ಉತ್ತರಾಖಂಡ | ಮುಸ್ಲಿಮರ ವಿರುದ್ಧ ದ್ವೇಷಕಾರಿದ್ದ ‘ಲವ್ ಜಿಹಾದ್’ ಪ್ರಕರಣ ಸುಳ್ಳು!
► ಪೊಕ್ಸೊ ಪ್ರಕರಣ ದಾಖಲಿಸಿದ್ದ ಬಾಲಕಿಯ ಬಳಿ ಸುಳ್ಳು ಹೇಳಿಸಿದ್ದ ಪೊಲೀಸರು ► ನ್ಯಾಯಾಲಯದಲ್ಲಿ ಬಯಲಾದ ವಂಚನೆ
PC : scroll.in
ಹೊಸದಿಲ್ಲಿ : ಕಳೆದ ವರ್ಷ ಉತ್ತರಾಖಂಡ್ ನಲ್ಲಿ ಉವೈದ್ ಖಾನ್ ಮತ್ತು ಜಿತೇಂದ್ರ ಹೆಸರಿನ ಇಬ್ಬರು ಯುವಕರ ಮೇಲೆ ಅಪ್ರಾಪ್ತ ಹುಡುಗಿಯೊಬ್ಬಳನ್ನು ಅಪಹರಿಸಿ ಮತಾಂತರ ಮಾಡಲು ಯತ್ನಿಸಿದ ಆರೋಪ ಕೇಳಿಬಂದಿತ್ತು. ಆ ವೇಳೆ ಲವ್ ಜಿಹಾದ್ ನಡೆಯುತ್ತಿದೆ ಎಂದು ಹಿಂದುತ್ವ ಸಂಘಟನೆಗಳು ದ್ವೇಷ ಅಭಿಯಾನ ನಡೆಸಿತ್ತು.
ನಮ್ಮ ಪಟ್ಟಣವನ್ನು ಮುಸ್ಲಿಮರಿಂದ ಮುಕ್ತಗೊಳಿಸಬೇಕೆಂದು ಉತ್ತರ ಕಾಶಿ ಜಿಲ್ಲೆಯ ಪುರೋಲದಲ್ಲಿ ಒತ್ತಾಯಿಸಿ ಹಿಂದುತ್ವ ಗುಂಪುಗಳು ನಡೆಸಿದ ದ್ವೇಷ ಅಭಿಯಾನ ಆಗ ದೇಶಾದ್ಯಂತ ಸುದ್ದಿಯಾಗಿತ್ತು.
ಕನಿಷ್ಠ 41 ಮುಸ್ಲಿಂ ಕುಟುಂಬಗಳು ತಮ್ಮ ಎಲ್ಲವನ್ನೂ ಬಿಟ್ಟು ವಲಸೆ ಹೋಗಬೇಕಾಯಿತು. ಅವರಲ್ಲಿ ಆರು ಕುಟುಂಬಗಳು ಶಾಶ್ವತವಾಗಿಯೇ ಉತ್ತರಾಖಂಡದ ವಿವಿಧ ಭಾಗಗಳಿಗೆ ರಾತ್ರೋರಾತ್ರಿ ಓಡಿ ಹೋಗಬೇಕಾಯಿತು.
ಈಗ ಆ ಪ್ರಕರಣ ಕುರಿತ ಹೊಸ ಸುದ್ದಿಯೊಂದು ಬಹಳ ತಡವಾಗಿ ಹೊರ ಬಂದಿದೆ. Scroll.in ಮಾಡಿರುವ ವಿಶೇಷ ವರದಿಯಿಂದಾಗಿ ಈ ವಿಷಯ ಪುನಃ ಚರ್ಚೆಯಲ್ಲಿದೆ. ಅಪ್ರಾಪ್ತ ಬಾಲಕಿಯ ಮತಾಂತರ ಪ್ರಯತ್ನ ಮತ್ತು ಅಪಹರಣ ಆರೋಪ ಹೊರಿಸಲಾಗಿದ್ದ ಉವೈದ್ ಖಾನ್ ಮತ್ತು ಜಿತೇಂದ್ರ ಸೈನಿ ಹೆಸರಿನ ಇಬ್ಬರು ಯುವಕರನ್ನು ಮೇ ತಿಂಗಳಿನಲ್ಲಿ ನ್ಯಾಯಾಲಯ ದೋಷಮುಕ್ತಗೊಳಿಸಿದೆ.
