ಒಂದೂವರೆ ವರ್ಷದ ಬಳಿಕ ಲಾಲು ಜಾಮೀನನ್ನು ಪ್ರಶ್ನಿಸುತ್ತಿರುವುದೇಕೆ ಸಿಬಿಐ?
ಮೇವು ಹಗರಣ ಪ್ರಕರಣಗಳಿಗೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್ ಲಾಲು ಪ್ರಸಾದ್ ಯಾದವ್ ಅವರಿಗೆ ಜಾಮೀನು ನೀಡಿದ ಸುಮಾರು ಒಂದೂವರೆ ವರ್ಷಗಳ ನಂತರ ಸಿಬಿಐ ಈಗೇಕೆ ಅವರ ಜಾಮೀನನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ ಎಂಬ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
ಲಾಲು ಅವರು ಜೈಲಿನಲ್ಲಿ ಅರ್ಧದಷ್ಟು ಶಿಕ್ಷೆಯನ್ನು ಪೂರ್ಣಗೊಳಿಸಿಲ್ಲ ಎಂಬ ವಿಚಾರ ಮುಂದಿಟ್ಟು, ಜಾಮೀನು ರದ್ದುಗೊಳಿಸುವಂತೆ ಸಿಬಿಐ ಕಳೆದ ವಾರ ಸುಪ್ರೀಂ ಕೋರ್ಟ್‌ಗೆ
ಮನವಿ ಮಾಡಿದೆ. ಈ ವಾರದ ಕೊನೆಯಲ್ಲಿ ಸುಪ್ರೀಂ ಕೋರ್ಟ್ ಈ ಪ್ರಕರಣದ ವಿಚಾರಣೆ ನಡೆಸಲಿದೆ.
ಐದು ಮೇವು ಹಗರಣಗಳಲ್ಲಿ ಲಾಲು ಅರ್ಧದಷ್ಟು ಶಿಕ್ಷೆಯನ್ನು ಕಳೆದಿದ್ದಾರೆ ಎಂಬ ಕಾರಣಕ್ಕಾಗಿ ಜಾರ್ಖಂಡ್ ಹೈಕೋರ್ಟ್ ೨೦೨೨ರ ಎಪ್ರಿಲ್‌ನಲ್ಲಿ ಅವರಿಗೆ ಜಾಮೀನು ನೀಡಿತ್ತು. ಸಿಆರ್‌ಪಿಸಿ ಸೆಕ್ಷನ್ ೪೩೬ ಎ ಅಡಿಯಲ್ಲಿ ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿದ್ದು, ಶಿಕ್ಷೆಯ ಅರ್ಧದಷ್ಟು ಅವಧಿ ಪೂರ್ಣಗೊಳಿಸಿದ್ದರೆ ಸಂಬಂಧಪಟ್ಟ ಆರೋಪಿಗಳಿಗೆ ಜಾಮೀನು ನೀಡಬೇಕೆಂಬ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಅನುಸರಿಸಿತ್ತು.
೨೦೧೩ರಿಂದ ೨೦೧೬ರವರೆಗಿನ ಹಗರಣದ ಐದು ಪ್ರಕರಣಗಳಲ್ಲಿ ಲಾಲು ಅವರಿಗೆ ಐದರಿಂದ ಏಳು ವರ್ಷಗಳವರೆಗೆ ಶಿಕ್ಷೆ ವಿಧಿಸಲಾಗಿದೆ.
