ಸಂಸತ್ತಿನಲ್ಲಿ ವಿಪಕ್ಷವೇ ಇಲ್ಲದಂತೆ ಮಾಡುತ್ತಿರುವ ಬಗ್ಗೆ ಕಳವಳ ಏಕಿಲ್ಲ ?
ರಾಜ್ಯಪಾಲರಾಗಿ ಸಾಂವಿಧಾನಿಕ ಹುದ್ದೆಗೆ ಇವರು ಎಷ್ಟು ಗೌರವ ಕೊಟ್ಟಿದ್ದರು ? ► ಹಿಂದೂ ಎಲ್ಲರೂ ಒಂದು ಎಂದವರು ಜಾತಿ ವಿಷಯ ಏಕೆ ಎತ್ತುತ್ತಿದ್ದಾರೆ ?
ಈಗಿನ ಸಂದರ್ಭದಲ್ಲಿ ಬಿಜೆಪಿಯವರು ಪ್ರಜಾಪ್ರಭುತ್ವ, ಸಾಮಾಜಿಕ ನ್ಯಾಯದ ಬಗ್ಗೆಲ್ಲ ಮಾತಾಡಿದರೆ ಎಷ್ಟು ಹಾಸ್ಯಾಸ್ಪದವಾಗಿರುತ್ತದೆಯೊ ಹಾಗೆಯೆ ಕೆಲವರು ಸಾಂವಿಧಾನಿಕ ಹುದ್ದೆಗೆ ಅವಮಾನ ಎಂದೆಲ್ಲ ಮಾತಾಡಿದರೂ ಅಷ್ಟೇ ಗಂಭೀರ ಪ್ರಶ್ನೆಗಳು ಏಳುತ್ತವೆ. ಈ ಹಿಂದೆ ರಾಜ್ಯಪಾಲರೂ ಆಗಿದ್ದ, ಆಗೆಲ್ಲ ರಾಜ್ಯ ಸರ್ಕಾರದೊಂದಿಗೆ ಸಂಘರ್ಷ ಮಾಡಿಕೊಂಡಿದ್ದಕ್ಕೇ ಸುದ್ದಿಯಲ್ಲಿದ್ದ , ಈಗ ಉಪರಾಷ್ಟ್ರಪತಿಯಾಗಿರುವ ಜಗದೀಪ್ ಧನ್ಕರ್ ವಿಚಾರದಲ್ಲಿ ಕೂಡ ಇಂಥದೇ ಪ್ರಶ್ನೆಗಳು ಮೂಡುತ್ತವೆ.
ವಿಷಯವೇನೆಂದರೆ, ಸಂಸತ್ತಿನ ಭಾರೀ ಭದ್ರತಾ ವೈಫಲ್ಯದ ಬಗ್ಗೆ ಪ್ರಶ್ನಿಸಿದ್ದಕ್ಕೆ ಲೋಕಸಭೆಯಲ್ಲಿ ಇನ್ನಷ್ಟು ಸಂಸದರನ್ನು ಅಮಾನತು ಮಾಡಿದ ದಿನವೇ ರಾಜ್ಯಸಭೆಯಲ್ಲಿ ಇನ್ನೊಂದು ಪ್ರಹಸನವಾಗಿದೆ. ತಮ್ಮ ಹಾವಭಾವದ ಮಿಮಿಕ್ರಿ ಮಾಡಲಾಗಿದೆ ಎಂಬುದನ್ನು ಮುಂದಿಟ್ಟುಕೊಂಡು ಧನ್ಕರ್ ರಾಜ್ಯಸಭಾ ಪೀಠಕ್ಕೆ ಅವಮಾನವಾಗಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸದರ ಸ್ಥಾನ ಬಹಳ ಮಹತ್ವದ್ದು. ಸಂಸತ್ತಿನ ಸಭಾಪತಿಯ ಸ್ಥಾನಕ್ಕೆ ಭಾರೀ ಘನತೆಯಿದೆ, ಗೌರವವಿದೆ. ಹಾಗಾಗಿ ಸಂಸದರು ಬಹಳ ಎಚ್ಚರಿಕೆಯಿಂದ ವರ್ತಿಸಬೇಕು. ಎಂದೂ ತಮ್ಮ ಸ್ಥಾನಕ್ಕೆ, ತಮ್ಮ ಸದನದ ಸಭಾಪತಿಯ ಸ್ಥಾನಕ್ಕೆ ಕುಂದುಂಟಾಗುವಂತೆ ಅವರ ವರ್ತನೆಯಿರಬಾರದು.
