ಮಣಿಪುರದ ಹಿಂಸಾಚಾರ, ಆ ಐಪಿಎಸ್ ಅಧಿಕಾರಿಯ ಮಾತು ಹಾಗೂ 24 ತಾಸುಗಳ ಗಡುವು !
ಈ ದೇಶದಲ್ಲಿ ಸರಕಾರದ ಪರೋಕ್ಷ ಸಹಕಾರವಿಲ್ಲದೆ ಯಾವ ಕೋಮುಗಲಭೆಯೂ 24 ತಾಸಿಗಿಂತ ಹೆಚ್ಚಿಗೆ ವಿಸ್ತರಿಸದು: ವಿಭೂತಿ ಎನ್. ರೈ, ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ
‘‘ಸರಕಾರ ಕ್ರಮ ಕೈಗೊಳ್ಳದಿದ್ದರೆ, ನ್ಯಾಯಾಲಯವೇ ಕ್ರಮ ಕೈಗೊಳ್ಳ ಬೇಕಾದೀತು!’’ ಜುಲೈ ೨೦ರಂದು ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡರು ಹೀಗೆ ಗುಡುಗಿದ್ದು, ಮಣಿಪುರದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ. ಇಬ್ಬರು ಕುಕಿ ಬುಡಕಟ್ಟು ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿ, ಸಾಮೂಹಿಕ ಅತ್ಯಾಚಾರ ನಡೆಸಿದ ವೀಡಿಯೊ ವೈರಲ್ ಆದ ಬೆನ್ನಿಗೆ ಸ್ವಯಂ ಪ್ರೇರಿತರಾಗಿ ವಿಚಾರಣೆ ಕೈಗೆತ್ತಿಕೊಂಡ ಸಂದರ್ಭದಲ್ಲಿ ನ್ಯಾಯಪೀಠ ಈ ಮಾತು ಹೇಳಿತು.
ನ್ಯಾಯಾಲಯದ ಈ ಆಕ್ರೋಶದ ಮಾತನ್ನು ಸೂಕ್ಷ್ಮವಾಗಿ ಗಮನಿಸಿದರೆ ಎರಡು ಅಂಶಗಳು ಸ್ಪಷ್ಟವಾಗಿ ಸಾಬೀತಾಗುತ್ತವೆ. ಮೊದಲನೆಯದು, ಹಿಂಸಾಚಾರ ನಿಯಂತ್ರಿಸುವ ಕೆಲಸದಲ್ಲಿ ಸರಕಾರ ಪ್ರಾಮಾಣಿಕವಾಗಿ ಮತ್ತು ಗಂಭೀರವಾಗಿ ತನ್ನನ್ನು ತಾನು ತೊಡಗಿಸಿಕೊಂಡಿಲ್ಲ ಎಂಬುದು; ಎರಡನೆಯದು, ಹಿಂಸಾಚಾರವನ್ನು ನಿಯಂತ್ರಿಸುವ ಇಚ್ಛೆ ಸರಕಾರಗಳಿಗೆ ಇಲ್ಲವೆಂಬುದರ ಮತ್ತೊಂದು ಅರ್ಥ, ಸರಕಾರವೇ ಪರೋಕ್ಷವಾಗಿ ಹಿಂಸೆಗೆ ಇಂಬು ನೀಡುತ್ತಿದೆ ಎನ್ನುವುದು. ಯಾಕೆಂದರೆ ಇದು ಒಂದೆರಡು ದಿನಗಳಿಂದ ನಡೆಯುತ್ತಿರುವ ದೊಂಬಿಯಲ್ಲ. ಸತತ ಮೂರು ತಿಂಗಳಿಂದ ನಿರಂತರವಾಗಿ ಮಣಿಪುರ ಪ್ರಕ್ಷುಬ್ಧುತೆಯಲ್ಲಿ ಬೇಯುತ್ತಿದೆ. ಆದರೂ ಸರಕಾರಗಳು ಈ ದಳ್ಳುರಿಗೆ ಸ್ಪಂದಿಸುವಲ್ಲಿ ಅಥವಾ ನಿಯಂತ್ರಿಸುವಲ್ಲಿ ಸೋತಿವೆ ಎಂದರೆ ಏನರ್ಥ? ನ್ಯಾಯಾಲಯದ ‘ಕೈಗೊಳ್ಳದಿದ್ದರೆ’ ಎಂಬ ಮಾತಿನ ಅರ್ಥವನ್ನು, ಸರಕಾರವಿನ್ನೂ ಪರಿಣಾಮಕಾರಿ ಕ್ರಮ ‘ಕೈಗೊಂಡಿಲ್ಲ’ ಎಂದೇ ನಾವು ಗ್ರಹಿಸಬೇಕಾಗುತ್ತದೆ. ಅಲ್ಲಿಗೆ, ಸರಕಾರಗಳಿಗೆ ಈ ಗಲಭೆಯನ್ನು ನಿಯಂತ್ರಿಸುವ ಇಚ್ಛೆ ಇಲ್ಲ; ಅರ್ಥಾತ್, ಸರಕಾರಗಳೇ ಈ ಗಲಭೆಯನ್ನು ಪರೋಕ್ಷವಾಗಿ ಪ್ರೋತ್ಸಾಹಿಸುತ್ತಿವೆ ಎಂಬಂತಲ್ಲವೇ!?