ಈಗ, ಸಿಬಿಐನ ಈ ನಡೆ, ಅವರ ಬೆಂಬಲಿಗರು ಮತ್ತು ದೇಶಾದ್ಯಂತ ಕಾನೂನು ಮತ್ತು ರಾಜಕೀಯ ವಲಯಗಳಲ್ಲಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ. ‘‘ಅರ್ಧ ಅವಧಿಯನ್ನು ಪೂರ್ಣಗೊಳಿಸಿಲ್ಲ ಎಂಬ ವಾದದೊಂದಿಗೆ ಸಿಬಿಐ ವಿರೋಧ ವ್ಯಕ್ತಪಡಿಸಿದ ನಂತರ ಜಾರ್ಖಂಡ್ ಹೈಕೋರ್ಟ್ ಎರಡು ಬಾರಿ ಲಾಲುಗೆ ಜಾಮೀನನ್ನು ತಿರಸ್ಕರಿಸಿತ್ತು. ಶಿಕ್ಷೆಯ ಅರ್ಧದಷ್ಟು ಅವಧಿಗೂ ಮೀರಿ ಲಾಲು ಜೈಲಿನಲ್ಲಿದ್ದುದು ಸಂಪೂರ್ಣ ಖಚಿತವಾದ ನಂತರವೇ ಅವರಿಗೆ ಜಾಮೀನು ಮಂಜೂರು ಮಾಡಲಾಗಿದೆ’’ ಎಂದು ಪಾಟ್ನಾ ಹೈಕೋರ್ಟ್‌ನ
ಹಿರಿಯ ವಕೀಲ ದೇವಪ್ರಕಾಶ್ ಹೇಳಿದ್ದಾರೆ. ಸಿಬಿಐ ಈಗ ಮೇಲಿನವರ ಸೂಚನೆ ಮೇರೆಗೆ ಈ ಹೆಜ್ಜೆ ತೆಗೆದುಕೊಂಡಿರಬೇಕು ಎಂಬುದು ದೇವಪ್ರಕಾಶ್ ಹೇಳಿಕೆ.
ಜಾರ್ಖಂಡ್ ಮತ್ತು ಪಾಟ್ನಾ ಹೈಕೋರ್ಟ್‌ಗಳ ಹಲವಾರು ವಕೀಲರು ಹೇಳುತ್ತಿರುವ ಪ್ರಕಾರ, ಜಾಮೀನು ರದ್ದುಗೊಳಿಸುವುದು ಅಪರೂಪದ ಕ್ರಮ. ಜಾಮೀನಿನ ಷರತ್ತುಗಳನ್ನು ಉಲ್ಲಂಘಿಸಿದ ಆರೋಪಿಯ ಜಾಮೀನನ್ನು ರದ್ದುಗೊಳಿಸುವ ಅಧಿಕಾರ ಸುಪ್ರೀಂ ಕೋರ್ಟ್‌ಗೆ ಇದೆ. ಆದರೆ ಸಿಬಿಐ ಮನವಿ ಸುಪ್ರೀಂ ಕೋರ್ಟ್‌ನಲ್ಲಿ ನಿಲ್ಲಲಾರದು ಎಂಬುದು ವಕೀಲರೊಬ್ಬರ ಅಭಿಪ್ರಾಯ.
ಸಿಬಿಐ ಕ್ರಮಕ್ಕೆ ಪ್ರತಿಕ್ರಿಯಿಸಿದ ಲಾಲು ಅವರ ಪುತ್ರ ಮತ್ತು ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್, ‘‘ನಾವು ಇದಕ್ಕೆ ಹೆದರುವುದಿಲ್ಲ. ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ’’ ಎಂದು ಹೇಳಿದ್ದಾರೆ. ಲಾಲು ವಿರುದ್ಧ ಸಿಬಿಐ ಸುಪ್ರಿಂಕೋರ್ಟ್ ಅರ್ಜಿ ಸಲ್ಲಿಸಿದ ನಂತರ ಅವರ ನಿವಾಸಕ್ಕೆ ತೆರಳಿದ ಬಿಹಾರ ಮುಖ್ಯಮಂತ್ರಿ ಮತ್ತು ಜೆಡಿಯು ನಾಯಕ ನಿತೀಶ್ ಕುಮಾರ್ ಅವರು, ಲಾಲು ಅವರಿಗೆ ತಮ್ಮ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ.