ಖಾನ್ ಮತ್ತು ಸೈನಿ ವಿರುದ್ಧ ಐಪಿಸಿಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಅಪ್ರಾಪ್ತ ವಯಸ್ಕಳ ಅಪಹರಣ ಹಾಗು ಪೋಕ್ಸೋ ಅಡಿಯಲ್ಲೂ ಲೈಂಗಿಕ ದೌರ್ಜನ್ಯದ ಪ್ರಕರಣ ದಾಖಲಿಸಲಾಗಿತ್ತು. ಈಗ ನ್ಯಾಯಾಲಯದ ತೀರ್ಪು ಬಂದಿದೆ. ಇಬ್ಬರೂ ಖುಲಾಸೆಯಾಗಿದ್ದಾರೆ.
ಪ್ರಕರಣ ನಡೆದಾಗಲೇ ಅಲ್ಲಿಂದ ಬಂದಿದ್ದ ವರದಿಗಳನ್ನು ಗಮನಿಸಿದ್ದರೆ ಇದು ನಿರೀಕ್ಷಿತ ತೀರ್ಪು. ಆಗಲೇ ಈ ಪ್ರಕರಣದಲ್ಲಿ ಹುರುಳಿಲ್ಲ, ಲವ್ ಜಿಹಾದ್ ಅಂತೂ ತೀರಾ ಕಪೋಲ ಕಲ್ಪಿತ , ದುರುದ್ದೇಶ ಪೂರಿತ ಆರೋಪ ಎಂದು ಅಲ್ಲಿನ ಜನರೇ ಹೇಳಿದ್ದರು.
ಈಗ ನ್ಯಾಯಾಲಯದಲ್ಲೇ ಅದು ನಿಜವಾಗಿದೆ. ಹಾಗಾದರೆ ಆಗ ಹಿಂದುತ್ವ ಸಂಘಟನೆಗಳು ಉತ್ತರಾಖಂಡ ಪೊಲಿಸರ ಸಂಪೂರ್ಣ ಸಹಕಾರದೊಂದಿಗೆ ನಡೆಸಿದ ದ್ವೇಷ ಅಭಿಯಾನಕ್ಕೆ ಯಾರು ಹೊಣೆ ?
ಮುಸ್ಲಿಮರ ವಿರುದ್ಧ ದ್ವೇಷದ ಉನ್ಮಾದವನ್ನು ಹೆಚ್ಚಿಸುವಲ್ಲಿ ಉತ್ತರಾಖಂಡ್ ಪೊಲೀಸರ ಪಾತ್ರದ ಬಗ್ಗೆ ಎದ್ದಿರುವ ಪ್ರಶ್ನೆಗಳಿಗೆ ಉತ್ತರಿಸುವವರು ಯಾರು? ಖಾನ್ ಮತ್ತು ಸೈನಿ ತನ್ನನ್ನು ಅಪಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಲು ಪೊಲೀಸರು ತನಗೆ ಹೇಳಿಕೊಟ್ಟಿದ್ದಾರೆ ಎಂದು 14 ವರ್ಷದ ಬಾಲಕಿ ನ್ಯಾಯಾಲಯಕ್ಕೆ ತಿಳಿಸಿದ್ದಾಳೆ.
ನ್ಯಾಯಾಲಯದಲ್ಲಿ ಪ್ರಕರಣದ ಏಕೈಕ ಪ್ರತ್ಯಕ್ಷದರ್ಶಿ, ಆರೆಸ್ಸೆಸ್ ನ ಸದಸ್ಯ ಆಶಿಶ್ ಚುನಾರ್ ಅವರ ಹೇಳಿಕೆಗಳು ಒಂದಕ್ಕೊಂದು ತಾಳೆಯಾಗುತ್ತಿರಲಿಲ್ಲ. ಉವೈದ್ ಖಾನ್ ಮತ್ತು ಜಿತೇಂದ್ರ ಸೈನಿ ವಿರುದ್ಧ ಆಗಸ್ಟ್ 2023 ಮತ್ತು ಮೇ 2024 ರ ನಡುವೆ 19 ಬಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.
ವಿಚಾರಣೆಯಲ್ಲಿ, ಎಫ್ಐಆರ್ ದಾಖಲಿಸಿದ ಅಪ್ರಾಪ್ತಳ ಚಿಕ್ಕಪ್ಪ "ನನ್ನ ಸೊಸೆ ಘಟನೆಯ ಬಗ್ಗೆ ನನಗೆ ಏನನ್ನೂ ಹೇಳಲಿಲ್ಲ ಮತ್ತು ಆಶಿಶ್ ಚುನಾರ್ ಅವರು ಹೇಳಿದ ಹಾಗೆ ಅವರು ದೂರು ಬರೆದಿದ್ದಾರೆ" ಎಂದು ಹೇಳಿದ್ದಾರೆ. "ಆಶಿಶ್ ಚುನಾರ್ ನನಗೆ ಹೇಳಿದ್ದನ್ನು ನಾನು ಬರೆದಿದ್ದೇನೆ" ಎಂದು ಬಾಲಕಿಯ ಚಿಕ್ಕಪ್ಪ ಹೇಳಿದ್ದನ್ನು ನ್ಯಾಯಾಲಯದ ತೀರ್ಪು ಉಲ್ಲೇಖಿಸಿದೆ.
ಪಾಟಿ ಸವಾಲಿನ ಸಮಯದಲ್ಲಿ, ಹುಡುಗಿಯ ಚಿಕ್ಕಮ್ಮ ಕೂಡ "ತನ್ನ ಸೊಸೆ ಘಟನೆಯ ಬಗ್ಗೆ ತನಗೆ ಹೇಳಲಿಲ್ಲ ಮತ್ತು ಆರೋಪಿಯನ್ನು ಹೆಸರಿಸಲಿಲ್ಲ" ಎಂದು ನ್ಯಾಯಾಲಯಕ್ಕೆ ತಿಳಿಸಿದರು. "ಕೆಲವು ಬಟ್ಟೆಗಳನ್ನು ಹೊಲಿಸಲು ತಾನು ಮನೆಯಿಂದ ಹೊರಟಿದ್ದೆ ಮತ್ತು ಆಶಿಶ್ ಚುನಾರ್ ತನ್ನ ಅಂಗಡಿಗೆ ಕರೆದುಕೊಂಡು ಹೋದನು" ಎಂದು ನನಗೆ ಅವಳು ಹೇಳಿದ್ದಳು ಎಂದು ಚಿಕ್ಕಮ್ಮ ಹೇಳಿರುವುದಾಗಿ ತೀರ್ಪು ಹೇಳಿದೆ.
ಆದರೆ ತೀರ್ಪಿನಲ್ಲಿ ಉಲ್ಲೇಖ ಆಗಿರುವ ಹಾಗೆ ಅಪ್ರಾಪ್ತಳ ಚಿಕ್ಕಪ್ಪ ತನ್ನ ಸೂಚನೆಯ ಮೇರೆಗೆ ಪೊಲೀಸ್ ದೂರನ್ನು ಬರೆದಿದ್ದಾರೆ ಎಂಬ ಆರೋಪವನ್ನು ಚುನಾರ್ ನಿರಾಕರಿಸಿದ್ದಾರೆ. ಅಂತಿಮವಾಗಿ, ನ್ಯಾಯಾಲಯದಲ್ಲಿನ ಅಪ್ರಾಪ್ತಳ ಹೇಳಿಕೆಯು ಅವಳು ಈ ಹಿಂದೆ ಕ್ರಿಮಿನಲ್ ಪ್ರೊಸೀಜರ್ ಕೋಡ್ನ ಸೆಕ್ಷನ್ 164 ರ ಅಡಿಯಲ್ಲಿ ಸಿವಿಲ್ ನ್ಯಾಯಾಧೀಶರಿಗೆ 2023 ರ ಮೇ 27ರಂದು ನೀಡಿದ ಹೇಳಿಕೆಗೆ ವಿರುದ್ಧವಾಗಿತ್ತು.