ಇಲ್ಲಿ, ಹಿರಿಯ ನಿವೃತ್ತ ಐಪಿಎಸ್ ಅಧಿಕಾರಿ ವಿಭೂತಿ ಎನ್. ರೈಯವರ ಒಂದು ಮಾತು ಗಮನಾರ್ಹವೆನಿಸುತ್ತದೆ. ‘‘ಭಾರತದಂತಹ ದೇಶದಲ್ಲಿ, ಅಕಸ್ಮಾತ್ತಾಗಿ ಭುಗಿಲೇಳುವ ಯಾವುದೇ ಕೋಮುಗಲಭೆ ಅಥವಾ ಜನಾಂಗೀಯ ಸಂಘರ್ಷವು ಪ್ರಭುತ್ವದ (ಸರಕಾರ, ಆಡಳಿತ ಮತ್ತು ಪೊಲೀಸ್) ಸಹಕಾರವಿಲ್ಲದೆ 24 ಗಂಟೆಗಿಂತಲೂ ಹೆಚ್ಚಿನ ಕಾಲ ತನ್ನಿಂತಾನೇ ಮುಂದುವರಿಯಲಾರದು’’ ಎಂದು ಅವರು ಹೇಳುತ್ತಾರೆ (https://sabrangindia.in/interview/no-riot-can-last-more-24-hours-unless-state-wants-it-continue/). ಅಂದರೆ, ಗಲಭೆಯನ್ನು ನಿಯಂತ್ರಿಸಬೇಕು ಎಂಬ ಪ್ರಾಮಾಣಿಕ ಪ್ರಯತ್ನಗಳಿಗೆ ಸರಕಾರಗಳು ಮುಂದಾಗಿದ್ದೇ ಆದಲ್ಲಿ, ಒಂದು ಗಲಭೆಯನ್ನು ಇಪ್ಪತ್ತನಾಲ್ಕು ತಾಸುಗಳೊಳಗೆ ನಿಯಂತ್ರಣಕ್ಕೆ ತಂದು ಬಿಡಬಹುದು. ಅದನ್ನೂ ಮೀರಿ, ಗಲಭೆ ಮುಂದುವರಿಯಿತೆಂದರೆ ಸರಕಾರ ತಾನು ನಿಭಾಯಿಸುವ ಕರ್ತವ್ಯದಲ್ಲಿ ಉದ್ದೇಶಪೂರ್ವಕ ವಾಗಿ ನಿರಾಸಕ್ತಿ ತಳೆದು, ಗಲಭೆ ಉಲ್ಬಣಿಸಲು ಪರೋಕ್ಷವಾಗಿ ಸಹಕಾರ ನೀಡುತ್ತಿದೆ ಎಂಬುದು ಅವರ ಮಾತಿನ ತಾತ್ಪರ್ಯ. ಮಣಿಪುರ ವಿಚಾರದಲ್ಲಿ ಸುಪ್ರೀಂ ಕೋರ್ಟ್ ವ್ಯಕ್ತಪಡಿಸಿರುವ ಆತಂಕ, ಹೆಚ್ಚೂಕಮ್ಮಿ ವಿಭೂತಿ ಎನ್. ರೈಯವರ ಮಾತನ್ನೇ ಅನುಮೋದಿಸುತ್ತಿದೆ ಎನಿಸುತ್ತಿಲ್ಲವೇ?
1975ರಲ್ಲಿ ಐಪಿಎಸ್ ಅಧಿಕಾರಿಯಾಗಿ ಉತ್ತರಪ್ರದೇಶ ಕೇಡರ್ಗೆ ಸೇರಿ ಕೊಂಡ ಇವರು ಹಲವಾರು ಸೆನ್ಸಿಟಿವ್ ಜಿಲ್ಲೆಗಳಲ್ಲಿ ಕೆಲಸ ಮಾಡಿದ್ದಾರೆ. ಅವರು ೧೯೮೦ರ ಅಲಹಾಬಾದ್ ಹಿಂದೂ-ಮುಸ್ಲಿಮ್ ಗಲಭೆಯನ್ನೂ ಒಳಗೊಂಡಂತೆ ಹಲವು ಕೋಮುಗಲಭೆಗಳನ್ನು ನಿಯಂತ್ರಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದವರು. ಅಲಹಾಬಾದ್ ಗಲಭೆಯನ್ನು ಕೇಂದ್ರವಾಗಿಟ್ಟುಕೊಂಡು ಅವರು ೧೯೮೮ರಲ್ಲಿ ‘ಶಹರ್ ಮೇ ಕರ್ಫ್ಯೂ’ ಎಂಬ ಕಾದಂಬರಿಯನ್ನು ಬರೆದಿದ್ದರು. ಕೋಮುಗಲಭೆಯಂತಹ ಸಂದರ್ಭದಲ್ಲಿ, ಪೊಲೀಸ್ ಇಲಾಖೆಯ ಸಿಬ್ಬಂದಿ ಕೂಡಾ ಹೇಗೆ ಬಹುಸಂಖ್ಯಾತ ಪೂರ್ವಗ್ರಹದೊಂದಿಗೆ ಹಿಂದುತ್ವವಾದಿ ಕೋಮುವಾದಿಗಳ ಜೊತೆ ಕೈಜೋಡಿಸಿ, ಗಲಭೆಗಳನ್ನು ವಿಸ್ತರಿಸಲು