ವಯನಾಡ್ ನಲ್ಲಿ ಬಿಜೆಪಿ ಹೇಳಿದ ಹಸಿ ಸುಳ್ಳು | ಮಲ್ಲಿಕಾರ್ಜುನ ಖರ್ಗೆಗೆ ಅವಮಾನಿಸಿತ್ತೇ ಕಾಂಗ್ರೆಸ್?
Photo : x/@priyankagandhi
ವಯನಾಡಿನಲ್ಲಿ ಪ್ರಿಯಾಂಕ ಗಾಂಧಿ ವಾದ್ರ ನಾಮಪತ್ರ ಸಲ್ಲಿಕೆ ವೇಳೆ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಅವಮಾನ ಮಾಡಲಾಗಿದೆ ಎಂದು ಬಿಜೆಪಿ ಆರೋಪಿಸಿ ಹಲವು ಚಿತ್ರಗಳನ್ನು ಹರಿಯ ಬಿಟ್ಟಿದೆ. ಆದರೆ ಈ ಚಿತ್ರಗಳ ಕುರಿತ ತೀರಾ ಸಣ್ಣ ವಾಸ್ತವವನ್ನು ಮಾತ್ರ ಹೇಳಿಕೊಂಡು ಇದುವೇ ಪೂರ್ಣ ಸತ್ಯ ಎಂಬಂತೆ ಬಿಜೆಪಿ ಹಸಿ ಸುಳ್ಳು ಹರಡುತ್ತಿದೆ.
ನಾಮಪತ್ರ ಸಲ್ಲಿಕೆ ವೇಳೆ ನಾಮಪತ್ರ ಸಲ್ಲಿಕೆ ಮಾಡುವ ಕೊಠಡಿಯಲ್ಲಿ ಅಭ್ಯರ್ಥಿ ಸಹಿತ ಕೇವಲ ಐದು ಜನರು ಇರಬೇಕು. ANI ಸುದ್ದಿ ಸಂಸ್ಥೆ ಹಂಚಿಕೊಂಡಿರುವಂತಹ ವಿಡಿಯೋವನ್ನು ನೋಡಿದರೆ ಮೊದಲು ಪ್ರಿಯಾಂಕ ಗಾಂಧಿ ವಾದ್ರ ಜೊತೆ ಅವರ ಪತಿ ರಾಬರ್ಟ್ ವಾದ್ರ ಮತ್ತು ಪುತ್ರ ರೆಹಾನ್ ವಾದ್ರ ಕುಳಿತಿರುವುದು ಕಾಣಬಹುದು. ನಂತರ ಸೋನಿಯಾ ಗಾಂಧಿ ಬಂದು ಸೇರುತ್ತಾರೆ. ಹಿಂದಿನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಇದರ 20 ಸೆಕೆಂಡಿನ ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೂ ಅಲ್ಲಿಗೆ ಬರುತ್ತಾರೆ. ಅವರ ಜೊತೆ ರಾಹುಲ್ ಗಾಂಧಿ ಕೂಡ ಅಲ್ಲಿಗೆ ಬಂದು ಸೇರುತ್ತಾರೆ.
ಬಿಜೆಪಿ ಮಾಡಿರುವಂತಹ ಆರೋಪ ಪ್ರಕಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಹೊರಗೆ ನಿಲ್ಲಿಸಲಾಗಿತ್ತು ಮತ್ತು ಇಡೀ ಗಾಂಧಿ ಕುಟುಂಬ ಮಾತ್ರ ನಾಮಪತ್ರ ಸಲ್ಲಿಸುವ ಕೊಠಡಿಯಲ್ಲಿತ್ತು. ಆದರೆ ವಿಡಿಯೋವನ್ನು ಸರಿಯಾಗಿ ಗಮನಿಸಿದರೆ ಮೊದಲ ನಾಲ್ಕು ನಿಮಿಷಗಳ ಕಾಲ ಪ್ರಿಯಾಂಕ ಗಾಂಧಿ ವಾದ್ರ ಜೊತೆ ಅವರ ಪತಿ ರಾಬರ್ಟ್ ವಾದ್ರ ಮತ್ತು ಪುತ್ರ ರೆಹಾನ್ ವಾದ್ರ ಕುಳಿತಿದ್ದರು. ಆಗ ಅಲ್ಲಿ ಸೋನಿಯಾ ಗಾಂಧಿ ಕೂಡ ಇರಲಿಲ್ಲ, ರಾಹುಲ್ ಗಾಂಧಿ ಅವರೂ ಇರಲಿಲ್ಲ ಮಲ್ಲಿಕಾರ್ಜುನ ಖರ್ಗೆ ಅವರೂ ಇರಲಿಲ್ಲ. ನಂತರ ಸೋನಿಯಾ ಗಾಂಧಿ ಬರುತ್ತಾರೆ ಮತ್ತು ಹಿಂದಿನ ಕುರ್ಚಿಯಲ್ಲಿ ಕುಳಿತುಕೊಳ್ಳುತ್ತಾರೆ. ಆಗಲೂ ರಾಹುಲ್ ಗಾಂಧೀ ವಿಡಿಯೋದಲ್ಲಿ ಇಲ್ಲ.