ಖಾನ್ ಮತ್ತು ಸೈನಿ ಲೈಂಗಿಕ ಉದ್ದೇಶದಿಂದ ಅಪ್ರಾಪ್ತರನ್ನು ಸ್ಪರ್ಶಿಸಿದ್ದಾರೆ ಎಂದು ಸಾಬೀತುಪಡಿಸಲು ಪ್ರಾಸಿಕ್ಯೂಷನ್ ಯಾವುದೇ ಸಾಕ್ಷ್ಯವನ್ನು ನೀಡಿಲ್ಲ ಎಂದು ನ್ಯಾಯಾಧೀಶ ಗುರುಬಕ್ಷ್ ಸಿಂಗ್ ಗಮನಿಸಿದ್ದಾರೆ. ಇದನ್ನೆಲ್ಲ ಗಣನೆಗೆ ತೆಗೆದುಕೊಂಡ ನ್ಯಾಯಾಧೀಶ ಸಿಂಗ್ ಅವರು ಉವೈದ್ ಖಾನ್ ಮತ್ತು ಜಿತೇಂದ್ರ ಸೈನಿ ಅವರನ್ನು ಖುಲಾಸೆಗೊಳಿಸಿದರು.
ಪ್ರಕರಣವನ್ನು ನಿಭಾಯಿಸಿದ ಪೊಲೀಸ್ ಅಧಿಕಾರಿಗಳು ತನಗೆ ಹೀಗೇ ಹೇಳುವಂತೆ ಹೇಳಿಕೊಟ್ಟಿದ್ದಾರೆ ಎಂಬ ಬಾಲಕಿಯ ಆರೋಪವನ್ನು ಪೊಲೀಸರು ತಳ್ಳಿಹಾಕಿದ್ದಾರೆ.
ಖಾನ್ ಮತ್ತು ಸೈನಿ ಪರ ವಕೀಲ ಹಲೀಮ್ ಬೇಗ್ ಮಾತಾಡಿ, "ಇಂದಿಗೂ, ಈ ಇಬ್ಬರು ಹುಡುಗಿಯನ್ನು ಅಪಹರಿಸಲು ಪ್ರಯತ್ನಿಸಿದ ಕಥೆ ಅವತ್ತು ಹೇಗೆ ಹುಟ್ಟಿಕೊಂಡಿತು ಮತ್ತು ನಂತರ ಹೇಗೆ ಅದು ರಾಷ್ಟ್ರೀಯ ಸುದ್ದಿಯಾಯಿತು ಎಂದು ನನಗೆ ತಿಳಿದಿಲ್ಲ" ಎಂದು ಹೇಳಿದ್ದಾರೆ.
"ನನಗೆ, ಇದು ಯೋಜಿತ ಪಿತೂರಿಯಂತೆ ತೋರುತ್ತಿದೆ. ಖಾನ್ ಅವರ ಕುಟುಂಬವು ಪಟ್ಟಣದಲ್ಲಿ ಅತ್ಯಂತ ಯಶಸ್ವಿ ವ್ಯಾಪಾರವನ್ನು ನಡೆಸುತ್ತಿತ್ತು. ಅನೇಕ ಜನರು ಅದನ್ನು ಇಷ್ಟಪಡಲಿಲ್ಲ,” ಎಂದು ಬೇಗ್ ಹೇಳಿದ್ದಾರೆ.
ಉತ್ತರಾಖಂಡದಲ್ಲಿ ಅಪ್ರಾಪ್ತ ಬಾಲಕಿಯ 'ಲವ್ ಜಿಹಾದ್, ಅಪಹರಣ ಮತ್ತು ಲೈಂಗಿಕ ದೌರ್ಜನ್ಯ' ಎಂಬ ವದಂತಿ ವೈರಲ್ ಆದಾಗ ಬಲಪಂಥೀಯ ಸಂಘಟನೆಗಳು ಬೀದಿಗಿಳಿದು ಪುರೋಲ ನಗರದಲ್ಲಿ ಪ್ರಕ್ಷುಬ್ಧತೆ ಸೃಷ್ಟಿಸಿದ್ದರು. ಮುಸ್ಲಿಮರಿಗೆ ಬೆದರಿಕೆ ಹಾಕಿದ್ದರು. ಹಿಂಸೆಗೆ ಪ್ರಚೋದಿಸಿದ್ದರು. ರಾಜ್ಯವನ್ನು ಆಳುತ್ತಿರುವ ಬಿಜೆಪಿ ನಾಯಕರು, ಮುಸ್ಲಿಮರ ಬಗ್ಗೆ "ನಿರ್ದಿಷ್ಟ ಸಮುದಾಯದ ಹೊರಗಿನವರು" ಎಂದು ಹೇಳಿ ಕೋಮು ಧ್ರುವೀಕರಣ ಮಾಡಿದ್ದರು.
