ಯಾರಾಗ್ತಾರೆ ಕರ್ನಾಟಕದ ಅಜಿತ್ ಪವಾರ್ ?
ಮಹಾರಾಷ್ಟ್ರದ ಬಳಿಕ ಕರ್ನಾಟಕ, ಬಿಹಾರದ ಮೇಲೆ ಬಿಜೆಪಿ ಕಣ್ಣು
ಮಹಾರಾಷ್ಟ್ರ ರಾಜಕೀಯ ಬೆಳವಣಿಗೆಯ ಬಳಿಕ ಬಿಜೆಪಿ ಬತ್ತಳಿಕೆಗೆ ಸಿಕ್ಕಿರೋ ಒಂದು ಹೊಸ ಅಸ್ತ್ರದ ಹೆಸರು ಅಜಿತ್ ಪವಾರ್. ಮಹಾರಾಷ್ಟ್ರ ಬೆಳವಣಿಗೆಯ ಬೆನ್ನಲ್ಲೇ ಈಗ ಬಿಹಾರ, ಕರ್ನಾಟಕದಲ್ಲೂ ಅದೇ ರೀತಿಯ ಆಟಕ್ಕೆ ಬಿಜೆಪಿ ಮುಂದಾಗಿದೆಯೇ ಎಂಬ ಅನುಮಾನಗಳು ಶುರುವಾಗಿವೆ. ಹಾಗಾದರೆ ಬಿಜೆಪಿ ಪಾಲಿಗೆ ಅಸ್ತ್ರವಾಗಿ ಕರ್ನಾಟಕದಲ್ಲಿ ಮತ್ತು ಬಿಹಾರದಲ್ಲಿ ಯಾರ್ಯಾರು ಅಜಿತ್ ಪವಾರ್ ಆಗಲಿದ್ದಾರೆ?
ಮಹಾರಾಷ್ಟ್ರದಂಥ ಸ್ಥಿತಿಯೇ ಕರ್ನಾಟಕದಲ್ಲೂ ತಲೆದೋರಲಿದೆ ಅನ್ನೋದು ಕುಮಾರಸ್ವಾಮಿ, ಈಶ್ವರಪ್ಪ ಥರದವರ ವಾದವಾದರೆ, ಬಿಹಾರದಲ್ಲಿಯೂ ಅಂಥದೇ ರಾಜಕೀಯ ಸ್ಥಿತಿ ಉಂಟಾಗಲಿದೆ ಎಂದು ಸುಶೀಲ್ ಮೋದಿಯಂಥ ಹಿರಿಯ ಬಿಜೆಪಿ ನಾಯಕರು ಹೇಳತೊಡಗಿದ್ದಾರೆ.
ಕರ್ನಾಟಕದ ಅಜಿತ್ ಪವಾರ್ ಯಾರಾಗಲಿದ್ದಾರೆ ಎಂದು ಕಾಯುತ್ತಿದ್ದೇವೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಅಜಿತ್ ಪವಾರ್ ಕರ್ನಾಟಕದಲ್ಲೂ ಹೊರಬರುತ್ತಾರೆ ನೋಡಿ ಎಂದು ಈಶ್ವರಪ್ಪ ಹೇಳಿದ್ದಾರೆ. ಬಿಹಾರದಲ್ಲಿ ಹಲವಾರು ಜೆಡಿಯು ನಾಯಕರು ಅಸಮಾಧಾನಗೊಂಡಿದ್ದು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎಂದು ಮಾಜಿ ಡಿಸಿಎಂ ಹಾಗೂ ಹಾಲಿ ಬಿಜೆಪಿ ರಾಜ್ಯಸಭಾ ಸದಸ್ಯ ಸುಶೀಲ್ ಮೋದಿ ಹೇಳಿದ್ದಾರೆ.