ಸೈದ್ಧಾಂತಿಕ ನಿರೂಪಣೆ:
ಇಷ್ಟು ಕಾಲದ ಬಳಿಕ ಲಾಲು ವಿರುದ್ಧ ಸಿಬಿಐ
ಏಕೆ ಎಚ್ಚರಗೊಂಡಿತು?
‘ಇಂಡಿಯಾ’ ಮೈತ್ರಿಕೂಟ ಬಲಗೊಳ್ಳುತ್ತಿದ್ದು, ಅದು ತನ್ನ ನೆಲೆಯನ್ನು ಗಟ್ಟಿ ಮಾಡಿಕೊಳ್ಳುತ್ತಿರುವುದು ಬಿಜೆಪಿಯಲ್ಲಿ ಸಹಜವಾಗಿಯೇ ಆತಂಕ ಮೂಡಿಸಿದೆ. ಬಿಹಾರ ಮತ್ತು ಮಹಾರಾಷ್ಟ್ರದಂತಹ, ಬಿಜೆಪಿ ವಿರೋಧಿ ಶಕ್ತಿಗಳು ಬಿಜೆಪಿಯ ಚುನಾವಣಾ ನಿರೀಕ್ಷೆಗಳ ಮೇಲೆ ನೇರವಾದ ಪರಿಣಾಮ ಬೀರುವ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ತಲ್ಲಣಗೊಂಡಿರುವುದು ತೋರುತ್ತಿದೆ. ಲಾಲು ವಿರುದ್ಧದ ಈಗಿನ ಸಿಬಿಐ ಕ್ರಮ, ‘ಇಂಡಿಯಾ’ ಮೈತ್ರಿಯನ್ನು ಅಸ್ಥಿರಗೊಳಿಸುವ ಬಿಜೆಪಿಯ ತಂತ್ರದ ಒಂದು ಭಾಗವಾಗಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.
ಪ್ರತಿಪಕ್ಷ ಮೈತ್ರಿಕೂಟದ ಪ್ರಮುಖ ನಾಯಕ ನಿತೀಶ್ ಕುಮಾರ್, ನರೇಂದ್ರ ಮೋದಿ ವಿರುದ್ಧ ಸೈದ್ಧಾಂತಿಕ ನಿರೂಪಣೆಯನ್ನು ರೂಪಿಸುವುದರ ಕಡೆಗೆ ಗಮನ ಹರಿಸಿದ್ದಾರೆ. ಪ್ರಧಾನಿ ತಮ್ಮ ಸ್ವಾತಂತ್ರ್ಯ ದಿನದ ಭಾಷಣದಲ್ಲಿ ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳ ವಿರುದ್ಧ ದಾಳಿಗೆ ಹೆಚ್ಚಿನ ಸಮಯ ಮತ್ತು ಶಕ್ತಿಯನ್ನು ವ್ಯಯಿಸಿದ ಒಂದು ದಿನದ ನಂತರ, ನಿತೀಶ್ ಕುಮಾರ್ ಅವರು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ದಿಲ್ಲಿಗೆ ಬಂದಿಳಿದರು.
‘‘ನಾನು ವಾಜಪೇಯಿ ಅವರನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಅವರು ನನ್ನನ್ನು ತಮ್ಮ ಸಂಪುಟದ ಸದಸ್ಯನನ್ನಾಗಿ ಮಾಡಿದರು ಮತ್ತು ೨೦೦೫ರಲ್ಲಿ ನನ್ನನ್ನು ಬಿಹಾರ ಮುಖ್ಯಮಂತ್ರಿಯನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅವರು ನಮ್ಮನ್ನು ಅಪಾರವಾಗಿ ಪ್ರೀತಿಸುತ್ತಿದ್ದರು. ಅವರ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ’’ ಎಂದು ವಾಜಪೇಯಿ ಅವರಿಗೆ ನಮನ ಸಲ್ಲಿಸಿದ ನಂತರ ನಿತೀಶ್ ಹೇಳಿದರು. ಎಲ್ಲಕ್ಕಿಂತ ಮುಖ್ಯವಾಗಿ, ಎನ್‌ಡಿಎ ವಿಚಾರದಲ್ಲಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಲು ಅವರು ಈ ಸಂದರ್ಭವನ್ನು ಬಳಸಿಕೊಂಡರು.
