ದಲಿತ - ಮುಸ್ಲಿಂ ಒಗ್ಗಟ್ಟಿನ ಪ್ರಬಲ ಪ್ರತಿಪಾದಕ ವಿ ಟಿ ರಾಜಶೇಖರ್
ಸಂಘ ಪರಿವಾರವನ್ನು ದುಃಸ್ವಪ್ನದಂತೆ ಕಾಡಿದ ನ್ಯಾಯ ನಿಷ್ಠುರಿ
ವಿ ಟಿ ರಾಜಶೇಖರ್
ಒಬ್ಬ ವ್ಯಕ್ತಿ ಇದ್ದರು. ಅವರು ಕಳೆದ ಶತಮಾನದಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಗೆ ಬರೆಯುವಾಗ ಅವರ ಪೆನ್ ಮೊನಚು ಮಾಡಿದ ಖಡ್ಗದಂತಿತ್ತು. ಆ ವ್ಯಕ್ತಿಯ ಬಗ್ಗೆ ಚೆನ್ನಾಗಿ ಗೊತ್ತಿರುವವರಿಗೆ ಅವರು ಮೇಲ್ಮೈಗೆ ಬಣ್ಣಕಟ್ಟದ ಪ್ರಖರ ಚಿಂತಕರಾಗಿದ್ದರು ಎಂದು ಗೊತ್ತಿತ್ತು. ಅವರ ಚಿಂತನೆ ಹಾಗು ಬರಹಗಳಲ್ಲಿದ್ದ ಆ ನೇರ, ನಿಷ್ಠುರತೆ ಹಾಗು ಸ್ಪಷ್ಟತೆಯನ್ನು ಯಾರೂ ಹಗುರವಾಗಿ ತೆಗೆದುಕೊಳ್ಳುವಂತಿರಲಿಲ್ಲ.
ಹೀಗೆಂದು ಹೇಳಿದ್ದು ಅಂತರ್ ರಾಷ್ಟ್ರೀಯ ಖ್ಯಾತಿಯ ದಲಿತ ಯುವ ಚಿಂತಕ, ಆಕ್ಸ್ ಫರ್ಡ್ ಯುನಿವರ್ಸಿಟಿಯಯಲ್ಲಿ ಸೀನಿಯರ್ ಫೆಲೋ ಸೂರಜ್ ಯಾಂಗ್ಡೆ. ಅವರು ಹೀಗೆ ಹೇಳಿದ್ದು ವಿ ಟಿ ರಾಜಶೇಖರ್ ಅವರ ಬಗ್ಗೆ
ವಿಟಿ ರಾಜಶೇಖರ್ ಅಂಬೇಡ್ಕರ್ವಾದಿಗಳಿಗೆ, ದಲಿತ ದುರ್ಬಲರಿಗೆ, ಜಾತಿ ವಿರೋಧಿ ಚಳವಳಿಯಲ್ಲಿ ತೊಡಗಿಕೊಂಡಿರುವವರಿಗೆ ತುಂಬಾ ಪರಿಚಿತ ಹೆಸರು. ಬ್ರಾಹ್ಮಣ್ಯ ಹಾಗೂ ಸಂಘ ಪರಿವಾರದ ಪಾಲಿಗೆ ದುಸ್ವಪ್ನದಂತಿದ್ದ ಕಟು ಟೀಕಾಕಾರ. ತಮ್ಮ ಪ್ರಖರ ಚಿಂತನೆ ಹಾಗು ದಲಿತರ ಹಕ್ಕುಗಳಿಗಾಗಿನ ಬರಹ ಹಾಗು ಮಾತುಗಳಿಗೆ ಜಾಗತಿಕ ಮನ್ನಣೆ ಪಡೆದವರು.
