ಸಮುದಾಯ ಅಭಿವೃದ್ಧಿಯ ಹಾದಿಯಲ್ಲಿ ಎರಡು ದಶಕಗಳು
ಮಾರ್ವಾಡ, ಉತ್ತರ ಪ್ರದೇಶದ ಲಲಿತ್‌ಪುರ ಜಿಲ್ಲೆಯ ಒಂದು ಕುಗ್ರಾಮ. ಚಿತ್ರಕೂಟದ ಸ್ವಯಂಸೇವಾ ಸಂಸ್ಥೆಯಿಂದ ಸುಮಾರು 20 ವರ್ಷಗಳ ಹಿಂದೆ ಯುವ ಸಾಮಾಜಿಕ ಕಾರ್ಯಕರ್ತ ಬಸುದೇವ್ ಇಲ್ಲಿಗೆ ಬರಲು ತಯಾರಾದರು. ಊಳಿಗಮಾನ್ಯ ವ್ಯವಸ್ಥೆಯ ದಬ್ಬಾಳಿಕೆಯಿದ್ದ ಆ ಪ್ರದೇಶದಲ್ಲಿ ಕೆಲಸ ಮಾಡಲು ಯಾರೊಬ್ಬರೂ ಮುಂದಾಗುತ್ತಿರಲಿಲ್ಲ. ಅಂತಹ ಹೊತ್ತಲ್ಲಿ ಬಸುದೇವ್ ಈ ದೊಡ್ಡ ನಿರ್ಧಾರವನ್ನು ತೆಗೆದುಕೊಂಡಿದ್ದರು. ಆದರೂ ಕುಟುಂಬದೊಂದಿಗೆ ಇಲ್ಲಿಗೆ ಬರುವುದು ಅತ್ಯಂತ ಕಷ್ಟಕರ ನಿರ್ಧಾರವಾಗಿತ್ತು.
ಈ ಹಿಂದೆಯೂ ಸಹ ಸಾಮಾಜಿಕ ಹೋರಾಟದಲ್ಲಿ ಕ್ರಿಯಾಶೀಲರಾಗಿರುವುದರ ಜೊತೆಗೇ, ಅವರು ಪ್ರಮುಖ ಹಿಂದಿ ಪತ್ರಿಕೆಗಳಿಗೆ ಸಾಮಾಜಿಕ-ಆರ್ಥಿಕ ಅನ್ಯಾಯಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ವರದಿ ಮಾಡುವಲ್ಲಿ ತೊಡಗಿಸಿಕೊಂಡಿದ್ದರು ಮತ್ತು ಈ ವರದಿಗಳು ಸಾಕಷ್ಟು ಗಮನ ಸೆಳೆದಿದ್ದವು. ಅವರು ಇಲ್ಲಿಯೂ ಇದೇ ರೀತಿಯ ಪ್ರಯತ್ನಗಳನ್ನು ಮಾಡಲು ನಿರ್ಧರಿಸಿದರು. ಆದರೆ ಅಷ್ಟೇ ಬೇಗ ಅವರಿಗೆ ತೊಂದರೆಗಳೂ ಎದುರಾಗತೊಡಗಿದವು.
