ನಿಮಗೆ ಆ ನಾಡನ್ನು ಕೊಟ್ಟವರು ಯಾರು?
ಜಾರ್ಜ್ ಗಾಲ್ಲೋವೇ Photo: facebook.com/GeorgeGallowayOfficial
ಜಾರ್ಜ್ ಗಾಲ್ಲೋವೇ ‘ವರ್ಕರ್ಸ್ ಪಾರ್ಟಿ ಆಫ್ ಬ್ರಿಟನ್’ ಪಕ್ಷದ ನಾಯಕರು. ನಾಲ್ಕು ಬಾರಿ ಬ್ರಿಟಿಷ್ ಪಾರ್ಲಿಮೆಂಟಿನ ಸದಸ್ಯರಾಗಿದ್ದವರು. ಹಲವು ಅಂತರ್ರಾಷ್ಟ್ರೀಯ ವೇದಿಕೆಗಳಲ್ಲಿ ಫೆಲೆಸ್ತೀನ್ ಜನತೆಯ ಹಿತಾಸಕ್ತಿಗಳ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡಿದವರು.
2014 ರಲ್ಲಿ ಅವರು ಬ್ರಿಟನ್ ನ ಸಂಸದ್ ಸದಸ್ಯರಾಗಿದ್ದ ದಿನಗಳಲ್ಲಿ ನಡೆದ ಘಟನೆ ಇದು:
ಜಾರ್ಜ್ ಗಾಲ್ಲೋವೇ ಒಂದು ರೇಡಿಯೊ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಒಬ್ಬ ವ್ಯಕ್ತಿ ಅವರೊಂದಿಗೆ ಚರ್ಚೆಗಿಳಿದರು.
ಆ ವ್ಯಕ್ತಿಯ ವಾದ ಹೀಗಿತ್ತು:
ಯೆಹೂದಿಗಳಿಗೆ ಫೆಲೆಸ್ತೀನ್ ನೆಲವನ್ನು ಆಕ್ರಮಿಸಿ ಅಲ್ಲಿ ಇಸ್ರೇಲ್ ಸರಕಾರವನ್ನು ಸ್ಥಾಪಿಸುವುದಕ್ಕೆ ಯಾವುದೇ ಹಕ್ಕು ಇರಲಿಲ್ಲ ಎಂದು ನೀವು ವಾದಿಸುವುದನ್ನು ನಾನು ಕೇಳಿದ್ದೇನೆ. ಇತಿಹಾಸದುದ್ದಕ್ಕೂ ಯೆಹೂದಿಗಳ ಮೇಲೆ ಅನ್ಯಾಯ ನಡೆದಿದೆ. ವಿಶೇಷವಾಗಿ ಹೋಲೋಕಾಸ್ಟ್ ರೂಪದಲ್ಲಿ ನಡೆದ ಯೆಹೂದಿಗಳ ಸಾಮೂಹಿಕ ನರಮೇಧ. ಇದೆಲ್ಲದರ ಬಳಿಕ ನಮಗೆ ಇಸ್ರೇಲ್ ಎಂಬ ಒಂದು ದೇಶವನ್ನು ನೀಡಲಾಯಿತು.....
ಅಷ್ಟರಲ್ಲಿ ಜಾರ್ಜ್ ಗಾಲ್ಲೋವೇ ಮಧ್ಯಪ್ರವೇಶಿಸಿ ಅದನ್ನು ನೀಡಿದವರು ಯಾರು? ಎಂದು ಪ್ರಶ್ನಿಸಿದರು.
ಆ ವ್ಯಕ್ತಿ ‘ಬ್ರಿಟನ್’ ಎಂದರು.