ANI ವಿಡಿಯೋದಲ್ಲಿ ಇದಾಗಿ 20 ಸೆಕೆಂಡ್ ನಂತರ ಮಲ್ಲಿಕಾರ್ಜುನ ಖರ್ಗೆ ಅವರು ಬಂದು ಕುಳಿತುಕೊಳ್ಳುತ್ತಾರೆ. ಹತ್ತು ಹದಿನೈದು ನಿಮಿಷಗಳ ಇಡೀ ಪ್ರಕ್ರಿಯೆಯ ಕೇವಲ 20 ಸೆಕೆಂಡಿನ ವಿಡಿಯೋ ವನ್ನು ಹಂಚಿಕೊಂಡು ಖರ್ಗೆ ಗೆ ಆ ಕೊಠಡಿಗೆ ಅನುಮತಿ ನೀಡಲಿಲ್ಲ ಎಂದು ಬಿಜೆಪಿ ಆರೋಪಿಸುತ್ತಿದೆ. ಆದರೆ ಸೋನಿಯಾ ಗಾಂಧೀ ಮತ್ತು ಮಲ್ಲಿಕಾರ್ಜುನ ಖರ್ಗೆ ಪ್ರವೇಶಿಸಿದ್ದು ಕೇವಲ 20 ಸೆಕೆಂಡುಗಳ ಅಂತರದಲ್ಲಿ ಎಂಬುದನ್ನು ಬಿಜೆಪಿ ಮುಚ್ಚಿಟ್ಟಿದೆ. ರಾಹುಲ್ ಅದಕ್ಕೂ ನಂತರ ಬಂದು ಕುಳಿತು ಕೊಳ್ಳುವುದನ್ನು ಬಿಜೆಪಿ ಹೇಳಲೇ ಇಲ್ಲ.
ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್ ಹೇಳುವಂತೆ ವಯನಾಡಿನಲ್ಲಿ ಬಂದು ಸೇರಿದಂತಹ ಜನಸಮೂಹವನ್ನು ನೋಡಿ ಹೆದರಿ ಬಿಜೆಪಿ ಸುಳ್ಳನ್ನು ಹರಡುತ್ತಿದೆ. ಕಾಂಗ್ರೆಸ್ ಅಧ್ಯಕ್ಷರಾದ ಮಲ್ಲಿಕಾರ್ಜುನ್ ಖರ್ಗೆ ಕುರಿತಾಗಿ ಬಿಜೆಪಿ ಸುಳ್ಳು ಸುದ್ದಿ ಹರಡಿತು. ಆದರೆ ಕೆಲವೇ ನಿಮಿಷಗಳ ಒಳಗೆ ಸುಳ್ಳು ಬಯಲಾಗಿದೆ. ವಿಡಿಯೋ ಜೊತೆ ಬಿಜೆಪಿಯ ಸುಳ್ಳೂ ಬಯಲಾಗಿದೆ ಎಂದು ಸುಪ್ರಿಯಾ ಶ್ರೀನೇತ್ ಹೇಳುತ್ತಾರೆ.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಜೊತೆಗೇ ನಾಮಪತ್ರ ಕೊಠಡಿಗೆ ಬಂದು ತಲುಪಿದರು. ಆ ವೇಳೆ ಅಲ್ಲಿ ಬೇರೆ ಯಾರೋ ಕುಳಿತಿದ್ದ ಕಾರಣ ಅವರು ಹೊರಬಂದ ನಂತರ ಇವರು ಒಳ ಪ್ರವೇಶಿಸಿದರು. ಒಳಗಿದ್ದವರಿಗೆ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ತಲುಪಿದ ಮಾಹಿತಿ ಸಿಕ್ಕ ತಕ್ಷಣ ಅವರು ಹೊರಬಂದರು. ಅಷ್ಟು ಮಾತ್ರ ಅಲ್ಲ ಮಲ್ಲಿಕಾರ್ಜುನ ಖರ್ಗೆ ಬಂದು ಪ್ರಿಯಾಂಕ ಗಾಂಧಿ ಪಕ್ಕದಲ್ಲಿ ಮೊದಲನೇ ಸಾಲಿನಲ್ಲೇ ಕುಳಿತುಕೊಂಡರು. ಸೋನಿಯಾ ಗಾಂಧೀ ಕಾಂಗ್ರೆಸ್ ಸಂಸದೀಯ ಮಂಡಳಿಯ ಅಧ್ಯಕ್ಷೆಯಾಗಿದ್ದರೂ ಎರಡನೇ ಸಾಲಿನಲ್ಲೇ ಕುಳಿತ್ತಿದ್ದರು. ನಾವು ನಮ್ಮ ಅಧ್ಯಕ್ಷರನ್ನು ತುಂಬಾ ಗೌರವಿಸುತ್ತೇವೆ. ಆದರೆ ಬಿಜೆಪಿಯವರು ಗೌರವಿಸುವುದಿಲ್ಲ. ಬಹುಷಃ ಖರ್ಗೆ ಅವರು ದಲಿತ ಸಮುದಾಯಕ್ಕೆ ಸೇರಿದವರು ಎಂಬ ಕಾರಣದಿಂದಾಗಿ ಅವರನ್ನು ಬಿಜೆಪಿ ಪದೇಪದೇ ಅವಮಾನಿಸುತ್ತಿದೆ ಎಂದು ಸುಪ್ರಿಯಾ ಶ್ರೀನೇತ್ ಹೇಳಿದ್ದಾರೆ.
ಕುಟುಂಬದವರು ಪ್ರಿಯಾಂಕಾ ಗಾಂಧಿ ಜೊತೆ ಕುಳಿತಿದ್ದರು ಎಂಬುದು ಬಿಜೆಪಿಗಿರುವ ಇನ್ನೊಂದು ಸಮಸ್ಯೆ. ಕುಟುಂಬ ಏನು ಎಂದು ಗೊತ್ತಿಲ್ಲದವರಿಗೆ ಕುಟುಂಬದ ಮಹತ್ವ ಗೊತ್ತಾಗದು. ಮನೆಗಳ ಮೇಲೆ ಬುಲ್ಡೋಜರ್ ಹರಿಸಿ ಕುಟುಂಬಗಳನ್ನು ಬೀದಿಪಾಲು ಮಾಡುವವರು ಕುಟುಂಬಗಳ ಮಹತ್ವವನ್ನು ಅರಿತುಕೊಳ್ಳುವುದು ಕಷ್ಟ.
ಸೋನಿಯಾ ಗಾಂಧಿ ಮುಂದಿನ ಸಾಲಿನಲ್ಲಿ ಕುಳಿತುಕೊಂಡು ಖರ್ಗೆ ಅವರನ್ನು ಹಿಂದೆ ಕೂರಿಸಿ ಅವಮಾನಿಸಿದ್ದಾರೆ ಎಂದು ಬಿಜೆಪಿ ಹೇಳುತ್ತದೆ. ANI ಸುದ್ದಿ ಸಂಸ್ಥೆಯ ವಿಡಿಯೋ ನೋಡಿದರೆ ಮಲ್ಲಿಕಾರ್ಜುನ ಖರ್ಗೆ ಒಳಗೆ ಬಂದು ಕುಳಿತು ಕೊಂಡ ನಂತರ ಸುಮಾರು 12 ನಿಮಿಷಗಳ ಕಾಲ ಮೊದಲನೇ ಸಾಲಿನಲ್ಲಿ ಕುಳಿತಿದ್ದರು. ಈ ಇಡೀ ಅವಧಿಯಲ್ಲಿ ಸೋನಿಯಾ ಗಾಂಧಿ ಹಿಂದೆ ಕುಳಿತಿದ್ದರು. ನಂತರ ಸ್ವತಃ ಖರ್ಗೆ ಅವರೇ ಎದ್ದು ನಿಂತು ಸೋನಿಯಾ ಗಾಂಧಿ ಅವರಲ್ಲಿ ನೀವು ಮುಂದೆ ಬನ್ನಿ ಎಂದು ಹೇಳಿದಾಗ ಮಾತ್ರ ಸೋನಿಯಾ ಗಾಂಧಿ ಮುಂದೆ ಬರುತ್ತಾರೆ.
