ಮಾರಾಟವಾಗದ ಹಾಲಿನ ಪುಡಿ, ಬೆಣ್ಣೆ: ಆತಂಕದಲ್ಲಿ ಹೈನುಗಾರರು

ಕೋಲಾರ, ಫೆ.2: ಚಿನ್ನದ ನಾಡು ಖ್ಯಾತಿ ಇದ್ದ ಕೋಲಾರ ಇಂದು ಹೈನೋದ್ಯಮದ ಮೇಲೆ ಅವಲಂಬಿತವಾಗಿದೆ. ಜಿಲ್ಲೆಯ ಬಹುತೇಕ ಮಂದಿಯ ಹೈನೋದ್ಯಮವಾಗಿದೆ. ಆದರೆ ಕೋಲಾರ ಹಾಲು ಒಕ್ಕೂಟ(ಕೋಮುಲ್)ದಲ್ಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಹಾಲಿನ ಪುಡಿ ಮತ್ತು ಬೆಣ್ಣೆ ಮಾರಾಟವಾಗದೆ ನಷ್ಟವಾಗುತ್ತಿರುವುದು ರೈತರಲ್ಲಿ ಆತಂಕ ಸೃಷ್ಟಿಸಿದೆ.
ಕೋಲಾರ ಜಿಲ್ಲೆ ಹೈನೋದ್ಯಮದಲ್ಲಿ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದುಕೊಂಡಿದೆ. ಕೋಲಾರ ಜಿಲ್ಲೆಯಲ್ಲಿ ಲಕ್ಷಾಂತರ ಜನ ಹಾಲು ಉತ್ಪಾದಕರಿದ್ದು, ಕೋಲಾರ ಹಾಲು ಒಕ್ಕೂಟದಲ್ಲಿ ಸರಿ ಸುಮಾರು 1,200ಕ್ಕೂ ಹೆಚ್ಚು ಹಾಲು ಉತ್ಪಾದಕರ ಸ್ವಸಹಾಯ ಸಂಘಗಳಿವೆ. ಲಕ್ಷಾಂತರ ಕುಟುಂಬಗಳು ಹೈನೋದ್ಯಮದ ಮೇಲೆ ಅವಲಂಬಿತವಾಗಿದ್ದು ಜಿಲ್ಲೆಯಲ್ಲಿ ನಿತ್ಯ ಸುಮಾರು ಆರು ಲಕ್ಷ ಲೀಟರ್‌ಗೂ ಹೆಚ್ಚು ಹಾಲು ಉತ್ಪಾದನೆಯಾಗುತ್ತಿದೆ. ಹೀಗಿರುವಾಗ ಕೋಲಾರ ಹಾಲು ಒಕ್ಕೂಟದಲ್ಲಿ ಬೆಣ್ಣೆ ಹಾಗು ಹಾಲಿನ ಪೌಡರ್ ಮಾರಾಟವಾಗದೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.
8 ತಿಂಗಳಿಂದ ನಷ್ಟಕ್ಕೆ ಸಿಲಿಕಿರುವ ಕೋಲಾರ ಹಾಲು ಒಕ್ಕೂಟ ಕೋಮುಲ್ ಬರೋಬ್ಬರಿ 2,100 ಟನ್ ಹಾಲಿನ ಪೌಡರ್ ಹಾಗು 800 ಟನ್ ಬೆಣ್ಣೆ ಮಾರಾಟವಾಗದೆ ಪರದಾಡುತ್ತಿದೆ. 2,100 ಟನ್ ಹಾಲಿನ ಪೌಡರ್ ನ ಒಟ್ಟು ಮೌಲ್ಯ 50 ಕೋಟಿ ರೂ. ಆಗಿದ್ದು, 800 ಟನ್ ಬೆಣ್ಣೆಯ ಮೌಲ್ಯ ಬರೋಬ್ಬರಿ 30 ಕೋಟಿ ರೂ.ಯಷ್ಟು ಒಕ್ಕೂಟಕ್ಕೆ ನಷ್ಟವಾಗಿದೆ. ಇನ್ನು ಹಾಲಿನ ಪೌಡರ್ ಹಾಗೂ ಚೀಸ್ ಮಾರಾಟ ಮಾಡಲಾಗದೆ ಹಾಲು ಒಕ್ಕೂಟದ ಅಧಿಕಾರಿಗಳಿಗೆ ತಲೆ ನೋವಾಗಿದೆ. ಇನ್ನು ಪೌಡರ್ ಮತ್ತು ಬೆಣ್ಣೆಯ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಎಲ್ಲೂ ಮಾರಾಟವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಬೆಣ್ಣೆಯನ್ನು ತುಪ್ಪವಾಗಿ ಪರಿವರ್ತನೆ ಮಾಡಲು ಮುಂದಾಗಿದ್ದಾರೆ.