‘‘೧೯೯೯ರಲ್ಲಿ ವಾಜಪೇಯಿ ಅವರ ಉಸ್ತುವಾರಿಯಲ್ಲಿ ಎನ್‌ಡಿಎ ರಚನೆಯಾಯಿತು. ನಾವೆಲ್ಲರೂ ಅದರ ಭಾಗವಾಗಿದ್ದೆವು. ವಾಜಪೇಯಿ ಅವರು ಸಕ್ರಿಯವಾಗಿರುವವರೆಗೂ ಎನ್‌ಡಿಎ ಸಭೆ ಕರೆಯುತ್ತಿದ್ದರು. ನರೇಂದ್ರ ಮೋದಿಗೂ ಎನ್‌ಡಿಎಗೂ ಏನು ಸಂಬಂಧ? ಅವರು ೨೦೧೪ರಲ್ಲಿ ಪ್ರಧಾನಿಯಾದ ನಂತರ ಎನ್‌ಡಿಎ ಸಭೆಯನ್ನು ಎಂದಿಗೂ ಕರೆಯಲಿಲ್ಲ. ಈಗ ಅವರು ನಾವು ‘ಇಂಡಿಯಾ’ ರಚಿಸಿದ ನಂತರ ಕರೆಯುತ್ತಿದ್ದಾರೆ’’ ಎಂದು ನಿತೀಶ್ ಹೇಳಿದರು.
ನಿತೀಶ್ ಹೇಳಿಕೆಗೆ ಪ್ರತಿಕ್ರಿಯಿಸಿದ ಬಿಜೆಪಿಯ ಹಿರಿಯ ನಾಯಕ ಮತ್ತು ರಾಜ್ಯಸಭಾ ಸದಸ್ಯ ಸುಶೀಲ್ ಕುಮಾರ್ ಮೋದಿ, ‘‘ಅಟಲ್ ಮತ್ತು ಅಡ್ವಾಣಿಯವರನ್ನು ಹೊಗಳುವ ಮೂಲಕ ನರೇಂದ್ರ ಮೋದಿಯವರ ಮೇಲೆ ದಾಳಿ ಮಾಡುವ ನಿತೀಶ್, ಬಿಜೆಪಿಯಲ್ಲಿ ಒಡಕು ಸೃಷ್ಟಿಸಲು ಯತ್ನಿಸುತ್ತಿದ್ದಾರೆ’’ ಎಂದು ಆರೋಪಿಸಿದರು.
