ಮಲೆನಾಡಿನಲ್ಲಿ ನಿಲ್ಲದ ಮಾನವ-ವನ್ಯಜೀವಿ ಸಂಘರ್ಷ
► ಕಾಡಾನೆ ದಾಳಿಗೆ ಜೀವ ಹಾನಿ, ಅಪಾರ ಬೆಳೆ ನಷ್ಟ ► ಸೂಕ್ತ ಕ್ರಮಕ್ಕೆ ಅರಣ್ಯ ಇಲಾಖೆಗೆ ರೈತರ ಆಗ್ರಹ
ಶಿವಮೊಗ್ಗ: ಮಾನವ ಮತ್ತು ವನ್ಯಜೀವಿ ಸಂಘರ್ಷಕ್ಕೆ ಮಲೆನಾಡಿಗರು ಬಸವಳಿದಿದ್ದು, ಒಂದಲ್ಲ ಒಂದು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕಾಡಾನೆ ಉಪಟಳಕ್ಕೆ ಬೆಳೆ ನಾಶ ಮಾತ್ರವಲ್ಲದೆ ಮಾನವ ಜೀವ ಹಾನಿಯೂ ಸಂಭವಿಸುತ್ತಿವೆ.
ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಯಲ್ಲಿ 15ರಿಂದ 20 ಕಾಡಾನೆಗಳು ಬೀಡು ಬಿಟ್ಟಿವೆ. ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಮಾಹಿತಿಯಂತೆ 4-5 ಕಾಡಾನೆ ತಂಡಗಳಿದ್ದು, ತಡರಾತ್ರಿ ವೇಳೆಗೆ ರೈತರ ಜಮೀನು, ತೋಟಗಳಿಗೆ ನುಗ್ಗಿ ಬೆಳೆ ನಾಶ ಪಡಿಸುತ್ತಿವೆ.
ಪ್ರಸಕ್ತ ವರ್ಷದ ಮುಂಗಾರು, ಹಿಂಗಾರಿನ ಮಳೆಗೆ ಬಂದ ಅಲ್ಪಸ್ವಲ್ಪ ಬೆಳೆಯನ್ನು ಕಾಡಾನೆಗಳ ಹಿಂಡು ನಾಶಗೊಳಿಸಿದೆ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ರೈತರು ಬೆಳೆದ ಫಸಲು ಕಾಡಾನೆ ದಾಳಿಗೆ ತುತ್ತಾಗಿವೆ.ಆಳೆತ್ತರಕ್ಕೆ ಬೆಳೆದ ಅಡಿಕೆ ಮರಗಳು ನೆಲ ಸಮವಾಗಿವೆ. ಮೆಕ್ಕೆಜೋಳ, ಕಬ್ಬು, ಬಾಳೆ, ತೆಂಗಿನ ಗಿಡಗಳನ್ನು ಸಂಪೂರ್ಣ ನಾಶ ಪಡಿಸುತ್ತಿವೆ. ಕಟಾವು ಹಂತಕ್ಕೆ ಬಂದ ಭತ್ತದ ಬೆಳೆಯನ್ನೂ ತುಳಿದು ನಾಶ ಮಾಡಿವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.
