ಬಿಹಾರ ಜಾತಿಗಣತಿಯ ಅಂಕಿಅಂಶಗಳು ರಾಷ್ಟ್ರ ರಾಜಕಾರಣವನ್ನು ತಲ್ಲಣಗೊಳಿಸಬಹುದು ಎನ್ನುವುದಕ್ಕೆ ಕಾರಣಗಳು ಇಲ್ಲಿವೆ…
PHOTO : PTI
ಪ್ರತಿಪಕ್ಷಗಳು ಜಾತಿ ಗಣತಿಯ ಪರವಾಗಿ ದೃಢವಾಗಿ ನಿಂತಿದ್ದು, ಬಿಜೆಪಿ ಈಗಾಗಲೇ ಮೂಲೆಗೆ ತಳ್ಳಲ್ಪಟ್ಟಿದೆ. ಬಿಹಾರದಲ್ಲಿ ನಡೆಸಲಾದ ಜಾತಿ ಗಣತಿಯ ಅಂಕಿಅಂಶಗಳು ಈಗ ಪ್ರಕಟಗೊಳ್ಳುವುದರೊಂದಿಗೆ ದೇಶದ ಇತರ ಭಾಗಗಳಲ್ಲಿ ಸ್ಥಿತಿ ಏನಿರಬಹುದು ಎನ್ನುವುದನ್ನು ಅಂದಾಜಿಸಲು ಜನರಿಗೆ ಅನುವು ಮಾಡಿದೆ. ಜಾತಿ ಗಣತಿಯ ಅಂಕಿಅಂಶಗಳು ರಾಷ್ಟ್ರೀಯ ರಾಜಕೀಯದಲ್ಲಿ ತಲ್ಲಣ ಸೃಷ್ಟಿಸಬಹುದು ಎನ್ನುವುದಕ್ಕೆ ಕಾರಣಗಳಿವೆ.
ರಾಷ್ಟ್ರೀಯ ಪರಿಣಾಮಗಳನ್ನು ಬೀರಬಲ್ಲ ರಾಜಕೀಯ ವಿರೋಧವನ್ನು ರೂಪಿಸುವಲ್ಲಿ ಬಿಹಾರ ಹಿಂದಿನಿಂದಲೂ ಪ್ರಮುಖ ಪಾತ್ರವನ್ನು ವಹಿಸುತ್ತಿದೆ. ಜಾತಿ ಗಣತಿ ಬಿಡಿ, ವಾಡಿಕೆಯ ದಶಮಾನದ ಜನಗಣತಿಯನ್ನೂ ನಡೆಸಲು ಮೋದಿ ಸರಕಾರವು ಅಸಮರ್ಥವಾಗಿರುವ ಈ ಸಮಯದಲ್ಲಿ ಬಿಹಾರ ಸರಕಾರವು ಯಶಸ್ವಿಯಾಗಿ ಜಾತಿ ಗಣತಿಯನ್ನು ನಡೆಸಿರುವುದು ಅದನ್ನು ಅಖಿಲ ಭಾರತ ಮಟ್ಟದಲ್ಲಿಯೂ ನಡೆಸಬಹುದು ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಒಡಿಶಾ ಮತ್ತು ಜಾರ್ಖಂಡ್ನಲ್ಲಿ ಸಾಮಾಜಿಕ-ಆರ್ಥಿಕ ಜಾತಿ ಸಮೀಕ್ಷೆಗಳು ಪ್ರಗತಿಯಲ್ಲಿವೆ. ಜಾತಿ ಗಣತಿಯನ್ನು ರಾಷ್ಟ್ರಮಟ್ಟದಲ್ಲಿ ನಡೆಸಲು ಏಕೆ ಸಾಧ್ಯವಿಲ್ಲ ಎನ್ನುವುದನ್ನು ವಿವರಿಸಲು ಬಿಜೆಪಿಯ ಮೇಲೆ ಒತ್ತಡ ಹೆಚ್ಚಲಿದೆ.
