ವರ್ಗಾವಣೆ: ಸರಕಾರಿ ಸುತ್ತೋಲೆಯನ್ನೇ ಉಲ್ಲಂಘಿಸಿದ ಮಹಿಳಾ-ಮಕ್ಕಳ ಕಲ್ಯಾಣ ಇಲಾಖೆ
ಬೆಂಗಳೂರು, ಅ.30: ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ, ನಿಯೋಜನೆಗೊಳಿಸುವುದನ್ನು ಸರಕಾರವೇ ನಿರ್ಬಂಧಿಸಿದ್ದರೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಯು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ, ಶಿಶು ಅಭಿವೃದ್ಧಿ ಯೋಜನಾ ಅಧಿಕಾರಿ ಹುದ್ದೆಗೆ ಮೂವರು ಅಧಿಕಾರಿಗಳನ್ನು ವರ್ಗಾಯಿಸಿರುವುದು ಇದೀಗ ಬಹಿರಂಗವಾಗಿದೆ.
ಸರಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಎಲ್ಲ ಇಲಾಖೆಗಳ ಮುಖ್ಯಸ್ಥರಿಗೆ ಸುತ್ತೋಲೆಯನ್ನು (2023ರ ಸೆ.12) ಹೊರಡಿಸಿದ್ದ ಒಂದೇ ತಿಂಗಳ ಅಂತರದಲ್ಲೇ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಸರಕಾರದ ಸುತ್ತೋಲೆಯನ್ನೇ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉಲ್ಲಂಘಿಸಿರುವುದು ಮುನ್ನೆಲೆಗೆ ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ದಾಖಲೆಗಳು ‘the-file.in’ ಗೆ ಲಭ್ಯವಾಗಿವೆ.
ಸುತ್ತೋಲೆಯಲ್ಲೇನಿತ್ತು?:
ಯಾವುದೇ ಇಲಾಖೆಯಲ್ಲಿಯಾದರೂ ಕೆಳ ದರ್ಜೆಯ ಅಧಿಕಾರಿಗಳನ್ನು ಮೇಲ್ದರ್ಜೆ ಹುದ್ದೆಗೆ ಸ್ವಂತ ವೇತನ ಶ್ರೇಣಿಯ ಆಧಾರದ ಮೇಲೆ ನೇಮಕ ಮಾಡುವುದನ್ನು, ನಿಯೋಜನೆಗೊಳಿಸುವುದನ್ನು ನಿರ್ಬಂಧಿಸಿದೆ. ಈ ಮೇಲಿನ ಸೂಚನೆಯನ್ನು ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಸಿಬ್ಬಂದಿ ಮತ್ತು ಆಡಳಿತ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ವೀರಭದ್ರ ಅವರು 2023ರ ಸೆ.12ರಂದೇ ಹೊರಡಿಸಿದ್ದ ಸುತ್ತೋಲೆಯಲ್ಲಿ ಎಚ್ಚರಿಕೆ ನೀಡಿದ್ದರು.
ಆದರೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಮೂವರು ಉಪ ನಿರ್ದೇಶಕರನ್ನು ಸ್ವಂತ ವೇತನ ಶ್ರೇಣಿ ಮೇಲೆ ವರ್ಗಾಯಿಸಿ 2023ರ ಅಕ್ಟೋಬರ್ 11ರಂದು ಅಧಿಸೂಚನೆ ಹೊರಡಿಸಿದೆ. ವಿಜಯಪುರ ಜಿಲ್ಲೆಯ ಸಿಂಧಗಿಯಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿ ಬಸವರಾಜ ಜಿಗಳೂರು ಅವರನ್ನು ವಿಜಯಪುರ ಜಿಲ್ಲೆಯಲ್ಲಿ ಖಾಲಿ ಇದ್ದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಹುದ್ದೆಗೆ (ಸ್ವಂತ ವೇತನ ಶ್ರೇಣಿ) ವರ್ಗಾಯಿಸಲಾಗಿದೆ.
ಅದೇ ರೀತಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಯಾದ ಶಿವಮೂರ್ತಿ ಕುಂಬಾರ ಅವರನ್ನು ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಯೋಜನೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹುದ್ದೆಗೆ ನಿಯುಕ್ತಿಗೊಳಿಸಲಾಗಿದೆ. ಹಾಗೆಯೇ ತರೀಕೆರೆ ಯೋಜನೆಯ ಜ್ಯೋತಿ ಲಕ್ಷ್ಮೀ ಅವರನ್ನು ಹೊಳೆ ನರಸೀಪುರ ತಾಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿ ( ಸ್ವಂತ ವೇತನ ಶ್ರೇಣಿ) ಹುದ್ದೆಗೆ ವರ್ಗಾಯಿಸಿರುವುದು ಅಧಿಸೂಚನೆಯಿಂದ ಗೊತ್ತಾಗಿದೆ.
ಈ ಅಧಿಸೂಚನೆ ಹೊರಡಿಸಲು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ಅನುಮೋದನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೇ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಬೇರೆ ಇಲಾಖೆಯಿಂದ ನಿಯೋಜನೆಗೆ ಅವಕಾಶ ಕಲ್ಪಿಸದೇ ಇರುವ ಹುದ್ದೆಗಳಿಗೆ ನಿಯೋಜನೆ ಮಾಡುವುದನ್ನು ನಿರ್ಬಂಧಿಸಿತ್ತು.
ಮಾತೃ ಇಲಾಖೆಗೆ ಹಿಂದಿರುಗಿಸಲು ನಿರ್ದೇಶನ
ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿಯೊಂದಿಗೆ ನಿಯೋಜನೆ ಮೇಲೆ ಮುಂದುವರಿದಿರುವ ಅಧಿಕಾರಿ, ನೌಕರರು ಒಂದು ವೇಳೆ ಗರಿಷ್ಠ ಐದು ವರ್ಷಗಳ ನಿಯೋಜನಾ ಅವಧಿಯನ್ನು ಪೂರ್ಣಗೊಳಿಸಿದ್ದಲ್ಲಿ ಹಾಗೂ ಸರಕಾರದ ವಿಶೇಷ ಆದೇಶಗಳಿರದೇ ಸದರಿ ನಿಯೋಜನೆಯಲ್ಲಿ ಮುಂದುವರಿದಿದ್ದಲ್ಲಿ ಅಂತವರನ್ನು ಮಾತೃ ಇಲಾಖೆಗೆ ಹಿಂದಿರುಗಿಸಲು ಕೂಡಲೇ ಕ್ರಮ ವಹಿಸಬೇಕು ಎಂದೂ ನಿರ್ದೇಶನ ನೀಡಲಾಗಿತ್ತು. ಹಾಗೆಯೇ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ನಿಯೋಜನೆಗೆ ಅವಕಾಶವಿರುವ ಹುದ್ದೆಗಳಿಗೆ ಮಾತ್ರ ಆ ಹುದ್ದೆಗೆ ಸಮಾನ ದರ್ಜೆ, ಹುದ್ದೆ ಹೊಂದಿರುವ ಅಧಿಕಾರಿ, ನೌಕರರನ್ನು ಅನಿವಾರ್ಯ ಪ್ರಸಂಗಗಳಲ್ಲಿ ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ನಿಯಮಾನುಸಾರ ನಿಯೋಜನೆಗೊಳಿಸಬೇಕು ಎಂದೂ ಹೇಳಲಾಗಿತ್ತು.