ವೊಂತಿಬೆಟ್ಟು ತಿಮ್ಮಪ್ಪ ರಾಜಶೇಖರ್ ಶೆಟ್ಟಿ ಅಥವಾ ವಿಟಿ ರಾಜಶೇಖರ್ ಪತ್ರಕರ್ತರಾಗಿ, ಬರಹಗಾರರಾಗಿ, ಚಿಂತಕರಾಗಿ ಮತ್ತು ಇದೆಲ್ಲದರ ಮೂಲಕ ದಲಿತ ಧ್ವನಿಯಾಗಿ ನಿರಂತರ ಕೆಲಸ ಮಾಡಿದವರು. ಜಾತಿ ತಾರತಮ್ಯದ ವಿರುದ್ಧ ಸಿಡಿದೆದ್ದ , ಅದರ ವಿರುದ್ಧ ಮುಲಾಜಿಲ್ಲದೆ ಮಾತಾಡಿದ, ಬರೆದ ಹಾಗೂ ಹೋರಾಡಿದ ಅಪ್ರತಿಮ ಹೋರಾಟಗಾರ ವೀಟಿಆರ್. ತಾವು ಪ್ರತಿಪಾದಿಸುವ ಸಿದ್ಧಾಂತಕ್ಕಾಗಿ ಸದಾ ಬದ್ಧರಾಗಿದ್ದವರು, ಅದಕ್ಕಾಗಿ ಯಾರನ್ನು ಬೇಕಾದರೂ ಎದುರು ಹಾಕಿಕೊಳ್ಳಲು ಸಿದ್ಧವಿದ್ದವರು ವಿ ಟಿ ರಾಜಶೇಖರ್.
ದಲಿತರ ಹಕ್ಕುಗಳನ್ನು ಪ್ರತಿಪಾದಿಸಲೆಂದು ಅವರು 1981ರಲ್ಲಿ ಪ್ರಾರಂಭಿಸಿದ್ದ ಪತ್ರಿಕೆಯ ಹೆಸರು ಕೂಡ ʼದಲಿತ್ ವಾಯ್ಸ್ʼ ಎಂದೇ ಇತ್ತು.
ಪತ್ರಕರ್ತರಾಗಿ ವಿ ಟಿ ರಾಜಶೇಖರ್ ದಿ ಇಂಡಿಯನ್ ಎಕ್ಸ್ಪ್ರೆಸ್ನೊಂದಿಗೆ ಎರಡು ದಶಕಗಳ ಕಾಲ ವಿಶಿಷ್ಟವಾದ ವೃತ್ತಿಜೀವನ ಕಂಡಿದ್ದವರು. ಅದರಲ್ಲಿನ ಅವರ ಬರಹಗಳು ದೇಶದಾದ್ಯಂತ ವ್ಯಾಪಕ ಚರ್ಚೆಗಳನ್ನು ಹುಟ್ಟುಹಾಕಿದ್ದವು.
ಮೀಸಲಾತಿ ಮತ್ತು ದಲಿತ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ಅವರು ಬ್ರಾಹ್ಮಣ್ಯ ಮತ್ತು ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದರು. ಬಿಜೆಪಿಯನ್ನು ಬ್ರಾಹ್ಮಣ ಜಾತಿ ಪಾರ್ಟಿ ಎಂದೇ ಕರೆಯುತ್ತಿದ್ದರು. ಈ ದೇಶದ ದಲಿತರು , ಮುಸ್ಲಿಮರು ಒಂದಾದರೆ ಸಂಘ ಪರಿವಾರಕ್ಕೆ ಇಲ್ಲಿ ಉಳಿಗಾಲವಿಲ್ಲ ಎಂದು ಹೇಳುತ್ತಿದ್ದರು, ಅದಕ್ಕಾಗಿ ಸದಾ ಪ್ರಯತ್ನಿಸುತ್ತಿದ್ದರು.
ಹಲವಾರು ಮಹತ್ವದ ಕೃತಿಗಳ ಲೇಖಕರಾದ ರಾಜಶೇಖರ್ ಅವರು ತಮ್ಮ ಜೀವಿತಾವಧಿಯಲ್ಲಿ ಹಲವಾರು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಗೌರವಗಳನ್ನು ಪಡೆದರು.
1932ರಲ್ಲಿ ಉಡುಪಿಯಲ್ಲಿ ಜನಿಸಿದ್ದ ವಿಟಿ ರಾಜಶೇಖರ್ ದಲಿತ ಬಹುಜನ ಸಬಲೀಕರಣದ ಪ್ರವರ್ತಕ ವಿಚಾರವಾದಿಯಾಗಿದ್ದರು.