ಇದಕ್ಕುತ್ತರವಾಗಿ ಜಾರ್ಜ್ ಗಾಲ್ಲೊವೇ ಹೇಳಿದ ಮಾತುಗಳ ಆಯ್ದ ಭಾಗಗಳು ಇಲ್ಲಿವೆ:
ಇನ್ನೊಬ್ಬರ ದೇಶವನ್ನು ನಿಮ್ಮದೇ ಎಂದು ನೀಡುವುದಕ್ಕೆ ಬ್ರಿಟನ್ ಸರಕಾರಕ್ಕೆ ಯಾವ ಅಧಿಕಾರವಿದೆ?. ನಮ್ಮ ದೇಶ (ಬ್ರಿಟನ್) ಸಹಿತ ಹಲವು ಯುರೋಪಿಯನ್ ದೇಶಗಳಲ್ಲಿ ಹಲವು ಶತಮಾನಗಳಿಂದ ಯೆಹೂದಿಗಳ ಮೇಲೆ ಜನಾಂಗೀಯ ಹಾಗೂ ಸೆಮೆಟಿಕ್ ವಿರೋಧಿ ಆಕ್ರಮಣಗಳು ನಡೆಯುತ್ತಾ ಬಂದಿವೆ. ಪಕ್ಷಪಾತ, ತಾರತಮ್ಯಗಳಿಂದಾರಂಭಿಸಿ ಹತ್ಯಾಕಾಂಡಗಳವರೆಗೆ ವಿವಿಧ ಸ್ವರೂಪದ ಅಕ್ರಮಗಳು ನಡೆದಿವೆ. ಯೆಹೂದಿಗಳ ವಿರುದ್ಧ ಯಾವುದೇ ತಾರತಮ್ಯ ನಡೆಸದ ಮತ್ತು ಅವರನ್ನು ಯಾವುದೇ ಹತ್ಯಾಕಾಂಡಕ್ಕೆ ಗುರಿಪಡಿಸದ ಒಂದು ಸ್ಥಳವಿದ್ದರೆ ಅದು ಮುಸ್ಲಿಮ್ ಜಗತ್ತು ಮಾತ್ರ. ಎಷ್ಟೆಂದರೆ, ಸ್ಪೇನ್ ಮತ್ತು ಅಂದಲೂಸಿಯ್ಯಗಳು ಕ್ರೈಸ್ತ ಸಾಮ್ರಾಜ್ಯಗಳ ವಶಕ್ಕೆ ಬಂದ ವೇಳೆ ಅಲ್ಲಿನ ಮುಸ್ಲಿಮರು ಅಲ್ಲಿಂದ ವಲಸೆಹೋದರು. ಮುಸ್ಲಿಮರ ಜೊತೆಗೆ ಅಲ್ಲಿನ ಯೆಹೂದಿಗಳು ಕೂಡಾ ಅಲ್ಲಿಂದ ವಲಸೆ ಹೋದರು.
ಪಶ್ಚಿಮದಲ್ಲಿ ಮುಸ್ಲಿಮ್ ನಾಗರಿಕತೆಯ ಅವನತಿಯೊಂದಿಗೆ, ತಾವು ಕ್ರೈಸ್ತರ ಸೆಮೆಟಿಕ್ ವಿರೋಧಿ ದ್ವೇಷವನ್ನು ಎದುರಿಸಬೇಕಾಗುವುದು ಎಂಬ ಭಯ ಯೆಹೂದಿಯರಿಗಿತ್ತು.....ಬ್ರಿಟಿಷರು ನಿಮಗೆ ಫೆಲೆಸ್ತೀನ್ ನಾಡನ್ನು ಕೊಡುವ ಮೂಲಕ ಫೆಲೆಸ್ತೀನ್ ತನ್ನ ಅಸ್ತಿತ್ವವನ್ನು ಕಳೆದುಕೊಂಡಿತು. ಬ್ರಿಟಿಷರು ನಿಮಗೆ ನೀಡಿದ ನಾಡು ಇನ್ನೊಬ್ಬರ ನಾಡಾಗಿತ್ತು. ಅಲ್ಲಿ ಅನೇಕ ಶತಮಾನಗಳಿಂದ ಯೆಹೂದಿಗಳು, ಮುಸ್ಲಿಮರು ಮತ್ತು ಕ್ರೈಸ್ತರ ಜೊತೆಜೊತೆಗೆ ಸುಖವಾಗಿ ಬದುಕಿದ್ದರು. ಅಲ್ಲಿ ತಾರತಮ್ಯ, ದಮನ ಅಥವಾ ನರಮೇಧ ಇದಾವುದೂ ಕಿಂಚಿತ್ತೂ ಅಸ್ತಿತ್ವದಲ್ಲೇ ಇರಲಿಲ್ಲ.