ಇಡೀ ದೇಶ ಅವರನ್ನು ನೋಡುತ್ತಿದೆ ಎಂಬುದು ಅವರಿಗೆ ಗೊತ್ತಿರಬೇಕು. ಹಾಗಾಗಿ ಧನ್ಕರ್ ರನ್ನು ಸಂಸತ್ತಿನ ಹೊರಗೆ ನಿಂತು ಮಿಮಿಕ್ರಿ ಮಾಡಿದ ತೃಣಮೂಲ ಸಂಸದರ ನಡೆ ಸರಿಯಲ್ಲ. ಅಂತಹದ್ದನ್ನು ಪ್ರೋತ್ಸಾಹಿಸಬಾರದು. ಆದರೆ ಇಲ್ಲಿ ದೊಡ್ಡ ವಿಪರ್ಯಾಸ ಅಂದ್ರೆ, ಸಭಾಪತಿಯ ಮಿಮಿಕ್ರಿ ಮಾಡಿದ್ದು ಭಾರೀ ದೊಡ್ಡ ಚರ್ಚೆಯಾಗುತ್ತಿದೆ, ವಿವಾದವಾಗುತ್ತಿದೆ. ಆದರೆ ಪ್ರಜಾಪ್ರಭುತ್ವದ, ಸಂಸದೀಯ ವ್ಯವಸ್ಥೆಯ ಮೋಕರಿ ಅಂದ್ರೆ ಅಣಕ ನಡೆಯುತ್ತಿರುವ ಬಗ್ಗೆ ಯಾಕೆ ಯಾರಿಗೂ ಅದೊಂದು ತೀವ್ರ ಕಳವಳಕಾರಿ ವಿಚಾರ ಅಂತನ್ನಿಸುತ್ತಿಲ್ಲ?.
ಸರಕಾರವೇ ಅಂಥದೊಂದು ಮೋಕರಿಯಲ್ಲಿ ತೊಡಗಿರುವ ಬಗ್ಗೆ, ಪೀಠದಲ್ಲಿರುವವರು ಅದೇ ರೀತಿ ನಡೆದುಕೊಳ್ಳುತ್ತಿರುವ ಬಗ್ಗೆ ಚರ್ಚೆ ಆಗಬೇಡವೇ ?. ಸಂಸತ್ತಿನಲ್ಲಿ ವಿಪಕ್ಷವೇ ಇಲ್ಲದಂತೆ ಮಾಡುತ್ತಿರುವ ಬಗ್ಗೆಯೂ ಪೀಠದಲ್ಲಿರುವವರು ಸ್ವಲ್ಪ ಚಿಂತಿಸಬೇಡವೇ?.
ಸದನವೇ ಖಾಲಿಯಾಗುತ್ತಿರುವ ಬಗ್ಗೆ ಸದನದ ಯಜಮಾನರು ಯೋಚಿಸದೆ, ಮಿಮಿಕ್ರಿ ಮಾಡಿದ್ದನ್ನೇ ದೇಶದ ಪಾಲಿನ ದೊಡ್ಡ ಅಪಾಯದಂತೆ ಪರಿಗಣಿಸುತ್ತಿರುವುದು, ಸಂಸತ್ತಿನ ಪೀಠದಲ್ಲಿ ಕೂತು ತನ್ನ ಜಾತಿಯ ಮಾತಾಡುತ್ತಿರುವುದು ದೊಡ್ಡ ವ್ಯಂಗ್ಯವಲ್ಲವೆ?. ಸಭಾಪತಿಗಳಿಗೆ ಭಾರೀ ಅವಮಾನವಾಗಿದೆ ಎಂದು ಗೋಳಾಡುತ್ತಿರುವ ಟಿವಿ ಚಾನಲ್ ಗಳೂ ಸಂಸದೀಯ ವ್ಯವಸ್ಥೆಯೇ ಇಲ್ಲಿ ಪ್ರಹಸನದಂತಾಗಿರುವ ಬಗ್ಗೆ ಚಕಾರ ಎತ್ತುತ್ತಿಲ್ಲ. ಆ ಬಗ್ಗೆ ಚರ್ಚೆಯೇ ಇಲ್ಲ.
