ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಬಿಜೆಪಿಗೆ ‘ಇಂಡಿಯಾ’ ಸರಿಸಾಟಿಯಾಗಲಿದೆಯೇ ?
ಸರಣಿ- 6
ದಿಲ್ಲಿ ಗದ್ದುಗೆಯ ಹಾದಿ ಉತ್ತರ ಪ್ರದೇಶದ ಮೂಲಕ ಹಾದುಹೋಗುತ್ತದೆ ಎಂದೊಂದು ಮಾತು ರಾಜಕೀಯದಲ್ಲಿ ಇದೆ. ಅದು ನಿಜ. ದೇಶದ ರಾಜಕಾರಣದಲ್ಲಿ ಉತ್ತರ ಪ್ರದೇಶ ಬಹಳ ನಿರ್ಣಾಯಕ ಪಾತ್ರ ವಹಿಸುತ್ತಲೇ ಬಂದಿದೆ.
ಉತ್ತರ ಪ್ರದೇಶ 24 ಕೋಟಿಗೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ರಾಜ್ಯ. ಅತಿ ಹೆಚ್ಚು ಲೋಕಸಭಾ ಸ್ಥಾನಗಳುಳ್ಳ ರಾಜ್ಯಗಳಲ್ಲಿ ಉತ್ತರ ಪ್ರದೇಶದ್ದೇ ಮೊದಲ ಸ್ಥಾನ. 80 ಲೋಕಸಭಾ ಕ್ಷೇತ್ರಗಳನ್ನು ಅದು ಹೊಂದಿದೆ. ಹಿಂದೂಗಳು ಈ ರಾಜ್ಯದ ಒಟ್ಟು ಜನಸಂಖ್ಯೆಯ ಶೇ.79.7ರಷ್ಟಿದ್ದಾರೆ. ಮುಸ್ಲಿಮರು ಒಟ್ಟು ಜನಸಂಖ್ಯೆ ಶೇ.19.3ರಷ್ಟಿದ್ದಾರೆ. ಉಳಿದಂತೆ ಸಿಖ್ಖರು, ಕ್ರೈಸ್ತರು, ಜೈನರು, ಬೌದ್ಧರು ಮತ್ತಿತರ ಸಮುದಾಯದವರಿದ್ದಾರೆ.
ಉತ್ತರ ಪ್ರದೇಶದ ರಾಜಧಾನಿ ಲಖನೌ. ವಾಣಿಜ್ಯ ಮತ್ತು ಔದ್ಯೋಗಿಕ ರಾಜಧಾನಿ ಕಾನ್ಪುರ್. ವಾರಣಾಸಿ ಹಾಗೂ ಆಗ್ರಾದಂತಹ ಅನೇಕ ಐತಿಹಾಸಿಕ ನಗರಗಳು ಇಲ್ಲಿವೆ. ಅಯೋಧ್ಯೆ ಕೂಡ ಪ್ರಮುಖ ನಗರ. ಅತಿ ಹೆಚ್ಚು ಪ್ರಧಾನಿಗಳನ್ನು ದೇಶಕ್ಕೆ ಕೊಟ್ಟ ರಾಜ್ಯ ಕೂಡ ಇದಾಗಿದೆ.
