಿದ್ಯಾರ್ಥಿಗಳು ನಾಟಕ ನೋಡುತ್ತ ಬೆಳೆಯುತ್ತಾರೆನ್ನುವುದು ಬಹುಮುಖ್ಯ. ‘ಶಿವಸಂಚಾರ’ ಎಂಬ ತಿರುಗಾಟದ ಮೂಲಕ ರಾಜ್ಯದ ವಿವಿಧೆಡೆ ನಾಟಕಗಳನ್ನು ಪ್ರದರ್ಶಿಸುವುದು ಮಹತ್ವವಾದುದು. ರಂಗಶಾಲೆ ಮೂಲಕ ಹೊರಬಂದ ನೂರಾರು ವಿದ್ಯಾರ್ಥಿಗಳು ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ.
ಸಾಂಸ್ಕೃತಿಕ ಸಂಘಟನೆಯಾದ ಸಮುದಾಯದಲ್ಲಿ ಸಕ್ರಿಯರಾಗಿರುವ ಕುರಿತು ಹೇಳಿ ಸರ್
ಕೆಎಂಎಸ್: ಬೆಂಗಳೂರು ಅಂದರೆ ಕನಸಾಗಿತ್ತು. 1964ರಲ್ಲಿ ಬೆಂಗಳೂರಿಗೆ ಬಂದೆ. 1965ರಲ್ಲಿ ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕನಾದೆ. ಅಲ್ಲಿಂದ ದೊಡ್ಡ ಬಳಗ ಕಟ್ಟಿಕೊಂಡೆ. ಈ ಬಳಗವೇ ಜೀವಸಂಜೀವಿನಿ. ಯಾವುದೇ ಜಾತಿ, ಧರ್ಮ ಮೀರಿದ್ದು. ಸಮಾನ ಅಭಿರುಚಿ, ಸಮಾನ ಆಸಕ್ತಿಗಳೇ ಮಾನದಂಡಗಳು.
ಹೀಗಿದ್ದಾಗ ದೇಶದಲ್ಲಿ ತುರ್ತು ಪರಿಸ್ಥಿತಿಯಿದ್ದ ಸಂದರ್ಭದಲ್ಲಿ ರಂಗಭೂಮಿ ಮೂಲಕ ಸಕ್ರಿಯವಾಗಿರೋಣವೆಂದುಕೊಂಡಾಗ ಹುಟ್ಟಿಕೊಂಡಿದ್ದು ಸಮುದಾಯ. ಆಗ ದಿಲ್ಲಿಯ ಎನ್ಎಸ್ಡಿ ಮುಗಿಸಿಕೊಂಡು ಪ್ರಸನ್ನ ಅವರು ಬಂದಿದ್ದರು. ಆಮೇಲೆ ಸಿಜಿಕೆ ಹಾಗೂ ಪ್ರಸನ್ನ ಅವರು ಸಾಂಸ್ಕೃತಿಕ ಜಾಥಾಗಳನ್ನು ಶುರು ಮಾಡಿದರು. ಬೀದಿನಾಟಕಗಳ ಮೂಲಕ ಹೊಸತನ್ನು ತಂದರು. ಬೆಂಗಳೂರು ಸಮುದಾಯದ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದೆ. ರಾಜ್ಯದ ವಿವಿಧೆಡೆ ರಂಗ ತರಬೇತಿ ಶಿಬಿರ, ನಾಟಕೋತ್ಸವಗಳಾದವು.
1995ರಲ್ಲಿ ಕರ್ನಾಟಕ ನಾಟಕ ಅಕಾಡಮಿ ಅಧ್ಯಕ್ಷನಾಗಿದ್ದಾಗ ಜಿಲ್ಲಾ ಕೇಂದ್ರಗಳಿಗೆ ರಂಗಚಟುವಟಿಕೆಗಳನ್ನು ವಿಸ್ತರಿಸಿದೆ. ರಂಗಾಯಣದ ರಂಗ ಸಮಾಜದ ಸದಸ್ಯನಾಗಿದ್ದೆ. ಹೀಗೆ ರಂಗಭೂಮಿಯ ನಿರಂತರ ಒಡನಾಟದಿಂದ ರಂಗಕ್ರಿಯೆಗಳನ್ನು ಗಮನಿಸುತ್ತಿರುವೆ. ಹೊಸತನ್ನು ಕಟ್ಟಿಕೊಡಬೇಕೆಂಬ ಹೊಸಬರ ಉತ್ಸಾಹ ದೊಡ್ಡದು.
ಅಸಮಾನತೆ ಇರುವ ಈ ಸಮಾಜದಲ್ಲಿ ನ್ಯಾಯ, ಸಮಾನತೆ ಕಂಡುಕೊಳ್ಳುವುದು ಮುಖ್ಯ. ಈ ಅರಿವು ನಮಗಿರಬೇಕು. ಇದಕ್ಕಾಗಿ ಪ್ರತಿಭಟನೆಯ ಧ್ವನಿಯನ್ನು ರಂಗಭೂಮಿ ಮೂಲಕವೂ ನಿರಂತರವಾಗಿ ಮುಂದುವರಿಸಿಕೊಂಡು ಹೋಗಬೇಕು.