ಹೈಕಮಾಂಡ್ ಗೆ ಅಪಾಯದ ಮುನ್ಸೂಚನೆ : ದಿಢೀರ್ ಭೇಟಿ, ಸಭೆ, ವಾರ್ನಿಂಗ್
ಬಹುಮತ ಪಡೆದು ಅಧಿಕಾರಕ್ಕೆ ಬಂದ ರಾಜ್ಯ ಕಾಂಗ್ರೆಸ್ ನ ಬಣ ರಾಜಕೀಯ, ಪರಸ್ಪರ ಕಿತ್ತಾಟ ಸರಕಾರಕ್ಕೇ ಸಮಸ್ಯೆ ತಂದೊಡ್ಡುವವರೆಗೆ ಬೆಳೆದಿದೆಯೇ ?. ಕಾಂಗ್ರೆಸ್ ನ ದಿಲ್ಲಿ ವರಿಷ್ಠರು ಬೆಂಗಳೂರಿಗೆ ಓಡೋಡಿ ಬಂದು ಸಭೆ ನಡೆಸಿರೋದು ನೋಡಿದರೆ - ಹೌದು.
ಅಲ್ಲೊಬ್ಬರು, ಇಲ್ಲೊಬ್ಬರು ಸಚಿವರು, ಶಾಸಕರು ಒಂದೊಂದು ಒಡಕಿನ ಹೇಳಿಕೆ ಕೊಡೋದು, ಇನ್ನೊಂದಿಷ್ಟು ಮಂದಿ ಶಾಸಕರು ಸಚಿವರ ನೇತೃತ್ವದಲ್ಲಿ ಟೂರ್ ಹೊರಡೋದು, ಅದನ್ನು ಕೆಪಿಸಿಸಿ ತಡೆಯೋದು, ಈಗ ಹೋಗೋದಿಲ್ಲ, ಆದರೆ ಮತ್ತೆ ಹೋಗೇ ಹೋಗ್ತೀವಿ ಅಂತ ಅವರು ಹೇಳೋದು - ಹೀಗೆ ರಾಜ್ಯ ಕಾಂಗ್ರೆಸ್ ನೊಳಗಿನ ಗೊಂದಲಗಳು ಒಂದೆರಡಲ್ಲ. ಆದರೆ ಈವರೆಗೆ ಆ ಎಲ್ಲ ಗೊಂದಲ, ಭಿನ್ನ ಸ್ವರಗಳನ್ನು ನೋಡಿಕೊಂಡು ಸುಮ್ಮನಿದ್ದ ಕೈ ವರಿಷ್ಠರು ಇನ್ನು ಮೌನವಾಗಿದ್ದರೆ ಅಪಾಯ ಎಂದು ಫೀಲ್ಡಿಗೆ ಇಳಿದಿದ್ದಾರೆ. ಬೆಂಗಳೂರಿಗೆ ಬಂದಿದ್ದಾರೆ. ಸಿಎಂ, ಡಿಸಿಎಂ ಜೊತೆ ಮೀಟಿಂಗ್ ಮಾಡಿದ್ದಾರೆ. ಪಕ್ಷದ ರಾಜ್ಯ ನಾಯಕರಿಗೆ, ಸಚಿವರಿಗೆ, ಶಾಸಕರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಡಿಸಿಎಂ ಡಿ ಕೆ ಶಿವಕುಮಾರ್ ಹಾಗು ಸತೀಶ್ ಜಾರಕಿಹೊಳಿ ನಡುವಿನ ವೈಮನಸ್ಸು ಪಕ್ಷಕ್ಕೆ, ಸರಕಾರಕ್ಕೆ ಮುಜುಗರ ತರುವಷ್ಟು ಪ್ರಮಾಣದಲ್ಲಿ ಬೆಳೆದಿದ್ದು, ಅದಕ್ಕೆ ರಮೇಶ್ ಜಾರಕಿಹೊಳಿ ಕೂಡ ಸೇರಿಕೊಂಡಿದ್ದು, ಮಹಾರಾಷ್ಟ್ರ ಮಾದರಿಯಲ್ಲಿ ಇಲ್ಲಿ ರಾತ್ರೋರಾತ್ರಿ ಸರಕಾರ ಉರುಳುತ್ತೆ ಅಂತ ಹೇಳಿದ್ದು - ದಿಲ್ಲಿ ವರಿಷ್ಠರಿಗೆ ಅಪಾಯದ ಕರೆಗಂಟೆ ಬಾರಿಸಿದಂತಾಗಿದೆ.
ರಾಜ್ಯದಲ್ಲಿ ಇತ್ತೀಚಿಗೆ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ನಡುವೆಯೇ, ಕಾಂಗ್ರೆಸ್ ಹೈಕಮಾಂಡ್ ನಾಯಕರು ರಾಜ್ಯಕ್ಕೆ ಡಿಢೀರ್ ಭೇಟಿ ನೀಡಿ ಸಭೆ ಕರೆದಿದ್ದಾರೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬೆಂಗಳೂರಿಗೆ ಆಗಮಿಸಿ, ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ನಾಯಕರ ಜೊತೆ ಸಭೆ ನಡೆಸಿದ್ದಾರೆ.
ಹೈಕಮಾಂಡ್ ನಾಯಕರು ಸಿಎಂ ಮತ್ತು ಡಿಸಿಎಂ ಜೊತೆಗೆ ತುರ್ತು ಸಭೆ ನಡೆಸಿದ ಉದ್ದೇಶವೇನು ಎಂಬುದು ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದಿವೆ. ಆದರೆ ಪಕ್ಷದೊಳಗೆ ನಾಯಕರ ಮಧ್ಯೆ ಈಗಾಗಲೇ ಒಳಬೇಗುದಿ ಶುರುವಾಗಿದೆ. ಸಚಿವ ಸಂಪುಟ ಪುನಾರಚನೆಯ ಬಗ್ಗೆ ಕೆಲವರು ಮಾತನಾಡಿದರೆ, ಸಿಎಂ ಬದಲಾವಣೆ, ಹೆಚ್ಚುವರಿ ಡಿಸಿಎಂ ಬಗ್ಗೆಯೂ ಕೆಲವರು ಮಾತುಕತೆ ನಡೆಸುತ್ತಿದ್ದಾರೆ, ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಉನ್ನತ ನಾಯಕರ ನಡುವಿನ ಈ ಕಚ್ಚಾಟ ಹೈಕಮಾಂಡ್ ನ ತಲೆಕೆಡಿಸಿದೆ.
ಪಕ್ಷ ಮತ್ತು ಸರ್ಕಾರದೊಳಗೆ ನಡೆಯುತ್ತಿರುವ ಅಂತರಿಕ ತುಮುಲ, ಬಹಿರಂಗ ಹೇಳಿಕೆಗಳಿಂದ ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿರುವುದನ್ನು ಗಮನಿಸಿದ 'ಕೈ' ಹೈಕಮಾಂಡ್, ಸಚಿವರು, ಶಾಸಕರಿಗೆ ಕಠಿಣ ಎಚ್ಚರಿಕೆ ಕೊಟ್ಟಿದೆ. ಪಂಚ ರಾಜ್ಯ ಚುನಾವಣಾ ಬಿಝಿಯಲ್ಲಿರುವ ಕಾಂಗ್ರೆಸ್ ಹೈಕಮಾಂಡ್ ಅದರ ನಡುವೆಯೇ ಬೆಂಗಳೂರಿಗೆ ಬಂದು ಸಭೆ ನಡೆಸಿದೆ ಎಂದರೆ ಪರಿಸ್ಥಿತಿ ಅದೆಷ್ಟು ಬಿಗಡಾಯಿಸಿದೆ ಎಂದು ಯಾರೂ ಅರ್ಥ ಮಾಡಿಕೊಳ್ಳಬಹುದು.
ಇಷ್ಟೆಲ್ಲ ಗ್ಯಾರಂಟಿ ಕೊಟ್ಟು, ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮ ಹಾಗೂ ಜನಪರ ಯೋಜನೆಗಳಿಗೆ ಭರ್ಜರಿ ಪ್ರಚಾರ ಸಿಗುವ ಬದಲು, ಕಳೆದ ಕೆಲವು ದಿನಗಳಿಂದ ಪಕ್ಷದೊಳಗಿನ ವಿವಾದಗಳೇ ಹೆಚ್ಚು ಸುದ್ದಿಯಾಗುತ್ತಿರುವುದರಿಂದ ಆತಂಕಗೊಂಡ ಹೈಕಮಾಂಡ್ ಇನ್ನು ತಡ ಮಾಡಿದರೆ ಆಗದು ಎಂದು ಮಧ್ಯಪ್ರವೇಶ ಮಾಡಿದೆ.
