ಧರ್ಮಾಂಧತೆಯ ದ್ವೇಷದ ಅಪರಾಧಕ್ಕೆ ಬಲಿಯಾದ ಫೈಝಾನ್
ರಕ್ತದ ಮಡುವಿನಲ್ಲಿ ಬಿದ್ದವರಿಗೆ ರಾಷ್ಟ್ರಗೀತೆ ಹಾಡುವಂತೆ ಹೇಳಿದ್ದ ಆ ದಿಲ್ಲಿ ಪೊಲೀಸ್ ಯಾರು?
Screengrab from the video | PC: @India_Policy/X
ಗಾಯಗೊಂಡು, ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ನರಳಾಡುತ್ತಿದ್ದ ಯುವಕರಲ್ಲಿ ಪೊಲೀಸ್ ಅಧಿಕಾರಿಗಳು ರಾಷ್ಟ್ರಗೀತೆ ಹಾಡುವಂತೆ, ವಂದೇಮಾತರಂ ಘೋಷಣೆ ಕೂಗುವಂತೆ ಬಲವಂತಪಡಿಸಿ, ಹಲ್ಲೆ ನಡೆಸುತ್ತಿರುವುದು ಫೆಬ್ರವರಿ 24, 2020ರಂದು ವೈರಲ್ ಆಗಿದ್ದ ವಿಡಿಯೊದಲ್ಲಿ ಸೆರೆಯಾಗಿತ್ತು.
ಆ ವಿಡಿಯೋ ಇಡೀ ದೇಶವನ್ನು ಬೆಚ್ಚಿ ಬೀಳಿಸಿತ್ತು, ನೋಡಿದವರೆಲ್ಲರೂ ಆಘಾತಗೊಂಡಿದ್ದರು. ಪೊಲೀಸರು ಈ ರೀತಿ ವರ್ತಿಸಲು ಸಾಧ್ಯವೇ ಎಂದು ಎಲ್ಲರೂ ಕೇಳಿದ್ದರು. ಆತ 23 ವರ್ಷ ವಯಸ್ಸಿನ ಯುವಕ ಪೈಝಾನ್. ಬಡ ಕುಟುಂಬದಿಂದ ಬಂದವನು. 2020 ಈಶಾನ್ಯ ದೆಹಲಿಯ ಹಿಂಸಾಚಾರದ ವೇಳೆ ಪೊಲೀಸರಿಂದ ಇವನು ನಿರ್ದಯವಾಗಿ ಥಳಿಸಲ್ಪಡುವ ವಿಡಿಯೋ ಒಂದು ವೈರಲ್ ಆಗಿತ್ತು. ಅವನ ಜೊತೆ ಇನ್ನೂ ನಾಲ್ಕು ಯುವಕರು ಇದ್ದರು.
ನಂತರ ಫೈಝಾನ್ನನ್ನು ದಿಲ್ಲಿಯ ಜ್ಯೋತಿ ನಗರ್ ಪೊಲೀಸ್ ಠಾಣೆಯಲ್ಲಿ ವಶದಲ್ಲಿರಿಸಿಕೊಳ್ಳಲಾಗಿತ್ತು ಎಂಬ ಆರೋಪ ಕೇಳಿ ಬಂದಿತ್ತು. ಪೊಲೀಸ್ ಠಾಣೆಯಿಂದ ಬಿಡುಗಡೆಗೊಂಡ 24 ಗಂಟೆಗಳ ಒಳಗೆ ನಗರದ ಆಸ್ಪತ್ರೆಯೊಂದರಲ್ಲಿ 23 ವರ್ಷದ ಫೈಝಾನ್ ಮೃತಪಟ್ಟಿದ್ದ. ಪೊಲೀಸರಿಂದ ಅಗತ್ಯ ತುರ್ತು ಚಿಕಿತ್ಸೆ ಸಿಗದ ಕಾರಣ ಯುವಕ ಮೃತಪಟ್ಟಿದ್ದ ಎಂಬುದು ಸ್ಪಷ್ಟವಾಗಿತ್ತು.