ಅವರು ಇಲ್ಲಿ ಪ್ರಾರಂಭಿಸಿದ ಹೊಸ ಸಂಸ್ಥೆ ಬುಂದೇಲ್‌ಖಂಡ್ ಸೇವಾ ಸಂಸ್ಥಾನ (ಬಿಎಸ್‌ಎಸ್). ಸಹಾರಿಯಾ ಆದಿವಾಸಿಗಳೂ ಸೇರಿದಂತೆ ಬಡ ಜನರು ತಮಗೆ ಮಂಜೂರು ಮಾಡಲಾದ ಭೂಮಿ ಪಟ್ಟಾಗಳನ್ನು ಪಡೆಯಲಾರದೆ ಪರದಾಡುವ ಪ್ರಕರಣಗಳಲ್ಲಿ ಅವರ ಪರವಾಗಿ ಈ ಸಂಸ್ಥೆ ಹೋರಾಟ ಮಾಡುತ್ತದೆ. ಮೊದಲಿಗೆ ಕೆಲವು ಪ್ರಮುಖ ಅಧಿಕಾರಿಗಳು ಈ ಸಂಸ್ಥೆಯಿಂದ ಪದೇ ಪದೇ ಇಂತಹ ದೂರುಗಳು ಬರತೊಡಗಿದಾಗ ಸಿಟ್ಟಾದರು. ಆದರೆ ಅವರಲ್ಲಿ ಒಬ್ಬರು ತನಿಖೆಗೆ ಬಂದಾಗ ವಾಸ್ತವ ಅರಿತರು. ಅಂತಹ ದೂರುಗಳ ಬಗ್ಗೆ ಸಂತ್ರಸ್ತರಿಂದಲೇ ಸತ್ಯ ಗೊತ್ತಾದಾಗ, ಆ ಹಿರಿಯ ಅಧಿಕಾರಿಗೆ ಬಿಎಸ್‌ಎಸ್ ಬಗ್ಗೆ ವಿಶೇಷ ಗೌರವ ಮೂಡಿತು. ಆನಂತರದ ಬಿಎಸ್‌ಎಸ್ ಹೋರಾಟ ಸುಮಾರು 280 ಕುಟುಂಬಗಳಿಗೆ ಭೂಮಿ ಪಡೆಯಲು ನೆರವಾಯಿತು.
ಆದರೂ ಶೀಘ್ರದಲ್ಲೇ ಈ ಸಂಘಟನೆ ಮತ್ತೊಂದು ಹೊಸ ಕಷ್ಟಕ್ಕೆ ಸಿಲುಕಿತು. ಆಹಾರದ ಕೊರತೆಯುಂಟಾದ ವರ್ಷ ಹುಲ್ಲಿನಿಂದ ಮಾಡಿದ ರೊಟ್ಟಿಗಳನ್ನು ತಿನ್ನಲು ಬಲವಂತಪಡಿಸಲಾಗಿದೆ ಎಂದು ಸಹಾರಿಯಾ ಬುಡಕಟ್ಟು ಜನಾಂಗದ ಅನೇಕರು ದೂರಿದ್ದರು. ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ ಲೋಪದಿಂದ ಪರಿಸ್ಥಿತಿ ಉಲ್ಬಣಗೊಂಡಿತು. ಇದು ಸಾರ್ವಜನಿಕ ವಿತರಣಾ ವ್ಯವಸ್ಥೆಯನ್ನು ಸುಧಾರಿಸುವ ಅಭಿಯಾನಕ್ಕೆ ಕಾರಣವಾಯಿತು. ಅಗ್ಗದ ದರದಲ್ಲಿ ಆಹಾರ ಧಾನ್ಯ ಪೂರೈಕೆಗಾಗಿ ಸುಮಾರು 1,600 ಪಡಿತರ ಚೀಟಿಗಳನ್ನು ಶೀಘ್ರದಲ್ಲೇ ಮಂಜೂರು ಮಾಡಲಾಯಿತು.
ಭ್ರಷ್ಟಾಚಾರದ ಜಾಲದಲ್ಲಿ ಸಿಲುಕಿಕೊಳ್ಳದೆ, ಹಲವಾರು ಹಂತಗಳಲ್ಲಿ ಸರಕಾರದ ಯೋಜನೆಗಳ ಪ್ರಯೋಜನ ಪಡೆಯಲು ಜನರಿಗೆ ಬಿಎಸ್‌ಎಸ್ ಸಹಾಯ ಮಾಡಿತು.