ಎರಡು ವರ್ಷಗಳ ಬಳಿಕ ಸಚಿವ ಸಂಪುಟ ಪುನಾರಚನೆ, ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿ ಇಂತಹ ವಿಷಯಗಳ ಬಗ್ಗೆ ಯಾರೊಬ್ಬರೂ ಮಾತನಾಡದಂತೆ ನೀವಿಬ್ಬರೇ ನಿಗಾ ವಹಿಸಬೇಕು. ನೀವು ನಿಯಂತ್ರಿಸದೇ ಇದ್ದರೆ ಹೈಕಮಾಂಡ್ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಲಿದೆ. ಸಚಿವ ಸ್ಥಾನದಿಂದ ಕೈಬಿಡುವುದೂ ಸೇರಿದಂತೆ ಎಲ್ಲ ರೀತಿಯ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳಲಾಗುವುದೆಂಬ ಎಚ್ಚರಿಕೆ ನೀಡಬೇಕು' ಎಂದು ಸಭೆಯಲ್ಲಿ ವೇಣುಗೋಪಾಲ್ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ಅವರಿಗೆ ಮನವರಿಕೆ ಮಾಡಿಕೊಟ್ಟರು ಎಂದು ವರದಿಯಾಗಿದೆ.
ಆ ಬಳಿಕ ಸುದ್ದಿಗೋಷ್ಠಿ ಕರೆದು ಸುರ್ಜೆವಾಲಾ ಅವರು ಬಹಿರಂಗವಾಗಿ ಮಾತನಾಡುವವರಿಗೆ ಶಿಸ್ತಿನ ಕ್ರಮದ ಎಚ್ಚರಿಕೆಯನ್ನೂ ನೀಡಿದ್ದಾರೆ.
ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸುವ ಅಧಿಕಾರ ಶಾಸಕರು, ಸಚಿವರಿಗೆ ಇಲ್ಲ. ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತಹ ಹೇಳಿಕೆಯನ್ನು ಬೆಂಬಲಿಗರು ನೀಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನವನ್ನು ರಾಜ್ಯ ನಾಯಕತ್ವ ಮಾಡಿಲ್ಲ. ಈ ಧೋರಣೆ ಮುಂದುವರಿಯಬಾರದು ಎಂದು ಸೂಚನೆ ನೀಡಿದ್ದಾರೆ.
ಇತ್ತೀಚೆಗೆ ಇದ್ದಕ್ಕಿದಂತೆ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ತೆರಳಿದ್ದ ಸಿಎಂ, ಔತಣಕೂಟದಲ್ಲಿ ಭಾಗಿಯಾಗಿದ್ದರು. ಅಲ್ಲಿ ರಾಜಕೀಯ ಮಾತುಕತೆಗಳು ಸಹಜವಾಗಿ ನಡೆದಿವೆ. ಆ ಬಳಿಕ , ಈ ಬಗ್ಗೆ ಸಿಎಂ ಪ್ರತಿಕ್ರಿಯಿಸಿ ಜಿ. ಪರಮೇಶ್ವರ್ ಊಟಕ್ಕೆ ಕರೆದಿದ್ದರು, ನಾನು ಹೋಗಿದ್ದೆ ಅಷ್ಟೇ, ಇದಕ್ಕೆ ಮಸಾಲೆ ಸೇರಿಸಬೇಡಿ ಅಂತ ಹೇಳಿದ್ದರು. ಆದರೆ, ಈ ಔತಣಕೂಟಕ್ಕೆ ಡಿಸಿಎಂ ಡಿಕೆಶಿಗೆ ಆಹ್ವಾನ ಇರಲಿಲ್ಲ ಎನ್ನಲಾಗಿದೆ.
ಇನ್ನು ಕೆಲವು ಶಾಸಕರು ಬಹಿರಂಗವಾಗಿಯೇ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಶುರು ಮಾಡಿರುವುದೂ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು "ಶಾಸಕರಿಗೆ ಯಾರೂ ಹೇಳಿಕೆ ನೀಡದಂತೆ ಸೂಚನೆ ನೀಡಿದರೂ ಅವರು ಸುಮ್ಮನಾಗುತ್ತಿಲ್ಲ. ಸಹಜವಾಗಿ ಇದು ಸರ್ಕಾರಕ್ಕೆ ಹಿನ್ನಡೆಯಾಗುತ್ತಿದೆ" ಎಂದು ಹೇಳಿದ್ದರು.