ಸಹಕಾರಿಯಾಗುತ್ತಾರೆ ಎಂಬ ಕಥಾ ಹಂದರವಿರುವ, ಸತ್ಯ ಘಟನೆಗಳನ್ನಾಧರಿಸಿದ ಕಾದಂಬರಿ ಅದಾಗಿತ್ತು. ಸಹಜವಾಗಿಯೇ ಬಲಪಂಥೀಯ ಸಂಘಟನೆಗಳು ಆ ಪುಸ್ತಕದ ವಿರುದ್ಧ ಪ್ರತಿಭಟನೆ ನಡೆಸಿದವು. ಪುಸ್ತಕವನ್ನು ವಾಪಸ್ ತೆಗೆದುಕೊಳ್ಳುವಂತೆ ಧಮಕಿ ಹಾಕಿದವು. ಆ ಕಾದಂಬರಿಯನ್ನು ಸಿನೆಮಾ ಮಾಡಲು ನಿರ್ಮಾಪಕರು ಮುಂದೆ ಬಂದಾಗ, ವಿಎಚ್ಪಿ ಮುಖಂಡ ಅಶೋಕ್ ಸಿಂಘಲ್ ಅವರು ‘‘ನೀವೇನಾದರೂ ಸಿನೆಮಾ ತಯಾರಿಸಿ ಪ್ರದರ್ಶನಕ್ಕೆ ಬಿಟ್ಟರೆ, ಪ್ರದರ್ಶಿಸುವ ಎಲ್ಲಾ ಚಿತ್ರಮಂದಿರಗಳ ಮೇಲೆ ದಾಳಿ ಮಾಡಿ ಧ್ವಂಸ ಮಾಡುತ್ತೇವೆ’’ ಎಂಬ ಬಹಿರಂಗ ಬೆದರಿಕೆಯನ್ನೂ ಹಾಕಿದ್ದರು. ಅದು ಸಿನೆಮಾವಾಗಲಿಲ್ಲ.
ಆಗಿನಿಂದಲೂ ವಿಭೂತಿ ರೈ ಕೋಮುಗಲಭೆಗಳ ಬಗ್ಗೆ ಗಂಭೀರವಾಗಿ ಅಧ್ಯಯನ ಮಾಡುತ್ತಾ ಬಂದರು. ೧೯೮೭ರಲ್ಲಿ ಘಾಝಿಯಾಬಾದ್ನ ಎಸ್ಪಿಯಾಗಿದ್ದಾಗ ಮೀರತ್ ಗಲಭೆಯಲ್ಲಿ ಅವರು ಕಣ್ಣಾರೆ ಕಂಡ ಒಂದು ಘಟನೆ ತಮ್ಮ ಇಲಾಖೆಯ ಬಗ್ಗೆಯೇ ಅನುಮಾನದಿಂದ ನೋಡುವಂತೆ ಮಾಡಿತ್ತು. ಉತ್ತರಪ್ರದೇಶ ರಾಜ್ಯದಲ್ಲಿ ‘ಪ್ರಾದೇಶಿಕ್ ಆರ್ಮ್ಡ್ ಕಾನ್ಸ್ಟ್ಯಾಬುಲರಿ’ (ಪಿಎಸಿ) ಎಂಬ ವಿಶೇಷ ರಿಸರ್ವ್ ಪೊಲೀಸ್ ಬಲವಿದೆ. ಇದು ರೆಗ್ಯುಲರ್ ಕಾನೂನು ಸುವ್ಯವಸ್ಥೆ ಪೊಲೀಸ್ಗಿಂತ ಪ್ರತ್ಯೇಕವಾದುದು ಮತ್ತು ನೇರವಾಗಿ ಡಿಐಜಿ ಅವರ ಆಣತಿಗೆ ಒಳಪಡುತ್ತದೆ. ಆಯಾ ಜಿಲ್ಲೆಯ ಎಸ್ಪಿಯವರಿಗೂ ಇದರ ಮೇಲೆ ಅಧಿಕಾರ ಇರುವುದಿಲ್ಲ. ಇದು ಮೀಸಲು ಪಡೆ. ವಿಶೇಷ ಸಂದರ್ಭಗಳು, ವಿಐಪಿ ಸೆಕ್ಯುರಿಟಿ, ಹಬ್ಬ-ಮೆರವಣಿಗೆ-ಸಮಾರಂಭಗಳ ಜನಸಂದಣಿ ನಿಯಂತ್ರಣ ಇಂತಹ ಸಮಯದಲ್ಲಿ ಮತ್ತು ಗಲಭೆಗಳ ನಿಯಂತ್ರಣದಲ್ಲಿ ಬಳಕೆಯಾಗುತ್ತದೆ. ಮೀರತ್ನಲ್ಲಿ ಇದ್ದಕ್ಕಿದ್ದಂತೆ ಕೋಮುಗಲಭೆ ಭುಗಿಲೆದ್ದಿತು. ಎಸ್ಪಿಯಾಗಿ ರೈ ಅವರು ಎಷ್ಟೇ ಪ್ರಯತ್ನಪಟ್ಟರೂ ನಿಯಂತ್ರಣಕ್ಕೆ ಬಾರದಾದಾಗ, ಮೇಲಧಿಕಾರಿಗಳು ಪಿಎಸಿಗೆ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿದರು. ಆಗ ಅಖಾಡಕ್ಕಿಳಿದ ಪಿಎಸಿ ಪಡೆ, ಹಶೀಂಪುರ ಎಂಬಲ್ಲಿನ ಮುಸ್ಲಿಮ್ ಕಾಲನಿಗೆ ನುಗ್ಗಿ, ಮನಸೋಇಚ್ಛೆ ಸುಮಾರು ನಲವತ್ತು ಮುಸಲ್ಮಾನರನ್ನು ಬಂಧಿಸಿ, ತಮ್ಮ ವ್ಯಾನ್ನಲ್ಲಿ ತುಂಬಿಕೊಂಡು ಘಾಝಿಯಾಬಾದ್ನತ್ತ ಹೊರಟಿತು. ಆಗ ಸಮಯ ರಾತ್ರಿ ಒಂಭತ್ತು ಗಂಟೆ. ದಾರಿಮಧ್ಯೆ ಒಂದು ನಿರ್ಜನ ಪ್ರದೇಶದಲ್ಲಿ ವ್ಯಾನ್ ನಿಲ್ಲಿಸಿ, ಬತ್ತಿಹೋಗಿದ್ದ ಕಾಲುವೆಯೊಂದರ ದಿಬ್ಬಗಳ ನಡುವೆ ಆ ಅಮಾಯಕರನ್ನೆಲ್ಲ ಒಟ್ಟಿಗೆ ನಿಲ್ಲಲು ಹೇಳಿ, ಮನಸೋಇಚ್ಛೆ ಗುಂಡು ಹಾರಿಸಿ ಕೊಂದು ಹಾಕಿತ್ತು. ಈ ಸುದ್ದಿ ತಿಳಿಯುತ್ತಿದ್ದಂತೆಯೇ ರೈ ಅಲ್ಲಿಗೆ ಹೋದಾಗ, ರಕ್ತದ ಮಡುವಿನಲ್ಲಿ ಹೆಣದ ರಾಶಿ ಬಿದ್ದಿತ್ತು! ದೃಶ್ಯ ನೋಡಿ, ರೈ ಅವರಿಗೆ ಎದೆ ಝಲ್ಲೆಂದಿತು. ನಮ್ಮ ಪೊಲೀಸರು ಇಷ್ಟು ಕ್ರೂರಿಗಳಾಗಿರಲು ಸಾಧ್ಯವೇ? ಎಂಬ ಪ್ರಶ್ನೆ ಕಾಡಿತು.
ಹೇಗಾದರೂ ಮಾಡಿ, ಈ ಸಂತ್ರಸ್ತರಲ್ಲಿ ಒಬ್ಬನನ್ನಾದರೂ ಬದುಕಿಸಿ, ಅವನ ಮೂಲಕ ಸಾಕ್ಷಿ ಹೇಳಿಸಿ, ಪೊಲೀಸರ ಈ ಕೃತ್ಯವನ್ನು ಬೆಳಕಿಗೆ ತರಬೇಕು ಎಂದು ನಿರ್ಧರಿಸಿದ ಎಸ್ಪಿ ರೈ ಅವರು ಸತತ ಮೂರು ಗಂಟೆಗಳ ಕಾಲ, ಕಗ್ಗತ್ತಲ ನಡುವೆ, ಆ ಹೆಣದ ರಾಶಿಯಲ್ಲಿ ಒಂದೊಂದೇ ಹೆಣವನ್ನು ಅಲುಗಾಡಿಸಿ, ಕೂಗಿ, ಎಚ್ಚರಿಸಿ, ಯಾರಾದರೂ ಬದುಕಿದ್ದಾರಾ? ಎಂದು ಪರೀಕ್ಷಿಸಿದರು. ‘‘ಸತತ ಮೂರು ಗಂಟೆ ನಾನು, ನಮ್ಮ ಸಿಬ್ಬಂದಿ, ಆ ರಾಶಿಯ ನಡುವೆ ಓಡಾಡಿ, ಹುಡುಕಾಡಿದರೂ ಒಂದೂ ಪ್ರತಿಕ್ರಿಯೆ ಬರಲಿಲ್ಲ. ಹೇಗೆ ತಾನೆ ಪ್ರತಿಕ್ರಿಯಿಸಿಯಾರು? ಸ್ವಲ್ಪ ಹೊತ್ತಿಗೆ ಮುನ್ನ, ಯಾವ ಖಾಕಿ ಸಿಬ್ಬಂದಿ ಪೈಶಾಚಿಕವಾಗಿ ಅವರ ಮೇಲೆ ವಿನಾಕಾರಣ ಗುಂಡಿನ ಮಳೆಗರೆದು ಹೋಗಿದ್ದರೋ, ಅದೇ ಖಾಕಿಯನ್ನು ಮೈಮೇಲೆ ತೊಟ್ಟಿದ್ದ ನಮ್ಮನ್ನು ನಂಬಿ ಹೇಗೆ ಉಸಿರು ಬಿಟ್ಟಾರು? ಬದುಕಿರುವ ಸುಳಿವು ಸಿಕ್ಕರೆ, ಎಲ್ಲಿ ನಾವೂ ಅವರನ್ನು ಕೊಂದು ಬಿಡುತ್ತೇವೆಯೋ ಎಂದು ಉಸಿರು ಬಿಗಿಹಿಡಿದಿದ್ದರೇನೋ?’’ ಎಂಬ ಅವರ ಮಾತು ಎಂತಹ ಕಲ್ಲೆದೆಯವರನ್ನು ಅಳುಕಿಸಿಬಿಡುತ್ತದೆ. ಕೊನೆಗೂ ನರಳಾಡುತ್ತಿದ್ದ ಬಾಬುದ್ದೀನ್ ಎಂಬ ಸಂತ್ರಸ್ತನನ್ನು ರಕ್ಷಿಸಿ, ಅವನಿಗೆ ಬಿಗಿ ಭದ್ರತೆ ಒದಗಿಸಿ, ಅವನ ಮೂಲಕ ಪಿಎಸಿ ಪೊಲೀಸ್ ಸಿಬ್ಬಂದಿಯ ಮೇಲೆ ದೂರು ನೀಡಿಸಿ, ಎಫ್ಐಆರ್ ದಾಖಲಾಗುವಂತೆ ನೋಡಿಕೊಂಡಿದ್ದರು.