ಬಹುಶಃ ಬಿಜೆಪಿ ಆಡಲಿತದಲ್ಲಿರೋ ಆಟದ ಮೊದಲ ಹಂತವೆಂಬಂತೆ ಈ ಹೇಳಿಕೆಗಳೆಲ್ಲ ಕಾಣಿಸತೊಡಗಿವೆ. ಮಹಾರಾಷ್ಟ್ರದಲ್ಲಿ ಏನಾಯಿತು ಎಂಬುದನ್ನು ಕಂಡಿದ್ದೇವೆ. ಏಕನಾಥ ಶಿಂಧೆ ಬಣದ ಶಿವಸೇನೆ ಜೊತೆಗಿನ ತನ್ನ ಸರ್ಕಾರಕ್ಕೆ ಹೊಸ ಬಲವಾಗಿ ಎನ್ ಸಿಪಿ ಯ ಅಜಿತ್ ಪವಾರ್ ಮತ್ತವರ ಜೊತೆಗೆ ಎಂಟು ಮಂದಿಯನ್ನು ಸಚಿವರಾಗಿ ಸೇರಿಸಿಕೊಂಡಿತು ಬಿಜೆಪಿ. ಅಜಿತ್ ಪವಾರ್ ಜೊತೆಗೆ ಅವರ ಪಕ್ಷದ 36ಕ್ಕೂ ಹೆಚ್ಚು ಶಾಸಕರು ಶರದ್ ಪವಾರ್ ಅವರಿಂದ ದೂರವಾಗಿ ಈಗ ಬಿಜೆಪಿಯೊಂದಿಗಿದ್ದಾರೆ ಎಂದು ಹೇಳಲಾಗುತ್ತಿದೆ.
ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವನ್ನು ಉರುಳಿಸಲು ಶಿವಸೇನೆಯನ್ನು ಹೋಳು ಮಾಡಿ ಏಕನಾಥ್ ಶಿಂಧೆಗೆ ಸಿಎಂ ಪಟ್ಟ ಕಟ್ಟಿದ್ದ ಬಿಜೆಪಿ, ಈಗ ಶಿಂಧೆಯನ್ನು ಓಡಿಸಲು ಅಜಿತ್ ಪವಾರ್ ಎಂಬ ಅಸ್ತ್ರ ಬಳಸಿದೆ. ಈಗ ದೇಶದಲ್ಲಿ ಪವರ್ ಪಾಲಿಟಿಕ್ಸ್ ನ ಪಿತಾಮಹ ಎಂದೇ ಹೇಳಲಾಗುವ ಶರದ್ ಪವಾರ್ ಅವರನ್ನೇ ಪಕ್ಷದಿಂದ ಹೊರ ಹಾಕಿರುವ ಅಜಿತ್ ಪವಾರ್ ಪಕ್ಷದ ಅಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕನಾಗಿದ್ದಾರೆ. ಅವರೊಂದಿಗೆ ಪಕ್ಷದ 53 ಶಾಸಕರ ಪೈಕಿ ಕನಿಷ್ಠ 29 ಶಾಸಕರು ಇರೋದು ನಿನ್ನೆ ಕನ್ಫರ್ಮ್ ಆಗಿದೆ.
ಎನ್ಸಿಪಿ ಸೇರ್ಪಡೆಗೆ ಶಿಂಧೆ ವಿರೋಧವಿದ್ದುದರ ನಡುವೆಯೇ ಆಗಿರುವ ಈ ಬೆಳವಣಿಗೆ, ಶಿಂಧೆಯಿಲ್ಲದಿದ್ದರೂ ಏನೂ ತೊಂದರೆಯಾಗದಂತೆ N C P ಬಲದೊಂದಿಗೆ ನಿಂತು, ಶಿಂಧೆಯನ್ನು ಹೊರಗಟ್ಟಲು ನಡೆಸಿರುವ ತಯಾರಿ ಎಂದೇ ಹೇಳಲಾಗುತ್ತಿದೆ. ಶಿಂಧೆ ಗುಂಪಿನ ಶಿವಸೇನೆ ನಾಯಕರು ಈಗ ಯಾವ ಸ್ಥಿತಿಗೆ ಬಂದಿದ್ದಾರೆಂದರೆ, ಉದ್ಧವ್ ಠಾಕ್ರೆ ಕಣ್ಸನ್ನೆಯಲ್ಲೇ ಕರೆದರೂ ಸಾಕು, ಹೋಗಿ ಬೇಷರತ್ತಾಗಿ ಅವರನ್ನು ಮತ್ತೆ ಸೇರಿಕೊಂಡುಬಿಡೋಣ ಎಂದುಕೊಳ್ಳುತ್ತಿದ್ದಾರೆ. ಶಿಂಧೆ ಬಣದ ಸಚಿವ ಶಂಭುರಾಜ್ ದೇಸಾಯಿ ಅಂಥದೊಂದು ಹೇಳಿಕೆ ನೀಡಿದ್ದಾರೆ.
