ಹಿಮಾಲಯ ದುರಂತ ಹೇಳುತ್ತಿರುವುದೇನು?
ಪ್ರಾಚೀನ ಮಹಾಕಾವ್ಯ ಮಹಾಭಾರತ, ಹಿಮಾಲಯದ ಸುತ್ತ ಸುತ್ತುತ್ತದೆ. ಕವಿ ಕಾಳಿದಾಸರು ಹೇಳಿದಂತೆ, ಧರ್ಮ, ಸತ್ಯ ಮತ್ತು ನ್ಯಾಯದ ಅಂತಿಮ ಮಾನದಂಡವಾಗಿ ಅದು ಭೂಮಿಯ ಮೇಲೆ ನಿಂತಿದೆ.
ತಮ್ಮ ಸಾಮ್ರಾಜ್ಯ ನಿರ್ಮಿಸಲು ಹೊರಟಾಗ ಬ್ರಿಟಿಷರು ಹಿಮಾಲಯ ಪ್ರದೇಶವನ್ನು ಕೇವಲ ಸಸ್ಯಶಾಸ್ತ್ರದ ಮಾಹಿತಿ, ವನ್ಯಜೀವಿಗಳ ಪ್ರಭೇದಗಳು ಮತ್ತು ಅಮೂಲ್ಯವಾದ ಹಾದಿಗಳ ನೆಲೆ ಎಂದು ಮಾತ್ರ ಕಂಡುಕೊಳ್ಳಲಿಲ್ಲ. ಬದಲಿಗೆ, ಅದು ಸಂಸ್ಕೃತಿಗಳು ಮತ್ತು ಸಾಮ್ರಾಜ್ಯಗಳು ಗಡಿಗಳನ್ನು ಹಂಚಿಕೊಂಡ ಜಾಗದಲ್ಲಿದೆ ಎಂಬುದನ್ನೂ ಗ್ರಹಿಸಿದರು. ೧೮೨೭ರಲ್ಲಿ, ಗವರ್ನರ್ ಜನರಲ್ ಲಾರ್ಡ್ ಅಮ್ಹೆರ್ಸ್ಟ್ ತನ್ನ ಕುಟುಂಬದೊಂದಿಗೆ ಶಿಮ್ಲಾದಲ್ಲಿ ಹಲವಾರು ಬೇಸಿಗೆಯ ತಿಂಗಳುಗಳನ್ನು ಕಳೆದ ನಂತರ, ಈ ಪ್ರದೇಶ ಬೇಸಿಗೆ ಹೊತ್ತಿನ ‘ಹಿಲ್ ಸ್ಟೇಷನ್’ ಆಯಿತು. ನೈನಿತಾಲ್, ಲ್ಯಾಂಡ್‌ಡೌನ್ ಮತ್ತು ಮಸ್ಸೂರಿ ನಂತರ ಡೆಹ್ರಾಡೂನ್, ರಾನಿಖೇತ್ ಮತ್ತು ಲ್ಯಾಂಡ್‌ಡೌನ್‌ನಂತಹ ಸೇನಾ ಕಂಟೋನ್‌ಮೆಂಟ್‌ಗಳು ಸಹ ಬೆಳೆದವು. ಶಿಮ್ಲಾ, ವೈಸರಾಯ್ ಮತ್ತು ಅವರ ಸಿಬ್ಬಂದಿಯ ಬೇಸಿಗೆಯ ರಾಜಧಾನಿಯಾಗಿ ಬದಲಾಯಿತು. ಗೂಢಚಾರಿಕೆಯ ಕಣ್ಣುಗಳಿಂದ ದೂರವಿರುವ ಅನೇಕ ಒಪ್ಪಂದಗಳಿಗೆ ಇಲ್ಲಿ ಸಹಿ ಹಾಕಲಾಯಿತು.