ಪತ್ರಕರ್ತರಾಗಿ 1959ರಲ್ಲಿ ಡೆಕ್ಕನ್ ಹೆರಾಲ್ಡ್ ನಲ್ಲಿ ವೃತ್ತಿ ಬದುಕು ಆರಂಭಿಸಿದ್ದ ಅವರು, ನಂತರ ʼಇಂಡಿಯನ್ ಎಕ್ಸ್ಪ್ರೆಸ್ʼ ಸೇರಿದ್ದರು, ಅಲ್ಲಿ ಸುದೀರ್ಘ 25 ವರ್ಷಗಳ ಕಾಲ ಸೇವೆ ಸಲ್ಲಿಸಿದರು.
ಹಕ್ಕುಗಳಿಗಾಗಿ ಹೊರಡುವಾಗ ಇಂಡಿಯನ್ ಎಕ್ಸ್ ಪ್ರೆಸ್ ನ ಪ್ರಭಾವೀ ಮಾಲಕತ್ವವನ್ನೂ ಎದುರು ಹಾಕಿಕೊಂಡು ಕಾನೂನು ಹೋರಾಟ ಮಾಡಿ ಗೆದ್ದವರು. ಸಾಮಾಜಿಕ ಸಮಸ್ಯೆಗಳ ಕುರಿತ ಆಳವಾದ ತಿಳುವಳಿಕೆ ಮತ್ತು ಜಾತಿ ಆಧರಿತ ತಾರತಮ್ಯದ ವಿರುದ್ಧ ಹೋರಾಡುವ ಬದ್ಧತೆಯೇ ಅವರು ʼದಲಿತ್ ವಾಯ್ಸ್ʼ ಆರಂಭಿಸಲು ಕಾರಣವಾಗಿದ್ದ ಶಕ್ತಿಯಾಗಿತ್ತು.
ಈ ನಿಟ್ಟಿನಲ್ಲಿ ರಾಜಶೇಖರ್ ಅವರ ಕೆಲಸ ಅರ್ಧ ಶತಮಾನಕ್ಕೂ ಹೆಚ್ಚಿನ ಸಮಯವ್ಯಾಪ್ತಿಯನ್ನು ಹೊಂದಿದೆ. ಈ ಅವಧಿಯಲ್ಲಿ ಅವರು ದಲಿತರ ಭಾವನೆಗಳು ಮತ್ತು ಸಮಸ್ಯೆಗಳನ್ನು ದಣಿವರಿಯಿಲ್ಲದೆ ದಾಖಲಿಸಿದ್ದಾರೆ.
ಮೇಲ್ಜಾತಿ ಪ್ರಾಬಲ್ಯ, ಅಸ್ಪೃಶ್ಯತೆ ಮತ್ತು ಜಾತಿವಾದದಿಂದ ಉಂಟಾದ ವರ್ಣಭೇದ ನೀತಿಯನ್ನು ಪ್ರಶ್ನಿಸಲು ತಮ್ಮ ಪತ್ರಿಕೆಯನ್ನು, ಬರಹಗಳನ್ನು, ಮಾತುಗಳನ್ನೂ ಬಳಸಿದ್ದಾರೆ.
ʼದಲಿತ್ ವಾಯ್ಸ್ʼ ಮಾತ್ರವಲ್ಲದೆ ತಮ್ಮ ಹಲವಾರು ಪುಸ್ತಕಗಳ ಮೂಲಕ, ಭಾರತದಲ್ಲಿ ರಾಜಕೀಯ, ಕಾನೂನು, ಧರ್ಮ ಮತ್ತು ಸಾಮಾಜಿಕ ಸಂಸ್ಥೆಗಳ ಮೇಲೆ ಜಾತಿ ಹೇಗೆ ಪ್ರಭಾವ ಬೀರುವ ತಳಮಟ್ಟದ ರಚನೆಯಾಗಿ ಉಳಿದುಬಿಟ್ಟಿದೆ ಎಂಬುದನ್ನು ಅವರು ಎತ್ತಿ ತೋರಿಸಿದ್ದಾರೆ.
