ಎಎಸ್ಪಿ ಕಂಚಿನ ತಟ್ಟೆ ಕೊಟ್ಟು, ಬೆನ್ನು ತಟ್ಟಿದಾಗ ಭಯ ದೂರವಾಯಿತು
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಮನದಾಳ ಮಾತು
‘‘ನನಗೆ ಮೊದಲೆಲ್ಲಾ ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗುವಾಗ ಹೆದರಿಕೆಯಾಗುತ್ತಿತ್ತು, ಭಯ ಇತ್ತು. ಆದರೆ 1989ರಲ್ಲಿ ಘಾಟ್ ರಸ್ತೆಯಲ್ಲಿ ಅಪಘಾತವೊಂದು ಸಂಭವಿಸಿದಾಗ ತಕ್ಷಣ ಗಾಯಾಳುಗಳ ರಕ್ಷಣೆಗೆ ಧಾವಿಸಿದ್ದೆ. ಆ ಸಂದರ್ಭ ಅಂದಿನ ಪುತ್ತೂರು ಎಎಸ್ಪಿ ಗಗನ್‌ದೀಪ್ ನನ್ನನ್ನು ಪುತ್ತೂರಿಗೆ ಕರೆಸಿ ನನಗೆ ಕಂಚಿನ ತಟ್ಟೆ ಕೊಟ್ಟು ‘ಕಾವಳದಲ್ಲಿ ಬೆಳಕಾಗಿ ಬಂದ ಕರುಣಾಳು ನೀ...’ ಎಂದು ಬಣ್ಣಿಸಿ ನನ್ನ ಬೆನ್ನು ತಟ್ಟಿ ಪ್ರೋತ್ಸಾಹಿಸಿದರು. ಅಂದಿನಿಂದ ನನ್ನ ಭಯ ನಿವಾರಣೆಯಾಯಿತು’’ ಎಂದು ಪ್ರಸಕ್ತ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಾರ್ಮಾಡಿ ಹಸನಬ್ಬ ಹೇಳಿದ್ದಾರೆ.
ಮಂಗಳೂರಿನ ಕಂಕನಾಡಿಯಲ್ಲಿ ಶನಿವಾರ ಜಮೀಯ್ಯತುಲ್ ಫಲಾಹ್ ವತಿಯಿಂದ ಸನ್ಮಾನ ಸ್ವೀಕರಿಸಿ ತನ್ನ ಸೇವಾ ಚಟುವಟಿಕೆಗಳ ಕುರಿತು ಮನಬಿಚ್ಚಿ ಮಾತನಾಡಿದರು.
‘‘ಚಾರ್ಮಾಡಿಯಲ್ಲಿ ರಸ್ತೆ ಅಪಘಾತ ಸಂಭವಿಸಿದ ಸ್ಥಳಕ್ಕೆ ಹೋಗುವಾಗ ನನಗೆ ಮೊದಲೆಲ್ಲ ಭಯವಾಗುತ್ತಿತ್ತು. ಅಪಘಾತ ನಡೆದ ಸ್ಥಳಕ್ಕೆ ಹೋದರೆ ನ್ಯಾಯಾಲಯದಲ್ಲಿ ಸಾಕ್ಷ್ಯ ನುಡಿಯಬೇಕಾಗುತ್ತದೆ, ಅನಗತ್ಯವಾಗಿ ಪೊಲೀಸ್ ಠಾಣೆಗೆ ಅಲೆದಾಡಬೇಕಾಗುತ್ತದೆ ಎಂಬ ಹೆದರಿಕೆ ಇತ್ತು. ಆದರೆ, ಅಪಘಾತದಿಂದ ಸಂಕಷ್ಟಕ್ಕೀಡಾಗುವ ಜನರನ್ನು ನೋಡಿ ಮನಸ್ಸು ಕರಗಿತು. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸಾಗಿಸುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ. ಅಂದಿನ ಎಎಸ್ಪಿ ಧೈರ್ಯ ತುಂಬಿದ ಮೇಲೆ ನನಗೆ ಅಪಘಾತದ ಗಾಯಾಳುಗಳಿಗೆ ನೆರವಾಗಲು ಹೆಚ್ಚಿನ ಉತ್ಸಾಹ, ಧೈರ್ಯ ಬಂತು. ಮುಂಚೂಣಿಯಲ್ಲಿ ನಿಂತು ನೆರವು ಕಾರ್ಯ ಶುರು ಮಾಡಿದೆ. ಬಳಿಕ ತಾನು ಹಿಂದಿರುಗಿ ನೋಡಲೇ ಇಲ್ಲ’’ ಎಂದು ಮೂರೂವರೆ ದಶಕಗಳ ಹಿಂದಿನ ದಿನಗಳನ್ನು ಸ್ಮರಿಸಿದರು.
73ರ ಹರೆಯದ ಹಸನಬ್ಬ ಚಾರ್ಮಾಡಿಯಲ್ಲಿ ಸಣ್ಣ ಹೋಟೆಲ್ ಹೊಂದಿದ್ದಾರೆ. ದಕ್ಷಿಣ ಕನ್ನಡ -ಚಿಕ್ಕಮಗಳೂರು ಗಡಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ 73ರ ಚಾರ್ಮಾಡಿ ಘಾಟಿಯಲ್ಲಿ ರಸ್ತೆ ಅಪಘಾತದಿಂದ ಗಾಯಗೊಂಡ ಸಹಸ್ರಾರು ಮಂದಿಯ ಜೀವ ಉಳಿಸಿದ ಆಪತ್ಭಾಂದವ ಆಗಿದ್ದಾರೆ.