ಜವಾಹರಲಾಲ್ ನೆಹರೂ, ಲಾಲ್ ಬಹಾದ್ದೂರ್ ಶಾಸ್ತ್ರಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಚೌಧರಿ ಚರಣ್ ಸಿಂಗ್, ವಿಶ್ವನಾಥ ಪ್ರತಾಪ್ ಸಿಂಗ್, ಚಂದ್ರಶೇಖರ್ ಇಲ್ಲಿಂದ ಪ್ರಧಾನಿಗಳಾದವರು. ಅಟಲ್ ಬಿಹಾರಿ ವಾಜಪೇಯಿ ಅವರು ಗ್ವಾಲಿಯಾರ್‌ನಲ್ಲಿ ಜನಿಸಿದ್ದರೂ ಉತ್ತರ ಪ್ರದೇಶದಲ್ಲಿನ ಚುನಾವಣಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಹಾಗೆಯೇ ಈಗಿನ ಪ್ರಧಾನಿ ನರೇಂದ್ರ ಮೋದಿ ಕೂಡ ಉತ್ತರ ಪ್ರದೇಶದ ವಾರಣಾಸಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
ಕಳೆದ ಲೋಕಸಭಾ ಚುನಾವಣೆಯಲ್ಲಿನ ಫಲಿತಾಂಶದ ಹಿನ್ನೆಲೆ ಯಲ್ಲಿ ಹೆಸರಿಸಬಹುದಾದ ಪ್ರಮುಖ ನಾಯಕರೆಂದರೆ, ನರೇಂದ್ರ ಮೋದಿ, ಸೋನಿಯಾ ಗಾಂಧಿ, ಸ್ಮತಿ ಇರಾನಿ, ಅಖಿಲೇಶ್ ಯಾದವ್, ರಾಜನಾಥ ಸಿಂಗ್, ಮುಹಮ್ಮದ್ ಆಝಂ ಖಾನ್, ಮೇನಕಾ ಗಾಂಧಿ, ವರುಣ್ ಗಾಂಧಿ, ಸ್ವಾಮಿ ಸಾಕ್ಷಿ ಮಹಾರಾಜ್. ಇವರ ಹೊರತಾಗಿಯೂ ಹಲವು ನಾಯಕರು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪಾತ್ರ ನಿರ್ವಹಿಸಲಿದ್ದಾರೆ, ಪ್ರಭಾವ ಬೀರಲಿದ್ದಾರೆ.
ಒಂದು ಕಾಲದಲ್ಲಿ ಜನತಾ ಪಕ್ಷದ ನೆಲೆಯಾಗಿದ್ದ ಉತ್ತರ ಪ್ರದೇಶ ಲೋಕಸಭಾ ರಾಜಕೀಯ, 1980ರ ಚುನಾವಣೆಯ ನಂತರ ಕಾಂಗ್ರೆಸ್ ಹಿಡಿತಕ್ಕೆ ಬಂತು. ಒಂದು ದಶಕದ ಬಳಿಕ ಜನತಾ ದಳ ಇಲ್ಲಿ ಮೆರೆಯಿತು. 1989ರ ಚುನಾವಣೆಯಲ್ಲಿ 8 ಕ್ಷೇತ್ರಗಳನ್ನು ಗೆಲ್ಲುವುದರೊಂದಿಗೆ ಇಲ್ಲಿ ರಂಗಪ್ರವೇಶ ಮಾಡಿದ್ದ ಬಿಜೆಪಿ, ಮುಂದಿನ ಅಂದರೆ 1991ರ ಚುನಾವಣೆಯಲ್ಲಿ ಇದ್ದಕ್ಕಿದ್ದಂತೆ 51 ಸ್ಥಾನಗಳನ್ನು ಪಡೆದು, ಜನತಾದಳವನ್ನು ಬದಿಗೆ ಸರಿಸಿತ್ತು.
ಮುಂದಿನ ಚುನಾವಣೆಯಲ್ಲಿ (1996) ಇನ್ನೂ ಒಂದು ಸ್ಥಾನವನ್ನು ಹೆಚ್ಚು ಗಳಿಸಿ, ಪ್ರಾಬಲ್ಯ ಉಳಿಸಿಕೊಂಡಿತು. ಮತ್ತೆ ನಡೆದ ಚುನಾವಣೆಯಲ್ಲಿ ಸ್ಥಾನಬಲವನ್ನು 57ಕ್ಕೆ ಏರಿಸಿಕೊಂಡ ಬಿಜೆಪಿ, 1999ರ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದ ಆಟದ ಮುಂದೆ ಮಣಿಯಬೇಕಾಯಿತು. ಆನಂತರ 15 ರ್ಷಗಳ ಕಾಲ ಅಸ್ತಿತ್ವಕ್ಕಾಗಿ ಪರದಾಡಿದ ಬಿಜೆಪಿ 2014ರ ಚುನಾವಣೆಯಲ್ಲಿ ಒಟ್ಟು 80 ಸ್ಥಾನಗಳಲ್ಲಿ 71 ಸ್ಥಾನಗಳನ್ನು ಗೆದ್ದು ಬೀಗಿತು. 2019ರ ಚುನಾವಣೆಯಲ್ಲಿ ಬಿಜೆಪಿ ಗೆದ್ದ ಸೀಟುಗಳ ಸಂಖ್ಯೆ 62ಕ್ಕೆ ಕುಸಿಯಿತಾದರೂ, ಪ್ರಾಬಲ್ಯ ಮುಂದುವರಿಯಿತು.