ಶಿವಮೊಗ್ಗ ತಾಲೂಕಿನ ಪುರದಾಳು, ಶೆಟ್ಟಿಹಳ್ಳಿ, ಚಿತ್ರಶೆಟ್ಟಿಹಳ್ಳಿ, ಸಿರಿಗೆರೆ, ಮಲೇಶಂಕರ, ಮಂಜರಿಕೊಪ್ಪ, ಆಲದೇವರ ಹೊಸೂರು, ತಮ್ಮಡಿಹಳ್ಳಿ, ಎರೇಬಿಸು, ಕೂಡಿ, ಗುಡ್ಡದ ಅರಕೆರೆ, ಲಕ್ಕಿನಕೊಪ್ಪ, ಹುರಳಿಹಳ್ಳಿ, ಗೋಣಿಬೀಡು, ಸಂಪಿಗೆಹಳ್ಳ ಹಾಗೂ ಬೆಳ್ಳೂರು ಸೇರಿದಂತೆ ಹಲವಾರು ಕಡೆ ಕಾಡಾನೆಗಳು ದಾಳಿ ನಡೆಸುತ್ತಿವೆ. ಈ ಕಾಡಂಚಿನ ಗ್ರಾಮಗಳ ರೈತರಿಂದ ಅರಣ್ಯ ಇಲಾಖೆ ಮತ್ತು ಜಿಲ್ಲಾಡಳಿತಕ್ಕೆ ದೂರು ಸಲ್ಲಿಸಿದ ನಂತರ ಅರಣ್ಯ ಇಲಾಖೆ ಕಾಡಾನೆ ಓಡಿಸುವ ಕಾರ್ಯಾಚರಣೆ ನಡೆಸುತ್ತಿದೆಯಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಸಕ್ರೆಬೈಲು ಆನೆ ಬಿಡಾರದಿಂದ ಆಲೆ, ಬಹದ್ದೂರ್, ಸೋಮಣ್ಣ ಆನೆಗಳನ್ನು ಕರೆಸಿ ಪುರದಾಳು ಭಾಗದಲ್ಲಿ ಕಾರ್ಯಾಚರಣೆ ನಡೆಸಿದರೂ ಯಾವುದೇ ಫಲ ಸಿಕ್ಕಿಲ್ಲ.
‘ಕಾಡಾನೆ ಓಡಾಟ ನಡೆಸುವ ಮಾರ್ಗದಲ್ಲಿ ಕಾರ್ಯಾಚರಣೆ ನಡೆಸಬೇಕೇ ಹೊರತು ಬೇರೆ ಮಾರ್ಗಗಳಲ್ಲಿ ಕಾರ್ಯಾಚರಣೆ ನಡೆಸಿದರೆ ಕಾಡಾನೆಗಳನ್ನು ಓಡಿಸಲು ಸಾಧ್ಯವೇ?’ ಎಂದು ರೈತರು ಅರಣ್ಯ ಇಲಾಖೆಯನ್ನು ಪ್ರಶ್ನಿಸುತ್ತಿದ್ದಾರೆ.
ಅರಣ್ಯ ಇಲಾಖೆ ನಿರ್ಲಕ್ಷ್ಯ ಆರೋಪ: ಕಾಡಾನೆ ದಾಳಿಯಿಂದ ಬೆಳೆ ಹಾನಿಗೊಳಗಾದ ಸಂತ್ರಸ್ತ ರೈತರು ಅರಣ್ಯ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಿ,ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರೂ ಅರಣ್ಯ ಇಲಾಖೆಯ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಅರಣ್ಯ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾಡಾನೆಗಳು ಬಲಿಯಾಗಿದ್ದು, ಕಳೆದ ಎರಡು ವರ್ಷದ ಅವಧಿಯಲ್ಲಿ ಮೂರು ಕಾಡಾನೆಗಳು ವಿದ್ಯುತ್ ತಗಲಿ ಸಾವನ್ನಪ್ಪಿವೆ. ಆಯನೂರು ಸಮೀಪದ ಚನ್ನಹಳ್ಳಿ ಬಳಿ ಎರಡು ಕಾಡಾನೆಗಳು ವಿದ್ಯುತ್ ತಗಲಿ ಸಾವನ್ನಪ್ಪಿದ್ದರೆ, ಎರಡು ದಿನಗಳ ಹಿಂದೆ ಆಯನೂರು ಸಮೀಪದ ವೀರ ಬೈರಗಾರನಕೊಪ್ಪದ ಬಳಿ ಸುಮಾರು 35 ವರ್ಷದ ಗಂಡು ಕಾಡಾನೆ ಸಾವನ್ನಪ್ಪಿದೆ. ಇದಕ್ಕೆ ಅರಣ್ಯ ಇಲಾಖೆಯವರು ಗಸ್ತು ತಿರುಗದೆ ನಿರ್ಲಕ್ಷ್ಯ ತೋರಿದ್ದೇ ಕಾರಣ ಎಂಬ ಆರೋಪಗಳು ಕೇಳಿ ಬರುತ್ತಿವೆ.