ಬೇರೆಲ್ಲ ವಿಷಯಗಳಲ್ಲಿ ಹಿಂದೂಗಳು, ಹಿಂದೂಗಳಿಗೆ ಅನ್ಯಾಯ, ಹಿಂದೂಗಳು ಎಲ್ಲರೂ ಒಂದು ಎಂದು ವಾದಿಸುವ ಬಿಜೆಪಿ, ಸಂಘ ಪರಿವಾರ ಹಾಗು ಅದರ ಬೆಂಬಲಿಗ ಚಾನಲ್ ಗಳಿಗೆ ಈಗ ಸಭಾಪತಿಗಳು ಜಾಟ್ ಜಾತಿಯ ವಿಷಯ ಎತ್ತಿರುವ ಬಗ್ಗೆ ಯಾವುದೇ ಆಕ್ಷೇಪ ಇದ್ದಂತಿಲ್ಲ. ಇವರೇ ಈ ಹಿಂದೆ ಗವರ್ನರ್ ಆಗಿದ್ದಾಗ ಸಾಂವಿಧಾನಿಕ ಹುದ್ದೆಗೆ, ಸಿಎಂ ಹುದ್ದೆಗೆ, ಸಾಂವಿಧಾನಿಕ ನಡಾವಳಿಗೆ ಅದೆಷ್ಟು ಗೌರವ ಕೊಟ್ಟಿದ್ದರು ಎಂಬುದು ಎಲ್ಲೆಡೆ ಸುದ್ದಿಯಾಗುತ್ತಲೇ ಇತ್ತು.
ಆಗ ಚುನಾಯಿತ ರಾಜ್ಯ ಸರ್ಕಾರವನ್ನು ಇವರೆಷ್ಟು ಗೌರವಿಸಿದ್ದರು ಎಂದು ಆಗಾಗ ಚರ್ಚೆಯಾಗುತ್ತಲೇ ಇತ್ತು. ಆಗ ಕಾಡದ ಸಾಂವಿಧಾನಿಕ ಹುದ್ದೆಯ ಗೌರವದ ಪ್ರಶ್ನೆ ಈಗ ಅವರನ್ನು ತೀವ್ರವಾಗಿ ಕಾಡುತ್ತಿರುವುದು ಖಂಡಿತ ಅಭಿನಂದನೀಯ. ಅಷ್ಟಕ್ಕೂ ಜಗದೀಪ್ ಧನ್ಕರ್ ಇಷ್ಟೆಲ್ಲ ಮಾತಾಡುತ್ತಿರುವುದು ತಮ್ಮ ಹಾವಭಾವವನ್ನು ಸಂಸದರೊಬ್ಬರು ಮಿಮಿಕ್ರಿ ಮಾಡಿದರು ಮತ್ತದನ್ನು ರಾಹುಲ್ ಗಾಂಧಿ ವೀಡಿಯೊ ಮಾಡಿದರು ಎಂಬ ಕಾರಣಕ್ಕೆ.
ಆದದ್ದೇನೆಂದರೆ, ಅದು, ಸಂಸದರ ಅಮಾನತನ್ನು ಖಂಡಿಸಿ ವಿಪಕ್ಷ ಸಂಸದರು ಸದನದ ಮೆಟ್ಟಿಲುಗಳ ಬಳಿ ಕುಳಿತು ಪ್ರತಿಭಟನೆ ನಡೆಸುತ್ತಿದ್ದ ಸಂದರ್ಭ. ಆಗ ಟಿಎಂಸಿ ಸಂಸದ ಕಲ್ಯಾಣ್ ಬ್ಯಾನರ್ಜಿ ಅವರು ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧನ್ಕರ್ ಅವರ ಹಾವಭಾವವನ್ನು ಮಿಮಿಕ್ರಿ ಮಾಡಿದ್ದರು.