1980ರ ದಶಕದಲ್ಲಿ ಉತ್ತರ ಭಾರತದ ರಾಜಕೀಯವನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದ ಕಾಂಗ್ರೆಸ್, ಆನಂತರ ತನ್ನ ಛಾಪು ಮೂಡಿಸುವುದಕ್ಕೆ ಆಗದೆ ಕಮರಿಹೋಗಿದೆ. 2014ರ ಚುನಾವಣೆಯಲ್ಲಿ ಅದು ಗೆದ್ದಿದ್ದು ಬರೀ 2 ಸ್ಥಾನಗಳು. 2019ರ ಚುನಾವಣೆಯಲ್ಲಿ ಒಂದು ಕ್ಷೇತ್ರದಲ್ಲಷ್ಟೇ ಗೆದ್ದು ಕಟ್ಟ ಕಡೆಯ ಸ್ಥಾನಕ್ಕೆ ತಳ್ಳಲ್ಪಟ್ಟಿತ್ತು.
ಸಮಾಜವಾದಿ ಪಕ್ಷ (ಎಸ್‌ಪಿ) ಹಾಗೂ ಬಹುಜನ ಸಮಾಜವಾದಿ ಪಕ್ಷ (ಬಿಎಸ್‌ಪಿ) ಗಳಿಗೂ ಉತ್ತರ ಪ್ರದೇಶ ಸುಲಭದ ಹಾದಿಯಾಗಿ ಉಳಿದಿಲ್ಲವೆಂಬುದನ್ನು ಕಳೆದ ಚುನಾವಣೆಯ ಫಲಿತಾಂಶವೇ ಹೇಳುತ್ತಿದೆ. ಇಂಥದೊಂದು ಚಿತ್ರ 2024ರ ಚುನಾವಣೆಯಲ್ಲಿ ಹೇಗೆ ಬದಲಾದೀತು?
ವರದಿಗಳ ಪ್ರಕಾರ, ಮುಂದಿನ ಲೋಕಸಭೆಯಲ್ಲಿ ಎಲ್ಲಾ 80 ಸ್ಥಾನಗಳನ್ನು ಗೆಲ್ಲಲು ವರ್ಷದಿಂದಲೇ ಬಿಜೆಪಿ ತಯಾರಿ ನಡೆದಿದೆ. ಈ ಉದ್ದೇಶಕ್ಕಾಗಿ ಸಿಎಂ ಆದಿತ್ಯನಾಥ್, ಪಕ್ಷದ ರಾಜ್ಯಾಧ್ಯಕ್ಷ ಭೂಪೇಂದ್ರ ಚೌಧರಿ ಮತ್ತು ಪ್ರಧಾನ ಕಾರ್ಯದರ್ಶಿ ಧರಂಪಾಲ್ ಸಿಂಗ್ ನೇತೃತ್ವದ ಉತ್ತರ ಪ್ರದೇಶದ ಬಿಜೆಪಿ ಕೆಲಸ ಮಾಡುತ್ತಿದೆ. ಗರಿಷ್ಠ ಸಂಖ್ಯೆಯ ಸ್ಥಾನಗಳನ್ನು ಗೆಲ್ಲಲು ಅದು ಸಮಾಜದ ಪ್ರತಿಯೊಂದು ವರ್ಗದೊಂದಿಗೆ ಸಂಪರ್ಕ ಸಾಧಿಸುವ ಪ್ರಯತ್ನದಲ್ಲಿದೆ.