ಸರ್ಕಾರದಲ್ಲಿ N C P ಸೇರ್ಪಡೆ ಬಳಿಕ ಸಚಿವರಾಗಲು ತಮಗಿದ್ದ ಕೊನೆ ಅವಕಾಶವೂ ಕೈತಪ್ಪಿಹೋಗಿರೋದು ಶಿಂಧೆ ಬಣದ ನಾಯಕರಿಗೆ ಮನವರಿಕೆಯಾಗಿದೆ. ಪೂರ್ತಿ ಬ್ರೆಡ್ ಬದಲು ಅರ್ಧ ಬ್ರೆಡ್ ಮಾತ್ರ ಸಿಗುತ್ತಿದೆ ಎಂದು ಮತ್ತೊಬ್ಬ ಶಾಸಕ ಭರತ್ ಗೊಗವಾಲೆ ಹೇಳಿದ್ದಾರೆ. ಅಂತೂ N C P ಯನ್ನು ಜೊತೆಗೆ ಕರೆದುಕೊಂಡಿರೋ ಬಿಜೆಪಿ, ಶಿಂಧೆಯನ್ನು ತನಗೆ ಬೇಕಾದಷ್ಟು ದಿನ ಬಳಸಿಕೊಂಡ ಬಳಿಕ ಈಗ ಯಾವ ಕ್ಷಣದಲ್ಲೂ ಕಿತ್ತೆಸೆಯಲು ಕತ್ತಿ ಮಸೆಯುತ್ತಿರೋದರ ಸ್ಪಷ್ಟ ಸೂಚನೆಗಳು ಕಾಣಿಸುತ್ತಿವೆ.
ಈ ಮಹಾ ಆಟದ ಬಳಿಕ ಬಿಜೆಪಿ ಕಣ್ಣಿಟ್ಟಿರೋದು ಕರ್ನಾಟಕ ಮತ್ತು ಬಿಹಾರದ ಕಡೆ. ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿರುವುದಕ್ಕಾಗಿ ಕೈಕೈ ಹೊಸಕಿಕೊಳ್ಳುತ್ತಿರುವ ಬಿಜೆಪಿ, ಇಲ್ಲಿ ಭರ್ಜರಿ ಬಹುಮತದೊಂದಿಗೆ ಸರ್ಕಾರ ರಚಿಸಿರೋ ಕಾಂಗ್ರೆಸ ನ್ನು ಹೇಗಾದರೂ ದುರ್ಬಲಗೊಳಿಸುವ ತಂತ್ರ ಹೂಡಿದರೆ ಅಚ್ಚರಿಯೇನಿಲ್ಲ.
ಕಾಂಗ್ರೆಸ್ ಬಗ್ಗೆ ಅದರಲ್ಲೂ ವಿಶೇಷವಾಗಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿಗಿಂತಲೂ ಹೆಚ್ಚು ಸಿಟ್ಟಿನಿಂದ ಕುದಿಯುತ್ತಿರುವ ಜೆಡಿಎಸ್ ನಾಯಕ ಕುಮಾರಸ್ವಾಮಿ ಕೂಡ ಈ ವಿಚಾರದಲ್ಲಿ ಬಿಜೆಪಿಯ ಜೊತೆಜೊತೆಗೇ ನಿಲ್ಲಲು ಹಿಂದೆಮುಂದೆ ನೋಡುವವರಲ್ಲ. ಹಾಗಾಗಿಯೇ ಅವರು ಇಂಥದೊಂದು ಹೇಳಿಕೆ ಕೊಟ್ಟಿರೋದು.