ಆ ಘಟನೆಯ ನಂತರ ಕೋಮುಗಲಭೆಗಳು ಮತ್ತು ಅವುಗಳಲ್ಲಿ ಪೊಲೀಸರ ಪಾತ್ರಗಳ ಕುರಿತು ಅಧ್ಯಯನ ಮಾಡಲು ಒಂದು ವರ್ಷ ಅಧ್ಯಯನ ರಜೆ ತೆಗೆದುಕೊಂಡು, ದೇಶದ ಎಲ್ಲಾ ಗಂಭೀರ ಕೋಮುಗಲಭೆಗಳ ಸಂತ್ರಸ್ತರನ್ನು ಭೇಟಿಯಾಗಿ, ಅವರ ಅಭಿಪ್ರಾಯಗಳನ್ನು ಸಂಗ್ರಹಿಸಿ, ಗಲಭೆ ನಿರ್ವಹಣೆಯಲ್ಲಿ ಆಡಳಿತಾಂಗದ ವೈಫಲ್ಯವನ್ನು ಅರ್ಥ ಮಾಡಿಕೊಂಡರು. ಅಷ್ಟೆಲ್ಲ ಅಧ್ಯಯನದ ನಂತರವೇ ಅವರು, ‘‘ಈ ದೇಶದಲ್ಲಿ ಸರಕಾರದ ಪರೋಕ್ಷ ಸಹಕಾರವಿಲ್ಲದೆ ಯಾವ ಕೋಮುಗಲಭೆಯೂ 24 ತಾಸಿಗಿಂತ ಹೆಚ್ಚಿಗೆ ವಿಸ್ತರಿಸದು’’ ಎಂಬ ಮಾತನ್ನು ದೃಢವಾಗಿ ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ನ ಆಕ್ರೋಶ ಮತ್ತು ಈ ಐಪಿಎಸ್ ಅಧಿಕಾರಿಯ ಮಾತನ್ನು ಜೊತೆಗಿಟ್ಟುಕೊಂಡು ಮಣಿಪುರದ ಹಿಂಸಾಚಾರವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಗಲಭೆಯನ್ನು ನಿಯಂತ್ರಿಸುವಲ್ಲಿ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರಕಾರಗಳು ನಿರಾಸಕ್ತಿ ವಹಿಸುತ್ತಿವೆಯೇ? ಎಂಬ ಅನುಮಾನಕ್ಕೆ ಸಾಕಷ್ಟು ಕುರುಹುಗಳು ಗೋಚರಿಸುತ್ತವೆ. ಮಣಿಪುರದಲ್ಲಿ ಸಂಘರ್ಷ ನಡೆಯುತ್ತಿರುವುದು ಮೈತೈ ಮತ್ತು ಕುಕಿ ಸಮುದಾಯಗಳ ನಡುವೆ. ಮೈತೈ ಸಮುದಾಯದಲ್ಲಿ ಹಿಂದೂ ಧರ್ಮೀಯರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ಕುಕಿ ಬುಡಕಟ್ಟು ಸಮುದಾಯದಲ್ಲಿ ಕ್ರಿಶ್ಚಿಯನ್ ಧರ್ಮೀಯರೇ ಹೆಚ್ಚು. ತನ್ನನ್ನು ತಾನು ಹಿಂದುತ್ವ ಬಲಪಂಥೀಯ ರಾಜಕಾರಣದೊಂದಿಗೆ ಸಮೀಕರಿಸಿಕೊಂಡಿರುವ ಬಿಜೆಪಿಯು ಕ್ರೈಸ್ತ ಕುಕಿಗಳ ಮೇಲೆ ದೌರ್ಜನ್ಯವೆಸಗುವ ಉದ್ದೇಶದಿಂದ ಈ ಗಲಭೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಿರಾಸಕ್ತಿ ವಹಿಸುತ್ತಿರಬಹುದೇ ಎಂಬ ಪ್ರಶ್ನೆಯನ್ನು ‘ದಿ ಗಾರ್ಡಿಯನ್’ ಪತ್ರಿಕೆ (https://www.theguardian.com/world/2023/jul/21/manipur-india-why-is-there-conflict-and-how-is-the-government-responding) ಎತ್ತಿರುವುದರಲ್ಲಿ ಅರ್ಥವಿದೆ. ಬಹುಸಂಖ್ಯಾತ ಮೈತೈ ಸಮುದಾಯದ ಬೆಂಬಲ ಹೊಂದಿರುವ ರಾಜ್ಯ ಬಿಜೆಪಿ ಸರಕಾರವು, ಮೈತೈ ಜನರು ನಿರ್ಭೀತಿಯಿಂದ, ಕುಕಿ ಅಲ್ಪಸಂಖ್ಯಾತರ ಮೇಲೆ ದೌರ್ಜನ್ಯ ಎಸಗಲು ಅನುವು ಮಾಡಿಕೊಡುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.... ಹಿಂದೂ ರಾಷ್ಟ್ರೀಯವಾದಿ ಸಿದ್ಧಾಂತದ ಮೋದಿ ಸರಕಾರವು, ಬಹುಸಂಖ್ಯಾತ ಮೈತೈ ಸಮುದಾಯದಿಂದ ಕ್ರಿಶ್ಚಿಯನ್ ಕುಕಿ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯವನ್ನು ತಡೆಯಲು ಮುಂದೆಬರುತ್ತಿಲ್ಲ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಹೀಗೆ ಹೇಳುವ ‘ದಿ ಗಾರ್ಡಿಯನ್’ ಪತ್ರಿಕೆಯ ವಿಶ್ಲೇಷಣೆಯು, ‘ಗಲಭೆ ಭುಗಿಲೆದ್ದು ಇಷ್ಟು ದಿನವಾದರೂ ಪ್ರಧಾನಿ ಮೋದಿಯವರು ಮಣಿಪುರಕ್ಕೆ ಭೇಟಿ ನೀಡಿಲ್ಲ’ ಎಂಬ ಅಂಶವನ್ನು ಓದುಗರ ಮುಂದಿಡುತ್ತದೆ.
ಇನ್ನೊಂದೆಡೆ, ಲೂಟಿಕೋರರು ಪೊಲೀಸ್ ಶಸ್ತ್ರಾಗಾರಗಳ ಮೇಲೆ ದಾಳಿ ಮಾಡಿ ಅಲ್ಲಿರುವ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕದ್ದೊಯ್ಯುತ್ತಿರುವ ಘಟನೆಗಳು ಸರಕಾರದ ಮತ್ತು ಪೊಲೀಸ್ ಇಲಾಖೆಯ ವೈಫಲ್ಯತೆಯನ್ನಷ್ಟೇ ಅಲ್ಲ, ಉದ್ದೇಶಪೂರ್ವಕ ನಿಷ್ಕ್ರಿಯತೆಯ ಅನುಮಾನವನ್ನೂ ಹುಟ್ಟುಹಾಕುತ್ತವೆ. ಇದುವರೆಗೆ ೩,೫೦೦ ಶಸ್ತ್ರಾಸ್ತ್ರಗಳನ್ನು ಹಾಗೂ 5,00,000 ಮದ್ದು ಗುಂಡುಗಳು ಮಣಿಪುರದ ಬೇರೆಬೇರೆ ಶಸ್ತ್ರಾಗಾರಗಳಿಂದ ಕಳವು ಮಾಡಲಾಗಿದೆ ಎಂದು ‘ಹಿಂದೂಸ್ತಾನ್ ಟೈಮ್ಸ್’ ತನ್ನ ವರದಿಯಲ್ಲಿ (https://www.hindustantimes.com/india-news/army-and-assam-rifles-combing-operations-retrieve-only-170-weapons-in-ethnic-clashes-hit-manipur-101687632975184.html) ಉಲ್ಲೇಖಿಸಿದೆ. ಇಷ್ಟು ಪ್ರಮಾಣದ ಮದ್ದುಗುಂಡುಗಳು ದಂಗೆಕೋರರ ಸುಪರ್ದಿಯಲ್ಲಿ ಇರುವಷ್ಟು ಕಾಲ, ಮಣಿಪುರದಲ್ಲಿ ಶಾಂತಿ ನೆಲೆಸುವ ಸಾಧ್ಯತೆ ತುಂಬಾ ಕಮ್ಮಿ. ಅಸ್ಸಾಮ್ ರೈಫಲ್ಸ್ ಮತ್ತು ಎಎಫ್ಎಸ್ಪಿಎ ಮೂಲಕ ಈ ಶಸ್ತ್ರಾಸ್ತ್ರಗಳ ಮರುವಶಕ್ಕೆ ಸೇನೆ ಕಾರ್ಯಾಚರಣೆ ನಡೆಸುತ್ತಿದೆಯಾದರೂ, ಇದುವರೆಗೆ ಕೇವಲ ಶೇ.೩೦ರಷ್ಟು ಶಸ್ತ್ರಗಳು ಮಾತ್ರ ಲಭಿಸಿವೆ.