ಅಷ್ಟೇ ಅಲ್ಲ ಆಗಲೂ ರಾಹುಲ್ ಗಾಂಧಿಯವರು ಇಲ್ಲ ಇಲ್ಲ ನೀವು ಮುಂದೆ ಕುಳಿತುಕೊಳ್ಳಿ ಎಂದು ಖರ್ಗೆ ಅವರಿಗೆ ಒತ್ತಾಯ ಮಾಡುವುದು ಕಾಣಬಹುದು. ಎಷ್ಟೇ ಹೇಳಿದರೂ ಖರ್ಗೆ ಅವರು ಕೇಳದೇ ಇದ್ದಾಗ ರಾಹುಲ್ ಮುಂದೆ ಕುಳಿತುಕೊಳ್ಳದೆ ಅವರ ಜೊತೆ ಎರಡನೇ ಸಾಲಿನಲ್ಲಿ ಕುಳಿತುಕೊಳ್ಳುತ್ತಾರೆ. ನಂತರ ಅಲ್ಲಿಯೇ ಇರುತ್ತಾರೆ. ಮುಂದೆ ಖಾಲಿ ಇದ್ದ ಸೀಟಿನಲ್ಲಿ ನಂತರ ಮುಸ್ಲಿಂ ಲೀಗ್ ಹಿರಿಯ ನಾಯಕ ಸಯ್ಯದ್ ಸಾದಿಕ್ ಅಲಿ ಶಿಹಾಬ್ ತಂಙಳ್ ಬಂದು ಕುಳಿತುಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದು.
ಎಲ್ಲವೂ ಇಷ್ಟು ಸ್ಪಷ್ಟವಾಗಿರುವಾಗ ಬಿಜೆಪಿ ಹೀಗೆ ಹಸಿ ಸುಳ್ಳು ಹೇಳುವುದಾದರೂ ಹೇಗೆ. ಈ ದೇಶದ ಜನರು ಇಷ್ಟು ಮೂರ್ಖರೆಂದು ಬಿಜೆಪಿ ತಿಳಿದಿದೆಯೇ? ಹಿರಿಯ ನೇತಾರ ಮಲ್ಲಿಕಾರ್ಜುನ ಖರ್ಗೆ ಅವರನ್ನು ಅವಮಾನಿಸುವುದಕ್ಕಾಗಿಯೇ ಬಿಜೆಪಿ ಪದೇ ಪದೇ ಈ ರೀತಿ ಮಾಡುತ್ತದೆಯಾ? ಆಧಾರರಹಿತ ಸುಳ್ಳಾರೋಪ ಮಾಡುತ್ತಿದೆಯೇ ?
ಪ್ರಿಯಾಂಕಾ ಗಾಂಧಿ ತಾನು ಪ್ರಚಾರಕ್ಕೆ ಹೋಗುವ ಮೊದಲು ಹೋಗಿ ಭೇಟಿಯಾದ ಒಬ್ಬರೇ ಒಬ್ಬ ನಾಯಕ ಮಲ್ಲಿಖಾರ್ಜುನ ಖರ್ಗೆ. ಪ್ರಿಯಂಕ ಗಾಂಧಿ ಖರ್ಗೆ ಅವರಿಗೆ ನೀಡುವಂತಹ ಗೌರವ ಇದು ಎಂದು ಸುಪ್ರಿಯ ಶ್ರೀನೇತ್ ಹೇಳುತ್ತಾರೆ.
ಕಾಂಗ್ರೆಸ್ ಪಕ್ಷದೊಳಗೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ನೀಡಬಹುದಾದ ಅತ್ಯಂತ ದೊಡ್ಡ ಸ್ಥಾನ ಹಾಗೂ ಗೌರವ ನೀಡಿದೆ. ತನ್ನ ಪಕ್ಷದ ಅಧ್ಯಕ್ಷರಾಗಿಸಿದೆ. ಇದಕ್ಕಿಂತ ದೊಡ್ಡ ಗೌರವ ಇನ್ಯಾವುದು ಎಂದು ಕಾಂಗ್ರೆಸ್ ನಾಯಕರು ಬಿಜೆಪಿಗೆ ಕೇಳುತ್ತಾರೆ.
ಎಂದಿನಂತೆ ಬಿಜೆಪಿಯ ಇದೇ ಸುಳ್ಳನ್ನು ಮಡಿಲ ಮಾಧ್ಯಮಗಳು ಹರಡಿವೆ. ಬಿಜೆಪಿ ಹೇಗೂ ಸುಳ್ಳು ಹರಡುವುದರಲ್ಲಿ ಎಕ್ಸ್ಪರ್ಟ್. ಮಡಿಲ ಮಾಧ್ಯಮಗಳೂ ಬಿಜೆಪಿಗಿಂತ ಹಿಂದೆ ಇಲ್ಲ. ಒಂದು ಹೆಜ್ಜೆ ಮುಂದೆಯೇ ಇವೆ. ಆದರೆ ಕೇರಳದಲ್ಲಿ ಈ ಸುಳ್ಳಿನ ಆಟ ಬಹಳ ಬೇಗ ಎಕ್ಸ್ ಪೋಸ್ ಆಗಿದೆ.