ಶಾಮನೂರು ಹೇಳಿಕೆ ಹಿಂದಿನ ಮಸಲತ್ತೇನು ?
ಕಾಂಗ್ರೆಸ್ ವಿರುದ್ಧ ಮುಗಿಬೀಳಲು ಸದಾ ಕಾಯುತ್ತಿರುವ ವಿಪಕ್ಷಕ್ಕೆ ಕಾಂಗ್ರೆಸ್ನವರೇ ಮತ್ತೊಮ್ಮೆ ಅಸ್ತ್ರ ಕೊಟ್ಟಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ, ಶಾಸಕ ಶಾಮನೂರು ಶಿವಶಂಕರಪ್ಪ ಅವರು ಸಮುದಾಯದ ವಿಚಾರವೆತ್ತಿ ಮಾತಾಡಿರುವುದು ಪ್ರತಿಪಕ್ಷದ ಪಾಲಿಗೆ ಹೊಸ ಅಸ್ತ್ರವಾಗಿದೆ. ಇದು ಕಾಂಗ್ರೆಸ್ ಪಾಲಿಗೆ ಇರಿಸುಮುರಿಸು ತಂದಿಟ್ಟಿದೆ.
ಬಿಜೆಪಿಯ ದುರಾಡಳಿತಕ್ಕೆ ರೋಸಿಹೋದ ಜನ ಕಾಂಗ್ರೆಸ್ ಅನ್ನು ಭಾರೀ ಬಹುಮತದೊಂದಿಗೆ ಆರಿಸಿ ಅಧಿಕಾರಕ್ಕೆ ತಂದ ಬಳಿಕ ಪಕ್ಷದೊಳಗಿನ ಈ ಹೊಯ್ದಾಟ ಮತ್ತು ಕಚ್ಚಾಟಗಳು ನಿಜವಾಗಿಯೂ ಕಾಂಗ್ರೆಸ್ ಅನ್ನು ಇಕ್ಕಟ್ಟಿನ ಸ್ಥಿತಿಗೆ ತಳ್ಳಲಿವೆಯೆ?. ಯಾಕೆ ಕಾಂಗ್ರೆಸ್ ನಾಯಕರೊಳಗೆ ಇಂಥದೊಂದು ಎಚ್ಚರ ಇಲ್ಲವಾಗಿದೆ ಅಥವಾ ತಮ್ಮಲ್ಲಿನ ನಾಯಕತ್ವವನ್ನು ಸಹಿಸದ ಧೋರಣೆಯೊಂದು ಕಾಂಗ್ರೆಸ್ನೊಳಗೇ ಬೆಳೆದಿದೆಯೆ?
ಈಗ ಶಾಮನೂರು ಹೇಳಿಕೆಯನ್ನೇ ಗಮನಿಸುವುದಾದರೆ, ನಿಜವಾಗಿಯೂ ಅದು ಹಿರಿಯ ನಾಯಕರೊಬ್ಬರು ತಮ್ಮದೇ ಸರ್ಕಾರದ ಬಗ್ಗೆ ಎತ್ತಬೇಕಾಗಿದ್ದ ಆಕ್ಷೇಪವಾಗಿತ್ತೆ?. ಯಾರದಾದರೂ ಅಥವಾ ಯಾವುದಾದರೂ ರಾಜಕೀಯ ತಂತ್ರದ ಭಾಗವಾಗಿ ಶಾಮನೂರು ಇಂಥದೊಂದು ಹೇಳಿಕೆ ನೀಡಿದರೆ?.