ಭೂಪೇಂದ್ರ ಚೌಧರಿ ಅವರ ಕಾರ್ಯತಂತ್ರ ಪಕ್ಷ ಮತ್ತು ತಮ್ಮ ತಂಡಕ್ಕೆ ಹೊಸ ಮುಖಗಳನ್ನು ಸೇರಿಸುವುದರತ್ತ ಕೇಂದ್ರೀಕೃತವಾಗಿದೆ. ಪಕ್ಷದ ಕಾರ್ಯಕರ್ತರು ಮತ್ತು ಮತದಾರರ ನಡುವೆ ಬಲವಾದ ಸಂಪರ್ಕ ಸ್ಥಾಪಿಸುವುದು ಧರಂಪಾಲ್ ಸಿಂಗ್ ಯೋಜನೆಯಾಗಿದೆ. ಭೂಪೇಂದ್ರ ಚೌಧರಿ ಮತ್ತು ಧರಂಪಾಲ್ ಸಿಂಗ್ ಇಬ್ಬರೂ ರಾಜ್ಯದ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದಾರೆ. ಕಳೆದ 9 ವರ್ಷಗಳ ಸರಕಾರದ ಸಾಧನೆಗಳನ್ನು ಜನರಿಗೆ ತಿಳಿಸಲಾಗುತ್ತಿದೆ.
ಪಕ್ಷಕ್ಕೆ ಪುನಶ್ಚೇತನ ನೀಡಲು ಹಲವಾರು ಜಿಲ್ಲಾಧ್ಯಕ್ಷರನ್ನು ವಿಭಾಗೀಯ ಅಧ್ಯಕ್ಷರನ್ನಾಗಿ ಬದಲಾಯಿಸಲಾಗುತ್ತಿದೆ. ಹಲವಾರು ಪ್ರಮುಖ ಸಂಘಟನಾತ್ಮಕ ಬದಲಾವಣೆಗಳನ್ನು ನವೆಂಬರ್‌ನಲ್ಲಿ ಮಾಡಲಾಗಿದೆ. ಪಕ್ಷ ತೊರೆದಿರುವ ನಾಯಕರನ್ನು ವಾಪಸ್ ಕರೆತರುವ ಪ್ರಯತ್ನವೂ ನಡೆಯುತ್ತಿದೆ. ರಾಮ ಮಂದಿರ ಉದ್ಘಾಟನೆಯೊಂದಿಗೆ ಬಿಜೆಪಿ ಹೊಸ ರಾಜಕೀಯ ಶಕ್ತಿ ಪಡೆಯಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಮೋದಿ ಈ ಬಾರಿಯೂ ವಾರಣಾಸಿಯಿಂದಲೇ ಸ್ಪರ್ಧಿಸುವ ಸಾಧ್ಯತೆ ಹೆಚ್ಚಿದೆ.
ಇನ್ನು ಕಾಂಗ್ರೆಸ್ ಸೇರಿದಂತೆ ‘ಇಂಡಿಯಾ’ ಮೈತ್ರಿಕೂಟದ ರಣತಂತ್ರ ಇನ್ನೂ ರೂಪುಗೊಳ್ಳಬೇಕಿದೆ. ಸದ್ಯಕ್ಕಂತೂ ಅಲ್ಲಿ ಗೊಂದಲಗಳು ಕಾಣಿಸುತ್ತಿವೆ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಏಕಾಂಗಿಯಾಗಿ ಕಣ್ಣಕ್ಕಿಳಿದ ಬಳಿಕ ಎಸ್‌ಪಿ ನಾಯಕ ಅಖಿಲೇಶ್ ಯಾದವ್ ಅಸಮಾಧಾನಗೊಂಡಿದ್ದರು ಮತ್ತು ಕಾಂಗ್ರೆಸ್ ವಿರುದ್ಧ ಪದೇ ಪದೇ ವಾಗ್ದಾಳಿ ನಡೆಸಿದರು. ಆ ಹೊತ್ತಿನಲ್ಲಿಯೇ ಕಾಂಗ್ರೆಸ್ ಕೂಡ ಲೋಕಸಭೆ ಚುನಾವಣೆಗೆ ಉತ್ತರ ಪ್ರದೇಶದಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಹೇಳಿರುವುದು ವರದಿಯಾಗಿತ್ತು. ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ನೇತೃತ್ವದಲ್ಲಿ ಪಾದಯಾತ್ರೆಯ ಬಗ್ಗೆಯೂ ಕಾಂಗ್ರೆಸ್ ತೀರ್ಮಾನಿಸಿತ್ತು. ಇದರ ಜೊತೆಗೇ ಅದು ದಲಿತರು, ಒಬಿಸಿಗಳು, ಅಲ್ಪಸಂಖ್ಯಾತರು ಮತ್ತು ಯುವಕರನ್ನು ಕೇಂದ್ರೀಕರಿಸಿ ಶೀಘ್ರದಲ್ಲೇ ಹೊಸ ರಾಜ್ಯ ಸಮಿತಿಯನ್ನು ರಚಿಸುವ ಸುಳಿವನ್ನೂ ಕೊಟ್ಟಿದೆ. ರಾಜ್ಯದಲ್ಲಿ ದಲಿತ ಗೌರವ ಯಾತ್ರೆಯನ್ನು ನಡೆಸುವ ಉದ್ದೇಶವನ್ನೂ ಹೊಂದಿದೆ.