ಜಾತಿ, ಇತಿಹಾಸ, ಅರ್ಥಶಾಸ್ತ್ರ, ರಾಜಕೀಯ ಮತ್ತು ಧರ್ಮ ಸೇರಿದಂತೆ ವಿವಿಧ ವಿಷಯಗಳ ಕುರಿತು ಮೂವತ್ತಕ್ಕೂ ಹೆಚ್ಚು ಮಹತ್ವದ ಕೃತಿಗಳನ್ನು ರಚಿಸಿರುವ ವಿ.ಟಿ.ರಾಜಶೇಖರ್ ರಾಷ್ಟ್ರೀಯ, ಅಂತರ್ರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದಾರೆ. 2005ರಲ್ಲಿ 'ಕ್ಯಾಸ್ಟ್-ಎ ನೇಷನ್ ವಿಥಿನ್ ದಿ ನೇಷನ್' ಕೃತಿಯು ಅವರಿಗೆ ಲಂಡನ್ ಇನ್ಸ್ ಟಿಟ್ಯೂಟ್ ಆಫ್ ಸೌತ್ ಏಷ್ಯಾ ಬುಕ್ ಆಫ್ ದಿ ಇಯರ್ ಅವಾರ್ಡ್ ತಂದುಕೊಟ್ಟಿತು. ರಾಜಶೇಖರ್ ಬರೆದಿರುವ ಇತರ ಪ್ರಮುಖ ಪುಸ್ತಕಗಳೆಂದರೆ 'ದಲಿತ್ ಮೂವ್ಮೆಂಟ್ ಇನ್ ಕರ್ನಾಟಕ', 'ದಲಿತ್: ದಿ ಬ್ಲ್ಯಾಕ್ ಅನ್ ಟಚಬಲ್ಸ್ ಆಫ್ ಇಂಡಿಯಾ', 'ಬ್ರಾಹ್ಮಿನಿಸಂ: ವೆಪನ್ಸ್ ಟು ಫೈಟ್ ಕೌಂಟರ್ ರೆವಲ್ಯೂಷನ್', 'ಹೌ ಮಾರ್ಕ್ಸ್ ಫೇಲ್ಡ್ ಇನ್ ಹಿಂದು ಇಂಡಿಯಾ'.
ರಾಜಶೇಖರ್ ಬರೆದಿರುವ ಇತರ ಪ್ರಮುಖ ಪುಸ್ತಕಗಳೆಂದರೆ, ದಲಿತ್ ಮೂವ್ಮೆಂಟ್ ಇನ್ ಕರ್ನಾಟಕ, ದಲಿತ್: ದಿ ಬ್ಲ್ಯಾಕ್ ಅನ್ಟಚಬಲ್ಸ್ ಆಫ್ ಇಂಡಿಯಾ, ಬ್ರಾಹ್ಮಿನಿಸಂ: ವೆಪನ್ಸ್ ಟು ಫೈಟ್ ಕೌಂಟರ್ ರೆವಲ್ಯೂಷನ್, ಹೌ ಮಾರ್ಕ್ಸ್ ಡೆಡ್ ಇನ್ ಹಿಂದು ಇಂಡಿಯಾ.
ʼದಲಿತ್ ವಾಯ್ಸ್ʼ ಭಾರತದಲ್ಲಿ ಅತಿ ಹೆಚ್ಚು ಪ್ರಸಾರವಾದ ʼದಲಿತ ಜರ್ನಲ್ʼ ಎಂಬ ಹೆಗ್ಗಳಿಕೆ ಪಡೆದಿತ್ತು. ಬೆಂಗಳೂರಿನಿಂದ ಪ್ರಕಟವಾಗುತ್ತಿದ್ದ ಈ ರಾಜಕೀಯ ಪಾಕ್ಷಿಕ ಪತ್ರಿಕೆಯ ಪೂರ್ಣ ಶೀರ್ಷಿಕೆ ಗಮನಿಸಿದರೆ ಅದರ ಸಂಸ್ಥಾಪಕ ಮತ್ತು ಸಂಪಾದಕರಾಗಿದ್ದ ರಾಜಶೇಖರ್ ಅವರ ಕಳಕಳಿಯನ್ನು ಅರ್ಥ ಮಾಡಿಕೊಳ್ಳಬಹುದು.