ವಿಶ್ವ ಹಿಂದೂ ಪರಿಷತ್ ಮತ್ತು ದೇವಭೂಮಿ ರಕ್ಷಾ ಅಭಿಯಾನದಂತಹ ಹಿಂದುತ್ವ ಗುಂಪುಗಳು ಪುರೋಲಾ ಮತ್ತು ಪಕ್ಕದ ಬಾರ್ಕೋಟ್ ಪಟ್ಟಣದಲ್ಲಿ ಮುಸ್ಲಿಮರನ್ನು "ಜಿಹಾದಿಗಳು" ಎಂದು ಕರೆದು ದೊಡ್ಡ ಪ್ರತಿಭಟನೆಗಳನ್ನು ನಡೆಸಿದ್ದವು.
ಉತ್ತರಕಾಶಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪವನ್ ನೌಟಿಯಾಲ್ ಅವರು ಪುರೋಲಾದ ಹಿಂದೂ ವ್ಯಾಪಾರಿಗಳನ್ನು ಒಟ್ಟುಗೂಡಿಸಿ " ಮುಸ್ಲಿಮರು ಇಲ್ಲಿ ಮುಗ್ಧ ಮಹಿಳೆಯರೊಂದಿಗೆ ಮಾತು ಪ್ರಾರಂಭಿಸುತ್ತಾರೆ, ಅವರನ್ನು ದಾರಿ ತಪ್ಪಿಸುತ್ತಾರೆ ಮತ್ತು ಅವರನ್ನು ಕರೆದುಕೊಂಡು ಹೋಗುತ್ತಾರೆ" ಎಂದು ಹೇಳಿದ್ದರು.
ಪುರೋಲಾದ ಬಿಜೆಪಿ ಶಾಸಕ ದುರ್ಗೇಶ್ವರ್ ಲಾಲ್ ಅವರು ಫೇಸ್ಬುಕ್ ವೀಡಿಯೊದಲ್ಲಿ ಮುಸ್ಲಿಂ ವ್ಯಾಪಾರಿಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ರಾಜ್ಯದಲ್ಲಿ ಲವ್ ಜಿಹಾದ್ ಅನ್ನು ಸಹಿಸುವುದಿಲ್ಲ ಮತ್ತು ಪುರೋಲಾದಲ್ಲಿ ನಡೆದಿರುವುದು ಅಪರಾಧ, ಇದು ಪಿತೂರಿಯ ಭಾಗವಾಗಿ ಮಾಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರೇ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದರು.
ಈಗ ತೀರ್ಪು ಹೊರಬಂದಿರುವಾಗ ಈ ಹಿಂದುತ್ವ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ಎಲ್ಲಿ ಕಾಣೆಯಾಗಿದ್ದಾರೆ? ಉವೈದ್ ಖಾನ್ ಮತ್ತು ಜಿತೇಂದ್ರ ಸೈನಿ ಅವರನ್ನು ಉತ್ತರಾಖಂಡ ನ್ಯಾಯಾಲಯವು ಖುಲಾಸೆಗೊಳಿಸಿದ್ದು ಹಿಂದುತ್ವ ಸಂಘಟನೆಗಳು ಇವರ ವಿರುದ್ಧ ನಡೆಸಿದ ಅಪಪ್ರಚಾರಕ್ಕೆ ಕ್ಷಮೆಯಾಚಿಸುತ್ತಾರಾ? ಪುರೋಲದಲ್ಲಿ ವರ್ಷಗಟ್ಟಲೆ ನೆಲೆಸಿ ಬದುಕು ಕಟ್ಟಿಕೊಂಡು ರಾತ್ರೋ ರಾತ್ರಿ ಅಲ್ಲಿಂದ ಸ್ಥಳಾಂತರಗೊಂಡ ಮುಸ್ಲಿಂ ಕುಟುಂಬಗಳ ಬಳಿ ಹೋಗಿ " ನಮ್ಮಿಂದ ತಪ್ಪಾಗಿದೆ " ಎಂದು ಕ್ಷಮೆ ಯಾಚಿಸಿ ಅವರನ್ನು ವಾಪಸ್ಸು ಕರೆತರುವ ಕೆಲಸವನ್ನಾದರೂ ಈ ಸಂಘಟನೆಗಳ ಮುಖಂಡರು ಮಾಡುತ್ತಾರಾ?