ನೆಹರೂ, ಇಂದಿರಾ, ರಾಜೀವ್ ಅವರಂತೆಯೇ ಸೋನಿಯಾ ಗಾಂಧಿ, ರಾಹುಲ್, ಪ್ರಿಯಾಂಕಾ ಎಲ್ಲರಿಗೂ ಉತ್ತರ ಪ್ರದೇಶವೇ ರಾಜಕೀಯ ಅಂಗಳವಾಗಿದೆ.
2014ರ ಚುನಾವಣೆಯಲ್ಲಿ ಅಮೇಠಿ ಕ್ಷೇತ್ರದಲ್ಲಿ ಸೋತ ಬಳಿಕ ರಾಹುಲ್ ಕಳೆದ ಬಾರಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದರು. ಈ ಬಾರಿ ಅವರ ಕ್ಷೇತ್ರ ನಿರ್ಧಾರವಾಗಬೇಕಿದೆ. ಅದೇನೇ ಇದ್ದರೂ ಏಕಾಂಗಿಯಾಗಿ ಚುನಾವಣೆಗೆ ಹೋಗುವ ಕಾಂಗ್ರೆಸ್ ದಿಲ್ಲಿ ನಾಯಕತ್ವದ ಇಂಗಿತ ಹಲವು ಅನುಮಾನಗಳನ್ನು ಮೂಡಿಸುತ್ತದೆ.
ಇಂಥದೇ ಮಾತನ್ನು ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದ ಬಳಿಕ, ಪಂಚರಾಜ್ಯ ಚುನಾವಣೆಗಳು ಎದುರಿಗಿದ್ದ ಹೊತ್ತಲ್ಲಿ ಕಾಂಗ್ರೆಸ್ ನಾಯಕ ವೀರೇಂದ್ರ ಮದನ್ ಅವರೂ ಹೇಳಿದ್ದರು. ಎಲ್ಲಾ 80 ಲೋಕಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಪಕ್ಷ ತಯಾರಿ ನಡೆಸುತ್ತಿರುವುದಾಗಿ ಹೇಳಿದ್ದರು. ಈಗ ಹಿಂದಿ ಭಾಷಿಕ ಮೂರೂ ರಾಜ್ಯಗಳಲ್ಲಿ ಸೋತ ಬಳಿಕ ನಿಲುವು ಬದಲಾಗಬಹುದೆ?
ಕಾಂಗ್ರೆಸ್‌ಗೆ ಏಕಾಂಗಿಯಾಗಿ ಚುನಾವಣೆಗೆ ಹೋಗುವ ಉತ್ಸಾಹ ಇದೆಯೇ ಹೊರತು, ಬಿಜೆಪಿ ವಿರೋಧಿ ಮತಗಳನ್ನು ಒಟ್ಟುಗೂಡಿಸುವ ಮೈತ್ರಿಯಿಲ್ಲದೆ ರಾಜ್ಯದಲ್ಲಿ ಗೆಲುವು ಹೇಗೆ ಸಾಧ್ಯ ಎಂಬ ಒಗಟು ಬಿಡಿಸಲು ಮಾತ್ರ ಅದರ ಯಾವ ನಾಯಕರೂ ಸಿದ್ಧರಿಲ್ಲ.