Dalit Voice: the voice of the persecuted nationalities denied human rights ತಾನೇನನ್ನು ಪ್ರತಪಾದಿಸಬೇಕಿದೆ ಎಂಬುದರ ಬಗ್ಗೆ ಸ್ಪಷ್ಟತೆಯನ್ನು ಹೊಂದಿತ್ತು ಮತ್ತು ನೇರವಾಗಿತ್ತು. 1981 ರಲ್ಲಿ ಶುರುವಾಗಿದ್ದ ದಲಿತ್ ವಾಯ್ಸ್ ನಿಯತಕಾಲಿಕೆ ಮತ್ತದರ ವೆಬ್ಸೈಟ್ 2011ರಲ್ಲಿ ಮುಚ್ಚಿತ್ತು.
ಅದರ ಪ್ರಕಟಣೆ ನಿಂತುಹೋದದ್ದು ಕೂಡ ಆರೆಸ್ಸೆಸ್ ವಾತಾವರಣದಲ್ಲಿ ಮಂಗಳೂರಿನ ಪ್ರಿಂಟಿಂಗ್ ಪ್ರೆಸ್ಗೆ ಬೆದರಿಕೆ ಬಂದ ಹಿನ್ನೆಲೆಯಲ್ಲಿ.
ದಲಿತ್ ವಾಯ್ಸ್ ನಲ್ಲಿನ ಅವರ ಪ್ರಖರ ಸಂಪಾದಕೀಯ ಗಳಿಗಾಗಿ ಅವರು ಭಾರೀ ಬೆಲೆಯನ್ನೇ ತೆತ್ತಿದ್ದಾರೆ. ಒಂದು ಸಂಪಾದಕೀಯ ಕಾಗಿ ಅವರ ಪಾಸ್ ಪಾರ್ಟ್ ರದ್ದು ಮಾಡಲಾಗಿತ್ತು. ಬಳಿಕ ಅಂದಿನ ಪ್ರಧಾನಿ ದೇವೇಗೌಡರ ಮಧ್ಯ ಪ್ರವೇಶದಿಂದ ಅದು ವಾಪಸ್ ಸಿಕ್ಕಿತ್ತು. ಅವರ ವಿರುದ್ಧ ಅಂದಿನ ಉಗ್ರ ಕಾನೂನು ಟಾಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂಧಿಸಲಾಗಿತ್ತು.
ಆದರೆ ಇದ್ಯಾವುದೂ ಅವರ ಜಾತಿ ತಾರತಮ್ಯ ವಿರೋಧಿ ಖಡಕ್ ನಿಲುವನ್ನು ಎಂದೂ ಬದಲಾಯಿಸಲೇ ಇಲ್ಲ. ಇತ್ತೀಚೆಗೆ ದಲಿತ್ ವಾಯ್ಸ್ ನ ಆನ್ಲೈನ್ ಆರ್ಕೈವ್ ಅನ್ನು ಆರಂಭಿಸಲಾಗಿದೆ.
ಸಾವಿರಾರು ಬಹುಜನ ಬುದ್ಧಿಜೀವಿಗಳು, ವಿದ್ಯಾರ್ಥಿಗಳು, ಕಾರ್ಯಕರ್ತರು ಮತ್ತು ಸಂಘಟನೆಗಳನ್ನು ಪ್ರಭಾವಿಸಿದ್ದ ದಲಿತ್ ವಾಯ್ಸ್ ನಲ್ಲಿ ಪ್ರಕಟವಾಗಿದ್ದ ಎಲ್ಲಾ ಬರಹಗಳು ಮತ್ತದರ ಪ್ರಕಟಣೆಗಳನ್ನು ಒಂದೆಡೆಯಲ್ಲಿ ಆರ್ಕೈವ್ ಆಗಿ ಅಭಿವೃದ್ಧಿಪಡಿಸಲಾಗಿದೆ.
