ಅರಮನೆ ಮೈದಾನದಲ್ಲಿ ವಿಂಟೇಜ್ ಕಾರುಬಾರು
ಬೆಂಗಳೂರು: ಮಾರುಕಟ್ಟೆಗೆ ಅದೆಷ್ಟೇ ಹೊಸ ಕಾರುಗಳು ಬಂದರೂ, ನಮ್ಮ ಹಳೆಯ ಕಾರುಗಳಿಗಿರುವ ವರ್ಚಸ್ಸಿಗೆ ಬೇರೆಯದ್ದೇ ತೂಕ. ಹೌದು, ಕರ್ನಾಟಕದ ಮೊದಲ ಸರಕಾರಿ ಕಾರಿನಿಂದ ಹಿಡಿದು ಸ್ಕೋಡಾ ಪಾಪ್ಯುಲರ್ 420 ರೋಡ್ ಸ್ಟಾರ್ವರೆಗಿನ ವಿಂಟೇಜ್ ಕಾರುಗಳ ಪ್ರದರ್ಶನ ಬೆಂಗಳೂರಿನ ಅರಮನೆ ಮೈದಾನದಲ್ಲಿ ಅನಾವರಣಗೊಂಡಿದ್ದು, ಈ ಪ್ರದರ್ಶನ ಗತಕಾಲದ ಜತೆಗಿನ ಅದ್ಭುತ ಪಯಣವನ್ನು ಸಿಲಿಕಾನ್ ಸಿಟಿಯ ಜನರ ಮುಂದೆ ತಂದು ನಿಲ್ಲಿಸಿದೆ.
ನಗರದ ಅರಮನೆ ಮೈದಾನದ ತ್ರಿಪುರವಾಸಿ ಗೇಟ್ನಲ್ಲಿ ಗತಕಾಲದ ಅಪರೂಪದ ಕಾರುಗಳ ಕಾರು ಎಕ್ಸ್ ಪೋ ಸೆ.13ರಿಂದ ಮೂರು ದಿನಗಳವರೆಗೆ ಜರುಗಿತು. ಈಗಲೂ ಸುಸ್ಥಿಯಲ್ಲಿರುವ ಶತಮಾನಕ್ಕೂ ಹಳೆಯ ಕಾರುಗಳ ವೈವಿಧ್ಯಮಯ ಲೋಕವನ್ನು ಧರ್ಮಸ್ಥಳದ ಪಯಣ ವಸ್ತು ಸಂಗ್ರಹಾಲಯ ಮೊದಲ ಬಾರಿಗೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿಟ್ಟಿದೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಅವರು ಈ ಪ್ರತಿ ಯೊಂದು ಕಾರುಗಳನ್ನು ಉತ್ತಮವಾಗಿ ಸಂರಕ್ಷಿಸಿದ್ದು, ವಿಂಟೇಜ್ ಕಾರುಗಳು ಮತ್ತು ಛಾಯಾಗ್ರಹಣದಲ್ಲಿನ ಹೆಗ್ಗಡೆ ಯವರ ಆಸಕ್ತಿಯೇ ಈ ಸಂಗ್ರಹವನ್ನು ಹುಟ್ಟುಹಾಕಿದಂತಿದೆ.
ಇದು ಕೇವಲ ಕಾರುಗಳ ಇತಿಹಾಸ ಮಾತ್ರವಲ್ಲದೆ ನವೀನತೆ, ಕರಕುಶಲತೆ ಮತ್ತು ಸೌಂದರ್ಯದ ನಿರಂತರ ಅನ್ವೇಷಣೆಯನ್ನು ತೆರೆದಿಟ್ಟಿದೆ. ವಾಹನ ವಿನ್ಯಾಸದ ವಿಕಾಸ ಮತ್ತು ಉದ್ಯಮವನ್ನು ರೂಪಿಸಿದ ಪ್ರಮುಖ ಕ್ಷಣಗಳನ್ನು ನೋಡಿ ಅರ್ಥಮಾಡಿಕೊಳ್ಳಬಹುದಾಗಿದೆ.