ರಾಜ್ಯ ಸಹಿತ ಹೊರ ರಾಜ್ಯದಲ್ಲಿ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿತ ಹಿನ್ನೆಲೆಯಲ್ಲಿ ಹಾಲಿನ ಪೌಡರ್ ಹಾಗೂ ಬೆಣ್ಣೆ ಮಾರಾಟವಾಗುತ್ತಿಲ್ಲ. ಜಿಲ್ಲೆಯಲ್ಲಿ ಹಾಲಿನ ಉತ್ಪಾದನೆ ಒಂದೆಡೆ ಹೆಚ್ಚಾಗುತ್ತಿದ್ದು, ಹಾಲು ಖರೀದಿ ಮಾಡದಿದ್ದರೆ ರೈತರು ನಷ್ಟಕ್ಕೆ ಒಳಗಾಗುತ್ತಾರೆ. ಹಾಗಾಗಿ ಬೆಣ್ಣೆ, ಹಾಲು ಪೌಡರ್ ಉತ್ಪಾದನೆ ಮಾಡಿರುವುದಾಗಿ ಕೋಮುಲ್ ಒಕ್ಕೂಟದ ಅಧಿಕಾರಿಗಳು ಹೇಳುತ್ತಾರೆ.
ಸರಕಾರ ಈಗಾಗಲೇ ಎರಡು ಬಾರಿ ಹಾಲಿನ ದರ ಏರಿಕೆ ಮಾಡಿ ರೈತರ ದರದಲ್ಲಿ ಹೆಚ್ಚಳ ಮೊತ್ತ ನೀಡಿಲ್ಲ. 5 ತಿಂಗಳಿನಿಂದ ಹಾಲು ಉತ್ಪಾದಕರಿಗೆ ಬಾಕಿ ಇರುವ ಪ್ರೋತ್ಸಾಹ ಧವನನುನ್ನೂ ಬಿಡುಗಡೆ ಮಾಡಿಲ್ಲ. ಸುಮಾರು 44 ಕೋಟಿ ರೂ.ಯಷ್ಟು ಪ್ರೋತ್ಸಾಹ ಧನ ಬರಬೇಕಾಗಿದೆ. ಇನ್ನು ಜಿಲ್ಲೆಯಲ್ಲಿ ಮಳೆ ಅಭಾವವಿದೆ. ಕಳೆದ ವರ್ಷದಂತೆ ಈ ವರ್ಷವೂ ಬರದ ಛಾಯೆ ಗೋಚರಿಸುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಒಕ್ಕೂಟ ಬೆಣ್ಣೆ ಹಾಗೂ ಹಾಲಿನ ಪೌಡರ್ ಮಾಡಿ ನಷ್ಟಕ್ಕೆ ಒಳಗಾಗಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕೋಲಾರ ಹಾಲು ಒಕ್ಕೂಟದಲ್ಲಿ ಸುಮಾರು 2,100 ಟನ್ ಹಾಲಿನ ಪುಡಿ ಮತ್ತು 800 ಟನ್ ಬೆಣ್ಣೆ ಸ್ಟಾಕ್ ಇದ್ದು, ಒಕ್ಕೂಟದಲ್ಲಿ ಸಮರ್ಪಕ ರೀತಿಯಲ್ಲಿ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಗೋದಾಮಿನಲ್ಲಿ ಕೊಳೆಯುತ್ತಿದೆ. ಇದು ಹೀಗೆ ಮುಂದುವರಿದರೆ ಮುಂದಿನ ದಿನಗಳಲ್ಲಿ ರೈತರ ಹಾಲಿನ ಬೆಲೆ ಕುಸಿಯುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಸರಕಾರ ಕೂಡಲೇ ಎಚ್ಚೆತ್ತುಕೊಂಡು ಒಕ್ಕೂಟದ ಉಳಿವಿಗಾಗಿ ಮುಂದಾಗಬೇಕು.
-ನಾರಾಯಣಗೌಡ, ರೈತ ಸಂಘ, ಕೋಲಾರ
ಒಕ್ಕೂಟದಲ್ಲಿ ಎಲ್ಲ ರೀತಿಯ ಹಾಲಿನ ಉತ್ಪನ್ನಗಳು ತಯಾರಾಗುತ್ತದೆ. ಆದರೆ ಎಲ್ಲವೂ ಏಕಕಾಲದಲ್ಲಿ ಮಾರುಕಟ್ಟೆ ಪ್ರವೇಶ ಮಾಡುವುದಿಲ್ಲ. ಸೀಸನ್‌ಗೆ ತಕ್ಕಂತೆ ಮಾರುಕಟ್ಟೆಗೆ ಹೋಗುತ್ತದೆ. ಮಾರಾಟ ನಿಧಾನ ಇದ್ದಾಗ ದಾಸ್ತಾನು ಹೆಚ್ಚಾಗುತ್ತದೆ, ಬಿರುಸಾದಾಗ ಹೆಚ್ಚು ಲಾಭ ಬರುತ್ತದೆ. ಈ ವ್ಯವಸ್ಥೆಯಲ್ಲಿ ಏರಿಳಿತಗಳು ಇದ್ದೇ ಇರುತ್ತದೆ. ಇದು ಇಡೀ ರಾಷ್ಟ್ರದ ಪರಿಸ್ಥಿತಿ, ಇದರಿಂದ ರೈತರಿಗೆ ಏನೂ ಸಮಸ್ಯೆಯಿಲ್ಲ.
-ಕೆ.ವೈ.ನಂಜೇಗೌಡ, ಕೋಮುಲ್ ಮಾಜಿ ಅಧ್ಯಕ್ಷ