ಎನ್ಡಿಎಗೆ ಪೈಪೋಟಿ ನೀಡಲು ‘ಇಂಡಿಯಾ’ ಸಮರ್ಥವಾಗಲಿದೆಯೇ?
Photo: PTI
ಸರಣಿ- 5
ಮೊನ್ನೆ ಅಕ್ಟೋಬರ್ ತಿಂಗಳಲ್ಲಿ ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆಯೊಂದು ಪ್ರಕಟವಾಯಿತು.
ಈಗಲೇ ಚುನಾವಣೆ ನಡೆದರೆ ಒಟ್ಟು 543 ಲೋಕಸಭಾ ಸ್ಥಾನಗಳಲ್ಲಿ ಮೋದಿ ನೇತೃತ್ವದ ಎನ್ಡಿಎ 315 ಲೋಕಸಭಾ ಸ್ಥಾನಗಳೊಂದಿಗೆ ಸ್ಪಷ್ಟ ಬಹುಮತ ಪಡೆಯಬಹುದು ಎಂದು ಅದು ಹೇಳಿತ್ತು.
ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ 172 ಲೋಕಸಭಾ ಸ್ಥಾನಗಳನ್ನು ಪಡೆಯಬಹುದು. ಪ್ರಾದೇಶಿಕ ಪಕ್ಷಗಳು ಮತ್ತು ಪಕ್ಷೇತರರು ಸೇರಿದಂತೆ ಇತರರು 56 ಸ್ಥಾನಗಳನ್ನು ಪಡೆಯಬಹುದು ಎಂದು ಅದು ಅಂದಾಜಿಸಿತ್ತು.
ಕುತೂಹಲಕ್ಕಾಗಿ ಅದರ ಕೆಲವು ಅಂಶಗಳನ್ನು ಗಮನಿಸುವುದಾದರೆ,
ಬಿಜೆಪಿ ಗುಜರಾತ್ನಿಂದ ಎಲ್ಲಾ 26 ಲೋಕಸಭಾ ಸ್ಥಾನಗಳನ್ನು ಗೆಲ್ಲಬಹುದು.
ಕರ್ನಾಟಕದಲ್ಲಿ ಎನ್ಡಿಎ 28 ಲೋಕಸಭಾ ಸ್ಥಾನಗಳಲ್ಲಿ 18 ಸ್ಥಾನಗಳನ್ನು ಗೆಲ್ಲಬಹುದು ಮತ್ತು 10 ಸ್ಥಾನಗಳು ‘ಇಂಡಿಯಾ’ ಮೈತ್ರಿಕೂಟದ ಪಾಲಾಗಬಹುದು.
ಲೋಕಸಭೆಯಲ್ಲಿ ಆಡಳಿತಾರೂಢ ಬಿಜೆಪಿ ಬಲ ಈ ಬಾರಿ 303ರಿಂದ 293ಕ್ಕೆ ಕಡಿಮೆಯಾಗಬಹುದು.
52 ಸ್ಥಾನಗಳನ್ನು ಹೊಂದಿರುವ ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ಈ ಬಾರಿ ತನ್ನ ಸಂಖ್ಯೆಯನ್ನು 70ಕ್ಕೆ ಹೆಚ್ಚಿಸಿಕೊಳ್ಳಬಹುದು.
ಮಮತಾ ಬ್ಯಾನರ್ಜಿಯವರ ಟಿಎಂಸಿ ಈ ಬಾರಿ 30 ಲೋಕಸಭಾ ಸ್ಥಾನಗಳೊಂದಿಗೆ ಮೂರನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು. ಅಂದರೆ ಕಳೆದ ಬಾರಿ 22 ಸ್ಥಾನಗಳನ್ನು ಗೆದ್ದಿದ್ದ ಅದು ಇನ್ನೂ 8 ಸ್ಥಾನಗಳನ್ನು ಹೆಚ್ಚುವರಿಯಾಗಿ ಗೆಲ್ಲಲಿದೆ.
ತಮಿಳುನಾಡಿನ ಆಡಳಿತಾರೂಢ ಡಿಎಂಕೆ 21 ಸ್ಥಾನಗಳೊಂದಿಗೆ ನಾಲ್ಕನೇ ದೊಡ್ಡ ಪಕ್ಷವಾಗಿ ಹೊರಹೊಮ್ಮಬಹುದು ಮತ್ತಿದು ಕಳೆದ ಬಾರಿ ಅದು ಗೆದ್ದುದಕ್ಕಿಂತ 3 ಸ್ಥಾನ ಕಡಿಮೆ.