ಒಂದು ಕಾಲದಲ್ಲಿ ಕಾಂಗ್ರೆಸ್ ಕೈಹಿಡಿಯುತ್ತಿದ್ದ ಮೇಲ್ಜಾತಿ ಮತಗಳು ಬಿಜೆಪಿಯ ಬಲವಾಗಿ ಬಹಳ ಕಾಲವೇ ಆಗಿಬಿಟ್ಟಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ.48.98ರಷ್ಟು ಮತಗಳನ್ನು ಪಡೆದಿದ್ದು, ಅದು ಹಿಂದಿನ ಚುನಾವಣೆಗಿಂತ ಶೇ.7ಕ್ಕಿಂತ ಹೆಚ್ಚು ಏರಿತ್ತು. ಇನ್ನು ಬಹುಜನ ಸಮಾಜ ಪಕ್ಷ ಮತ್ತು ಸಮಾಜವಾದಿ ಪಕ್ಷಗಳು ಜೊತೆಯಾಗಿ ಶೇ.37ಕ್ಕಿಂತ ಸ್ವಲ್ಪ ಹೆಚ್ಚು ಮತಗಳನ್ನು ಪಡೆದಿದ್ದವು. ಕಾಂಗ್ರೆಸ್‌ಗೆ ಬಂದಿದ್ದ ಮತಗಳ ಪ್ರಮಾಣ ಶೇ.6ಕ್ಕಿಂತ ಸ್ವಲ್ಪ ಹೆಚ್ಚಿತ್ತು. ಅಂದರೆ ಮೂರೂ ಪಕ್ಷಗಳು ಗಳಿಸಿದ ಮತಗಳನ್ನು ಸೇರಿಸಿದರೂ ಬಿಜೆಪಿಯನ್ನು ಮೀರಿಸಲು ಆಗಿರಲಿಲ್ಲ. ಇನ್ನು ಬೇರೆ ಬೇರೆಯಾಗಿ ಹೋದರೆ, ಅವರವರದೇ ಮತಗಳನ್ನು ಕಸಿಯುತ್ತ, ಸ್ಥಿತಿಯನ್ನು ಇನ್ನಷ್ಟು ಕೆಡಿಸಿಕೊಳ್ಳುವ ಆಪಾಯ ಖಂಡಿತ ಇದೆ.
ವಿಶ್ಲೇಷಕರ ಪ್ರಕಾರ, ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ಗೆ ತೊಡಕಾಗಬಹುದಾದ ಹಲವು ಸಂಗತಿಗಳಿವೆ. ಅಂಥ ಒಂದು ಸಂಗತಿಯೆಂದರೆ, ಸಮರ್ಥ ಅಭ್ಯರ್ಥಿಗಳ ಕೊರತೆ. ಇದರ ಹೊರತಾಗಿಯೂ, ತಾನು ಬಿಜೆಪಿಯನ್ನು ಎದುರಿಸಬಲ್ಲ ಏಕೈಕ ರಾಷ್ಟ್ರೀಯ ಪಕ್ಷ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದ್ದರೆ, ಎಸ್‌ಪಿ ಪ್ರಾದೇಶಿಕ ಪಕ್ಷವಾಗಿ ತಾನು ಬಲಿಷ್ಠವಾಗಿದ್ದು, ಕಾಂಗ್ರೆಸ್ ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ ಎನ್ನುತ್ತಿದೆ. ಇದೆಲ್ಲದರ ಮಧ್ಯೆ, ಬಿಎಸ್‌ಪಿಯದ್ದೇ ಬೇರೆ ದಾರಿ ಎಂಬುದು ಮತ್ತೊಂದು ತೊಡಕು. ಈ ಸ್ಥಿತಿಯಲ್ಲಿ ಬಿಜೆಪಿಯನ್ನು ಎದುರಿಸಬಲ್ಲ ಬಲ ರೂಪುಗೊಳ್ಳುವುದು ಹೇಗೆ?
