ವಿಶ್ವವಿದ್ಯಾನಿಲಯಗಳ ಸಂಖ್ಯೆ ಹೆಚ್ಚಳದಿಂದಾಗುವ ಲಾಭವೇನು?
ಸಾಂದರ್ಭಿಕ ಚಿತ್ರ
ವಿಶ್ವವಿದ್ಯಾನಿಲಯಗಳೆಂದರೆ ವಿಶ್ವಜ್ಞಾನವನ್ನು ತಯಾರಿಸುವ ಮತ್ತು ರವಾನಿಸುವ ಪವಿತ್ರವಾದ ಸ್ಥಳ. ಕೆಲವು ಪಾಶ್ಚಿಮಾತ್ಯ ದೇಶಗಳಲ್ಲಿ ವಿಶ್ವವಿದ್ಯಾನಿಲಯಗಳೇ ಆ ದೇಶದ ಅಸ್ಮಿತೆಯನ್ನು ಸಾರುತ್ತವೆ. ಒಂದು ಕಾಲದಲ್ಲಿ ನಳಂದ, ತಕ್ಷಶಿಲ ವಿಶ್ವವಿದ್ಯಾನಿಲಯಗಳು ಭಾರತದ ಜ್ಞಾನಸಂಪತ್ತನ್ನು ವಿಶ್ವಕ್ಕೆ ಸಾರುತ್ತಿದ್ದವು. ಆದರೆ ಇಂದು ದೇಶದ ಹೆಚ್ಚಿನ ವಿಶ್ವವಿದ್ಯಾನಿಲಯಗಳು ಶೈಕ್ಷಣಿಕ ಚಟುವಟಿಕೆಗಳನ್ನು ಬಿಟ್ಟು ಬಾಕಿ ಎಲ್ಲದರಲ್ಲೂ ಮಗ್ನವಾಗಿವೆ! ಖಾಸಗಿ ವಿಶ್ವವಿದ್ಯಾನಿಲಯಗಳು ಎಂಬ ಪರಿಕಲ್ಪನೆ ಬಂದ ಮೇಲೆ ವಿಶ್ವವಿದ್ಯಾನಿಲಯಗಳ ಸಂಖ್ಯೆ ಅಣಬೆಗಳಂತೆ ಹೆಚ್ಚಾಗುತ್ತಿವೆ. ಸರಕಾರಿ ವಿಶ್ವವಿದ್ಯಾನಿಲಯಗಳು, ಖಾಸಗಿ ವಿಶ್ವವಿದ್ಯಾನಿಲಯಗಳು, ಡಿಮ್ಡ್ ವಿಶ್ವವಿದ್ಯಾನಿಲಯಗಳು ಹೀಗೆ ಒಂದರ ಮೇಲೊಂದು ವಿಶ್ವವಿದ್ಯಾನಿಲಯಗಳು ದೇಶಾದ್ಯಂತ ಹುಟ್ಟಿಕೊಳ್ಳುತ್ತಿದ್ದು ಪ್ರಾಥಮಿಕ ಶಾಲೆಗಳಿಗಿಂತಲೂ ಇವುಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರೆ ಅತಿಶಯೋಕ್ತಿ ಆಗಲಾರದು! ಕಳೆದ ವರ್ಷ ಕರ್ನಾಟಕದಲ್ಲಿ ಆರಂಭವಾದ ಎಂಟು ಹೊಸ ಸರಕಾರಿ ವಿಶ್ವವಿದ್ಯಾನಿಲಯಗಳು ಸಹ ಇದೇ ಸಾಲಿಗೆ ಸೇರುತ್ತವೆ. ಅದಲ್ಲದೆ ಇನ್ನೂ ಹತ್ತಾರು ಖಾಸಗಿ ವಿಶ್ವವಿದ್ಯಾನಿಲಯಗಳು ಸರಕಾರದ ಅನುಮೋದನೆಗೆ ಕಾದಿದ್ದು ಮುಂದಿನ ದಿನಗಳಲ್ಲಿ ಕರ್ನಾಟಕ ವಿಶ್ವವಿದ್ಯಾನಿಲಯಗಳ ರಾಜಧಾನಿ ಅನಿಸಿಕೊಂಡಿರುವ ಆಶ್ಚರ್ಯವಿಲ್ಲ. ಇಷ್ಟೆಲ್ಲ ವಿಶ್ವವಿದ್ಯಾನಿಲಯಗಳಿದ್ದರೂ ಸಹ ಜಾಗತಿಕ ಮಟ್ಟದಲ್ಲಿ ಹೆಸರು ಮಾಡಿರುವ ಒಂದು ವಿಶ್ವವಿದ್ಯಾನಿಲಯ ಸಹ ನಮ್ಮಲ್ಲಿ ಇಲ್ಲ ಎನ್ನುವುದು ಶೈಕ್ಷಣಿಕ ತಜ್ಞರು ತಲೆ ಕೆಡಿಸಿಕೊಳ್ಳಬೇಕಾಗಿರುವ ವಿಚಾರವಾಗಿದೆ. ಯಾತಕ್ಕಾಗಿ ಇಷ್ಟೊಂದು ವಿಶ್ವವಿದ್ಯಾನಿಲಯಗಳು? ಯಾರಿಗಾಗಿ ಇಷ್ಟೊಂದು ವಿಶ್ವವಿದ್ಯಾನಿಲಯಗಳು? ನಿಜಕ್ಕೂ ನಮಗೆ ಇಷ್ಟೊಂದು ವಿಶ್ವವಿದ್ಯಾನಿಲಯಗಳು ಬೇಕೆ? ಇದು ಹೀಗೆ ಮುಂದುವರಿದರೆ ಮುಂದೊಂದು ದಿನ ಜಿಲ್ಲಾ ಮಟ್ಟದ ಉಪಕುಲಪತಿಗಳ ಸಭೆ, ತಾಲೂಕು ಮಟ್ಟದ ಉಪಕುಲಪತಿಗಳ ಸಭೆ ನಡೆದರು