ಅನುದಾನ ವಿಚಾರವಾಗಿ ಕೆಲವು ಶಾಸಕರು ಬಹಿರಂಗವಾಗಿಯೇ ಆರೋಪ ಮಾಡಿದ್ದರು. ಸಿಎಂಗೆ ಪತ್ರವನ್ನೂ ಬರೆದಿದ್ದರು . ಕೆಲವು ಶಾಸಕರು ಸಚಿವರ ಕಾರ್ಯವೈಖರಿಯ ಬಗ್ಗೆ ಅಸಮಾಧಾನ ಹೊರಹಾಕಿದ್ದೂ ಇದೆ. ಮತ್ತೆ ಕೆಲವು ಶಾಸಕರು ನಮಗೆ ಸಚಿವ ಸ್ಥಾನ ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ. ಶಾಸಕರಾದ ಅಶೋಕ್ ಪಟ್ಟಣ, ಬೇಳೂರು ಗೋಪಾಲಕೃಷ್ಣ ಇದರಲ್ಲಿ ಮೊದಲಿಗರಾಗಿದ್ದಾರೆ.
ಪಕ್ಷದ ಆಂತರಿಕ ಭಿನ್ನಮತಕ್ಕೆ ಮತ್ತೊಂದು ಕಾರಣ ಹೆಚ್ಚುವರಿ ಡಿಸಿಎಂ ಬೇಡಿಕೆ. ಸಚಿವ ಕೆ.ಎನ್ ರಾಜಣ್ಣ, ಸತೀಶ್ ಜಾರಕಿಹೊಳಿ, ಡಾ. ಪರಮೇಶ್ವರ್ ಕೂಡಾ ಈ ಬೇಡಿಕೆಯನ್ನು ಇಟ್ಟಿದ್ದರು. ಸಿದ್ದು ಬಣದ ಆಪ್ತ ಶಾಸಕರು ಇದಕ್ಕೆ ಸಾಥ್ ನೀಡಿದ್ದಾರೆ. ಡಿಕೆಶಿ ಪ್ರಭಾವ ಕುಗ್ಗಿಸಲು ಈ ಬೇಡಿಕೆಯನ್ನು ಇಡಲಾಗುತ್ತಿದೆ ಎಂಬ ಗುಸುಗುಸು ಇಲ್ಲದೇನಿಲ್ಲ. ಆದರೆ ಇದು ಮತ್ತೊಂದೆಡೆ ಡಿಕೆಶಿ ಬಣದ ವಿರೋಧ ಕಟ್ಟಿಕೊಳ್ಳಲು ಕಾರಣವಾಗುತ್ತಿದೆ. ಹೈಕಮಾಂಡ್ ಬಳಿ ಡಿಕೆಶಿ ದೂರು ನೀಡಿದರೂ ಈ ವಾದ ನಿಂತಿರಲಿಲ್ಲ.
ಇನ್ನು ಪಕ್ಷದೊಳಗೆ ಬಿಕ್ಕಟ್ಟಿಗೆ ಕಾರಣವಾಗುತ್ತಿರುವ ಮತ್ತೊಂದು ವಿಚಾರ ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್, ಡಿಕೆಶಿ ನಡುವಿನ ಬೆಳಗಾವಿ ರಾಜಕೀಯ. ಬೆಳಗಾವಿಯ ಆಂತರಿಕ ರಾಜಕೀಯ, ವರ್ಗಾವಣೆ, ನೇಮಕಾತಿ ವಿಚಾರವಾಗಿ ಡಿಕೆಶಿ ಮಧ್ಯ ಪ್ರವೇಶ ಮಾಡುತ್ತಾರೆ ಎಂಬುವುದು ಕೇಳಿ ಬರುತ್ತಿರುವ ಆರೋಪ. ಈ ಬಗ್ಗೆ ಸತೀಶ್ ಜಾರಕಿಹೊಳಿ ಪರೋಕ್ಷ ಅಸಮಾಧಾನ ಹೊರ ಹಾಕಿಯೂ ಆಗಿದೆ.
ಶಾಸಕರ ತಂಡದ ಜೊತೆ ಸತೀಶ್ ಜಾರಕಿಹೊಳಿ ಮೈಸೂರು ಪ್ರವಾಸಕ್ಕೆ ಹೊರಟ್ಟಿದ್ದು ಸದ್ದು ಮಾಡಿತ್ತು. ಆದರೆ ಹೈಕಮಾಂಡ್ ಸೂಚನೆಯಂತೆ ಅವರು ಸುಮ್ಮನಾಗಿದ್ದರು. ಆದರೆ ಇದೀಗ ಮತ್ತೊಮ್ಮೆ ದುಬೈ ಪ್ರವಾಸಕ್ಕೂ ಸತೀಶ್ ಹಾಗೂ ಟೀಂ ಮುಂದಾಗಿದೆ ಎಂದು ವರದಿಯಾಗಿದೆ. ಸಹಜವಾಗಿ ಇದು ಮತ್ತೊಂದು ಸಮಸ್ಯೆಯನ್ನು ಸೃಷ್ಟಿಮಾಡಿದೆ. ದುಬೈ ಪ್ರವಾಸಕ್ಕೆ ತೆರಳಿದ್ದಲ್ಲಿ ಸರ್ಕಾರಕ್ಕೆ ಇದು ಮುಜುಗರ ಉಂಟು ಮಾಡಲಿದೆ.