ಜಾತಿ ಗಣತಿಯ ಅಂಕಿಅಂಶಗಳು ಅಸ್ತಿತ್ವದಲ್ಲಿರುವ ನಿಜವಾದ ಬಹುಮತವನ್ನು ಪ್ರಮಾಣೀಕರಿಸಿರುವುದು ಹಿಂದು ‘ಬಹುಸಂಖ್ಯಾತ’ ವಾದಕ್ಕೆ ಹೊಡೆತವನ್ನು ನೀಡಲಿದೆ. ಸನಾತನ ಧರ್ಮ ಕುರಿತು ಡಿಎಂಕೆ ನಾಯಕ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಯ ಬಳಿಕ ಪ್ರತಿಪಕ್ಷಗಳ ಮೇಲೆ ದಾಳಿ ನಡೆಸಲು ಪ್ರಮುಖ ಅಸ್ತ್ರವಾಗಿ ಸನಾತನ ಧರ್ಮಕ್ಕೆ ಒತ್ತು ನೀಡಲಾಗುತ್ತಿದೆ. ಮೋದಿಯವರೇ ಸ್ವತಃ ದಾಳಿಯ ನೇತೃತ್ವವನ್ನು ವಹಿಸಿಕೊಂಡಿದ್ದಾರೆ. ಆದರೆ ಅಂಕಿಅಂಶಗಳು ಈ ದಾಳಿಯನ್ನು ಠುಸ್ಸೆನಿಸಲಿವೆ. ಜಾತಿ ಶ್ರೇಣೀಕರಣಗಳನ್ನು ಶಾಶ್ವತವಾಗಿ ಕಾಯ್ದುಕೊಳ್ಳುವುದು ಸನಾತನ ಧರ್ಮದ ಮುಖ್ಯ ಗುರಿಯಾಗಿರುವಂತೆ ನೋಡಲಾಗುತ್ತಿದೆ. ಲೆಕ್ಕಾಚಾರವನ್ನು ಹಾಕಿರುವ ಪ್ರತಿಪಕ್ಷವು ಒಬಿಸಿಗಳು ಹಾಗೂ ಎಸ್ಸಿ/ಎಸ್ಟಿಗಳು ದೇಶದ ಜನಸಂಖ್ಯೆಯ ಶೇ.84ರಷ್ಟಿದ್ದಾರೆ ಎಂದು ಹೇಳಿರುವುದು ಆ ಮಾರ್ಗವನ್ನು ಪುನರ್ವಿಮರ್ಶಿಸುವುದನ್ನು ಬಿಜೆಪಿಗೆ ಅನಿವಾರ್ಯವಾಗಿಸಬಹುದು. ಬಿಜೆಪಿಯು ಪ್ರತಿಪಾದಿಸುತ್ತಿರುವ ಹಿಂದು-ಮುಸ್ಲಿಂ ವಿಭಜನೆಗೆ ವಿರುದ್ಧವಾಗಿ ಜಾತಿ ಗಣತಿಯ ಅಂಕಿಅಂಶಗಳು ಬಹಿರಂಗಗೊಳಿಸಿರುವ ಬೃಹತ್ ಜಾತಿ ವಿಭಜನೆಯ ಅರಿವು ಕೇಸರಿ ಪಕ್ಷಕ್ಕೆ ಸಂಕಷ್ಟಗಳನ್ನು ಒಡ್ಡಬಹುದು.
ಮೋದಿ ಸರಕಾರವು 2019ರಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿಯನ್ನು ಘೋಷಿಸಿದ್ದು,ಇದು ವಿವಾದಾತ್ಮಕವಾಗಿಯೇ ಉಳಿದುಕೊಂಡಿದೆ. ಇದಕ್ಕೆ ನೆರವಾಗಿದ್ದ ನ್ಯಾಯಾಂಗವು ಮೀಸಲಾತಿಯ ಶೇ.50ರ ಮಿತಿಯನ್ನು ಮನ್ನಾ ಮಾಡಿತ್ತು. ಬಿಹಾರದಲ್ಲಿ ಸಾಮಾನ್ಯ ವರ್ಗಗಳು ಅಥವಾ ಮೇಲ್ಜಾತಿಗಳ ಪ್ರಮಾಣ ಜನಸಂಖ್ಯೆಯ ಕೇವಲ ಶೇ.15.52ರಷ್ಟಿದೆ ಎನ್ನುವುದು ಬಹಿರಂಗಗೊಂಡಿದ್ದು,ಅಖಿಲ ಭಾರತ ಮಟ್ಟದಲ್ಲಿ ಈ ಪ್ರಮಾಣ ತಿಳಿದರೆ ಒಬಿಸಿಗಳು ತುಲನಾತ್ಮಕವಾಗಿ ಕಡಿಮೆ ಸೌಲಭ್ಯಗಳನ್ನು ಏಕೆ ಪಡೆಯಬೇಕು ಎನ್ನುವುದನ್ನು ಸಮರ್ಥಿಸಿಕೊಳ್ಳುವುದು ಕಠಿಣವಾಗಲಿದೆ. ಏಕೆಂದರೆ ಸರಕಾರದ ಪ್ರಮುಖ ಹುದ್ದೆಗಳಲ್ಲಿ ಸಾಮಾನ್ಯ ವರ್ಗಗಳು ಪ್ರಾಬಲ್ಯ ಹೊಂದಿದ್ದರೆ ಒಬಿಸಿಗಳ ಪಾಲು ಅವರ ಜನಸಂಖ್ಯೆಗೆ ಅನುಗುಣವಾಗಿಲ್ಲ. ಜನಸಂಖ್ಯೆಯ ಶೇ.15.2ರಷ್ಟಿರುವ ಸಾಮಾನ್ಯ ವರ್ಗಗಳಿಗೆ ಶೇ.10ರಷ್ಟು ಮೀಸಲಾತಿ ಮತ್ತು ಶೇ.36.01 ರಷ್ಟಿರುವ ಅತ್ಯಂತ ಹಿಂದುಳಿದ ಜಾತಿಗಳು ಮತ್ತು ಶೇ.27.12ರಷ್ಟು ಒಬಿಸಿಗಳು ಸೇರಿದಂತೆ ಶೇ.63.13ರಷ್ಟು ಜನಸಂಖ್ಯೆಗೆ ಕೇವಲ ಶೇ.27ರಷ್ಟು ಮೀಸಲಾತಿಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಕಳೆದ ದಶಕದಲ್ಲಿ ಒಬಿಸಿಗಳಲ್ಲಿ ಬಿಜೆಪಿಗೆ ಬೆಂಬಲ ತೀವ್ರವಾಗಿ ಏರಿದೆ. 2024ರ ಸಾರ್ವತ್ರಿಕ ಚುನಾವಣೆಗಳಲ್ಲಿ ಮತ್ತೆ ಅಧಿಕಾರಕ್ಕೆ ಮರಳಬೇಕಿದ್ದರೆ ಬಿಜೆಪಿಯು ಈ ಬೆಂಬಲವನ್ನು ಕಾಯ್ದುಕೊಳ್ಳಬೇಕು. ಪ್ರತಿಪಕ್ಷಗಳು ಒಬಿಸಿಗಳ ವ್ಯಾಪಕ ಜಾಲವಾಗಿ ಬದಲಾಗುತ್ತಿದ್ದು,ಅದೂ ಪ್ರಬಲವಲ್ಲದ ಒಬಿಸಿಗಳಿಗೆ ಸೇರಿದವರು ರಾಜ್ಯಗಳ ಮುಖ್ಯಮಂತ್ರಿಗಳು (ಉದಾ:ಸಿದ್ದರಾಮಯ್ಯ, ಎಂ.ಕೆ.ಸ್ಟಾಲಿನ್,ಪಿಣರಾಯಿ ವಿಜಯನ್,ಭೂಫೇಶ್ ಬಾಘೇಲ್ ಮತ್ತು ಅಶೋಕ್ ಗೆಹ್ಲೋಟ್) ಮತ್ತು ರಾಜ್ಯ ನಾಯಕರಾಗಿದ್ದಾರೆ. ಇದು ಬಿಜೆಪಿಗೆ ಈಗಾಗಲೇ ಅಳುಕು ಮೂಡಿಸಿದೆ. ಜಾತಿ ಗಣತಿಯ ಅಂಕಿಅಂಶಗಳು ನಿಜವಾದ ಅಧಿಕಾರವನ್ನು ಹೊಂದಿರುವವರು ಮತ್ತು ಅಧಿಕಾರವನ್ನು ಹೊಂದಿರದವರ ನಡುವಿನ ಅಸಮಾನತೆಯನ್ನು ಬಹಿರಂಗಗೊಳಿಸುವುದರೊಂದಿಗೆ 2019ರಲ್ಲಿ ಬಿಜೆಪಿಗೆ ಮತಗಳನ್ನು ನೀಡಿದ್ದ ಶೇ.44ರಷ್ಟು ಒಬಿಸಿಗಳನ್ನು ಹಿಡಿದಿಟ್ಟುಕೊಳ್ಳುವುದು ಆ ಪಕ್ಷಕ್ಕೆ ಸವಾಲಾಗಲಿದೆ. ಬಿಜೆಪಿಯು ಈ ವರ್ಷದ ಆರಂಭದಿಂದಲೇ ಮುಸ್ಲಿಮರಿಗೆ ಮೀಸಲಾತಿಯನ್ನು ನಿಲ್ಲಿಸುವಂತೆ ಕರೆ ನೀಡುವ ಮೂಲಕ ಮುಸ್ಲಿಮರ ವಿರುದ್ಧ ಇತರ ಎಲ್ಲರನ್ನು ಸಜ್ಜುಗೊಳಿಸಿ ಕೋಮು ವಿಭಜನೆಯನ್ನು ಹೆಚ್ಚಿಸಲು ಪ್ರಯತ್ನಿಸಿತ್ತು. ಮುಸ್ಲಿಮ್ ಹಿಂದುಳಿದವರಿಗೆ ಮೀಸಲಾತಿಯನ್ನು ಏಕೆ ರದ್ದುಗೊಳಿಸಬೇಕು ಎನ್ನುವುದನ್ನು ಸಮರ್ಥಿಸಿಕೊಳ್ಳಲು ಸರ್ವೋಚ್ಚ ನ್ಯಾಯಾಲಯದವರೆಗೂ ಅದು ವಾದಿಸಿತ್ತು. ಸರ್ವೋಚ್ಚ ನ್ಯಾಯಾಲಯವು ಕೇಳಿದ್ದ ಕಠಿಣ ಪ್ರಶ್ನೆಗಳು ಕರ್ನಾಟಕದಲ್ಲಿದ್ದ ಬಸವರಾಜ ಬೊಮ್ಮಾಯಿ ಸರಕಾರವು ತನ್ನ ನೀತಿಯನ್ನು ತಡೆಹಿಡಿಯಲು ಕಾರಣವಾಗಿತ್ತು.