ಬಿಜೆಪಿಗೆ ಬೆಂಬಲ ನೀಡುವ "ಅಜಿತ್ ಪವಾರ್ ನಿರ್ಧಾರದ ನಂತರ ಕರ್ನಾಟಕದಲ್ಲಿ ಏನಾಗಬಹುದು ಎಂಬ ಭಯವಿದೆ ಎಂದಿರೋ ಕುಮಾರಸ್ವಾಮಿ, ಮುಂದಿನ ದಿನಗಳಲ್ಲಿ ಕರ್ನಾಟಕದ ಅಜಿತ್ ಪವಾರ್ ಯಾರಾಗಲಿದ್ದಾರೆ ಎಂದು ಎದುರು ನೋಡುತ್ತಿರೋದಾಗಿ ಹೇಳಿದ್ದಾರೆ.
ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಕಿತ್ತಾಟದ ನಡುವೆ ಜೆಡಿಎಸ್ಗೆ ದೊಡ್ಡ ಲಾಭವಾಗಲಿದೆ, ಕಿಂಗ್ ಮೇಕರ್ ಆಗೋ ಅವಕಾಶ ಸಿಗಲಿದೆ ಎಂದು ನಿರೀಕ್ಷಿಸಿದ್ದರು ಕುಮಾರಸ್ವಾಮಿ. ಆದರೆ ಆ ಲೆಕ್ಕಾಚಾರ ಪೂರ್ತಿ ತಲೆಕೆಳಗಾದ ಬಳಿಕ ಅವರೀಗ ಹೊಸ ಲೆಕ್ಕಾಚಾರ ಹಾಕುತ್ತಿದ್ದಾರೆ. ಹೀಗಾಗಿ, ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ಅಜಿತ್ ಪವಾರ್ ಅವತರಿಸೋದಕ್ಕೆ ಬಿಜೆಪಿಯ ಜೊತೆ ಸೇರಿ ಅವರು ಕಾರಣವಾಗಲಿದ್ದಾರೆಯೆ ಎಂಬ ಅನುಮಾನವೂ ಮೂಡದೇ ಇರೋದಿಲ್ಲ.
ಆದರೆ ಬಹುಮತದ ಕಾಂಗ್ರೆಸ್ ಸರ್ಕಾರವಿರುವ ಕರ್ನಾಟಕದಲ್ಲಿ ಬಿಜೆಪಿಯ ಆಟವಾಗಲೀ ಕುಮಾರಸ್ವಾಮಿ ಕೂಟವಾಗಲೀ ಅಂದುಕೊಂಡಷ್ಟು ಸುಲಭವಾಗಿಯೇನೂ ಫಲ ಕೊಡಲಾರದು. ಆದರೆ, ಈಗ ಈ ನಾಯಕರು ಕರ್ನಾಟಕದ ಅಜಿತ್ ಪವಾರ್ ಎಂದು ಮಾತನಾಡುತ್ತಿರುವಾಗ ಅವರ ಕಣ್ಣ ಮುಂದೆ ಇರೋದು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ನಡುವಿನ ಅಂತರ. ಡಿ ಕೆ ಶಿವಕುಮಾರ್ ಈ ಬಾರಿ ಸಿಎಂ ಆಗಲೇಬೇಕು ಎಂದು ಪಟ್ಟು ಹಿಡಿದಿದ್ದರು. ಆದರೆ ಕೊನೆಗೆ ಹೈಕಮಾಂಡ್ ಅವರನ್ನು ಸಮಾಧಾನಪಡಿಸಿ ಡಿಸಿಎಂ ಹುದ್ದೆಗೆ ಒಪ್ಪಿಕೊಂಡರು. ಆದರೂ ಸಿಎಂ ಹುದ್ದೆ ಮೇಲೆ ಅವರಿಗೆ ಕಣ್ಣು ಇದ್ದೇ ಇದೆ.