ಬಿಎಸ್‌ಎಸ್‌ನ ಹಿಂದಿನ ಅನೇಕ ಕೆಲಸಗಳು ದುರ್ಬಲ ವರ್ಗಗಳ ಹಕ್ಕುಗಳ ಪರ ಹೋರಾಡುವುದಕ್ಕೆ ಹೆಚ್ಚಾಗಿ ಸಂಬಂಧಿಸಿದ್ದವಾದರೂ, ನಂತರದ ಹಂತದಲ್ಲಿ ಈ ಕೆಲಸವು ಗಣನೀಯ ಪ್ರಮಾಣದಲ್ಲಿ ವ್ಯಾಪಕ ವೈವಿಧ್ಯದೊಂದಿಗೆ ಬೆಳೆದಿದೆ. ಆದಾಗ್ಯೂ, ಕೆಲವು ಗ್ರಾಮಗಳಲ್ಲಿ ನ್ಯಾಯ ಸಂಬಂಧಿತ ಕೆಲಸವನ್ನು ಅದು ಮುಂದುವರಿಸಿದೆ ಮತ್ತು ಹೊಸದಾಗಿ ಆರಂಭಿಸಿದ್ದ ವಿವಿಧ ರಚನಾತ್ಮಕ ಕೆಲಸಗಳಲ್ಲಿ ಕೂಡ ದುರ್ಬಲ ವರ್ಗಗಳಿಗೆ ಸಹಾಯ ಮಾಡುವ ದಿಸೆಯಲ್ಲಿ ವಿಶೇಷ ಕಾಳಜಿಯನ್ನು ವಹಿಸಿದೆ. ನಿರ್ದಿಷ್ಟವಾಗಿ, ನರೇಗಾ ಯೋಜನೆಯ ವ್ಯಾಪಕ ಅನುಷ್ಠಾನ ಮತ್ತು ಸಕಾಲಕ್ಕೆ ಸರಿಯಾದ ವೇತನ ಪಾವತಿಯನ್ನು ಖಚಿತಪಡಿಸಿಕೊಳ್ಳುವ ದಿಕ್ಕಿನಲ್ಲಿ ಬಿಎಸ್‌ಎಸ್ ಹೆಚ್ಚು ಸಕ್ರಿಯವಾಗಿದೆ.
ಕಾಲಾನಂತರದಲ್ಲಿ ನೀರಿನ ಸಂರಕ್ಷಣೆಗೆ ಬಿಎಸ್‌ಎಸ್ ಹೆಚ್ಚಿನ ಆದ್ಯತೆ ನೀಡಿತು. ಕೃಷಿ ಹೊಂಡಗಳು, ಸಣ್ಣ ಚೆಕ್ ಡ್ಯಾಂಗಳು ಮತ್ತು ಒಡ್ಡು ಕಟ್ಟುವುದಕ್ಕೆ ಒತ್ತು ನೀಡಲಾಯಿತು. ಆರಂಭಿಕ ಹಂತದಲ್ಲಿ, ಬಂದೈ ನದಿಯ ನೀರಿನ ಸದ್ಬಳಕೆಗೆ ಬಿಎಸ್‌ಎಸ್ ವಿಶೇಷ ಕೆಲಸ ಮಾಡಿತು. ಬಹುಶಃ ಇತ್ತೀಚಿನ ದಿನಗಳಲ್ಲಿ ಅದು ಕೈಗೆತ್ತಿಕೊಂಡ ಅತ್ಯಂತ ಪರಿಣಾಮಕಾರಿ ಕೆಲಸಗಳು ಹಲವಾರು ನದಿಗಳು ಮತ್ತು ನದಿಗಳ ಪುನರುಜ್ಜೀವನಕ್ಕೆ ಸಂಬಂಧಿಸಿವೆ. ಇಂಥ ಕೆಲಸಗಳನ್ನು ಮಾಡಬಹುದಾದ ಸ್ಥಳಗಳನ್ನು ಗುರುತಿಸುವಲ್ಲಿಂದ ಹಿಡಿದು, ಅವುಗಳನ್ನು ಪಂಚಾಯತ್‌ಗಳು ಮತ್ತು ಸರಕಾರದ ಗಮನಕ್ಕೆ ತರುವುದರವರೆಗೆ ಅದು ತೊಡಗಿಸಿಕೊಳ್ಳುತ್ತದೆ. ಇದಕ್ಕಾಗಿ ಸಮುದಾಯಗಳನ್ನು ಸಜ್ಜುಗೊಳಿಸುವ ಸಂದರ್ಭದಲ್ಲಿಯೂ ಅದರ ಪಾತ್ರ ಮಹತ್ವದ್ದಾಗಿದೆ. ನಿಜವಾದ ಕೆಲಸಗಳು ನರೇಗಾ ಅಡಿಯಲ್ಲಿ ಹೆಚ್ಚಾಗಿ ನಡೆದಿವೆ. ಹಾಗಾಗಿ, ಈ ರೀತಿಯ ಕೆಲಸಕ್ಕಾಗಿ ಈ ಯೋಜನೆಯ ಫಲಿತಾಂಶ ಗಮನಾರ್ಹ ಪ್ರಮಾಣದಲ್ಲಿ ಸಾಧ್ಯವಾಗುವಂತಾಗಿದೆ. ನದಿ ಪುನರುಜ್ಜೀವನ ಕಾರ್ಯದ ಫಲಿತಾಂಶಗಳನ್ನು ವಿಶೇಷವಾಗಿ ಬನೈ ನದಿ ಮತ್ತು ಓಡಿ ನದಿಯ ಸಂದರ್ಭದಲ್ಲಿ ಕಾಣಬಹುದು.
ಜಲಸಂರಕ್ಷಣಾ ಯೋಜನೆಗೆ ಸಂಬಂಧಿಸಿದ ಹೆಚ್ಚಿನ ಕೆಲಸಗಳನ್ನು ಬಿಎಸ್‌ಎಸ್ ತನ್ನ ಕಾರ್ಯಕ್ಷೇತ್ರದ ಪ್ರಮುಖ ನೆಲೆಯಾದ ಮಾರ್ವಾಡದಲ್ಲಿ ಮಾಡಿದೆ. ಜೊತೆಗೆ ಲಲಿತ್‌ಪುರ ಜಿಲ್ಲೆಯ ಇತರ ಭಾಗಗಳಲ್ಲಿಯೂ ಕೈಗೊಂಡಿದೆ. ನೆರೆಯ ಟಿಕಮ್‌ಗಢ ಜಿಲ್ಲೆಯಲ್ಲಿ (ಮಧ್ಯಪ್ರದೇಶ), ಉರ್ ನದಿಯ ಎರಡೂ ಬದಿಗಳಲ್ಲಿ ನೀರಿನ ಸಂರಕ್ಷಣೆ ಕಾರ್ಯವನ್ನು ಬಿಎಸ್‌ಎಸ್ ಕೈಗೆತ್ತಿಕೊಂಡಿದೆ.
ಈ ಪ್ರದೇಶಗಳ ಹೊರತಾಗಿ ಬೇರೆಡೆಯೂ ಇಂತಹ ಯೋಜನೆಗಳನ್ನು ಅನುಷ್ಠಾನಗೊಳಿಸಲು ಅದು ತೀವ್ರ ಪ್ರಯತ್ನ ಮಾಡುತ್ತಿದೆ. ಮಧ್ಯಪ್ರದೇಶದ ದಾಮೋಹ್ ಜಿಲ್ಲೆಯಲ್ಲಿ ಜಲಾನಯನ ಅಭಿವೃದ್ಧಿ ಕೆಲಸಗಳೊಂದಿಗೆ ಬುಡಕಟ್ಟು ಸಮುದಾಯಗಳ ಭೂಮಿಯ ಹಕ್ಕುಗಳಿಗಾಗಿ ಬಿಎಸ್‌ಎಸ್ ಕೆಲಸ ಮಾಡುತ್ತಿದೆ.
ಅದೇ ವೇಳೆ, ಝಾನ್ಸಿ ಜಿಲ್ಲೆಯಲ್ಲಿ ಬಿಎಸ್‌ಎಸ್ ಪ್ರಾರಂಭಿಸಿದ ಹೊಸ ಯೋಜನೆಯು ಮಕ್ಕಳ ಹಕ್ಕುಗಳ ರಕ್ಷಣೆ, ಬಾಲ ಕಾರ್ಮಿಕ ಪದ್ಧತಿ ವಿರುದ್ಧ ಹೋರಾಟ, ದುರ್ಬಲ ಮಕ್ಕಳ ರಕ್ಷಣೆ ಮತ್ತು ಬಾಲ್ಯ ವಿವಾಹ ಪದ್ಧತಿ ತೊಡೆದುಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿದೆ. ಕೆಲವೇ ತಿಂಗಳುಗಳಲ್ಲಿ ಈ ಕೆಲಸದಲ್ಲಿ ಕೆಲವು ಗಮನಾರ್ಹ ಫಲಿತಾಂಶಗಳು ಸಿಕ್ಕಿವೆ.