‘‘ಪ್ರಶಸ್ತಿ ಬರುತ್ತದೆ, ಯಾರೋ ಅಭಿನಂದಿಸುತ್ತಾರೆಂಬ ಕಾರಣಕ್ಕೆ ಸಮಾಜ ಸೇವೆ ಮಾಡಿಲ್ಲ. ನಾನು ಮಾಡಿದ ಕೆಲಸಕ್ಕೆ ಜನರು ಬೆನ್ನು ತಟ್ಟುವಾಗ ಜವಾಬ್ದಾರಿ ಜಾಸ್ತಿಯಾಯಿತು. ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಿದ ಕಾರಣಕ್ಕಾಗಿ ಗಾಯಾಳುಗಳ ಮನೆಯವರು ನನ್ನ ಮನೆಗೆ ಬಂದು ಕೃತಜ್ಞತೆ ಸಲ್ಲಿಸುತ್ತಿದ್ದರು. ಅವರೆಲ್ಲರ ಹಾರೈಕೆ, ಆಶೀರ್ವಾದದ ಫಲವಾಗಿ ನಾನು ಸಮಾಜ ಸೇವೆಯನ್ನು ಮುಂದುವರಿಸಿದೆ. ಇದೀಗ ಕರ್ನಾಟಕ ಸರಕಾರ ನನ್ನನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಿದೆ. ಈ ಹಿಂದೆ ಜಿಲ್ಲಾ, ತಾಲೂಕು ಮಟ್ಟದ ಸನ್ಮಾನಗಳು ಸಿಕ್ಕಿವೆ’’ ಎಂದು ಅವರು ಹೇಳಿದರು.
‘‘ರಾಜ್ಯ ಸರಕಾರ ಪ್ರಶಸ್ತಿಯೊಂದಿಗೆ ನೀಡಿದ 5 ಲಕ್ಷ ರೂ.ಯನ್ನು ಪೆಟ್ಟಿಗೆಯಲ್ಲಿಟ್ಟು ಜೀವನ ಮಾಡುವುದಿಲ್ಲ. ದುಡಿಯಲು ನನ್ನ ಕೈಕಾಲು ಈಗ ಗಟ್ಟಿಯಾಗಿವೆ. ಹೋಟೆಲ್‌ನಲ್ಲಿ ಲೋಟ ತೊಳೆಯುತ್ತಿದ್ದೇನೆ. ಮಕ್ಕಳು ದುಡಿಯುತ್ತಾರೆ. ಯಾರಾದರೂ ಕೈಜೋಡಿಸಿದರೆ ಪ್ರಶಸ್ತಿಯ ಮೊತ್ತಕ್ಕೆ ಇನ್ನಷ್ಟು ಸೇರಿಸಿ ಉತ್ತಮ ಆ್ಯಂಬುಲೆನ್ಸ್ ಒಂದನ್ನು ಖರೀದಿಸುವ ಇರಾದೆ ಇದೆ. ಹಾಗೆ ಖರೀದಿಸುವ ಆ್ಯಂಬುಲೆನ್ಸ್ ಮೂಲಕ 20-25 ಕಿ.ಮೀ. ತನಕ ಉಚಿತ ಸೇವೆ ಒದಗಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಿದ್ದೇನೆ’’ ಎಂದು ಹಸನಬ್ಬ ನುಡಿದರು.
‘‘ಚಾರ್ಮಾಡಿ ಘಾಟಿಗೆ ಹತ್ತಿರದಲ್ಲಿ ಸರಕಾರಿ ಆಸ್ಪತ್ರೆಗಳಿಲ್ಲ. ಎರಡು ಮೂರು ಆಸ್ಪತ್ರೆಗಳಿದ್ದರೂ, ಅವುಗಳೆಲ್ಲಾ ಖಾಸಗಿಯವು. ಅಪಘಾತದ ಸಂದರ್ಭ ಫೋನ್ ಮಾಡಿದರೆ ಆ್ಯಂಬುಲೆನ್ಸ್‌ಗಳೇನೋ ಬರುತ್ತವೆ. ಅವು ಸಂಬಂಧಪಟ್ಟ ಆಸ್ಪತ್ರೆಗಳಿಗೆ ಗಾಯಾಳುಗಳನ್ನು ಸೇರಿಸುತ್ತವೆ. ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ದುಬಾರಿಯಾಗುತ್ತವೆ. ಇದರಿಂದ ಗಾಯಾಳುಗಳು ಇನ್ನಷ್ಟು ತೊಂದರೆ ಅನುಭವಿಸಬೇಕಾಗುತ್ತದೆ. ಈ ಕಾರಣಕ್ಕೆ ತಾನೇ ಆ್ಯಂಬುಲೆನ್ಸ್ ಹೊಂದಿದ್ದಲ್ಲಿ ಗಾಯಾಳುಗಳನ್ನು ಸರಕಾರಿ ಆಸ್ಪತ್ರೆಗಳಿಗೆ ಸಾಗಿಸಲು ನೆರವಾಗಬಹುದು. ಹಾಗಾದಲ್ಲಿ ಪ್ರಶಸ್ತಿ ಕೊಟ್ಟ ಸರಕಾರಕ್ಕೆ ಮತ್ತು ಪ್ರಶಸ್ತಿಗೆ ಭಾಜನರಾದವರಿಗೆ ಗೌರವ ಮೂಡಲು ಸಾಧ್ಯ’’ ಎಂದು ತಮ್ಮ ಯೋಜನೆಯನ್ನು ಬಿಚ್ಚಿಟ್ಟರು.