ಸಾಫ್ಟ್ ಹಿಂದುತ್ವವನ್ನು ಅವಲಂಬಿಸುವ ಮೂಲಕ ಗೆಲುವಿನ ತಂತ್ರ ರೂಪಿಸುತ್ತಿರುವ ಕಾಂಗ್ರೆಸ್ ನಿಜವಾಗಿಯೂ ಬಿಜೆಪಿಗೆ ಪ್ರಬಲ ಎದುರಾಳಿಯಾಗಬಹುದೆ? ‘ಇಂಡಿಯಾ’ ಮೈತ್ರಿಕೂಟದ ತೀರ್ಮಾನಗಳು ಏನಿರಬಹುದು ಮತ್ತು ಅದು ಚುನಾವಣಾ ಕಣದ ಒಟ್ಟಾರೆ ಚಿತ್ರವನ್ನು ಹೇಗೆ ರೂಪಿಸಬಹುದು? ರಾಹುಲ್ ಗಾಂಧಿಯವರ ಭಾರತ ಜೋಡೊ ಯಾತ್ರೆಯ ಫಲಿತಗಳು ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಣಸಿದಂತಿಲ್ಲ ಎಂಬ ಸೂಚನೆ ಕೊಟ್ಟಿರುವ ಪಂಚರಾಜ್ಯ ಫಲಿತಾಂಶಗಳು ಲೋಕಸಭೆ ಚುನಾವಣೆಯಲ್ಲಿನ ಸಾಧ್ಯತೆಯನ್ನೂ ಹೇಳುತ್ತಿವೆಯೆ?
ಇವೆಲ್ಲವೂ ಸದ್ಯಕ್ಕೆ ಇರುವ ಪ್ರಶ್ನೆಗಳು.
ಇನ್ನು ಉತ್ತರಾಖಂಡ ರಾಜ್ಯದಲ್ಲಿ 10 ಲಕ್ಷಕ್ಕಿಂತ ಅಧಿಕ ಜನಸಂಖ್ಯೆಯಿದೆ. ಇಲ್ಲಿಯೂ ಹಿಂದೂಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ನಂತರ ಮುಸ್ಲಿಮರು ಬರುತ್ತಾರೆ. ಈ ರಾಜ್ಯದಲ್ಲಿರುವ ಒಟ್ಟು ಲೋಕಸಭಾ ಸ್ಥಾನಗಳು 5.
2014 ಮತ್ತು 2019ರ ಚುನಾವಣೆಯಲ್ಲಿ ಎಲ್ಲ 5 ಕ್ಷೇತ್ರಗಳಲ್ಲಿ ಬಿಜೆಪಿಯೇ ಗೆದ್ದಿತ್ತು. ಕಾಂಗ್ರೆಸ್ ಮತ್ತು ಬಿಎಸ್‌ಪಿ ಇಲ್ಲಿ ನೆಲೆ ಕಂಡುಕೊಳ್ಳಲು ಆಗಿಲ್ಲ. ಈ ಬಾರಿಯೂ ತನ್ನ ಅದೇ ಗೆಲುವನ್ನು ಪುನರಾವರ್ತಿಸಲು ಬಿಜೆಪಿ ಸಜ್ಜಾಗಿದೆ. ಆದರೆ ಮುಖ್ಯ ಎದುರಾಳಿಯಾಗಬೇಕಿದ್ದ ಪ್ರತಿಪಕ್ಷ ಕಾಂಗ್ರೆಸ್ ಸ್ಥಿತಿ ಮಾತ್ರ ಅಸ್ತವ್ಯಸ್ತವಾಗಿದೆ.
ಬಹುಸಂಖ್ಯಾತ ಮೇಲ್ಜಾತಿ ಹಿಂದೂಗಳನ್ನು ಹೊಂದಿರುವ ರಾಜ್ಯದಲ್ಲಿ ಬಿಜೆಪಿ ಹಿಂದುತ್ವ ಅಜೆಂಡಾ ಇಟ್ಟುಕೊಂಡು ಆಟವಾಡುತ್ತಿದೆ. ಸಂಘ ಪರಿವಾರದ್ದೇ ಇಲ್ಲಿ ಪ್ರಾಬಲ್ಯ. ಹೀಗಿರುವಾಗ ರಾಜ್ಯ ಕಾಂಗ್ರೆಸ್‌ನ ಬಣ ರಾಜಕೀಯ ಪಕ್ಷವನ್ನು ಇನ್ನಷ್ಟು ದುರ್ಬಲಗೊಳಿಸಿದೆ. ಈ ನಡುವೆ ರಾಜ್ಯದಲ್ಲಿ ರಾಹುಲ್ ಗಾಂಧಿ ಯಾತ್ರೆ ನಡೆಸಲು ಉದ್ದೇಶಿಸಿದ್ದು, ಅದು ಫಲ ಕೊಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.