ಅನುಕ್ರಮವಾಗಿ ಮತ್ತು ಬರಹಗಳಲ್ಲಿ ತಿಳಿಸಲಾದ ಪ್ರಮುಖ ವಿಷಯಗಳ ಪ್ರಕಾರ ಜೋಡಿಸಲಾಗಿದೆ. ಬಹುಜನ ಯುವಕರಲ್ಲಿ ಸಮಕಾಲೀನ ಚರ್ಚೆಗೆ ಉತ್ಸಾಹಭರಿತ ವೇದಿಕೆಯಾಗಲಿ ಎಂಬುದು ಅದರ ಉದ್ದೇಶವಾಗಿದೆ.
ಪ್ರಬಲ ಬ್ರಾಹ್ಮಣ್ಯ ವಿರೋಧಿ, ಜಾತಿ ವಿರೋಧಿ ಮತ್ತು ಜನಾಂಗೀಯ ವಿರೋಧಿ ನಿಲುವು, ಬ್ರಾಹ್ಮಣವಾದದಿಂದ ವಿಮೋಚನೆ ಕುರಿತ ಪ್ರತಿಪಾದನೆ ಮತ್ತು ವಿವಾದಾತ್ಮಕ ದನಿಯುಳ್ಳದ್ದಾಗಿದೆ. ಇಡೀ ವಂಚಿತ, ಅಮಾನವೀಯತೆಗೆ ತುತ್ತಾದ ಸಮುದಾಯದ ಪಾಲಿನ ಭಾರತದ ಏಕೈಕ ವಕ್ತಾರ ಇದಾಗಿದೆ ಎಂಬ ಟಿಪ್ಪಣಿಯನ್ನು ದಲಿತ್ ವಾಯ್ಸ್ ಬಗ್ಗೆ ಕೊಲಂಬಿಯಾ ವಿಶ್ವವಿದ್ಯಾಲಯದ ಗ್ರಂಥಾಲಯ ಮಾಡಿತ್ತು.
ತಮ್ಮ ಕಟುವಾದ ಬ್ರಾಹ್ಮಣ ವಿರೋಧಿ ನಿಲುವಿನ ಕಾರಣಕ್ಕೆ ಬಂಧನದಂಥ ಕ್ರಮಗಳನ್ನೂ ರಾಜಶೇಖರ್ ಅವರು ಎದುರಿಸಿದ್ದಿತ್ತು.
ದಲಿತಪರ ಕಾಳಜಿಯನ್ನೇ ಉಸಿರೆಂಬಂತೆ ಬದುಕಿದ್ದ, ಉದ್ದಕ್ಕೂ ಕಟ್ಟಾ ಬ್ರಾಹ್ಮಣ್ಯ ವಿರೋಧಿ ನಿಲುವನ್ನೇ ತೋರಿದ್ದ ಮತ್ತು ಅದಕ್ಕಾಗಿ ಹಲವು ರೀತಿಯಲ್ಲಿ ಕಿರುಕುಳ, ಕಷ್ಟ ಕಂಡಿದ್ದ ವಿಟಿ ರಾಜಶೇಖರ್ ನವೆಂಬರ್ 20ರ ಬೆಳಗ್ಗೆ ನಿಧನರಾಗಿದ್ದಾರೆ. ಅವರಿಗೆ 93 ವರ್ಷ ವಯಸ್ಸಾಗಿತ್ತು. ಮಂಗಳೂರಿನ ಶಿವಭಾಗ್ನಲ್ಲಿ ನಿವೃತ್ತ ಜೀವನವನ್ನು ನಡೆಸುತ್ತಿದ್ದ ಅವರು ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದರು. ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದಾರೆ.
ಅವರ ಪುತ್ರ ಸಲೀಲ್ ಶೆಟ್ಟಿ ಅವರು ಈ ಹಿಂದೆ ಅಂತರ್ ರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಅಮ್ನೆಸ್ಟಿ ಇಂಟರ್ ನ್ಯಾಷನಲ್ ನ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಈಗವರು ಭಾರತದಲ್ಲಿದ್ದಾರೆ.
ಗುರುವಾರ ಉಡುಪಿಯ ಒಂತಿ ಬೆಟ್ಟುವಿನಲ್ಲಿ ವಿ ಟಿ ರಾಜಶೇಖರ್ ಅವರ ಅಂತಿಮ ಸಂಸ್ಕಾರ ನಡೆಯಲಿದೆ.