ಈ ಎರಡು ಬಣಗಳ ನಡುವಿನ ಭಿನ್ನಮತವನ್ನು ಬಳಸಿಕೊಂಡು, ಕಾಂಗ್ರೆಸ ನ್ನು ದುರ್ಬಲವಾಗಿಸಬಲ್ಲ, ಸರ್ಕಾರವನ್ನು ಅಸ್ಥಿರಗೊಳಿಸಬಲ್ಲ ಅಜಿತ್ ಪವಾರ್ ಅನ್ನು ಹುಡುಕಿಕೊಳ್ಳುವ ಇರಾದೆ ಬಿಜೆಪಿಗೆ ಇದ್ದರೂ ಇದ್ದಿರಬಹುದು. ಮಹಾರಾಷ್ಟ್ರದಲ್ಲಿನ ಬೆಳವಣಿಗೆಯ ನಂತರ ಇಂಥ ಆಸೆ ಬಿಜೆಪಿಯೊಳಗೆ ಇನ್ನಷ್ಟು ಹೆಚ್ಚೇ ಆಗಿರಲೂಬಹುದು.
ಮತ್ತು ಕುಮಾರಸ್ವಾಮಿ ಜೊತೆ ಸೇರಿಯೇ ಕಾಂಗ್ರೆಸ್ ವಿರುದ್ಧ ಹೋರಾಡುವ ಬಿಜೆಪಿ ತಂತ್ರದ ಹಿಂದೆ, ಹೀಗೆ ತನಗೆ ಬಲವಾಗಬಲ್ಲ ಒಬ್ಬ ಅಜಿತ್ ಪವಾರ್ ಅನ್ನು ಹುಡುಕುವ ಉದ್ದೇಶವೇ ಮುಖ್ಯವಾಗಿ ಇದ್ದಿರಲೂಬಹುದು. ಹಾಗಾಗಿಯೇ ಕಾಂಗ್ರೆಸ್ ಸರ್ಕಾರದಲ್ಲಿ ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಅತ್ತ ಕಡೆಯಿಂದ ಕುಮಾರಸ್ವಾಮಿ ಆರೋಪಿಸಿದರೆ ಇತ್ತ ಕಡೆಯಿಂದ ಬಿಜೆಪಿ ತನ್ನ ಸಹಮತ ವ್ಯಕ್ತಪಡಿಸುತ್ತ, ಪಕ್ಷವೆರಡು, ದನಿಯೊಂದು ಎಂಬಂಥ ನಡೆಯನ್ನು ಅನುಸರಿಸುತ್ತಿರುವುದರ ಮರ್ಮವನ್ನು ಈ ಹಿನ್ನೆಲೆಯಿಂದಲೂ ಈಗ ನೋಡಬೇಕಾಗಿದೆ.
ಹಾಗಾಗಿ ಮೂರೇ ತಿಂಗಳಲ್ಲಿ ಈ ಸರ್ಕಾರ ಉರುಳುತ್ತದೆ ಎಂದು ಈಶ್ವರಪ್ಪ ಹೇಳುವುದಕ್ಕೂ, ಕರ್ನಾಟಕದ ಅಜಿತ್ ಪವಾರ್ ಯಾರಾಗಲಿದ್ದಾರೆ ಎಂದು ಕಾಯುತ್ತಿರುವುದಾಗಿ ಕುಮಾರಸ್ವಾಮಿ ಹೇಳುವುದಕ್ಕೂ ನಡುವೆ ಎಂಥದೋ ರಾಜಕೀಯ ಆಟದ ಸೂತ್ರ ಇದ್ದಂತಿದೆ. ಆದರೆ ಡಿ ಕೆ ಶಿವಕುಮಾರ್ ಈ ಹಿಂದೆಯೂ ಯಾವುದೇ ಅಸಮಾಧಾನ ಇದ್ದರೂ ಪಕ್ಷದ ವಿರುದ್ಧ ಹೋದವರಲ್ಲ. ಪಕ್ಷಕ್ಕಾಗಿ ಸಾಕಷ್ಟು ತ್ಯಾಗ ಮಾಡಿದವರು. ಈಗಲೂ ಕರ್ನಾಟಕ ಮಾತ್ರವಲ್ಲ ಬೇರೆ ರಾಜ್ಯಗಳಲ್ಲೂ ಪಕ್ಷವನ್ನು ಬಲಪಡಿಸಲು ಶ್ರಮಿಸುತ್ತಿದ್ದಾರೆ. ಮುಂದೆ ತನಗೆ ಒಳ್ಳೆಯ ಅವಕಾಶ ಗಳಿವೆ ಎಂಬುದೂ ಚಾಣಾಕ್ಷ ರಾಜಕಾರಣಿ ಡಿ ಕೆ ಶಿ ಗೆ ಬಹಳ ಚೆನ್ನಾಗಿ ಗೊತ್ತಿದೆ. ಹಾಗಾಗಿ ಕರ್ನಾಟಕದಲ್ಲಿ ಅಜಿತ್ ಪವಾರ್ ಸಿಗೋದು ಬಿಜೆಪಿ ಗೆ ಹಾಗೂ ಎಚ್ ಡಿ ಕೆ ಗೆ ಅಷ್ಟು ಸುಲಭವಿಲ್ಲ.