ಉದ್ಧವ್ ಠಾಕ್ರೆ ಅವರ ಶಿವಸೇನೆ (ಯುಬಿಟಿ) ಪ್ರಸಕ್ತ ಇರುವ 6 ಸ್ಥಾನಗಳಿಂದ 8ಕ್ಕೆ ಏರಬಹುದು.
ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ (ಎಎಪಿ) ಈಗಿನ ಒಂದು ಸ್ಥಾನದಿಂದ 6 ಲೋಕಸಭಾ ಸ್ಥಾನಗಳಿಗೆ ಏರಬಹುದು.
ಒಡಿಶಾ ಸಿಎಂ ನವೀನ್ ಪಟ್ನಾಯಕ್ ಅವರ ಬಿಜು ಜನತಾ ದಳ (ಬಿಜೆಡಿ) ತನ್ನ ಸಂಖ್ಯೆಯನ್ನು 12ರಿಂದ 13ಕ್ಕೆ ಹೆಚ್ಚಿಸಿಕೊಳ್ಳಬಹುದು.
ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂದೆೆ ಅವರ ಶಿವಸೇನೆ (ಶಿಂದೆ) ಬಲ 12ರಿಂದ 4ಕ್ಕೆ ಇಳಿಯಬಹುದು.
ಈಗ ಅಂದರೆ ಕಳೆದ ಅಕ್ಟೋಬರ್ನಲ್ಲಿ ಚುನಾವಣೆ ನಡೆದರೆ ಎಂಬುದನ್ನು ಹೇಳುತ್ತಲೇ ಸಮೀಕ್ಷೆ ಮಾಡಿದ್ದ ಅಂದಾಜಿನ ಪ್ರಕಾರ,
ಪ್ರಧಾನಿ ಮೋದಿಯವರಿಗೆ ದೊಡ್ಡ ಗೆಲುವು ಉತ್ತರ ಪ್ರದೇಶದಿಂದ ಆಗಲಿದೆ.
ಎನ್ಡಿಎ 80ರಲ್ಲಿ 73 ಸ್ಥಾನಗಳನ್ನು ಗೆಲ್ಲಬಹುದು ಮತ್ತು 73ರಲ್ಲಿ ಬಿಜೆಪಿಯೇ 71 ಸ್ಥಾನಗಳನ್ನು ಗೆಲ್ಲಬಹುದು. ಅದರ ಮಿತ್ರ ಪಕ್ಷ ಅಪ್ನಾ ದಳ ಎರಡು ಸ್ಥಾನಗಳನ್ನು ಗಳಿಸಬಹುದು.
ಯುಪಿಯಲ್ಲಿ ಉಳಿದ ಏಳು ಸ್ಥಾನಗಳು ಪ್ರತಿಪಕ್ಷ ಮೈತ್ರಿಕೂಟ ‘ಇಂಡಿಯಾ’ ಪಾಲಾಗಬಹುದು ಎಂದು ಸಮೀಕ್ಷೆ ಹೇಳಿತ್ತು.
ಮತ್ತೊಂದೆಡೆ, ಯುಡಿಎಫ್ ಮತ್ತು ಎನ್ಡಿಎಫ್ ಅನ್ನು ಒಳಗೊಂಡಿರುವ ‘ಇಂಡಿಯಾ’ ಮೈತ್ರಿಕೂಟ ಕೇರಳದ ಎಲ್ಲಾ 20 ಲೋಕಸಭಾ ಸ್ಥಾನಗಳನ್ನು ಗೆದ್ದುಕೊಳ್ಳಬಹುದು.
ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ನೇತೃತ್ವದ ‘ಇಂಡಿಯಾ’ ಮೈತ್ರಿ ಒಟ್ಟು 42 ಸ್ಥಾನಗಳಲ್ಲಿ 32 ಸ್ಥಾನಗಳನ್ನು ಗೆಲ್ಲಬಹುದು. ಉಳಿದ 10 ಸ್ಥಾನಗಳು ಎನ್ಡಿಎ ಪಾಲಾಗಬಹುದು.
ಈಗಲೇ ಚುನಾವಣೆ ನಡೆದುಹೋಗಿದ್ದರೆ ಈ ಅಂದಾಜಿನ ವಾಸ್ತವ ಏನಿರುತ್ತಿತ್ತು ಎಂಬುದರ ಹೊರತಾಗಿಯೂ, ಇನ್ನು ಕೆಲವೇ ತಿಂಗಳುಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ನೇರ ಹಣಾಹಣಿಯಿರುವುದು ಮೋದಿಯವರ ಬಿಜೆಪಿ ಮತ್ತು ಕಾಂಗ್ರೆಸ್ ನೇತೃತ್ವದ 26 ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ನಡುವೆ.