ಮಣಿಪುರದಂತಹ ನಿರಂತರ ಪ್ರಕ್ಷುಬ್ಧ ಮತ್ತು ಗಡಿ ರಾಜ್ಯದಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ದಾಸ್ತಾನು ಇಟ್ಟಿರುವ ಉಗ್ರಾಣಗಳಿಗೆ ಸೂಕ್ತ ಭದ್ರತೆ ಕೊಡದಷ್ಟು ಸರಕಾರ ನಿರ್ಲಕ್ಷ್ಯ ವಹಿಸಿತ್ತು, ಅದರಲ್ಲೂ ದಂಗೆಯ ಸಾಧ್ಯತೆಗಳಿದ್ದ ಸಂದರ್ಭದಲ್ಲಿ, ಎಂದರೆ ಅನುಮಾನಿಸದಿರಲು ಹೇಗೆ ಸಾಧ್ಯ?
ಇದರ ಜೊತೆಗೆ, ಝೀರೋ ಎಫ್ಐಆರ್ ಕೇಸುಗಳ ನಿರ್ವಹಣೆಯಲ್ಲೂ ಪೊಲೀಸರು ಗಂಭೀರ ಲೋಪ ಎಸಗುತ್ತಿರುವುದು ಬೆಳಕಿಗೆ ಬರುತ್ತಿವೆ. 2012ರಲ್ಲಿ ನಡೆದ ನಿರ್ಭಯಾ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಚಿಸಲಾದ ನ್ಯಾ. ವರ್ಮಾ ಸಮಿತಿ ಶಿಫಾರಸು ಮಾಡಿದ ಉಪಕ್ರಮಗಳಲ್ಲಿ ಈ ಝೀರೋ ಎಫ್ಐಆರ್ ಕೂಡಾ ಒಂದು. ಯಾವುದೇ ಭಾಗದಲ್ಲಾದರೂ ಅಪರಾಧ ಪ್ರಕರಣ ನಡೆದು, ಸಂತ್ರಸ್ತರು ಆ ದೂರನ್ನು ತೆಗೆದುಕೊಂಡು ಯಾವುದೇ ಪೊಲೀಸ್ ಠಾಣೆಯನ್ನು ಎಡತಾಕಿದರೂ, ಕೃತ್ಯ ನಡೆದ ಸ್ಥಳ ನಮ್ಮ ವ್ಯಾಪ್ತಿಗೆ ಒಳಪಡುವುದೇ? ಇಲ್ಲವೇ? ಎಂಬುದನ್ನು ಲೆಕ್ಕಿಸದೆ, ಆ ಠಾಣೆ ಸಂತ್ರಸ್ತರ ದೂರನ್ನು ಸ್ವೀಕರಿಸಿ ಎಫ್ಐಆರ್ ದಾಖಲಿಸಿಕೊಳ್ಳಬೇಕು; ನಂತರ, ಅದನ್ನು ಸಂಬಂಧಪಟ್ಟ ಠಾಣೆಗೆ ವರ್ಗಾವಣೆ ಮಾಡಬೇಕು ಎಂಬುದು ಈ ಝೀರೋ ಎಫ್ಐಆರ್ನ ನಿಯಮ. ಮೊದಲ ಠಾಣೆಯಲ್ಲಿ ದಾಖಲಾಗುವ ಇಂತಹ ಎಫ್ಐಆರ್ಗೆ ಸಾಮಾನ್ಯವಾಗಿ ನೀಡಲಾಗುವ ಅನುಕ್ರಮ ಸಂಖ್ಯೆ ನೀಡದೆ, ‘0’ ಎಂದು ನೀಡಿ ದಾಖಲಿಸಿಕೊಳ್ಳಲಾಗುತ್ತದೆ. ಸಂಬಂಧಪಟ್ಟ ಠಾಣೆಗೆ ವರ್ಗಾವಣೆಯಾದ ನಂತರ, ಅಲ್ಲಿನ ಅನುಕ್ರಮ ಎಫ್ಐಆರ್ ಸಂಖ್ಯೆಯನ್ನು ಅವರು ಕೊಟ್ಟುಕೊಳ್ಳುತ್ತಾರೆ. ಆ ಕಾರಣಕ್ಕೆ ಇದನ್ನು ಝೀರೋ ಎಫ್ಐಆರ್ ಎಂದು ಕರೆಯಲಾಗುತ್ತದೆ. ಒಟ್ಟಿನಲ್ಲಿ ಕಾರ್ಯವ್ಯಾಪ್ತಿಯ ನೆಪದಲ್ಲಿ ಸಂತ್ರಸ್ತರಿಗೆ ನ್ಯಾಯ ಮತ್ತು ರಕ್ಷಣೆ ದೊರಕುವಲ್ಲಿ ವಿಳಂಬವಾಗಬಾರದು ಎನ್ನುವುದು ಇದರ ಆಶಯ.