ಕ್ರೈಸ್ತರ ಸೆಮೆಟಿಕ್ ವಿರೋಧಿ ಧೋರಣೆಯಿಂದಾಗಿ ಯುರೋಪಿನಲ್ಲಿ 60 ಲಕ್ಷ ಯೆಹೂದಿಗಳ ಸಮೂಹ ಹತ್ಯೆ ನಡೆಯಿತು. ಅದು ಮಾನವ ಇತಿಹಾಸದ ಅತ್ಯಂತ ಘೋರ ಅಪರಾಧವಾಗಿತ್ತು. ಆದರೆ ಈ ಅಪರಾಧಕ್ಕೆ ಬೆಲೆ ತೆತ್ತದ್ದು ಮಾತ್ರ ಕ್ರೈಸ್ತರಲ್ಲ. ಸೆಮೆಟಿಕ್ ವಿರೋಧಿ ಧೋರಣೆಯನ್ನು ಸ್ವತಃ ಪಾಲಿಸಿದ ಅಥವಾ ಆ ಕುರಿತು ಜಾಣ ಕುರುಡು ತಾಳಿದ ಯುರೋಪಿನ ಕ್ರೈಸ್ತ ದೇಶಗಳು ತಮ್ಮ ಅಪರಾಧಕ್ಕೆ ಬೆಲೆ ತೆರಲಿಲ್ಲ. ಪ್ರಸ್ತುತ ಹೋಲೋಕಾಸ್ಟ್ ಎಂಬ ಅಪರಾಧದಲ್ಲಿ ಯಾವುದೇ ಪಾತ್ರ ವಹಿಸದಿದ್ದ, ಎಂದೂ ಯೆಹೂದಿಗಳನ್ನು ದಮನಿಸದೆ ಇದ್ದ, ಎಂದೂ ಯೆಹೂದಿಗಳ ಹತ್ಯಾಕಾಂಡ ನಡೆಸದೇ ಇದ್ದ ಫೆಲೆಸ್ತೀನ್ನ ಮುಗ್ಧ ಜನರು ತಮ್ಮದಲ್ಲದ ಅಪರಾಧಕ್ಕೆ ಬೆಲೆ ತೆರಬೇಕಾಯಿತು. ಇದು ಗಾಯದ ಮೇಲೆ ಉಪ್ಪು ಸವರುವ ಕ್ರಿಯೆಯಾಗಿತ್ತು. ಅವರ ದೇಶ ಜಾಗತಿಕ ಭೂಪಟದಿಂದ ಅಳಿದು ಹೋಯಿತು. ಅಲ್ಲಿಯ ಜನತೆ ಚದುರಿ ಹೋದರು. ನಾಡಿಲ್ಲದವರಾಗಿ ನೆಲೆಯಿಲ್ಲದೆ ಎಲ್ಲೆಂದರಲ್ಲಿ ಅಲೆಯುವುದೇ ಅವರ ಭಾಗ್ಯವಾಯಿತು. ಝಿಯೋನಿಸ್ಟ್ ಕಲ್ಪನೆಗನುಸಾರವಾಗಿ ಅವರ ನಾಡನ್ನು ಯುರೋಪಿಯನ್ ಯೆಹೂದಿಗಳ ವಶಕ್ಕೆ ಕೊಟ್ಟು ಬಿಡಲಾಯಿತು. ಯುರೋಪಿಯನ್ ಯೆಹೂದಿಗಳೇ ಅಲ್ಲಿ ಬಂದು ನೆಲೆಸಿದ ಮೊದಲ ಕಂತಿನ ವಲಸಿಗರಾಗಿದ್ದರು. ಅದು ಯುರೋಪಿನ ಯೆಹೂದಿಗಳಿಗೆ ಬ್ರಿಟಿಷರು ಕೊಟ್ಟ ನಾಡಾಯಿತು.