ಪ್ರತಿಪಕ್ಷಗಳು ಒಗ್ಗಟ್ಟಾಗುತ್ತಿರುವುದೇ ಮೋದಿಯವರನ್ನು ಸೋಲಿಸುವ ಉದ್ದೇಶ ದಿಂದ. ಆದರೆ, ವಾಸ್ತವದಲ್ಲಿ ಅದು ಅಷ್ಟು ಸುಲಭವಿದೆಯೇ? ಅಥವಾ ಬಿಜೆಪಿಯೆದುರು ಯಾವ ಬಗೆಯ ಸವಾಲಾಗಿ ‘ಇಂಡಿಯಾ’ ಎದುರಾಗಬಹುದು?
‘ಇಂಡಿಯಾ’ ಮೈತ್ರಿಕೂಟ ಮತ್ತು ಎನ್ಡಿಎ ಮೈತ್ರಿಕೂಟದ ನಡುವಿನ ಮುಖ್ಯ ವ್ಯತ್ಯಾಸವೆಂದರೆ, ಎನ್ಡಿಎ ಮೈತ್ರಿಕೂಟದಲ್ಲಿ ಬಿಜೆಪಿಯ ಎದುರು ಇನ್ನಾವುದೇ ಪಕ್ಷದ ಆಟ ನಡೆಯುವುದಿಲ್ಲ ಮತ್ತು ಬಳಸಿ ಎಸೆಯುವ ಧೋರಣೆಯಲ್ಲೇ ಬಿಜೆಪಿ ಎಲ್ಲ ಮೈತ್ರಿ ಪಕ್ಷಗಳನ್ನು ನಡೆಸಿಕೊಳ್ಳುತ್ತ ಬಂದಿರುವುದನ್ನೂ ನೋಡಬಹುದು.
ಆದರೆ ಕಾಂಗ್ರೆಸ್ ಅಂಥ ಯಾವುದೇ ಬಲವನ್ನು ಹೊಂದಿಲ್ಲ ಮತ್ತು ಅದು ಟಿಎಂಸಿ, ಎಎಪಿಯಂಥ ಪಕ್ಷಗಳ ನಾಯಕರನ್ನು ಅಥವಾ ನಿತೀಶ್ ಕುಮಾರ್, ಮಮತಾ ಅವರಂಥ ನಾಯಕರನ್ನು ಸಂಭಾಳಿಸಿಕೊಂಡೇ ನಡೆಯಬೇಕಾದ ಅನಿವಾರ್ಯತೆಯೂ ಇದೆ.
ಮತ್ತೂ ಒಂದು ವಿಚಾರವೆಂದರೆ, ಮೈತ್ರಿಕೂಟದ ವಿವಿಧ ಪ್ರತಿಪಕ್ಷಗಳು ಸ್ವಪ್ರತಿಷ್ಠೆ ಬದಿಗಿಟ್ಟು ಒಗ್ಗಟ್ಟಾಗುವ ಹಾದಿ ಇನ್ನೂ ಸ್ಪಷ್ಟವಾಗಿಲ್ಲ. ಇದೆಲ್ಲದರ ಬಳಿಕ ಸೀಟು ಹಂಚಿಕೆ ವಿಚಾರದಲ್ಲಿ ಒಮ್ಮತ ಮೂಡಬೇಕಿದೆ.
ಇಂಥ ಹೊತ್ತಿನಲ್ಲಿ ಬಿಜೆಪಿ ಮಾತ್ರ ಮೋದಿ ಮುಖವನ್ನು ಮುಂದಿಟ್ಟುಕೊಂಡು ಅದರ ಯಶಸ್ಸಿನ ಉದಾಹರಣೆಗಳೊಂದಿಗೆ ನಿಂತಿದೆ.
ಮೊನ್ನೆಯ ವಿಧಾನಸಭೆ ಚುನಾವಣೆಗಳಲ್ಲಿ ಮೋದಿ ನಾಯಕತ್ವದಲ್ಲಿಯೇ ಮೂರು ರಾಜ್ಯಗಳಲ್ಲಿ ಅಧಿಕಾರ ಹಿಡಿದಿದೆ. ಅವುಗಳಲ್ಲೆರಡನ್ನು ಅದು ಕಸಿದುಕೊಂಡಿರುವುದು ಕಾಂಗ್ರೆಸ್ ಕೈಯಿಂದ ಎಂಬುದು ಗಮನಾರ್ಹ.