ಮಣಿಪುರದಲ್ಲಿ ಹಿಂಸಾಚಾರ ಭುಗಿಲೆದ್ದ ನಂತರ ಇಂತಹ ಝೀರೋ ಎಫ್ಐಆರ್ಗಳು ದಾಖಲಾಗುವ ಪ್ರಮಾಣ ಗಣನೀಯವಾಗಿ ಹೆಚ್ಚಿದೆ. ಆದರೆ ಇವುಗಳನ್ನು ವಿಲೇವಾರಿ ಮಾಡುವ ವಿಚಾರದಲ್ಲಿ ಪೊಲೀಸರು ನಿರ್ಲಕ್ಷ್ಯ ವಹಿಸುತ್ತಿರುವ ವಿಚಾರ ಕೆಲವು ಪ್ರಕರಣಗಳಿಂದ ಬೆಳಕಿಗೆ ಬಂದಿದೆ. ಇಬ್ಬರು ಕುಕಿ ಮಹಿಳೆಯರನ್ನು ಬೆತ್ತಲೆ ಮೆರವಣಿಗೆ ಮಾಡಿದ ಪ್ರಕರಣ ಹೊರಜಗತ್ತಿಗೆ ತಿಳಿದದ್ದು ಹಲವು ದಿನಗಳ ನಂತರ. ಅಲ್ಲಿಯವರೆಗೂ ಪೊಲೀಸರು ಆರೋಪಿಗಳ ಮೇಲೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಅದಾದ ಬೆನ್ನಿಗೇ, ಇನ್ನಿಬ್ಬರು ಕುಕಿ-ಜೂಮೀ ಬುಡಕಟ್ಟು ಹುಡುಗಿಯರ ಮೇಲೆ ಇದೇ ರೀತಿ ಸಾಮೂಹಿಕ ಅತ್ಯಾಚಾರ ನಡೆದು, ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಮೇ ೫ರಂದು ಸುಮಾರು ನೂರರಿಂದ ಇನ್ನೂರು ಜನರಿದ್ದ ದಾಳಿಕೋರರ ಗುಂಪು, ಪೂರ್ವ ಇಂಫಾಲದಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ ಅವರ ಮೇಲೆ ದಾಳಿ ಮಾಡಿ ಈ ಕೃತ್ಯ ಎಸಗಿದ್ದವು. ಸಂತ್ರಸ್ತ ಹುಡುಗಿಯ ತಾಯಿ ತಾನಿದ್ದ ವ್ಯಾಪ್ತಿಯ ಸೈಕುಲ್ ಪೊಲೀಸ್ ಠಾಣೆಯಲ್ಲಿ ಮೇ ೧೬ರಂದು ಝೀರೋ ಎಫ್ಐಆರ್ ಕೇಸು ದಾಖಲಿಸಿದ್ದರು. ಸಂತ್ರಸ್ತರಿಗೆ ವಿಳಂಬವಾಗದಂತೆ ತ್ವರಿತವಾಗಿ ತನಿಖೆ ಶುರುವಾಗಬೇಕೆನ್ನುವ ಉದ್ದೇಶದಿಂದ ಈ ಝೀರೋ ಎಫ್ಐಆರ್ ಅನ್ನು ಜಾರಿಗೆ ತರಲಾಗಿದೆ. ಆದರೆ ಈ ನಿರ್ದಿಷ್ಟ ಪ್ರಕರಣದಲ್ಲಿ, ಸುಮಾರು ಒಂದು ತಿಂಗಳ ನಂತರ, ಜೂನ್ ೧೩ನೇ ತಾರೀಕು ಸಂಬಂಧಪಟ್ಟ ಪೋರಂಪೋಟ್ ಠಾಣೆಗೆ ಎಫ್ಐಆರ್ ವರ್ಗಾವಣೆ ಮಾಡಲಾಗಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ (https://indianexpress.com/article/explained/everyday-explainers/what-is-zero-fir-why-it-is-registered-8854310/) ವರದಿ ಮಾಡಿದೆ.
ಇಂತಹ ಅದೆಷ್ಟು ಪ್ರಕರಣಗಳ ತನಿಖೆಗಳು ವಿಳಂಬವಾಗಿರಬಹುದು? ಉದ್ದೇಶಪೂರ್ವಕವಾಗಿಯೇ ಗಲಭೆಯನ್ನು ಜೀವಂತವಾಗಿಡಲು ಈ ರೀತಿಯ ಅಸಹಾಯಕತೆಯನ್ನು ಸರಕಾರ ಮತ್ತು ಪೊಲೀಸ್ ಇಲಾಖೆ ವ್ಯಕ್ತಪಡಿ ಸುತ್ತಿವೆಯೇ? ಪ್ರಶ್ನೆಗಳಿಗಿನ್ನೂ ಉತ್ತರ ಸಿಗಬೇಕಿದೆ....