ಆಗ ದಿಲ್ಲಿ ಪೊಲೀಸರ ವಿರುದ್ಧ ಕ್ರಮಕ್ಕೆ ಹಲವರು ಆಗ್ರಹಿಸಿದ್ದರು. ಆದರೆ ಪೊಲೀಸರಿಂದ ಯಾವುದೇ ಉತ್ತರ ಸಿಕ್ಕಿರಲಿಲ್ಲ. ನಿರೀಕ್ಷೆಯಂತೆ ದಿಲ್ಲಿ ಪೊಲೀಸರನ್ನು ನಿಯಂತ್ರಿಸುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೂ ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ದಿಲ್ಲಿ ಹತ್ಯಾಕಾಂಡದ ಆರೋಪಿಗಳನ್ನು ಪತ್ತೆ ಹಚ್ಚಲು ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಬಳಸುವುದಾಗಿ ಅಮಿತ್ ಷಾ ಹೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಫೈಝಾನ್ ಸೋದರ ನದೀಮ್ "ಹಾಗಾದರೆ ನನ್ನ ಸೋದರನ ಮೇಲೆ ಹಲ್ಲೆ ನಡೆಸಿದ ಪೊಲೀಸರನ್ನು ಗುರುತಿಸಲು ಅಮಿತ್ ಶಾ ಅವರು ಫೇಸ್ ಡಿಟೆಕ್ಷನ್ ತಂತ್ರಜ್ಞಾನ ಬಳಸುತ್ತಿಲ್ಲ ಯಾಕೆ ? " ಎಂದು ಕೇಳಿದ್ದರು.
ಫೈಝಾನ್ ಮೇಲೆ ಹಲ್ಲೆ ನಡೆಸಿದ ದಿಲ್ಲಿ ಪೊಲೀಸರು ಯಾರು ಎಂಬುದು ಘಟನೆ ನಡೆದು ನಾಲ್ಕು ವರ್ಷವಾದರೂ ಪತ್ತೆಯಾಗಿಲ್ಲ ಅಂದರೆ ಯಾರಾದರೂ ನಂಬುವ ಮಾತೇ? ದಿಲ್ಲಿ ಪೊಲೀಸರು ಮನಸ್ಸು ಮಾಡಿದರೆ ಆ ಹಲ್ಲೆ ಮಾಡಿ ಅಮಾನುಷವಾಗಿ ವರ್ತಿಸಿದ ಪೊಲೀಸ್ ಸಿಬ್ಬಂದಿ ಯಾರು ಎಂದು ಒಂದೆರಡು ದಿನಗಳಲ್ಲೇ ಪತ್ತೆ ಹಚ್ಚಲು ಸಾಧ್ಯ ಇರಲಿಲ್ಲವೇ?
ಆದರೆ ದಿಲ್ಲಿ ಪೊಲೀಸರಾಗಲಿ, ಗೃಹ ಸಚಿವಾಲಯವಾಗಲಿ ಆ ನಿಟ್ಟಿನಲ್ಲಿ ಯಾವುದೇ ಕೆಲಸ ಮಾಡಲೇ ಇಲ್ಲ. ಪೈಝಾನ್ ಪೊಲೀಸರಿಂದ ಹಲ್ಲೆಗೊಳಗಾಗಿ ಆಮೇಲೆ ಪೊಲೀಸ್ ಕಸ್ಟಡಿಯಲ್ಲಿ ಚಿಕಿತ್ಸೆಯೂ ಸಿಗದ ಕಾರಣ ಸಾವನ್ನಪ್ಪಿದ್ದ ಕುರಿತು ಅವನ ಅಸ್ವಸ್ಥ ತಾಯಿ ಕಿಸ್ಮಾತುನ್ ದೆಹಲಿ ಹೈಕೋರ್ಟ್ ಮೆಟ್ಟಿಲೇರುತ್ತಾರೆ.