ವಿಂಟೇಜ್ ಕಾರುಗಳ ಸಂಗ್ರಹ: ಪಯಣ ವಸ್ತು ಸಂಗ್ರಹಾಲಯವು ವಿಂಟೇಜ್ ಕಾರುಗಳ ಬಹುದೊಡ್ಡ ಸಂಗ್ರಹವನ್ನು ಹೊಂದಿದ್ದು, ಇದು ದಕ್ಷಣಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿರುವ ಮಂಜುಷಾ ಮ್ಯೂಸಿಯಂನ ವಿಸ್ತರಣೆಯಾಗಿದೆ. ಸ್ಟಾಂಡರ್ಡ್ 2000, ಕಾಂಟೆಸ್ಸಾ, ಅಂಬಾಸಿಡರ್, ಮಾರುತಿ ಝೆನ್, ಫಿಯೆಟ್ ಪಾಲಿಯೋ, ರೀವಾ, ಮಟಿಜ್, ಡಾಲ್ಫಿನ್, ಮಾರಿಸ್ ಮೊದಲಾದ ಕಾರುಗಳು ಪ್ರದರ್ಶನದಲ್ಲಿ ಸೆಳೆಯುತ್ತವೆ.
ದೇಶದ ಅಪರೂಪದ ಕಾರು: ಈ ಪ್ರದರ್ಶನದಲ್ಲಿ ಕೆಂಪು ಬಣ್ಣ ರಾಯಲ್ ಲುಕ್ ಸ್ಕೋಡಾ ಪಾಪ್ಯುಲರ್ 11420 ರೋಡ್ ಸ್ಟಾರ್ ಕಾರೊಂದು ಸಾರ್ವಜನಿಕರ ಗಮನ ಸೆಳೆಯಿತು. ಇಡೀ ದೇಶದಲ್ಲಿ ಕೇವಲ 4 ಮಂದಿಯ ಹತ್ತಿರ ಮಾತ್ರ ಸ್ಕೋಡಾ ಪಾಪ್ಯುಲರ್ ಕಾರಿದೆ. ಇದು 3 ಸ್ಪೀಡ್ ಮಾನ್ಯುವಲ್ ಗೇರ್ಗಳಿದ್ದು, ಗರಿಷ್ಠ ವೇಗವು ಗಂಟೆಗೆ 100 ಕಿ.ಮೀ. ಸಂಚರಿಸಲಿದೆ.
ಮರದ ಹೊದಿಕೆ ಕಾರು: ಪ್ರದರ್ಶನದಲ್ಲಿ ಮೊರಿಸ್ ಉಡಿ 15/6 ಕಾರಿನ ಹೊರ ಪದರವು ಮರದಿಂದ ಕೂಡಿದೆ. 1934-35ರಲ್ಲಿ ಸುಮಾರು 15,470 ಕಾರುಗಳನ್ನು ಮಾರುಕಟ್ಟೆ ಬಿಡುಗಡೆ ಮಾಡಲಾಗಿತ್ತು. ಇದರ ಮೇಲ್ಪದರವನ್ನು ಮರವನ್ನು ಬಳಸಿಕೊಂಡು ಮರು ನವೀಕರಿಸಲಾಗಿದೆ. ಇದರೊಂದಿಗೆ 3 ಡೋರ್ ಹೊಂದಿರುವ ಮೋರಿಸ್ 8 ಸೀರಿಸ್ 1 ಟೂರ್ ಪ್ರದರ್ಶನಕ್ಕೆ ಇಡಲಾಗಿದೆ. ಈ ಕಾರು 1937ರಲ್ಲಿ ಮಾರುಕಟ್ಟೆ ಬಿಡುಗಡೆ ಮಾಡಲಾಗಿದೆ.
ಕಾರುಗಳೊಂದಿಗೆ ಸೆಲ್ಫಿ: ಅಪರೂಪದ ಕಾರುಗಳ ಪ್ರದರ್ಶನದಲ್ಲಿ ಬೆಂಗಳೂರಿನ ನಾಗರಿಕರು ಬಹಳ ಉತ್ಸಹದಿಂದ ಭಾಗವಹಿಸಿದರು. ರಾಯಲ್ ಲುಕ್ ಕಾರ್ಗಳ ಮುಂದೆ ನಿಂತು ಸೆಲ್ಫಿ ತೆಗೆದುಕೊಂಡರು. ಇನ್ನೂ ಕೆಲವರು ಕಾರುಗಳ ಇತಿಹಾಸ ಕೇಳಿ ಅಚ್ಚರಿಗೊಳಗಾದ ಸಂಭವವೂ ಉಂಟಾಯ್ತು. ಪ್ರದರ್ಶನದಲ್ಲಿ ಶತಮಾನದಷ್ಟು ಹಳೆಯ 10 ಕಾರುಗಳಿದ್ದವು.