ಹಿಮಾಲಯ ವಲಯದ ಗಂಭೀರ ಪುನರ್ನಿರ್ಮಾಣ ಮತ್ತು ಅದರ ಸಂಸ್ಕೃತಿಯ ಮರುಶೋಧನೆಯನ್ನು ಕೋಲ್ಕತಾದಲ್ಲಿ ವಸಾಹತುಶಾಹಿ ಆಡಳಿತಗಾರರು ಕೈಗೊಂಡರು ಮತ್ತು ನಂತರ, ದಿಲ್ಲಿಯಿಂದ ರಾಜಧಾನಿಯನ್ನು ಪಶ್ಚಿಮಕ್ಕೆ ಸ್ಥಳಾಂತರಿಸಿದರು. ಸ್ವತಂತ್ರ ಭಾರತ ಉತ್ತರ ಪ್ರದೇಶ ಮತ್ತು ಪಟಿಯಾಲ ಮತ್ತು ಪೂರ್ವ ಪಂಜಾಬ್ ರಾಜ್ಯಗಳ ಒಕ್ಕೂಟದಿಂದ ಬೇರೆ ಮಾಡಿದ ಉತ್ತರಾಖಂಡ ಮತ್ತು ಹಿಮಾಚಲ ಎಂಬ ಎರಡು ಸಣ್ಣ ಗುಡ್ಡಗಾಡು ರಾಜ್ಯಗಳನ್ನು ಕಂಡಿತು. ಕಳೆದ ದಶಕದಲ್ಲಿ, ಇತರ ರಾಜ್ಯಗಳು ಪ್ರವಾಸಿಗರನ್ನು ಆಕರ್ಷಿಸಲು ಪ್ರಾರಂಭಿಸಿವೆ. ಆದ್ದರಿಂದ ಹಿಮಾಚಲ ಮತ್ತು ಉತ್ತರಾಖಂಡವನ್ನು ರೆಸಾರ್ಟ್ ಪಟ್ಟಣಗಳಾಗಿ ರೂಪಿಸಲು ನಿರ್ಧರಿಸಲಾಯಿತು, ಅಲ್ಲಿ ಶ್ರೀಮಂತರು ಮತ್ತು ಧಾರ್ಮಿಕ ಒಲವುಳ್ಳವರು ತೀರ್ಥಯಾತ್ರೆ ಹಾಗೂ ವಿರಾಮ ಸಮಯ ಕಳೆಯಲು ಬರುವಂತೆ ಮಾಡಲಾಯಿತು.
ಭೂವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳ ಮೇಲ್ವಿಚಾರಣೆಯಲ್ಲಿ ಈ ಸೂಕ್ಷ್ಮ ಭೂಪ್ರದೇಶದ ಪ್ರಾದೇಶಿಕ ಮರುಸಂಘಟನೆಯ ಕೆಲಸವನ್ನು ಬ್ರಿಟಿಷರು ಶುರು ಮಾಡಿದ್ದರು. ೧೮೮೦ರ ಮಹಾ ಭೂಕುಸಿತ ಕೂಡ ಯಾವುದೇ ಪಾಠಗಳನ್ನು ಕಲಿಸಿದಂತಿಲ್ಲ. ಅದು ಬೇಸಿಗೆಯ ರೆಸಾರ್ಟ್ ಪಟ್ಟಣವಾದ ನೈನಿತಾಲ್ ಅನ್ನು ಸಂಪೂರ್ಣವಾಗಿ ನಾಶಪಡಿಸಿತು. ಎಲ್ಲಾ ಕಟ್ಟಡ ಚಟುವಟಿಕೆಗಳಿಗೆ ಸರಿಯಾದ ಕ್ರಮಗಳನ್ನು ಅನುಸರಿಸಲು ಮತ್ತು ರೂಪಿಸಲು ಅದು ಕಾರಣವಾಯಿತು. ನೈನಿತಾಲ್ ಭೂಕುಸಿತ ಮತ್ತು ಮಳೆಯಿಂದ ನಾಶವಾದ ನಂತರ, ಬ್ರಿಟಿಷ್ ಇಂಜಿನಿಯರಿಂಗ್ ಅಧಿಕಾರಿಗಳು ವೆಚ್ಚದ ಅಂದಾಜುಗಳನ್ನು ಗಣನೀಯವಾಗಿ ಹೆಚ್ಚಿಸಿದರು. ಕಡಿಮೆ ಗುಣಮಟ್ಟದ ವಸ್ತುಗಳನ್ನು ಬಳಸಲು ನಿರಾಕರಿಸಲಾಯಿತು ಎಂದು ದಾಖಲೆಯಲ್ಲಿದೆ.