ಸಂಪುಟದಲ್ಲಿ ಸ್ಥಾನ ಸಿಗದವರ ಅಪಸ್ವರಗಳು ಒಂದೆಡೆಯಾದರೆ, ಅಧಿಕಾರ ಪಡೆದೂ ತಕರಾರುಗಳನ್ನು ಸಂದರ್ಭ ಸಿಕ್ಕಲ್ಲೆಲ್ಲ ಎತ್ತುವ ಮತ್ತೆ ಕೆಲವರು ಈಗಾಗಲೇ ಸರ್ಕಾರಕ್ಕೂ ಪಕ್ಷಕ್ಕೂ ಮುಜುಗರ ತಂದಿರುವುದರ ನಡುವೆಯೇ ಶಾಮನೂರು ಹೇಳಿಕೆ ಹೊರಬಿದ್ದಿದೆ. ಸಂಪುಟದಲ್ಲಿ ಲಿಂಗಾಯತ ಪ್ರಾತಿನಿಧ್ಯದ ಬಗ್ಗೆ ಮಾತನಾಡದೆ, ವೀರಶೈವ ಲಿಂಗಾಯತ ಅಧಿಕಾರಿಗಳನ್ನು ಮೂಲೆಗುಂಪು ಮಾಡಲಾಗಿದೆ, ಅವರಿಗೆ ಪ್ರಮುಖ ಹುದ್ದೆ ಕೊಟ್ಟಿಲ್ಲ. ಈ ಸರ್ಕಾರದಲ್ಲಿ ತಮ್ಮ ಸಮುದಾಯದ ಅಧಿಕಾರಿಗಳಿಗೆ ರಕ್ಷಣೆ ಇಲ್ಲವಾಗಿದೆ ಎಂದು ಶಾಮನೂರು ಹೇಳಿರುವುದು ವಿಚಿತ್ರ ಸಂಚಲನವನ್ನು ಉಂಟುಮಾಡುವ ರೀತಿಯಲ್ಲಿದೆ.
ಶಾಮನೂರು ಪುತ್ರ ಎಸ್‌ಎಸ್ ಮಲ್ಲಿಕಾರ್ಜುನ ಸಚಿವರಾಗಿ ಸರ್ಕಾರದ ಭಾಗವಾಗಿದ್ದರೂ, ಇಂಥದೊಂದು ಹೇಳಿಕೆಯನ್ನು ಅವರು ನೀಡಿರುವುದರಿಂದ ಕಾಂಗ್ರೆಸ್ ಪಕ್ಷಕ್ಕೆ ಮುಜುಗರ ಆಗಿರುವುದಂತೂ ನಿಜ. ರಾಜ್ಯದ ಜನಸಂಖ್ಯೆಯಲ್ಲಿ ವೀರಶೈವ ಲಿಂಗಾಯತರು ಸುಮಾರು ಶೇ 17ರಷ್ಟಿದ್ದಾರೆ. ಹೀಗಿರುವಾಗ ಆ ಸಮುದಾಯದ ಹಿರಿಯ ಮುಖಂಡ ಶಾಮನೂರು ಅವರ ಈ ರೀತಿಯ ಹೇಳಿಕೆ ಪಕ್ಷದ ಮೇಲೆ ಪರಿಣಾಮ ಬೀರಬಹುದು ಎಂಬ ಆತಂಕವೂ ಕಾಂಗ್ರೆಸ್‌ನ ಹಲವರನ್ನು ಕಾಡುವಂತಾಗಿದೆ.
2023ರ ವಿಧಾನಸಭಾ ಚುನಾವಣೆಯ ಸಮಯದಲ್ಲಿ, ಬಿಜೆಪಿ ಪ್ರಬಲ ಸಮುದಾಯವನ್ನು ನಿರ್ಲಕ್ಷಿಸಿದೆ ಎಂದು ಆರೋಪಿಸಿದ್ದ ಕಾಂಗ್ರೆಸ್, ವೀರಶೈವ ಲಿಂಗಾಯತ ಸಮುದಾಯದ ಸಾಕಷ್ಟು ಬೆಂಬಲ ಪಡೆಯುವಲ್ಲಿ ಯಶಸ್ವಿಯಾಗಿತ್ತು. ಈಗ ಅಂಥದೇ ಆರೋಪವನ್ನು ಸ್ವಪಕ್ಷೀಯರೇ ಮಾಡುತ್ತಿರುವುದು ಮತ್ತು ಅದನ್ನು ಸರಿಯಾಗಿಯೇ ಬಳಸಿಕೊಳ್ಳಲು ಬಿಜೆಪಿ ಅತ್ಯುತ್ಸಾಹದಲ್ಲಿರುವುದು ಕಾಂಗ್ರೆಸ್ ಅನ್ನು ಚಿಂತೆಗೆ ದೂಡುವ ವಿಚಾರವೇ ಆಗಿದೆ.