ಈ ವೇಳೆ ಎದುರಿಗಿದ್ದ ರಾಹುಲ್ ಗಾಂಧಿ ನಕ್ಕಿದ್ದಲ್ಲದೆ, ಅದನ್ನು ವಿಡಿಯೋ ರೆಕಾರ್ಡ್ ಕೂಡ ಮಾಡಿದ್ದಾರೆ. ಇದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಧನ್ಕರ್, ಇದು ತನಗಷ್ಟೇ ಅಲ್ಲ, ಸಂವಿಧಾನದ ಪದವಿಗೆ, ರೈತರಿಗೆ, ಜಾಟರಿಗೆ ಮಾಡಿದ ಅವಮಾನ ಎಂದು ಹೇಳಿದ್ದಾರೆ.
ರಾಜ್ಯಸಭೆಯಲ್ಲಿದ್ದ ಕಾಂಗ್ರೆಸ್ ಸಂಸದ ಪಿ ಚಿದಂಬರಂ ಅವರನ್ನು ಉದ್ದೇಶಿಸಿ ಅವರು ಇದನ್ನೆಲ್ಲ ಹೇಳಿಕೊಂಡಿದ್ದಾರೆ. ಈ ಮೂಲಕ ನನ್ನ ರೈತನ ಹಿನ್ನೆಲೆಯನ್ನು ಅವಮಾನಿಸಲಾಗಿದೆ. ಜಾಟ್ ಸಮುದಾಯವನ್ನು ಅವಮಾನಿಸಲಾಗಿದೆ. ರಾಜ್ಯಸಭಾ ಅಧ್ಯಕ್ಷ ಸ್ಥಾನವನ್ನು ಅವಮಾನಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ, ತಾನು ಈ ಹಿಂದೆ ಗವರ್ನರ್ ಆಗಿದ್ದಾಗ ಒಂದು ಚುನಾಯಿತ ರಾಜ್ಯ ಸರ್ಕಾರದ ಜೊತೆ ಧನ್ಕರ್ ಹೇಗೆ ನಡೆದುಕೊಂಡಿದ್ದರು ಎಂಬುದನ್ನು ಅವರೊಮ್ಮೆ ನೆನಪಿಸಿಕೊಳ್ಳಬೇಕು. "ನಾನು ಜನರಿಂದ ಚುನಾಯಿತ ಮುಖ್ಯಮಂತ್ರಿ ಅನ್ನೋದನ್ನು ಮರೀಬೇಡಿ" ಎಂದು ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಹೇಳಬೇಕಾಗಿ ಬಂದಿದ್ದು ಯಾಕೆ ಅನ್ನುವುದು ಧನ್ಕರ್ ಅವರಿಗೆ ನೆನಪಿಲ್ಲವೆ?
ಇದೇ ಜಗದೀಪ್ ಧನ್ಕರ್ ಪಶ್ಚಿಮ ಬಂಗಾಳದ ರಾಜ್ಯಪಾಲರಾಗಿದ್ದ ಹೊತ್ತಲ್ಲಿ ಮಮತಾ ಬ್ಯಾನರ್ಜಿ ಸರ್ಕಾರದ ಜತೆಗಿನ ಬಹಿರಂಗ ಗುದ್ದಾಟದ ಕಾರಣ ಮೂರು ವರ್ಷ ಕಾಲ ದೇಶಾದ್ಯಂತ ಸದಾ ಸುದ್ದಿಯಲ್ಲಿದ್ದವರು. ಬಂಗಾಳ ಸರ್ಕಾರ ಕೋಮುವಾದ ಬೆಳೆಸುತ್ತಿದೆ, ಧರ್ಮಗಳ ಓಲೈಕೆಯಲ್ಲಿ ತೊಡಗಿದೆ ಎಂದು ಧನ್ಕರ್ ಒಬ್ಬ ರಾಜಕಾರಣಿಯ ಹಾಗೆ ಆರೋಪಿಸುತ್ತಿದ್ದರು.
