ಅಸುರಕ್ಷಿತ ಗರ್ಭಧಾರಣೆ ತಡೆ, ಗರ್ಭಪಾತದಿಂದ ಬಂಜೆತನ ಸಾಧ್ಯತೆ ಮಾತ್ರವಲ್ಲ, ಪ್ರಾಣಕ್ಕೂ ಸಂಚಕಾರ
ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸಮೀನಾ ಹಾರೂನ್ ಜತೆ ಸಂದರ್ಶನ

ಪ್ರಸವಪೂರ್ವ ಅಥವಾ ಪ್ರಸವ ನಂತರದ ತಾಯಿ ಮರಣ(ಎಂಎಂಆರ್- ಮೆಟರ್ನಲ್ ಮೊರ್ಟಾಲಿಟಿ ರೇಶಿಯೋ)ಕ್ಕೆ ಕಾರಣವಾಗುವ ಪ್ರಮುಖ ಐದು ಅಂಶಗಳಲ್ಲಿ ಅಸುರಕ್ಷಿತ ಗರ್ಭಪಾತವೂ ಸೇರಿದೆ. ವಿಶ್ವದ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ತಾಯಿ ಮರಣ ಪ್ರಮಾಣ ಅಲ್ಪವಾಗಿದ್ದರೂ, ಭಾರತದಂತಹ ದೇಶಗಳಲ್ಲಿ ಇದು ಹೆಚ್ಚಾಗಿದೆ ಎನ್ನುತ್ತಿದೆ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಅಧ್ಯಯನ ವರದಿ. ಅಂದಾಜಿನ ಪ್ರಕಾರ ವಿಶ್ವಾದ್ಯಂತ ಪ್ರತೀ ವರ್ಷ ಸುಮಾರು ಆರು ಕೋಟಿಯಷ್ಟು ಮಹಿಳೆಯರು ಅನಿರೀಕ್ಷಿತ ಗರ್ಭಧಾರಣೆಯಿಂದಾಗಿ ಗರ್ಭಪಾತವನ್ನು ಆಯ್ಕೆ ಮಾಡುತ್ತಾರೆ. ಈ ಪೈಕಿ ಶೇ.50ರಷ್ಟು ಗರ್ಭಪಾತಗಳನ್ನು ಅಸುರಕ್ಷಿತವೆಂದು ಪರಿಗಣಿಸಲಾಗಿದೆ.
ಗರ್ಭಧಾರಣೆ ತಡೆಯುವ ಹಾಗೂ ಗರ್ಭಪಾತದ ಸಂದರ್ಭ ಅಗತ್ಯ ಮುನ್ನೆಚ್ಚರಿಕೆಯ ಕೊರತೆ ಬಂಜೆತನ ಮಾತ್ರವಲ್ಲ, ಪ್ರಾಣಕ್ಕೂ ಸಂಚಕಾರವಾಗುತ್ತಿರುವುದು ಡಬ್ಲ್ಯುಎಚ್‌ಒ ಸಹಿತ ಭಾರತೀಯ ಆರೋಗ್ಯ ಸಂಸ್ಥೆಗಳಡಿ ನಡೆದ ಅಧ್ಯಯನ ವರದಿಗಳಲ್ಲೂ ಉಲ್ಲೇಖಗೊಂಡಿವೆ.