ಇಲ್ಲಿ ಎರಡು ವಿಚಾರಗಳನ್ನು ಗಮನಿಸಬೇಕು. ಒಂದು, ಶಾಮನೂರು ಅವರು ತಮ್ಮ ಸಮುದಾಯದ ಅಧಿಕಾರಿಗಳನ್ನು ಎತ್ತಿಕಟ್ಟುವಂತೆ ಮಾತನಾಡಿರುವುದು. ಅವರಿಗೆ ಅನ್ಯಾಯವಾಗಿದೆ ಎನ್ನುವ ಮೂಲಕ ಆಡಳಿತಶಾಹಿ ವಿಚಾರವನ್ನು ಬೀದಿಗೆ ತಂದಂತಾಗಿದೆ. ಎರಡನೆಯದಾಗಿ, ಅವರು "ಸಮುದಾಯಕ್ಕೆ ಕೊಡುವುದಾದರೆ ಸಿಎಂ ಹುದ್ದೆಯೇ ಬೇಕು, ಡಿಸಿಎಂ ಹುದ್ದೆಯಲ್ಲ" ಎನ್ನುವ ಮೂಲಕ, ಡಿಸಿಎಂ ಹುದ್ದೆ ಕೊಟ್ಟು ಸಮಾಧಾನಪಡಿಸುವುದು ಬೇಕಿಲ್ಲ ಎಂಬ ಸಂದೇಶ ಕೊಟ್ಟಿರುವುದು.
ವಿಧಾನ ಪರಿಷತ್ ಸದಸ್ಯ, ಎಚ್ ವಿಶ್ವನಾಥ್ ಹೇಳುವಂತೆ, ಈ ಬಗೆಯಲ್ಲಿ ಜಾತಿ ವಿಚಾರ ಎತ್ತುತ್ತಿದ್ದರೆ ಸಹಜವಾಗಿಯೇ ಆಡಳಿತ ಕುಸಿಯುತ್ತದೆ.
ಹೀಗಿರುವಾಗ, ಹಿರಿಯ ನಾಯಕರೊಬ್ಬರು ತಮ್ಮದೇ ಪಕ್ಷದ ಸರ್ಕಾರದ ವಿರುದ್ಧ ಏಕೆ ಇಂಥದೊಂದು ಆರೋಪ ಮಾಡುತ್ತಾರೆ? ಯಾಕಾಗಿ ಇದರ ಅಗತ್ಯ ಬಿದ್ದಿದೆ?. ಶಾಮನೂರು ಆರೋಪವನ್ನೇ ನೆಪವಾಗಿಟ್ಟುಕೊಂಡಿರುವ ಬಿಜೆಪಿ, ಕಾಂಗ್ರೆಸ್ ಸರ್ಕಾರವನ್ನು ಗೊಂದಲದ ಗೂಡು ಎಂದು ನಿರೂಪಿಸಲು ಹೊರಟಿದೆ.
ಜಗದೀಶ್ ಶೆಟ್ಟರ್ ರಂತಹ ಹಿರಿಯ ಲಿಂಗಾಯತ ನಾಯಕರನ್ನು ಬಳಸಿ ಬಿಸಾಡಿದ ಬಿಜೆಪಿಯ ಪ್ರಮುಖ ನಾಯಕರು ಶಾಮನೂರು ಹೇಳಿಕೆಯನ್ನು ಬೆಂಬಲಿಸಿದ್ದು, ಶಾಮನೂರು ಹೇಳಿಕೆ ಗಂಭೀರವಾಗಿದೆ ಎನ್ನತೊಡಗಿದ್ದಾರೆ. ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕರೂ, ಅಖಿಲ ಭಾರತ ವಿರಶೈವ ಮಹಾಸಭಾದ ಅಧ್ಯಕ್ಷರೂ ಆಗಿರುವ ಶಾಮನೂರು ಅವರ ಹೇಳಿಕೆಯನ್ನು ಜನ ಗಂಭೀರವಾಗಿ ಪರಿಗಣಿಸುತ್ತಾರೆ. ಮುಖ್ಯಮಂತ್ರಿಗಳ ಹೇಳಿಕೆ ಬಳಿಕವೂ ತಮ್ಮ ಹೇಳಿಕೆಗೆ ಬದ್ದ ಎಂದು ಅವರು ಹೇಳುತ್ತಿರುವುದನ್ನು ನೋಡಿದರೆ ಅವರ ಹೇಳಿಕೆ ಬಹಳ ಗಂಭಿರವಾಗಿದೆ ಎಂದು ಅರ್ಥವಾಗುತ್ತದೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಯಡಿಯೂರಪ್ಪ ಕೂಡ ಶಾಮನೂರು ಹೇಳಿಕೆಯನ್ನು ಸ್ವಾಗತಿಸಿದ್ದು, ವೀರಶೈವ ಲಿಂಗಾಯತರು ಒಗ್ಗಟ್ಟಾಗಿ ಇರುವಂತೆ ಕರೆ ನೀಡಿದ್ದಾರೆ. ಶಾಮನೂರು ಅವರಿಗಷ್ಟೇ ಅಲ್ಲ, ಎಲ್ಲ ವೀರಶೈವ ಸಮುದಾಯದ ಮುಖಂಡರಲ್ಲಿ ಇದೇ ತಳಮಳ ಇದೆ ಎಂದು ಅವರು ಬೆಂಕಿಗೆ ತುಪ್ಪ ಸುರಿದಿದ್ಧಾರೆ. ಶಾಮನೂರು ಹೇಳಿಕೆಯನ್ನು ತಿರಸ್ಕರಿಸಿರುವ ಸಿದ್ದರಾಮಯ್ಯ, ತಮ್ಮ ಸಂಪುಟದಲ್ಲಿ ಏಳು ಲಿಂಗಾಯತ ಸಚಿವರಿದ್ದಾರೆ. ಹೀಗಿರುವಾಗ ಸಮುದಾಯಕ್ಕೆ ಅನ್ಯಾಯವಾಗುವುದು ಹೇಗೆ? ಯಾವುದೇ ಅನ್ಯಾಯಕ್ಕೆ ಅವಕಾಶವಿಲ್ಲ. ಕಾಂಗ್ರೆಸ್ ಅಡಿಯಲ್ಲಿ ಯಾವುದೇ ಧರ್ಮ ಅಥವಾ ಜಾತಿ ಅನ್ಯಾಯವನ್ನು ಎದುರಿಸುವುದಿಲ್ಲ ಎಂದಿದ್ದಾರೆ.
ಆದರೆ ಇದೆಲ್ಲವನ್ನೂ ಮಂಕಾಗಿಸುವ ಹಾಗೆ ಬಿಜೆಪಿ ಅಬ್ಬರದಿಂದ ಶಾಮನೂರು ಹೇಳಿಕೆಯನ್ನು ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರಬಲ ಅಸ್ತ್ರವಾಗಿ ಬಳಸಿಕೊಳ್ಳುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕನ್ನಡಿಗರು ಮಾತ್ರವಲ್ಲ, ಅವರ ಪಕ್ಷದವರೇ ನೆಮ್ಮದಿಯಾಗಿಲ್ಲ ಎಂದು ವ್ಯಾಖ್ಯಾನಿಸುತ್ತ ಅದು ಗುಲ್ಲೆಬ್ಬಿಸುತ್ತಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಕೆಲವೇ ಆಯ್ದ ಜನಾಂಗಕ್ಕೆ ಅನುಕೂಲವಾಗಿದ್ದು, ಉಳಿದವರನ್ನು ಕಡೆಗಣಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ.