ಇನ್ನು ಬಿಹಾರದ ವಿಚಾರಕ್ಕೆ ಬರೋದಾದರೆ, ಅಲ್ಲಿಯೂ ಮಹಾರಾಷ್ಟ್ರದಂಥ ಪರಿಸ್ಥಿತಿ ಉಂಟಾಗಲಿದೆ ಎನ್ನುತ್ತಿರೋದು ಬಿಜೆಪಿ ನಾಯಕರೇ. ಯಾಕೆಂದರೆ ಅಂಥ ಪರಿಸ್ಥಿತಿ ಉಂಟಾಗೋದೇ ಬಿಜೆಪಿಗೆ ಬೇಕಿದೆ. ಅಲ್ಲಿ ಆಡಳಿತಾರೂಢ ಮೈತ್ರಿಕೂಟದೊಳಗೆ ಕಾಣಿಸತೊಡಗಿರೋ ಅಸಮಾಧಾನದ ನಡುವೆ ತನ್ನ ಬೇಳೆ ಬೇಯಿಸಿಕೊಳ್ಳಬೇಕು ಎಂದು ಬಿಜೆಪಿ ಎದುರು ನೋಡುತ್ತಿದೆ.
ಶಾಸಕರ ಅಸಮಾಧಾನದ ಹಿನ್ನೆಲೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯುನಲ್ಲಿ ಬಿರುಕು ಮೂಡೋ ಸಾಧ್ಯತೆ ಹೆಚ್ಚು ಅನ್ನೋದು ವಿರೋಧ ಪಕ್ಷಗಳ ಮುಖಂಡರ ಅಭಿಪ್ರಾಯ. ಬಿಜೆಪಿ ನಾಯಕ, ಬಿಹಾರದ ಮಾಜಿ ಉಪಮುಖ್ಯಮಂತ್ರಿ ಸುಶೀಲ್ ಮೋದಿ ಮಹಾರಾಷ್ಟ್ರದಂತೆಯೇ ಬಿಹಾರದಲ್ಲೂ ಆಗಲಿದೆ ಅನ್ನೋ ಸುಳಿವು ನೀಡಿದ್ದಾರೆ. ಜೆಡಿಯುನ ಹಲವಾರು ಸಂಸದರು, ಶಾಸಕರು ಬಿಜೆಪಿ ಜೊತೆ ಸಂಪರ್ಕದಲ್ಲಿದ್ದಾರೆ ಎಂದೂ ಅವರೊಂದು ಬಾಂಬ್ ಎಸೆದಿದ್ದಾರೆ.