ಕೇಂದ್ರೀಯ ಒಬಿಸಿ ಪಟ್ಟಿಯನ್ನು ಪರಿಶೀಲಿಸಿರುವ ರೋಹಿಣಿ ಆಯೋಗವು ಸಲ್ಲಿಸಿದ ವರದಿ ಮತ್ತು ಒಬಿಸಿ ಕೋಟಾದ ವಿಭಜನೆಯನ್ನು ಪರಿಶೀಲಿಸಲು ಉ.ಪ್ರ.ಸರಕಾರವು ರಚಿಸಿದ್ದ ಸಮಿತಿಯ ವರದಿ ಇವೆರಡೂ ಈಗ ಬಿಜೆಪಿಯ ಪುನರ್ ಪರಿಶೀಲನೆಯಲ್ಲಿವೆ. ಎರಡೂ ವರದಿಗಳು ಒಬಿಸಿಗಳಲ್ಲಿ ಉಪ ವರ್ಗೀಕರಣಕ್ಕೆ ಕರೆ ನೀಡಿವೆ.
ಬಿಹಾರದಲ್ಲಿ ಕರ್ಪೂರಿ ಠಾಕೂರ್,ಕೇರಳದಲ್ಲಿ ಇಎಂಎಸ್ ನಂಬೂದ್ರಿಪಾದ್, ಕರ್ನಾಟಕದಲ್ಲಿ ದೇವರಾಜ ಅರಸು ಮತ್ತು ಇತರರು ಒಬಿಸಿಗಳ ಉಪವರ್ಗೀಕರಣವನ್ನು ತಂದಾಗ ಬಿಜೆಪಿಯ ಸೈದ್ಧಾಂತಿಕ ಪೂರ್ವಾಧಿಕಾರಿ ಜನಸಂಘವು ಅದನ್ನು ತೀವ್ರವಾಗಿ ವಿರೋಧಿಸಿತ್ತು. ಈ ಉಪವರ್ಗೀಕರಣ ಪ್ರಸ್ತುತ 11 ರಾಜ್ಯಗಳಲ್ಲಿ ಅಸ್ತಿತ್ವದಲ್ಲಿದೆ. ಒಂದು ಜಾಣ ತಂತ್ರವಾಗಿ ಬಿಜೆಪಿಯು 2017-18ರಲ್ಲಿ ಪ್ರಬಲ ಒಬಿಸಿ ಜಾತಿಗಳನ್ನು ತೆಗೆಯಲು ಈ ಉಪವರ್ಗೀಕರಣವನ್ನು ಪರಿಗಣಿಸಲು ಬಯಸಿದ್ದಿರಬಹುದು. ಆದರೆ ಈಗ, 2019ರಲ್ಲಿ ಮತ್ತೆ ಅಧಿಕಾರಕ್ಕೆ ಮರಳಿದ ಬಳಿಕ ರಾಜಕೀಯ ಚಿತ್ರಣ ನಾಟಕೀಯವಾಗಿ ಬದಲಾಗುತ್ತಿದೆ. ಚುನಾವಣೆಯಲ್ಲಿ ಬಿಜೆಪಿಯ ಶೇ.48.9ರಷ್ಟು ಮತಗಳು ತಥಾಕಥಿತ ಪ್ರಬಲ ಜಾತಿಗಳು ಸೇರಿದಂತೆ ಒಬಿಸಿಗಳಿಂದಲೇ ಬಂದಿದ್ದವು. ಹೀಗಿರುವಾಗ ಉಪವರ್ಗೀಕರಣವನ್ನು ತರುವ ಮೂಲಕ ಬಿಜೆಪಿ ಅಪಾಯವನ್ನು ಎದುರು ಹಾಕಿಕೊಳ್ಳುತ್ತದೆಯೇ?
ಕೃಪೆ : ದ ವೈರ್