ಹಿಂದುಳಿದ ವರ್ಗಗಳ ಮೇಲೆಯೇ ಸಿದ್ದರಾಮಯ್ಯ ಅವರಿಗೆ ಅಸಮಾಧಾನವಿದೆ ಎಂದು ಹೇಳುವವರೆಗೂ ಬಿಜೆಪಿಯ ಆರೋಪಗಳು ಮುಂದುವರಿದಿವೆ. ಇದೆಲ್ಲವನ್ನೂ ಹೇಳುತ್ತ ಬಿಜೆಪಿ, ಸಿದ್ದರಾಮಯ್ಯ ಆಡಳಿತದ ಬಗ್ಗೆ ಅವರ ಪಕ್ಷದವರೇ ರೋಸಿಹೋಗಿದ್ದಾರೆ ಎಂದು ಬಿಂಬಿಸಲು ಯತ್ನಿಸಿದೆ. ಈಗಾಗಲೇ ಬಿಕೆ ಹರಿಪ್ರಸಾದ್ ಸಿದ್ದರಾಮಯ್ಯ ವಿರುದ್ಧ ಬಹಿರಂಗವಾಗಿಯೇ ತಕರಾರು ತೆಗೆದಿದ್ದರು. ಅಲ್ಲೂ ಅವರು ಜಾತಿ ವಿಚಾರವನ್ನು ಮುಂದೆ ಮಾಡಿ, ತಮಗೆ ಅಧಿಕಾರ ಸಿಗದ ಅಸಮಾಧಾನವನ್ನು ಹೊರಹಾಕಿದ್ದರು.
ಈಗ ಮತ್ತೊಮ್ಮೆ ಜಾತಿ ವಿಚಾರವೇ ಮುಂದೆ ಬಂದು, ಪಕ್ಷದೊಳಗೇ ಶಿಥಿಲ ಸ್ಥಿತಿಯಿದೆ ಎಂಬ ಭಾವನೆ ಬರುವಂಥ ರೀತಿಯಲ್ಲಿ ನಾಯಕರು ವರ್ತಿಸುತ್ತಿದ್ದಾರೆ. ಜನಸಂಖ್ಯೆಯಲ್ಲೂ ಹೆಚ್ಚಿರುವ ರಾಜ್ಯದ ಅತ್ಯಂತ ಪ್ರಬಲ ಹಾಗು ಪ್ರಭಾವೀ ಸಮುದಾಯವಾದ ಲಿಂಗಾಯತರು ಇಲ್ಲಿನ ರಾಜಕೀಯ ಅಧಿಕಾರದಲ್ಲಿ ಹಾಗು ಅಧಿಕಾರಶಾಹಿಯಲ್ಲಿ ತಮ್ಮ ಪ್ರಾಬಲ್ಯ ಮೆರೆಯುತ್ತಲೇ ಬಂದಿದ್ದಾರೆ. ರಾಜ್ಯದ ಈವರೆಗಿನ 23 ಸಿಎಂಗಳಲ್ಲಿ 10 ಮಂದಿ ಲಿಂಗಾಯತರು. ಯಾವುದೇ ಪಕ್ಷದ ಸರಕಾರ ಬಂದರೂ ಅದರ ಸಂಪುಟದಲ್ಲಿ ಲಿಂಗಾಯತರಿಗೆ ಹೆಚ್ಚು ಹಾಗು ಪ್ರಭಾವಿ ಸ್ಥಾನಗಳು ಸಿಗುತ್ತಾ ಬಂದಿವೆ. ಅಧಿಕಾರಶಾಹಿಯಲ್ಲೂ ಅವರ ಹಿಡಿತ ಮುಂದುವರಿದುಕೊಂಡೇ ಬಂದಿದೆ.