ಶೀಘ್ರ ಗತಿಯಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಒಂದಾಗಿರುವ ಭಾರತದಲ್ಲಿ ಅತ್ಯಾಧುನಿಕ ಆರೋಗ್ಯ ವಿಧಾನಗಳು, ಜಾಗೃತಿ ಹಾಗೂ ಕಾನೂನಿನ ಕಾರಣದಿಂದ ಎಂಎಂಆರ್ ಕಡಿಮೆಯಾಗುತ್ತಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೂ ಅಧ್ಯಯನ ವರದಿಯೊಂದರ ಪ್ರಕಾರ, ಅಸುರಕ್ಷಿತ ಗರ್ಭಪಾತದ ಕಾರಣದಿಂದ ಪ್ರತಿನಿತ್ಯ ಕನಿಷ್ಠ ಎಂಟು ಮಹಿಳೆಯರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಡಬ್ಲ್ಯುಎಚ್‌ಒ ಪ್ರಕಾರ, ಅಗತ್ಯ ಕೌಶಲ್ಯಗಳ ಕೊರತೆಯಿರುವ ವ್ಯಕ್ತಿಗಳಿಂದ ಅಥವಾ ಕನಿಷ್ಠ ವೈದ್ಯಕೀಯ ಮಾನದಂಡಗಳ ಕೊರತೆಯಿರುವ ವಾತಾವರಣದಲ್ಲಿ ಅನಪೇಕ್ಷಿತ ಗರ್ಭಧಾರಣೆಯನ್ನು ಮುಕ್ತಾಯಗೊಳಿಸುವುದನ್ನು ಅಸುರಕ್ಷಿತ ಗರ್ಭಪಾತವೆಂದು ವ್ಯಾಖ್ಯಾನಿಸಲಾಗಿದೆ. ಅಸುರಕ್ಷಿತ ಗರ್ಭಪಾತದಿಂದ ರಕ್ತಸ್ರಾವ, ಸೋಂಕು, ಮಾನಸಿಕ ಖಿನ್ನತೆ ಹಾಗೂ ದೀರ್ಘಕಾಲದ ಅನಾರೋಗ್ಯದ ಜತೆಗೆ ಶಾಶ್ವತ ಬಂಜೆತನ ಹಾಗೂ ಅಕಾಲಿಕ ಸಾವು ಕೂಡಾ ಸಂಭವಿಸಬಹುದು. ಈ ಹಿನ್ನೆಲೆಯಲ್ಲಿ ಗರ್ಭಧಾರಣೆ ತಡೆಯುವ ಸುರಕ್ಷಿತ ವಿಧಾನ ಹಾಗೂ ಸುರಕ್ಷಿತ ಗರ್ಭಪಾತದ ಕುರಿತಂತೆ ಜನಸಾಮಾನ್ಯರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀ ರೋಗ ಶಾಸ್ತ್ರ ವಿಭಾಗದ ತಜ್ಞ ವೈದ್ಯೆ ಡಾ.ಸಮೀನಾ ಹಾರೂನ್ ಜೊತೆ ‘ವಾರ್ತಾಭಾರತಿ’ ನಡೆಸಿದ ಸಂದರ್ಶನದ ಆಯ್ದ ಭಾಗವನ್ನು ಇಲ್ಲಿ ನೀಡಲಾಗಿದೆ.
► ಗರ್ಭಧಾರಣೆ ತಡೆಯುವ ಸುರಕ್ಷಿತ ವಿಧಾನಗಳು:
ಸಾಮಾನ್ಯವಾಗಿ 15 ವರ್ಷದ ಹೆಣ್ಣಿನಿಂದ 49 ವರ್ಷದೊಳಗಿನ ಮಹಿಳೆ ಗರ್ಭಧಾರಣೆಯ ಸಾಮರ್ಥ್ಯ ಹೊಂದಿರುತ್ತಾರೆ. ಮಹಿಳೆಯ ಮಾಸಿಕ ಋತುಚಕ್ರದ 8ನೇ ದಿನದಿಂದ 18ನೇ ದಿನ ಲೈಂಗಿಕ ಸಂಪರ್ಕದ ಮೂಲಕ ಗರ್ಭಧಾರಣೆಗೆ ಸೂಕ್ತ ಸಮಯವಾಗಿರುತ್ತದೆ. ಈ ಸಂದರ್ಭ ಗರ್ಭಧಾರಣೆಯನ್ನು ತಡೆಯಲು ನೈಸರ್ಗಿಕ ಗರ್ಭ ನಿರೋಧಕ, ತಾತ್ಕಾಲಿಕ ಹಾಗೂ ಶಾಶ್ವತ ಗರ್ಭನಿರೋಧಕ ವಿಧಾನಗಳಿವೆ. ಮಾಸಿಕ ಋತುಚಕ್ರ ಸಮರ್ಪಕವಾಗಿದ್ದರೆ ಅಂತಹ ಮಹಿಳೆ ನೈಸರ್ಗಿಕ ಗರ್ಭ ನಿರೋಧಕವನ್ನು ಅನುಸರಿಸಬಹುದು. 28ರಿಂದ 35 ದಿನಗಳವರೆಗಿನ ಸಮರ್ಪಕ ಋತುಚಕ್ರಕ್ಕೆ ಒಳಪಡುವ ಮಹಿಳೆ ತನ್ನ ಋತುಚಕ್ರದ 8ನೇ ದಿನದಿಂದ 18ನೇ ದಿನಗಳ ವರೆಗೆ ಲೈಂಗಿಕ ಕ್ರಿಯೆಯಿಂದ ದೂರ ಉಳಿಯುವ ಮೂಲಕ ನೈಸರ್ಗಿಕವಾಗಿ ಗರ್ಭಧಾರಣೆಯನ್ನು ತಡೆಯಲು ಸಾಧ್ಯವಾಗುತ್ತದೆ.