ಆ ಪ್ರಕರಣದಲ್ಲಿ ಆಗ ಮಡಿಲ ಮಾಧ್ಯಮಗಳು ನಡೆಸಿದ ದ್ವೇಷ ಕಾರುವ ಕಾರ್ಯಕ್ರಮಗಳದ್ದು ಬೇರೆಯೇ ಕಥೆ. ಬಹುತೇಕ ಎಲ್ಲ ಟಿವಿ ಸುದ್ದಿ ವಾಹಿನಿಗಳು ಆಗ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಿದ್ದವು.
ಖಾನ್ ಮತ್ತು ಸೈನಿ ಅಪ್ರಾಪ್ತ ವಯಸ್ಕಳನ್ನು ಕಾರಿನೊಳಗೆ ತಳ್ಳಲು ಪ್ರಯತ್ನಿಸಿದಾಗ ಅವಳು ತುಂಬಾ ಜೋರಾಗಿ ಕಿರುಚಲು ಪ್ರಾರಂಭಿಸಿದಳು . ಬಾಲಕಿಯ ಕಿರುಚಾಟವನ್ನು ಕೇಳಿದ ತಾಯಿ ಮನೆಯ ಹೊರಗೆ ಬಂದು ಸ್ಥಳಕ್ಕೆ ಬಂದ ಇತರ ಅಂಗಡಿಯವರೊಂದಿಗೆ ಸೇರಿ ಆಕೆಯನ್ನು ರಕ್ಷಿಸಿದ್ದಾರೆ ಎಂದೂ ಇಂಡಿಯಾ ಟಿವಿ ವರದಿ ಮಾಡಿತ್ತು. ಲವ್ ಜಿಹಾದಿಗಳ ಧೈರ್ಯ ಹಿಂದುತ್ವದ ಗುಂಪುಗಳಿಗೆ ಆಕ್ರೋಶ ತಂದಿದೆ ಎಂದು ಇಂಡಿಯಾ ಟಿವಿ ವರದಿಗಾರ ಹೇಳಿದ್ದರು.
ನ್ಯೂಸ್ 18 ಯುಪಿ ಉತ್ತರಾಖಂಡ್ನ ನಿರೂಪಕರೊಬ್ಬರು ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳಲ್ಲಿ ಹಠಾತ್ ಹೆಚ್ಚಳ ಕಂಡುಬಂದಿದೆ. ಲವ್ ಜಿಹಾದಿಗಳು ರಾಜ್ಯದಲ್ಲಿ ಕೊಳಕು ಆಟವಾಡುತ್ತಿದ್ದಾರೆ ಎಂಬುದು ಈಗ ಸ್ಪಷ್ಟವಾಗಿದೆ ಎಂದೂ ಹೇಳಿದ್ದರು.
ಇನ್ನು ಇತರ ಬಲಪಂಥೀಯ ಮಾಧ್ಯಮಗಳ ಬರಹಗಳ ಧಾಟಿಯಂತೂ ಇನ್ನೂ ಕೆಟ್ಟದಾಗಿತ್ತು. ಅಪ್ರಾಪ್ತ ಹಿಂದೂ ಬಾಲಕಿಯ ಮೇಲೆ ಒಂದು ವರ್ಷದವರೆಗೆ ಅತ್ಯಾಚಾರವೆಸಗಲಾಗಿದೆ ಎಂದು ಬಲಪಂಥೀಯ ಪ್ರಚಾರ ಜಾಲತಾಣ Op India.com ಮತ್ತು ಅದರ ಸಂಪಾದಕರಾದ ರಾಹುಲ್ ರೋಷನ್ ಹಾಗು ನೂಪುರ್ ಜೆ ಶರ್ಮಾ ಸುಳ್ಳು ಸುದ್ದಿ ಪ್ರಸಾರ ಮಾಡಿದ್ದರು.