ನದಿಗಳು ಮತ್ತು ಪರ್ವತಗಳು, ಪುರುಷರಿಗಿಂತ ಭಿನ್ನವಾಗಿ, ಪದೇ ಪದೇ ಆಕ್ರಮಣ ಮಾಡುತ್ತವೆ, ಕೋಪಗೊಳ್ಳುತ್ತವೆ ಮತ್ತು ತಮ್ಮ ಪಾವಿತ್ರ್ಯತೆಯನ್ನು ಮರಳಿ ಪಡೆಯುತ್ತವೆ. ಎಲ್ಲಾ ಸಲಹೆಗಳಿಗೆ ವಿರುದ್ಧವಾಗಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಲಾಯಿತು. ವಿದ್ಯುತ್ ಸ್ಥಾವರಗಳ ಸುರಂಗಗಳಿಂದಾಗಿ ಭವ್ಯವಾದ ಪರ್ವತಗಳು ಟೊಳ್ಳಾದವು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾತ್ರ ಕಲಿತಿರುವ ವ್ಯವಸ್ಥೆ ಪ್ರಕೃತಿಯ ವಿರುದ್ಧ ಹೋರಾಡಲು ಎಷ್ಟು ಸಮರ್ಥ?
ಇತ್ತೀಚಿನ ಹಲವಾರು ಪ್ರವಾಹಗಳಿಂದ ಮುಳುಗಿ ನಾಶವಾದ ವಿದ್ಯುತ್ ಸ್ಥಾವರಗಳಿಂದ ಮೃತ ಕಾರ್ಮಿಕರ ದೇಹಗಳನ್ನು ಎತ್ತುವ ರಕ್ಷಣಾ ತಂಡಗಳನ್ನು ನೋಡುವಾಗ, ಕೇಂದ್ರ ನಾಯಕತ್ವ, ಕಾರ್ಪೊರೇಟ್‌ಗಳು ಮತ್ತು ರಾಜ್ಯ ಸರಕಾರ ದುರಂತಗಳ ಹೊಣೆಗಾರಿಕೆಯನ್ನು ಜಾಗತಿಕ ತಾಪಮಾನ ಏರಿಕೆ ಅಥವಾ ಕಟ್ಟಡದ ನಿಯಮಗಳನ್ನು ಉಲ್ಲಂಘಿಸುವ ಸ್ಥಳೀಯರ ಮೇಲೆ ಹಾಕುವುದು ಅಚ್ಚರಿಯ ಸಂಗತಿಯಾಗಿದೆ. ವಿದ್ಯುತ್ ಯೋಜನೆಗಳು ಮತ್ತು ಪ್ರವಾಸೋದ್ಯಮಕ್ಕಾಗಿ ವಿವೇಚನಾ ರಹಿತ ಕ್ರಮಗಳು ಎಲ್ಲ ದುರಂತಗಳ ಹಿಂದಿನ ನಿಜವಾದ ಕಾರಣಗಳಾಗಿವೆ. ವಿಪರ್ಯಾಸವೆಂದರೆ, ವ್ಯಾಸ್, ಹಿಮಾಚಲದ ಸತ್ಲುಜ್ ಮತ್ತು ಪಂಜಾಬ್ ಮತ್ತು ಗಂಗಾ (ಪ್ರಸಕ್ತ ಹೃಷಿಕೇಶದಲ್ಲಿ ವಿನಾಶಕ್ಕೆ ಕಾರಣವಾಗುತ್ತಿದೆ) ಮತ್ತು ಯಮುನಾ ನದಿಗಳ (ಗದ್ವಾಲ್ ಗ್ರಾಮಗಳು ಮತ್ತು ದಿಲ್ಲಿ ಎನ್‌ಸಿಆರ್‌ವರೆಗಿನ ಬಯಲು ಪ್ರದೇಶ) ಕಣಿವೆಗಳಲ್ಲಿ ಅತಿದೊಡ್ಡ ವಿನಾಶ ಸಂಭವಿಸಿದೆ. ವಿಪರ್ಯಾಸವೆಂದರೆ, ಪರಿಸರ ನಾಶದ ವಿರುದ್ಧ ಭಾರತದ ಮೊದಲ ಪ್ರಮುಖ ಸಾರ್ವಜನಿಕ ಚಳವಳಿಯ ಜನ್ಮಸ್ಥಳವಾದ ರೈನಿ ಗ್ರಾಮ, ನಂದಾದೇವಿ ಹಿಮನದಿ ಪ್ರದೇಶದಿಂದ ಹೊರಹೊಮ್ಮುವ ಪ್ರವಾಹದಿಂದ ಸಂಪೂರ್ಣವಾಗಿ ನಾಶವಾಗಿದೆ.
ಈ ವರ್ಷ, ಉತ್ತರಾಖಂಡದಲ್ಲಿ ಸ್ವಯಂಘೋಷಿತ ಡಬಲ್ ಇಂಜಿನ್ ಸರಕಾರ ಸ್ಥಳೀಯ ಪರಿಸರವಾದಿಗಳ ಪ್ರತಿಭಟನೆಯ ಹೊರತಾಗಿಯೂ, ಸೂಕ್ಷ್ಮವಲಯಗಳು ಮತ್ತು ಮೀಸಲು ಅರಣ್ಯಗಳ ಮೂಲಕ ರಸ್ತೆಗಳ ಆಕ್ರಮಣಕಾರಿ ವಿಸ್ತರಣೆಯನ್ನು ಮುಂದುವರಿಸಿದೆ. ಅಣೆಕಟ್ಟುಗಳು ಮತ್ತು ಯಾತ್ರಾ ರಸ್ತೆಗಳು ಬರಲು ಪ್ರಾರಂಭಿಸಿದಾಗ, ಸ್ಥಳೀಯರಿಗೆ ಸಮುದಾಯದ ಆಸ್ತಿಗಳನ್ನು ಖರೀದಿದಾರರು ನಿಗದಿಪಡಿಸುವ ಬೆಲೆಗೆ ಮಾರಾಟ ಮಾಡಬೇಕು ಎಂದು ಹೇಳಲಾಯಿತು.
ಒಂದು ಕಾಲದಲ್ಲಿ ಜನಜಂಗುಳಿಯಿಂದ ಕೂಡಿದ್ದ ಅವಳಿ ರಾಜ್ಯಗಳಾದ ಉತ್ತರಾಖಂಡ ಮತ್ತು ಹಿಮಾಚಲಗಳ ಶೋಚನೀಯ ಸ್ಥಿತಿಯನ್ನು ಟಿವಿಯಲ್ಲಿ ನೋಡುವಾಗ, ಮನೆ, ಹೋಮ್ ಸ್ಟೇ, ಹೋಟೆಲ್ ಮತ್ತು ಅಂಗಡಿಗಳ ಮಾಲಕರ ಮಾತುಗಳನ್ನು ಕೇಳುವಾಗ, ನಮ್ಮಂತಹ ಪ್ರಜಾಪ್ರಭುತ್ವಗಳಲ್ಲಿ ಇದು ತಪ್ಪು ಎಂದು ತಿಳಿಯುತ್ತದೆ. ಆಯ್ಕೆ ಮಾಡಿದ ನಾಯಕರಿಂದ ಅನ್ಯಾಯಕ್ಕೊಳಗಾದ ಜನರು ಮುಂದಿನ ಚುನಾವಣೆಯಲ್ಲಿ ಅಂಥ ಸರಕಾರವನ್ನು ಉರುಳಿಸಲು ಯೋಚಿಸುತ್ತಿರಬಹುದು. ಕಳೆದ ದಶಕದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಅನೇಕ ನೈಸರ್ಗಿಕ ವಿಕೋಪಗಳು ಸಂಭವಿಸಿವೆ ಮತ್ತು ಅದೆಷ್ಟೋ ಪ್ರಾಣಗಳು ಬಲಿಯಾಗಿವೆ. ಆದರೆ ಪ್ರತಿಯೊಂದೂ ಶೀಘ್ರದಲ್ಲೇ ಮರೆತುಹೋಗುತ್ತದೆ.