ಇದೀಗ ದೆಹಲಿ ಹೈಕೋರ್ಟ್ ಈ ಪ್ರಕರಣದಲ್ಲಿ ಮಹತ್ವದ ಆದೇಶವನ್ನು ನೀಡಿದೆ. ದಿಲ್ಲಿ ಪೊಲೀಸರಿಂದ ಥಳಿಸಲ್ಪಟ್ಟಿದ್ದ ಯುವಕನ ಸಾವಿನ ಕುರಿತು ಸಿಬಿಐ ತನಿಖೆಗೆ ದಿಲ್ಲಿ ಹೈಕೋರ್ಟ್ ಆದೇಶಿಸಿದೆ. ಪ್ರಕರಣವು ತೀವ್ರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆ ಎಂದೂ ನ್ಯಾಯಾಲಯ ಹೇಳಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅನೂಪ್ ಜೈರಾಮ್ ಭಂಭಾನಿ, ಯುವಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳ ವಿರುದ್ಧ ನಡೆಯುತ್ತಿರುವ ತನಿಖೆ ತೀರಾ ಗೊಂದಲಮಯವಾಗಿದ್ದು, ಯುವಕನ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳನ್ನು ಸುಲಭವಾಗಿ ಪಾರು ಮಾಡುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟರು.
"ಈ ಪ್ರಕರಣವು ತೀವ್ರ ಸ್ವರೂಪದ ಮಾನವ ಹಕ್ಕು ಉಲ್ಲಂಘನೆಯಾಗಿರುವುದನ್ನು ತೋರಿಸುತ್ತದೆ. ಹೆಸರಿಸಲಾಗಿರದ ಪೊಲೀಸರು ಧಾರ್ಮಿಕ ಪಕ್ಷಪಾತದಿಂದ ಪ್ರಚೋದಿತರೂ ಹಾಗೂ ಪ್ರೇರಿತರೂ ಆಗಿರುವುದು ಇದರಿಂದ ಕಂಡು ಬರುತ್ತಿದ್ದು, ಇದು ದ್ವೇಷಾಪರಾಧಕ್ಕೆ ಸಮವಾಗಿದೆ" ಎಂದೂ ನ್ಯಾಯಾಧೀಶರು ಹೇಳಿದ್ದಾರೆ.
ಈ ಘಟನೆಯ ಕುರಿತು ಸಿಬಿಐ ತನಿಖೆಗೆ ಆದೇಶಿಸಬೇಕು ಎಂದು ಫೈಝಾನ್ರ ತಾಯಿ ಕಿಸ್ತುಮನ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆಗೆ ಮಂಗಳವಾರ ನ್ಯಾಯಾಲಯ ಅನುಮತಿ ನೀಡಿತು.ಕೊನೆಗೂ ನ್ಯಾಯ ಸಿಗುತ್ತದೆ ಎಂದು ಆಶಿಸುತ್ತೇವೆ ಎಂದು ದೆಹಲಿ ಹೈಕೋರ್ಟ್ ಆದೇಶದ ನಂತರ ಪೈಝಾನ್ ಸಹೋದರ ಹೇಳಿದ್ದಾರೆ.
"ಇಂದು ವಿಚಾರಣೆಯ ದಿನ ಎಂದು ನಮಗೆ ತಿಳಿದಿರಲಿಲ್ಲ. ಡಿಸೆಂಬರ್ನಿಂದ ಪ್ರಕರಣದಲ್ಲಿ ಯಾವುದೇ ಬೆಳವಣಿಗೆ ಇರಲಿಲ್ಲ. ಪ್ರಕರಣದಲ್ಲಿ ಸಿಬಿಐ ತನಿಖೆಗೆ ಆದೇಶಿಸಲಾಗಿದೆ ಎಂದು ವಕೀಲರು ಕರೆ ಮಾಡಿ ತಿಳಿಸಿದ್ದಾರೆ. ಅಂತಿಮವಾಗಿ ನ್ಯಾಯ ಸಿಗುವ ಭರವಸೆ ನಮಗಿದೆ ಎಂದು ಪೈಝಾನ್ ಸಹೋದರ ನದೀಮ್ ಹೇಳಿದ್ದಾರೆ.