ನಿತೀಶ್ ಅವರನ್ನು ಅರ್ಥಮಾಡಿಕೊಳ್ಳಬಲ್ಲಂಥ ಅನುಭವವುಳ್ಳ ಹಿರಿಯ ನಾಯಕ ಸುಶೀಲ್ ಮೋದಿಯವರ ಅಭಿಪ್ರಾಯ ಸಾಕಷ್ಟು ಸರಿಯಾಗಿಯೇ ಇದೆ. ಬಿಜೆಪಿ ಕಾರ್ಯಕರ್ತರಲ್ಲಿ ಅಲ್ಪಸಂಖ್ಯಾತರ ವಿರುದ್ಧ ಅತಿಯಾದ ಕಟು ಧೋರಣೆ ಮತ್ತು ದ್ವೇಷಪೂರಿತ ರಾಜಕಾರಣದ ಕಾರಣಕ್ಕೆ ಮೋದಿಯನ್ನು ವಿರೋಧಿಸಿದ್ದ ವಾಜಪೇಯಿ ಮತ್ತು ಎಲ್. ಕೆ. ಅಡ್ವಾಣಿ ಅವರನ್ನು ಅನುಸರಿಸುವ ದೊಡ್ಡ ಸಂಖ್ಯೆಯ ನಾಯಕರು ಬಿಜೆಪಿಯಲ್ಲಿದ್ದಾರೆ ಎಂಬುದು ನಿತೀಶ್ ಅವರಿಗೆ ತಿಳಿದಿರಬಹುದು. ವಾಜಪೇಯಿ ಪುಣ್ಯತಿಥಿಯಂದು ಅವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಮೂಲಕ ನಿತೀಶ್ ಕೇಸರಿ ಪಕ್ಷದ ಉದಾರವಾದಿ ವರ್ಗವನ್ನು ಉದ್ದೇಶಿಸಿ ಮಾತನಾಡಿರುವುದು, ಅವರು ಬಿಜೆಪಿಯ ಸಂಪೂರ್ಣ ವಿರೋಧಿಯಲ್ಲ, ಆದರೆ ಮೋದಿಯವರ ನಿರಂಕುಶ ರಾಜಕೀಯವನ್ನು ವಿರೋಧಿಸುತ್ತಿದ್ದಾರೆ ಎಂಬುದನ್ನು ಹೇಳುವಂತಿತ್ತು.
ಸೈದ್ಧಾಂತಿಕ ವಿಷಯಗಳಲ್ಲಿ ‘ಇಂಡಿಯಾ’ ಮೈತ್ರಿಕೂಟದ ನಾಯಕರನ್ನು, ಅದರಲ್ಲಿಯೂ ವಿಶೇಷವಾಗಿ ನಿತೀಶ್ ಮತ್ತು ಹಿಂದಿ ಮಾತನಾಡುವ ಪ್ರದೇಶಗಳ ನಾಯಕರನ್ನು ನಿಖರವಾಗಿ ಎದುರಿಸುವುದು ಹೇಗೆ ಎಂಬುದು ಮೋದಿಗೆ ಬಗೆಹರಿಯದ ಪ್ರಶ್ನೆಯಾದಂತಿದೆ. ಹೀಗೆ ತಾತ್ವಿಕವಾಗಿ ಎದುರಿಸುವ ತಾಕತ್ತು ಇಲ್ಲದಿರುವಾಗಲೇ ಮೋದಿ ಮತ್ತು ಶಾ ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ವಿರುದ್ಧ ಕೇಂದ್ರ ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವುದು ಎಂದು ‘ಇಂಡಿಯಾ’ ಮೈತ್ರಿಕೂಟದ ಪಕ್ಷಗಳು ಪದೇ ಪದೇ ಆರೋಪಿಸುತ್ತಿವೆ.
ಕೇಂದ್ರ ಸರಕಾರ ತನ್ನ ರಾಜಕೀಯ ವಿರೋಧಿಗಳ ವಿರುದ್ಧ ಸಿಬಿಐ ಮತ್ತು ಜಾರಿ ನಿರ್ದೇಶನಾಲಯವನ್ನು ನಿರ್ಲಜ್ಜವಾಗಿ ಬಳಸುತ್ತಿದೆ ಎಂದು ಪ್ರತಿಪಕ್ಷಗಳು ನಿರಂತರವಾಗಿ ಆರೋಪಿಸುವುದರಲ್ಲಿ ಅವಾಸ್ತವವೇನೂ ಇಲ್ಲ. ಈ.ಡಿ. ನಿರ್ದೇಶಕ ಸಂಜಯ್ ಕುಮಾರ್ ಮಿಶ್ರಾ ಅವರ ಸೇವೆಯನ್ನು ಸುಪ್ರೀಂ ಕೋರ್ಟ್ ಸೆಪ್ಟಂಬರ್ ೧೫ರವರೆಗೆ ವಿಸ್ತರಿಸಿದ ನಾಲ್ಕೇ ದಿನಗಳಲ್ಲಿ, ಲಾಲು ಮತ್ತವರ ಕುಟುಂಬ ಸದಸ್ಯರ ಆರು ಕೋಟಿ ರೂ. ಮೌಲ್ಯದ ಆಸ್ತಿಯನ್ನು ಈ.ಡಿ. ಜಪ್ತಿ ಮಾಡಿದೆ.