ಜಾಗೃತಿ ಮೂಡಿಸುವಲ್ಲಿ ವಿಫಲ: ಕಾಡಂಚಿನ ಗ್ರಾಮಗಳ ರೈತರು ತಮ್ಮ ಬೆಳೆ ರಕ್ಷಣೆಗೆಂದು ವಿದ್ಯುತ್ ಅಳವಡಿಸಿಕೊಂಡು ಕಾಡು ಪ್ರಾಣಿಗಳಿಂದ ರಕ್ಷಣೆ ಪಡೆಯಲು ಮುಂದಾಗಿದ್ದಾರೆ. ಹಾಗಾಗಿ ಅವರಿಗೆ ಜಾಗೃತಿ ಮೂಡಿಸುವಲ್ಲಿ ಅರಣ್ಯ ಅಧಿಕಾರಿಗಳು ವಿಫಲರಾಗುತ್ತಿದ್ದಾರೆ. ಇದರಿಂದ ಕಾಡಾನೆಗಳು ವಿದ್ಯುತ್ ತಗಲಿ ಸಾವನ್ನಪ್ಪಿದೆ ಎಂದು ಸಾರ್ವಜನಿಕರಿಂದ ಆರೋಪಗಳು ಕೇಳೀ ಬರುತ್ತಿವೆ.
ಕಾಡಾನೆಗಳನ್ನು ನಾಡಿನತ್ತ ಸುಳಿಯದಂತೆ ಮಾಡಲು ಆನೆ ತಡೆ ಕಂದಕ (ಇಪಿಟಿ) ಅನ್ನು ಸರಿಯಾಗಿ ಮಾಡದೇ ಇರುವುದರಿಂದ ಕಾಡಾನೆಗಳು ನಾಡಿನತ್ತ ಬಂದು ರೈತರ ಬೆಳೆಗಳನ್ನು ಹಾನಿ ಮಾಡುತ್ತಿದೆ. ಇದರಿಂದ ಬೆಳೆಯನ್ನು ರಕ್ಷಣೆ ಮಾಡಿಕೊಳ್ಳಲು ರೈತ ವಿದ್ಯುತ್ ನಂತ ಅಪಾಯಕಾರಿ ಪ್ರಯೋಗ ಮಾಡುತ್ತಿದ್ದಾನೆ. ಈ ಬಗ್ಗೆ ಜಾಗೃತಿ ಮೂಡಿಸಬೇಕಾದ ಅರಣ್ಯ ಇಲಾಖೆ ಮಾತ್ರ ಕಾಡು ಪ್ರಾಣಿಗಳು ಬಲಿಯಾದ ನಂತರ ಭೇಟಿ ಕೊಟ್ಟು ಪರಿಶೀಲನೆ ಮಾಡುವ ಕೆಲಸವನ್ನು ಮಾತ್ರ ಮಾಡುತ್ತಿದೆ ಎಂದು ರೈತರು ಟೀಕಿಸಿದರು.