ಇನ್ನು ಮದುವೆಯಾಗಿ ಕೆಲ ವರ್ಷಗಳ ಕಾಲ ಮಕ್ಕಳು ಬೇಡ ಅಥವಾ ಒಂದು ಮಗುವಾಗಿ ಇನ್ನೊಂದು ಮಗುವಿಗೆ ಸಾಕಷ್ಟು ಸಮಯಾವಕಾಶ ಬೇಕು ಎಂದಾಗ ತಾತ್ಕಾಲಿಕ ಗರ್ಭ ನಿರೋಧಕ ವಿಧಾನವನ್ನು ಅನುಸರಿಸಬಹುದು. ಬ್ಯಾರಿಯರ್, ಗರ್ಭಾಶಯದ ಒಳಗೆ ಉಪಕರಣಗಳ ಅಳವಡಿಕೆ, ಹಾರ್ಮೋನಲ್ ಹಾಗೂ ತುರ್ತು ಗರ್ಭ ನಿರೋಧಕಗಳು ತಾತ್ಕಾಲಿಕ ವಿಧಾನದಲ್ಲಿ ಒಳಗೊಂಡಿವೆ.
ಇಂತಹ ತಾತ್ಕಾಲಿಕ ಗರ್ಭಧಾರಣೆ ತಡೆಯ ಬ್ಯಾರಿಯರ್ ವಿಧಾನದಲ್ಲಿ ಪುರುಷರು ನಿರೋಧ್ (ಕಾಂಡೋಮ್) ಬಳಕೆ ಸಾಮಾನ್ಯ. ಮಹಿಳೆಯರಿಗೂ ಕಾಂಡೋಮ್ ಬಳಕೆ ವಿದೇಶಗಳಲ್ಲಿ ಚಾಲ್ತಿಯಲ್ಲಿದೆ. ಈ ವಿಧಾನ ಮಹಿಳಾ ಸ್ನೇಹಿಯಾಗಿರದ ಕಾರಣ ಇನ್ನೂ ಅಷ್ಟಾಗಿ ಪ್ರಚಾರ ಪಡೆದಿಲ್ಲ. ಡಯಾಫ್ರಮ್ ಎಂಬ ಯಂತ್ರವನ್ನು ಗರ್ಭಕೋಶದ ಕೊರಳಿಗೆ ಅಳವಡಿಕೆ ಮಾಡುವ ಗರ್ಭನಿರೋಧಕ ವಿಧಾನವೂ ನಮ್ಮಲ್ಲಿ ಬಳಕೆಯಲ್ಲಿಲ್ಲ. ವೀರ್ಯನಾಶಕವಾಗಿ ಮಹಿಳೆಯರು ಬಳಸಬಹುದಾದ ವಿವಿಧ ರೀತಿಯ ಜೆಲ್, ಕ್ರೀಮ್ ಹಾಗೂ ಮಾತ್ರೆಗಳೂ ಲಭ್ಯವಿವೆ. ಜನಸಂಖ್ಯೆ ನಿಯಂತ್ರಣ ಕ್ರಮವಾಗಿ ಸರಕಾರವೂ ಪ್ರೋತ್ಸಾಹಿಸುತ್ತಿರುವ ಇನ್ಟ್ರಾಯುಟ್ರೈನ್ ಕಾನ್ಟ್ರಸೆಪ್ಟಿವ್ ಡಿವೈಸಸ್(ಐಯುಸಿಡಿ ಉಪಕರಣ) ಅಥವಾ ಕಾಪರ್ಟಿಗಳನ್ನು ಮೂರು ವರ್ಷ, ಐದು ವರ್ಷಗಳಿಗೆ ಮಹಿಳೆಯ ಗರ್ಭಾಶಯದಲ್ಲಿ ಅಳವಡಿಕೆ ಮಾಡುವ ಮೂಲಕ ಗರ್ಭಧಾರಣೆಯನ್ನು ತಡೆಯಬಹುದು. ಐಯುಸಿಡಿ ಉಪಕರಣವನ್ನು ಋತುಚಕ್ರದ 10 ದಿನಗಳೊಳಗೆ ಅಥವಾ ಪ್ರಸವದ ನಂತರವೂ ಅಳವಡಿಕೆ ಮಾಡಬಹುದು. ಈ ವಿಧಾನವು ಇತರ ಎಲ್ಲಾ ರೀತಿಯ ಗರ್ಭ ನಿರೋಧಕಗಳಿಗಿಂತ ಹೆಚ್ಚು ಸುರಕ್ಷಿತ ಎಂದು ಹೇಳಲಾಗುತ್ತದೆ.
ಮೆರಿನಾ ಎಂಬ ಗರ್ಭ ನಿರೋಧಕವು 40 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಸೂಕ್ತವಾಗಿದ್ದು, ಈ ವಯಸ್ಸಿನಲ್ಲಿ ಹೆಚ್ಚು ರಕ್ತಸ್ರಾವವನ್ನು ತಡೆಯಲು ಮಾತ್ರವಲ್ಲದೆ, ಗರ್ಭ ನಿರೋಧಕವಾಗಿಯೂ ಇದನ್ನು ಬಳಸಬಹುದು.
ಹಾರ್ಮೋನಲ್ ವಿಧಾನದಲ್ಲಿ ಮಾತ್ರೆಗಳನ್ನು ನೀಡಲಾಗುತ್ತದೆ. ಇದು ಋತುಚಕ್ರ ಆರಂಭವಾದ ನಾಲ್ಕು ದಿನದಿಂದ ಪ್ರತಿನಿತ್ಯ ನಿಗದಿತ ಅವಧಿಗೆ ಮಾತ್ರೆ ತೆಗೆದುಕೊಳ್ಳುವ ವಿಧಾನ ಇದಾಗಿದೆ. ನಡುವಿನಲ್ಲಿ ಒಂದು ದಿನ ಮಾತ್ರೆ ಕುಡಿಯುವುದು ಬಿಟ್ಟು ಹೋದರೂ ಗರ್ಭ ನಿರೋಧಕ ಪ್ರಕ್ರಿಯೆಗೆ ತೊಡಕಾಗುತ್ತದೆ. ಪ್ರೊಜೆಸ್ಟಾಲ್ ಎಂಬ ಮಾತ್ರೆಯನ್ನು ಗರ್ಭ ನಿರೋಧಕವಾಗಿ ಬಹುತೇಕವಾಗಿ ಹೆರಿಗೆಯ ಬಳಿಕ ನೀಡಲಾಗುತ್ತದೆ.
ಮೂರು ತಿಂಗಳಿಗೊಮ್ಮೆ ನೀಡುವ ಹಾರ್ಮೋನ್ ಇಂಜೆಕ್ಷನ್ ವಿಧಾನವನ್ನು ಹೆರಿಗೆ ನಂತರ ಗರ್ಭಧಾರಣೆ ತಡೆಗಾಗಿ ಮಹಿಳೆಯರಿಗೆ ಸಲಹೆ ನೀಡಲಾಗುತ್ತದೆ. ಇದಲ್ಲದೆ, ದೇಹದಲ್ಲಿ ಉಪಕರಣ ಅಳವಡಿಕೆಯ ಮೂಲಕವೂ ಗರ್ಭ ತಡೆಯುವ ವಿಧಾನಗಳು ಹೊರ ದೇಶಗಳಲ್ಲಿ ಚಾಲ್ತಿಯಲ್ಲಿವೆ.
