ದೇವದಾಸಿ ಮಹಿಳೆಯರ ಮೇಲಿನ ಪದ ನಿಂದನೆ ನಿಲ್ಲುವುದೆಂದು?
ನಾವು ಶಾಲೆ ಓದುವ ಸಂದರ್ಭದಲ್ಲಿ ‘‘ಯಾರೆಲ್ಲಾ ದೇವದಾಸಿ ಮಕ್ಕಳು ಇದ್ದೀರ ಬನ್ನಿ’’ ಎಂದು ಮೇಷ್ಟ್ರು ತರಗತಿಯಲ್ಲಿ ಕರೆದಾಗ ನಮ್ಮ ಕೇರಿಯವರೆಲ್ಲಾ ಎದ್ದು ಹೋಗುವುದನ್ನು ನೋಡಿ ಇತರರು ನಗುತ್ತಿದ್ದರು. ಹೊಸ ಶಿಕ್ಷಕರಿಗೆ ನಮ್ಮ ಪರಿಚಯ ಮಾಡಿಕೊಳ್ಳುವಾಗ ನಮ್ಮ ಹೆಸರು ಮತ್ತು ತಾಯಿಯ ಹೆಸರು ಮಾತ್ರ ಹೇಳಿ ಕುಳಿತುಕೊಳ್ಳುತ್ತಿದ್ದೆವು. ಶಿಕ್ಷಕರು ತಂದೆಯ ಹೆಸರು ಹೇಳಿ ಎಂದು ಕೇಳುತ್ತಿದ್ದರು. ಆಗ ತರಗತಿಯಲ್ಲಿ ಎಲ್ಲರೂ ನಗುತ್ತಿದ್ದರು. ನಾನು ದೇವದಾಸಿ ಮಗ, ಮಗಳು ಎಂದಾಗ ಸರಿ ಕೂಡಿ ಎನ್ನುತ್ತಿದ್ದರು. ಇನ್ನೂ ಕೆಲವು ಶಿಕ್ಷಕರು ತಮ್ಮ ಮಾತಿನ ನಡುವೆ ‘ಸೂ..ಮಗ’ ಪದ ಬಳಸುತ್ತಿದ್ದದ್ದು ಬಹಳ ಮುಜುಗರ ತರಿಸುತ್ತಿತ್ತು. ಆಗ ಪಕ್ಕದ ಸ್ನೇಹಿತರು ನಮ್ಮ ಮುಖಗಳನ್ನೇ ನೋಡುತ್ತಿದ್ದರು. ಈ ಕಾರಣಕ್ಕಾಗಿಯೇ ಅದೆಷ್ಟೋ ದೇವದಾಸಿ ಮಕ್ಕಳು ಶಾಲೆ ಬಿಟ್ಟು ಕೂಲಿ ಸೇರುವಂತಾಯಿತು. ಕಳೆದ ವಾರ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ವರದಿ ಮಾಡಿದ ಕೆಲವು ಪತ್ರಿಕೆಗಳು ಬಳಸಿದ ಪದ ಓದಿದಾಗ ಈ ಕಥೆ ನೆನಪಾದವು.
ವಿವಾಹೇತರ ಸಂಬಂಧದಿಂದ ಜನಿಸಿದ ಮಕ್ಕಳು ಹಿಂದೂ ಉತ್ತರಾಧಿಕಾರ ಕಾಯ್ದೆಯ ಅನ್ವಯ ತಮ್ಮ ಪೋಷಕರ ಹಾಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ವರದಿಯನ್ನು ಕೆಲವು ಮುದ್ರಣ ಮಾಧ್ಯಮಗಳು ‘ಅಕ್ರಮ ಸಂಬಂಧದಿಂದ’ ಹುಟ್ಟಿದ ಮಕ್ಕಳು ಪಾಲಕರ ಆಸ್ತಿಯಲ್ಲಿ ಹಕ್ಕು ಹೊಂದಿದ್ದಾರೆ ಎಂದು ವರದಿ ಮಾಡಿವೆ. ಈ ರೀತಿಯ ಪದ ಬಳಕೆ ಇತ್ತೀಚಿನ ಬೆಳವಣಿಗೆಯಲ್ಲ, ಹಿಂದಿನಿಂದಲೂ ಚಾಲ್ತಿಯಲ್ಲಿದೆ. ಒಂದು ಸಮುದಾಯದ ಮಹಿಳೆಯರನ್ನು ಮತ್ತು ಅವರ ಮಕ್ಕಳನ್ನು ನೋಯಿಸುವ ಪದಗಳನ್ನು ಕಟ್ಟುತ್ತಾ, ಬಳಸುವುದರ ಜೊತೆಗೆ ಅವುಗಳನ್ನು ಭಾಷೆಯಲ್ಲೂ ಹಾಗೂ ಬರಹದಲ್ಲೂ ವಿಜೃಂಭಿಸಲಾಗುತ್ತಿದೆ.