ತಾನೊಂದು ಸಾಂವಿಧಾನಿಕ ಹುದ್ದೆಯಲ್ಲಿ ಕುಳಿತಿದ್ದೇನೆ ಎನ್ನುವುದನ್ನೇ ಮರೆತಿದ್ದರು ಎಂದು ಟಿಎಂಸಿ ಹಾಗು ಇತರ ವಿಪಕ್ಷಗಳು ಆರೋಪಿಸಿದ್ದವು. 'ಬಿಜೆಪಿ ಏಜೆಂಟ್' ಎಂದು ಆರೋಪಕ್ಕೆ ಒಳಗಾಗುವಷ್ಟರ ಮಟ್ಟಿಗೆ ಧನ್ಕರ್ ನಡವಳಿಕೆ ಬಗ್ಗೆ ಆಕ್ರೋಶ ವ್ಯಕ್ತವಾಗಿತ್ತು. ಆಗ ಪಶ್ಚಿಮ ಬಂಗಾಳ ಸರ್ಕಾರ ಮತ್ತು ರಾಜ್ಯಪಾಲ ಧನ್ಕರ್ ನಡುವಿನ ಸಂಘರ್ಷ ತಾರಕಕ್ಕೇರಿತ್ತು.
ಮಮತಾ ಬ್ಯಾನರ್ಜಿ ಮತ್ತು ಧನ್ಕರ್ ನಡುವೆ ಬರೀ ಕಚ್ಚಾಟದ ಸುದೀರ್ಘ ಪತ್ರಗಳ ವಿನಿಮಯವಾಗತೊಡಗಿತ್ತು. ರಾಜ್ಯಪಾಲರು ತಮ್ಮ ಅಧಿಕಾರ ವ್ಯಾಪ್ತಿ ಮೀರುತ್ತಿರುವುದಾಗಿ ಟಿಎಂಸಿ ಮತ್ತೆ ಮತ್ತೆ ಆರೋಪಿಸುತ್ತಿದ್ದರೆ, ಧನ್ಕರ್ ತಾನು ಸಾಂವಿಧಾನಿಕ ಕರ್ತವ್ಯ ಮಾಡುತ್ತಿದ್ದೇನೆ ಎಂದು ಮಾರುತ್ತರ ಕೊಡುತ್ತಿದ್ದುದು ಮಾಮೂಲಾಗಿತ್ತು.
2020ರ ಏಪ್ರಿಲ್ನಲ್ಲಿ, ಕೋವಿಡ್ ನಿರ್ವಹಣೆ ವಿಚಾರವಾಗಿ ಮಮತಾ ಸರ್ಕಾರ ಮತ್ತು ಮೋದಿ ನೇತೃತ್ವದ ಕೇಂದ್ರ ಸರ್ಕಾರದ ನಡುವೆ ಸಂಘರ್ಷ ಶುರುವಾದಾಗ, ಧನ್ಕರ್ ಅವರು ಮಮತಾ ಮತ್ತು ಪಶ್ಚಿಮ ಬಂಗಾಳ ಸರ್ಕಾರದ ಬಗ್ಗೆ ಸತತವಾಗಿ ಬಹಿರಂಗ ಟೀಕೆಯಲ್ಲಿ ತೊಡಗಿದ್ದರು. ಇದು ರಾಜ್ಯ ಸರ್ಕಾರ ಮತ್ತು ಧನ್ಕರ್ ನಡುವಿನ ಸಂಘರ್ಷವನ್ನು ಮತ್ತೂ ತೀವ್ರಗೊಳಿಸಿತ್ತು.