ಸಿಎಸ್ಡಿಎಸ್ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ, 2019ರಲ್ಲಿ ಎನ್ಡಿಎ ಪಡೆದ 27.5 ಕೋಟಿ ಮತಗಳಲ್ಲಿ 8.5 ಕೋಟಿ ಮತಗಳು ಮೋದಿಯವರ ಕಾರಣದಿಂದ ಬಂದಿವೆ.
2019ರಲ್ಲಿ ಯುಪಿಎ ವಿರುದ್ಧ ಎನ್ಡಿಎ ಮುನ್ನಡೆ 11 ಕೋಟಿ ಮತಗಳಾಗಿದ್ದು, ಅದಕ್ಕೆ ಮೋದಿ ಅಂಶವೇ ಸುಮಾರು ಶೇ.80ರಷ್ಟು ಕೊಡುಗೆ ನೀಡಿದೆ ಎಂದು ಆದು ಹೇಳುತ್ತದೆ.
ಮೋದಿ ಜನಪ್ರಿಯತೆ ಈಗಲೂ ಮಂಕಾಗಿಲ್ಲ.
ಮೊನ್ನೆ ನಡೆದ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿಗೆ ಕಾಂಗ್ರೆಸ್ ಸೀಟು ಬಿಟ್ಟುಕೊಡಲಿಲ್ಲ. ಕಡೆಗೆ ಸುಮಾರು ಐದು ಸ್ಥಾನಗಳಲ್ಲಿ ಕಾಂಗ್ರೆಸ್ಗೆ ಬರಬಹುದಾದ ಮತಗಳೂ ಎಸ್ಪಿ ಪಾಲಾದವು. ಇತ್ತ ಕಾಂಗ್ರೆಸ್ ಕೂಡ ಗೆಲ್ಲಲಾಗಲಿಲ್ಲ. ಎಸ್ಪಿಯದ್ದಂತೂ ಶೂನ್ಯ ಸಾಧನೆ.
‘ಇಂಡಿಯಾ’ ಮೈತ್ರಿಕೂಟ ಪಕ್ಷದ ಮತಗಳು ಸರಿಯಾದ ರೀತಿಯಲ್ಲಿ ವರ್ಗಾವಣೆಯಾಗದೆ ಇದ್ದರೆ ಅದರ ಅಪಾಯವನ್ನೂ ಎದುರಿಸಬೇಕಾಗಿ ಬರಬಹುದು. ಹಾಗಾಗಿ ಸೀಟು ಹಂಚಿಕೆ ಹೊತ್ತಿನ ನಿರ್ಧಾರಗಳು ಮುಂದಿನ ಚುನಾವಣೆಯಲ್ಲಿ ಬಹುಮುಖ್ಯವಾಗಲಿವೆ.
ವಿಧಾನಸಭೆ ಚುನಾವಣೆಯಲ್ಲಿ ಮಧ್ಯಪ್ರದೇಶದಲ್ಲಿನ ಆಡಳಿತ ವಿರೋಧಿ ಅಲೆಯೇ ತಮ್ಮ ಗೆಲುವಿಗೆ ಸಾಕು ಎಂಬ ಉದಾಸೀನತೆ ತೋರಿದ್ದ ಕಾಂಗ್ರೆಸ್ ನಾಯಕರು ಅದಕ್ಕೆ ಭಾರೀ ಬೆಲೆಯನ್ನೇ ತೆರಬೇಕಾಯಿತು.
ಆಡಳಿತ ವಿರೋಧಿ ಅಲೆ ಇತ್ತೆಂಬುದು ನಿಜವಾದರೂ, ಅದನ್ನೂ ಮೀರಿ ಬಿಜೆಪಿಯನ್ನು ಭಾರೀ ಬಹುಮತದತ್ತ ಕೊಂಡೊಯ್ದಿದ್ದು, ಕಾಂಗ್ರೆಸ್ನ ಹೀನಾಯ ಸೋಲಿಗೆ ಕಾರಣವಾದದ್ದು ಯಾವುದು? ತನ್ನ ಕೈಯಲ್ಲಿಯೇ ಇದ್ದ ಎರಡು ರಾಜ್ಯಗಳನ್ನು ಕಾಂಗ್ರೆಸ್ ಉಳಿಸಿಕೊಳ್ಳಲಾರದೇ ಹೋದದ್ದು ಹೇಗೆ? ಇಂಥ ಪ್ರಶ್ನೆಗಳನ್ನು ಅವಶ್ಯವಾಗಿ ಕೇಳಿಕೊಳ್ಳಬೇಕಾಗಿದೆ.