1952ರಲ್ಲಿ ಭಾರತದಲ್ಲಿ ಜನಸಂಖ್ಯೆ ನಿಯಂತ್ರಣಕ್ಕಾಗಿ ಕೇಂದ್ರ ಸರಕಾರದ ಯೋಜನೆಗಳಡಿ ಕಾಪರ್ಟಿ, ಮಾಲಾ ಎನ್ ಮಾತ್ರೆಗಳು, ನಿರೋಧ್, ಮಿನಿಲ್ಯಾಪ್ ಮೊದಲಾದ ಪುರುಷರಿಗೂ ಅನ್ವಯವಾಗುವ ಶಾಶ್ವತ ಗರ್ಭ ನಿರೋಧಕ ಶಸ್ತ್ರಚಿಕಿತ್ಸೆಗಳ ಬಗ್ಗೆ ಆಶಾ ಕಾರ್ಯಕರ್ತೆಯರ ಮೂಲಕ ಪ್ರಚಾರ ನೀಡಲಾಗುತ್ತದೆ.
► ಶಾಶ್ವತ ಗರ್ಭಧಾರಣೆ ತಡೆ ವಿಧಾನ
ಶಾಶ್ವತ ಗರ್ಭಧಾರಣೆ ತಡೆ ವಿಧಾನದಡಿ ಪುರುಷರಿಗೂ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಅವಕಾಶವಿದೆ.
ತಮ್ಮ ಕುಟುಂಬ ಪೂರ್ಣಗೊಂಡಿದ್ದು, ಮುಂದೆ ಮಕ್ಕಳು ಬೇಡ ಎನ್ನುವ ತೀರ್ಮಾನಕ್ಕೆ ಬರುವ ದಂಪತಿಗೆ ವೈದ್ಯರು ಶಸ್ತ್ರಚಿಕಿತ್ಸೆಯ ಶಾಶ್ವತ ವಿಧಾನದ ಸಲಹೆ ನೀಡುತ್ತಾರೆ. 25ರಿಂದ 50 ವರ್ಷದೊಳಗಿನ ಪುರುಷರಿಗೆ ವ್ಯಾಸಕ್ಟಮಿ ಶಸ್ತ್ರಚಿಕಿತ್ಸೆ ಮಾಡಲಾಗುತ್ತದೆ. ಮಹಿಳೆಯರಿಗೆ ಗರ್ಭಕೋಶದ ನಾಳವನ್ನು ಮುಚ್ಚುವ ಟ್ಯೂಬಲ್ ಸ್ಟೆರಲೈಸೇಶನ್ ಎಂಬ ಲ್ಯಾಪ್ರೋಸ್ಕೋಪಿ, ಮಿನಿಲ್ಯಾಪ್, ಕೀಹೋಲ್ ಸರ್ಜರಿಯನ್ನು ಮಾಡಲಾಗುತ್ತದೆ.