ಈ ‘ಅಕ್ರಮ’ ಎನ್ನುವ ಪದ ಬಳಕೆ ಕೇಳುವುದಕ್ಕೆ ಎಷ್ಟು ಅಹಿತವಾಗಿದೆಯೋ ಅದಕ್ಕಿಂತಲೂ ಹೆಚ್ಚಾಗಿ ಈ ನಾಡಿನ ಲಕ್ಷಾಂತರ ದೇವದಾಸಿ ಮಹಿಳೆಯರ ಹಾಗೂ ಮಕ್ಕಳ ಮನಸ್ಸನ್ನು ನೋಯಿಸುತ್ತಲೇ ಇದೆ. ದೇವದಾಸಿ ಮಹಿಳೆಯರ ಮೇಲೆ ಹಲವಾರು ಪದಗಳ ಮೂಲಕ ನಿಂದಿಸುವುದು ಇವತ್ತಿನ ಬೆಳವಣಿಗೆಯಲ್ಲ. ಸೂಳೆ, ಹಾದರಗಿತ್ತಿ, ಸವತಿ, ವೇಶ್ಯೆ ಮತ್ತು ತುಡುಗು ಎಂಬ ಬೈಗುಳಗಳ ಪದಗಳನ್ನು ಕಟ್ಟಿ ಅವರ ಐಡೆಂಟಿಟಿಯಾಗಿ ಬದಲಾಯಿಸುತ್ತಾ ಬರಲಾಗುತ್ತಿದೆ. ಇದಕ್ಕೆ ಬರಹ ರೂಪದಲ್ಲಿ ಮತ್ತೆ ಮತ್ತೆ ‘ಅಕ್ರಮ ಸಂಬಂಧ’ ಎಂಬ ವಾಕ್ಯ ಕಟ್ಟಲಾಗುತ್ತಿದೆ ಅಷ್ಟೇ.
ಈ ಪದ ಬಳಕೆಗಳು ಒಂದು ಕಡೆ ತಳ ಸಮುದಾಯಗಳ ದೇವದಾಸಿ ಮಹಿಳೆಯರನ್ನು ನೋಯಿಸಿದರೆ ಮತ್ತೊಂದು ಕಡೆ ಮಹಿಳಾ ವಿರೋಧಿ ಪದಗಳು ಹೌದು. ಹೆಣ್ಣಿನ ದೇಹದ ಮೇಲೆ ಕಟ್ಟಲಾದ ಈ ಬೈಗುಳಗಳ ಪದ ಪ್ರಯೋಗ ಎಲ್ಲಾ ಮಹಿಳೆಯರ ಮೇಲೂ ನಡೆಯುತ್ತಲೇ ಇದೆ. ಇದಕ್ಕೆ ಸಿನೆಮಾ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಹೊರತಾಗಿಲ್ಲ. ಕೆಲವು ನಿಯತಕಾಲಿಕೆಗಳು ಬಳಸುತ್ತಿದ್ದ ಹೆಣ್ಣಿನ ದೇಹದ ಮೇಲಿನ ಪದಗಳು ಇತ್ತೀಚಿನ ಸಾಮಾಜಿಕ ಜಾಲತಾಣಗಳಲ್ಲಿ ನಾವು ಕಾಣಬಹುದು. ೧೯೯೯ ರಲ್ಲಿ ‘ಉಪೇಂದ್ರ’ ಸಿನೆಮಾದಲ್ಲಿ ಉಪೇಂದ್ರ ಬಳಸಿದ ‘ಡಗಾರ್’ ಪದ ಇಡೀ ಕರ್ನಾಟಕದ ಜನಕ್ಕೆ ಪರಿಚಯವಾಗಿ ಬಳಕೆಗೆ ಬಂತು. ಹೊಸ ಪದ ಬಳಕೆಯ ಮೂಲಕ ಹೆಣ್ಣಿನ ಶೋಷಣೆಗೆ ಮತ್ತೊಂದು ಹಣೆಪಟ್ಟಿ ಕಟ್ಟಿದ ಕೀರ್ತಿ ಉಪೇಂದ್ರಗೆ ಸಲ್ಲುತ್ತದೆ. ಈ ಪದವನ್ನು ಬಳಸಿಕೊಂಡು ೧೯೯೨ರಲ್ಲಿ ಜಗ್ಗೇಶ್ ನಟನೆಯ ‘ತರ್ಲೆ ನನ್ಮಗ’ ಸಿನೆಮಾದಲ್ಲಿ ‘ಡಂ ಡಂ ಡಗಾರ್ ಡಗಾರ್’ ಎಂದು ಇಡೀ ಸಿನೆಮಾದುದಕ್ಕೂ ಹಾಡು ಕಟ್ಟಿ ಕುಣಿದು ಕುಪ್ಪಳಿಸಿದರು. ಈ ಪದ ಸದ್ಯ ಗಂಡಸರು ಹೆಣ್ಣಿನ ದೇಹಕ್ಕೆ ಬಳಸುವ ಸಹಜ ಪದವಾಗಿ ಬದಲಾಗಿಬಿಟ್ಟಿದೆ. ಅದರಲ್ಲೂ ಈ ಸಿನೆಮಾಗಳ ಮೂಲಕ ದೇವದಾಸಿ ಮಹಿಳೆಯರು ಇರುವ ಕೇರಿಗೆ ‘ಡಗಾರ್ ಓಣಿ’ ಎಂದು ಕರೆಯುವ ಚಾಳಿಯೂ ಚಾಲ್ತಿಗೆ ಬಂತು. ಇದಕ್ಕೆ ಬುನಾದಿ ಹಾಕಿದವರು ಈ ನಾಡಿನ ಜನಪ್ರಿಯ ನಟ ಉಪೇಂದ್ರ ಮತ್ತು ಜಗ್ಗೇಶ್ ಅವರು. ಇದು ಸಣ್ಣ ಉದಾಹಣೆ ಅಷ್ಟೇ. ಈ ರೀತಿ ಹುಡುಕುತ್ತಾ ಹೋದರೆ ಸಾವಿರ ಪದಗಳು ಹಾಗೂ ಉದಾಹರಣೆಗಳು ಸಿಗುತ್ತವೆ. ಕೊನೆಗೆ ಗಂಡು ಏನು ಮಾಡಿದರೂ ‘ಗಂಡೇ’ ಎಂದು ಸಮರ್ಥಿಸಿಕೊಂಡು ಹೆಣ್ಣನ್ನು ಮಾತ್ರ ಪದಗಳಲ್ಲಿ ಶೋಷಿಸುತ್ತಾ ಬರಲಾಗಿದೆ. ಗಂಡು ಮಕ್ಕಳಿಗೆ ಬೈಗುಳ ಹುಡುಕಿದರೆ ಬೆರಳೆಣಿಕೆ ಮಾತ್ರ ಸಿಗುತ್ತವೆ. ಈ ‘ಅಕ್ರಮ’ ಎಂಬ ಪದ ಕೂಡ ಹೆಣ್ಣನ್ನೇ ಶೋಷಣೆ ಮಾಡುತ್ತದೆಯೇ ಹೊರತು ಗಂಡನ್ನು ಅಲ್ಲ.