ಅಂತಿಮವಾಗಿ, ಬಾಧಿತರಾದ ಪ್ರತಿಯೊಬ್ಬರೂ ಈಗಾಗಲೇ ಬಿಕ್ಕಟ್ಟಿನಿಂದ ಹೊರಬರಲು ದಾರಿಯನ್ನು ಹುಡುಕುತ್ತಿದ್ದಾರೆ: ಹಳ್ಳಿಯನ್ನು ತೊರೆಯಿರಿ, ಇನ್ನೊಂದೆಡೆ ಹೋಗಿ, ದಿಲ್ಲಿ-ಮುಂಬೈ-ಕೋಲ್ಕತಾ-ಬೆಂಗಳೂರು ಅಥವಾ ನಿಮಗೆ ಸಾಧ್ಯವಾದರೆ ವಿದೇಶಕ್ಕೆ ವಲಸೆ ಹೋಗಿ ಅಥವಾ ಕನಿಷ್ಠ ನಿಮ್ಮ ಮಕ್ಕಳನ್ನಾದರೂ ಬೇರೆಡೆಗೆ, ಕೆನಡಾದಿಂದ ನ್ಯೂಝಿಲ್ಯಾಂಡ್‌ವರೆಗೆ ಎಲ್ಲಿಯಾದರೂ ಹೋಗುವಂತೆ ಪ್ರೋತ್ಸಾಹಿಸಿ ಎಂಬಂಥ ಸ್ಥಿತಿ ತಲೆದೋರಿದೆ.
ಎಲ್ಲಿದೆ ಜಮೀನು ಎಂದು ಜನ ರೋದಿಸುತ್ತಾರೆ. ಏನೂ ಉಳಿದಿಲ್ಲ. ಆದರೆ ಇಡೀ ರಾಷ್ಟ್ರವೇ ವಲಸೆ ಹೋಗಬಹುದೇ? ಅದು ಸಾಧ್ಯವಿಲ್ಲ ಎಂಬುದಕ್ಕೆ ಯಮೆನ್, ನೈಜೀರಿಯಾ, ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳು ಉದಾಹರಣೆ. ಎಲ್ಲ ಸರಕಾರಗಳನ್ನು ಉಳಿಸುವುದು ಇಂಥ ಅನಿವಾರ್ಯತೆಯೇ ಆಗಿದೆ. ಅಂತಿಮವಾಗಿ, ಹೆಚ್ಚಿನ ಮತದಾರರು ಹೀನಾಯ ಸ್ಥಿತಿಯಲ್ಲಿರುವವರು. ಇನ್ನು ಮಾಧ್ಯಮಗಳಂತೂ ವಾಸ್ತವವನ್ನು ಮರೆಮಾಚಿ, ತಮ್ಮ ನಿರಂತರ ಮನರಂಜನೆಯ ಮೂಲಕ ವೀಕ್ಷಕರನ್ನು ರಂಜಿಸುತ್ತವೆ. ಸಾಂದರ್ಭಿಕವಾಗಿ ಜನಸಾಮಾನ್ಯರು ದೇಶಭಕ್ತಿಯ ಘೋಷಣೆಗಳನ್ನು ಕೂಗುವಂತೆ ಮಾಡಲಾಗುತ್ತದೆ.