ಮಹಿಳೆಯು ತಾನು ಗರ್ಭವತಿ ಎಂದು ಖಾತರಿಪಡಿಸಿಕೊಳ್ಳಲು ಫಾರ್ಮಸಿಗಳಲ್ಲಿ ಮೆಡಿಕಲ್ ಕಿಟ್‌ಗಳು ಲಭ್ಯವಾಗುತ್ತವೆ. ತನಗೆ ಸದ್ಯ ಗರ್ಭಧಾರಣೆಯ ಅಗತ್ಯವಿಲ್ಲ, ಗರ್ಭಪಾತ ಮಾಡಿಸಿಕೊಳ್ಳಬೇಕು ಎಂದಾಗ, ಇಂತಹ ಮೆಡಿಕಲ್ ಕಿಟ್‌ನಲ್ಲಿ ಪಾಸಿಟಿವ್ ಬಂದಾಗ, ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದೇ ಮುಂದಿನ ಕ್ರಮ ವಹಿಸಬೇಕು. ಆ ಸಂದರ್ಭದಲ್ಲಿ ಗರ್ಭಪಾತಕ್ಕೆ ಮುಂದಾಗುವ ಮಹಿಳೆಯ ದೇಹಕ್ಕೆ ಸೂಕ್ತವಾದ ವಿಧಾನವನ್ನು ವೈದ್ಯರು ಸೂಚಿಸುತ್ತಾರೆ. ಈ ಕಿಟ್‌ನಲ್ಲಿ ನಡೆಸಲಾಗುವ ತಪಾಸಣೆಯ ವೇಳೆ ನೆಗೆಟಿವ್ ಬಂದರೂ, ಋತುಚಕ್ರ ಆಗದಿದ್ದಾಗ ರಕ್ತ ತಪಾಸಣೆಯ ಮೂಲಕ ವೈದ್ಯರು ಗರ್ಭಧಾರಣೆ ಖಚಿತಪಡಿಸಿ ಬಳಿಕ ಸ್ಕ್ಯಾನಿಂಗ್ ಮೂಲಕ ಭ್ರೂಣದ ಅವಧಿಯನ್ನು ನಿಗದಿಪಡಿಸುತ್ತಾರೆ. 1971ರ ಮೆಡಿಕಲ್ ಟರ್ಮಿನೇಶನ್ ಆಫ್ ಪ್ರೆಗ್ನೆನ್ಸಿ (ಎಂಟಿಪಿ- ಗರ್ಭಧಾರಣೆಯ ವೈದ್ಯಕೀಯ ಮುಕ್ತಾಯ) ಕಾಯ್ದೆಯಡಿ ವೈದ್ಯರು ಗರ್ಭಪಾತದ ಪ್ರಕ್ರಿಯೆಗಳನ್ನು ನಡೆಸಬೇಕಾಗುತ್ತದೆ.
ಗರ್ಭಧಾರಣೆಯ ಮೆಡಿಕಲ್ ಮತ್ತು ಸರ್ಜಿಕಲ್ ಮುಕ್ತಾಯ ಎಂಬ ಎರಡು ವಿಧಾನಗಳಿದ್ದು, ಮಹಿಳೆಯ ಗರ್ಭಧಾರಣೆಯ ಸ್ಥಿತಿಗತಿಗಳನ್ನು ಅರಿತುಕೊಂಡು ಅದಕ್ಕನುಸಾರ ವಿಧಾನವನ್ನು ಅನುಸರಿಸಬೇಕಾಗುತ್ತದೆ.
ಅಪಸ್ಥಾನೀಯ ಗರ್ಭಧಾರಣೆ ಅಪಾಯಕಾರಿ
ತುರ್ತು ಗರ್ಭ ನಿರೋಧಕವಾಗಿ ಬಳಕೆಯ ಮಾತ್ರೆಗಳ ಬಗ್ಗೆ ಹೆಚ್ಚು ಎಚ್ಚರಿಕೆ ಅಗತ್ಯ. ಅಸುರಕ್ಷಿತ ಲೈಂಗಿಕ ಕ್ರಿಯೆ ಬಳಿಕ, ಅನಗತ್ಯ ಗರ್ಭಧಾರಣೆಯ ಸಂದರ್ಭದಲ್ಲಿ ಗರ್ಭ ನಿರೋಧಕವಾಗಿ ಕೆಲ ಮಾತ್ರೆಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ಅಸುರಕ್ಷಿತ ಗರ್ಭಧಾರಣೆಯ 24 ಗಂಟೆಯೊಳಗೆ ಈ ಮಾತ್ರೆ ಬಳಸಿದ್ದಲ್ಲಿ ಇದರಿಂದ ಉಪಯೋಗವಾಗುತ್ತದೆ. ಇದರ ಗರಿಷ್ಠ ಅವಧಿ 72 ಗಂಟೆಯಿಂದ 120 ಗಂಟೆ ಎಂದೂ ಹೇಳಲಾಗುತ್ತದೆ. ಇಂತಹ ಮಾತ್ರೆಗಳ ಬಳಕೆಯ ಕೆಲ ದಿನಗಳ ಬಳಿಕ ಋತುಚಕ್ರ ಆರಂಭವಾಗುತ್ತದೆ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಈ ಮಾತ್ರೆಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸದಾಗ, ಅಂದರೆ ಈ ಮಾತ್ರೆಯನ್ನು ಬಳಸಿದ ಬಳಿಕ ನಿಗದಿತ ಅವಧಿಯಲ್ಲಿ ರಕ್ತಸ್ರಾವ (ಋತುಚಕ್ರ)ಆಗದಿದ್ದರೆ, ಗರ್ಭಧಾರಣೆಯ ಲಕ್ಷಣಗಳು ಕಂಡು ಬಂದಾಗ ವೈದ್ಯರನ್ನು ಭೇಟಿ ಮಾಡದಿದ್ದಲ್ಲಿ ಕೆಲವೊಮ್ಮೆ ಅಪಸ್ಥಾನೀಯ ಗರ್ಭಧಾರಣೆಯ ಸಾಧ್ಯತೆ ಇದೆ. ಗರ್ಭಾಶಯದೊಳಗೆ ಹುಟ್ಟಬೇಕಾದ ಭ್ರೂಣವು ಹೊರಗಡೆ ಹುಟ್ಟುವುದನ್ನು ಅಪಸ್ಥಾನೀಯ ಗರ್ಭಧಾರಣೆ ಎನ್ನಲಾಗುತ್ತದೆ. ಇದು ಅಪಾಯಕಾರಿಯಾಗಿದ್ದು, ಇಂತಹ ಸಂದರ್ಭದಲ್ಲಿ ತುರ್ತು ಚಿಕಿತ್ಸೆಯನ್ನು ಒದಗಿಸಲಾಗುತ್ತದೆ. ಇದು ಇಂಜೆಕ್ಷನ್ ಅಥವಾ ಶಸ್ತ್ರಚಿಕಿತ್ಸೆ ರೂಪದ್ದಾಗಿರುತ್ತದೆ.
ವೈದ್ಯರ ಸಲಹೆ ಇಲ್ಲದೆ ಗರ್ಭ ನಿರೋಧಕ ಮಾತ್ರೆ ಬಳಕೆ ಸಲ್ಲ
ತುರ್ತು ಗರ್ಭ ನಿರೋಧಕ ಮಾತ್ರೆಗಳನ್ನು ವೈದ್ಯರ ಸಲಹೆ ಪಡೆದೇ ತೆಗೆದುಕೊಳ್ಳಬೇಕು. ಆದರೆ ಇಂತಹ ಮಾತ್ರೆಗಳು ಫಾರ್ಮಸಿಗಳಲ್ಲಿ ಸುಲಭವಾಗಿ ಲಭ್ಯವಾಗುತ್ತಿರುವುದರಿಂದ, ಇದರ ದುರ್ಬಳಕೆಯಿಂದ ಅಪಾಯದ ಸಾಧ್ಯತೆ ಅಧಿಕ. ಇಂತಹ ತುರ್ತು ಗರ್ಭನಿರೋಧಕ ಮಾತ್ರೆಗಳು ಏಕ ಬಳಕೆಯದ್ದಾಗಿರುತ್ತವೆ. ಆದರೆ ಕೆಲವೊಮ್ಮೆ ಮಹಿಳೆಯರು ಇದನ್ನು ಗರ್ಭ ನಿರೋಧಕ ವಿಧಾನವೆಂದೇ ಪರಿಗಣಿಸಿ ಪದೇ ಪದೇ ಬಳಸುತ್ತಾರೆ. ತುರ್ತು ಗರ್ಭ ನಿರೋಧಕ ಮಾತ್ರೆಗಳು ಸಾಮಾನ್ಯವಾಗಿ ಮೆಡಿಕಲ್‌ಗಳ ಮೂಲಕವೂ ಸುಲಭವಾಗಿ ಸಿಗುವುದರಿಂದ ಇಂತಹ ಹಾರ್ಮೋನಲ್ ಮಾತ್ರೆಗಳನ್ನು ಗರ್ಭ ನಿರೋಧಕ ವಿಧಾನವೆಂದೇ ಪರಿಗಣಿಸಿ ಪದೇ ಪದೇ ಬಳಕೆ ಮಾಡುವುದು ಸರಿಯಲ್ಲ.