ಪೈಝಾನ್ ಸಾವಿನ ನಂತರ ತಾನು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದೇನೆ ಎಂದು ಹೇಳಿದ ಅವರ ತಾಯಿ ಕಿಸ್ಮಾತುನ್, ಆದೇಶದ ಬಗ್ಗೆ ತಿಳಿಸಿದಾಗ ಆಸ್ಪತ್ರೆಯಲ್ಲಿದ್ದರು. "ನಾವು ಗೆದ್ದಿದ್ದೇವೆ ಮತ್ತು ಹೊಸ ಸಂಸ್ಥೆ ತನಿಖೆ ನಡೆಸುತ್ತದೆ ಎಂದು ಅವರು ಹೇಳಿದರು. ನಾವು ಇಲ್ಲಿಯವರೆಗೆ ಬಂದಿದ್ದೇವೆ, ನಾವು ಮತ್ತೆ ಗೆಲ್ಲುತ್ತೇವೆ, ”ಎಂದು ಕಿಸ್ಮಾತುನ್ ಹೇಳಿದ್ದಾರೆ.
"ಅವನು ನನ್ನ ಅತ್ಯುತ್ತಮ ಮಗ ಮತ್ತು ಚಿಕ್ಕ ವಯಸ್ಸಿನಲ್ಲೇ ಕುಟುಂಬಕ್ಕಾಗಿ ಸಂಪಾದಿಸುತ್ತಿದ್ದ. ಅವನು ಮದುವೆಯಾಗಲು ಸಿದ್ದನಾಗಿದ್ದ. ನಾನು ಈಗಲೂ ಪ್ರತಿದಿನ ಅವನ ಬಗ್ಗೆ ಯೋಚಿಸುತ್ತೇನೆ" ಎಂದು ಪೈಝಾನ್ ತಾಯಿ ಕಿಸ್ಮಾತುನ್ ಹೇಳಿದ್ದಾರೆ.
“ಒಮ್ಮೆ, ನಮ್ಮ ವಕೀಲರಾದ ವೃಂದಾ ಗ್ರೋವರ್ ಸ್ಥಳದಲ್ಲಿದ್ದ ಇಬ್ಬರು ಅಧಿಕಾರಿಗಳನ್ನು ಗುರುತಿಸಲಾಗಿದೆ ಎಂದು ಹೇಳಿದ್ದರು. ಎರಡನೇ ಬಾರಿ, ಪೊಲೀಸರು ವಿಚಾರಣೆಯನ್ನು ಪ್ರಾರಂಭಿಸಿದ್ದಾರೆ ಎಂದು ಹೇಳಿದ್ದರು. ಅಪರಾಧಿಗಳಿಗೆ ಶಿಕ್ಷೆ ಆಗಬಹುದು ಎಂದು ನಾವು ಎರಡೂ ಬಾರಿ ಭಾವಿಸಿದ್ದೆವು. ಆದರೆ ಏನೂ ಆಗಲಿಲ್ಲ ಪೈಝಾನ್ ಸಹೋದರ ನದೀಮ್ ಹೇಳಿದ್ದಾರೆ.
ಪೈಝಾನ್ ತಾಯಿ ಕಿಸ್ಮಾತುನ್ ಪರ ಹಾಜರಾದ ವಕೀಲರಲ್ಲಿ ಒಬ್ಬರಾದ ಸೌತಿಕ್ ಬ್ಯಾನರ್ಜಿ, ಹೈಕೋರ್ಟ್ನ ಅವಲೋಕನಗಳು "ಗಮನಾರ್ಹ ಮತ್ತು ಗಾಢವಾದವು" ಎಂದು ಹೇಳಿದ್ದಾರೆ.