ಆಶ್ಚರ್ಯವಿಲ್ಲ! ಇಂದು ಅಮೆರಿಕ, ಯುರೋಪಿನ ದೇಶಗಳು ಆರ್ಥಿಕವಾಗಿ, ಸಾಮಾಜಿಕವಾಗಿ ಶೈಕ್ಷಣಿಕವಾಗಿ ಮುಂದುವರಿಯಲು ಅಲ್ಲಿನ ವಿಶ್ವವಿದ್ಯಾನಿಲಯಗಳ ಪಾತ್ರ ಬಹಳ ಮುಖ್ಯವಾಗಿತ್ತು. ಆದರೆ ಇಷ್ಟೊಂದು ವಿಶ್ವವಿದ್ಯಾನಿಲಯಗಳನ್ನು ಹೊಂದಿರುವ ನಮ್ಮ ದೇಶ ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿಯಲು ಕಾರಣವೇನು? ಯಾವ ಶೈಕ್ಷಣಿಕ ಪಂಡಿತರು ರಾಜಕೀಯ ನೇತಾರರು ಇದರ ಬಗ್ಗೆ ಯೋಚಿಸಿದ್ದಾರೆ?
ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿನ ಶಿಕ್ಷಣದ ಗುಣಮಟ್ಟವು ನಿರ್ದಿಷ್ಟ ವಿಶ್ವವಿದ್ಯಾನಿಲಯ, ಸ್ಥಳ, ಧನಸಹಾಯ ಮತ್ತು ಸರಕಾರದ ನೀತಿಗಳು ಸೇರಿದಂತೆ ವಿವಿಧ ಅಂಶಗಳನ್ನು ಅವಲಂಬಿಸಿ ಗಮನಾರ್ಹವಾಗಿ ಬದಲಾಗಬಹುದು. ಎಲ್ಲಾ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಕಳಪೆ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯವಾಗಿದೆ. ಅನೇಕ ವಿವಿಗಳು ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ಕಾರ್ಯಕ್ರಮಗಳು ಮತ್ತು ಅವಕಾಶಗಳನ್ನು ನೀಡುತ್ತವೆ. ಆದಾಗ್ಯೂ, ಕೆಲವು ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಎದುರಿಸಬಹುದಾದ ಸವಾಲುಗಳು ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಪರಿಣಾಮ ಬೀರಬಹುದು ಎನ್ನುತ್ತಾರೆ ತಜ್ಞರು.
ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ಸಾಮಾನ್ಯವಾಗಿ ಸರಕಾರಿ ನಿಧಿಯ ಮೇಲೆ ಹೆಚ್ಚಾಗಿ ಅವಲಂಬಿತವಾಗಿವೆ. ಸರಕಾರಗಳು ಬದಲಾದ ಹಾಗೆ ಇದು ಏರಿಳಿತವಾಗಬಹುದು ಮತ್ತು ಸರಕಾರಿ ನಿಧಿ ಉನ್ನತ ಶಿಕ್ಷಣದ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ಸಾಕಾಗುವುದಿಲ್ಲ. ವಿವಿಗಳಿಗೆ ಬಜೆಟ್ ಕಡಿತವು ಕಡಿಮೆ ಸಂಪನ್ಮೂಲಗಳು, ಅಧ್ಯಾಪಕರ ಕೊರತೆ ಮತ್ತು ಮೂಲಸೌಕರ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇವೆಲ್ಲವೂ ಉನ್ನತ ಶಿಕ್ಷಣದ ಗುಣಮಟ್ಟದ ಮೇಲೆ ಖಂಡಿತವಾಗಿ ಪರಿಣಾಮ ಬೀರಬಹುದು. ದೇಶದಲ್ಲಿ ಕೆಲವು ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳ ದಟ್ಟಣೆಯನ್ನು ಮತ್ತು ಕೆಲವು ವಿವಿಗಳು ವಿದ್ಯಾರ್ಥಿಗಳ ಕೊರತೆಯನ್ನು ಎದುರಿಸುತ್ತವೆ. ಇದು ವಿದ್ಯಾರ್ಥಿಗಳೆಡೆಗೆ ವೈಯಕ್ತಿಕ ಗಮನವನ್ನು ಪಡೆಯಲು ಮತ್ತು ಪ್ರಾಧ್ಯಾಪಕರೊಂದಿಗೆ ಅರ್ಥಪೂರ್ಣ ಚರ್ಚೆಗಳಲ್ಲಿ ತೊಡಗಿಸಿಕೊಳ್ಳಲು ಕಷ್ಟವಾಗುತ್ತದೆ. ಸೀಮಿತ ಧನಸಹಾಯವು ಪ್ರಯೋಗಾಲಯಗಳು, ಗ್ರಂಥಾಲಯಗಳು ಮತ್ತು ತಂತ್ರಜ್ಞಾನ ಸೇರಿದಂತೆ ಹಳತಾದ ಅಥವಾ ಅಸಮರ್ಪಕ ಸೌಲಭ್ಯಗಳಿಗೆ ಕಾರಣವಾಗಬಹುದು. ಇದು ಸಂಶೋಧನೆಗೆ ಮತ್ತು ಕಲಿಕೆಗೆ ಅಡ್ಡಿಯಾಗುತ್ತದೆ. ಬಜೆಟ್ ನಿರ್ಬಂಧಗಳು ಅಧ್ಯಾಪಕರ ತ್ವರಿತ ನೇಮಕಾತಿ ವಿಳಂಬಕ್ಕೆ ಕಾರಣವಾಗಬಹುದು ಮತ್ತು ಅರ್ಹ ಮತ್ತು ಅನುಭವಿ ಪ್ರಾಧ್ಯಾಪಕರನ್ನು ಆಕರ್ಷಿಸಲು ಮತ್ತು ಉಳಿಸಿಕೊಳ್ಳಲು ಇದು ಸವಾಲಾಗಿದೆ. ಇದು ವಿಶ್ವವಿದ್ಯಾನಿಲಯದಲ್ಲಿ ಬೋಧನೆ ಮತ್ತು ಸಂಶೋಧನೆಯ ಗುಣಮಟ್ಟದ ಮೇಲೆ ನೇರವಾಗಿ ಪರಿಣಾಮ ಬೀರುತ್ತಿದೆ.
ದೇಶದ ಹೆಚ್ಚಿನ ಸಾರ್ವಜನಿಕ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಸಂಶೋಧನೆ, ಪಠ್ಯೇತರ ಚಟುವಟಿಕೆಗಳು ಮತ್ತು ವೃತ್ತಿ ಬೆಂಬಲ ಸೇವೆಗಳಿಗೆ ಸಾಕಷ್ಟು ಸಂಪನ್ಮೂಲಗಳನ್ನು ಒದಗಿಸಲು ಇಂದು ಹೆಣಗಾಡುತ್ತಿವೆ. ಅಲ್ಲದೆ ಸಾರ್ವಜನಿಕ ವಿಶ್ವವಿದ್ಯಾನಿಲಯಗಳಲ್ಲಿನ ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹೆಚ್ಚಾಗುತ್ತಿದೆ. ಪ್ರಾಧ್ಯಾಪಕರಲ್ಲದವರು ವಿವಿಗಳನ್ನು ನಡೆಸುತ್ತಿರುವುದರಿಂದ ಅಧಿಕಾರಶಾಹಿಯು ಕೆಲವೊಮ್ಮೆ ನಿರ್ಧಾರ ತೆಗೆದುಕೊಳ್ಳುವ ಪ್ರಕ್ರಿಯೆಗಳನ್ನು ನಿಧಾನಗೊಳಿಸಬಹುದು ಮತ್ತು ನಾವೀನ್ಯತೆ ಮತ್ತು ಹೊಂದಾಣಿಕೆಗೆ ಅಡ್ಡಿಯಾಗಬಹುದು. ಅತಿಯಾದ ಹಣಕಾಸಿನ ನಿಬರ್ಂಧಗಳ ಕಾರಣದಿಂದಾಗಿ ವಿವಿಧ ಕ್ಷೇತ್ರಗಳಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ತಮ್ಮ ಪಠ್ಯಕ್ರಮವನ್ನು ನವೀಕರಿಸುವಲ್ಲಿ ವಿಶ್ವವಿದ್ಯಾನಿಲಯಗಳು ಅನೇಕ ಮಿತಿಗಳನ್ನು ಇಂದು ಎದುರಿಸುತ್ತಿವೆ.
ಉದಾಹರಣೆಗೆ ಹತ್ತಾರು ವರ್ಷಗಳಿಂದ ಸ್ಥಾಪಿಸಿರುವ ಜನಪದ ವಿಶ್ವವಿದ್ಯಾನಿಲಯ, ಹಂಪಿ ವಿಶ್ವವಿದ್ಯಾನಿಲಯ ಇವುಗಳಿಗೆ ಇನ್ನೂ ಸರಿಯಾದ ಮೂಲಭೂತ ಸೌಕರ್ಯಗಳನ್ನು ಒದಗಿಸಿಲ್ಲ.