ಕೊನೆಗೆ ಸಹನೆ ಕಳೆದುಕೊಂಡ ಮಮತಾ ಬ್ಯಾನರ್ಜಿ , "ನಾನು ರಾಜ್ಯದ ಚುನಾಯಿತ ಮುಖ್ಯಮಂತ್ರಿ ಎಂಬುದನ್ನು ನೀವು ಮರೆತಿರುವ ಹಾಗಿದೆ. ಅದೇ ವೇಳೆ ನೀವು ನಾಮನಿರ್ದೇಶಿತ ರಾಜ್ಯಪಾಲರು ಎಂಬುದನ್ನು ಸಹ ನೀವು ಮರೆತಂತೆ ಕಾಣುತ್ತದೆ " ಎಂದು ತಿರುಗೇಟು ಕೊಟ್ಟಿದ್ದರು. ಇದಾದ ಮೇಲೆಯೂ ಧನ್ಕರ್ ತಮ್ಮ ನಡವಳಿಕೆಯನ್ನೇನೂ ಬದಲಾಯಿಸಿಕೊಳ್ಳಲಿಲ್ಲ. ಮತ್ತು ಅವರಿಗೆ ತಾನೊಂದು ಸಾಂವಿಧಾನಿಕ ಹುದ್ದೆಯಲ್ಲಿದ್ದು ರಾಜಕಾರಣಿಯ ಹಾಗೆ ನಡೆದುಕೊಳ್ಳುತ್ತಿರುವುದರ ಬಗ್ಗೆ ಯಾವ ತಪ್ಪಿತಸ್ಥ ಭಾವನೆಯೂ ಇರಲಿಲ್ಲ.
ಅದೇ ಧನ್ಕರ್ ಈಗ ಸಾಂವಿಧಾನಿಕ ಹುದ್ದೆಗೆ ಅವಮಾನವಾಗಿದೆ ಎಂದು ಭಾರೀ ಬೇಸರ ಮಾಡಿಕೊಂಡಿದ್ದಾರೆ. ಆದರೆ ರಾಜ್ಯಸಭೆಯಲ್ಲೂ, ಅತ್ತ ಲೋಕಸಭೆಯಲ್ಲೂ ಸಸ್ಪೆನ್ಡ್ ರಾಜ್ ನಡೆಯುತ್ತಿರುವ ಬಗ್ಗೆ ಅವರಿಗೆ ಯಾವುದೇ ಕಳವಳ ಇದ್ದಂತಿಲ್ಲ. ರಾಜ್ಯಸಭೆಯಲ್ಲಿ ಹೀಗೆ ಇಡೀ ವಿಪಕ್ಷವನ್ನೇ ಖಾಲಿ ಮಾಡಿಬಿಟ್ಟರೆ ಮತ್ತೆ ಸಭಾಪತಿ ಧನ್ಕರ್ ಅವರಿಗೂ ಅದು ಸರಿ ಕಾಣಬಹುದೇ ?. ಪ್ರಶ್ನೆ ಕೇಳಲೇಬೇಕಾದ ವಿಪಕ್ಷವೇ ಸದನದಲ್ಲಿ ಇಲ್ಲ ಎಂಬುದು ಅವರನ್ನು ಕಾಡುವುದಿಲ್ಲವೇ ?.
ಹೀಗೆ ಜನರ ಪರವಾಗಿ, ದೇಶದ ಸಂಸತ್ತಿನ ಸುರಕ್ಷತೆಯ ಬಗ್ಗೆ ಪ್ರಶ್ನೆ ಕೇಳಿದವರನ್ನು ಬೇಕಾಬಿಟ್ಟಿ ಅಮಾನತು ಮಾಡಿ ಹೊರದೂಡುವುದು ಸಂಸದೀಯ ವ್ಯವಸ್ಥೆಯ ಮಾಕರಿ (ಅಣಕ) ಅಲ್ಲವೇ ?. ಸಂಸದರೊಬ್ಬರು ಮಾಡಿರುವ ಮಿಮಿಕ್ರಿ ಬಗ್ಗೆ ತಲೆಕೆಡಿಸಿಕೊಂಡಷ್ಟು ಈ ಪ್ರಜಾಪ್ರಭುತ್ವದ ಮಾಕರಿ ಬಗ್ಗೆಯೂ ಮಾನ್ಯ ಸಭಾಪತಿಗಳು ಸ್ವಲ್ಪ ಚಿಂತಿಸಬೇಕಲ್ಲವೇ ?.