ಬಿಹಾರದಲ್ಲಿ ನಿತೀಶ್ ಕುಮಾರ್ ಅವರು ತೇಜಸ್ವಿ ಯಾದವ್ ಅವರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದಾಗಿನಿಂದ ಜೆಡಿಯುನಲ್ಲಿ ಬಂಡಾಯದ ವಾತಾವರಣವಿದೆ. ಅನೇಕರಿಗೆ ಟಿಕೆಟ್ ಸಿಗುವ ನಂಬಿಕೆಯಿಲ್ಲ. ಅಸಮಾಧಾನ ತಲೆದೋರಿದೆ ಎಂದು ಸುಶೀಲ್ ಮೋದಿ ಹೇಳಿದ್ದಾರೆ. ಕೇಂದ್ರ ಸಚಿವ ರಾಮದಾಸ್ ಅಠಾವಳೆ ಕೂಡ ನಿತೀಶ್ ಕುಮಾರ್ ಅವರ ಪಕ್ಷದಲ್ಲಿ ಬಿರುಕು ಮೂಡುವ ಸಾಧ್ಯತೆ ಬಗ್ಗೆ ಪ್ರಸ್ತಾಪಿಸಿದ್ದಾರೆ. ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಜಯಂತ್ ಚೌಧರಿ ಇತ್ತೀಚೆಗೆ ಪಾಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ಭಾಗವಹಿಸಿಲ್ಲ. ಅವರು ಎನ್‌ಡಿಎ ಸೇರುತ್ತಾರೆ ಎಂದು ಅವರು ಹೇಳಿದ್ದಾರೆ.
ಲೋಕ ಜನಶಕ್ತಿ ಪಕ್ಷದ ನಾಯಕ ಚಿರಾಗ್ ಪಾಸ್ವಾನ್ ಹಾಗೂ ರಾಷ್ಟ್ರೀಯ ಲೋಕ ಜನತಾ ದಳ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಉಪೇಂದ್ರ ಕುಶ್ವಾಹ ಅವರು ಕೂಡ ಮಹಾರಾಷ್ಟ್ರದಂಥ ಸ್ಥಿತಿ ಬಿಹಾರದಲ್ಲೂ ಉಂಟಾಗಲಿದೆ ಎಂಬ ಅಭಿಪ್ರಾಯಕ್ಕೆ ದನಿಗೂಡಿಸಿದ್ದಾರೆ. ಹಲವಾರು ಜೆಡಿಯು ನಾಯಕರು ಆರ್ಜೆಡಿ ಮತ್ತು ಬಿಜೆಪಿಯೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಕುಶ್ವಾಹ ಹೇಳುತ್ತಿದ್ದಾರೆ.
ಅಡ್ಡದಾರಿಯಿಂದ ಅಧಿಕಾರ ಹಿಡಿಯುವುದಕ್ಕೆ ಮತ್ತು ಬಲ ಕಡಿಮೆಯಿರುವಾಗ ಅಧಿಕಾರ ಭದ್ರಪಡಿಸಿಕೊಳ್ಳುವುದಕ್ಕೆ ಬಿಜೆಪಿ ಏನೇನೆಲ್ಲ ಮಾಡಬಲ್ಲುದು ಎಂಬುದನ್ನು ನೋಡಿಯಾಗಿದೆ. ಪ್ರಬಲ ಪಕ್ಷವನ್ನು ಇಲ್ಲವೆ ಮೈತ್ರಿಕೂಟವನ್ನು ಒಡೆಯುವ ನಿಟ್ಟಿನ ತನ್ನ ತಂತ್ರವನ್ನು ಬಿಜೆಪಿ ಯಾವಾಗಲೂ ಜಾರಿಯಲ್ಲಿಟ್ಟಿರುತ್ತದೆ ಎಂಬುದಕ್ಕೆ ಈಗ ನಡೆಯುತ್ತಿರುವ ವಿದ್ಯಮಾನಗಳೂ ಮತ್ತೊಂದು ಸಾಕ್ಷಿ. ಈಗ ಅದು ಕರ್ನಾಟಕ ಮತ್ತು ಬಿಹಾರದಲ್ಲಿ ಒಡಕು ಮೂಡಿಸಿ ಲಾಭ ಪಡೆಯುವ ಆಟಕ್ಕೆ ಇಳಿದಂತಿದೆ. ಬಿಹಾರದಲ್ಲಿ ಅದರ ಆಟ ನಡೆದರೂ ತೀರಾ ಆಶ್ಚರ್ಯವೇನಿಲ್ಲ.