ತನ್ನ ಪ್ರಮುಖ ನೆಲೆಯಾದ ಮಾರ್ವಾಡದಲ್ಲಿ ಕೆಲವು ಸಮುದಾಯಗಳಲ್ಲಿ ವಯಸ್ಕರ ಶಿಕ್ಷಣ ಯೋಜನೆಯಲ್ಲಿಯೂ ಬಿಎಸ್‌ಎಸ್ ತೊಡಗಿಸಿಕೊಂಡಿದೆ. ಇದಕ್ಕೆ ಬಹಳ ಒಳ್ಳೆಯ ಪ್ರತಿಕ್ರಿಯೆಗಳೂ ಸಿಕ್ಕಿವೆ. ದಿನದ ಕೆಲಸದ ನಂತರವೂ ಜನರು ತರಗತಿಗಳಿಗೆ ಬರುತ್ತಿದ್ದಾರೆ. ಜನರು ತರಗತಿಗಳಿಗೆ ಹಾಜರಾಗಲು ವಿವಿಧ ಸಮಯದ ಆಯ್ಕೆಗಳನ್ನು ಕೊಡಲಾಗಿದೆ. ಅಲ್ಲದೆ, ಜನರಿಗೆ ಯಾವುದು ಅಗತ್ಯವಿದೆ ಎಂಬುದನ್ನು ಗಮನದಲ್ಲಿರಿಸಿಕೊಂಡು ಕಲಿಸುವ ಕ್ರಮವನ್ನು ಅಳವಡಿಸಿಕೊಳ್ಳಲಾಗಿದೆ. ಈ ಎರಡು ಅಂಶಗಳು ಇದರ ಯಶಸ್ಸಿಗೆ ಕಾರಣವಾಗಿವೆ. ಈ ಯೋಜನೆ ಅನುಷ್ಠಾನಗೊಳ್ಳುತ್ತಿರುವ 13 ಗ್ರಾಮಗಳಲ್ಲಿ, ಶಿಕ್ಷಕರು ಕಷ್ಟದ ಸಮಯದಲ್ಲಿ ಜನರಿಗೆ ಹಲವಾರು ರೀತಿಯಲ್ಲಿ ನೆರವಾಗುತ್ತಾರೆ. ಜೊತೆಗೆ ಕೆಲವು ಸರಕಾರಿ ಯೋಜನೆಗಳ ಪ್ರಯೋಜನ ಜನರಿಗೆ ಸಿಗುವುದಕ್ಕೂ ಅವರು ಪ್ರಯತ್ನಿಸುತ್ತಾರೆ.
ವೈವಿಧ್ಯಮಯ ತರಕಾರಿಗಳನ್ನು ಬೆಳೆಸಲು ಹೆಚ್ಚಿನ ಒತ್ತು ನೀಡುವ ಮೂಲಕ ನೈಸರ್ಗಿಕ ಕೃಷಿಯ ಅರಿವು ಮೂಡಿಸುವುದರಲ್ಲಿಯೂ ಬಿಎಸ್‌ಎಸ್ ಸಹಾಯ ಮಾಡುತ್ತಿದೆ. ಹಣ್ಣಿನ ತೋಟಗಳಿಗೂ ಅದು ಉತ್ತೇಜನ ನೀಡುತ್ತಿದೆ. ವಿವಿಧೆಡೆ ಗಿಡ ನೆಡುವ ಕಾರ್ಯದಲ್ಲಿಯೂ ಸಂಸ್ಥೆ ತೊಡಗಿದೆ.