ಆದರೆ ಕೆಲವು ಬಾರಿ, ಇವರೆಲ್ಲ ಯೋಚಿಸಿಯೇ ಇರದ ಸಂಗತಿಗಳು ಸಂಭವಿಸುತ್ತವೆ. ಆಹಾರ ಮತ್ತು ಮನರಂಜನೆ ಎಲ್ಲವೂ ದೊರಕಿದ ಜನಸಮೂಹ ಉದ್ರಿಕ್ತಗೊಳ್ಳುತ್ತದೆ ಮತ್ತು ಅವಿಧೇಯತೆಯನ್ನು ತೋರಲು ಪ್ರಾರಂಭಿಸುತ್ತದೆ. ಅದು ಸ್ವಾತಂತ್ರ್ಯವನ್ನು ಬಯಸುವುದಾಗಿ ಹೇಳುತ್ತದೆ. ಹಕ್ಕುಗಳನ್ನು ಕೇಳಲು ಶುರು ಮಾಡುವವರು ಅನುಗ್ರಹವನ್ನು ಕೇಳುವುದಿಲ್ಲ.
ಅನುಗ್ರಹವು ನಮ್ಮನ್ನು ದೇವಭೂಮಿಗೆ ಮರಳಿ ಕರೆತರುತ್ತದೆ. ನಮ್ಮ ಕಾಲದ ಉದ್ಧವಸ್ತ್ ಧರ್ಮಶಾಲೆ ಮಣ್ಣು ಮತ್ತು ಭಗ್ನಾವಶೇಷಗಳ ನಡುವೆ ಇದೆ. ಒಂದು ಕಾಲದಲ್ಲಿ ಇದು ಕಡಿಮೆ ಶ್ರೀಮಂತವಾಗಿತ್ತು, ಆದರೆ ಉದಾತ್ತ ಅನುಗ್ರಹವನ್ನು ಹೊಂದಿತ್ತು. ಬಹುಶಃ ದಿಲ್ಲಿ ಅದನ್ನು ಉಳಿಸಿಕೊಳ್ಳಲು ಮತ್ತು ಇಲ್ಲಿ ಅತ್ಯುನ್ನತ ಅಂತರ್‌ರಾಷ್ಟ್ರೀಯ ಮಟ್ಟದ ಪವಿತ್ರ ಭೂಮಿಯನ್ನು ಸೃಷ್ಟಿಸಲು ಬಯಸಿದೆ.
ಆದರೆ ನದಿಗಳು ಮತ್ತು ಪರ್ವತಗಳು ಪದೇ ಪದೇ ಆಕ್ರಮಣ ಮಾಡುತ್ತವೆ, ಕೋಪಗೊಳ್ಳುತ್ತವೆ ಮತ್ತು ತಮ್ಮ ಪಾವಿತ್ರ್ಯತೆಯನ್ನು ಮರಳಿ ಪಡೆಯುತ್ತವೆ. ಎಲ್ಲಾ ಸಲಹೆಗಳಿಗೆ ವಿರುದ್ಧವಾಗಿ ನದಿಗಳಿಗೆ ಅಣೆಕಟ್ಟುಗಳನ್ನು ಕಟ್ಟಲಾಯಿತು. ವಿದ್ಯುತ್ ಸ್ಥಾವರಗಳ ಸುರಂಗಗಳಿಂದಾಗಿ ಭವ್ಯವಾದ ಪರ್ವತಗಳು ಟೊಳ್ಳಾದವು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಮಾತ್ರ ಕಲಿತಿರುವ ವ್ಯವಸ್ಥೆ ಪ್ರಕೃತಿಯ ವಿರುದ್ಧ ಹೋರಾಡಲು ಎಷ್ಟು ಸಮರ್ಥ?
(ಕೃಪೆ: thewire.in)