ಹಿರಿಯ ಕಾಂಗ್ರೆಸ್ ನಾಯಕ ಬಿ.ಕೆ ಹರಿಪ್ರಸಾದ್ ಅಸಮಾಧಾನವೂ ಹೈಕಮಾಂಡ್ ತಲೆನೋವಿಗೆ ಕಾರಣವಾಗಿದೆ. ಸಿದ್ದರಾಮಯ್ಯ ವಿರುದ್ಧವೇ ಬಿಕೆ ಹರಿಪ್ರಸಾದ್ ವಾಗ್ದಾಳಿ ನಡೆಸಿದ್ದರು. ತಮಗೆ ಸಚಿವ ಸ್ಥಾನ ಸಿಗದೇ ಇರಲು ಸಿದ್ದರಾಮಯ್ಯ ಕಾರಣ ಎಂಬುವುದು ಇವರ ಅಸಮಾಧಾನಕ್ಕೆ ಕಾರಣವಾಗಿದೆ.
ಇನ್ನು, ಮತ್ತೊರ್ವ ಹಿರಿಯ ಕಾಂಗ್ರೆಸ್ ನಾಯಕ ಶಾಮನೂರು ಶಿವಶಂಕರಪ್ಪ ಕೂಡಾ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಲಿಂಗಾಯತ ಅಧಿಕಾರಿಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಬಹಿರಂಗ ಆರೋಪ ಮಾಡಿದ್ದರು. ಇದು ಸರ್ಕಾರಕ್ಕೆ ತೀವ್ರ ಮುಜುಗರ ಉಂಟು ಮಾಡಿತ್ತು. ಇವೆಲ್ಲದರ ನಡುವೆ ರಾಜ್ಯದಲ್ಲಿ ಆಪರೇಷನ್ ಕಮಲದ ಚರ್ಚೆಗಳು ಗರಿಗೆದರಿದೆ. ಬಿಜೆಪಿಯ ಒಂದು ತಂಡ ಈ ಪ್ರಯತ್ನದಲ್ಲಿ ನಿರತವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚೆತ್ತುಕೊಂಡಿದೆ.
ಆದರೆ ರಾಜ್ಯ ಬಿಜೆಪಿಯಲ್ಲೂ ಪರಿಸ್ಥಿತಿ ಏನೂ ಚೆನ್ನಾಗಿಲ್ಲ. ಅಲ್ಲೊಬ್ಬ ಮುನ್ನಡೆಸುವ ನಾಯಕನೇ ಇಲ್ಲ. ರಾಜ್ಯಾಧ್ಯಕ್ಷರೂ ಇಲ್ಲ, ವಿಪಕ್ಷ ನಾಯಕರೂ ಇಲ್ಲದ ಸ್ಥಿತಿ ಆ ಪಕ್ಷದ್ದು. ಕೂಡಲೇ ವಿಪಕ್ಷ ನಾಯಕರ ನೇಮಕ ಮಾಡಿ. ಇಲ್ಲದಿದ್ದರೆ ಮುಂದಿನ ಅಧಿವೇಶನದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಬಿಜೆಪಿ ಶಾಸಕರು ವರಿಷ್ಟರೆದುರು ಅಸಮಾಧಾನ ತೋಡಿಕೊಳ್ಳುವಂತಹ ಪರಿಸ್ಥಿತಿ ಅಲ್ಲಿದೆ.
ಬಿಜೆಪಿ ಆಡಳಿತದ ವಿರುದ್ಧದ ಜನರ ಆಕ್ರೋಶದ ಪೂರ್ಣ ಲಾಭ ಪಡೆದ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರಕ್ಕೆ ಏರಿದೆ. ಈಗ ಜನರ ಆಶೋತ್ತರಗಳನ್ನು ಈಡೇರಿಸುವುದು ಅದರ ಜವಾಬ್ದಾರಿ. ಅದನ್ನು ಬಿಟ್ಟು ಕೇವಲ ರಾಜಕೀಯ ಮೇಲಾಟಕ್ಕೆ ಕಾಂಗ್ರೆಸ್ ಮುಖಂಡರು ಸೀಮಿತರಾದರೆ ಮುಂದೆ ಅದಕ್ಕೆ ತಕ್ಕ ಬೆಲೆ ತೆರಬೇಕಾಗುತ್ತದೆ.