ರಾಜ್ಯದ ಮೊದಲ ಸರಕಾರಿ ಕಾರು
ಪ್ರದರ್ಶನಕ್ಕೆ ಇಡಲಾದ ಪ್ರತಿಯೊಂದು ಕಾರು ಒಂದು ಕಥೆಯನ್ನು ಹೇಳುತ್ತದೆ. ಯುನೈಟೆಡ್ ಸ್ಟೇಟ್ ಡಾಡ್ಜ್ ಕಿಂಗ್ಸ್ ವೇ ಕಸ್ಟಮ್(ಡಿ49) ಕಾರು ಕರ್ನಾಟಕದ ಮೊದಲ ಸರಕಾರಿ ಕಾರು. ಇಂದಿರಾಗಾಂಧಿ ಕರ್ನಾಟಕ್ಕೆ ಭೇಟಿ ನೀಡಿದಾಗ ಸಂಚರಿಸಿದ ಕಾರು ಇದಾಗಿದೆ. ಇದನ್ನು ಧರ್ಮಸ್ಥಳ ವಿರೇಂದ್ರ ಹೆಗ್ಗಡೆ ಅವರು ಖರೀದಿಸಿ, ತಮ್ಮ ಸಂಗ್ರಹಾಲಯದಲ್ಲಿ ಇಟ್ಟುಕೊಂಡಿದ್ದಾರೆ. ಈ ಕಾರು ಗಂಟೆಗೆ 90 ಕಿ.ಮೀ.ನಿಂದ 145 ಕಿ.ಮೀ. ವೇಗವಾಗಿ ಸಂಚರಿಸಲಿದೆ. 1954ರಲ್ಲಿ ತಯಾರಿಸಲಾದ ಕಾರು ಇದಾಗಿದೆ. ಪ್ರಸ್ತುತ ಸುಸ್ಥಿತಿಯಲ್ಲಿ ಕಾರ್ಯಾಚರಿಸುತ್ತಿದೆ.
ಶ್ರೀರಂಗಪಟ್ಟಣದ ಬಳಿಯಿರುವ ಪಯಣ ಸಂಸ್ಥೆಯು ವಿಂಟೇಜ್ ಆಟೊ ಮೊಬೈಲ್ಗಳ ಸೌಂದರ್ಯ ಮತ್ತು ಇಂಜಿನಿಯರಿಂಗ್ ಅದ್ಭುತಗಳನ್ನು ತೋರ್ಪಡಿಸುವ ಇತಿಹಾಸದ ದಾರಿದೀಪವಾಗಿ ನಿಂತಿದೆ. ನಮ್ಮ ವಸ್ತು ಸಂಗ್ರಹಾಲಯವು ಸಂಗ್ರಹಕ್ಕಿಂತ ಹೆಚ್ಚಾಗಿ ಶೈಕ್ಷಣಿಕ ಪ್ರವಾಸದಂತೆ ಗೋಚರಿಸುತ್ತದೆ. ಪಯಣ ವಸ್ತು ಸಂಗ್ರಹಾಲಯ 23 ಎಕರೆಗಳಲ್ಲಿ ಹರಡಿದ್ದು ಅಲ್ಲಿ ವಿನೂತನ 69 ವಾಹನಗಳನ್ನು ಸಂಗ್ರಹಿಸಿದೆ. 1925ರ ಇಸವಿಯ ವಿಂಟೇಜ್ ಕಾರುಗಳಿಂದ ಹಿಡಿದು ಹೊಸ ಮಾದರಿ ಕಾರುಗಳು ವೀಕ್ಷಣೆಗೆ ಇವೆ. ಅಲ್ಲಿನ ಕೆಲ ಕಾರುಗಳನ್ನು ತಂದು ಸಿಲಿಕಾನ್ ಸಿಟಿಯ ಜನರ ವೀಕ್ಷಣೆಗೆ ವೇದಿಕೆ ಕಲ್ಪಿಸಲು ಸಂತಸ ತಂದಿದೆ.
ವಿವೇಕ್, ವ್ಯವಸ್ಥಾಪಕರು, ಪಯಣ ವಸ್ತು ಸಂಗ್ರಹಾಲಯ