ನವೀಕರಿಸಬಹುದಾದ ಇಂಧನಗಳನ್ನು ಬಳಸುವ ನಿಟ್ಟಿನಲ್ಲಿಯೂ ಬಿಎಸ್‌ಎಸ್ ಪ್ರಯತ್ನಿಸಿದೆ. ಉದಾಹರಣೆಗೆ ಸೋಲಾರ್ ಪಂಪ್‌ಗಳು, ನೀರಾವರಿಯ ಸಂದರ್ಭದಲ್ಲಿ ಹೆಚ್ಚು ಗಮನ ಸೆಳೆದಿವೆ. ವಯಸ್ಕರ ಶಿಕ್ಷಣದಲ್ಲಿ ರಾತ್ರಿ ತರಗತಿಗಳನ್ನು ನಡೆಸುವಾಗಲೂ ಕೆಲವೆಡೆ ಸೌರ ದೀಪಗಳನ್ನು ಬಳಸುವ ಪ್ರಯತ್ನ ನಡೆದಿದೆ.
ಎರಡು ದಶಕಗಳ ಈ ಪ್ರಯಾಣವು ಬಹು ದೊಡ್ಡ ಹಾದಿಯನ್ನು ಕ್ರಮಿಸಿದೆ. ಅನೇಕ ಕಡೆಗಳಲ್ಲಿ ಸಂಸ್ಥೆ ಕೆಲಸಗಳನ್ನು ಮಾಡಿದೆ. ದುರ್ಬಲ ವರ್ಗದವರು ಮತ್ತು ಅಭಿವೃದ್ಧಿ ಕಂಡಿರದ ಪ್ರದೇಶಗಳಿಗೆ ವಿಶೇಷ ಒತ್ತು ನೀಡುವ ಮೂಲಕ ಪ್ರದೇಶದ ಸುಸ್ಥಿರ ಅಭಿವೃದ್ಧಿಗೆ ಕೊಡುಗೆ ನೀಡುವುದು ಯಾವಾಗಲೂ ಅದರ ಮೂಲಭೂತ ಕಾಳಜಿಯಾಗಿದೆ. ಪಂಚಾಯತ್‌ಗಳು ಮತ್ತು ಸರಕಾರದ ಸಹಕಾರವನ್ನು ಪಡೆದುಕೊಳ್ಳುವ ಮೂಲಕ ತನ್ನ ಕೆಲಸದ ಒಟ್ಟಾರೆ ಪರಿಣಾಮವನ್ನು ಹೆಚ್ಚಿಸುವತ್ತ ಬಿಎಸ್‌ಎಸ್ ಗಮನ ಕೊಡುತ್ತದೆ. ತನ್ನದೇ ಆದ ಸೀಮಿತ ಸಂಪನ್ಮೂಲವನ್ನು ಪರಿಣಾಮಕಾರಿಯಾಗಿ ಬಳಸುತ್ತದೆ. ಹವಾಮಾನ ಬದಲಾವಣೆಯ ಸಮಯದಲ್ಲಿ ನೀರಿನ ಸಂರಕ್ಷಣೆ ಮತ್ತು ನೈಸರ್ಗಿಕ ಕೃಷಿಗೆ ಅದು ಇತ್ತೀಚೆಗೆ ಹೆಚ್ಚು ಒತ್ತು ನೀಡುತ್ತಿರುವುದು ಕೂಡ ಮಹತ್ವದ್ದಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ, ಎಲ್ಲಾ ಗ್ರಾಮೀಣ ಮನೆಗಳಿಗೆ ನಲ್ಲಿ ನೀರನ್ನು ಕೊಂಡೊಯ್ಯಲು ವಿಶೇಷ ಆದ್ಯತೆಯೊಂದಿಗೆ ಕೆಲಸ ಮಾಡುತ್ತಿದೆ. ಇದರೊಂದಿಗೆ, ನೀರಿನ ಸಂರಕ್ಷಣೆಗೆ ಪ್ರಾಮುಖ್ಯತೆ ನೀಡುವ ತನ್ನ ಉದ್ದೇಶವನ್ನು ಇನ್ನೂ ಪರಿಣಾಮಕಾರಿಯಾಗಿ ಸಾಕಾರಗೊಳಿಸುತ್ತಿದೆ.
(ಕೃಪೆ:countercurrents.org)