೨೦೨೨ರ ಆಗಸ್ಟ್‌ನಲ್ಲಿ ನಿತೀಶ್ ಬಿಜೆಪಿ ಬಿಟ್ಟು ಬಿಹಾರದಲ್ಲಿ ಆರ್‌ಜೆಡಿ, ಕಾಂಗ್ರೆಸ್ ಮತ್ತು ಎಡಪಕ್ಷಗಳೊಂದಿಗೆ ಮಹಾಘಟಬಂಧನ್‌ಗೆ ಸೇರಿದ ನಂತರ ಸಿಬಿಐ ಮತ್ತು ಈ.ಡಿ. ಲಾಲು ಮತ್ತವರ ಕುಟುಂಬದ ವಿರುದ್ಧ ನಿರ್ದಯವಾಗಿ ನಿಂತಿರುವುದು ಕಾಣಿಸುತ್ತಲೇ ಇದೆ. ರೈಲ್ವೆ ಸಂಬಂಧಿತ ಎರಡು ಪ್ರಕರಣಗಳನ್ನು ತನಿಖೆಗೆ ತೆಗೆದುಕೊಂಡಿರುವ ಸಿಬಿಐ ಮತ್ತು ಈ.ಡಿ. ಲಾಲು ಅವರ ಆಸ್ತಿಯ ಮೇಲೆ ದಾಳಿ ಮಾಡಿ, ತೇಜಸ್ವಿ ಮತ್ತು ಅವರ ಕುಟುಂಬ ಸದಸ್ಯರನ್ನು ಪ್ರಶ್ನಿಸಿ ಅನೇಕ ಪ್ರಕರಣಗಳಲ್ಲಿ ಬಂಧಿಸಿವೆ. ಲಾಲು ಮತ್ತು ಕುಟುಂಬದ ವಿರುದ್ಧ ರೈಲ್ವೆಗೆ ಸಂಬಂಧಿಸಿದ ಪ್ರಕರಣಗಳನ್ನು ಮುಂದುವರಿಸಿಯೇ ಇದ್ದ ಸಿಬಿಐ ಮತ್ತು ಈ.ಡಿ. ಏಪ್ರಿಲ್ ೨೦೨೨ರಲ್ಲಿ ಲಾಲು ಅವರಿಗೆ ಜಾಮೀನು ದೊರೆತ ನಂತರ ಸುಮ್ಮನಾಗಿದ್ದವು. ಆದರೆ ಈಗ ಸಾರ್ವತ್ರಿಕ ಚುನಾವಣೆಗೆ ಕೆಲವೇ ತಿಂಗಳುಗಳಿರುವಾಗ ಲಾಲು ಜಾಮೀನನ್ನು ಪ್ರಶ್ನಿಸಲು ಸಿಬಿಐ ಇದ್ದಕ್ಕಿದ್ದಂತೆ ಕಾರಣಗಳನ್ನು ಕಂಡುಕೊಂಡಿದೆ. ‘ಇಂಡಿಯಾ’ ಮೈತ್ರಿಕೂಟದ ನಾಯಕರಿಗೆ ಇದೇನೂ ಅಚ್ಚರಿಯ ಅಥವಾ ಅನಿರೀಕ್ಷಿತ ವಿಚಾರವಲ್ಲ.
(ಕೃಪೆ: thewire.in)