ಅರಣ್ಯ ಇಲಾಖೆಯ ನಿರ್ಲಕ್ಷ್ಯ ಆರೋಪ
ಶಿವಮೊಗ್ಗ ಗ್ರಾಮಾಂತರ ಭಾಗ ಹಾಗೂ ಹೊಸನಗರ ಗ್ರಾಮಾಂತರ ಭಾಗಗಳಲ್ಲಿ ಕಾಡಾನೆಗಳು ಈ ಮೊದಲು ಇರಲಿಲ್ಲ. ಆದರೆ, ಕಳೆದ 2-3 ವರ್ಷಗಳಿಂದ ಕಾಡಾನೆ ಉಪಟಳ ಹೆಚ್ಚಾಗಿದೆ. ಭದ್ರಾ ಅಭಯಾರಣ್ಯದಿಂದ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ವಲಸೆ ಬಂದಿರುವ ಕಾಡಾನೆಗಳ ಹಿಂಡು ರೈತರ ಹೊಲಗಳಿಗೆ ದಾಳಿ ನಡೆಸುತ್ತಿವೆ. ಕಳೆದ ಮೂರು ವರ್ಷಗಳಿಂದ ರೈತರು ಕಾಡಾನೆಗಳನ್ನು ಮರಳಿ ಭದ್ರಾ ಅಭಯಾರಣ್ಯದೆಡೆಗೆ ಸ್ಥಳಾಂತರಿಸುವಂತೆ ಒತ್ತಾಯಿಸಿದರೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕರಿಂದ ಕೇಳಿ ಬರುತ್ತಿವೆ
ಕಾಡಾನೆಗಳು ಭದ್ರಾ ಅಭಯಾರಣ್ಯದಿಂದ ಬೊಮ್ಮನಹಳ್ಳಿ ಮೂಲಕ ಶೆಟ್ಟಿಹಳ್ಳಿ ಅಭಯಾರಣ್ಯ ವ್ಯಾಪ್ತಿಗೆ ಬರುತ್ತವೆ. ಆನೆಗಳ ಸಂಚರಿಸುವ ಮಾರ್ಗಗಳ ಬಗ್ಗೆ ವನ್ಯಜೀವಿ ವಿಭಾಗದವರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಭದ್ರಾಗೆ ವಾಪಸ್ ಹೋಗದ ಆನೆಗಳು ಜಮೀನು, ತೋಟಕ್ಕೆ ದಾಳಿ ಮಾಡುತ್ತಿವೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಮೂರು ಕಾಡಾನೆಗಳು ಜೀವ ಕಳೆದುಕೊಂಡಿವೆ. ಹಾಗೆಯೇ ರೈತರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳಲು ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳುವುದು ತಪ್ಪು. ರೈತರು ಸರಕಾರದಿಂದ ಸಬ್ಸಿಡಿ ಸೌಲಭ್ಯ ಬಳಸಿಕೊಂಡು ಸೋಲಾರ್ ತಂತಿಬೇಲಿ ಅಳವಡಿಸಿಕೊಂಡು ರೈತರು ಬೆಳೆಗಳನ್ನು ಸಂರಕ್ಷಣೆ ಮಾಡಿಕೊಳ್ಳಬೇಕು.
ನಿತಿನ್ ಹೇರ್ಳೆ, ಪರಿಸರ ಹೋರಾಟಗಾರ
ಮೂರು ಜೀವ ಹಾನಿ
ಒಂದೆಡೆ ಕಾಡಾನೆಗಳು ಸಾವನ್ನಪ್ಪುತ್ತಿದ್ದರೆ ಮತ್ತೊಂದೆಡೆ ಸರಿಯಾದ ಇಪಿಟಿ ಇಲ್ಲದೆ ಇರುವ ಕಾರಣ ನಾಡಿನತ್ತ ಕಾಡಾನೆಗಳು ಬಂದು ಅಮಾಯಕ ಜೀವಗಳನ್ನು ಬಲಿ ತೆಗೆದುಕೊಂಡಿವೆ. ಕಳೆದ ವರ್ಷ ಶಿವಮೊಗ್ಗ ಗ್ರಾಮಾಂತರ ಭಾಗದ ಬಿಕ್ಕೋನಹಳ್ಳಿ ರೈತ ಮಹಿಳೆಯನ್ನು ಚಿರತೆ ದಾಳಿ ಮಾಡಿ ಬಲಿ ತೆಗೆದುಕೊಂಡಿದ್ದರೆ, ಈ ವರ್ಷದಲ್ಲಿ ರಿಪ್ಪನ್ಪೇಟೆ ಬಳಿಯ ಬಸವಾಪುರದಲ್ಲಿ ದರಗೆಲೆ ತರಲು ಕಾಡಿಗೆ ಹೋಗಿದ್ದ ರೈತ ತಿಮ್ಮಪ್ಪ ಹಾಗೂ ಪುರದಾಳು ಸಮೀಪದ ಆಲದೇವರ ಹೊಸೂರು ಬಳಿ ಹನುಮಂತಪ್ಪ ಎಂಬ ಕೂಲಿ ಕಾರ್ಮಿಕನನ್ನು ಕಾಡಾನೆಗಳು ಬಲಿ ತೆಗೆದುಕೊಂಡಿವೆ.