ನಿಜವಾಗಿ ಹೋಲೋಕಾಸ್ಟ್ಗಿಂತ ಬಹಳ ಮುಂಚಿತವಾಗಿಯೇ ಬ್ರಿಟಿಷ್ ಸರಕಾರವು ಆನಿಟ್ಟಿನಲ್ಲಿ ಕ್ರಮಕೈಗೊಂಡಿತ್ತು. ಬ್ರಿಟನ್ ಸರಕಾರವು 1917 ರಲ್ಲಿ ಬ್ರಿಟಿಷ್ ಸಚಿವ ಬಾಲ್ ಫೋರ್ ಮೂಲಕ ನಮ್ಮ ಪರವಾಗಿ, ನಾಸ್ತಿಕ, ಝಿಯೋನಿಸ್ಟ್ ಯೆಹೂದಿಗಳ ಒಂದು ಪಂಗಡದ ಜೊತೆ ಒಂದು ಒಪ್ಪಂದವನ್ನು ಮಾಡಿಕೊಂಡಿತು - ಬಾಲ್ ಫೋರ್ ಡಿಕ್ಲರೇಶನ್ ಎಂಬ ಒಪ್ಪಂದ. ಅವರು ನಾಸ್ತಿಕರೆಂಬುದನ್ನು ನಾನಿಲ್ಲಿ ವಿಶೇಷವಾಗಿ ಪ್ರಸ್ತಾಪಿಸಿದ್ದೇಕೆಂದರೆ ಕೆಲವರು, ದೇವರು ರಿಯಲ್ ಎಸ್ಟೇಟ್ ಏಜಂಟನೋ ಎಂಬಂತೆ, ಆ ನಾಡು ಬೈಬಲ್ನಲ್ಲಿ ಯೆಹೂದಿಗಳಿಗೆ ವಾಗ್ದಾನ ಮಾಡಲಾದ ನಾಡೆಂದು ವಾದಿಸುತ್ತಾರೆ....
ಆ ಕಾಲದಲ್ಲಿ ಝಿಯೋನಿಸ್ಟರು, ಯೆಹೂದಿ ಜನಾಭಿಪ್ರಾಯದ ತೀರಾ ಸಣ್ಣ ಭಾಗವೊಂದನ್ನು ಮಾತ್ರ ಪ್ರನಿಧಿಸುತ್ತಿದ್ದರು. ಇಷ್ಟಾಗಿಯೂ ಬಾಲ್ ಫೋರ್ ಮೂರನೆಯ ಪಕ್ಷವೊಂದಕ್ಕೆ ಸೇರಿದ್ದ ಒಂದು ನಾಡನ್ನು ಝಿಯೋನಿಸ್ಟರಿಗೆ ಕೊಡಲು ಬದ್ಧವಾಯಿತು. ಹೀಗೆ ಮಾಡುವಾಗ ಅಂದಿನ ಬ್ರಿಟಿಷ್ ಸರಕಾರವು ಸ್ವತಃ ಬ್ರಿಟನ್ ನಲ್ಲಿದ್ದ ಯೆಹೂದಿಗಳ ಜೊತೆಯಾಗಲಿ, ಜಗತ್ತಿನ ಇತರ ಭಾಗಗಳ ಯೆಹೂದಿಗಳ ಜೊತೆಯಾಗಲಿ ಯಾವುದೇ ಸಮಾಲೋಚನೆ ನಡೆಸಿರಲಿಲ್ಲ. ಫೆಲೆಸ್ತೀನ್ ಜನತೆಯಜೊತೆಗಂತೂ ಅವರು ಸಮಾಲೋಚಿಸುವ ಪ್ರಶ್ನೆಯೇ ಇರಲಿಲ್ಲ.....