ಸಂಸ್ಕೃತಿ ಮತ್ತು ಸಾಂಪ್ರದಾಯಿಕ ಹೆಸರಲ್ಲಿ ದೇವರ ಸೇವೆಗೆ ಎಂದು ತಳ ಸಮುದಾಯದ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಂಡು ಅವರನ್ನು ದೇವದಾಸಿ ಮಾಡಿದ ಇತಿಹಾಸವನ್ನು ನಾವು ಮರೆಯಬಾರದು. ಇವತ್ತಿಗೂ ಈ ದೇವದಾಸಿ ಪದ್ಧತಿ ಉತ್ತರ ಕರ್ನಾಟಕದಲ್ಲಿ ಚಾಲ್ತಿಯಲ್ಲಿದೆ. ಈ ಕಾರಣಕ್ಕಾಗಿಯೂ ಈ ಭಾಗದಲ್ಲಿ ‘ಸೂ...ಮಗ’ ಅನ್ನುವ ಪದವು ಹೆಚ್ಚು ಬಳಕೆಯಾಗಿ ಈಗ ಆಡುಭಾಷೆಯಾಗಿ ಬದಲಾಗಿಬಿಟ್ಟಿದೆ. ಈ ಪದವನ್ನು ಸ್ಟ್ಯಾಂಡಪ್ ಕಾಮಿಡಿ ಮಾಡುವ ಪ್ರಾಣೇಶ್ ಗಂಗಾವತಿ ಅವರು ತಮ್ಮ ಹಾಸ್ಯದಲ್ಲಿ ವೈಭವೀಕರಿಸಿ ಮಾತಾಡುತ್ತಾರೆ. ಆದರೆ ಈ ಪದಗಳನ್ನು ಬಹುಪಾಲು ಬಳಸುವುದು ದಲಿತ ಸಮುದಾಯಕ್ಕೆ ಹೊರತು ತಮ್ಮ ಸಮುದಾಯಗಳಿಗಲ್ಲ ಎಂಬ ಕಾರಣಕ್ಕೆ ಹಾಸ್ಯ ಚಟಾಕಿ ಹಾರಿಸುತ್ತಾರೆ. ಇಂತಹ ಮಹಿಳಾ ವಿರೋಧಿ ಪದಗಳನ್ನು ಹಾಗೂ ಒಂದು ಸಮುದಾಯದ ಜನರನ್ನು ನೋಯಿಸುವ ಪದಗಳನ್ನು ಬಳಸುವುದು ನಿಲ್ಲಿಸಬೇಕಿದೆ. ಸಿನೆಮಾ, ಕಾಮಿಡಿ ಹಾಗೂ ಮಾಧ್ಯಮಗಳ ಮೂಲಕ ಸಾರ್ವಜನಿಕರಿಗೆ ಶೋಷಣೆ ಮಾಡುವ ಪದಗಳನ್ನು ಪರಿಚಯಿಸುವವರ ಕಿವಿ ಹಿಂಡುವ ಕೆಲಸ ಆಗಬೇಕಿದೆ.
ಕಳೆದ ತಿಂಗಳು ನ್ಯಾಯಾಲದ ತೀರ್ಪುಗಳಲ್ಲಿ ಮಹಿಳೆಯರ ಬಗ್ಗೆ ಬರೆಯುವಾಗ ‘ವ್ಯಭಿಚಾರಿಣಿ, ‘ವೇಶ್ಯೆ’, ‘ಸೂಳೆ’, ‘ಅವಿವಾಹಿತೆ’ ‘ಉಪಪತ್ನಿ’ ಇತ್ಯಾದಿ ಪದಗಳನ್ನು ಬಳಸದೆ, ಪರ್ಯಾಯ ಪದಗಳನ್ನು ಬಳಸಬೇಕೆಂದು ಸುಪ್ರೀಂ ಕೋರ್ಟ್‌ನಿಂದ ಲಿಂಗತ್ವದ ಸಿದ್ಧ ಮಾದರಿ ಕೈಪಿಡಿಯನ್ನು ಬಿಡುಗಡೆ ಮಾಡಿದೆ. ಈ ಕೈಪಿಡಿಯನ್ನು ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವ, ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಕ್ಷೇತ್ರಗಳು ಬಳಸಿಕೊಳ್ಳಬೇಕಿದೆ. ಹೀಗೆ ನಾವು ಬಳಸುವ ಪದಗಳು ಮುಂದಿನ ಪೀಳಿಗೆಗೆ ಬಳಸುವಂತೆ ಮಾಡಬೇಕಿದೆ.
ಜವಾಬ್ದಾರಿಯ ಸ್ಥಾನದಲ್ಲಿರುವ ಕ್ಷೇತ್ರಗಳು ಸುದ್ದಿ ನೀಡುವ, ರಂಜಿಸುವ ಭರದಲ್ಲಿ ನೋಯಿಸುವ ಕೆಲಸ ಮಾಡಬಾರದು ಎಂಬುವುದು ನಮ್ಮ ಆಶಯ. ಹೆಣ್ಣಿಗೆ ಕಟ್ಟಿರುವ ಬೈಗುಳಗಳನ್ನು ನಾವು ಕೂಡ ಬಳಸುವುದನ್ನು ನಿಲ್ಲಿಸುವುದರ ಜೊತೆಗೆ ಇತರರಿಗೆ ಅರಿವನ್ನೂ ಮೂಡಿಸಬೇಕಿದೆ.