“ದೆಹಲಿ ಪೊಲೀಸ್ ಸಿಬ್ಬಂದಿ ಧಾರ್ಮಿಕ ಮತಾಂಧತೆಯಿಂದ ಪ್ರೇರೇಪಿಸಲ್ಪಟ್ಟ ದ್ವೇಷದ ಅಪರಾಧವನ್ನು ಮಾಡಿದ್ದಾರೆ ಎಂದು ಹೈಕೋರ್ಟ್ ಒಪ್ಪಿಕೊಂಡಿದೆ. ಇದು ಗಮನಾರ್ಹವಾದ ಅವಲೋಕನವಾಗಿದೆ, ”ಎಂದು ಅವರು ಹೇಳಿದರು.
ಸಿಎಎ, ಎನ್ನಾರ್ಸಿ ಕಾನೂನುಗಳ ವಿರುದ್ಧ ನಡೆಯುತ್ತಿದ್ದ ಪ್ರತಿಭಟನೆಗಳ ಬೆನ್ನಲ್ಲೇ ಅಮೇರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಿಲ್ಲಿಯಲ್ಲಿರುವಾಗಲೇ ಈಶಾನ್ಯ ದಿಲ್ಲಿಯಲ್ಲಿ ದೊಡ್ಡ ಹತ್ಯಾಕಾಂಡ ನಡೆದು 53 ಮಂದಿ ಬಲಿಯಾಗಿದ್ದರು.
ಬಿಜೆಪಿಯ ಹಲವು ಮುಖಂಡರು ನೇರವಾಗಿ ಜನರನ್ನು ಹಿಂಸೆಗೆ ಪ್ರಚೋದಿಸಿದ ಹಾಗು ಪೊಲೀಸರು ಅವರಿಗೆ ಸಂಪೂರ್ಣ ಬೆಂಬಲ ನೀಡಿ ಗಲಭೆಕೋರರಿಗೇ ನೆರವಾದ ಗಂಭೀರ ಆರೋಪ ಕೇಳಿ ಬಂದಿತ್ತು.
ಹತ್ಯಾಕಾಂಡದ ಬಳಿಕವೂ ದಿಲ್ಲಿ ಪೊಲೀಸರು ಗಲಭೆಕೋರರನ್ನು ರಕ್ಷಿಸಿ, ಅಮಾಯಕರನ್ನು ಬಲಿಪಶು ಮಾಡಿದ ಹಲವು ಪ್ರಕರಣಗಳ ಬಗ್ಗೆ ವರದಿಯಾಗಿತ್ತು. ಹಿಂಸಾಚಾರದಲ್ಲಿ ನೇರವಾಗಿ ಭಾಗಿಯಾದ ಹಲವು ಬಿಜೆಪಿ , ಸಂಘ ಪರಿವಾರ ಮುಖಂಡರು, ಕಾರ್ಯಕರ್ತರನ್ನು ಬಚಾವ್ ಮಾಡಿದ್ದ ದಿಲ್ಲಿ ಪೊಲೀಸರು ಹಲವಾರು ಅಮಾಯಕ ಯುವಕರನ್ನು ಹಾಗು ಹತ್ತಾರು ಸಾಮಾಜಿಕ ಕಾರ್ಯಕರ್ತರನ್ನು ಸುಳ್ಳು ಪ್ರಕರಣಗಳಡಿ ಬಂಧಿಸಿದ್ದರು.
ಉಮರ್ ಖಾಲಿದ್ ಸಹಿತ ಹಲವು ಸಾಮಾಜಿಕ ಕಾರ್ಯಕರ್ತರು ಇನ್ನೂ ಈ ಪ್ರಕರಣಗಳಲ್ಲಿ ಜೈಲಲ್ಲೇ ಇದ್ದಾರೆ.