ವಿಧಾನಸಭೆ ಚುನಾವಣೆಗೆ ಹೋಗುವಾಗ ಬಿಜೆಪಿ, ಜನವಿರೋಧವಿದ್ದ ಹಲವು ಶಾಸಕರಿಗೆ ಟಿಕೆಟ್ ನಿರಾಕರಿಸಿ, ಕಡೆಗೆ ಸಂಸದರು, ಕೇಂದ್ರ ಮಂತ್ರಿಗಳನ್ನೇ ಕಣಕ್ಕಿಳಿಸುವ ನಿರ್ಧಾರ ತೆಗೆದುಕೊಂಡಿತು ಎಂಬುದನ್ನು ಗಮನಿಸಬೇಕು.
2019ರ ಲೋಕಸಭೆ ಚುನಾವಣೆಯಲ್ಲಿಯೂ ಬಿಜೆಪಿ ಈ ರೀತಿಯ ಅಧಿಕಾರ ವಿರೋಧಿ ಅಲೆಯನ್ನು ನಿವಾರಿಸಿಕೊಳ್ಳಲು ಶೇ.45ರಷ್ಟು ಸಂಸದರಿಗೆ ಟಿಕೆಟ್ ನಿರಾಕರಿಸಿತ್ತು.
ಇಂಥ ತೀರ್ಮಾನ ತೆಗೆದುಕೊಳ್ಳಬೇಕಾಗಿ ಬಂದರೆ ಕಾಂಗ್ರೆಸ್ ಏನು ಮಾಡಬಹುದು? ಅದರ ಮಿತ್ರಪಕ್ಷಗಳು ಏನು ಮಾಡಬಹುದು?
‘ಇಂಡಿಯಾ’ ಮೈತ್ರಿಕೂಟದ ಎದುರು ಇರುವ ಅತಿದೊಡ್ಡ ಸವಾಲು ಸೀಟು ಹಂಚಿಕೆಯದ್ದು. ಇಡೀ ಮೈತ್ರಿಕೂಟದ ಯಶಸ್ಸು ಅಥವಾ ಸೋಲು ಅದನ್ನೇ ಅವಲಂಬಿಸಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ-ಎಡಪಕ್ಷ- ಕಾಂಗ್ರೆಸ್ ನಡುವೆ, ಕೇರಳದಲ್ಲಿ ಕಾಂಗ್ರೆಸ್-ಎಡಪಕ್ಷಗಳ ನಡುವೆ, ಉತ್ತರ ಪ್ರದೇಶದಲ್ಲಿ ಎಸ್ಪಿ-ಕಾಂಗ್ರೆಸ್ ನಡುವೆ, ಪಂಜಾಬ್ ಹಾಗೂ ದಿಲ್ಲಿಯಲ್ಲಿ ಕಾಂಗ್ರೆಸ್-ಆಮ್ ಆದ್ಮಿ ಪಕ್ಷಗಳ ನಡುವೆ ಸೀಟು ಹೊಂದಾಣಿಕೆಯಾಗುವುದು ಸುಲಭವಿಲ್ಲ.
ಒಟ್ಟಾರೆಯಾಗಿ ಹೇಳುವುದಾದರೆ, ಲೋಕಸಭೆ ಚುನಾವಣೆಯಲ್ಲಿ ಎನ್ಡಿಎ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವೆ ಪ್ರಬಲ ಪೈಪೋಟಿ ಏರ್ಪಡುವುದೇ ಇಲ್ಲವೇ ಎಂಬುದೇನಿದ್ದರೂ, ‘ಇಂಡಿಯಾ’ ಮೈತ್ರಿಕೂಟದ ಮುಂದಿನ ತೀರ್ಮಾನಗಳನ್ನು ಅವಲಂಬಿಸಿದೆ.
ತನ್ನ ಪರವಾಗಿ ವಾತಾವರಣವನ್ನು ಸೃಷ್ಟಿಸಲು ‘ಇಂಡಿಯಾ’ ಮೈತ್ರಿಕೂಟ ಸಮರ್ಥವಾಗಲಿದೆಯೇ ಎಂಬುದು ಮಾತ್ರವೇ ಮುಂದಿನ ಎಲ್ಲದಕ್ಕೂ ಉತ್ತರ ಹೇಳಲಿದೆ.