ಈಗ ಸಿದ್ದರಾಮಯ್ಯ ಸಂಪುಟದಲ್ಲಿ ಏಳು ಲಿಂಗಾಯತ ಸಚಿವರಿದ್ದಾರೆ. ಅಧಿಕಾರಶಾಹಿಯಲ್ಲೂ ಅವರ ಪ್ರಭಾವ ತೀರಾ ಕಡಿಮೆ ಏನಿಲ್ಲ. ಸರಕಾರಗಳು ಬದಲಾಗುವಾಗ ಅಧಿಕಾರಿಗಳ ವರ್ಗಾವಣೆ ಹಾಗು ಕೆಲವು ಪ್ರಮುಖ ಹುದ್ದೆಗಳಿಗೆ ಆ ಸರಕಾರದ ಧೋರಣೆಗೆ ಸೂಕ್ತ ಕಾಣುವ ಅಧಿಕಾರಿಗಳ ನೇಮಕ ಸಹಜ. ಆದರೂ ಈ ಸರಕಾರ ಹಲವು ಆಯಕಟ್ಟಿನ ಸ್ಥಾನಗಳಲ್ಲಿ ಈ ಹಿಂದಿನ ಬಿಜೆಪಿ ಸರಕಾರದಲ್ಲಿದ್ದವರನ್ನೇ ಮುಂದುವರಿಸಿದೆ ಎಂಬ ಆಕ್ಷೇಪ ಇದೆಯೇ ಹೊರತು ಅವರನ್ನು ಮೂಲೆಗುಂಪು ಮಾಡಿದೆ ಎಂಬ ದೂರಿಲ್ಲ.
ಈ ಸರಕಾರದ ಸಚಿವ ಸಂಪುಟ ಹಾಗು ಅಧಿಕಾರಶಾಹಿ ಬಗ್ಗೆ ಏನಾದರೂ ದೂರುಗಳಿರಬೇಕಾದ್ದು ಮುಸ್ಲಿಮರು ಹಾಗು ಮಹಿಳೆಯರಿಗೆ ಮಾತ್ರ. ಆ ಎರಡೂ ವರ್ಗಗಳಿಗೆ ಸೂಕ್ತ ನ್ಯಾಯ ಸಿಕ್ಕಿಲ್ಲ ಎಂಬುದು ಹಗಲಿನಷ್ಟೇ ಸತ್ಯ. ಉಳಿದ ಬಹುತೇಕ ಎಲ್ಲ ಸಮುದಾಯಗಳಿಗೆ ಈ ಸರಕಾರ ಸಂಪುಟದಲ್ಲಿ ಹಾಗು ಅಧಿಕಾರಿಗಳ ನೇಮಕಾತಿಯಲ್ಲಿ ನ್ಯಾಯ ಒದಗಿಸಿದೆ.
ಹೀಗಿರುವಾಗ ಲೋಕಸಭೆ ಚುನಾವಣೆ ಎದುರಿಗೆ ಇರುವ ಹೊತ್ತಲ್ಲಿ ಪಕ್ಷದೊಳಗೆ ಇಂಥ ಬಿಕ್ಕಟ್ಟು, ಬಿರುಕು ಕಾಣಿಸುತ್ತಿರುವುದು, ಅದು ಬಹಿರಂಗವಾಗಿಯೇ ವ್ಯಕ್ತವಾಗಿ ಪ್ರತಿಪಕ್ಷದ ಬಾಯಿಗೆ ಬೀಳುವುದು ಕಾಂಗ್ರೆಸ್ ಪಾಲಿಗೆ ಒಳ್ಳೆಯದೇನೂ ಅಲ್ಲ. ಆದರೆ, ಕಾಂಗ್ರೆಸ್ ನಾಯಕರು ಹೀಗೆ ಅಸಮಾಧಾನ ಹೊರಹಾಕುವುದು, ತಕ್ಷಣವೇ ಬಿಜೆಪಿ ಅದಕ್ಕೆ ತೀವ್ರ ರೀತಿಯಲ್ಲಿ ಪ್ರತಿಕ್ರಿಯಿಸಿ, ಸರ್ಕಾರದ ಟೀಕೆಗೆ ಯುದ್ಧದ ರೀತಿಯಲ್ಲಿ ನಿಂತುಬಿಡುವುದು ಯಾವುದೋ ವ್ಯವಸ್ಥಿತ ತಂತ್ರದ ಭಾಗವಾಗಿದೆಯೆ ಎಂಬ ಅನುಮಾನವೂ ಬಾರದೇ ಇರುವುದಿಲ್ಲ.