ಹಿಂದೂ ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡು ಅಪಪ್ರಚಾರ ನಡೆಸುವ ಮೊದಲು ಅವರು ಆ ಅಪ್ರಾಪ್ತೆಯ ಪೋಷಕರೊಂದಿಗೆ ಮಾತನಾಡಿ ಸತ್ಯ ತಿಳಿದುಕೊಳ್ಳಲು ತಲೆಕೆಡಿಸಿಕೊಂಡಿರಲಿಲ್ಲ. ಅವರು ಈಗ ಅವಳ ಕುಟುಂಬದವರಲ್ಲಿ ಕ್ಷಮೆ ಕೇಳುತ್ತಾರೆಯೇ? ಅಪಪ್ರಚಾರಕ್ಕಾಗಿ ಉಬೈದ್ ಖಾನ್ ರಲ್ಲಿ ಕ್ಷಮೆ ಕೇಳುತ್ತಾರೆಯೇ? ಎಂದು ಆಲ್ಟ್ ನ್ಯೂಸ್ ಸಹ ಸಂಪಾದಕ ಮುಹಮ್ಮದ್ ಝುಬೇರ್ ಎಕ್ಸ್ ನಲ್ಲಿ ಪೋಸ್ಟ್ ನಲ್ಲಿ ಕೇಳಿದ್ದಾರೆ.
ಉವೈದ್ ಖಾನ್ ವಿರುದ್ಧ ನೀಡಿದ ದೂರಿನಲ್ಲಿ ಲವ್ ಜಿಹಾದ್ ಬಗ್ಗೆ ಯಾವುದೇ ಉಲ್ಲೇಖವೇ ಇರಲಿಲ್ಲ.
ಅಪ್ರಾಪ್ತ ವಯಸ್ಕನ ಚಿಕ್ಕಪ್ಪ ನಿಗೆ ತನ್ನ ಸೋದರ ಸೊಸೆ "ಲವ್ ಜಿಹಾದ್" ಗೆ ಬಲಿಯಾಗಿದ್ದಾಳೆ ಎಂದು ಆರೋಪಿಸಿ ಪೊಲೀಸರಿಗೆ "ನಕಲಿ ದೂರು" ದಾಖಲಿಸುವಂತೆ ಅನಿಲ್ ಅಸ್ವಾಲ್ ಹೆಸರಿನ ಪತ್ರಕರ್ತ ಒತ್ತಡ ಹಾಕಿದ್ದ ಎಂಬುದನ್ನು ಝುಬೇರ್ ತಮ್ಮ ಪೋಸ್ಟ್ ನಲ್ಲಿ ನೆನಪಿಸಿದ್ದಾರೆ.
2023 ರ ಮೇ 26 ರ ಸಂಜೆ, ಅನಿಲ್ ಅಸ್ವಾಲ್ ತನ್ನ ವೆಬ್ಸೈಟ್ ನಲ್ಲಿ ಈ ಘಟನೆಯನ್ನು "ಲವ್ ಜಿಹಾದ್" ಪಿತೂರಿ ಎಂದು ಬಿಂಬಿಸಿ ವರದಿಯೊಂದನ್ನು ಪ್ರಕಟಿಸಿದ್ದ. ಇದನ್ನೇ ಹಲವಾರು ಮಾಧ್ಯಮ ಸಂಸ್ಥೆಗಳು ನಂತರ ಎತ್ತಿಕೊಂಡು ಹಾಗೇ ಪ್ರಕಟಿಸಿದ್ದವು.
ಇದೀಗ ನ್ಯಾಯಾಲಯದ ತೀರ್ಪು ಹೊರಬಂದಿದ್ದು ಬಿಜೆಪಿ , ಸಂಘ ಪರಿವಾರದ ನಾಯಕರು, ಹಿಂದುತ್ವ ಗುಂಪುಗಳು, ಮಡಿಲ ಮಾಧ್ಯಮಗಳು ಹೇಳಿದೆಲ್ಲಾ ಸುಳ್ಳು ಎಂದು ಸಾಬೀತಾಗಿದೆ.
ಈಗ ಇವರೆಲ್ಲರ ವಿರುದ್ಧವೂ ಪ್ರಕರಣ ದಾಖಲಿಸಬೇಕಾಗಿದೆ. ಅವರೆಲ್ಲರಿಗೂ ಕಾನೂನು ಪ್ರಕಾರ ಕಠಿಣ ಶಿಕ್ಷೆಯಾಗಬೇಕಿದೆ. ಆದರೆ ಹಾಗೆ ಆಗುತ್ತಾ ?